ಮಾರ್ಚ್ 22ರ “‘ಜನತಾ ಕರ್ಫ್ಯೂ”ವನ್ನು ನಿಭಾಯಿಸಿದ ಬಗ್ಗೆ ದೂರವಾಣಿಯಲ್ಲಿ ತಿಳಿಸುತ್ತಾ, “ನನ್ನ ಚೀಲದಲ್ಲಿ ಇಟ್ಟುಕೊಂಡಿದ್ದ ಬಾಳೆಯ ಹಣ್ಣನ್ನು ತಿಂದು ದಿನವನ್ನು ದೂಡಿದೆ”, ಎಂದರು ಸುರೇಂದ್ರ ರಾಂ. ಅಂದು ಮುಂಬೈನ ಬಹುತೇಕ ಅಂಗಡಿ ಹಾಗೂ ವ್ಯಾಪಾರಗಳು ಮುಚ್ಚಿದ್ದು, ಮನೆಗಳಲ್ಲಿನ ಜನರು ಹೊರಗೆ ಬರದೇ ಒಳಗೇ ಉಳಿದಾಗ, ಸುರೇಂದ್ರನಾಥ್ ಪರೇಲ್‍ನಲ್ಲಿನ ಟಾಟಾ ಮೆಮೊರಿಯಲ್ ಆಸ್ಪತ್ರೆಯ ಬಳಿಯೇ ಕುಳಿತರು.
37 ವರ್ಷದ ಸುರೇಂದ್ರ ಮುಖದ ಕ್ಯಾನ್ಸರಿಗೆ ತುತ್ತಾಗಿದ್ದಾರೆ.
ನಿಷೇಧಾಜ್ಞೆ ಜಾರಿಯಾಗುವುದಕ್ಕೂ ಮೊದಲ ಏಳು ದಿನಗಳಿಂದಲೂ ಕಾಲುದಾರಿಯೇ ಆತನ ‘ಮನೆಯಾಗಿತ್ತು’. ಸರ್ಕಾರದ ಬೆಂಬಲದೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ಒದಗಿಸುತ್ತ, ಧರ್ಮಾರ್ಥವಾಗಿ ನಿರ್ವಹಿಸಲ್ಪಡುತ್ತಿರುವ ದಕ್ಷಿಣ-ಮಧ್ಯ ಮುಂಬೈನ ಆಸ್ಪತ್ರೆಯ ಹೊರಗಿನ ಬೀದಿಗಳಲ್ಲಿರುವ ಈತ ಹಾಗೂ ಅನೇಕ ಇತರೆ ರೋಗಿಗಳು ಮನೆಯೊಳಗೇ ಇರಬೇಕೆಂಬ ನಿಷೇಧಾಜ್ಞೆಯನ್ನು ಹೇಗೆ ಪಾಲಿಸಿಯಾರು? ದೇಶಾದ್ಯಂತ ಅನೇಕ ಬಡ ಕುಟುಂಬಗಳು ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಾರೆ.
“ನನ್ನ ತಪಾಸಣೆ ನಡೆಸಲಾಯಿತು. ವೈದ್ಯರು ನಾಲ್ಕು ತಿಂಗಳ ತರುವಾಯ ಬರುವಂತೆ ತಿಳಿಸಿದ್ದಾರೆ”, ಎಂದರು ಸುರೇಂದ್ರ. ಆದರೆ ರೈಲು ಸೇವೆಗಳನ್ನು ರದ್ದುಗೊಳಿಸಿ, ನಂತರ ರಾಷ್ಟ್ರಾದ್ಯಂತದ ಸಂಪೂರ್ಣ ಲಾಕ್‍ಡೌನ್‍ನಿಂದಾಗಿ ಮಾರ್ಚ್ 25ರಿಂದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದ ಕಾರಣ, ಬಿಹಾರದ ಸಮಷ್ಟಿಪುರ ಜಿಲ್ಲೆಯ ಪೊಟಿಲಿಯ ಗ್ರಾಮದಲ್ಲಿನ ತನ್ನ ಮನೆಗೆ ತೆರಳಲು ಇವರಿಗೆ ಸಾಧ್ಯವಾಗುತ್ತಿಲ್ಲ. “21 ದಿನಗಳವರೆಗೆ ಎಲ್ಲವನ್ನೂ ಬಂದ್ ಮಾಡಲಾಗಿದೆಯೆಂದು ಅವರು ಹೇಳುತ್ತಿದ್ದಾರೆ. ನನಗೆ ಯಾವುದೇ ಸಮಾಚಾರವೂ ದೊರೆಯುತ್ತಿಲ್ಲ. ನನ್ನ ಸುತ್ತಲಿನ ಜನರನ್ನು ಕೇಳಿಯೇ ತಿಳಿದುಕೊಳ್ಳಬೇಕು. ಅಲ್ಲಿಯವರೆಗೂ ನಾನು ಈ ಕಾಲುದಾರಿಯಲ್ಲೇ ಇರಬೇಕೇ?”, ಎಂಬುದಾಗಿ ಸುರೇಂದ್ರ ಪ್ರಶ್ನಿಸಿದರು.
ಮಾರ್ಚ್ 20ರಂದು ನಾನು ಇವರನ್ನು ಸಂಧಿಸಿದಾಗ, ಕಿತ್ತಳೆ ಬಣ್ಣದ ಪ್ಲಾಸ್ಟಿಕ್ ಹಾಳೆಯ ಮೇಲೆ ನೆಲದಲ್ಲಿ ಕುಳಿತಿದ್ದ ಅವರು ತಮ್ಮ ಬಾಯಿಯ ಒಂದು ಪಾರ್ಶ್ವದಿಂದ ಬಾಳೆಹಣ್ಣುಗಳನ್ನು ತಿನ್ನುತ್ತಿದ್ದರು. ಎಡ ಮೂಗಿನ ಹೊಳ್ಳೆಯಲ್ಲಿ ಅವರಿಗೆ ಪೈಪನ್ನು ಅಳವಡಿಸಲಾಗಿತ್ತು. “ಆಹಾರವು ನನ್ನ ಗಂಟಲಿನಲ್ಲಿ ಇಳಿಯುವುದಿಲ್ಲ. ಹೀಗಾಗಿ ನನಗೆ ಪೈಪಿನ ಅವಶ್ಯಕತೆಯಿದೆ”, ಎಂದರವರು. ಹಾಳೆಯ ಮೇಲೆ ಕಪ್ಪು ವರ್ಣದ ಚೀಲವೊಂದಿದ್ದು ಅದರಲ್ಲಿ ತಮ್ಮ ಬಟ್ಟೆಗಳು, ವೈದ್ಯಕೀಯ ವರದಿಗಳು, ಔಷಧಿ ಮತ್ತು ಬಾಳೆಹಣ್ಣುಗಳನ್ನು ಅವರು ತುಂಬಿದ್ದರು.
ಕಾಲುದಾರಿಯ ಸುತ್ತಮುತ್ತ ಹಗಲು ಹೊತ್ತಿನಲ್ಲೂ ಇಲಿಗಳು ಸುಳಿಯುತ್ತಿದ್ದವು. ರೋಗಿಗಳ ಬಳಿ ಕೆಲವು ದಂಶಕ ಪ್ರಾಣಿಗಳು (rodents) ಸತ್ತುಬಿದ್ದಿದ್ದವು. ಸರಸರನೆ ಓಡುವ ಅನೇಕ ದೊಡ್ಡ ಇಲಿಗಳಿಂದಾಗಿ ರಾತ್ರಿಗಳು ದುಸ್ತರವಾಗಿದ್ದವು.










