ಮಹಾರಾಷ್ಟ್ರದ ಪಾಲ್ಘಡ್ ಜಿಲ್ಲೆಯ ನಿಂಬಾವಳಿ ಗ್ರಾಮದ ಮರವೊಂದರ ಕೆಳಗಡೆ ಮಧ್ಯ ವಯಸ್ಸಿನ ಯುವಕರು ಇಂದಿಗೂ ಕಾರ್ಯರೂಪಕ್ಕೆ ಬಾರದ 10 ವರ್ಷಗಳ ಹಿಂದಿನ ಕಾರ್ಯಕ್ರಮವೊಂದರ ಬಗ್ಗೆ ಚರ್ಚಿಸುತ್ತಿದ್ದರು. ಕಾಗದ, ಅಳತೆಯ ಸಾಧನಗಳು,ಮಾಪನಗಳು, ಅಳತೆಯ ಟೇಪ್‌ಗಳೊಂದಿಗೆ ಸರಕಾರಿ ಅಧಿಕಾರಿಗಳ ತಂಡ ಕಾರಿನಿಂದ ಬಂದಿಳಿಯಿತು. ಭೂಮಿಯಡಿಯಲ್ಲಿರುವ ನೀರನ್ನು ಪತ್ತೆ ಮಾಡಲು ಅಗೆಯುವುದಕ್ಕಾಗಿ ಸ್ಥಳವೊಂದನ್ನು ಹುಡುಕಿದರು, ಎಂದು ಬಾಬಾ, ನನ್ನ ತಂದೆ ತಂದೆ 55 ವರ್ಷ ಹರೆಯದ ಪರಶುರಾಮ್ ಪರೇದ್ ನೆನಪಿಸಿಕೊಂಡರು.
“ನಾನು ಅವರನ್ನು ಚೆನ್ನಾಗಿ ನೆನಪಿನ್ನಲ್ಲಿಟ್ಟುಕೊಂಡಿರುವೆ. ಏನು ಮಾಡುತ್ತಿದ್ದೀರೆಂದು ಪುನಃ ಪುನಃ ಅವರನ್ನು ಕೇಳಿದಾಗ, “ನಿಮಗೆ ನೀರು ಬೇಕು ತಾನೆ?” ಎಂದು ಕೇಳಿದರು. ನಾವು ಒಪ್ಪಿದೆವು, “ಪಾನಿ ಕಿಸೇ ನಹೀ ಮಂಗ್ತಾ [ನೀರು ಯಾರಿಗೆ ತಾನೇ ಬೇಡ],” ಎಂದು ಬಾಬಾ ಮತ್ತೆ ಹೇಳಿದರು. ನೀರಿನ ಕೊರತೆ ಇರುವ ಪ್ರದೇಶದಲ್ಲಿ ಸರಕಾರ ಯಾವುದೇ ಸ್ಥಳವನ್ನು ಆಯ್ಕೆ ಮಾಡಿದರೂ ಸ್ವಾಗತಾರ್ಹ, ಆದರೆ ಗ್ರಾಮಸ್ಥರ ಖುಷಿಯ ನಿರೀಕ್ಷೆ ಹೆಚ್ಚು ಕಾಲ ಉಳಿಯಲಿಲ್ಲ.
ತಿಂಗಳ ನಂತರ ಜಾಗ ತೆರವುಗೊಳಿಸಬೇಕೆಂದು ವಾಡಾ ತಾಲೂಕಿನ ನಿಂಬಾವಳಿ ಗ್ರಾಮದ ವರ್ಲಿ ಆದಿವಾಸಿಗಳಿಗೆ ನೋಟೀಸ್ ಜಾರಿಯಾಗುತ್ತದೆ, ಅಲ್ಲಿ ಯಾವುದೇ ಜಲ ಯೋಜನೆಗಳಿರಲಿಲ್ಲ, ಬದಲಾಗಿ ಮುಂಬೈ-ವಡೋದರಾ ರಾಷ್ಟ್ರೀಯ ಎಕ್ಸ್‌ಪ್ರೆಸ್ ಹೆದ್ದಾರಿಗೆ ಭೂಮಿ ಗುರುತಿಸುವ ಕಾರ್ಯ ನಡೆದಿತ್ತು.
“ನಮಗೆ ಅದು ರಾಷ್ಟ್ರೀಯ ಹೆದ್ದಾರಿಗೆ ಎಂದು ಗೊತ್ತಾದದ್ದು, ಅಂದು ಮಾತ್ರ,” ಎಂದು 50 ವರ್ಷ ಹರೆಯದ ಬಾಲಕೃಷ್ಣ ಲಿಪತ್ ಹೇಳುತ್ತಾರೆ. ಅದು 2012. ದಶಕ ಕಳೆದರೂ ಮೋಸದ ಭೂಸ್ವಾದೀನದಿಂದ ನನ್ನ ಗ್ರಾಮ ಸಂಕಷ್ಟದಲ್ಲಿದೆ, ಅನೇಕರು ಇದು ಮುಗಿದ ಯುದ್ಧ ಎಂದು ತಿಳಿದಿದ್ದಾರೆ, ಇಡೀ ಗ್ರಾಮಕ್ಕೆ ಹೆಚ್ಚುವರಿ ಪರಿಹಾರ, ಬದಲಿ ಭೂಮಿ ನೀಡುವುದು ಮತ್ತು ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಬೇಡಿಕೆಗಳಿಂದ ಹಿಂದೆ ಸರಿದಿದ್ದಾರೆ.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷವು ಮಹಾರಾಷ್ಟ್ರ, ಗುಜರಾತ್ ಮತ್ತು ದಾದ್ರಾ ಮತ್ತು ನಗರ ಹವೇಲಿ ಮೂಲಕ ಹಾದು ಹೋಗುವ 379 ಕಿಮೀ ಉದ್ದದ ಎಂಟು ಪಥಗಳ ಹೆದ್ದಾರಿಗಾಗಿ ಭೂಮಿ ಸ್ವಾಧೀನಕ್ಕೆ ಸೂಚಿಸಿದೆ. ಪಾಲ್ಘರ್ ಜಿಲ್ಲೆಯ ಮೂರು ತಾಲೂಕುಗಳ 21 ಗ್ರಾಮಗಳು ಸೇರಿ ಮಹಾರಾಷ್ಟ್ರದ ಒಂದು ಭಾಗವೇ ಪ್ರತ್ಯೇಕವಾದಂತಾಗುತ್ತದೆ. ಅದರಲ್ಲಿ ವಾಡಾ ಒಂದು ತಾಲೂಕು ಮತ್ತು ನಿಂಬಾವಳಿ ಅದರಲ್ಲಿ ಒಂದು ಚಿಕ್ಕ ಗ್ರಾಮವಾಗಿದ್ದು ಅದರಲ್ಲಿ 140ಕ್ಕೂ ಹೆಚ್ಚು ಮನೆಗಳಿವೆ.
ನಿಂಬಾವಳಿಯಲ್ಲಿ 5.4 ಕಿಮೀ ಹೆದ್ದಾರಿ ಹಾದುಹೋಗುತ್ತದೆ. 71,035 ಚದರ ಮೀಟರ್‌ನಷ್ಟು ಭೂಮಿಯನ್ನು ನಿಂಬಾವಳಿಯಲ್ಲಿ ಗುರುತಿಸಲಾಗಿದೆ, ಮತ್ತು ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸುವ ಮೊದಲೇ ಭೂ ಸ್ವಾಧೀನದ ಕಾರ್ಯವನ್ನು ಆರಂಭಿಸಲಾಗಿತ್ತು.
ಗ್ರಾಮಸ್ಥರಿಗೆ ಯೋಜನೆಯ ಸತ್ಯಾಂಶದ ಕುರಿತು ಅರಿವಾದಾಗ, ಜನರ ಮನೆಗಳಿಗೆ ಸೂಕ್ತವಾದ ಹಣಕಾಸಿನ ಪರಿಹಾರ ನೀಡಲಾಗುತ್ತದೆ ಎಂದು ಹಿರಿಯರು ಭರವಸೆ ನೀಡಿದರು. ಹಣವು ಹೊಸ ಭೂಮಿ ಮತ್ತು ಮನೆ ಕಟ್ಟಲು. ಆದರೆ ನಮ್ಮ ಗ್ರಾಮದ ಜನ ಇದನ್ನು ನಿರಾಕರಿಸಿದರು, ಮತ್ತು ಸ್ಥಳಾಂತರಕ್ಕೆ ಸೂಕ್ತ ಭೂಮಿ ಕೊಡುವವರೆಗೂ ನಾವ್ಯಾರೂ ನಮ್ಮ ಭೂಮಿ ಅಥವಾ ಮನೆಯನ್ನು ಬಿಟ್ಟು ಹೊರಡುವುದಿಲ್ಲ ಎಂದು ತೀರ್ಮಾನಿದರು.
“ಸರಾಸರಿಯಾಗಿ ಒಂಬತ್ತು ಲಕ್ಷ ಪರಿಹಾರ ನೀಡಲಾಗುವುದು ಎಂಬ ನೋಟೀಸನ್ನು ನಾವು ಸ್ವೀಕರಿಸಿದೆವು,” ಎನ್ನುತ್ತಾರೆ 45 ವರ್ಷದ ಚಂದ್ರಕಾಂತ್ ಪರೇರ್. “ಯಾವುದಕ್ಕಾಗಿ? ಈ ಎಲ್ಲ ಗಿಡಗಳನ್ನು ನೋಡಿ, ನುಗ್ಗೆ, ಸೀತಾಫಲ, ಚಿಕ್ಕು ಮತ್ತು ಕರಿಬೇವು. ಈ ಭೂಮಿಯಲ್ಲಿ ನಾವು ಗಡ್ಡೆ ಹಾಗೂ ಬೇರಿನ ತರಕಾಗಿಳನ್ನು ಬೆಳೆಸುತ್ತೇವೆ. ಈ ಎಲ್ಲದಕ್ಕೆ ಅವರು ಎಷ್ಟು ಹಣವನ್ನು ನೀಡಬಹುದು? ಏನೂ ಇಲ್ಲ. ಒಂಬತ್ತು ಲಕ್ಷ ರೂಪಾಯಿಗೆ ನೀವು ಭೂಮಿಯನ್ನು ಖರೀದಿಸಿ, ಮನೆಯನ್ನು ಕಟ್ಟಿ, ಈ ಗಿಡಗಳನ್ನು ಬೆಳೆಸಬಹುದೇ? ಎಂದು ಅವರು ಪ್ರಶ್ನಿಸಿದರು.
ಅಲ್ಲಿ ಮತ್ತೊಂದು ವಿಷಯವಿದೆ: ಹೆದ್ದಾರಿಯು ಹಳ್ಳಿಯ ಮೂಲಕ ಹಾದು ಹೋಗುವುದರಿಂದ ಅದು ಗ್ರಾಮವನ್ನು ಇಬ್ಬಾಗವನ್ನಾಗಿ ಮಾಡಿದೆ. “ನಾವು ಬಹಳ ವರ್ಷಗಳಿಂದ ಒಂದಾಗಿ ಬದುಕುತ್ತಿದ್ದ ನಿಂಬಾವಳಿಯ ಗ್ರಾಮಸ್ಥರು ಒಟ್ಟಿಗೆ ಇರಲು ಬಯಸುತ್ತೇವೆ. ಈಗಿರುವ ಹಳ್ಳಿ ಭೂಮಿಯನ್ನೇ ನಾವು ಪರಿಹಾರವಾಗಿ ಬಯಸುತ್ತೇವೆ ಆದರೆ ಸರಕಾರ ಪರಿಹಾರ ಪ್ಯಾಕೇಜ್‌ನಲ್ಲಿ ಎಲ್ಲ ಮನೆಗಳನ್ನು ಒಟ್ಟಿಗೆ ಸೇರಿಸುವಂತೆ ಸರಕಾರವನ್ನು ಆಗ್ರಹಿಸುತ್ತಿದ್ದೇವೆ. ಇಲ್ಲಿರುವ ಎಲ್ಲ ಜನರಿಗೂ ನ್ಯಾಯಯುತಾದ ಪರಿಹಾರ ಸಿಗಬೇಕೆಂಬುದು ನಮ್ಮ ಬೇಡಿಕೆ. ನೀವು ಈ ರಸ್ತೆಯನ್ನು ಅಭಿವೃದ್ಧಿಯ ಸಂಕೇತವಾಗಿ ನಿರ್ಮಿಸುತ್ತಿರುವುದೇ? ದಯವಿಟ್ಟು ಮಾಡಿ. ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮನ್ನೇಕೆ ನಾಶ ಮಾಡುತ್ತೀರಿ?” ಎಂದು ವಿನೋದ್ ಕಾಕಡ್ ಕೇಳಿದ್ದಾರೆ.
ಈ ಯೋಜನೆಯು ನಮ್ಮ ಬದುಕಿನಲ್ಲಿ ಅಭದ್ರತೆಯನ್ನು ಹುಟ್ಟುಹಾಕಿದೆ. ಇಲ್ಲಿರುವ 49 ಮನೆಗಳಲ್ಲಿ ವಾಸಿಸುವ 200-220 ನಿವಾಸಿಗಳಿಗೆ ರಸ್ತೆಯ ಜೋಡಣೆಯು ನೇರವಾದ ಪರಿಣಾಮ ಬೀರಿದ್ದು, ನಾಲ್ಕು ಮನೆಗಳು ಇದರಿಂದ ಬಚಾವಾಗಿವೆ ಏಕೆಂದರೆ ರಸ್ತೆ ಜೋಡಣೆಯು ಅವರನ್ನು ಸ್ಪರ್ಷಿಸುವುದಿಲ್ಲ. ಪರಿಣಾಮ ಬೀರಿರುವ ನಾಲ್ಕರಲ್ಲಿ ಮೂರು ಮನೆಗಳು ಕಾಡಿನ ಭೂಮಿಗೆ ಸೇರಿವೆ, ಸರಕಾರ ಅವರಿಗೆ ಪರಿಹಾರ ನೀಡಲು ಪರಿಗಣಿಸುವಲ್ಲಿಯೂ ಹಿಂದೇಟು ಹಾಕಿದೆ.
ವರ್ಲಿ ಬುಡಕಟ್ಟಿಗೆ ಸೇರಿದ ನಾವು ಶತಮಾನಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ನಾವು ಇಲ್ಲಿ ಬರೇ ಮನೆಗಳನ್ನು ಕಟ್ಟಿಲ್ಲ, ಈ ಭೂಮಿಯೊಂದಿಗೆ ಶತಮಾನಗಳಿಂದ ಪ್ರೀತಿಯ ಸಂಬಂಧವನ್ನು ಹೊಂದಿದ್ದೇವೆ. ಇಲ್ಲಿರುವ ಹುಣಸೆ, ಮಾವು ಮತ್ತು ಇತರ ಮರಗಳ ನೆರಳು ಬೇಸಿಗೆಯಲ್ಲಿ ನಮಗೆ ನೆರಳು ನೀಡಿವೆ, ಸಪರ್ಯಾ ಪರ್ವತ ನಮಗೆ ಕಟ್ಟಿಗೆ ನೀಡಿದೆ. ಇವೆಲ್ಲವನ್ನೂ ಬಿಟ್ಟು ಬೇರಡೆಗೆ ಹೋಗಿ ಬದುಕಲು ನಮಗೆ ನೋವಾಗುತ್ತಿದೆ. ನಮ್ಮ ಸಮುದಾಯ, ನಮ್ಮದೇ ಜನರನ್ನು ತೊರೆದು ಹೋಗುವುದು ಕೂಡ ನೋವಿನ ಸಂಗತಿ.
“ಭೂಮಿಯನ್ನು ಮಾಪನ ಮಾಡಲು ಬಂದ ಅಧಿಕಾರಿಗಳು ನಮ್ಮಲ್ಲಿರುವ ಒಗ್ಗಟ್ಟನ್ನು ನೋಡಿ ಅಚ್ಚರಿಪಟ್ಟರು. ಯಾರೆಲ್ಲ ತಮ್ಮ ಮನೆಯನ್ನು ಕಳೆದುಕೊಳ್ಳುತ್ತಾರೋ ಅವರೆಲ್ಲರಿಗೂ ನೋವಾಗುವುದು ಸಹಜ, ಆದರೆ ಇಲ್ಲಿ ಯಾರು ಸ್ಥಳಾಂತರ ಮಾಡುವುದಿಲ್ಲವೋ ಅವರು ಕೂಡ ಅಳುತ್ತಿದ್ದಾರೆ,” ಎಂದು 45 ವರ್ಷದ ಸವಿತಾ ಲಿಪತ್ ಹೇಳುತ್ತಾರೆ. “ನಮ್ಮ ಮನೆಯ ಎದುರಿಗಿರುವ ಮತ್ತು ನಮ್ಮ ಮನೆಯ ಹಿಂದಿರುವ ಮನೆಗಳು ರಸ್ತೆಗಾಗಿ ಸ್ವಾಧೀನ ಮಾಡಲಾಗಿದೆ, ನನ್ನ ಮನೆ ಇದರ ಮಧ್ಯದಲ್ಲಿದೆ. ರಸ್ತೆಯು ನಮಗೆ ದೊಡ್ಡ ಸಮಸ್ಯೆಯಾಗಲಿದೆ. ಎಂದು ಅವರಿಗೆ ಮನವರಿಕೆ ಮಾಡಲು ಯತ್ನಿಸಿದೆ,”
ಹಲವಾರು ದಶಕಗಳಿಂದ ಒಟ್ಟಿಗೆ ಬದುಕುತ್ತಿದ್ದ ಜನರನ್ನು ರಸ್ತೆಯು ಪ್ರತ್ಯೇಕಗೊಳಿಸುತ್ತಿದೆ ಎಂದಾದರೆ ಅದಕ್ಕಿಂತಲೂ ಸಂಕಷ್ಟ ಬೇರೆ ಇದೆ, ಹೆದ್ದಾರಿಯ ಎರಡೂ ಬದಿಗಳಲ್ಲಿರುವ ಮನೆಗಳನ್ನು ನಕ್ಷೆಯಲ್ಲಿ ತೋರಿಸಲಿಲ್ಲ ಅಥವಾ ಅಧಿಕೃತ ದಾಖಲೆಯಲ್ಲಿಯೂ ಕಾಣಿಸಲಿಲ್ಲ, ಅವರು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದ್ದಾರೆ. ಕೆಲವು 3-4 ಮನೆಗಳನ್ನು ಅರಣ್ಯ ಭೂಮಿಯಲ್ಲಿ ಕಟ್ಟಲಾಗಿದೆ ಎಂದು ತೋರಿಸಿದ್ದಾರೆ. ಎಲ್ಲ ಕುಟುಂಬಗಳನ್ನು ಒಟ್ಟಿಗೆ ಸ್ಥಳಾಂತರ ಮಾಡಿ, ಪುನರ್ವಸತಿ ನೀಡಿ ಎಂದು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ವರ್ಲಿ ಸಮುದಾಯದ ಅಗತ್ಯ ಏನೆಂಬುದನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
“ನಾನು ಇಲ್ಲಿ ಬಹಳ ವರ್ಷಗಳಿಂದ ವಾಸಿಸುತ್ತಿದ್ದೇನೆ. ನೋಡು ಇದು ಮನೆ ತೆರಿಗೆ ಕಟ್ಟಿರುವುದಕ್ಕೆ ಹಳೆ ರಶೀದಿ. ಈಗ ಸರಕಾರ ಹೇಳುತ್ತಿದೆ ನಾನು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವೆನೆಂದು, ಅದಕ್ಕಾಗಿ ನಾನು ಪರಿಹಾರಕ್ಕೆ ಅರ್ಹನಲ್ಲ ಎಂದು. ಈಗ ನಾನು ಎಲ್ಲಿಗೆ ಹೋಗಲಿ,?” ಎಂದು ಹಳೆಯ ದಾಖಲೆಗಳನ್ನು ನನಗೆ ತೋರಿಸುತ್ತ 80 ವರ್ಷದ ದಾಮು ಪರೇದ್ ಹೇಳಿದರು. ಅವರು ನನ್ನ ಅಜ್ಜನ ಸಹೋದರ. “ಇವೆಲ್ಲವನ್ನೂ ಗ್ರಹಿಸಿಕೊಳ್ಳಲು ನನ್ನಿಂದ ಆಗುತ್ತಿಲ್ಲ. ನೀವು ಕಲಿತವರು ಮತ್ತು ಯುವಕರು. ಈಗ ನೀವು ಇದನ್ನು ಕೈಗೆತ್ತಿಕೊಳ್ಳಿ,” ಎಂದ ಅವರು ಅಲ್ಲೇ ಕುಳಿತು ಮೌನವಾದರು.
45ವರ್ಷದ ದರ್ಶನ್ ಪರೇದ್ ಮತ್ತು 70 ವರ್ಷದ ಗೋವಿಂದ ಕಾಕಡ್ ಇವರುಗಳ ಮನೆ ಅರಣ್ಯ ಭೂಮಿಯಲ್ಲಿದೆ ಎಂದು ತೋರಿಸಲಾಗುತ್ತಿದೆ.ಇಬ್ಬರೂ ಇಂದಿರಾ ಆವಾಸ್ ಯೋಜನೆಯಡಿಯಲ್ಲಿ ಮನೆ ಕಟ್ಟಿರುತ್ತಾರೆ, ಇಬ್ಬರೂ ಪ್ರತಿ ವರ್ಷ ಆಸ್ತಿ ತೆರಿಗೆ ನೀಡುತ್ತಿದ್ದಾರೆ, ಸರಕಾರ ಕೊಡಮಾಡಿರುವ ಮೀಟರ್ ಅಳವಡಿಸಲ್ಪಟ್ಟ ವಿದ್ಯುತ್ ಸೌಲಭ್ಯ ಎರಡೂ ಮನೆಗಿದೆ. ಆದರೆ ಹೆದ್ದಾರಿ ನಕಾಶೆ ಮಾಡುವಾಗ ಅವರ ಮನೆಯನ್ನು ಅರಣ್ಯ ಒತ್ತುವರಿ ಜಾಗ ಎಂದು ನಮೂದಿಸಲಾಗಿದೆ. ಇದರರ್ಥ ಅವರಿಗೆ ಸರಕಾರ ನೀಡುವ ಪರಿಹಾರ ಸಿಗುವುದಿಲ್ಲ.
ಇದು ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿದ್ದ ಸಂಕೀರ್ಣ ಹೋರಾಟವಾಗಿತ್ತು, ಆರಂಭದಲ್ಲಿ ಜನರನ್ನು ಒಟ್ಟಾಗಿಸಿತ್ತು, ಆದರೆ ನಂತರ ಅವರ ಬೇಡಿಕೆಗಳಲ್ಲಿ ಭಿನ್ನತೆಯನ್ನು ಕಂಡುಕೊಂಡರು. ಆರಂಭದಲ್ಲಿ ಯೋಜನೆಗೆ ವಿರುದ್ಧವಾಗಿ ಹುಟ್ಟಿಕೊಂಡಿತು, ನಂತರ ಜನರು ಒಂದಾಗಿ ಹೆಚ್ಚು ಪರಿಹಾರಕ್ಕೆ ಬೇಡಿಕೆಯೊಡ್ಡಿದರು, ಕೊನೆಯಲ್ಲಿ ನಿಂಬಾವಳಿಯ ಎಲ್ಲ ಕುಟುಂಬದವರಿಗೂ ಸೂಕ್ತವಾದ ಪುನರ್‌ವಸತಿ ಕಲ್ಪಿಸುವ ಹೋರಾಟವಾಯಿತು.
“ವಿಭಿನ್ನ ರಾಜಕೀಯ ಬಣಗಳು, ಸಂಘಟನೆಗಳು ಮತ್ತು ಸಂಸ್ಥೆಗಳು ಎಲ್ಲ ಒಂದಾಗಿ ಒಂದು ಸ್ವತಂತ್ರ ಸಂಘಟನೆಯಾಗಿ ರೂಪುಗೊಂಡು, ಶೇತ್ಕಾರಿ ಕಲ್ಯಾಣಕರಿ ಸಂಘಟನೆ ನಿರ್ಮಾಣವಾಯಿತು. ಈ ಮೂಲಕ ಜನರನ್ನು ಒಗ್ಗೂಡಿಸಲಾಯಿತು, ರ್ಯಾಲಿಗಳನ್ನು ನಡೆಸಲಾಯಿತು, ಪ್ರತಿಭಟನೆ ಮಾಡಿ ಹೆಚ್ಚು ಪರಿಹಾರ ನೀಡುವಂತೆ ಸರಕಾರದೊಡನೆ ಮಾತುಕತೆ ನಡೆಸಲಾಯಿತು. ಆದರೆ ಇದು ಮುಗಿಸ ನಂತರ ಕೃಷಿಕರು ಮತ್ತು ಸಂಘಟನೆಯ ನಾಯಕರು ನಮ್ಮನ್ನು ತೊರೆದುಹೋದರು. ಸೂಕ್ತ ಪುನರ್ವಸತಿ ಎಂಬುದು ಈಗ ನೆನೆಗುದಿಗೆ ಬಿದ್ದಿದೆ,” ಎಂದರು ಬಾಬಾ.
ಶೇತ್‌ಕರಿ ಕಲ್ಯಾಣಕರಿ ಸಂಘಟನೆಯ ಮಾಜಿ ಅಧ್ಯಕ್ಷ ಕೃಷ್ಣ ಭೋಯಿರ್ ಇದನ್ನು ಅಲ್ಲಗಳೆದಿದ್ದಾರೆ, “ ನ್ಯಾಯಯುತವಾದ ಪರಿಹಾರಕ್ಕಾಗಿ ಹೋರಾಟ ನಡೆಸಲು ನಾವು ಜನರನ್ನು ಸಂಘಟಿಸಿದೆವು. ಹೆದ್ದಾರಿ ನಿರ್ಮಾಣವಾದ ನಂತರ ಜನರ ನಿತ್ಯ ಬದುಕಿನ ಮೇಲೆ ಯಾವ ರೀತಿಯ ಪರಿಣಾಮಗಳು ಬೀರಬಹುದು ಎಂಬುದರ ಬಗ್ಗೆ ಪ್ರಶ್ನೆ ಎತ್ತಿದೆವು, ಉದಾಹರಣೆಗೆ ಜನರು ಹೆದ್ದಾರಿಯನ್ನು ದಾಟುವುದು ಹೇಗೆ?, ವಿದ್ಯಾರ್ಥಿಗಳು ಹೆದ್ದಾರಿಯನ್ನು ದಾಟಿ ಶಾಲಾ. ಕಾಲೇಜುಗಳಿಗೆ ಹೋಗುವುದು ಹೇಗೆ?, ತೊರೆಯ ನೀರು ಗ್ರಾಮ ಮತ್ತು ಗದ್ದೆಗಳನ್ನು ಪ್ರವೇಶಿಸಿದರೆ ಅವರು ಏನು ಮಾಡಬೇಕು? ನಾವು ತೀವ್ರ ರೀತಿಯಲ್ಲಿ ಹೋರಾಟ ನೀಡಿದ್ದೆವು, ಆದರೆ ಕೆಲವು ಜನರು ಪರಿಹಾರ ಸಿಕ್ಕ ಕೂಡಲೇ ಎಲ್ಲವನ್ನೂ ಮರೆತರು,” ಎಂದು ಅವರು ವಿವರಿಸಿದರು.
ಇವೆಲ್ಲದರ ನಡುವೆ, ಆದಿವಾಸಿಯಲ್ಲದ ಕುಣಬಿ ಕೃಷಿಕ ಅರುಣ್ ಪಾಟೀಲ್, ಆತನ ಗದ್ದೆಗೆ ತಾಗಿಕೊಂಡಿರುವ ಭೂಮಿಯಲ್ಲಿ ವಾರ್ಲಿ ಜನರು ವಾಸಿಸುತ್ತಿದ್ದು, ಆ ಭೂಮಿ ತನಗೆ ಸೇರಿದ್ದು ಎಂದು ಧ್ವನಿ ಎತ್ತಿದ್ದಾರೆ. ಆದ್ದರಿಂದ ಆತನಿಗೂ ಪರಿಹಾರ ನೀಡಬೇಕು. ಆದರೆ ಅದು ಸರಿಯಾದುದಲ್ಲ. “ನಾವು ನಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ, ಹಲವಾರು ಬಾರಿ ಕಂದಾಯ ಇಲಾಖೆಗೆ ಭೇಟಿ ನೀಡಿದೆವು, ಅಂತಿಮವಾಗಿ ನಮ್ಮೆಲ್ಲ ಮನೆಗಳು ಗ್ರಾಮೀಣ ಪ್ರದೇಶದಲ್ಲಿದೆ ಎಂಬುದು ಖಚಿತವಾಯಿತು,” ಎನ್ನುತ್ತಾರೆ 64 ವರ್ಷದ ದಿಲೀಪ್ ಲೋಖಂಡೆ.
ನಿಂಬಾವಳಿಯಲ್ಲಿರುವ ಆದಿವಾಸಿಗಳ ಸಣ್ಣ ಹಳ್ಳಿಯಾದ ಗಾರೆಲ್‌ಪಾಡಾದಲ್ಲಿ ಲೋಖಂಡೆ ಅವರ ಮನೆ ಇದೆ. ಇದು ಐದು ಎಕರೆ ಗಾಂವ್‌ಥಾಣ್ (ಸರಕಾರ ನೀಡಿದ ಹಳ್ಳಿ ಭೂಮಿ)ನಲ್ಲಿ ವಿಸ್ತರಿಸಿದೆ. ವಾರ್ಲಿ ಸಮುದಾಯದವರು ಭೂಮಿಯನ್ನು ಗಡಿಗುರುತು ಮಾಡುವಂತೆ ಭೂ ದಾಖಲೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಬಂದರು, ಆದರೆ ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಇಲ್ಲವೆಂಬ ನೆಪವೊಡ್ಡಿ ಆ ಕೆಲಸವನ್ನು ಮಾಡಲೇ ಇಲ್ಲ.
ಪರಿಹಾರ ಪಡೆಯಲು ಅರ್ಹರೆನಿಸಿದವರೂ ತಮ್ಮ ಭವಿಷ್ಯದ ಬಗ್ಗೆ ಚಿಂತಿಸತೊಡಗಿದರು. ಘೋಷಿಸಿರುವ ಈ ಅಲ್ಪ ಪರಿಹಾರವನ್ನು ತೆಗೆದುಕೊಂಡು ಮತ್ತೊಂದು ಮನೆಯನ್ನು ಕಟ್ಟುವುದು ಕಷ್ಟ ಎನ್ನುತ್ತಾರೆ ಕುಟುಂಬದ ಹಿರಿಯರು. “ನಮಗೆ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಲು ಬಿಡುತ್ತಿಲ್ಲ. ಆದಿವಾಸಿಗಳಾದ ನಾವು ನಿಮ್ಮ ಅಭಿವೃದ್ಧಿ ಕಾರ್ಯಗಳಿಗೆ ದಾರಿ ಮಾಡಿಕೊಡಬೇಕೆ?” ಎನ್ನುತ್ತಾರೆ 52 ವರ್ಷದ ಬಾಬನ್ ತಂಬಾಡಿ.
ಪ್ರತಿ ಬಾರಿಯೂ ಅವರು ಉಪ-ವಿಭಾಗಾಧಿಕಾರಿಯನ್ನು ಭೇಟಿ ಮಾಡಿದಾಗ, ನಿಂಬಾವಳಿ ಗ್ರಾಮದ ಜನರಿಗೆ ಆಶ್ವಾಸನೆ ಮತ್ತು ಭರವಸೆಗಳು ಸಿಗುತ್ತವೆ. “ನಾವು ಅದು ನಿಜ ಆಗುವುದಕ್ಕೆ ಕಾಯುತ್ತಿದ್ದೇವೆ. ಅಲ್ಲಿಯವರೆಗೂ ಭೂಮಿಗಾಗಿ ಹೋರಾಟ ಮುಂದುವರಿಯುತ್ತದೆ,” ಎನ್ನುತ್ತಾರೆ ಬಾಬಾ.
ನಿಂಬಾವಳಿಯ ವರ್ಲಿ ಜನರಿಗೆ ಹೆದ್ದಾರಿಯಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ. ಆದರೆ ಸಂಪೂರ್ಣ ಪುನರ್ವಸತಿ ಯೋಜನೆ ಇಲ್ಲದೆ ಅವರನ್ನು ಗಾಂವ್‌ಥಾಣ್‌ನಿಂದ ಪ್ರತ್ಯೇಕಗೊಳಿಸಲಾಗುತ್ತಿದೆ. ನನ್ನ ಗ್ರಾಮಸ್ಥರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿರುವುದನ್ನು ಕಂಡಿದ್ದೇವೆ, ಸೋಲುವ ಯುದ್ಧವೆಂದು ಅವರ ಗಮನಕ್ಕೆ ಬಂದರೂ ಹೋರಾಟವನ್ನು ಮಾತ್ರ ನಿಲ್ಲಿಸದೆ ಮುಂದುವರಿಯಲಿದ್ದಾರೆ.
ಸ್ವತಂತ್ರ ಪತ್ರಕರ್ತರು ಮತ್ತು ಅಂಕಣಕಾರರು ಹಾಗೂ ಮಾಧ್ಯಮ ಶಿಕ್ಷಣತಜ್ಞರಾಗಿರುವ ಸ್ಮೃತಿ ಕೊಪ್ಪಿಕರ್ ಅವರು ಈ ವರದಿಯನ್ನು ಸಂಪಾದಿಸಿದ್ದಾರೆ.
ಅನುವಾದ: ಸೋಮಶೇಖರ ಪಡುಕರೆ