“ನಾನು ಸತ್ತರೂ ಪರವಾಗಿಲ್ಲ, ಆದರೆ ಈ ಆಸ್ಪತ್ರೆ ಬಿಲ್ ನಮ್ಮಿಂದ ಭರಿಸಲು ಸಾಧ್ಯವಿಲ್ಲ.” ಹೀಗೆಂದು ಹರಿಶ್ಚಂದ್ರ ಧಾವರೆ ತನ್ನ ಪತ್ನಿ ಜಯಶ್ರೀ ಬಳಿ ಸಾಯುವ ಎರಡು ದಿನದ ಮೊದಲು ಹೇಳಿದ್ದರು. 48ರ ಹರೆಯದ ಈ ಪತ್ರಕರ್ತರ ಆರೋಗ್ಯವು ಕೋವಿಡ್-19ರಿಂದ ಗಂಭೀರವಾಗಿ ಹದಗೆಟ್ಟು ಅವರಿಗೆ ವೆಂಟಿಲೇಟರ್ ಆಳವಡಿಸಲಾಗಿತ್ತು.
ಆ ಸಮಯದಲ್ಲೂ ಅವರು ತನ್ನ ಸ್ವಂತ ಜೀವಕ್ಕಾಗಿ ಕಾಳಜಿ ಮಾಡುತ್ತಿರಲಿಲ್ಲ. ಬದಲಿಗೆ ಆಸ್ಪತ್ರೆ ಬಿಲ್ಲು ಹೇಗೆ ಕಟ್ಟುವುದೆಂದು ಚಿಂತಿಸುತ್ತಿದ್ದರು. “ಅವರು ಮನೆಗೆ ಹೋಗೋಣವೆಂದು ನನ್ನೊಡನೆ ಜಗಳ ಮಾಡಿ ಅತ್ತಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ 38 ವರ್ಷದ ಜಯಶ್ರೀ.
2021ರ ಮಾರ್ಚ್ ತಿಂಗಳ ಕೊನೆಯಲ್ಲಿ ಹರಿಶ್ಚಂದ್ರರಿಗೆ ಕೊರೊನಾ ವೈರಸ್ ಸೋಂಕು ಉಂಟಾದಾಗ ಅವರ ಇಪ್ಪತ್ತು ವರ್ಷಗಳ ಪತ್ರಿಕಾ ವೃತ್ತಿ ಅವರ ಸಹಾಯಕ್ಕೆ ಬರಲಿಲ್ಲ. ಬದಲಿಗೆ ಅವರ ಕೆಲಸದಿಂದಲೇ ಅವರು ಅಪಾಯಕ್ಕೆ ಈಡಾಗಿದ್ದರು.
ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲೆಯ ಸುದ್ದಿ ಸಂಸ್ಥೆಗಳಲ್ಲಿ 2001ರ ಆರಂಭದಿಂದಲೂ ಕೆಲಸ ಮಾಡುತ್ತಿದ್ದ ವರದಿಗಾರರಾಗಿದ್ದ, ಹರಿಶ್ಚಂದ್ರ ಕೊನೆಯ ದಿನಗಳಲ್ಲಿ ಮರಾಠಿ ದೈನಿಕ ರಾಜಧರ್ಮದಲ್ಲಿದ್ದರು. "ಅವರು ಕೋವಿಡ್-19ರ ಎರಡನೇ ಅಲೆಯ ಬಗ್ಗೆ ವರದಿ ಮಾಡುತ್ತಿದ್ದರು. ಪತ್ರಿಕಾಗೋಷ್ಠಿಗಳಲ್ಲಿ ಭಾಗವಹಿಸುವುದು ಮತ್ತು ವರದಿಗಾಗಿ ಕ್ಷೇತ್ರ ಭೇಟಿಗಳಿಗೂ ಹೋಗುತ್ತಿದ್ದರು' ಎನ್ನುತ್ತಾರೆ ಜಯಶ್ರೀ. "ಅವರು ಹೊರಗೆ ಹೋದಾಗಲೆಲ್ಲಾ ನಮಗೆ ಚಿಂತೆಯಾಗುತ್ತಿತ್ತು. ಯಾಕೆಂದರೆ ಅವರಿಗೆ ಹೈ ಶುಗರ್ [ಮಧುಮೇಹ] ಮತ್ತು ರಕ್ತದೊತ್ತಡವಿತ್ತು. ಆದರೆ ಅವರು ತಾನು ಕೆಲಸಕ್ಕೆ ಹೋಗಲೇಬೇಕಿದೆ ಎನ್ನುತ್ತಿದ್ದರು."
ಮಾರ್ಚ್ 22ರಂದು, ಧಾವೆರ್ ಅವರಲ್ಲಿ ಕೋವಿಡ್ ರೋಗಲಕ್ಷಣಗಳು ಕಾಣಲು ಪ್ರಾರಂಭವಾಯಿತು. ಅವರು ಮೈ-ಕೈ ನೋವು ಮತ್ತು ಜ್ವರದಿಂದ ಬಳಲುತ್ತಿದ್ದರು. “ಅವರ ಆರೋಗ್ಯದ ಸ್ಥಿತಿ ಸುಧಾರಿಸದಿದ್ದಾಗ ಪಟ್ಟಣದ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು' ಎನ್ನುತ್ತಾರೆ ಜಯಶ್ರೀ. ಅಲ್ಲಿ ವರದಿ ಪಾಸಿಟಿವ್ ಬಂದ ನಂತರ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. "ಅಲ್ಲಿನ ಸೌಲಭ್ಯಗಳು ಉತ್ತಮವಾಗಿರಲಿಲ್ಲ, ಮತ್ತು ಅವರ ಆರೋಗ್ಯದ ಪ್ರಗತಿ ತೃಪ್ತಿಕರವಾಗಿರಲಿಲ್ಲ" ಎಂದು ಜಯಶ್ರೀ ಮುಂದುವರಿದು ಹೇಳುತ್ತಾರೆ. ಆದ್ದರಿಂದ ಮಾರ್ಚ್ 31ರಂದು, ಕುಟುಂಬವು ಅವರನ್ನು ಅಲ್ಲಿಂದ 60 ಕಿಲೋಮೀಟರ್ ದೂರದಲ್ಲಿರುವ ಸೋಲಾಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿತು.
ಅಲ್ಲಿ ಆರು ದಿನಗಳನ್ನು ಕಳೆದ ನಂತರ, ಧಾವರೆ ಎಪ್ರಿಲ್ 6ರಂದು ನಿಧನ ಹೊಂದಿದರು.









