ತರಗತಿಯಲ್ಲಿ ಜೀವಶಾಸ್ತ್ರದ ಶಿಕ್ಷಕರು ಕ್ರೋಮೋಸೋಮ್‌ಗಳು ಮನುಷ್ಯನ ಲಿಂಗವನ್ನು ಹೇಗೆ ನಿರ್ಧರಿಸುತ್ತವೆ ಎನ್ನುವುದನ್ನು ವಿವರಿಸುತ್ತಿದ್ದರು. ತರಗತಿಯಲ್ಲಿ ಬಹಳ ಮೌನವಿತ್ತು ಮತ್ತು ವಿದ್ಯಾರ್ಥಿಗಳು ಕುತೂಹಲದಿಂದ ಪಾಠ ಕೇಳುತ್ತಿದ್ದರು. “ಹೆಣ್ಣು ಎರಡು X ಕ್ರೋಮೊಸೋಮ್ ಹೊಂದಿದ್ದರೆ, ಗಂಡು ಒಂದು X ಮತ್ತು ಒಂದು Y ಕ್ರೋಮೊಸೋಮ್ ಹೊಂದಿರುತ್ತಾನೆ. ಅದೇ ಎರಡು XX ಜೊತೆ ಒಂದು Y ಜೊತೆಯಾದರೆ ಆಗ ಅಗೋ, ಅಲ್ನೋಡಿ ಅಲ್ಲಿ ಕುಳಿತಿದ್ದಾನಲ್ಲ ಅವನ ರೀತಿ ಆಗುತ್ತಾರೆ” ಎಂದು ಶಿಕ್ಷಕ ವಿದ್ಯಾರ್ಥಿಯೊಬ್ಬನ ಕಡೆ ಬೆರಳು ತೋರಿಸುತ್ತಾ ಹೇಳಿದಾಗ ಇಡೀ ತರಗತಿ ಗೊಳ್ ಎಂದು ನಕ್ಕಿತು.
ಇದು ಟ್ರಾನ್ಸ್ ಸಮುದಾಯ ಪ್ರಸ್ತುತಪಡಿಸಿದ ಸಂಡಕಾರಂಗ (ಹೋರಾಟಕ್ಕೆ ನಿಂತವರು) ನಾಟಕ ಮೊದಲ ದೃಶ್ಯ. ನಾಟಕದ ಮೊದಲ ಭಾಗವು ಕಡ್ಡಾಯ ಲಿಂಗ ಪಾತ್ರಗಳಿಗೆ ಹೊಂದಿಕೊಳ್ಳದ ಕಾರಣ ತರಗತಿಯಲ್ಲಿ ಮಗುವೊಂದು ಎದುರಿಸುವ ಅವಮಾನ ಮತ್ತು ಅಪಹಾಸ್ಯದ ಬಗ್ಗೆ ಮಾತನಾಡಿದರೆ, ದ್ವಿತೀಯಾರ್ಧವು ಹಿಂಸಾಚಾರಕ್ಕೆ ಒಳಗಾದ ಟ್ರಾನ್ಸ್ ಮಹಿಳೆಯರು ಮತ್ತು ಟ್ರಾನ್ಸ್ ಪುರುಷರ ಜೀವನವನ್ನು ಮರುಸೃಷ್ಟಿಸುತ್ತದೆ.
ಟ್ರಾನ್ಸ್ ರೈಟ್ಸ್ ನೌ ಕಲೆಕ್ಟಿವ್ (ಟಿಆರ್‌ಎನ್‌ಸಿ) ಭಾರತದಾದ್ಯಂತ ದಲಿತ, ಬಹುಜನ ಮತ್ತು ಆದಿವಾಸಿ ಟ್ರಾನ್ಸ್ ಜನರ ಧ್ವನಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತದೆ. ಅವರು ನವೆಂಬರ್ 23, 2022ರಂದು ತಮಿಳುನಾಡಿನ ಚೆನ್ನೈನಲ್ಲಿ ಸಂಡಕಾರಂಗ ನಾಟಕದ ಮೊದಲ ಪ್ರದರ್ಶನವನ್ನು ಪ್ರಸ್ತುತಪಡಿಸಿದರು. ಒಂದು ಗಂಟೆ ಅವಧಿಯ ಈ ನಾಟಕದ ನಿರ್ಮಾಣ, ನಿರ್ದೇಶನ ಮತ್ತು ನಟನೆ ಒಂಬತ್ತು ಟ್ರಾನ್ಸ್ ವ್ಯಕ್ತಿಗಳ ಗುಂಪಿನದು.
"ನವೆಂಬರ್ ತಿಂಗಳ 20ನೇ ದಿನವನ್ನು ಅಂತರರಾಷ್ಟ್ರೀಯ ಟ್ರಾನ್ಸ್ ಸ್ಮರಣೆಯ ದಿನವಾಗಿ ಆಚರಿಸಲಾಗುತ್ತದೆ, ಇದನ್ನು ಮರಣ ಹೊಂದಿದ ಟ್ರಾನ್ಸ್ ವ್ಯಕ್ತಿಗಳ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಅವರ ಬದುಕು ಸುಲಭವಲ್ಲ, ಏಕೆಂದರೆ ಅವರು ತಮ್ಮ ಕುಟುಂಬಗಳಿಂದ ನಿರ್ಲಕ್ಷಿಸಲ್ಪಡುತ್ತಾರೆ ಮತ್ತು ಸಮಾಜದಿಂದ ಬಹಿಷ್ಕರಿಸಲ್ಪಟ್ಟಿರುತ್ತಾರೆ ಮತ್ತು ಅನೇಕರು ಕೊಲೆಗೀಡಾಗುತ್ತಾರೆ ಅಥವಾ ಆತ್ಮಹತ್ಯೆಯಿಂದ ಸಾಯುತ್ತಾರೆ "ಎಂದು ಟಿಆರ್‌ಎನ್‌ಸಿ ಸ್ಥಾಪಕ ಗ್ರೇಸ್ ಬಾನು ಹೇಳುತ್ತಾರೆ.
“ಪ್ರತಿ ವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಟ್ರಾನ್ಸ್ ಸಮುದಾಯದ ಮೇಲೆ ಹಿಂಸಾಚಾರ ನಡೆದಾಗ ಯಾರೂ ಅದರ ವಿರುದ್ಧ ದನಿಯೆತ್ತುವುದಿಲ್ಲ. ಈ ಕುರಿತು ನಮ್ಮ ಸಮಾಜದಲ್ಲಿ ಸಂಪೂರ್ಣ ಮೌನವಿದೆ.” ಎಂದು ಕಲಾವಿದೆ ಮತ್ತು ಕಾರ್ಯಕರ್ತೆ ಭಾನು ಹೇಳುತ್ತಾರೆ. “ಈ ಕುರಿತಾದ ಚರ್ಚೆಯನ್ನು ನಾವು ಪ್ರಾರಂಭಿಸಲೇಬೇಕಾದ ಅನಿವಾರ್ಯತೆಯಿತ್ತು. ಅದಕ್ಕಾಗಿಯೇ ಈ ನಾಟಕಕ್ಕೆ ಸಂಡಕಾರಂಗ ಎನ್ನುವ ಹೆಸರಿಟ್ಟೆವು.”
2017ರಲ್ಲಿ ಈ ನಾಟಕವನ್ನು ʼಸಂಡಕಾರಿʼ ಎನ್ನುವ ಹೆಸರಿನಲ್ಲಿ ಪ್ರದರ್ಶಿಸಲಾಗಿತ್ತು. “ಟ್ರಾನ್ಸ್ ಸಮುದಾಯದ ಎಲ್ಲರನ್ನೂ ಒಳಗೊಳ್ಳುವ ಉದ್ದೇಶದಿಂದ 2022ರಲ್ಲಿ ಇದರ ಹೆಸರನ್ನು ಸಂಡಕಾರಂಗ ಎಂದು ಬದಲಾಯಿಸಲಾಯಿತು.” ಎಂದು ಭಾನು ವಿವರಿಸುತ್ತಾರೆ. ಈ ನಾಟಕದ ಒಂಬತ್ತು ಕಲಾವಿದರು ಸಮುದಾಯದ ನೋವು ಮತ್ತು ಸಂಕಟವನ್ನು ನಿರೂಪಿಸುತ್ತಾರೆ ಮತ್ತು ಟ್ರಾನ್ಸ್ ಸಮುದಾಯದ ಬಗ್ಗೆ ಮೌಖಿಕ ಮತ್ತು ದೈಹಿಕ ಹಿಂಸಾಚಾರದ ಕುರಿತಾದ ಸುತ್ತಲಿನ ಅಜ್ಞಾನ ಮತ್ತು ಮೌನವನ್ನು ಪ್ರಶ್ನಿಸುತ್ತಾರೆ. "ಇದೇ ಮೊದಲ ಬಾರಿಗೆ ಟ್ರಾನ್ಸ್ ಪುರುಷರು ಮತ್ತು ಟ್ರಾನ್ಸ್ ಮಹಿಳೆಯರು ವೇದಿಕೆಯ ಮೇಲೆ ಒಟ್ಟಿಗೆ ಸೇರಿದ್ದಾರೆ" ಎಂದು ಲೇಖಕಿ ಮತ್ತು ಸಂಡಕಾರಂಗ ನಾಟಕದ ನಿರ್ದೇಶಕಿ ನೇಘಾ ಹೇಳುತ್ತಾರೆ.
“ನಾವು ಸದಾ ಜೀವ ಉಳಿಸಿಕೊಳ್ಳುವ ಸಲುವಾಗಿ ಹೋರಾಡುವುದರಲ್ಲೇ ಬದುಕು ಕಳೆಯುತ್ತೇವೆ. ನಮ್ಮ ತಿಂಗಳ ಖರ್ಚು ಮತ್ತು ಅಗತ್ಯ ವಸ್ತುಗಳ ಖರೀದಿಗಾಗಿ ನಿರಂತ ದುಡಿಯುತ್ತೇವೆ. ಈ ಸ್ಕ್ರಿಪ್ಟ್ ಸಂಬಂಧಿಸಿದ ಕೆಲಸದಲ್ಲಿ ನಾನು ಉತ್ಸಾಹದಿಂದ ತೊಡಗಿಕೊಂಡಿದ್ದೆ. ಆದರೆ ಆದರೆ ಟ್ರಾನ್ಸ್ ಪುರುಷರು ಮತ್ತು ಟ್ರಾನ್ಸ್ ಮಹಿಳೆಯರಿಗೆ ರಂಗಭೂಮಿ ಅಥವಾ ಸಿನೆಮಾದಲ್ಲಿ ನಟಿಸಲು ಅವಕಾಶಗಳು ಎಲ್ಲಿಯೂ ಸಿಗುವುದಿಲ್ಲ. ಇದು ನನಗೆ ಸಿಟ್ಟು ತರಿಸಿತು. ಇದೇ ಕಾರಣಕ್ಕಾಗಿ ನಾನು ಬದುಕಿಗಾಗಿ ಇಷ್ಟೆಲ್ಲಾ ಹೋರಾಡುವ ನಾವು ನಾಟಕವೊಂದನ್ನು ಏಕೆ ನಿರ್ದೇಶಿಸಲು ಪ್ರಯತ್ನಿಸಬಾರದು ಎನ್ನಿಸಿತು” ಎಂದು ನೇಘಾ ಹೇಳುತ್ತಾರೆ.
ಈ ಫೋಟೋ ಸ್ಟೋರಿಯು ಟ್ರಾನ್ಸ್ ಸಮುದಾಯದ ಅಳಿಸಿಹೋದ ಇತಿಹಾಸವನ್ನು ಮರುಸೃಷ್ಟಿಸುವ ಕ್ಷಣಗಳನ್ನು ಸೆರೆಹಿಡಿದಿದೆ, ಅವರ ಬದುಕುವ ಹಕ್ಕನ್ನು ಮರಳಿ ಪಡೆಯುವುದನ್ನು ಪ್ರತಿಫಲಿಸುತ್ತದೆ ಮತ್ತು ಅವರ ದೇಹವನ್ನು ಗೌರವಿಸುತ್ತದೆ.
ಅನುವಾದ : ಶಂಕರ . ಎನ್ . ಕೆಂಚನೂರು