ಮೊಸಳೆಯನ್ನು ಹೋಲುವ ಪುಲ್ ಓವರ್ ಮತ್ತು ದಪ್ಪನೆಯ ಉಣ್ಣೆಯ ಸಾಕ್ಸ್ ಧರಿಸಿದ್ದ ಹರ್‌ಫತೇಹ್ ಸಿಂಗ್, ರಾಜಸ್ಥಾನ್-ಹರಿಯಾಣ ಗಡಿಯಲ್ಲಿ ದೊಡ್ಡ ಪಾತ್ರೆಯೊಂದರಲ್ಲಿದ್ದ ಹಸಿ ಬಟಾಣಿಯ ಸಿಪ್ಪೆ ತೆಗೆಯಲು ತನ್ನ ತಂದೆಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದ. ದೆಹಲಿ-ಜೈಪುರ ಹೆದ್ದಾರಿಯಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್‌ಪುರದ 18 ತಿಂಗಳ ಗಂಡು ಮಗು ಖಂಡಿತವಾಗಿಯೂ ಕಿರಿಯ ಪ್ರತಿಭಟನಾಕಾರರಲ್ಲಿ ಒಬ್ಬ. ರೈತರ ಆಂದೋಲನದಲ್ಲಿ ತರಕಾರಿಗಳ ಸಿಪ್ಪೆ ತೆಗೆಯುವ ಮೂಲಕ ಹರ್‌ಫತೇಹ್ ಹೋರಾಟಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾನೆ. ಅಥವಾ ಕನಿಷ್ಠ, ಹಾಗೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಅವನು ಅದನ್ನು ಸರಿಯಾಗಿ ಅಥವಾ ಪರಿಣಾಮಕಾರಿಯಾಗಿ ಮಾಡುತ್ತಿಲ್ಲ ನಿಜ, ಆದರೆ ಅದರಲ್ಲಿ ಅವನ ಆಸಕ್ತಿ ಅಥವಾ ಶ್ರಮದ ಕೊರತೆ ಕಾಣುವುದಿಲ್ಲ.
ದೆಹಲಿ ಮತ್ತು ಹರಿಯಾಣದ ವಿವಿಧ ಗಡಿಗಳಲ್ಲಿ, ಹಲವಾರು ರಾಜ್ಯಗಳ ಲಕ್ಷಾಂತರ ರೈತರು ತಮ್ಮ ಜೀವನೋಪಾಯಕ್ಕೆ ಹಾನಿಕಾರಕವಾಗಿರುವಂತಹ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಹೋರಾಡುತ್ತಿದ್ದಾರೆ. ಜೂನ್ 5ರಂದು ಮೊದಲು ಸುಗ್ರೀವಾಜ್ಞೆಯಾಗಿ ಹೊರಡಿಸಲ್ಪಟ್ಟ ಈ ಕಾನೂನುಗಳನ್ನು ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಮಸೂದೆಗಳಾಗಿ ಪರಿಚಯಿಸಲಾಯಿತು ಮತ್ತು ಆ ತಿಂಗಳ 20 ರ ಹೊತ್ತಿಗೆ ಕಾಯಿದೆಗಳನ್ನಾಗಿ ಆತುರವಾಗಿ ಜಾರಿಗೊಳಿಸಲಾಯಿತು
ಡಿಸೆಂಬರ್ 25ರಂದು, ನಾನು ಹರ್‌ಫತೇಹ್ ಭೇಟಿಯಾದ ಸಮಯದಲ್ಲಿ, ಮಹಾರಾಷ್ಟ್ರದ ಸುಮಾರು ಒಂದು ಸಾವಿರ ರೈತರು ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಇತರ ಅನೇಕ ಬೆಳೆಗಾರರನ್ನು ಶಹಜಹಾನ್ಪುರದ ಪ್ರತಿಭಟನಾ ಸ್ಥಳದಲ್ಲಿ ಸೇರಿಕೊಂಡರು. ಈ ರೈತರು ಮತ್ತು ಕೃಷಿ ಕಾರ್ಮಿಕರು ನಾಸಿಕ್‌ನಿಂದ 1,200 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಿಂದ ಟೆಂಪೊಗಳು, ಜೀಪ್‌ಗಳು ಮತ್ತು ಮಿನಿವ್ಯಾನ್‌ಗಳಂತಹ ವಾಹನಗಳಲ್ಲಿ ವಿವಿಧ ರಾಜ್ಯಗಳಿಂದ ತಮ್ಮ ಬಂದಿರುವ ಸಹವರ್ತಿಗಳನ್ನು ಅನೇಕ ಪ್ರತಿಭಟನಾ ಸ್ಥಳಗಳಲ್ಲಿ ಸೇರಲು ಬಂದಿದ್ದರು.
ಮಹಾರಾಷ್ಟ್ರದ ರೈತರನ್ನು ಸ್ವಾಗತಿಸಲು ಸೇರಿದ್ದ ಕುಟುಂಬಗಳಲ್ಲಿ ಹರ್‌ಫತೇಹ್ ಕುಟುಂಬವೂ ಒಂದಾಗಿತ್ತು - ಅವರಿಗೆ ಸುಮಾರು 100 ಜನರಿಗೆ ಆಲೂ-ಮಟರ್ ಸಬ್ಜಿ ತಯಾರಿಸುವ ಕೆಲಸವನ್ನು ವಹಿಸಲಾಗಿತ್ತು. "ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಾವು ಚಳಿಯ ದಿನಗಳಲ್ಲಿ ಇಲ್ಲಿದ್ದೇವೆ. ಇಂದು ನಾವು ರೈತರು ಪ್ರತಿಭಟಿಸದಿದ್ದರೆ, ಫತೇಹ್‌ಗೆ ಭವಿಷ್ಯವಿಲ್ಲ” ಎಂದು ಮಗುವಿನ ತಂದೆ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಛಾಜುಪುರ ಗ್ರಾಮದ 41 ವರ್ಷದ ಜಗರೂಪ್ ಸಿಂಗ್ ಹೇಳುತ್ತಾರೆ.




