ಕಡಲೂರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ಪ್ರಾರಂಭಿಸುವಾಗ ಅವರಿಗೆ ಕೇವಲ 17 ವರ್ಷ. ಆಗ ಅವರ ಕೈಯಲ್ಲಿದ್ದ ಮೊತ್ತ 1,800 ರೂಪಾಯಿಗಳು. ಈ ಬಂಡವಾಳವನ್ನು ಅವರ ತಾಯಿ ವ್ಯವಹಾರವನ್ನು ಆರಂಭಿಸಲೆಂದು ನೀಡಿದ್ದರು. ಇಂದು, 62 ವರ್ಷದವರಾಗಿರುವ ವೇಣಿ ಬಂದರಿನಲ್ಲಿ ಯಶಸ್ವಿ ಹರಾಜುದಾರರು ಮತ್ತು ಮಾರಾಟಗಾರರಾಗಿದ್ದಾರೆ. ಬಹಳ ಕಷ್ಟಪಟ್ಟು ಕಟ್ಟಿದ ಅವರ ಮೆಚ್ಚಿನ ಮನೆಯಂತೆಯೇ, ಅವರ ವ್ಯವಹಾರವನ್ನೂ “ಹಂತಹಂತವಾಗಿ” ಕಟ್ಟಿದ್ದಾರೆ
ಮದ್ಯ ವ್ಯಸನಿಯಾಗಿದ್ದ ಗಂಡ ಅವರನ್ನು ತೊರೆದ ನಂತರ ವೇಣಿ ನಾಲ್ಕು ಮಕ್ಕಳನ್ನು ಒಬ್ಬರೇ ದುಡಿದು ಬೆಳೆಸಿ ದೊಡ್ಡವರನ್ನಾಗಿಸಿದರು. ಅವರ ದೈನಂದಿನ ಗಳಿಕೆ ಬಹಳ ಕಡಿಮೆ, ಮತ್ತು ಬದುಕು ನಡೆಸಲು ಸಾಕಾಗುತ್ತಿರಲಿಲ್ಲ. ರಿಂಗ್ ಸೀನ್ ಮೀನುಗಾರಿಕೆಯ ಉಗಮದೊಂದಿಗೆ, ಅವರು ದೋಣಿಗಳಲ್ಲಿ ಹೂಡಿಕೆ ಮಾಡಿದರು, ಲಕ್ಷಾಂತರ ರೂಪಾಯಿಗಳನ್ನು ಸಾಲ ಮಾಡಿದರು. ಅವರ ಹೂಡಿಕೆಯ ಮೇಲಿನ ಆದಾಯವು ಅವರ ಮಕ್ಕಳಿಗೆ ಶಿಕ್ಷಣ ನೀಡಲು ಮತ್ತು ಮನೆಯನ್ನು ನಿರ್ಮಿಸಲು ಸಹಾಯ ಮಾಡಿತು.
1990ರ ದಶಕದ ಉತ್ತರಾರ್ಧದಿಂದ ಕಡಲೂರು ಕರಾವಳಿಯಲ್ಲಿ ರಿಂಗ್ ಸೀನ್ ಮೀನುಗಾರಿಕೆ ಜನಪ್ರಿಯತೆಯನ್ನು ಗಳಿಸಿತು, ಆದರೆ 2004 ರ ಸುನಾಮಿಯ ನಂತರ ಇದರ ಬಳಕೆ ವೇಗವಾಗಿ ಹೆಚ್ಚಾಯಿತು. ರಿಂಗ್ ಸೀನ್ ಗೇರ್ ಬೂತಾಯಿ(ಬೈಗೆ), ಬಂಗುಡೆ ಮತ್ತು ಮನಂಗುವಿನಂತಹ ಸಮುದ್ರ ವಾಸಿ ಮೀನುಗಳು ಹಾದು ಹೋಗುವ ದಾರಿಗಳನ್ನು ಹಿಡಿಯಲು ಸುತ್ತುವರಿದ ತಂತ್ರಗಳನ್ನು ಬಳಸುತ್ತದೆ.
ದೊಡ್ಡ ಬಂಡವಾಳ ಹೂಡಿಕೆಗಳ ಅಗತ್ಯ ಮತ್ತು ಕಾರ್ಮಿಕರ ಬೇಡಿಕೆಯು ಸಣ್ಣ ಪ್ರಮಾಣದ ಮೀನುಗಾರರನ್ನು ಷೇರುದಾರರ ಗುಂಪುಗಳನ್ನು ರೂಪಿಸಿಕೊಳ್ಳುವ ಅಗತ್ಯವನ್ನು ಸೃಷ್ಟಿಸುತ್ತದೆ, ಇದರಲ್ಲಿ ವೆಚ್ಚಗಳು ಮತ್ತು ಆದಾಯಗಳೆರಡನ್ನೂ ಹಂಚಿಕೊಳ್ಳಲಾಗುತ್ತದೆ. ವೇಣಿ ಹೂಡಿಕೆದಾರರಾದದ್ದು ಮತ್ತು ತನ್ನ ವ್ಯವಹಾರವನ್ನು ಬೆಳೆಸಿದ್ದು ಹೀಗೆ. ರಿಂಗ್ ಸೀನ್ ದೋಣಿಗಳು ಮಹಿಳೆಯರಿಗೆ ಅವಕಾಶಗಳ ಬಾಗಿಲನ್ನು ತೆರೆದವು, ಹರಾಜುದಾರರು, ಮಾರಾಟಗಾರರು ಮತ್ತು ಮೀನು ಒಣಗಿಸುವವರು. "ರಿಂಗ್ ಸೀನ್ ಬಲೆಯಿಂದಾಗಿ ನಾನು ಬದುಕಿದೆ, ಸಮಾಜದಲ್ಲಿ ನನ್ನ ಸ್ಥಾನಮಾನಬೆಳೆಯಿತು" ಎಂದು ವೇಣಿ ಹೇಳುತ್ತಾರೆ. "ನಾನು ಧೈರ್ಯಶಾಲಿ ಮಹಿಳೆಯಾದೆ, ಹೀಗಾಗಿ ನಾನು ಬದುಕಿನಲ್ಲಿ ಮೇಲಕ್ಕೆ ಬಂದೆ."
ದೋಣಿಗಳು ಪುರುಷರಿಗಷ್ಟೇ ಮೀಸಲಾದ ಸ್ಥಳಗಳಾಗಿದ್ದರೂ, ಆ ದೋಣಿಗಳು ಬಂದರಿನಲ್ಲಿ ಇಳಿದ ತಕ್ಷಣ, ಮಹಿಳೆಯರು ದೊರಕಿದ ಮೀನನ್ನು ಹರಾಜು ಮಾಡುವುದರಿಂದ ಹಿಡಿದು ಮಾರಾಟ ಮಾಡುವವರೆಗೆ, ಮೀನುಗಳನ್ನು ಕತ್ತರಿಸುವುದು ಮತ್ತು ಒಣಗಿಸುವುದು, ತ್ಯಾಜ್ಯವನ್ನು ವಿಲೇವಾರಿ ಮಾಡುವುದು, ಮಂಜುಗಡ್ಡೆ ಮಾರಾಟ, ಚಹಾ ಮತ್ತು ಬೇಯಿಸಿದ ಆಹಾರದವರೆಗೆ ಎಲ್ಲದರಲ್ಲೂ ಪ್ರಮುಖ ಪಾತ್ರವಹಿಸುತ್ತಾರೆ. ಮೀನುಗಾರ ಮಹಿಳೆಯರನ್ನು ಸಾಮಾನ್ಯವಾಗಿ ಮೀನು ಮಾರಾಟಗಾರರು ಎಂದು ನಿರೂಪಿಸಲಾಗುತ್ತದೆಯಾದರೂ, ಮೀನು ನಿರ್ವಹಣೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಮಾನ ಸಂಖ್ಯೆಯ ಮಹಿಳೆಯರು ಇದ್ದಾರೆ, ಆಗಾಗ್ಗೆ ಮಾರಾಟಗಾರರ ಸಹಭಾಗಿತ್ವದಲ್ಲಿಯೂ ಕೆಲಸ ಮಾಡುತ್ತಾರೆ. ಆದರೆ ಮೀನುಗಾರಿಕೆ ವಲಯಕ್ಕೆ ಮಹಿಳೆಯರ ಕೊಡುಗೆಗಳ ಮೌಲ್ಯ ಮತ್ತು ವೈವಿಧ್ಯತೆ ಎರಡಕ್ಕೂ ಕಡಿಮೆ ಮಾನ್ಯತೆ ನೀಡಲಾಗುತ್ತದೆ.