ಸ್ವಂತ ಬಾವಿ ಕೊರೆಸಲು ರೈತರು ನೀಡಿದ ಅರ್ಜಿ ಮಂಜೂರಾದರೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MNREGA) ಯ ಅಡಿಯಲ್ಲಿ ರಾಜ್ಯ ಸರಕಾರ 2.99 ಲಕ್ಷದ ಮೊತ್ತವನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ನೀಡುತ್ತದೆ. ಈ ದುಡ್ಡಿನಲ್ಲಿ ರೈತರು ಬಾವಿ ಕೊರೆಯುವ ಆಳುಗಳಿಗೆ ಕೂಲಿ ಕೊಡಬಹುದು ಮತ್ತು ಪೈಪ್ ನಂತಹ ಸಾಮಾನುಗಳನ್ನು ಖರೀದಿ ಮಾಡಬಹುದು. ನಂತರ ಇವುಗಳಿಗೆ ತಗುಲಿದ ಖರ್ಚನ್ನು ಕಂತುಗಳ ರೂಪದಲ್ಲಿ ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬಹುದು.
ಆದರೆ ಕೆಲಸ ಶುರು ಮಾಡಲು, ತನ್ನದೇ ಹೊಲದ ದಾಖಲೆಗಳನ್ನು ಪಡೆಯಲೂ ಕೂಡ ಜಾಧವ್ ನಿಗೆ ಹಣದ ಅವಶ್ಯಕತೆಯಿತ್ತು. ಅಲ್ಲಿನ ಒಬ್ಬ ಖಾಸಗಿಯವರನ್ನು ಸಾಲಕ್ಕಾಗಿ ಸಂಪರ್ಕಿಸಿದ ಜಾಧವ್ ಆತನಿಂದ 40,000 ಮೊತ್ತವನ್ನು ಸಾಲವಾಗಿ ಪಡೆದ. ಅದೂ ಮಾಸಿಕ 5 % ಬಡ್ಡಿದರದಂತೆ; ಅಂದರೆ ವರ್ಷಕ್ಕೆ ಬರೋಬ್ಬರಿ 60 %. ಹಿಂದೆ ಬರಗಾಲದಲ್ಲಿ ಜಾಧವ್ ಬ್ಯಾಂಕಿನಿಂದ ಸಾಲ ಪಡೆದಿದ್ದುಂಟು. ಆದರೆ ಆತ ಖಾಸಗಿಯವರಿಂದ ಸಾಲ ಪಡೆಯುತ್ತಿರುವುದು ಇದೇ ಮೊದಲು. “ಅದರಲ್ಲಿ 30,000 ರೂಪಾಯಿ ಲಂಚಗಳಿಗಾಯಿತು. ಉಳಿದ 10,000 ರೂಪಾಯಿಗಳನ್ನು ಬಾವಿ ಕೊರೆಸಲು ಶುರು ಮಾಡಿದರಾಯಿತು ಅಂತ ಇಟ್ಟುಕೊಂಡೆ. ನಾನು ಯಾರ್ಯಾರನ್ನು ಭೇಟಿಯಾಗಿದ್ದೆನೋ ಅವರೆಲ್ಲ ಬೇಗ ಕೆಲಸ ಮಾಡಿಸಿಕೊಡುತ್ತೇವೆ ಅಂತ ಹೇಳಿದ್ದರು. ಹೀಗಾಗಿ ನಾನೂ ಬೇಗನೆ ಸಾಲ ತೀರಿಸಿಬಿಡುತ್ತೇನೆ ಅಂತ ಅಂದುಕೊಂಡಿದ್ದೆ”, ಎಂದು ಹೇಳುತ್ತಾನೆ ಆತ.
ಫೆಬ್ರುವರಿ 2015 ರಲ್ಲಿ ಆತನಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ವರ್ಕ್ ಆರ್ಡರ್ (ಕೆಲಸ ಶುರು ಮಾಡಲು ಬೇಕಾಗಿದ್ದ ಆದೇಶ) ಅದಾದ ಸ್ವಲ್ಪ ದಿನಗಳಲ್ಲೇ ಬಂದುಬಿಟ್ಟಿತು. ಕ್ರಮೇಣ ಇನ್ನೇನು MNREGA ದುಡ್ಡು ಬರುತ್ತೆ, ಅದರಿಂದ ಸಾಲ ತೀರಿಸಿದರಾಯಿತು ಅನ್ನುವ ವಿಶ್ವಾಸ ಇನ್ನಷ್ಟು ಬಲವಾಯಿತು. ತಾನೇ ಆಳುಗಳನ್ನು ಗೊತ್ತು ಮಾಡಿ ಬಾವಿ ಕೊರೆಸುವ ಕೆಲಸವನ್ನು ಹುಮ್ಮಸ್ಸಿನಿಂದ ಶುರು ಮಾಡಿಯೇಬಿಟ್ಟಿದ್ದ ಜಾಧವ್.
ಆದರೆ ವರ್ಕ್ ಆರ್ಡರ್ ಸಿಕ್ಕಿದ್ದರೂ ಜಾಧವ್ ನಿಗೆ ಪಂಚಾಯತ್ ಸಮಿತಿಯಿಂದ ದುಡ್ಡು ಬರಲಿಲ್ಲ. ಇದಕ್ಕಾಗಿ ಆತ ತನ್ನ ಹಳ್ಳಿಯಿಂದ 15 ಕಿಲೋಮೀಟರು ದೂರದ ಫುಲಾಂಬರಿಯಲ್ಲಿರುವ ಪಂಚಾಯತ್ ಸಮಿತಿಗೆ ನಡೆದುಕೊಂಡೋ ಅಥವಾ ಶೇರ್ಡ್ ರಿಕ್ಷಾದಲ್ಲಿ ಸಾಕಷ್ಟು ಸಲ ಹೋಗಿ ಬರಬೇಕಾಯಿತು. ಅಲ್ಲಿ ಇವನನ್ನು ಯಾರೂ ಕ್ಯಾರೇ ಅನ್ನುವವರಿರಲಿಲ್ಲ. “ಕಾಸಿಗಾಗಿನ ಈ ಅಲೆದಾಟವು ನನ್ನ ಆರ್ಥಿಕ ಸ್ಥಿತಿಯ ಮೇಲೆ ಮಾತ್ರ ಪೆಟ್ಟು ಕೊಡಲಿಲ್ಲ, ಇದು ನನ್ನ ಕೆಲಸದ ಸಮಯವನ್ನೂ ಕೂಡ ತಿಂದು ಹಾಕುತ್ತಿತ್ತು'', ಎಂದು ಹತಾಶೆಯಿಂದ ನುಡಿಯುತ್ತಾನೆ ಆತ.
ಇತ್ತ ಇವೆಲ್ಲವುಗಳ ಮಧ್ಯೆ, ಬಾವಿಯು 20 ಅಡಿಯವರೆಗಿನ ಆಳಕ್ಕಿಳಿದಿತ್ತು. ಇನ್ನೇನು ಕೆಲವು ವಾರಗಳ ಕಾಯುವಿಕೆಯಷ್ಟೇ, ಆಮೇಲೆ ನೀರು ಚಿಮ್ಮಲಿದೆ ಎಂದು ಜಾಧವ್ ಕನಸು ಕಾಣಲು ಶುರು ಮಾಡಿದ್ದ. ಆದರೆ ಕೊನೆಗೂ ಬರಬೇಕಾಗಿದ್ದ ದುಡ್ಡು ಬರಲೇ ಇಲ್ಲ. ಹೀಗಾಗಿ ಜಾಧವ್ ನ ಬಹುನಿರೀಕ್ಷಿತ ಪ್ರಾಜೆಕ್ಟ್ ನಿಂತು ಹೋಯಿತು. “ಆಳುಗಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟರು. ಅದರಲ್ಲಿ ಅವರದ್ದೇನೂ ತಪ್ಪಿಲ್ಲ ಬಿಡಿ. ಅವರಿಗೆ ದುಡ್ಡು ಕೊಡಲು ನನ್ನಿಂದ ಆಗಲಿಲ್ಲ. ಮತ್ಯಾಕೆ ಅವರು ಕೆಲಸ ಮುಂದುವರೆಸುತ್ತಾರೆ?”, ಎನ್ನುವ ಆತನಿಗೆ ಕಾರ್ಮಿಕರ ಬಗ್ಗೆ ಕಾಳಜಿಯಿದೆ,
ಕೊರೆಯುವ ಕೆಲಸವು ಅರ್ಧಕ್ಕೆ ನಿಂತು, ಕಸ ಕಡ್ಡಿಗಳಿಂದ ತುಂಬಿ ಹೋದ ಬಾವಿಯು ಕಾರಭಾರಿ ಜಾಧವ್ ನಿಗೆ ನಿತ್ಯವೂ ಅವನ ನಷ್ಟ, ಸಾಲ, ಅಡವಿಟ್ಟ ಭೂಮಿ, ಏರುತ್ತಿರುವ ಬಡ್ಡಿಯ ದರ, ಆಳಿನ ಸಂಬಳ ಮತ್ತು ವ್ಯರ್ಥವಾಗಿ ಹೋದ ಪರಿಶ್ರಮಗಳನ್ನು ನೆನಪಿಸುತ್ತದೆ. ನೀರಿನ ಸೆಲೆಯಾಗಬೇಕಿದ್ದ ಬಾವಿಯು ಈಗ ವ್ಯರ್ಥಪ್ರಯತ್ನದ ಕುರುಹಾಗಿ ಆಳವಾದ ಗುಂಡಿಯಷ್ಟೇ ಎಂಬಂತೆ ಕಾಣುತ್ತಿದೆ.