ಎಂ. ಕರುಪ್ಪಯ್ಯ ತಾನು ಕೊಂಬು ನುಡಿಸುತ್ತಿರುವಾಗಲೇ ಸಾಯಬೇಕೆಂದು ಬಯಸುತ್ತಾರೆ. ಈ ಕೊಂಬು ಎನ್ನುವುದು ಐತಿಹಾಸಿಕವಾಗಿ ಯುದ್ಧದ ಪ್ರಾರಂಭವನ್ನು ಘೋಷಿಸಲೆಂದು ಊದುವ ದೊಡ್ಡ ದನಿಯ ಗಾಳಿ ವಾದ್ಯ. ಇದೊಂದು ರೀತಿಯಲ್ಲಿ ಸಂಗೀತಕ್ಕಾಗಿ ಸಾಯುವುದೇ ಆಗಿದೆ. ಆದರೆ ಹಿತ್ತಾಳೆ ಅಥವಾ ಕಂಚಿನಿಂದ ಮಾಡಿದ ಮತ್ತು ಆನೆಯ ಸೊಂಡಿಲಿನ ಆಕಾರದಲ್ಲಿರುವ ಈ ಕೊಂಬನ್ನು ನುಡಿಸುತ್ತಾ ಪ್ರಪಂಚದಿಂದ ನಿರ್ಗಮಿಸಲು ಕರುಪ್ಪಯ್ಯ ಬಯಸುವುದು ಈ ಕಾರಣಕ್ಕಲ್ಲ.
49 ವರ್ಷದ ಕರುಪ್ಪಯ್ಯನವರ ಪಾಲಿಗೆ ಕೊಂಬು ಒಂದು ಮಹಾನ್ ಕಲಾ ಪ್ರಕಾರ. ಮತ್ತು ಅವರು ನಾಲ್ಕನೇ ತಲೆಮಾರಿನ ಕಲಾವಿದ, ಮದುರೈನಲ್ಲಿರುವ ತನ್ನ ಹಳ್ಳಿಯಲ್ಲಿ ಜೀವನಕ್ಕಾಗಿ ಸಂಪಾದಿಸಲು ಅವರು ಬಲವಂತವಾಗಿ ಆಟೊರಿಕ್ಷಾಕ್ಕಿಂತ ವಾದ್ಯಕ್ಕೆ ಹೆಚ್ಚು ಅಂಟಿಕೊಂಡಿದ್ದಾರೆ.
ಸುಮಾರು ಮೂರು ದಶಕಗಳ ಹಿಂದೆ, ಈ ಕಲೆ “ಉನ್ನತ” ರೂಪದಲ್ಲಿತ್ತು ಎಂದು ಕರುಪ್ಪಯ್ಯ ಹೇಳುತ್ತಾರೆ. 1991ರಲ್ಲಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರೆದುರು ನುಡಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. "ಅಂದು ಅವರು ಕೊಂಬಿನ ದನಿಗೆ ಮರುಳಾಗಿದ್ದರು! ನಮ್ಮನ್ನು ಇನ್ನೊಮ್ಮೆ ಬಾರಿಸುವಂತೆ ಕೇಳಿಕೊಂಡರು"
ಆದರೆ ಇತ್ತೀಚಿನ ದಿನಗಳಲ್ಲಿ, ಅವರಿಗೆ ಮತ್ತು ತಿರುಪರಂಕುಂಡ್ರಮ್ ಬ್ಲಾಕ್‌ನಲ್ಲಿರುವ ಅವರ ಗ್ರಾಮವಾದ ಮೇಲಕುಯಿಲ್ಕುಡಿಯಲ್ಲಿರುವ ಇತರ ಕೊಂಬು ಕಲಾವಿದರಿಗೆ ಕೆಲಸವು ತೀರಾ ಕಡಿಮೆಯಾಗಿದೆ. ಈಗಾಗಲೇ ಕ್ಷೀಣಿಸುತ್ತಿದ್ದ ಈ ಲಯಬದ್ಧ ಕಲಾ ಪ್ರಕಾರವು ಪ್ರಸ್ತುತ ಪಾಪ್ ಸಂಸ್ಕೃತಿಯಿಂದ ಸಾಕಷ್ಟು ಮರೆಯಾಗುತ್ತಿದೆ, ಜೊತಗೆ ಮಾರ್ಚ್ 2020ರಿಂದ ಕೋವಿಡ್ ಲಾಕ್‌ಡೌನ್‌ಗಳಲ್ಲಿ ಬಹಳವಾಗಿ ದುರ್ಭರ ದಿನಗಳನ್ನು ಕಂಡಿತು. ಕಲಾವಿದರು ಕೆಲಸ ಮತ್ತು ಹಣದ ಕೊರತೆಯನ್ನು ಎದುರಿಸುತ್ತಿದ್ದಾರೆ.
ಕರುಪ್ಪಯ್ಯನವರಿಗೆ ದೇವಾಲಯದ ಉತ್ಸವ, ಸಾರ್ವಜನಿಕ ಸಮಾರಂಭ ಅಥವಾ ಸಾವಿನ ಸಮಯದಲ್ಲಿ ಕೆಲಸ ಸಿಕ್ಕಿದರೆ, ಅವರಿಗೆ ಒಂದು ಕೆಲಸಕ್ಕೆ 700ರಿಂದ 1000 ರೂ. ಸಿಗುತ್ತದೆ. “ಕಳೆದ ವರ್ಷದಿಂದ, ಲಾಕ್‌ಡೌನ್ ಕಾರಣ ನಾವು ಅಳಗರ್ ಕೋಯಿಲ್ ತಿರುವಿಳಾದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ, ನಾವು ಸತತವಾಗಿ ಎಂಟು ದಿನ ಕೆಲಸ ಮಾಡುತ್ತಿದ್ದೆವು.” ಮಧುರೈನಿಂದ 20 ಕಿ.ಮೀ ದೂರದಲ್ಲಿರುವ ಅಳಗರ್ ಕೋಯಿಲ್ ದೇವಸ್ಥಾನದಲ್ಲಿ ಪ್ರತಿವರ್ಷ (ಏಪ್ರಿಲ್-ಮೇ) ಆಚರಿಸಲಾಗುವ ಈ ಉತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಕೊಂಬು ಕಲಾವಿದರು ಅಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ.
“ಎಲ್ಲರೂ ಕೊಂಬು ನುಡಿಸಲು ಸಾಧ್ಯವಿಲ್ಲ. ಇದು ಸಾಕಷ್ಟು ಕೌಶಲ್ಯವನ್ನು ಬಯಸುತ್ತದೆ” ಎಂದು ಜಾನಪದ ಕಲಾವಿದರು ಮತ್ತು ಕಲೆಗಳನ್ನು ಬೆಂಬಲಿಸುವ ಚೆನ್ನೈನ ಸಂಘಟನೆಯಾದ ಆಲ್ಟರ್ನೇಟಿವ್ ಮೀಡಿಯಾ ಸೆಂಟರ್ (ಎಎಂಸಿ) ಸಂಸ್ಥಾಪಕ ಆರ್.ಕಾಳೀಶ್ವರನ್ ಹೇಳುತ್ತಾರೆ. ವಾದ್ಯವನ್ನು ಕಾರ್ಯಕ್ರಮದ ಪ್ರಾರಂಭದಲ್ಲಿ ನುಡಿಸಲಾಗುತ್ತದೆ, ಮತ್ತು ಅದರ ನಂತರ ನಡು ನಡುವೆ ನುಡಿಸಲಾಗುತ್ತದೆ, ಆದರೆ ನಿರಂತರವಾಗಿ ನುಡಿಸಲಾಗುವುದಿಲ್ಲ. ಆದ್ದರಿಂದ ಕಲಾವಿದರು ಸಾಮಾನ್ಯವಾಗಿ 15 ನಿಮಿಷಗಳ ಕಾಲ ನುಡಿಸುತ್ತಾರೆ, ಐದು ನಿಮಿಷಗಳ ಕಾಲ ವಿಶ್ರಾಂತಿ ಪಡೆಯುತ್ತಾರೆ ನಂತರ ಮತ್ತೆ 15 ನಿಮಿಷಗಳ ಕಾಲ ನುಡಿಸುತ್ತಾರೆ." ವಿಶಿಷ್ಟವಾಗಿ, ಕಲಾವಿದ ಬಹಳ ಆಳವಾದ ಉಸಿರನ್ನು ಎಳೆಯುತ್ತಾನೆ ಮತ್ತು ಅದರೊಳಗೆ [ಕೊಂಬು] ಊದುತ್ತಾನೆ." ಉಸಿರಾಟದ ಬಗ್ಗೆ ಅವರಿಗಿರುವ ಪಾಂಡಿತ್ಯ ಅದ್ಭುತ, ಸುಮಾರು 100 ವರ್ಷ ವಯಸ್ಸಿನ ಕಲಾವಿದರು ಈಗಲೂ ಇದ್ದಾರೆ ಎಂದು ಕಾಳೀಶ್ವರನ್ ಹೇಳುತ್ತಾರೆ.











