ಶೆರಿಂಗ್ ದೋರ್ಜೆ ಭುಟಿಯಾ ಅವರಿಗೆ ಬಿಲ್ಲುಗಳನ್ನು ನಿರ್ಮಿಸಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಅರಿಯಲು ಸಮಯ ಬೇಕಾಯಿತು. ಅವರ ಬದುಕು ಕಲೆ ಮತ್ತು ಕರಕುಶಲವನ್ನೇ ಆತುಕೊಂಡಿತ್ತು. ಪೆಕ್ಯಾಂಗ್ ಜಿಲ್ಲೆಯ ಕಾರ್ಥೋಕ್ ಗ್ರಾಮದಲ್ಲಿರುವ ತನ್ನ ಮನೆಯಲ್ಲಿ83 ವರ್ಷ ವಯಸ್ಸಿನ ಅವರು ಮಾತನಾಡಬಯಸಿದರು. 60 ವರ್ಷಗಳ ಕಾಲ ಅವರು ಮರಗೆಲಸವೇ ಅವರ ಆದಾಯದ ಮೂಲವಾಗಿತ್ತು-ಪ್ರಮುಖವಾಗಿ ಪೀಠೋಪಕರಣಗಳ ದುರಸ್ತಿ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಹೆಚ್ಚು ಸ್ಫೂರ್ತಿ ಕೊಟ್ಟಿದ್ದು ಬಿಲ್ಗಾರಿಕೆ- ಅವರ ತಾಯ್ನೆಲ ಸಿಕ್ಕಿಂನ ಸಂಸ್ಕೃತಿಯಲ್ಲಿ ಅದು ಆಳವಾಗಿ ಸೇರಿಕೊಂಡಿತ್ತು.
ದಶಕಗಳ ಕಾಲ ಮರಗೆಲಸ ಮಾಡಿಕೊಂಡಿದ್ದು ಅದು ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿಲ್ಲ. ಆದರೆ ಪೆಕ್ಯಾಂಗ್‌ನಲ್ಲಿ ಬಿಲ್ಲು ಮಾಡುವ ಕೆಲಸದಿಂದಾಗಿ ಅವರು ಜನಪ್ರಿಯಗೊಂಡರು.
“ನಾನು ಮರದಲ್ಲಿ ವಸ್ತುಗಳನ್ನು ನಿರ್ಮಿಸಲು ಆರಂಭಿಸಿದಾಗ 10 ರಿಂದ 12 ವರ್ಷ. ನಿದಾನವಾಗಿ ಬಿಲ್ಲು ಮಾಡಲಾರಂಭಿಸಿದೆ, ಜನ ಅದನ್ನು ಖರೀದಿಸಲಾರಂಭಿಸಿದರು," ಎಂದು ಶೇರಿಂಗ್ ಪರಿಗೆ ತಿಳಿಸಿದರು.
“ಹಿಂದೆ ಬಿಲ್ಲನ್ನು ವಿಭಿನ್ನವಾಗಿ ತಯಾರಿಸಲಾಗುತ್ತಿತ್ತು,” ಎಂದ ಅವರು, ತಮ್ಮಲ್ಲಿದ್ದ ಕೆಲವು ಉತ್ಪನ್ನಗಳನ್ನು ತೋರಿಸಿದರು. “ಈ ರೀತಿಯ ಹಿಂದಿನ ಬಿಲ್ಲುಗಳನ್ನು ತಾಬ್ಜೂ [ನೇಪಾಳಿ ಭಾಷೆಯಲ್ಲಿ] ಎಂದು ಕರೆಯಲಾಗುತ್ತಿತ್ತು. ಎರಡು ಸರಳ ಕಡ್ಡಿಗಳನ್ನು ಒಟ್ಟಿಗೆ ಜೋಡಿಸಿ, ಕಟ್ಟಿ, ಅದನ್ನು ಚಮಡಾ [ಚರ್ಮ]ದಿಂದ ಸುತ್ತಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ನಾವು ತಯಾರಿಸುವ ಬಿಲ್ಲನ್ನು ʼಬೋಟ್ ವಿನ್ಯಾಸʼ ಎನ್ನುತ್ತಾರೆ. ಒಂದು ಬಿಲ್ಲನ್ನು ಸಿದ್ಧಪಡಿಸಲು ಕನಿಷ್ಠ ಮೂರು ದಿನಗಳು ಬೇಕಾಗುತ್ತಿತ್ತು. ಆದರೆ ಅದು ಯುವ ಕ್ರಿಯಾಶೀಲರಿಗೆ ಮಾತ್ರ ಸಾಧ್ಯ. ಹಳೆಯ ಕೈಗಳಿಗೆ ಇನ್ನೂ ಕೆಲವು ದಿನ ತಗಲುತ್ತದೆ,” ಎಂದು ಹೇಳಿದ ಶೆರಿಂಗ್ ಮೊಗದಲ್ಲಿ ತುಂಟ ನಗುವಿತ್ತು.














