ನಮ್ಮ ಕಥೆಯ ಕಥಾನಾಯಕನಾದ ಶಿವಾಜಿ ಥೋಮ್ರೆ ಹದಿಮೂರು ಎಕರೆ ಜಮೀನಿನ ಒಡೆಯ. ಹತ್ತಿ ಮತ್ತು ಜೋಳಗಳ ಬಿತ್ತನೆಗೆ ತಯಾರಾಗಿ ನಿಂತ ಥೋಮ್ರೆಯ ಜಮೀನಿನಲ್ಲಿ ಅಡ್ಡಾಡುತ್ತಿದ್ದ ನಮಗೆ ಜಮೀನಿನ ಒಂದು ಭಾಗದಲ್ಲಿ ಒಣಗಿದ ಕೆಲ ಮರಗಳ ಗುಂಪುಗಳು ಕಂಡಿದ್ದವು. ಇನ್ನು ಆ ಮರಗಳ ತಳಭಾಗವನ್ನು ನೋಡಿದರೆ ಅಲ್ಲಲ್ಲಿ ಅನಾಥವಾಗಿ ಬಿದ್ದ ಒಣನಿಂಬೆಗಳಂತಿದ್ದ ಹಣ್ಣುಗಳು. ಹೀಗೆ ಬಿದ್ದಿದ್ದ ಹಣ್ಣುಗಳಲ್ಲಿ ಒಂದನ್ನು ಎತ್ತಿ ``ಇದೋ ನೋಡಿ ಮೂಸಂಬಿ'' ಎಂದು ನಮಗೆ ತೋರಿಸಿದ ಶಿವಾಜಿ. ``ಮೂಸಂಬಿಯ ಒಂದು ಗಿಡಕ್ಕೆ ದಿನವೊಂದಕ್ಕೆ ಅರವತ್ತು ಲೀಟರ್ ನೀರಾದರೂ ಬೇಕು. ಇಲ್ಲಿಯ ಮೂಸಂಬಿಗಳಂತೂ ಸಂಪೂರ್ಣವಾಗಿ ಒಣಗಿಹೋಗಿವೆ'', ಎಂದಿದ್ದ ಆತ.
ಅಂದ ಹಾಗೆ ಶಿವಾಜಿ ಥೋಮ್ರೆಯ ಎರಡೆಕರೆ ಜಮೀನಿನ ಭಾಗದಲ್ಲಿ ಸದ್ಯ ನಾಲ್ಕುನೂರು ಮೂಸಂಬಿಯ ಮರಗಳಿವೆ. ಅಂದರೆ ದಿನವೊಂದಕ್ಕೆ ಇಪ್ಪತ್ತನಾಲ್ಕು ಸಾವಿರ ಲೀಟರುಗಳ ಅವಶ್ಯಕತೆಯು ಇಲ್ಲಿದೆ. ಮಳೆಗಾಲದಲ್ಲಿ ಉತ್ತಮ ಪ್ರಮಾಣದ ಮಳೆಯಾದರೆ ಸರಿ. ಚಳಿಗಾಲ ಮತ್ತು ಬೇಸಿಗೆಯಲ್ಲಂತೂ ಇಷ್ಟು ಪ್ರಮಾಣದ ನೀರು ಬೇಕೇ ಬೇಕು. ಹೀಗೆ ಈ ಬೆಳೆಗೆ ಬೇಕಾಗಿರುವ ನೀರಿನ ಪ್ರಮಾಣವನ್ನು ಗಮನಿಸಿದರೆ ಮೂಸಂಬಿಗಿಂತ ಉಳಿದ ಹಣ್ಣುಗಳೇ ವಾಸಿ ಎಂಬ ಅಭಿಪ್ರಾಯವು ಮೂಡಿದರೂ ತಪ್ಪಿಲ್ಲ. ಉದಾಹರಣೆಗೆ ದಾಳಿಂಬೆ ಬೆಳೆಯುವುದಾದರೆ ಬೇಸಿಗೆಯಲ್ಲೂ ಮರವೊಂದಕ್ಕೆ ಇಪ್ಪತ್ತು ಲೀಟರ್ ನೀರು ಒಂದು ದಿನಕ್ಕೆ ಸಾಕು.
ಅಸಲಿಗೆ ಶಿವಾಜಿಯ ತಂದೆ 2002 ರಲ್ಲಿ ಕರಾಜ್ಗಾಂವ್ ನಲ್ಲಿ ಈ ಮೂಸಂಬಿ ಗಿಡಗಳನ್ನು ನೆಟ್ಟಿದ್ದರು. ಸುಮಾರು ಸಾವಿರದ ಮುನ್ನೂರು ಜನಸಂಖ್ಯೆಯಿರುವ ಈ ಕರಾಜ್ಗಾಂವ್ ಮರಾಠಾವಾಡಾದ ಔರಂಗಾಬಾದ್ ನಗರದ ಹೊರಭಾಗದಲ್ಲಿದೆ. ಆಗ ಶಿವಾಜಿ ಇಪ್ಪತ್ತರ ತರುಣನಾಗಿದ್ದ. ``ಆಗ ನೀರೆಂಬುದು ಒಂದು ಸಮಸ್ಯೆಯೇ ಆಗಿರಲಿಲ್ಲ. ಮೂಸಂಬಿ ಬೆಳೆಯುವುದೆಂದರೆ ಆ ಕಾಲದಲ್ಲಿ ಒಂದು ಜಾಣ ಮತ್ತು ಲಾ¨ಭದಾಯಕ ನಡೆಯಾಗಿತ್ತು'', ಎನ್ನುತ್ತಾರೆ ಶಿವಾಜಿ. ಶಿವಾಜಿ ಥೋಮ್ರೆ ಹೇಳುವ ಪ್ರಕಾರ ಮೂಸಂಬಿಯ ಬೆಳೆಗಾಗಿ ಆ ಅವಧಿಯಲ್ಲಿ ಮಳೆಯನ್ನು ನೆಚ್ಚಿಕೊಳ್ಳಬಹುದಿತ್ತು. ಮೇಲಾಗಿ ಅವರ ಮನೆಯ ಬಾವಿಯಲ್ಲೂ ಕೂಡ ಆ ದಿನಗಳಲ್ಲಿ ಸಾಕಷ್ಟು ಪ್ರಮಾಣದ ನೀರಿತ್ತಂತೆ.
ಜಲ್ನಾದತ್ತ ಸಾಗುವ ಔರಂಗಾಬಾದ್ ಹೆದ್ದಾರಿಯುದ್ದಕ್ಕೂ ನೋಡಿದರೆ ಸುಮಾರು ಅರವತ್ತು ಕಿಲೋಮೀಟರುಗಳ ಬೆಲ್ಟ್ ನಲ್ಲಿ ಬರುವ ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಮೂಸಂಬಿ ತೋಟಗಳನ್ನು ಸಾಮಾನ್ಯವಾಗಿ ಕಾಣಬಹುದು. ಈ ಎಲ್ಲಾ ಮರಗಳೂ ಕೂಡ 2000 ಇಸವಿಯ ಮೊದಲ ಭಾಗದಲ್ಲಿ ನೆಟ್ಟಲ್ಪಟ್ಟಂಥವುಗಳು. ದೌರ್ಭಾಗ್ಯದ ಸಂಗತಿಯೆಂದರೆ ಹೀಗೆ ಮೂಸಂಬಿ ಮರಗಳನ್ನು ನೆಟ್ಟು ಬೆಳೆಸಿದ ಎಲ್ಲಾ ತೋಟಗಳ ಮಾಲೀಕರೂ ಕೂಡ ಸದ್ಯ ನಷ್ಟದಲ್ಲೇ ದಿನತಳ್ಳುತ್ತಿದ್ದಾರೆ.
ಮೂಸಂಬಿಯನ್ನು ಬೆಳೆಯುವುದೆಂದರೆ ಸುಲಭದ ಮಾತೇನೂ ಅಲ್ಲ. ಹಣ್ಣುಗಳನ್ನು ಬಿಡಲು ಶುರುವಾಗುವ ಮುನ್ನದ ನಾಲ್ಕೈದು ವರ್ಷಗಳ ಕಾಲ ಈ ಮರಗಳಿಗೆ ಉತ್ತಮ ಆರೈಕೆಯ ಅವಶ್ಯಕತೆಯಿರುತ್ತದೆ. ಈ ಹಂತವನ್ನು ದಾಟಿಯಾಯಿತು ಅಂದರೆ ಮುಂದಿನ ಇಪ್ಪತ್ತೈದರಿಂದ ಮೂವತ್ತು ವರ್ಷಗಳ ಕಾಲ ವರ್ಷಕ್ಕೆರಡು ಬಾರಿ ಫಲಗಳು ಸಿಗುವುದು ಖಚಿತ. ಆದರೆ ದುರಾದೃಷ್ಟವೆಂಬಂತೆ ಶಿವಾಜಿಗೆ ಮಾತ್ರ ಇಂಥಾ ಫಲಿತಾಂಶಗಳು ದೊರಕಿರಲಿಲ್ಲ. ಶಿವಾಜಿಯ ತೋಟಗಳಲ್ಲಿ ಮೂಸಂಬಿಗಳು ದೊರೆತಿದ್ದು ನಾಲ್ಕು ವರ್ಷಗಳ ಕಾಲ ಮಾತ್ರ (2006-2010).




