ಸಧ್ಯದಲೇ, ಅವು ಅಹಮದಾಬಾದ್ ಒಂದರಲ್ಲೇ ಸಾವಿರ ರನ್ ವೇಗಳಿಂದ ಟೇಕ್ ಆಫ್ ಆಗುತ್ತವೆ. ಇದು ನೋಡಲು ಯಾವುದೇ ಹೆಸರಾಂತ ಏರ್ ಪರೇಗಿಂತಲೂ ಹೆಚ್ಚು ವರ್ಣರಂಜಿತ ಮತ್ತು ಅದ್ಭುತ ದೃಶ್ಯವಾಗಿರುತ್ತದೆ. ಅವುಗಳ ಹೆಮ್ಮೆಯ ಪೈಲಟ್‌ಗಳು ಮತ್ತು ಮಾಲೀಕರು ಇಬ್ಬರೂ ನೆಲದಲ್ಲೇ ಇರುತ್ತಾರೆ. ಈ ವಿಮಾನಗಳ ಹಾರಾಟದ ಹಿಂದೆ ಎಷ್ಟು ಜನರ ಶ್ರಮವಿದೆಯೆನ್ನುವುದು ಆ ಇಬ್ಬರಿಗೂ ತಿಳಿದಿಲ್ಲ. ಅವುಗಳ ತಯಾರಿಕೆಯಲ್ಲಿ ಪಾಲ್ಗೊಳ್ಳುವವರಲ್ಲಿ ಹೆಚ್ಚಿನವರು ಮಹಿಳೆಯರು. ಮತ್ತು ಅವರಲ್ಲಿ ಕೆಲವರು ಗ್ರಾಮೀಣ ಅಥವಾ ಸಣ್ಣಪುಟ್ಟ ಪಟ್ಟಣಗಳ ವಾಸಿಗಳು. ಇವರು ತಮ್ಮ ಸೂಕ್ಷ್ಮ, ಸಂಕೀರ್ಣ ಮತ್ತು ಕಠಿಣವಾದ ಕೆಲಸಕ್ಕೆ ಪಡೆಯುವ ಪ್ರತಿಫಲ ಮಾತ್ರ ಬಹಳ ಸಣ್ಣದಿರುತ್ತದೆ. ಮತ್ತು ಅವರು ಎಂದೂ ಇವುಗಳನ್ನು ಹಾರಿಸುವುದಿಲ್ಲ.
ಇದು ಮಕರ ಸಂಕ್ರಾಂತಿ ಸಮಯ, ಮತ್ತು ಈ ಹಿಂದೂ ಹಬ್ಬದ ಆಚರಣೆಯಲ್ಲಿ ನಗರದಲ್ಲಿ ಹಾರಲಿರುವ ಅನೇಕ ಬಣ್ಣಗಳ ಕೆಲಿಡೋಸ್ಕೋಪಿಕ್ ಗಾಳಿಪಟಗಳನ್ನು ಅಹ್ಮದಾಬಾದಿನಲ್ಲಿ ಮತ್ತು ಗುಜರಾತಿನ ಆನಂದ್ ಜಿಲ್ಲೆಯ ಖಂಭಾತ್ ತಾಲ್ಲೂಕಿನಲ್ಲಿ - ಮುಸ್ಲಿಂ ಮತ್ತು ಹಿಂದೂ ಚುನಾರಾ ಸಮುದಾಯಗಳ ಮಹಿಳೆಯರು ತಯಾರಿಸಿದ್ದಾರೆ. ಸಹಜವಾಗಿಯೇ ಗಾಳಿಪಟ ಹಾರಿಸುವವರಲ್ಲಿ ಹೆಚ್ಚಿನವರು ಹಿಂದೂಗಳೇ ಆಗಿರಲಿದ್ದಾರೆ.
ಈ ಮಹಿಳೆಯರು ವಿಶೇಷವಾಗಿ ಜನವರಿ 14ರಂದು ಆಕಾಶವನ್ನು ಅಲಂಕರಿಸಿ ವರ್ಣರಂಜಿತವಾಗಿಸುವ ಗಾಳಿಪಟಗಳನ್ನು ವರ್ಷಕ್ಕೆ 10 ತಿಂಗಳಿಗೂ ಹೆಚ್ಚು ಕಾಲ ತಯಾರಿಸುವ ಕೆಲಸ ಮಾಡುತ್ತಾರೆ. ಆದರೆ ಬಹಳ ಕಡಿಮೆ ಆದಾಯ ಗಳಿಸುತ್ತಾರೆ. ಈ ವಲಯದಲ್ಲಿ ಕೆಲಸ ಮಾಡುವ 1.28 ಲಕ್ಷ ಜನರಲ್ಲಿ ಪ್ರತಿ 10 ಜನರಲ್ಲಿ ಮಹಿಳೆಯರು 7ರಷ್ಟಿದ್ದಾರೆ. ಗುಜರಾತಿನಲ್ಲಿದು 625 ಕೋಟಿ ಬೆಲೆ ಬಾಳುವ ಉದ್ಯಮ.
"ಒಂದು ಪತಂಗ್ (ಗಾಳಿಪಟ) ಸಿದ್ಧಗೊಳ್ಳುವ ಮೊದಲು ಏಳು ಜೋಡಿ ಕೈಗಳ ಮೂಲಕ ಹಾದುಹೋಗಬೇಕಾಗುತ್ತದೆ" ಎಂದು 40 ವರ್ಷದ ಸಬಿನ್ ಅಬ್ಬಾಸ್ ನಿಯಾಜ್ ಹುಸೇನ್ ಮಲಿಕ್ ಹೇಳುತ್ತಾರೆ. ನಾವು ಖಂಭಟ್‌ನ ಲಾಲ್ ಮಹಲ್ ಪ್ರದೇಶದ ಸಣ್ಣ ಓಣಿಯಲ್ಲಿ ಅವರ 20X12 ಅಡಿಯ ಮನೆ ಹಾಗೂ ಅಂಗಡಿಯೊಳಗೆ ಕುಳಿತಿದ್ದೆವು. ಮತ್ತು ಅವರು ಈ ಹೊರಗಿನಿಂದ ಸುಂದರವಾಗಿ ಕಾಣುವ ಉದ್ಯಮದ ಕಡಿಮೆ ತಿಳಿದಿರುವ ಬದಿಯ ಕುರಿತು ನಮಗೆ ಜ್ಞಾನೋದಯ ಮಾಡುತ್ತಿದ್ದರು, ಗಾಳಿಪಟಗಳನ್ನು ಸುತ್ತಿ ಮಾರಾಟಗಾರರಿಗೆ ಕಳುಹಿಸಲು ಸಿದ್ಧವಾಗಿರುವ ಪೊಟ್ಟಣಗಳ ಹೊಳೆಯುವ ಬೆಳ್ಳಿಯ ಹಿನ್ನೆಲೆಯ ಎದುರು ಕುಳಿತು ನಮ್ಮೊಡನೆ ಅವರು ಮಾತನಾಡುತ್ತಿದ್ದರು.


















