ಪುಣೆಯ ಮುಲ್ಶಿ ತಾಲೂಕಿನ ಮೂವರು ಮಹಿಳೆಯರು ವಿವಾಹಿತ ಮಹಿಳೆಯ ಪತಿ ಅಥವಾ ಮಗನ ಮೇಲೆ ಯುವ ಮತ್ತು ಆಕರ್ಷಕ ಮಹಿಳೆಯ ವರ್ತನೆಯು ಬೀರುವ ಪ್ರಭಾವದ ಕುರಿತಾದ ಹಾಡುಗಳನ್ನು ಹಾಡಿದ್ದಾರೆ. ಅವರು ಅವಳನ್ನು ತಮ್ಮ ಸಂತೋಷಕ್ಕೆ ಕುತ್ತು ತರಬಲ್ಲವಳಂತೆ ಕಾಣುತ್ತಾರೆ
ಪುರುಷ ಪ್ರಧಾನ ಸಮಾಜವು ಕೇವಲ ಮಹಿಳೆಯರ ಮೇಲೆ ದಬ್ಬಾಳಿಕೆಯನ್ನಷ್ಟೇ ಮಾಡುವುದಿಲ್ಲ. ಅದು ಜೊತೆಗೆ ಮಹಿಳೆಯರನ್ನೇ ಮಹಿಳೆಯರ ವಿರುದ್ಧ ನಿಲ್ಲಿಸುತ್ತದೆ. ಬೀಸುಕಲ್ಲಿನ ಪದಗಳು ಗ್ರಾಮೀಣ ಸಮುದಾಯಗಳ ಮಹಿಳೆಯರ ವ್ಯಾಪಕ ಅನುಭವಗಳನ್ನು ಒಳಗೊಂಡಿವೆ, ಅಲ್ಲಿ ಪುರುಷಪ್ರಾಧಾನ್ಯತೆಯ ಚೌಕಟ್ಟು ಬದುಕಿನ ಪ್ರತಿಯೊಂದು ಅಂಶವನ್ನು ನಿರ್ದೇಶಿಸುತ್ತದೆ. ಹೆಣ್ಣು ಮಗು ಜನಿಸುವುದು ಪೋಷಕರಿಗೆ ಆಪತ್ತು ಎಂದು ಈ ಹಾಡುಗಳನ್ನು ಹಾಡುತ್ತಿರುವ ಮಹಿಳೆಯರು ಸಮಾಜದ ನಿಯಮಗಳನ್ನು ಪ್ರತಿಭಟಿಸಿ ಗೋಳಾಡುತ್ತಾರೆ. ಅವರ ಹಾಡುಗಳು, ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳು ಒಂದೇ ಮರದ ಕಿತ್ತಳೆಹಣ್ಣಿನಂತಿರುವಾಗ, ಅವರನ್ನು ನಡೆಸಿಕೊಳ್ಳುವ ರೀತಿ ಏಕೆ ಭಿನ್ನವಾಗಿರುತ್ತದೆ - ಮತ್ತು ಮಹಿಳೆ ನಿರ್ವಹಿಸುವ ಕೆಲಸಕ್ಕೆ ಏಕೆ ಯಾವುದೇ ಬೆಲೆ ಇಲ್ಲವೆಂದು ಪ್ರಶ್ನಿಸುತ್ತವೆ. ಆದರೂ ಈ ಹಾಡುಗಳಲ್ಲಿ ಹೆಣ್ಣಿಗೆ ಮದುವೆ ಬದುಕಿನ ಅಂತಿಮ ಗುರಿಯೆಂದೂ, ಅದೇ ಅವರ ಸಂತೋಷದ ಮಾರ್ಗವೆಂದೂ ಹೇಳುವ ಹಾಡುಗಳೂ ಇವೆ.
ಬೀಸುಕಲ್ಲಿನ ಪದಗಳು ಮಹಿಳೆಯರನ್ನು ಪರಸ್ಪರ ಸಂಪರ್ಕಿಸುವ ಮತ್ತು ವಿಭಜಿಸುವ, ಸಾಮಾಜಿಕ ವ್ಯವಸ್ಥೆಯನ್ನು ಪುನರುತ್ಪಾದಿಸುವ ಮತ್ತು ಪ್ರಶ್ನಿಸುವ ಮತ್ತು ಗಾಯಕರು ಮತ್ತು ಕೇಳುಗರ ಪೀಳಿಗೆಯನ್ನು ಮುಕ್ತಗೊಳಿಸುವ ಪರಿಸ್ಥಿತಿಗಳನ್ನು ಹೊಂದಿರುವ ಸಾಂಸ್ಕೃತಿಕ ಆಚರಣೆಗೆ ಉತ್ತಮ ಉದಾಹರಣೆಯಾಗಿವೆ. ಈ ಪರಿಸರದಲ್ಲಿಯೇ ಮಹಿಳೆಯರಲ್ಲಿ ಸ್ನೇಹ ಮತ್ತು ಸೋದರತ್ವದ ಪ್ರಜ್ಞೆಯನ್ನು ಆಚರಿಸಲಾಗುತ್ತದೆ - ಇಲ್ಲಿನ ಅನೇಕ ಹಾಡುಗಳಲ್ಲಿರುವಂತೆ.
ಅದಾಗ್ಯೂ, ಇಲ್ಲಿ ಮಹಿಳೆಯರ ನಡುವಿನ ಸ್ಪರ್ಧೆಯನ್ನು ಹೊರಗೆಡುವುವ ಮತ್ತು ಅವುಗಳನ್ನು ಪ್ರತಿಬಿಂಬಿಸುವ ಹಾಡುಗಳೂ ಈ ಬೀಸುಕಲ್ಲಿನ ಪದಗಳಲ್ಲಿವೆ. ಈ ಪೈಪೋಟಿಯನ್ನು ಗಂಡ ಅಥವಾ ಮಗನಂತಹ ಪುರುಷನ ಮೇಲೆ ತನ್ನ ಪ್ರಭಾವವನ್ನು ಹಂಚಿಕೊಳ್ಳುವ ಕುರಿತು ಹುಟ್ಟುವ ಪೈಪೋಟಿಯೆಂದು ಗುರುತಿಸಲಾಗುತ್ತದೆ. ಈ ಹಾಡುಗಳು ಮಹಿಳೆಯರ ಬದುಕು ಎಷ್ಟು ದುರ್ಬಲವೆನ್ನುವುದನ್ನು ಹೇಳುತ್ತವೆ. ಮತ್ತು ಅವರ ಬದುಕು ಗಂಡ, ಸಹೋದರರಂತಹ ಗಂಡಸರು ನೀಡುವ ಮಾನ್ಯತೆಯನ್ನು ಅವಲಂಬಿಸಿರುತ್ತದೆನ್ನುವುದನ್ನು ತಮ್ಮ ಹಾಡುಗಳಲ್ಲಿ ಹೇಳುತ್ತಾರೆ. ಇಲ್ಲಿ ನೀಡಲಾಗಿರುವ ಹಾಡುಗಳಲ್ಲಿಯೂ ಮಹಿಳೆಯ ಬದುಕು ಗಂಡ ಅಥವಾ ಮಗನಿಂದ ಪಡೆಯುವ ಮಾನ್ಯತೆಯನ್ನು ಅವಲಂಬಿಸಿರುತ್ತದೆ.
ಈ ಓವಿಗಳಲ್ಲಿ, ವಯಸ್ಸಾದ, ವಿವಾಹಿತ ಮತ್ತು ಈ ಕಾರಣಕ್ಕೆ ಗೌರವಾನ್ವಿತಳಾದ ಮಹಿಳೆಯನ್ನು ಕಿರಿಯ, ಅವಿವಾಹಿತ ಮಹಿಳೆಯ ಎದುರು ನಿಲ್ಲಿಸಲಾಗುತ್ತದೆ, ಅವಳನ್ನು ಅನುಮಾನದಿಂದ ನೋಡಲಾಗುತ್ತದೆ, ವಿಶೇಷವಾಗಿ ಅವಳು ಆಕರ್ಷಕ ಮುಕ್ತ ಸ್ವಭಾವದವಳು ಎನ್ನುವ ಕಾರಣಕ್ಕೆ. ಮೊದಲ ಮೂರು ಓವಿಗಳಲ್ಲಿ, ಒಬ್ಬ ಕಿರಿಯ ಮಹಿಳೆಯ ಮೇಲೆ ಅಸಭ್ಯ ವರ್ತನೆಯ ಆರೋಪವಿದೆ. ಅವಳ ಕ್ರಿಯೆಗಳನ್ನು ವಿವರಿಸಲು, ಈ ಪದ್ಯವು ಮರಾಠಿ ಗಾದೆಯನ್ನು ಸೂಚಿಸುತ್ತದೆ: "ಚಾಡಿ ಹೇಳುವ ಹೆಣ್ಣೊಬ್ಬಳು ಮಾಇನ ನೀರನ್ನು ಮನೆಯೊಳಗೆ ಇಳಿಯುವಂತೆ ಮಾಡಿದ್ದಾಳೆ." ಅವಳ ದುಷ್ಟ ಕೃತ್ಯಗಳು ಎಷ್ಟು ಎಂದು ಹೇಳಲಾಗುತ್ತದೆಯೆಂದರೆ, "ಒಂದು ಮಡಕೆ ನೀರು ಖಾಲಿಯಾಯಿತು... [ಮತ್ತು] ಮಹಿಳೆ ಆಮೆಯನ್ನು ಬಾವಿಯ ನೀರಿಗೆ ಜಾರುವಂತೆ ಮಾಡಿದಳು." ಈ ನುಡಿಗಟ್ಟುಗಳು ಇನ್ನೊಬ್ಬ ಮಹಿಳೆಯ ಸಂತೋಷವನ್ನು ನಾಶಪಡಿಸುವ ಅವಳ ನಡವಳಿಕೆಯ ಉದ್ದೇಶಪೂರ್ವಕ ಸ್ವರೂಪವನ್ನು ಸೂಚಿಸುತ್ತವೆ.






