ಕಳೆದ ಕೆಲ ವರ್ಷಗಳಿಂದ ದಿಲೀಪ್‌ ಕೋಲಿಯವರು ಹಲವಾರು ಏರುಪೇರುಗಳನ್ನು ಕಂಡಿದ್ದರು. ಮೀನುಗಳು ಸಿಗದಿರುವುದು, ಮಾರಾಟದ ಇಳಿಕೆ ಮತ್ತು ಚಂಡಮಾರುತಗಳ ಹೊಡೆತ, ಇಂತಹ ಅದೆಷ್ಟೋ ಸಮಸ್ಯೆಗಳನ್ನು ಎದುರಿಸಿದ್ದರು. ಆದರೆ 2020 ರ ಮಾರ್ಚ್‌ನಿಂದ ಶುರುವಾಗಿದ್ದ ಲಾಕ್‌ ಡೌನ್‌ ದಿನಗಳು ಮಾತ್ರ ಅದೆಲ್ಲವುಗಳಿಗಿಂತಲೂ ತುಂಬಾ ಕಠಿಣವಾಗಿದ್ದವು.

“ಲಾಕ್ ಡೌನ್‌ ದಿನಗಳಿಗೆ ಹೋಲಿಸಿದರೆ, ನಾವು ಮೊದಲು ಅನುಭವಿಸಿದ್ದು ಅದರ ಅರ್ಧಕ್ಕೂ ಸಮವಿಲ್ಲ. ಆ ದಿನಗಳು ಹೇಗಿದ್ದವೆಂದರೆ, ಮೀನು ಹಿಡಿಯುವ ಜನರು ಹಿಡಿಯಲು ತಯಾರಿದ್ದರು, ಮೀನು ತಿನ್ನುವ ಜನರ ತಿನ್ನಲು ತಯಾರಿದ್ದರು. ಆದರೆ ವ್ಯಾಪಾರ ಮಾಡಲಿಕ್ಕೇ ಅನುಕೂಲ ಇದ್ದಿಲ್ಲ ಕಣ್ರೀ (ಸೆಪ್ಟಂಬರ್‌ 2020ರ ತನಕ, ಲಾಕ್‌ಡೌನ್‌ನಿಂದಾಗಿ). ಹಿಡಿದ ಮೀನುಗಳನ್ನು ವಾಪಸ್ಸು ಸಮುದ್ರಕ್ಕೇ ಎಸೆದು ಬರಬೇಕಾದಂತ ಪರಿಸ್ಥಿತಿಯಿತ್ತು” ಅಂದರು ದಿಲೀಪ್.

ಸುಮಾರು ಐವತ್ತು ವರ್ಷದವರಾದ ದಿಲೀಪ್‌, ದಕ್ಷಿಣ ಮುಂಬಯಿಯ ಕೋಲಾಬಾ ಪ್ರದೇಶದ ಕೋಲೀವಾಡದವರು. ಕಳೆದ ಮೂವತ್ತೈದು ವರ್ಷಗಳಿಂದ ದಕ್ಷಿಣ ಮುಂಬಯಿಯ ಸಸೂನ್‌ ಹಡಗುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ʼʼಲಾಕ್ ಡೌನ್‌ನಲ್ಲಿ ನಮಗೆ ಕನಿಷ್ಟ ದಿನಸಿ ಸಾಮಾನುಗಳನ್ನಾದರೂ ಕೊಳ್ಳಲು ಆಗುತ್ತಿತ್ತು. ಆದರೆ ನಮ್ಮ ಕೆಲವು ಹತ್ತಿರದ ಜನರು ಉಣ್ಣಲಿಕ್ಕೆ ಅನ್ನವಿಲ್ಲದೇ, ಕೊಳ್ಳಲು ಹಣವಿಲ್ಲದೇ, ಆ ಕೆಟ್ಟ ದಿನಗಳನ್ನು ಕಳೆದಿದ್ದರು” ಎಂದು ನಿಟ್ಟುಸಿರಿಟ್ಟರು.

ಇಲ್ಲಿನ ಮೀನುಗಾರರು ಮಳೆಗಾಲದಲ್ಲಿ ಮುಂಜಾನೆ ನಾಲ್ಕು ಗಂಟೆಗೇ ಕೆಲಸ ಶುರು ಮಾಡುತ್ತಾರೆ. ದಡದಿಂದ ತೀರಾ ದೂರ ಹೋಗದಂತೆ, ಸಮುದ್ರದೊಳಗೆ ನಲವತ್ತು ನಿಮಿಷಗಳ ಸುತ್ತುಗಳನ್ನು ಹಾಕುತ್ತಿರುತ್ತಾರೆ. ಆದರೆ ಅಲೆಗಳು ಬದಲಾಗುವ ಸಮಯದಲ್ಲಿ ಮಾತ್ರ ಸುಮಾರು ಒಂದು ಗಂಟೆಯ ಕಾಲ ಕಾದಿದ್ದು, ನಂತರ ಸಮದ್ರಕ್ಕೆ ಇಳಿಯುವುದು ರೂಢಿ. ಈ ಉಬ್ಬರವಿಳಿತಗಳ ಸೂಚನೆಗಳನ್ನೆಲ್ಲಾ ಚಂದ್ರನನ್ನು ನೋಡಿಯೇ ಗೊತ್ತುಮಾಡಿಕೊಳ್ಳುತ್ತಾರಾದ್ದರಿಂದ ಆ ಸಮಯದಲ್ಲಿ ಸಮುದ್ರಕ್ಕೆ ಇಳಿಯುವುದಿಲ್ಲ. ಹೀಗೆ ಮುಂಜಾನೆ ಹಿಡಿದ ಕೆಲಸ, ಮದ್ಯಾಹ್ನ ಎರಡಕ್ಕೋ ಮೂರಕ್ಕೋ ಮುಗಿಯುತ್ತದೆ.

ದಿಲೀಪ್‌ ಅವರು ʼಕೋಲಿʼ ಎಂಬ ಸಮುದಾಯಕ್ಕೆ ಸೇರಿದವರು. ಅದೇ ಸಮುದಾಯಕ್ಕೆ ಸೇರಿದ ಕೆಲವರು ದಿಲೀಪ್‌ ಅವರ ಹಡಗಿನಲ್ಲಿಯೇ ಕೆಲಸ ಮಾಡುತ್ತಿದ್ದರು. ಅವರೆಲ್ಲಾ ಅಲ್ಲಿಂದ ಸುಮಾರು 140 ಕಿಲೋಮೀಟರ್‌ ದೂರದ, ರಾಯಗಢ ಜಿಲ್ಲೆಯ ತಲ ತಾಲೂಕಿಗೆ ಸೇರಿದ ವಾಶಿ ಹವೇಲಿ ಎನ್ನುವ, ಸುಮಾರು ಒಂದು ಸಾವಿರದಷ್ಟು (1040 ಜನಸಂಖ್ಯೆ) ಜನರಿರುವ ಒಂದು ಸಣ್ಣ ಊರಿನಿಂದ ಬಂದವರು. ಪ್ರತೀವರ್ಷ ಜೂನ್ ನಿಂದ ಅಗಸ್ಟ್‌ ವರೆಗೆ, ಅಂದರೆ ಗಣೇಶ ಹಬ್ಬದವರೆಗೂ ಅಲ್ಲಿ ಕೆಲಸ ಮಾಡಿ, ಮುಂದೆ ಮತ್ತೆ ಬೇರೆ ಬೇರೆ ಕರಾವಳಿ ಊರುಗಳಲ್ಲಿ ಕೆಲಸ ನೋಡಿಕೊಳ್ಳುತ್ತಾರೆ. ಮುಖ್ಯವಾಗಿ ರತ್ನಗಿರಿ ಮತ್ತು ರಾಯಗಢಗಳಲ್ಲಿ ಉಳಿದುಕೊಳ್ಳುವ ಅವರು, ಬೇರೆಯವರ ಹಡಗುಗಳಲ್ಲಿ ಕೆಲಸ ಮಾಡಿ ತಿಂಗಳಿಗೆ 10,000-12,000 ರೂಪಾಯಿಗಳಷ್ಟು ಸಂಪಾದಿಸುತ್ತಾರೆ.

PHOTO • Shraddha Agarwal

ರಾಯಗಢ ಜಿಲ್ಲೆಯ ವಾಶಿ ಹವೇಲಿಯ ಕೋಲಿ ಮೀನುಗಾರರು ಮುಂಗಾರಿನ ಸಮಯದಲ್ಲಿ ಸಸೂನ್‌ ಹಡಗುಕಟ್ಟೆಯಲ್ಲಿ ಕೆಲಸ ಮಾಡುತ್ತಿರುವುದು. ಅದರಲ್ಲಿ ಬಹಳ ಜನ ʼಬಾಂಬ್ಲಿʼ (ಬಾಂಬೆ ಡಕ್) ಮೀನುಗಳಿಗಾಗಿಯೇ ಬಂದಿರುತ್ತಾರೆ. ಮುಂಜಾನೆ ನಾಲ್ಕು ಗಂಟೆಗೇ ಕೆಲಸ ಮೊದಲುಮಾಡಿ ಮದ್ಯಾಹ್ನ 2 ಅಥವಾ 3 ಗಂಟೆಗೆ ಮುಗಿಸುತ್ತಾರೆ

ಮೇ ತಿಂಗಳ ಕೊನೆಯಿಂದ ಆಗಸ್ಟ್‌ ಶುರುವಿನವರೆಗೂ ಆಳ-ಸಮುದ್ರದ ಮೀನುಗಾರಿಕೆಗೆ ನಿಷೇಧವಿರುತ್ತದೆ. ಆದರೆ ಸಣ್ಣ ತೊರೆಗಳಲ್ಲಿ, ಸಾಂಪ್ರದಾಯಿಕ ಬಲೆಗಳನ್ನು ಬಳಸಿ ಮೀನುಗಾರಿಕೆಯನ್ನು ನಡೆಸಬಹುದು. ಇದನ್ನು ಹೇಳುತ್ತಾ, “ನಮ್ಮ ಕೋಲಾಬಾ ತೊರೆಯು ʼಬಾಂಬ್ಲಿʼ (ಬಾಂಬೆ ಡಕ್)‌ ಮೀನುಗಳಿಗೆ ಅದೆಷ್ಟು ಪ್ರಸಿದ್ದ ಅಂದರೆ, ಮಹಾರಾಷ್ಟ್ರದ ದೂರದೂರದ ಸಣ್ಣ ಸಣ್ಣ ಊರುಗಳಿಂದ ಅವನ್ನು ಹಿಡಿಯಲು ಮೀನುಗಾರರು ಇಲ್ಲಿಗೆ ಬರುತ್ತಾರೆ. ಜೂನ್‌ ಮತ್ತು ಜುಲೈನಲ್ಲಿ ಮಾತ್ರ ಆ ಮೀನುಗಳು ಇಲ್ಲಿಗೆ ಬರುವುದರಿಂದ ಅವುಗಳಿಗೆ ತುಂಬಾ ಬೇಡಿಕೆ. ಆ ಎರಡು ತಿಂಗಳುಗಳಕಾಲ ಮೀನುಗಾರರು ಇಲ್ಲಿಯೇ ಬಿಡಾರ ಹೂಡುತ್ತಾರೆ. ಅವರಿಗೆಲ್ಲಾ ಇದೊಂದು ಒಳ್ಳೆಯ ವ್ಯಾಪಾರ” ಅಂದರು ದಿಲೀಪ್‌.

ವಾಶಿ ಹವೇಲಿಯ ಪ್ರಿಯಾಲ್‌ ದುರಿ ಎಂಬುವವರು ಕಳೆದ ಹತ್ತು ವರ್ಷಗಳಿಂದ ಮೀನುಗಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ತಿಂಗಳುಗಳಲ್ಲಿ ಅವರು ಮತ್ತು ಅವರ ಊರಿನವರು ಸಸೂನ್‌ ಹಡಗುಕಟ್ಟೆಯಲ್ಲಿ ಪಾಲುಗಾರಿಕೆಯ ಲೆಕ್ಕದಲ್ಲಿ ಕೆಲಸ ಮಾಡುತ್ತಾರೆ. ಅಂದರೆ, ಪ್ರತೀದಿನವೂ ಹಡಗನ್ನು ಬೇರೆಯವರಿಂದ ಬಾಡಿಗೆಗೆ ಪಡೆದು, ಮೀನು ಹಿಡಿದು ಬರುವ ಲಾಭದಲ್ಲಿ ಅರ್ಧದಷ್ಟು ಹಣವನ್ನು ಹಡಗಿನ ಮಾಲೀಕರಿಗೆ ಕೊಟ್ಟು ಉಳಿದಿದ್ದರಲ್ಲಿ ತಾವೆಲ್ಲರೂ ಹಂಚಿಕೊಳ್ಳುತ್ತಾರೆ. ಹೀಗಿರುವಾಗ, ಅವರು ಕಳೆದ ವರ್ಷ ಕೋವಿಡ್ ಸೋಂಕಿನಿಂದ ಅವರ ಅಪ್ಪನನ್ನು ಕಳೆದುಕೊಂಡರು ಮತ್ತು ಅದಾದ ಮೂರು ತಿಂಗಳಿನಲ್ಲಿಯೇ ರಕ್ತದ ಕ್ಯಾನ್ಸರ್ ನಿಂದ ಅಮ್ಮನನ್ನೂ ಕಳೆದುಕೊಂಡರು. ಇಪ್ಪತ್ತೇಳು ವರ್ಷದ ಪ್ರಿಯಾಲ್‌ “ಅಮ್ಮನ ಚಿಕಿತ್ಸೆಗಾಗಿ ಹಣ ಹೊಂದಿಸಬೇಕಾಗಿತ್ತು. ಅದಕ್ಕಾಗಿ ಹನ್ನೆರಡನೆಯ ತರಗತಿಯನ್ನೂ ಮುಗಿಸಲಿಕ್ಕಾಗದೆ, ಮೀನು ಹಿಡಿಯುವ ಕೆಲಸ ಶುರುಮಾಡಿದೆ” ಎಂದು ಹೇಳುತ್ತಾ ದುಃಖಿತರಾದರು.

‌ಇತ್ತ ಕೆಲಸವೂ ಇಲ್ಲದೇ, ಅತ್ತ ಹಣವೂ ಇಲ್ಲದೇ, 2020 ರ ಮೇ ತಿಂಗಳಷ್ಟೊತ್ತಿಗೆ ವಾಶಿ ಹವೇಲಿಯ ಮೀನುಗಾರ ಕುಟುಂಬಗಳ ಬಳಿ ದಿನಸಿ ಸಾಮಾನುಗಳೂ ಬರಿದಾಗತೊಡಗಿದ್ದವು. “ಸಾಮಾನ್ಯವಾಗಿ ಮಳೆಗಾಲದಲ್ಲಿ ದಿನಕ್ಕೆ ಏಳುನೂರು ರೂಪಾಯಿಯಷ್ಡು ಗಳಿಕೆಯಿರುತ್ತದೆ. ಆದರೆ ಹೋದವರ್ಷ ಬರೀ ಐವತ್ತು ರೂಪಾಯಿಗೂ ಪರದಾಡಬೇಕಿತ್ತು. ಆ ವರ್ಷಪೂರ್ತಿ ಕೋವಿಡ್‌ ನಿಂದಾಗಿ ಮನೆಯಲ್ಲಿಯೇ ಕೂರುವಂತಾಗಿತ್ತು” ಎನ್ನುತ್ತಾ, “ಹತ್ತಿರದ ತೊರೆಗಳಲ್ಲಿ ಸಿಗುತ್ತಿದ್ದ ಮೀನುಗಳನ್ನಾದರು ತಿಂದು ಇರುತ್ತಿದ್ದೆವು. ಅಂತಹ ಸಮಯದಲ್ಲಿ ಬಂತು ನೋಡಿ ʼನಿಸರ್ಗʼ ಚಂಡಮಾರುತ! ಆನ್ನ-ನೀರು ಹೊಂದಿಸುವುದಕ್ಕೂ ಪರದಾಟವಾಗಿತ್ತು. ನಮ್ಮ ಜೀವನದಲ್ಲಿಯೇ ಅತೀ ಕೆಟ್ಟ ವರ್ಷವೆಂದರೆ ಅದೇ ನೋಡಿ” ಅಂದರು ಪ್ರಿಯಾಲ್.‌

ಮಹಾರಾಷ್ಟ್ರದ ಕರಾವಳಿಯನ್ನು 2020ರ ಜೂನ್‌ ಮೂರರಂದು ಅಪ್ಪಳಿಸಿದ ʼನಿಸರ್ಗʼದಿಂದಾಗಿ ಪ್ರಿಯಾಲ್‌ ರವರ ಮನೆಗೂ ತುಂಬಾ ಹಾನಿಯಾಗಿತ್ತು. “ಸುಮಾರು ಒಂದು ತಿಂಗಳಿನಷ್ಟು ಕಾಲ ಕರೆಂಟ್‌ ಮತ್ತು ಪೋನ್‌ ಸಂಪರ್ಕವೇ ಇದ್ದಿಲ್ಲ ಸ್ವಾಮಿ ನಮಗೆ. ನಮ್ಮ ಮನೆ ಪೂರ್ತಿ ಹಾಳಾಗಿತ್ತು. ಆದರೂ, ಒಂದೇ ಒಂದು ರೂಪಾಯಿಯಷ್ಟೂ ಪರಿಹಾರ ಕೊಡಲಿಲ್ಲ ಗೊತ್ತಾ ಈ ಸರಕಾರ ನಮಗೆ” ಅಂದರು ಪ್ರಿಯಾಲ್.‌ ಹೀಗಾಗಿ, ಅವರ ಅಣ್ಣ ಚಂದ್ರಕಾಂತರ ಜೊತೆ ವಾಸಿಸುತ್ತಿದ್ದ ಪ್ರಿಯಾಲ್‌, ತಮಗೆ ಗೊತ್ತಿದ್ದವರ ಹತ್ತಿರ ಸುಮಾರು ನಲವತ್ತು ಸಾವಿರ ರೂಪಾಯಿ ಸಾಲ ತಂದು ಮನೆ ಬೇಷು ಮಾಡಿಕೊಂಡಿದ್ದರು.

Dilip Koli holding a crab: “During a crisis, farmers at least get some compensation from the government. But fishermen don’t get anything even though farmers and fishermen are both like brothers.”
PHOTO • Shraddha Agarwal
Dilip Koli holding a crab: “During a crisis, farmers at least get some compensation from the government. But fishermen don’t get anything even though farmers and fishermen are both like brothers.”
PHOTO • Shraddha Agarwal

ದಿಲೀಪ್‌ ಕೋಲಿಯವರು ಏಡಿಯನ್ನು ಹಿಡಿದುಕೊಂಡಿರುವುದು. ಅವರು ಹೇಳುತ್ತಾರೆ 'ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರೈತರಿಗಾದರೋ ಸರಕಾರದಿಂದ ಕನಿಷ್ಟ ಏನಾದರೂ ಪರಿಹಾರ ಸಿಗುತ್ತದೆ. ಮೀನುಗಾರರು ಮತ್ತು ರೈತರು ಅಣ್ಣತಮ್ಮಂದಿರಂತಿದ್ದರೂ, ಮೀನುಗಾರರಿಗೆ ಏನೂ ಸಿಗುವುದಿಲ್ಲ' ಎಂದು

ಇದೆಲ್ಲಾ ಮುಗೀತು ಅಂದುಕೊಳ್ಳುವಷ್ಟರಲ್ಲಿಯೇ ಮೇ 14, 2021 ರಂದು ʼತೌತೇʼ ಚಂಡಮಾರುತ ಬಂದು ಬಡಿದಿತ್ತು. “ಅದರ ಅಲೆಗಳಿಗೆ ನಮ್ಮೆಲ್ಲಾ ಹಡಗುಗಳೂ ನಾಶ ಆದವು ಸಾರ್.‌ ಲಕ್ಷಾಂತರ ರುಪಾಯಿಗಳಷ್ಟು ನಷ್ಟ ಆಯ್ತ‌ ನಮಗೆ. ಆಗಲೂ ಸರಕಾರ ಒಂದಿಷ್ಟೂ ಸಹಾಯ ಮಾಡ್ಲಿಲ್ಲ. ಇದರ ಬಗ್ಗೆ ನಮಗೆಲ್ಲಾ ಮೀನುಗಾರರಿಗೆ ಇನ್ನೂ ಸಿಟ್ಟಿದೆ” ಅಂದರು ದಿಲೀಪ್. ದಿಲೀಪ್‌ ಅವರ 49 ವರ್ಷದ ಹೆಂಡತಿ, ಭಾರತಿ ಅವರು, ಸಸೂನ್‌ ಹಡಗುಕಟ್ಟೆಯಲ್ಲಿಯೇ ಸಗಟು-ಕೊಳ್ಳುಗರಿಗೆ ಮೀನುಗಳನ್ನು ಮಾರುವ ಕೆಲಸ ಮಾಡುತ್ತಿದ್ದರೆ (ನೋಡಿ: ಕೋಲಿ ಮಹಿಳೆಯರು: ಮೀನು, ಗೆಳೆತನ ಮತ್ತು ಬದಕುವ ಛಲ ), ಅವರ ಮೂವರು ಮಕ್ಕಳು ಕೂಡ ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. “ಅವರಂತೂ (ಸರಕಾರ) ಕೋಲಿ ಜನಾಂಗದ ಮೀನುಗಾರರಿಗೆ ಏನೂ ಮಾಡೋದಿಲ್ಲ ಬಿಡಿ” ಎನ್ನುತ್ತಾ, “ಆದರೆ ಕನಿಷ್ಟ ಇಂತಹ ಚಂಡಮಾರುತಗಳ ಸಮಯಗಳಲ್ಲಾದರೂ ಪರಿಹಾರ ಕೊಡಲೇಬೇಕು” ಎಂದರು ದಿಲೀಪ್.‌

ಉರಿಯುವ ಬೆಂಕಿಗೆ ಉರುವಲು ಕೊಟ್ಟಂತೆ, ಇದೆಲ್ಲದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ಮೀನುಗಳ ಲಭ್ಯತೆಯೂ ಕಡಿಮೆಯಾಗತೊಡಗಿದೆ. “ನಾವು ಸಣ್ಣವರಿದ್ದಾಗ ಮೀನುಗಳ ಬೆಲೆ ಕಡಿಮೆಯಿತ್ತಾದರೂ, ಹಡಗಿಗೆ ಹಾಕಲು ತರುತ್ತಿದ್ದ ಡೀಸೆಲ್‌ ಬೆಲೆಯೂ ಲೀಟರಿಗೆ ಇಪ್ಪತ್ತು ರೂಪಾಯಿಯಷ್ಟತ್ತು. ಆದರೆ ಈಗ, ಡೀಸೆಲ್‌ ಬೆಲೆ ನೂರು ರೂಪಾಯಿಯನ್ನೂ ದಾಟಿದೆಯಾದರೂ ಮೀನುಗಳು ಸಿಗುವುದೂ ಕಡಿಮೆಯಾಗಿದೆ” ಅಂದರು ದಿಲೀಪ್.‌

“ಮೀನುಗಾರರ ಬಲೆಗೆ ಸಿಗುವುದು ʼಸುರ್ಮೈʼ, ʼಪಾಂಪ್ರೆಟ್ʼ ಮತ್ತು ʼಸಾರ್ಡೈನ್‌ʼ ನಂತಹ ಅಷ್ಟೇನೂ ಜನಪ್ರಿಯವಲ್ಲದ ಮೀನುಗಳು ಮಾತ್ರ” ಎಂದರು ದಿಲೀಪ್. ಕೇಂದ್ರೀಯ ಸಮುದ್ರ ಮೀನುಗಳ ಸಂಶೋಧನಾ ಸಂಸ್ಥೆಯ ವರದಿಯಂತೆ, 2019 ರಲ್ಲಿ, ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಮಹಾರಾಷ್ಟ್ರದ ಹಡಗುಕಟ್ಟೆಗಳಲ್ಲಿ ಬರುವ ಮೀನಿನ ಪ್ರಮಾಣದಲ್ಲಿ ಶೇ. 32 ರಷ್ಟು ಇಳಿಕೆಯಾಗಿದೆಯಂತೆ. ಮುಂದುವರೆದು, ಆ ವರದಿಯು, ಈ ರೀತಿಯ ಇಳಿಕೆಗೆ ಆ ವರ್ಷದಲ್ಲಾದ ತೀವ್ರ ಅನಾಹುತಕಾರಿಯಾದ ಆರು ಚಂಡಮಾರುತಗಳೂ ಸೇರಿದಂತೆ, ಭಾರತದ ಸುತ್ತಮುತ್ತ ಉಂಟಾದ ಚಂಡಮಾರುತಗಳೇ ಕಾರಣ ಎಂದೂ ಹೇಳಿದೆ.

“ನಮ್ಮದು ಪೂರ್ತಿಯಾಗಿ ಪ್ರಕೃತಿಯನ್ನೇ ಅವಲಂಬಿಸಿದ ಜೀವನ ಕಣ್ರೀ. ಪ್ರಕೃತಿಯೇ ನಮ್ಮ ಪರವಾಗಿಲ್ಲದಿದ್ದರೆ, ನಮ್ಮ ಜೀವನ ಉಳಿಯುವುದೂ ಕಷ್ಟ, ಜೀವ ಉಳಿಯುವುದೂ ಕಷ್ಟ” ಎಂದು ನಿಟ್ಟುಸಿರಿಟ್ಟರು ದಿಲೀಪ್.‌

ಹೀಗೆ ಸಸೂನ್‌ ಹಡಗುಕಟ್ಟೆಯ ಮೀನುಗಾರರು ಚಂಡಮಾರುತಗಳು ಮತ್ತು ಕೋವಿಡ್‌ ಎರಡನ್ನೂ ಒಟ್ಟೊಟ್ಟಿಗೇ ಎದುರಿಸುತ್ತಿದ್ದಾರೆ.

PHOTO • Shraddha Agarwal

ಇಲ್ಲಿ ಮುಂಗಾರಿನ ಸಮಯದಲ್ಲಿ ಪ್ರತೀ ನಲವತ್ತು ನಿಮಿಷಗಳ ಸುತ್ತಿನಲ್ಲಿ ಅಂದಾಜು 400-500 ಕೆಜಿ ಯಷ್ಟು ಮೀನು ಸಿಗುತ್ತದೆ ಮತ್ತು 10-12 ಗಂಟೆಗಳ ಸಮಯದಲ್ಲಿ ಅಂತಹ ಹಲವಾರು ಸುತ್ತುಗಳನ್ನು ಹಾಕುತ್ತಾರೆ

PHOTO • Shraddha Agarwal

ಜೆಲ್ಲಿ ಮೀನುಗಳಿಂದ (Jelly fish) ತುಂಬಾ ಕೆಟ್ಟ ವಾಸನೆ ಬರುವುದರಿಂದ ಮತ್ತು ಭಾರತದಲ್ಲಿ ಅವುಗಳನ್ನು ಬಹುತೇಕ ಯಾರೂ ತಿನ್ನುವುದಿಲ್ಲವಾದ್ದರಿಂದ, ವಾಪಸ್ಸು ಸಮುದ್ರಕ್ಕೇ ಎಸೆಯಲಾಗುತ್ತದೆಂದು ಮೀನುಗಾರರು ಹೇಳುತ್ತಾರೆ

PHOTO • Shraddha Agarwal

34 ವರ್ಷದ ರಾಮನಾಥ್‌ ಕೋಲಿಯವರು ಬಲೆಯಲ್ಲಿ ಸಿಕ್ಕ ಸಮುದ್ರದ ಹಾವೊಂದನ್ನು ಕೈಯಲ್ಲಿ ಹಿಡಿದಿರುವುದು. ಹತ್ತು ವರ್ಷಗಳಿಗಿಂತಲೂ ಹಿಂದಿನಿಂದ ಮೀನುಗಾರಿಕೆ ನಡೆಸುತ್ತಿರುವ ಅವರು 'ನಾವು ಹಗಲು-ರಾತ್ರಿಯೆನ್ನದೆ ಕೆಲಸ ಮಾಡಬೇಕಾಗುತ್ತದೆ. ನಮಗೆ ಇಂತಿಷ್ಟೇ ಅನ್ನೋ ಸಮಯವೂ ಇಲ್ಲ ಮತ್ತು ನಿಗದಿತ ಆದಾಯವೂ ಇಲ್ಲ' ಎನ್ನುತ್ತಾರೆ

PHOTO • Shraddha Agarwal

49 ವರ್ಷದ ನಾರಾಯಣ ಪಾಟೀಲ್‌ ಅವರ ಮೂವರು ಹೆಣ್ಣು ಮಕ್ಕಳು ವಾಶಿ ಹವೇಲಿಯ ಜಿಲ್ಲಾ ಪರಿಷತ್ತಿನ ಶಾಲೆಯಲ್ಲಿ ಓದುತ್ತಿದ್ದಾರೆ ಮತ್ತು ಅವರ ಹೆಂಡತಿಯು ಗೃಹಿಣಿಯಾಗಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳಿಂದ ಮೀನುಗಾರಿಕೆಯಲ್ಲಿರುವ ಇವರು 'ನನ್ನ ಮಕ್ಕಳು ಮುಂದೆ ಯಾವತ್ತೂ ಈ ವೃತ್ತಿಗೆ ಬರುವುದು ಬೇಡ' ಅನ್ನುತ್ತಾರೆ

PHOTO • Shraddha Agarwal

ಮೀನುಗಾರರು ಇನ್ನೂ ಹೆಚ್ಚಿನ ಮೀನುಗಳನ್ನು ಎದುರುನೋಡುತ್ತಾ ಬೇರೆ ಜಾಗಗಳಿಗೆ ಹೋಗುತ್ತಿರುವುದು

PHOTO • Shraddha Agarwal

ರಾಮನಾಥ್‌ ಕೋಲಿಯವರು ನೀರಿನೊಳಕ್ಕೆ ಹಾರಿ ಬಲೆಯನ್ನು ಅರ್ಧಗಳನ್ನಾಗಿ ಹರಡಿಸುತ್ತಿರುವುದು. ಇದರಿಂದ ಮೀನುಗಳ ತೂಕವು ಎಲ್ಲಾಕಡೆ ಸಮವಾಗಿ ಹರಡಿ ಬಲೆಯನ್ನು ವಾಪಸ್ಸು ಹಡಗಿನೊಳಕ್ಕೆ ಎಳೆದುಕೊಳ್ಳುವಾಗ ಸುಲಭವಾಗುತ್ತದೆ

PHOTO • Shraddha Agarwal

ಮೀನುಗಳಿಂದ ತುಂಬಿದ ಬಲೆಯನ್ನು ಮೇಲಕ್ಕೆ ಎಳೆದುಕೊಳ್ಳುತ್ತಿರುವುದು. ಇದಕ್ಕೆ ಮೀನುಗಾರರು ತಮ್ಮೆಲ್ಲಾ ಕಸುವನ್ನು ಹಾಕಬೇಕಾಗುತ್ತದೆ

PHOTO • Shraddha Agarwal

ಬಲೆಯಲ್ಲಿ ಸಿಕ್ಕಿದ ಮೀನುಗಳನ್ನು ಹಡಗಿನ ಒಂದುಭಾಗದಲ್ಲಿ ಹಾಕುತ್ತಿರುವುದು

PHOTO • Shraddha Agarwal

ಹರೆಯದ ಹುಡುಗರನ್ನು ಹೊತ್ತ ಇನ್ನೊಂದು ಹಡಗು ಹತ್ತಿರದಲ್ಲೇ ಹಾಯುತ್ತಿರುವುದು

PHOTO • Shraddha Agarwal

ದಡದಿಂದ ತೀರಾ ದೂರ ಹೋಗದಂತೆ ಒಂದು ಸುತ್ತನ್ನು ಹಾಕಲು ಸುಮಾರು ನಲವತ್ತು ನಿಮಿಷ ಬೇಕಾಗುತ್ತದೆ. ಹಡಗು ವಾಪಸ್ಸು ದಡಕ್ಕೆ ಬಂದಾಗ ಕೆಲವು ಮೀನುಗಾರರು ಕಟ್ಟೆಯ ಮೇಲೆ ಹೋಗಿ ಹಡಗಿನಲ್ಲಿರುವ ಮೀನುಗಳನ್ನು ತುಂಬಲು ದೊಡ್ಡ ದೊಡ್ಡ ಪ್ಲಾಸ್ಟಿಕ್‌ ಬುಟ್ಟಿಗಳನ್ನು ಕೊಡುತ್ತಾರೆ

PHOTO • Shraddha Agarwal

ತಾವು ಮೊದಲಿನಿಂದಲೂ ಮೀನುಗಾರನಾಗಬೇಕೆಂದೇ ಬಯಸುತ್ತಿದ್ದ 26 ವರ್ಷದ ಗೌರವ್‌ ಕೋಲಿಯವರು ತಮ್ಮ 12ನೇ ತರಗತಿ ಮುಗಿದ ನಂತರ ಅವರ ತಂದೆ ದಿಲೀಪ್‌ ಕೋಲಿಯವರ ಜೊತೆಯೇ ಕೆಲಸ ಮಾಡುತ್ತಿದ್ದಾರೆ

PHOTO • Shraddha Agarwal

ಮೂರು ವರ್ಷದ ಹಿಂದೆ ಹತ್ತನೇ ತರಗತಿ ಮುಗಿಸಿದ 19 ವರ್ಷದ ಹರ್ಷದ್‌ ಕೋಲಿ (ಮುಂದುಗಡೆ, ಅರಿಶಿಣ ಬಣ್ಣದ ಟೀಶರ್ಟ್‌ ಹಾಕಿರುವ) ಅವಾಗಿನಿಂದ ಮೀನುಗಾರಿಕೆ ಶುರುಮಾಡಿದ್ದರು. ಅವರ ಕುಟುಂಬವು ವಾಶಿ ಹವೇಲಿಯಲ್ಲಿ ಸ್ವಂತ ಹಡಗನ್ನು ಹೊಂದಿದ್ದರೂ ಅಲ್ಲಿ ಕೊಳ್ಳುಗರು ಸಿಗುವುದಿಲ್ಲವಾದ್ದರಿಂದ ಇಲ್ಲಿಗೆ (ಮುಂಬಯಿಗೆ) ಬಂದಿರುವುದಾಗಿ ತಿಳಿಸಿದರು

PHOTO • Shraddha Agarwal

ಕೊಳ್ಳುಗರು ಮತ್ತು ಹರಾಜು ಹಾಕುವವರು ಕಟ್ಟೆಯ ಕಡೆಗೆ ಬರುವ ಮೀನುತುಂಬಿದ ಹಡಗುಗಳನ್ನು ಎದುರುನೋಡುತ್ತಾ ಕಾಯುತ್ತಿರುವುದು

PHOTO • Shraddha Agarwal

ಮಾರುವವರು ಬೇರೆ ಬೇರೆ ತರಹದ ಮೀನುಗಳನ್ನು ಮಂಜುಗಡ್ಡೆಗಳಲ್ಲಿ ಶೇಖರಿಸಿರುವುದು

PHOTO • Shraddha Agarwal

ಪಾಲ್‌ಗಾರ್ ಜಿಲ್ಲೆಯಿಂದ ಕೆಲವೊಬ್ಬ ಮೀನುಗಾರರು ಸಗಟು ಕೊಳ್ಳುಗರನ್ನು ಎದುರು ನೋಡುತ್ತಾ ಬಂದಿರುವುದು

PHOTO • Shraddha Agarwal

ಮೀನುಗಾರ್ತಿಯರು ಸಸೂನ್‌ ಹಡಗುಕಟ್ಟೆಯ ಬಯಲಿನಲ್ಲಿ ಸಣ್ಣ-ಸೀಗಡಿ ಮೀನುಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಿರುವುದು

PHOTO • Shraddha Agarwal

ಜೂನ್‌ ನಿಂದ ಆಗಸ್ಟ್‌ ವರೆಗೆ ಮಹಾರಾಷ್ಟ್ರದ ಪಾಲ್‌ಗಾರ್ ಜಿಲ್ಲೆಯಿಂದ ಸಸೂನ್‌ ಹಡಗುಕಟ್ಟೆಗೆ ಬರುವ ಕೆಲಸಗಾರರು, ಬಲೆಗಳನ್ನು ಹೊಲೆಯುವ ಮತ್ತು ರಿಪೇರಿ ಮಾಡುವ ಕೆಲಸದಿಂದ ದಿನಕ್ಕೆ 500-600 ರೂಪಾಯಿಯಷ್ಟು ದುಡಿಯುತ್ತಾರೆ

PHOTO • Shraddha Agarwal

ಕೋವಿಡ್-19‌ ಬರುವುದಕ್ಕೂ ಮುಂಚೆ ಮುಂಜಾನೆ 4 ಗಂಟೆಯಿಂದಲೇ ಮೀನುಗಾರರು, ಕೊಳ್ಳುಗರು, ಹಡಗಿನವರು ಮತ್ತು ಇತರೆ ಕೆಲಸಗಾರರಿಂದ ತುಂಬಿಹೋಗುತ್ತಿತ್ತು. ಆದರೆ ಮಾರ್ಚ್‌-2020ರ ಲಾಕ್ಡೌನ್‌ ಆದ ನಂತರ ಮೊದಲಿನಂತಹ ಜನಸಂದಣಿಯು ಕಾಣುತ್ತಲೇ ಇಲ್ಲ

ಅನುವಾದ: ಗೋವರ್ಧನ ಗುಗ್ಗಳದ

Shraddha Agarwal

Shraddha Agarwal is a Reporter and Content Editor at the People’s Archive of Rural India.

यांचे इतर लिखाण Shraddha Agarwal
Translator : Govardhana Guggalada

Govardhana Guggalada is doing research in Plant Science. He is interested in wild and native edible plant sources, likes to travel and is curious about village life.

यांचे इतर लिखाण Govardhana Guggalada