ಪ್ರತಿ ವರ್ಷದ ಏಪ್ರಿಲ್ 14ರಂದು ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪರಿ ತನ್ನ 'ಗ್ರೈಂಡ್ಮಿಲ್ ಸಾಂಗ್ಸ್ ಪ್ರಾಜೆಕ್ಟ್' ಅಡಿಯಲ್ಲಿ ಈ ತಿಂಗಳು ಪೂರ್ತಿ ಡಾ.ಅಂಬೇಡ್ಕರ್ ಮತ್ತು ಜಾತಿ ವಿಷಯಗಳ ಆಧಾರದ ಮೇಲೆ ಕಟ್ಟಲ್ಪಟ್ಟಿರುವ ಜಾನಪದ ಗೀತೆಗಳನ್ನು ಹಂಚಿಕೊಳ್ಳಲಿದೆ. ಈ ಸರಣಿಯ ಮೊದಲ ಕಂತಿನಲ್ಲಿ, ನಾವು ಬುದ್ಧ, ಭೀಮರಾವ್ ಅಂಬೇಡ್ಕರ್, ಧಮ್ಮ, ಸಂಘ ಮತ್ತು ರಮಾಬಾಯಿಯವರನ್ನು ಆಧರಿಸಿ ಹಾಡಲಾಗಿರುವ ಓವಿಯನ್ನು (ಬೀಸುಕಲ್ಲಿನ ಪದಗಳು) ಸಾವರ್ಗಾಂವ್ನ ರಾಧಾಬಾಯಿ ಬೋರ್ಡೆಯವರ ಕಂಠದಲ್ಲಿ ನಿಮಗಾಗಿ ತಂದಿದ್ದೇವೆ.
ಮೊದಲಿಗೆ, ಈ ಲೇಖನದೊಡನೆ ನೀಡಲಾಗಿರುವ ಆಡಿಯೋ ಮತ್ತು ವಿಡಿಯೋ ತುಣುಕುಗಳ ನಡುವೆ 21 ವರ್ಷಗಳ ವ್ಯತ್ಯಾಸವಿದೆಯೆನ್ನುವುದನ್ನು ನಮೂದಿಸಲು ಬಯಸುತ್ತೇವೆ. ರಾಧಾ ಬೋರ್ಡೆ (ಓವಿ) ಹಾಡುವ ಆಡಿಯೋ ಫೈಲನ್ನು ಏಪ್ರಿಲ್ 2, 1996ರಂದು ರೆಕಾರ್ಡ್ ಮಾಡಲಾಗಿತ್ತು. ಕಾಕತಾಳೀಯವೆಂಬಂತೆ ಈ ವರ್ಷ ಏಪ್ರಿಲ್ 2ರಂದೇ ನಾವು ಅವರನ್ನು ಭೇಟಿಯಾಗಿ ವಿಡಿಯೋ ರೆಕಾರ್ಡಿಂಗ್ ಮಾಡಿದೆವು.
ಈ ಹಾಡಿನ ಹಾಡುಗಾರ್ತಿಯಾದ ರಾಧಾಬಾಯಿ ಬೋರ್ಡೆಯವರಿಂದ 1996ರಲ್ಲಿ ಹಾಡುಗಳನ್ನು ಮೊದಲ ಬಾರಿಗೆ ಸಂಗ್ರಹಿಸಲಾಗಿತ್ತು. ಅದಾಗಿ 21 ವರ್ಷಗಳ ನಂತರ ಮತ್ತೆ ಈ ಹಾಡನ್ನು 2017ರಲ್ಲಿ ಸಂಗ್ರಹಿಸಲು ಹೋದಾಗ ಹಾಡಿನ ಕೆಲವು ಚರಣಗಳನ್ನು ಅವರು ಮರೆತಿದ್ದರು. ಆದರೆ ಹಾಡಿನ ಸಾಹಿತ್ಯವನ್ನು ಕೊಟ್ಟರೆ ತಾನು ಓದಿಕೊಂಡು ಹಾಡುವುದಾಗಿ ಹೇಳಿದರು. ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಅವರೀಗ ಓದುವುದನ್ನು ಕಲಿತಿದ್ದರು. ಅವರ ಹಾಡಿನ ರಾಗ ಮತ್ತು ಮಾಧುರ್ಯಗಳು ಮಾತ್ರ ಮೊದಲಿನಷ್ಟೇ ತಾಜಾ ಆಗಿದ್ದವು.




