ರಾಚೇನಹಳ್ಳಿಯ ಕೊಳಗೇರಿಯ ಕಾಲೋನಿಯಲ್ಲಿ ವಾಸಿಸುತ್ತಿರುವ ಮಕ್ತುಂಬೆ ಎಂ.ಡಿ ಅವರು ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ ತಮ್ಮ ಕುಟುಂಬವನ್ನು ಹೇಗೆ ಪೋಷಿಸುವುದೆನ್ನುವ ಚಿಂತೆಯಲ್ಲಿದ್ದರು."ನಮ್ಮ ಯಜಮಾನ್ರಿಗೆ ವಾರಕೊಮ್ಮೆ ಪಗಾರ ಸಿಗ್ತಿತ್ತು, ಆಗ ನಾವೆಲ್ಲಾ ರೇಷನ್ ಸಾಮಾನಗಳನ್ನೆಲ್ಲಾ ಖರೀದಿ ಮಾಡಾಕ ಹೋಗತಿದ್ವಿ. ಆದರೆ ಈಗ ಎರಡು ವಾರಗಳಾಗಲಿಕ್ಕೆ ಬಂತು, ಯಾರಿಗೂ ಪಗಾರ ಸಿಕ್ಕಿಲ್ಲ, ಹಂಗಾಗಿ ಈ ಸಾರಿ ನಾವು ರೇಷನ್ ತಂದಿಲ್ಲ." ಎಂದು 37 ವರ್ಷದ ಗೃಹಿಣಿ ಮಕ್ತುಂಬೆ ಹೇಳುತ್ತಿದ್ದರು, ಬೆಂಗಳೂರು ನಗರ ಲಾಕ್ ಡೌನ್ ಆದ 10 ದಿನಗಳ ನಂತರ ನಾವು ಅವರನ್ನು ಭೇಟಿಯಾದಾಗ, ವೃತ್ತಿಪರ ಪೇಂಟರ್ ಆಗಿರುವ ಅವರ ಪತಿ ಸಾಮಾನ್ಯವಾಗಿ ವಾರಕ್ಕೆ ಈ ಕೆಲಸದಿಂದ 3,500 ರೂ. ದುಡಿಯುತ್ತಿದ್ದರು, ಆದರೆ, ಮಾರ್ಚ್ 25 ರಂದು ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಅವರಿಗೆ ಕೆಲಸ ಸಿಕ್ಕಿಲ್ಲ ಎನ್ನುವ ವಿಷಯ ತಿಳಿಯಿತು.

ಮೂವರು ಮಕ್ಕಳಿರುವ ದಂಪತಿ 10 ವರ್ಷಗಳ ಹಿಂದೆ ಕೆಲಸವನ್ನು ಅರಸಿ ವಿಜಯಪುರ ಜಿಲ್ಲೆಯ ತಾಳಿಕೋಟೆಯಿಂದ ಬೆಂಗಳೂರಿಗೆ ವಲಸೆ ಬಂದಿದ್ದರು. ಮಕ್ತುಂಬೆ ಪತಿ ಮೌಲಾಸಾಬ್ ದೊಡಮನಿ ಅವರು ಪ್ರತಿ ಭಾನುವಾರ ಪಡೆಯುವ ವೇತನದ ಮೇಲೆ ಅವರ ಕುಟುಂಬ ಅವಲಂಬಿತವಾಗಿದೆ. “ನಾವು ವಾರಕ್ಕೊಮ್ಮೆ ರೇಷನ್ ಸಾಮಾನು ಖರೀದಿ ಮಾಡ್ತಿವಿ- ಐದು ಕಿಲೋ ಅಕ್ಕಿ, ಒಂದು ಕಿಲೋ ಎಣ್ಣೆ, ಬೇಳೆ, ಹಿಂಗ್ ನಮ್ಮ ಜೀವನ ಸಾಗಿಸ್ತಾ ಇದ್ದೀವಿ, ಆದ್ರ ಈಗ ಎಲ್ಲಾ ಬಂದ್ ಆಗಿ, ಎಲ್ಲೂ ಹೋಗಲ್ಲಂಗ ಆಗಿದೆ, ಆದ್ರೆ ನಮಗ ನೋಡಿದ್ರ ಹೊಟ್ಟೆಯ ಉಪ ಜೀವನಕ್ಕಾದ್ರೂ ಹೊರಗ ಹೋಗಬೇಕು ಅಂತಾ ಅನ್ಸುತ್ತ " ಎಂದು ಅವರು ಹೇಳುತ್ತಿದ್ದರು.

ಏಪ್ರಿಲ್ 4ರಂದು ನಾವು ಭೇಟಿಯಾದಾಗ, ಉತ್ತರ ಬೆಂಗಳೂರಿನ ವಲಸೆ ದಿನಗೂಲಿ ಕಾರ್ಮಿಕರ ಕಾಲೋನಿಯ ನಿವಾಸಿಗಳು ತಾವು ಎದುರಿಸುತ್ತಿರುವ ಹಲವಾರು ಕಷ್ಟಗಳನ್ನು ನಮ್ಮ ಮುಂದೆ ಹೇಳಿಕೊಳ್ಳುತ್ತಿದ್ದರು. ಕೇಂದ್ರ ಹಣಕಾಸು ಸಚಿವರ ಪರಿಹಾರ ಪ್ಯಾಕೇಜ್‌ನ ಅಡಿಯಲ್ಲಿ ನೀಡಿರುವ ಭರವಸೆಗೆ ಅನುಗುಣವಾಗಿ ಸರ್ಕಾರದ-ಸಬ್ಸಿಡಿ ಆಹಾರ ಧಾನ್ಯಗಳನ್ನು ಸ್ವೀಕರಿಸಲು ಅವರಲ್ಲಿ ಯಾರೂ ಅರ್ಹರಲ್ಲ. ಬಹುತೇಕ ವಲಸೆ ಕಾರ್ಮಿಕರಿಗೆ ರೇಷನ್ ಕಾರ್ಡುಗಳಿಲ್ಲ. ಕೆಲವರಿಗೆ ಇದ್ದರೂ ಕೂಡ ಅದು ಅವರ ಮನೆಯ ವಿಳಾಸದಿಂದ ನೋಂದಾಯಿಸಲ್ಪಟ್ಟಿರುತ್ತದೆ ಎಂದು ಉತ್ತರ ಕರ್ನಾಟಕದ ರಾಯಚೂರು ಮೂಲದ ಮಾಣಿಕ್ಯಮ್ಮ(30) ವಿವರಿಸುತ್ತಿದ್ದರು. “ಆ ಕಾರ್ಡ್ ಇಲ್ಲಿ ಬೆಂಗಳೂರಿನ್ಯಾಗ ನಡೆಯಲ್ಲರ್ರಿ” ಎಂದು ಅವರು ಹೇಳುತ್ತಿದ್ದರು.

“ಈಗ ಕೆಲ್ಸಾ ಇಲ್ಲದೇ ಇರೋದು ನಮಗ ಬಾಳ್ ತ್ರಾಸ್ ಆಗೈತಿ, ನಮಗ ಮಕ್ಕಳ ಬೇರೆ ಅದಾವ್ರಿ, ಮತ್ತ ಬಾಡಿಗೆ ಬೇರೆ ತುಂಬಬೇಕು.ಇದನ್ನೆಲ್ಲಾ ಹೆಂಗ್ ಮಾಡಬೇಕು ಹೇಳಿ"? ಎಂದು ಅವರು ಕೇಳುತ್ತಿದ್ದರು. ಮಾಣಿಕ್ಯಮ್ಮ ಮತ್ತು ಅವರ ಪತಿ ಹೇಮಂತ್ ಲಾಕ್‌ಡೌನ್‌ಗೆ ಮೊದಲು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು; ಏಳು ವರ್ಷಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದಿದ್ದ ಅವರಿಗೆ ಈಗ ನಾಲ್ವರು ಮಕ್ಕಳಿದ್ದಾರೆ.

ರಾಯಚೂರಿನವರಾದ 27ರ ಹರೆಯದ ಲಕ್ಷ್ಮಿ ಎನ್. ಅವರು ಮಾಣಿಕ್ಯಮ್ಮ ಬಂದಿದ್ದ ಸಮಯದಲ್ಲೇ ಬೆಂಗಳೂರಿಗೆ ವಲಸೆ ಬಂದಿದ್ದರು. ಲಾಕ್‌ಡೌನ್ ಪ್ರಾರಂಭವಾಗುವವರೆಗೂ ಅವರು ಬೆಂಗಳೂರಿನ ಉತ್ತರ ಭಾಗದಲ್ಲಿ ಕಟ್ಟಡ ನಿರ್ಮಾಣದಂತಹ ಕೆಲಸಗಳನ್ನು ಮಾಡುತ್ತಿದ್ದರು. “ನಾವು ಸಿಮೆಂಟ್ ತಯಾರು ಮಾಡೋದು ಮತ್ತು ಕಲ್ಲ ಒಡೆಯೋ ಕೆಲಸಗಳನ್ನೆಲ್ಲಾ ಮಾಡ್ತೀವಿ. ಈ ಕೆಲ್ಸಕ್ಕೆ ನಮಗ ದಿನಕ್ಕ 300 ರೂಪಾಯಿ ಪಗಾರ ಸಿಗುತ್ತರ್ರಿ" ಎಂದು ಅವರು ನನಗೆ ಹೇಳಿದರು. ರಾಚೇನಹಳ್ಳಿಯಲ್ಲಿ ಅವರೊಬ್ಬರೇ ವಾಸಿಸುವ ತಾತ್ಕಾಲಿಕ ಶೆಡ್ ಗೆ ಅವರು ತಿಂಗಳಿಗೆ 500 ರೂ. ಬಾಡಿಗೆ ಪಾವತಿಸುತ್ತಾರೆ.

ವಲಸೆ ಕಾರ್ಮಿಕರು ತಮ್ಮ ಹಲವಾರು ಕಷ್ಟಗಳನ್ನು ತೋಡಿಕೊಂಡರು.ಅವರಲ್ಲಿ ಯಾರೂ ಸರ್ಕಾರದಿಂದ ಸಹಾಯಧನದ ಆಹಾರಧಾನ್ಯಗಳನ್ನು ಪಡೆಯಲು ಅರ್ಹರಾಗಿಲ್ಲ. ಮತ್ತು ಅನೇಕರಿಗೆ ಪಡಿತರ ಚೀಟಿಗಳೂ ಇಲ್ಲ

ವಿಡಿಯೋ ನೋಡಿ: ‘ಈಗ ನಮ್ಮ ರಟ್ಟಿ ಕಾಲೆಲ್ಲಾ ಮುರಿದಾಂಗ ಆಗ್ಯಾವು ಅಂತ ಅನ್ಸಾ ಕುಂತೈತಿ’

ಬಾಡಿಗೆಯ ಜೊತೆಗೆ, ಲಾಕ್‌ಡೌನ್ ಸಮಯದಲ್ಲಿ ಹೆಚ್ಚಳವಾಗುತ್ತಿರುವ ಆಹಾರದ ಬೆಲೆಗಳ ಬಗ್ಗೆ ಇಲ್ಲಿ ಎಲ್ಲರೂ ಚಿಂತಿಸುತ್ತಿದ್ದಾರೆ. "ನಮ್ಮ ಕಡೆ ರೊಕ್ಕ ಇಲ್ಲಾಂದ್ರೆ ನಾವು ಖರೀದಿ ಮಾಡೋದಾದ್ರೂ ಹೇಗೆ? ನಾವು ಏನೂ ಉಳಿತಾಯ ಮಾಡೋಕೆ ಸಾಧ್ಯವಿಲ್ಲ. ನಾವು ಕೆಲ್ಸಾ ಮಾಡಬೇಕಾದರೆ ಎಲ್ಲಾ ಆರಾಮ ಇರ್ತಿವಿ, ಆದ್ರೆ ಅವರು ನಮ್ಮ ಕೆಲ್ಸಾ ಕಿತ್ತಕೊಂಡ್ರು" ಎಂದು 33 ವರ್ಷದ ಸೋನಿದೇವಿ ಹೇಳುತ್ತಿದ್ದರು. ರಾಚೇನಹಳ್ಳಿಗೆ ಸಮೀಪವಿರುವ ಅಪಾರ್ಟ್‌ಮೆಂಟ್ ಸಂಕೀರ್ಣವೊಂದರಲ್ಲಿ ಅವರು ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸೋನಿ ಅವರು ತಿಂಗಳಿಗೆ 9000 ರೂ. ಸಂಪಾದಿಸುತ್ತಾರೆ, ಮತ್ತು ಅವರು ಈ ತಿಂಗಳು (ಮೇ) ಕೆಲಸವನ್ನು ಪುನರಾರಂಭಿಸಿದರೂ ಮಾರ್ಚ್ ತಿಂಗಳಿನಲ್ಲಿ ಅವರಿಗೆ ಕೇವಲ 5000 ರೂ.ಗಳನ್ನು ಮಾತ್ರ ನೀಡಲಾಗಿದೆ ಮತ್ತು ಏಪ್ರಿಲ್ ತಿಂಗಳಿನಲ್ಲಿ ಅವರಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲದಿರುವುದರಿಂದ ಯಾವುದೇ ಆದಾಯ ಇದ್ದಿರಲಿಲ್ಲ.11 ವರ್ಷಕ್ಕೂ ಕಡಿಮೆ ವಯಸ್ಸಿನ ಮೂರು ಮಕ್ಕಳನ್ನು ಒಳಗೊಂಡ ಅವರ ಕುಟುಂಬಕ್ಕೆ ಏಪ್ರಿಲ್ ತಿಂಗಳು ಕಠಿಣವಾಗಿತ್ತು. ಅವರ ಪತಿ ಲಖನ್ ಸಿಂಗ್ ಅವರು ಸಾಂದರ್ಭಿಕ ಕಟ್ಟಡ ಕೆಲಸಗಾರರಾಗಿದ್ದಾರೆ, ಅವರು ಕೆಲಸದ ದಿನಗಳಲ್ಲಿ 450 ರೂ.ಗಳಿಸುತ್ತಾರೆ; ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದಾಗಿ ಅವರಿಗೆ ಹೆಚ್ಚು ಕೆಲಸ ಮಾಡಲಾಗುವುದಿಲ್ಲ. ಅವರ ಕುಟುಂಬವು ಮಕ್ತುಂಬೆ ವಾಸಿಸುವಂತಹ ಕೋಣೆಯಲ್ಲಿ ವಾಸಿಸುತ್ತಿದೆ, ಅವರು ತಿಂಗಳಿಗೆ 2000 ರೂ.ದಂತೆ ಬಾಡಿಗೆ ಪಾವತಿಸುತ್ತಾರೆ. ಸೋನಿ ಏಳು ತಿಂಗಳ ಹಿಂದೆ ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಿಂದ ಬೆಂಗಳೂರಿಗೆ ತನ್ನ ಕುಟುಂಬದೊಂದಿಗೆ ವಲಸೆ ಕಾರ್ಮಿಕರಾಗಿ ಬಂದಿದ್ದರು. ತಮ್ಮ 13 ವರ್ಷದ ಮಗಳನ್ನು ಸಂಬಂಧಿಕರೊಂದಿಗೆ ಬಿಟ್ಟು ಹೋಗಿದ್ದರು.

ಏಪ್ರಿಲ್ ತಿಂಗಳದ ಆರಂಭದಲ್ಲಿ ನಾವು ಭೇಟಿಯಾದಾಗ, ಸೋನಿ ತರಕಾರಿಗಳ ಬೆಲೆ ಏರಿಕೆಯ ಬಗ್ಗೆ ಚಿಂತಿತರಾಗಿದ್ದರು. “ಒಂದು ಕೆಜಿಗೆ 25 ರೂಪಾಯಿ ಇದ್ದಿದ್ದ ಉಳ್ಳಾಗಡ್ಡಿ, ಈಗ 50 ರೂಪಾಯಿಗೆ ಏರೈತಿ. ಈಗ ಮಹಾಮಾರಿ ಬಂದಾಗಿನಿಂದ ನಾವು ಮನ್ಯಾಗ್ ಕಾಯಿಪಲ್ಲೆ ಮಾಡೋದೇ ಬಿಟ್ಟೇವಿರ್ರಿ. ಯಾರೋ ಪುಣ್ಯಾತ್ಮರೊಬ್ಬರು ಸ್ವಲ್ಪ ದಿನದ ತನಕ ಕಾಲೋನಿಯಲ್ಲಿ ಇರೋ ಜನಕ್ಕ ಒಂದು ಹೊತ್ತಿನ ಊಟ ಕೊಡೊರು. ಹಂಗಾಗಿ ಈಗ ನಮಗ ಒಂದೊತ್ತಿನ ಬಿಸಿ ಊಟ ಸಿಗಾಕುಂತೈತಿ" ಎಂದು ಸೋನಿದೇವಿ ಹೇಳುತ್ತಿದ್ದರು.

“ನಾಂವಂಕರ ಈಗ ಕಾಯಿಪಲ್ಲೆಗಳನ್ನೇ ಮರ್ತಿದ್ದೇವೆ! ಈಗ ನಮಗ ಕೊಟ್ಟಿರೋ ಅಕ್ಕಿ ಮ್ಯಾಲೇನೆ ನಾವು ಬದಕಬೇಕು” ಎನ್ನುತ್ತಾರೆ ಮಕ್ತುಂಬೆ.ಸ್ವಯಂ ಸೇವಾ ಸಂಸ್ಥೆಯೊಂದು ರೇಷನ್ ಕಿಟ್ ಗಳನ್ನು ಪೂರೈಸಿದಾಗ ಅವು ಅವರಿಗೆ ಸಾಕಾಗಲಿಲ್ಲ. “ಕೆಲವರಿಗೆ ಸಿಕ್ರೆ ಕೆಲವರಿಗೆ ಸಿಗಲಿಲ್ಲ, ಹಾಗಾಗಿ ಕಷ್ಟ ಆಗುತ್ತೆ” ಎಂದು ಅವರು ಹೇಳಿದರು.

"ಯಾರಾದರೂ ರೇಷನ್ ಸಾಮಾನು ತಂದ್ರೆ ಎಲ್ಲರಿಗೂ ತರಬೇಕು ಇಲ್ಲಾಂದ್ರೆ ಬಿಟ್ಟು ಬಿಡಬೇಕು, ನಾವು ಇಲ್ಲಿ 100 ಜನರ ಮ್ಯಾಲೆ ಇದ್ದೀವಿ, ಹಂಗಾಗಿ ನಮಗ ನಾವ ಜಗಳಕ್ಕಿಳಿಯುವಂಗ ಆಗಬಾರದು " ಎಂದು ಹತಾಶೆಯಿಂದ ಮಾಣಿಕ್ಯಮ್ಮ ಹೇಳುತ್ತಿದ್ದರು.

ನಾನು ಏಪ್ರಿಲ್ 14ರಂದು ರಾಚೇನಹಳ್ಳಿಗೆ ಹಿಂತಿರುಗಿದಾಗ, ಏಪ್ರಿಲ್ 4 ರಂದು ನಾನು ಭೇಟಿಯಾದ ಕೆಲವೇ ಗಂಟೆಗಳ ನಂತರ ನಡೆದ ಘಟನೆಯ ಬಗ್ಗೆ ಮಹಿಳೆಯರು ನನಗೆ ವಿವರಿಸಿದರು.

'ಯಾರಾದರೂ ಊಟ ತಂದ್ರ, ಅದು ಎಲ್ಲರಿಗೂ ಆಗಬೇಕು, ಇಲ್ಲದಿದ್ದರೆ ಯಾರಿಗೂ ತರಬಾರದು.ಅದು ನಮ್ಮ ನಮ್ಮೊಳಗೇ ಜಗಳ ತಂದಿಡುವಂಗ ಆಗಬಾರದು'

ವಿಡಿಯೋ ನೋಡಿ: ‘ಇದು ಜಗಳವಾಡುವ ಸಮಯವಲ್ಲ

ಅಂದು ಸಂಜೆ ಕೊಳಗೇರಿ ಕಾಲೋನಿಯ ನಿವಾಸಿಗಳಿಗೆ ಕಾಲೋನಿಯಿಂದ ಎರಡು ಕಿಲೋಮೀಟರ್ ದೂರದಲ್ಲಿ ಅಮೃತಹಳ್ಳಿಯಲ್ಲಿರುವ ಸ್ಥಳೀಯ ಸಮಾಜ ಸೇವಕಿ ಜರೀನ್ ತಾಜ್ ಅವರ ಮನೆಯಿಂದ ಪಡಿತರ ಕಿಟ್ ಸಂಗ್ರಹಿಸಲು ತಿಳಿಸಲಾಯಿತು."ಅವರು ಯಾರಿಗೆ ರೇಷನ್ ಕಾರ್ಡ್ ಇಲ್ಲ, ಅವರಿಗೆ ರೇಷನ್ ಕೊಡೋದಾಗಿ ಹೇಳಿದ್ರು, ಅದಕ್ಕ ನಾವು ಅಲ್ಲಿ ಹೋಗಿ ಪಾಳೆಗೆ ನಿಂತಿದ್ದೆವು" ಎಂದು ಲಕ್ಷ್ಮೀ ನೆನಪಿಸಿಕೊಂಡರು.

ಮುಂದೆ ನಡೆದದ್ದು ಅವರಲ್ಲಿ ಅಚ್ಚರಿ ಮೂಡಿಸಿತು. “ನಾವು ನಮ್ಮ ಪಾಳೆಯಲ್ಲಿ ಕಾಯಾಕುಂತಿದ್ವು, ಆದ್ರ ಒಂದಿಷ್ಟ ಗಂಡಸರು ಬಂದು ಒಮ್ಮೆಲೇ ಕೂಗಾಕ್ ಕುಂತ್ರು, ಯಾರರss ರೇಷನ್ ಕಿಟ್ ತಗೊಂಡ್ರ ಅವರಿಗೆ ಹೊಡೆತ ಬಿಳುತ್ತವೆ ಅಂತಾ ಗದರಿಸಿದ್ರು, ನಾವು ಹೆದರಿ ಏನೂ ತಗೊಳ್ಳಲಾರದ ಹಂಗ ವಾಪಾಸ್ ಓಡಿ ಬಂದ್ವಿ” ಎಂದು ಲಕ್ಷ್ಮಿ ಹೇಳಿದರು.

15-20 ಗಂಡಸರು ತಮ್ಮ ಮನೆಯ ಹೊರಗೆ ಜಮಾಯಿಸಿ ಬೈಯ್ಯಲು ಪ್ರಾರಂಭಿಸಿದರು ಎಂದು ಜರೀನ್ ಹೇಳುತ್ತಾರೆ. “ನಾವು ಆಹಾರ ನೀಡುತ್ತಿರುವುದಕ್ಕೆ ಅವರು ಕೋಪಗೊಂಡಿದ್ದರು.ಅವರು ನಮಗೆ ಬೆದರಿಕೆ ಹಾಕುತ್ತಾ, ಭಯೋತ್ಪಾದಕರು, ಅವರು ನಿಜಾಮುದ್ದೀನ್‌ನಿಂದ ಬಂದವರು, ಅವರ ಆಹಾರವನ್ನು ತೆಗೆದುಕೊಳ್ಳಬೇಡಿ ಅಥವಾ ನೀವು ಕೂಡ ಸೋಂಕಿಗೆ ಒಳಗಾಗುತ್ತೀರಿ”ಎಂದು ಹೇಳಲು ಪ್ರಾರಂಭಿಸಿದರು.

ನಂತರ, ಏಪ್ರಿಲ್ 6 ರಂದು, ಜರೀನ್ ಮತ್ತು ಅವರ ಪರಿಹಾರ ತಂಡವು ಸಮೀಪದ ದಾಸರಹಳ್ಳಿಯಲ್ಲಿ ಆಹಾರದ ಪೊಟ್ಟಣ ವಿತರಿಸುತ್ತಿದ್ದಾಗ, ಅಪರಿಚಿತ ಗುಂಪೊಂದು ಅವಾಚ್ಯ ಶಬ್ದಗಳಿಂದ ಬೈದು ಅವರ ಮೇಲೆ ಹಲ್ಲೆ ಮಾಡಿತು. "ಕ್ರಿಕೆಟ್ ಬ್ಯಾಟ್‌ಗಳನ್ನು ಹಿಡಿದಿದ್ದ ಗಂಡಸರು ನಮ್ಮನ್ನು ಸುತ್ತುವರೆದಿದ್ದರು ಮತ್ತು ಇದೇ ವೇಳೆ ನನ್ನ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ" ಎಂದು ಅವರು ವಿವರಿಸಿದರು.

ಏಪ್ರಿಲ್ 16 ರಂದು, ಜರೀನ್ ಅವರ ತಂಡವು ಕೊನೆಗೂ ರಾಚೇನಹಳ್ಳಿಯ ದಿನಗೂಲಿ ಕಾರ್ಮಿಕರಿಗೆ ಒಣ ರೇಷನ್ ಕಿಟ್‌ಗಳನ್ನು ತಲುಪಿಸಲು ಸಾಧ್ಯವಾಯಿತು. “ಕಿಟ್‌ಗಳನ್ನು ವಿತರಿಸಲು ಸಹಾಯ ಮಾಡಲು ಸ್ಥಳೀಯ ಕಾರ್ಪೊರೇಟರ್ ಬಿಬಿಎಂಪಿ ವಾಹನವನ್ನು ವ್ಯವಸ್ಥೆಗೊಳಿಸಿದ್ದಾರೆ" ಎಂದು ಜರೀನ್ ಮತ್ತು ಅವರ ತಂಡದೊಂದಿಗೆ ಕೆಲಸ ಮಾಡಿದ ಸ್ವಯಂಸೇವಕ ಸೌರಭ್ ಕುಮಾರ್ ಹೇಳುತ್ತಾರೆ.

“ನಮಗ ಇದೆಕ್ಕೆಲ್ಲಾ ಟೈಮ್ ಇಲ್ಲರ್ರಿ, ನಾವು ಮಕ್ಕಳಿಗೆ ಕೂಳ ಹಾಕಬೇಕು! ಎಂದು ಮಕ್ತುಂಬೆ ನನಗೆ ನಂತರ ಹೇಳಿದರು. ಆದರೆ ಈ ಘಟನೆ ಅವರಲ್ಲಿ ಒಂದು ರೀತಿ ಆತಂಕ ಮೂಡಿಸಿದೆ. "ನಾನು ಹಿಂದೂ, ಮತ್ತು ಅವಳು ಮುಸ್ಲಿಂ" ಎಂದು ಸೋನಿ ದೇವಿ ಮಕ್ತುಂಬೆಯನ್ನು ತೋರಿಸುತ್ತಾ ಹೇಳಿದರು. “ಇದರಲ್ಲಿ ಏನ್ ಫರಕ್ ಐತಿ ಹೇಳ್ರಿ? ನಾವು ನೆರೆಹೊರೆಯವರಂಗ ಬದಕಾಕುಂತೈವಿ. ನಮ್ಮ ಮಕ್ಕಳೂ ತಾಯಿ ಹೊಟ್ಟ್ಯಾಗ ಹುಟ್ಟಿದ್ದಾರಲ್ವಾ? ನಾವು ಸುಮ್ನ ಇಂತಾ ರಗಳಿಯೊಳಗ (ಕೋಮು ರಾಜಕೀಯ) ಸಿಗೊದರ ಬದಲು ಹಂಗ ಹಸಿವಿನಿಂದ ಇರ್ತೇವೆ" ಎಂದು ಅವರು ಹೇಳಿದರು.

“ಅವರೆಲ್ಲಾ ನಮ್ಮನ್ನ ಇಂತಾದ್ರ ನಡಬರಕ ಸಿಗಿಸಿ ಚಟ್ನಿ ಮಾಡಾಕುಂತಾರ. ಹೆಚ್ಚಾಗಿ ಬಡ ಜನರಿಗೆ ಹಿಂಗ್ ಆಗೋದು, ಆದ್ರೆ ಕೊನೆಗೆ ಸಾಯೋರೂ ನಾವೇ.” ಎಂದು ಮಕ್ತುಂಬೆ ಹೇಳುತ್ತಿದ್ದರು.

ಅನುವಾದ - ಎನ್. ಮಂಜುನಾಥ್

Sweta Daga

Sweta Daga is a Bengaluru-based writer and photographer, and a 2015 PARI fellow. She works across multimedia platforms and writes on climate change, gender and social inequality.

यांचे इतर लिखाण श्वेता डागा
Translator : N. Manjunath