ವಿಮಲ್‌ ಥ್ಯಾಕರೆ, ವಂಗನಿ ಎಂಬ ಊರಿನ ತಮ್ಮ ಎರಡು ಕೊಠಡಿಗಳ ಮನೆಯ ಚಿಕ್ಕ ಸ್ನಾನದ ಕೋಣೆಯಲ್ಲಿ, ಬಟ್ಟೆ ಒಗೆಯುತ್ತಿದ್ದರು. ಹಸಿರು ಪ್ಲಾಸ್ಟಿಕ್‌ ಚೊಂಬಿನಿಂದ ಸೀರೆ, ಷರ್ಟ್‌ ಹಾಗೂ ಇನ್ನಿತರೆ ಬಟ್ಟೆಬರೆಗಳ ರಾಶಿಗೆ ನೀರು ಸುರಿಯುತ್ತಾ, ಸೋಪನ್ನು ಹಚ್ಚಲು ತಮ್ಮ ದುರ್ಬಲ ಕೈಗಳಿಂದ ಪ್ರಯಾಸಪಡುತ್ತಿದ್ದರು.

ನಂತರ, ಆಕೆ ಒಗೆದ ಪ್ರತಿಯೊಂದು ಬಟ್ಟೆಯನ್ನೂ ಅನೇಕ ಬಾರಿ ಮೂಗಿನ ಬಳಿಗೆ ತಂದು, ವಾಸನೆಯನ್ನು ಗ್ರಹಿಸುತ್ತಾ, ಅದು ಸ್ವಚ್ಛಗೊಂಡಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುತ್ತಿದ್ದರು. ನಂತರ, ಗೋಡೆಯನ್ನು ಹಿಡಿದುಕೊಂಡು, ಬಾಗಿಲ ಚೌಕಟ್ಟನ್ನು ಸ್ಪರ್ಶಿಸುತ್ತಾ, ಸ್ನಾನದ ಕೋಣೆಯಿಂದ, ಹೊರಗಡಿಯಿಟ್ಟರಾದರೂ, ಹೊಸಿಲಿನ ಮೇಲೆ ಎಡವಿದ ಆಕೆ, ನನ್ನೊಂದಿಗೆ ಮಾತನಾಡಲು ಹಾಸಿಗೆಯೊಂದರ ಮೇಲೆ ಕುಳಿತರು.

“ನಾವು ಸ್ಪರ್ಶದ ಮೂಲಕ ಜಗತ್ತನ್ನು ನೋಡುತ್ತೇವಾದರೂ, ನಮ್ಮ ಸುತ್ತಮುತ್ತಲಿನದನ್ನು ಗ್ರಹಿಸುವುದೂ ಸ್ಪರ್ಶದ ಮೂಲಕ̧ವೇ” ಎನ್ನುತ್ತಾರೆ 62ರ ವಯಸ್ಸಿನ ವಿಮಲ್‌. ಈಕೆ ಹಾಗೂ ಇವರ ಪತಿ, ದೃಷ್ಟಿಮಾಂದ್ಯರು. ಮುಂಬೈನ ಪಶ್ಚಿಮ ರೈಲ್ವೆ ಲೇನಿನ ರೈಲುಗಳಲ್ಲಿ ಚರ್ಚ್‌ಗೇಟ್‌ನಿಂದ ಬೋರಿವಲಿ ನಿಲ್ದಾಣದವರೆಗೆ ಇವರು ಕರವಸ್ತ್ರಗಳನ್ನು ಮಾರುತ್ತಿದ್ದರು. ಮಾರ್ಚ್‌ ೨೫ರಂದು, ದೇಶಾದ್ಯಂತದ ಲಾಕ್‌ಡೌನ್‌ನಿಂದಾಗಿ ನಗರದ ಸ್ಥಳೀಯ ರೈಲುಗಳ ಸೌಲಭ್ಯವನ್ನು ತಡೆಹಿಡಿದ ಕಾರಣ, ಆ ಕೆಲಸವು ನಿಂತುಹೋಗಿದೆ.

ಭಾನುವಾರದ ವಿರಾಮವನ್ನು ಹೊರತುಪಡಿಸಿ, ಮುಂಬೈ ಲೋಕಲ್‌ಗಳ ನೂಕುನುಗ್ಗಲಿನ ಜನಜಂಗುಳಿಯಲ್ಲಿ ಲಾಕ್‌ಡೌನ್‌ಗಿಂತಲೂ ಮೊದಲು ಇವರಿಬ್ಬರೂ ದಿನವೊಂದಕ್ಕೆ ಸುಮಾರು 250 ರೂ.ಗಳನ್ನು ಸಂಪಾದಿಸುತ್ತಿದ್ದರು. ದಕ್ಷಿಣ ಮುಂಬೈನ ಮಸ್ಜಿದ್‌ ಬಂದೆರ್‌ನ ಸಗಟು ಮಾರುಕಟ್ಟೆಯಲ್ಲಿ ಒಂದು ಬಾರಿಗೆ 1,000 ಕರವಸ್ತ್ರಗಳನ್ನು ಕೊಳ್ಳುತ್ತಿದ್ದ ಅವರು, ಲಾಕ್‌ಡೌನ್‌ಗೆ ಮೊದಲು, ಒಂದಕ್ಕೆ, 10 ರೂ.ಗಳಂತೆ 20-25 ಕರವಸ್ತ್ರಗಳನ್ನು ಮಾರುತ್ತಿದ್ದರು.

ಇವರ ಜೊತೆಯಲ್ಲಿಯೇ ವಾಸಿಸುವ 31 ವರ್ಷದ ಮಗ ಸಾಗರ್‌, 10ನೇ ತರಗತಿಯವರೆಗಿನ ವಿದ್ಯಾಭ್ಯಾಸವನ್ನು ಪೂರೈಸಿದ್ದು, ಲಾಕ್‌ಡೌನ್‌ ಪ್ರಾರಂಭವಾಗುವವರೆಗೂ ಥಾಣೆಯಲ್ಲಿನ ಆನ್‌ಲೈನ್‌ ಕಂಪನಿಯ ಮಳಿಗೆಯಲ್ಲಿ ಕೆಲಸಮಾಡುತ್ತಿದ್ದರು. ಇವರು ಹಾಗೂ ಮನೆಗಳಲ್ಲಿ ಕೆಲಸಮಾಡುವ ಅವರ ಪತ್ನಿ, ಮಂಜು ಅವರಿಂದ ಕುಟುಂಬದ ಮಾಸಿಕ ಆದಾಯಕ್ಕೆ 5,000-6,000 ರೂ.ಗಳು ಸೇರ್ಪಡೆಯಾಗುತ್ತದೆ. 3 ವರ್ಷದ ಇವರ ಮಗಳು ಸಾಕ್ಷಿಯನ್ನೂ ಒಳಗೊಂಡಂತೆ, 5 ಜನರ ಥ್ಯಾಕರೆ ಪರಿವಾರವು ಎರಡು ಕೊಠಡಿಗಳ ಚಿಕ್ಕ ಮನೆಯಲ್ಲಿ ವಾಸಿಸುತ್ತಾರೆ. “ಈಗ, 3,000 ರೂ.ಗಳ ಬಾಡಿಗೆ, ಔಷಧಿ ಮತ್ತು ವೈದ್ಯರ ಸಾಂದರ್ಭಿಕ ಖರ್ಚುಗಳನ್ನು ನಿರ್ವಹಿಸುವುದು ತ್ರಾಸದಾಯಕವಾಗಿದೆ,” ಎನ್ನುತ್ತಾರೆ ನರೇಶ್‌.

The lockdown left Naresh and Vimal Thackeray, their son Sagar, his daughter Sakshi (left to right), and wife Manju, with no income
PHOTO • Jyoti

ಲಾಕ್‌ಡೌನ್‌ನಿಂದಾಗಿ, ನರೇಶ್‌ ಮತ್ತು ವಿಮಲ್‌ ಥ್ಯಾಕರೆ, ಅವರ ಮಗ ಸಾಗರ್‌, ಮಗಳು ಸಾಕ್ಷಿ (ಎಡದಿಂದ ಬಲಕ್ಕೆ) ಮತ್ತು ಪತ್ನಿ ಮಂಜು ಅವರುಗಳಿಗೆ ಆದಾಯವಿಲ್ಲದಂತಾಗಿದೆ

ಇಡೀ ಪರಿವಾರಕ್ಕೆ ಆದಾಯವಿಲ್ಲದಂತಾಗಿದ್ದರೂ, ಸಾಗರ್‌ ಹಾಗೂ ಮಂಜು, ಮತ್ತೆ ಕೆಲಸಕ್ಕೆ ಕರೆಬರುವುದೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ, ವಿಮಲ್‌ ಹಾಗೂ ನರೇಶ್‌ ಅವರಿಗೆ ತಮ್ಮ ಕೆಲಸವನ್ನು ಮತ್ತೆ ಯಾವಾಗ ಪ್ರಾರಂಭಿಸಬಹುದೆಂದು ತಿಳಿದಿಲ್ಲ. “ಹಿಂದಿನಂತೆ ನಾವೀಗ ರೈಲಿನಲ್ಲಿ ಕರವಸ್ತ್ರಗಳನ್ನು ಮಾರಬಹುದೇ? ಜನರು ನಮ್ಮಿಂದ ಕರವಸ್ತ್ರಗಳನ್ನು ಕೊಳ್ಳುತ್ತಾರೆಯೇ,” ಎಂಬುದಾಗಿ ವಿಮಲ್‌ ಪ್ರಶ್ನಿಸಿದರು.

ಸಾಮಗ್ರಿಗಳು, ಅವುಗಳ ಮೇಲ್ಮೈ, ಹಣ, ಸಾರ್ವಜನಿಕ ಶೌಚಾಲಯಗಳ ಗೋಡೆಗಳು – ಹೀಗೆ ನಾವು ದಿನವೊಂದಕ್ಕೆ ಸಾವಿರಾರು ಬಾರಿ ವಸ್ತುಗಳನ್ನು ಸ್ಪರ್ಶಿಸಬೇಕಾಗುತ್ತದೆ. ನಾವು ಸ್ಪರ್ಶಿಸುವ ವಸ್ತುಗಳಿಗೆ ಕೊನೆಯೆಂಬುದೇ ಇಲ್ಲ. ನಮ್ಮ ಎದುರಿಗೆ ಬರುವ ವ್ಯಕ್ತಿಯನ್ನು ನಾವು ನೋಡಲಾರೆವು. ಹೀಗಾಗಿ ಅವರಿಗೆ ಢಿಕ್ಕಿ ಹೊಡೆಯುತ್ತೇವೆ. ಇದೆಲ್ಲವನ್ನೂ ನಾವು ತಪ್ಪಿಸುವುದಾದರೂ ಹೇಗೆ? ಅಗತ್ಯವಿರುವಷ್ಟು ಅಂತರವನ್ನು ಕಾಯ್ದುಕೊಳ್ಳುವುದಾದರೂ ಹೇಗೆ? ಎನ್ನುತ್ತಾರೆ, ಪ್ಲಾಸ್ಟಿಕ್‌ ಕುರ್ಚಿಯೊಂದರ ಮೇಲೆ ಕುಳಿತ 65 ವರ್ಷದ ನರೇಶ್‌. ತಾವು ಮಾರುವ ಕರವಸ್ತ್ರಗಳಲ್ಲಿನ ನಸುಗೆಂಪು ಬಣ್ಣದ ಹತ್ತಿಯ ಕರವಸ್ತ್ರವೊಂದನ್ನು ತಮ್ಮ ಬಾಯಿಗೆ ಕಟ್ಟಿಕೊಂಡಿದ್ದಾರೆ.

ಈ ಪರಿವಾರವು ಗೊಂಡ್‌ ಗೊವರಿ ಪರಿಶಿಷ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದೆ. ಬಿಪಿಎಲ್‌ ಪಡಿತರ ಚೀಟಿಯನ್ನು ಹೊಂದಿರುವ ಇವರು, ಲಾಕ್‌ಡೌನ್‌ ಸಮಯದಲ್ಲಿ, ಸ್ವಯಂಸೇವಾ ಗುಂಪುಗಳಿಂದ ಹೆಚ್ಚುವರಿ ಪಡಿತರದ ಕಿಟ್‌ ಅನ್ನು ಪಡೆದಿದ್ದರು.  “ಅನೇಕ ಸ್ವಯಂಸೇವಾ ಹಾಗೂ ಇತರೆ ಸಂಸ್ಥೆಗಳು ಅಕ್ಕಿ, ಬೇಳೆ, ಎಣ್ಣೆ, ಚಹಾದ ಪುಡಿ ಹಾಗೂ ಸಕ್ಕರೆಯನ್ನು ನಮ್ಮ ಕಾಲೋನಿಯಲ್ಲಿ ಹಂಚಿದ್ದಾರಾದರೂ, ಬಾಡಿಗೆ, ವಿದ್ಯುಚ್ಛಕ್ತಿ ಬಿಲ್ಲನ್ನು ಯಾರಾದರೂ ಪಾವತಿಸುತ್ತಾರೆಯೇ? ಗ್ಯಾಸ್‌ ಸಿಲಿಂಡರ್‌ನ ಕಥೆಯೇನು? ಬಾಡಿಗೆಯು ಮಾರ್ಚ್‌ನಿಂದಲೂ ಬಾಕಿಯಿದೆ” ಎನ್ನುತ್ತಾರೆ ವಿಮಲ್‌.

ಕಾರ್ನಿಯಲ್‌ ಅಲ್ಸರ್‌ಗಳಿಂದಾಗಿ, ಏಳು ವರ್ಷದವರಿದ್ದಾಗ ವಿಮಲ್‌, ತಮ್ಮ ದೃಷ್ಟಿಯನ್ನು ಕಳೆದುಕೊಂಡರು. ವೈದ್ಯಕೀಯ ವರದಿಗಳ ಪ್ರಕಾರ, ನರೇಶ್‌ ಅವರು ಬ್ಯಾಕ್ಟೀರಿಯಾಗಳ ತೀವ್ರ ಸೋಂಕನ್ನು ಅಸಮರ್ಪಕವಾಗಿ ನಿರ್ವಹಿಸಿದ ಕಾರಣ, ತಮ್ಮ ದೃಷ್ಟಿಯನ್ನು ಕಳೆದುಕೊಂಡರು. “ನನ್ನ ಕಣ್ಣುಗಳಲ್ಲಿ ಬೊಕ್ಕೆಗಳಿದ್ದವು. ಹಳ್ಳಿಯಲ್ಲಿನ ಪಾರಂಪರಿಕ ವೈದ್ಯನು ನನಗೆ ಚಿಕಿತ್ಸೆ ನೀಡುವ ಸಲುವಾಗಿ, ಕಣ್ಣಿಗೆ ಅದೇನನ್ನೋ ಹಾಕಿದ ಕಾರಣ, ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಯಿತು” ಎಂದು ಅವರು ತಿಳಿಸಿದರು.

ಭಾರತದಲ್ಲಿನ ಸುಮಾರು 5 ಮಿಲಿಯನ್‌ ದೃಷ್ಟಿಮಾಂದ್ಯರಲ್ಲಿ ವಿಮಲ್‌ ಹಾಗೂ ನರೇಶ್‌ ಅವರೂ ಒಬ್ಬರು. 2011ರ ಗಣತಿಯಂತೆ, ಇವರಲ್ಲಿನ 545,131 ಜನರಿಗೆ, ಇದಕ್ಕೂ ಮುಂಚಿನ 12 ತಿಂಗಳಲ್ಲಿ, ಕನಿಷ್ಠ 183 ದಿನಗಳ ಕೆಲಸವೂ ಸಹ ದೊರೆತಿರಲಿಲ್ಲ. ವಿಮಲ್‌ ಹಾಗೂ ನರೇಶ್‌ ಅವರಂತಹ ಅನೇಕರು, ತಮ್ಮ ಜೀವನೋಪಾಯಕ್ಕಾಗಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟಮಾಡುತ್ತಾರೆ.

'It is through touch that we sense our surroundings', says Vimal Thackeray (left); she and her husband Naresh are both visually impaired
PHOTO • Jyoti
'It is through touch that we sense our surroundings', says Vimal Thackeray (left); she and her husband Naresh are both visually impaired
PHOTO • Jyoti

‘ಸ್ಪರ್ಶದ ಮೂಲಕ ನಮ್ಮ ಸುತ್ತಮುತ್ತಲಿನದನ್ನು ಗ್ರಹಿಸುತ್ತೇವೆ, ʼ ಎನ್ನುತ್ತಾರೆ ವಿಮಲ್‌ ಥ್ಯಾಕರೆ (ಎಡಕ್ಕೆ); ಈಕೆ ಹಾಗೂ ಈಕೆಯ ಪತಿ ನರೇಶ್‌, ಇಬ್ಬರೂ ದೃಷ್ಟಿಮಾಂದ್ಯರು

ಇವರು ವಾಸಿಸುವ ಥಾಣೆ ಜಿಲ್ಲೆಯ ವಂಗನಿ ಊರಿನ ಒಟ್ಟಾರೆ 12, 628 ಜನರಲ್ಲಿ, ಸುಮಾರು ೩೫೦ ಕುಟುಂಬಗಳಲ್ಲಿ ಕನಿಷ್ಠ ಒಬ್ಬ ದೃಷ್ಟಿಮಾಂದ್ಯರು ಕಂಡುಬರುತ್ತಾರೆ. 64 ಕಿ. ಮೀ. ದೂರದ ಮುಂಬೈಗಿಂತಲೂ ಇಲ್ಲಿನ ಬಾಡಿಗೆಯು ಕಡಿಮೆಯಿರುವ ಕಾರಣ, ಬಹುಶಃ ಅಮರಾವತಿ, ಔರಂಗಾಬಾದ್‌, ಜಲ್ನ, ನಾಗ್ಪುರ್‌ ಮತ್ತು ಯಾವತ್ಮಲ್‌ನಿಂದ ಬಂದ ಪರಿವಾರಗಳು 1980ರಿಂದಲೂ ಇಲ್ಲಿ ನೆಲೆಸುತ್ತಿವೆ. “ಬಾಡಿಗೆಯು ಅತ್ಯಂತ ಕಡಿಮೆಯಿದ್ದು, ಮನೆಯ ಒಳಗೆ ಶೌಚಾಲಯದ ಸೌಲಭ್ಯವಿದೆ” ಎನ್ನುತ್ತಾರೆ ವಿಮಲ್‌.

1985ರಲ್ಲಿ, ಈಕೆ ಹಾಗೂ ನರೇಶ್‌, ನಾಗ್ಪುರ್‌ ಜಿಲ್ಲೆಯ ಉಮ್ರೆದ್‌ ತಾಲ್ಲೂಕಿನ ಉಮ್ರಿ ಗ್ರಾಮದಿಂದ ಇಲ್ಲಿಗೆ ಬಂದರು. “ನಮ್ಮ ತಂದೆಯು ಬೇಸಾಯದ ಜಮೀನನ್ನು ಹೊಂದಿದ್ದರಾದರೂ, ನಾನು ಅಲ್ಲಿ ಕೆಲಸಮಾಡುವುದಾದರೂ ಹೇಗೆ? ನಮ್ಮಂತಹ ದೃಷ್ಟಿಹೀನರಿಗೆ ಅಲ್ಲಿ ಯಾವುದೇ ಕೆಲಸವಿಲ್ಲದ ಕಾರಣ, ಮುಂಬೈಗೆ ಬಂದೆವು ಎಂದ ನರೇಶ್‌, ಆಗಿನಿಂದ ಲಾಕ್‌ಡೌನ್‌ ಪ್ರಾರಂಭವಾಗುವವರೆಗೂ, ಕರವಸ್ತ್ರಗಳನ್ನು ಮಾರುತ್ತಿದ್ದು, ಭಿಕ್ಷೆ ಬೇಡುವುದಕ್ಕಿಂತ, ಇದು ಹೆಚ್ಚು ಗೌರವಯುತ ಜೀವನವೆನಿಸಿದೆ” ಎಂದು ತಿಳಿಸಿದರು.

ವಂಗನಿಯಷ್ಟೇ ಅಲ್ಲದೆ, ಮುಂಬೈನ ಇತರೆ ಅನೇಕ ಭಾಗಗಳು ಮತ್ತು ಹತ್ತಿರದ ಚಿಕ್ಕ ಊರುಗಳಲ್ಲಿನ ಅಂಗವಿಕಲರು ನಗರದ ಪಶ್ಚಿಮ ಹಾಗೂ ಕೇಂದ್ರ ರೈಲ್ವೆ ಮಾರ್ಗಗಳು ಮತ್ತು ಬಂದರಿನಲ್ಲಿ ದಿನಬಳಕೆಯ ವಸ್ತುಗಳನ್ನು ಮಾರುತ್ತಾರೆ. 2012ರಲ್ಲಿ ವಂಗನಿಯ 272 ದೃಷ್ಟಿಮಾಂದ್ಯರನ್ನು ಕುರಿತಂತೆ ಕೈಗೊಳ್ಳಲಾದ ಸಮೀಕ್ಷೆಯನ್ನು ಆಧರಿಸಿದ, Disability, CBR [Community Based Rehabilitation] and Inclusive Development ಎಂಬ ಪತ್ರಿಕೆಯಲ್ಲಿನ ಲೇಖನವು , “ಸುಮಾರು 44% ದೃಷ್ಟಿಮಾಂದ್ಯರು, ಬೀಗ, ಬೀಗದ ಕೈ, ಸರಪಳಿ, ಗೊಂಬೆ, ಕಾರ್ಡ್‌ ಹೋಲ್ಡರ್‌ ಮುಂತಾದವುಗಳನ್ನು ಮಾರುತ್ತಿದ್ದು, 11% ಅಂಗವಿಕಲರು ನಿರುದ್ಯೋಗಿಗಳಾಗಿದ್ದಾರಲ್ಲದೆ, 11% ವಿಕಲಾಂಗರು ಭಿಕ್ಷಾಟನೆಯಲ್ಲಿ ನಿರತರಾಗಿದ್ದಾರೆ” ಎಂದು ತಿಳಿಸುತ್ತದೆ.

ಸರ್ವವ್ಯಾಪಿ ವ್ಯಾಧಿ ಹಾಗೂ ಲಾಕ್‌ಡೌನ್‌ ಕಾರಣದಿಂದಾಗಿ ಸದಾ ನಿರ್ಲಕ್ಷಕ್ಕೆ ಒಳಗಾಗಿದ್ದ ಅವರ ಸುರಕ್ಷತೆಯ ಕಾಳಜಿ ಹಾಗೂ ಉದ್ಯೋಗದ ಅವಶ್ಯಕತೆಗಳು ಈಗ ತೀವ್ರಗೊಂಡಿವೆ.

ನಾಮಮಾತ್ರಕ್ಕೆಂದು ಜಾರಿಗೊಳಿಸಲಾದ 1995ರ ವಿಕಲಾಂಗ ವ್ಯಕ್ತಿಗಳ ಅಧಿನಿಯಮಕ್ಕೆ ಬದಲಾಗಿ, ೨೦೧೬ರಲ್ಲಿ ವಿಕಲಾಂಗರ ಹಕ್ಕುಗಳ (ಸಮಾನ ಅವಕಾಶಗಳು, ಹಕ್ಕುಗಳ ಸಂರಕ್ಷಣೆ ಮತ್ತು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿಕೆ) ಅಧಿನಿಯಮವನ್ನು ಜಾರಿಗೊಳಿಸಲಾಯಿತು. ಹೊಸ ಅಧಿನಿಯಮದ ೪೦ನೇ ಪರಿಚ್ಛೇದವು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುಗಮ್ಯ (accessible) ಸಾರ್ವಜನಿಕ ಸ್ಥಳಗಳ ನಿರ್ಮಾಣವನ್ನು ಕಡ್ಡಾಯಗೊಳಿಸುತ್ತದೆ.

2015ರಲ್ಲಿ, ವಿಕಲಾಂಗರ ಸಬಲೀಕರಣ ಇಲಾಖೆಯು, ಸುಗಮ್ಯ ಭಾರತ ಅಭಿಯಾನವನ್ನು ಪ್ರಾರಂಭಿಸಿತು. ಸರ್ವಸ್ವೀಕೃತ ಏಣಿಮೆಟ್ಟಿಲುಗಳೊಂದಿಗೆ ಅಡತಡೆಗಳಿಲ್ಲದ ಪ್ರವೇಶದ್ವಾರ, ಎಲಿವೇಟರ್‌ಗಳು, ಬ್ರೈಲ್‌ ಉಬ್ಬುಕೆತ್ತನೆಯ ಸೂಚನಾ ಫಲಕ ಮುಂತಾದುವುಗಳನ್ನು ಒಳಗೊಂಡ ರೈಲ್ವೆ ನಿಲ್ದಾಣಗಳನ್ನು ಸಂಪೂರ್ಣವಾಗಿ ಸುಲಭಗಮ್ಯಗೊಳಿಸುವುದು ಅದರ ಗುರಿಗಳಲ್ಲಿ ಒಂದೆನಿಸಿದೆ. ಆದರೆ ಅತ್ಯಂತ ನಿಧಾನಗತಿಯ ಪ್ರಗತಿಯಿಂದಾಗಿ, ಇದಕ್ಕೆಂದು ನಿಗದಿಪಡಿಸಿದ ಗಡುವನ್ನು ಮಾರ್ಚ್‌ 2020ಕ್ಕೆ ಮುಂದೂಡಲಾಯಿತು.

Left: 'Laws are of no use to us', says Alka Jivhare. Right: Dnyaneshwar Jarare notes, 'Getting a job is much more difficult for us...'
PHOTO • Jyoti
Left: 'Laws are of no use to us', says Alka Jivhare. Right: Dnyaneshwar Jarare notes, 'Getting a job is much more difficult for us...'
PHOTO • Jyoti

ಎಡ: ʼಕಾನೂನುಗಳಿಂದ ನಮಗೆ ಯಾವುದೇ ಪ್ರಯೋಜನವಿಲ್ಲʼಎನ್ನುತ್ತಾರೆ ಅಲ್ಕ ಜಿವ್ಹಾರೆ. ಬಲ: ದ್ಯಾನೇಶ್ವರ್‌ ಜರಾರೆ ಹೀಗೆನ್ನತ್ತಾರೆ: ‘ಕೆಲಸವನ್ನು ದೊರಕಿಸಿಕೊಳ್ಳುವುದು ನಮಗೆ ಅತ್ಯಂತ ಕಷ್ಟಕರವೆನಿಸಿದೆ…’

ಥ್ಯಾಕರೆ ಪರಿವಾರವು ವಾಸಿಸುವ ಪ್ರದೇಶದಲ್ಲಿಯೇ ವಾಸಿಸುತ್ತಿರುವ ೬೮ರ ವಯಸ್ಸಿನ ಅಲ್ಕ ಜಿವ್ಹಾರೆ, “ಇಂತಹ ಕಾನೂನುಗಳಿಂದ ನಮಗೆ ಪ್ರಯೋಜನವಿಲ್ಲ. ನಿಲ್ದಾಣಗಳಲ್ಲಿನ ಮೆಟ್ಟಿಲು, ರೈಲಿನ ಬಾಗಿಲು ಅಥವಾ ಸಾರ್ವಜನಿಕ ಶೌಚಾಲಯಕ್ಕೆ ಸಾಗುವ ದಾರಿಗಾಗಿ ಜನರನ್ನು ಕೂಗಿ ಕರೆಯಬೇಕು. ಕೆಲವರು ಸಹಾಯಮಾಡುತ್ತಾರಾದರೂ ಮತ್ತೆ ಕೆಲವರು ನಮ್ಮನ್ನು ನಿರ್ಲಕ್ಷಿಸುತ್ತಾರೆ. ಅನೇಕ ನಿಲ್ದಾಣಗಳ ಪ್ಲ್ಯಾಟ್‌ಫಾರ್ಮ್‌ (ಜಗಲಿ) ಹಾಗೂ ರೈಲುಗಳ ನಡುವಿನ ಎತ್ತರವು ಅತ್ಯಂತ ಅಗಲವಾಗಿದ್ದು, ಅನೇಕ ಬಾರಿ ನನ್ನ ಕಾಲುಗಳು ಅದರಲ್ಲಿ ಸಿಕ್ಕಿಕೊಳ್ಳುತ್ತವೆ. ಹೇಗಾದರೂ ಮಾಡಿ ನಾನು ಅದನ್ನು ಹೊರಗೆಳೆದುಕೊಳ್ಳುತ್ತೇನೆ” ಎನ್ನುತ್ತಾರೆ.

ಮುಂಬೈ ನಗರದ ಬೀದಿಗಳಲ್ಲಿಯೂ ಸಹ ಒಂದು ಕೈಯಲ್ಲಿ ಬಿಳಿ ಹಾಗೂ ಕೆಂಪು ವರ್ಣದ ಬೆತ್ತವನ್ನು ಹಿಡಿದು ಒಬ್ಬಂಟಿಯಾಗಿ ನಡೆಯುವುದು ಅಲ್ಕರವರಿಗೆ ತ್ರಾಸದಾಯಕ. “ಕೆಲವೊಮ್ಮೆ, ನನ್ನ ಕಾಲು, ಮೋರಿ ಅಥವಾ ಹಳ್ಳ ಅಥವಾ ನಾಯಿಯ ಹೇಲಿನ ಮೇಲೆ ಜಾರುತ್ತದೆ. ಅನೇಕ ಬಾರಿ ರಸ್ತೆಯ ಮೇಲೆ ನಿಲ್ಲಿಸಿರುವ ವಾಹನಗಳಿಗೆ ನಾನು ಗುದ್ದುವ ಕಾರಣ, ಮೂಗು, ಮಂಡಿ, ಕಾಲ್ಬೆರಳುಗಳಿಗೆ ಪೆಟ್ಟಾಗುತ್ತದೆ. ಯಾರಾದರೂ ಎಚ್ಚರಿಸುವವರೆಗೂ, ನಮ್ಮನ್ನು ನಾವು ರಕ್ಷಿಸಿಕೊಳ್ಳಲಾರೆವು” ಎನ್ನುತ್ತಾರೆ ಆಕೆ.

ಅಪರಿಚಿತರ ಹಾಗೂ ದಾರಿಹೋಕರ ಈ ಸಹಾಯವು ಈಗ ನಿಂತುಹೋಗುತ್ತದೆಯೆಂದು ಜಿವ್ಹಾರೆ ಚಿಂತಿತರಾಗಿದ್ದಾರೆ. “ಈ ವೈರಸ್‌ನ ಕಾರಣದಿಂದಾಗಿ, ಈಗ ನೀವು ಎಚ್ಚರಿಕೆಯಿಂದಿರಬೇಕು. ರಸ್ತೆಯನ್ನು ದಾಟಲು ಅಥವಾ ರೈಲಿನ ಒಳಹೊರಗೆ ತೆರಳಲು ನಮಗೆ ಯಾರಾದರೂ ಸಹಾಯಮಾಡುವರೇ” ಎಂಬುದು ಆಕೆಯ ಪ್ರಶ್ನೆ. ಅಲ್ಕ ಅವರು ಪರಿಶಿಷ್ಟ ಜಾತಿಯಾದ ಮಾತಂಗ ಸಮುದಾಯಕ್ಕೆ ಸೇರಿದವರಾಗಿದ್ದು, 2010ರಲ್ಲಿ ಪತಿ, ಭೀಮ ಅವರ ಮರಣಾನಂತರ ತನ್ನ ಕಿರಿಯ ಸಹೋದರನ ಪರಿವಾರದೊಂದಿಗೆ ವಾಸಿಸುತ್ತಿದ್ದಾರೆ. ಆ ಸಹೋದರನೂ ಸಹ ದೃಷ್ಟಿಹೀನರು. ತೆಲಂಗಾಣದ ಅದಿಲಾಬಾದ್‌ ಜಿಲ್ಲೆಯ ರುಪಾಪುರ್‌ ಹಳ್ಳಿಯಿಂದ ಬಂದ ಅವರು, 1985ರಲ್ಲಿ ವಂಗನಿಯಲ್ಲಿ ನೆಲೆಸಿದರು. ಇವರ 25 ವರ್ಷದ ಮಗಳು ಸುಷ್ಮ ಮನೆಗಳಲ್ಲಿ ಕೆಲಸವನ್ನು ನಿರ್ವಹಿಸುವ ಮೂಲಕ ಆದಾಯವನ್ನು ಗಳಿಸುತ್ತಾರೆ.

“ನೀವು ನಿಮ್ಮ ಕೈಗಳನ್ನು ತೊಳೆದುಕೊಳ್ಳಬೇಕು ಅಥವಾ ಆ ದ್ರವವನ್ನು (ಸ್ಯಾನಿಟೈಸರ್‌) ಬಳಸಬೇಕು. ನಾವು ಸದಾ ವಸ್ತುಗಳನ್ನು ಸ್ಪರ್ಶಿಸುವ ಕಾರಣ, ಆ ದ್ರವವು ತ್ವರಿತವಾಗಿ ಮುಗಿದುಹೋಗುತ್ತದೆ. ಕೇವಲ 100 ಎಂ.ಎಲ್‌ ದ್ರವಕ್ಕೆ 50 ರೂ.ಗಳ ಬೆಲೆಯಿದೆ. ನಾವು ಇದಕ್ಕೆ ಹಣವನ್ನು ವ್ಯಯಿಸಬೇಕೋ ಅಥವಾ ಎರಡು ಹೊತ್ತಿನ ಊಟವನ್ನು ಪಡೆದುಕೊಳ್ಳುವುದನ್ನು ಖಾತರಿಪಡಿಸಿಕೊಳ್ಳಬೇಕೋ?” ಎಂಬುದು ಅಲ್ಕ ಅವರ ಪ್ರಶ್ನೆ.

ನಖರಂಜಿನಿ (nail cutter), ಸೇಫ್ಟಿ ಪಿನ್ನುಗಳು, ಕೂದಲಿಗೆ ಬಳಸುವ ಪಿನ್ನುಗಳು, ಕರವಸ್ತ್ರಗಳು ಹಾಗೂ ಇತರೆ ಸಾಮಗ್ರಿಗಳನ್ನು ವಂಗನಿಯಿಂದ ಮಸ್ಜಿದ್‌ ಬಂದೆರ್‌ವರೆಗಿನ ಸೆಂಟ್ರಲ್‌ ಲೈನಿನ ಮೇಲೆ ಮಾರಾಟಮಾಡುವ ಅಲ್ಕ, ಒಂದು ತಿಂಗಳಿಗೆ ಸುಮಾರು ೪೦೦೦ ರೂ.ಗಳನ್ನು ಗಳಿಸುತ್ತಿದ್ದರು “ನಾನು ತಮ್ಮನೊಂದಿಗೆ ಇರುತ್ತೇನಾದರೂ, ಅವನಿಗೆ ಭಾರವಾಗಲು ಬಯಸುವುದಿಲ್ಲ. ನಾನೂ ದುಡಿಯಬೇಕು,” ಎನ್ನುತ್ತಾರೆ ಆಕೆ

1989ರ ರೈಲ್ವೆ ಕಾನೂನಿನ ಅನುಚ್ಛೇದ 144ರ ಪ್ರಕಾರ, ತಿರುಗು ವ್ಯಾಪಾರವನ್ನು (hawking) ನಿಷೇಧಿಸಿದ್ದು, ಈಕೆಯು ಆಗಾಗ್ಗೆ ದಂಡವನ್ನು ತೆರಬೇಕಾಗುತ್ತದೆ. “ಕನಿಷ್ಠ ತಿಂಗಳಿಗೊಮ್ಮೆ ಪೊಲಿಸರು ನಮಗೆ 2,000 ರೂ.ಗಳ ದಂಡವನ್ನು ವಿಧಿಸುತ್ತಾರೆ. ಇಂತಹ ವ್ಯಪಾರಕ್ಕೆ ಅವಕಾಶವಿಲ್ಲವೆಂಬುದು ಪೊಲೀಸರ ಅಂಬೋಣ. ಬೀದಿಯ ಮೇಲೆ ವ್ಯಾಪಾರಮಾಡಲು ನಾವು ಪ್ರಯತ್ನಿಸಿದಲ್ಲಿ, ಇತರೆ ಮಾರಾಟಗಾರರು ನಮಗೆ ಅವಕಾಶ ನೀಡುವುದಿಲ್ಲ. ನಾವು ಹೋಗುವುದಾದರೂ ಎಲ್ಲಿಗೆ? ಕೊನೆಯ ಪಕ್ಷ, ಮನೆಯಿಂದ ನಿರ್ವಹಿಸಬಹುದಾದ ಕೆಲಸವನ್ನಾದರೂ ನಮಗೆ ನೀಡಿ” ಎಂದರಾಕೆ.

'It was not even a year since I started earning decently and work stopped [due to the lockdown],' Dnyaneshwar Jarare says; his wife Geeta (left) is partially blind
PHOTO • Jyoti
'It was not even a year since I started earning decently and work stopped [due to the lockdown],' Dnyaneshwar Jarare says; his wife Geeta (left) is partially blind
PHOTO • Jyoti

ನಾನು ತಕ್ಕಮಟ್ಟಿನ ಸಂಪಾದನೆಯನ್ನು ಪ್ರಾರಂಭಿಸಿ, ಒಂದು ವರ್ಷವಾಗುವ ಮೊದಲೇ ಅದು ನಿಂತುಹೋಯಿತು (ಲಾಕ್‌ಡೌನ್‌ ಕಾರಣದಿಂದಾಗಿ) ಎನ್ನುತ್ತಾರೆ, ದ್ಯಾನೇಶ್ವರ್‌ ಜರಾರೆ. ಇವರ ಪತ್ನಿ ಗೀತ (ಎಡಕ್ಕೆ) ಅವರೂ ಭಾಗಶಃ ಅಂಧರುʼ

ಅಲ್ಕ ಅವರ ಒಂದು ಕೋಣೆಯ ಮನೆಯ ಪಕ್ಕದಲ್ಲಿ, ದೃಷ್ಟಿ ಮಾಂದ್ಯರಾದ ದ್ಯಾನೇಶ್ವರ್‌ ಜರಾರೆಯವರು ಪ್ರತಿಯೊಂದು ಸ್ಪರ್ಶಕ್ಕೆ ಅನುಗುಣವಾಗಿ ಸೂಚನೆಗಳನ್ನು ನೀಡುತ್ತಿರುವ ತಮ್ಮ ಮೊಬೈಲ್‌ನಲ್ಲಿ ಮಗ್ನರಾಗಿದ್ದಾರೆ. ಅವರ ಪತ್ನಿ ಗೀತ, ಗೃಹಿಣಿ. ಭಾಗಶಃ ಅಂಧರಾದ ಅವರು ಮಧ್ಯಾಹ್ನದ ಊಟದ ತಯಾರಿಯಲ್ಲಿದ್ದಾರೆ.

ಸೆಪ್ಟೆಂಬರ್‌ 2019ರಲ್ಲಿ, 31ರ ವಯಸ್ಸಿನ ದ್ಯಾನೇಶ್ವರ್‌, ಪಶ್ಚಿಮ ಬಾಂದ್ರಾದಲ್ಲಿನ ಮಸಾಜ್‌ ಸೆಂಟರ್‌ ಒಂದರಲ್ಲಿ ಕೆಲಸವನ್ನು ಪ್ರಾರಂಭಿಸಿ, 10,000 ರೂ.ಗಳ ನಿಗದಿತ ಮಾಸಿಕ ವೇತನವನ್ನು ಪಡೆಯುತ್ತಿದ್ದರು. “ನಾನು ತಕ್ಕಮಟ್ಟಿನ ಸಂಪಾದನೆಯನ್ನು ಪ್ರಾರಂಭಿಸಿದ ಒಂದು ವರ್ಷಕ್ಕೆ ಮೊದಲೇ ಕೆಲಸವು ನಿಂತುಹೋಯಿತು (ಲಾಕ್‌ಡೌನ್‌ ಕಾರಣದಿಂದಾಗಿ),” ಎಂದ ಅವರು, ಇದಕ್ಕೆ ಮೊದಲು ಪಶ್ಚಿಮ ರೈಲ್ವೆ ನಿಲ್ದಾಣಗಳ ಸೇತುವೆಯ ಮೇಲೆ ಫೈಲು ಹಾಗೂ ಕಾರ್ಡ್‌ ಹೋಲ್ಡರ್‌ಗಳನ್ನು ಮಾರುತ್ತಿದ್ದರು. “ನಮ್ಮ ಬಾಯಿಗೆ ಮುಸುಕನ್ನು ಕಟ್ಟಿ, ಕೈಗಳನ್ನು ಶುದ್ಧೀಕರಿಸಿ, ಕೈಗವಸುಗಳನ್ನು ಹಾಕಿಕೊಳ್ಳುತ್ತೇವಾದರೂ, ಕೇವಲ ಮುಂಜಾಗ್ರತೆಯಿಂದ ನಮ್ಮ ಹೊಟ್ಟೆ ತುಂಬುವುದಿಲ್ಲ. ನಮ್ಮ ಜೀವನೋಪಾಯವು ಮುಂದುವರಿಯತಕ್ಕದ್ದು. ಇತರರಿಗಿಂತ ನಮಗೆ ಕೆಲಸವನ್ನು ದೊರಕಿಸಿಕೊಳ್ಳುವುದು ಅತ್ಯಂತ ಕಠಿಣವಾದುದು” ಎಂಬ ಅಂಶವನ್ನು ಸಹ ಅವರು ತಿಳಿಸಿದರು.

ಅಂಗವಿಕಲರಿಗೆ ಉದ್ಯೋಗವನ್ನು ಒದಗಿಸಲು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು, National Handicapped Finance and Development Corporation ಅನ್ನು ಸ್ಥಾಪಿಸಿತು. 2018-19ರಲ್ಲಿ, ಈ ಕಾರ್ಪೊರೇಷನ್‌ ವತಿಯಿಂದ 15,786 ಅಂಗವಿಕಲರಿಗೆ ಕೈ ಕಸೂತಿ, ಹೊಲಿಗೆ ಯಂತ್ರಗಳ ನಿರ್ವಹಣೆ, ದತ್ತಾಂಶಗಳ ನಿರ್ವಹಣೆ, ದೂರದರ್ಶನಗಳ ದುರಸ್ತಿಯ ತಾಂತ್ರಿಕ ಪರಿಣತಿ ಮುಂತಾದ ಕೌಶಲಗಳ ತರಬೇತಿಯನ್ನು ಒದಗಿಸಲಾಯಿತು.165,337 ಅಂಗವಿಕಲರು ಸಣ್ಣ ಉದ್ಯಮವನ್ನು ಪ್ರಾರಂಭಿಸಲು ರಿಯಾಯಿತಿ ದರದಲ್ಲಿ ಸಾಲವನ್ನು ಪಡೆದುಕೊಂಡರು.

ಆದರೆ, ಮುಂಬೈನ ದೃಷ್ಟಿ ಎಂಬ ಸರ್ಕಾರೇತರ ಸಂಸ್ಥೆಯ ಯೋಜನೆಗಳ ನಿರ್ದೇಶಕರಾದ ಕಿಶೋರ್‌ ಗೊಹಿಲ್‌ ಹೀಗೆನ್ನುತ್ತಾರೆ: “ಅಂಗವಿಕಲರಿಗೆ ತರಬೇತಿಯ ಒದಗಣೆ, ಎಷ್ಟು ಜನರು ತರಬೇತಿಯನ್ನು ಪಡೆದರೆಂಬ ಘೋಷಣೆ - ಇವಿಷ್ಟೇ ಸಾಲದು. ಅಂಧರು, ಅಂಗವಿಕಲರು, ಕಿವುಡರು ಯೋಜನೆಯಡಿಯಲ್ಲಿ ಕೌಶಲ್ಯದ ತರಬೇತಿಯನ್ನು ಪಡೆಯುತ್ತಾರಾದರೂ, ಉದ್ಯೋಗವನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ. ಇದರಿಂದಾಗಿ, ಅಂಗವಿಕಲರು ಭಿಕ್ಷೆ ಬೇಡುವ ಅಥವಾ ರೈಲು ಹಾಗೂ ಪ್ಲ್ಯಾಟ್‌ಫಾರಂಗಳಲ್ಲಿ ದಿನಬಳಕೆಯ ವಸ್ತುಗಳನ್ನು ಮಾರುವ ಒತ್ತಾಯಕ್ಕೆ ಒಳಗಾಗುತ್ತಾರೆ.” ಗೊಹಿಲ್‌ ಅವರು ಸಹ ಅಂಧರು. ಇವರ ಸಂಸ್ಥೆಯು ಮುಂಬೈನ ಅಂಗವಿಕಲರ ಸುರಕ್ಷತೆ, ಸೌಲಭ್ಯಗಳ ಸುಲಭಲಭ್ಯತೆ ಮತ್ತು ಉದ್ಯೋಗವನ್ನು ಕುರಿತ ಕೆಲಸಗಳಲ್ಲಿ ತೊಡಗಿದೆ.

ಮಾರ್ಚ್‌ 24ರಂದು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಬ್ರೈಲ್‌, ಆಡಿಯೋ ಹಾಗೂ ಅಡಿಬರಹಗಳನ್ನುಳ್ಳ ವೀಡಿಯೋಗ್ರಾಫ್‌ಗಳನ್ನು ಒಳಗೊಂಡ, ಸರ್ವವ್ಯಾಪಿ ವ್ಯಾಧಿಯ ಕಾಲದಲ್ಲಿ ಕೈಗೊಳ್ಳತಕ್ಕ ಮುಂಜಾಗ್ರತೆಗಳನ್ನು ಕುರಿತ ಕೋವಿಡ್‌ ಸಂಬಂಧಿತ ಮಾಹಿತಿಯನ್ನು ತಕ್ಷಣವೇ ಒದಗಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನವನ್ನು ನೀಡಿತು.

“ಮುಂಜಾಗ್ರತಾ ಕ್ರಮಗಳನ್ನು ತಿಳಿಸಲು ಯಾರೂ ನಮ್ಮಲ್ಲಿಗೆ ಬರಲಿಲ್ಲ. ವಾರ್ತೆಗಳನ್ನು ಆಲಿಸುವ ಹಾಗೂ ದೂರದರ್ಶನವನ್ನು ವೀಕ್ಷಿಸುವ ಮೂಲಕ ನಾವು ಅದರ ಬಗ್ಗೆ ತಿಳಿದುಕೊಂಡೆವು” ಎಂಬುದಾಗಿ ವಿಮಲ್‌ ಮಾಹಿತಿಯನ್ನಿತ್ತರು. ಆಗ ಮಧ್ಯಾಹ್ನದ ಸಮಯ. ಬೆಳಗಿನ ಕೆಲಸಗಳನ್ನು ಮುಗಿಸಿ, ಊಟದ ತಯಾರಿಯಲ್ಲಿದ್ದ ಆಕೆ, "ಕೆಲವೊಮ್ಮೆ ಊಟದಲ್ಲಿ ಉಪ್ಪು, ಖಾರ ಹೆಚ್ಚಾಗುತ್ತದೆ. ನಿಮಗೂ ಇದರ ಅನುಭವವಾಗಿರಬಹುದು” ಎನ್ನುತ್ತಾ ಮುಗುಳ್ನಕ್ಕರು.

ಅನುವಾದ: ಶೈಲಜಾ ಜಿ.ಪಿ.

Jyoti

Jyoti is a Senior Reporter at the People’s Archive of Rural India; she has previously worked with news channels like ‘Mi Marathi’ and ‘Maharashtra1’.

यांचे इतर लिखाण Jyoti
Editor : Sharmila Joshi

शर्मिला जोशी पारीच्या प्रमुख संपादक आहेत, लेखिका आहेत आणि त्या अधून मधून शिक्षिकेची भूमिकाही निभावतात.

यांचे इतर लिखाण शर्मिला जोशी
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

यांचे इतर लिखाण Shailaja G. P.