ಐವತ್ತು ಚಿಲ್ಲರೆ ವಯಸ್ಸಿನ ಪಿಲಿ ಪಾರ್ಧಿ ಎಂಬ ಮಹಿಳೆಯೊಬ್ಬಳು ಕಸ್ತೂರ್ಬಾ ರಸ್ತೆಯ ಹೋಟೇಲೊಂದರ ಹೊರಭಾಗದಲ್ಲಿ ಗ್ರಾಹಕನೊಬ್ಬನ ಬರುವಿಕೆಗಾಗಿ ಕಾಯುತ್ತಿದ್ದಾಳೆ. ಅದು ಮುಂಜಾನೆಯ ಒಂಭತ್ತರ ಸಮಯ. ಹೋಟೇಲಿನ ಬಹಳಷ್ಟು ಚೆಕೌಟ್ ಗಳು ಶುರುವಾಗುವುದು ಈ ಸಮಯದಲ್ಲೇ. ಪಿಲಿಯ ಸೊಸೆಯಾದ ಅರುಣಾ ಕೂಡ ಆಕೆಯ ಜೊತೆಯಲ್ಲಿದ್ದಾಳೆ. ಹೀಗೆ ಮಥೇರನ್ ನಲ್ಲಿ ಪಿಲಿ, ಅರುಣಾ ಮತ್ತು ಪಿಲಿಯ ಮಗ ಈ ಮೂವರೂ ಸೇರಿ ಪೋರ್ಟರ್ ಗಳ ಕೆಲಸವನ್ನು ಮಾಡುತ್ತಿದ್ದಾರೆ.
ಜಯಾ ಪೇಢ್ಕರ್ ಎಂಬ ಮಹಿಳೆಯೂ ಕೂಡ ಮಾಡುತ್ತಿರುವುದು ಇದನ್ನೇ. ಉಳಿದ ಮಹಿಳೆಯರಂತೆಯೇ ಮೂವತ್ತು ಚಿಲ್ಲರೆ ವಯಸ್ಸಿನ ಜಯಾ ಕೂಡ ನಿತ್ಯವೂ 10-40 ಕಿಲೋಗಳಷ್ಟು ತೂಕದ ಸಾಮಾನು ಸರಂಜಾಮುಗಳನ್ನು ತಲೆಯ ಮೇಲೆ ಹೊತ್ತು ದಿನಕ್ಕೆ 3-4 ಬಾರಿ ನಗರದ ಹೋಟೇಲುಗಳಿಂದ ದಸ್ತೂರಿ ಪಾರ್ಕಿಂಗ್ ಜಾಗದ ನಡುವೆ ಓಡಾಡಿಕೊಂಡಿರುತ್ತಾಳೆ. ಮಥೇರನ್ನಿನ ಮುಖ್ಯ ಮಾರುಕಟ್ಟೆಯಿಂದ ಸುಮಾರು 3.5 ಕಿಲೋಮೀಟರುಗಳ ದೂರದಲ್ಲಿರುವ ಈ ಜಾಗವು ಹಿಲ್ ಸ್ಟೇಷನ್ನಿನಲ್ಲಿರುವ ಕೆಲ ಹೋಟೇಲುಗಳಿಂದಲೂ ಸಾಕಷ್ಟು ದೂರದಲ್ಲಿದೆ.
ಮಥೇರನ್ ನಲ್ಲಿರುವ ಮತ್ತೊಬ್ಬ ಪೋರ್ಟರ್ ಆದ ಲಕ್ಷ್ಮಿ ಪಾರ್ಧಿ ಇಂತಹ ಪ್ರತೀ ಓಡಾಟದಲ್ಲೂ ಗ್ರಾಹಕರಿಂದ 250-300 ರೂಪಾಯಿಗಳನ್ನು ಪಡೆಯುತ್ತಾರೆ. ಪ್ರವಾಸಿಗರು ಸಾಮಾನ್ಯವಾಗಿ ಹೆಚ್ಚಿರುವ ವಾರಾಂತ್ಯದ ದಿನಗಳಲ್ಲಿ ಇವರಿಗೆ ದಿನಕ್ಕೆ 3-4 ಪ್ರಯಾಣಗಳು ನಸೀಬಾಗುತ್ತದಂತೆ. ಇತರ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆಯಂತೆಯೇ ಇವರುಗಳು ಹೊರುವ ಭಾರವೂ ಕೂಡ ಕಡಿಮೆಯಾಗುತ್ತದೆ. ಅಂತೆಯೇ ಈ ಸೇವೆಯ ದರಗಳೂ ಕೂಡ. ಈ ದಿನಗಳಲ್ಲಿ ಒಂದು ಪ್ರಯಾಣಕ್ಕೆ 200 ರೂಪಾಯಿಗಳಷ್ಟಿನ ಆದಾಯವು ಮಾತ್ರ ಇವರಿಗೆ ದಕ್ಕುತ್ತದೆ.
ಮಹಾರಾಷ್ಟ್ರದ ರಾಯಗಢ್ ಜಿಲ್ಲೆಯಲ್ಲಿರುವ ಜನಪ್ರಿಯ ಪ್ರವಾಸಿ ತಾಣವಾದ ಮಥೇರನ್ ನಲ್ಲಿ ದಸ್ತೂರ್ ಪಾರ್ಕಿಂಗ್ ಪ್ರದೇಶದ ನಂತರ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅಂದರೆ ಪ್ರವಾಸಿಗರು ಇಲ್ಲಿಂದ/ಇಲ್ಲಿಗೆ ತಮ್ಮ ಹೋಟೇಲುಗಳಿಂದ/ಗಳಿಗೆ ಸಾಮಾನುಗಳನ್ನು ಒಂದೋ ಹೊತ್ತೊಯ್ಯಬೇಕು ಅಂಥವಾ ಪಿಲಿ, ಲಕ್ಷ್ಮಿ, ಜಯಾರಂತಹ ಪೋರ್ಟರುಗಳ ಸಹಾಯವನ್ನು ಪಡೆಯಬೇಕು.
ಮಥೇರನ್ ನಿಂದ ಸನಿಹದಲ್ಲಿರುವ ರೈಲ್ವೇ ನಿಲ್ದಾಣವೆಂದರೆ ನೇರಲ್. ಈ ಹಿಂದೆ ನಡೆದಿದ್ದ ಎರಡು ಹಳಿತಪ್ಪಿದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮಥೇರನ್ ಮತ್ತು ನೇರಲ್ ಗಳ ನಡುವೆ ಇದ್ದ ನ್ಯಾರೋ ಗೇಜ್ ರೈಲು ಸೇವೆಗಳನ್ನು ಮೇ 2016 ರಿಂದ ಸ್ಥಗಿತಗೊಳಿಸಲಾಗಿತ್ತು. ಇನ್ನು ಕಾರುಗಳ ಪ್ರವೇಶಕ್ಕೆ ಹೇರಿದ ನಿರ್ಬಂಧದಿಂದಾಗಿ ಪ್ರವಾಸಿಗರ ಸಾಮಾನುಗಳನ್ನು ಹೊತ್ತೊಯ್ಯಲು ಈಗ ದಸ್ತೂರಿಯಲ್ಲಿ ಕುದುರೆಗಳ, ಕುದುರೆ ಪಾಲಕರ, ಎಳೆದೊಯ್ಯಬೇಕಾದ ರಿಕ್ಷಾಗಳ ಮತ್ತು ಹೆಡ್ ಪೋರ್ಟರುಗಳ ಸೈನ್ಯವು ಸಜ್ಜಾಗಿ ನಿಂತಿದೆ.ಇಲ್ಲಿರುವ ಎಲ್ಲಾ ಪೋರ್ಟರುಗಳೂ ಕೂಡ ಮಹಾರಾಷ್ಟ್ರ ಪೋಲೀಸ್ ಇಲಾಖೆಯಿಂದ ಕೊಡಲ್ಪಟ್ಟ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಪ್ರತೀ ಗುರುತಿನ ಚೀಟಿಯು ಒಂದು ಕ್ರಮಸಂಖ್ಯೆಯನ್ನು ಹೊಂದಿರುತ್ತದೆ. ಲಕ್ಷ್ಮಿಯ ಮಗ ಹೇಳುವ ಪ್ರಕಾರ ಮಥೇರನ್ ನಲ್ಲಿ ಸುಮಾರು 300 ಜನ ಪೋರ್ಟರುಗಳಿದ್ದಾರಂತೆ. ಅದರಲ್ಲಿ 100 ರಷ್ಟು ಮಂದಿ ಮಹಿಳೆಯರೇ ಇದ್ದಾರೆ. ಅಂದಹಾಗೆ ಲಕ್ಷ್ಮಿಯ ಗುರುತಿನ ಚೀಟಿಯ ಸಂಖ್ಯೆ 90. ಮಥೇರನ್ ಅನ್ನು ತಲುಪಲು ದಸ್ತೂರಿಯ ಟಿಕೆಟ್ ಕೌಂಟರಿನಿಂದ ಪ್ರವಾಸಿಗರು ಟಿಕೆಟ್ಟುಗಳನ್ನು ಪಡೆದು ಪ್ರವೇಶಿಸಬೇಕಾಗಿರುವುದರಿಂದ ಕೌಂಟರಿನ ಮುಂಭಾಗದಲ್ಲಿ ತನ್ನ ಸರದಿಗಾಗಿ ಕಾಯುತ್ತಿರುತ್ತಾಳೆ ಲಕ್ಷ್ಮಿ. ಕೌಂಟರಿನಲ್ಲಿರುವ ವ್ಯಕ್ತಿಯೊಬ್ಬ ಲಕ್ಷ್ಮಿಯ ಸಂಖ್ಯೆಯು ಹತ್ತಿರ ಬರುತ್ತಿದ್ದಂತೆಯೇ ಅವಳನ್ನು ಕರೆಯುತ್ತಾನೆ. ಇನ್ನು ಕೆಲವೊಮ್ಮೆ ಗ್ರಾಹಕರೇ ಅವಳನ್ನು ಸ್ವತಃ ಕರೆಯುವುದೂ ಉಂಟು.
ಇಲ್ಲಿರುವ ಬಹಳಷ್ಟು ಪೋರ್ಟರುಗಳು ಅಕ್ಕಪಕ್ಕದ ಹಳ್ಳಿಗಳ ನಿವಾಸಿಗಳು. ದಸ್ತೂರಿಯಿಂದ ಸುಮಾರು 4.5 ಕಿಲೋಮೀಟರುಗಳಷ್ಟು ದೂರದಲ್ಲಿರುವ ಜುಮ್ಮಾಪಟ್ಟಿ ಬಸ್ತಿ ಪ್ರದೇಶದಿಂದ ಲಕ್ಷ್ಮಿ ನಿತ್ಯವೂ ಮಥೇರನ್ ವರೆಗೆ ಬರುತ್ತಾಳೆ. ಪಿಲಿ ನೆಲೆಸಿರುವ ಹಳ್ಳಿಯು ಇಲ್ಲಿಂದ 3 ಕಿಲೋಮೀಟರುಗಳ ದೂರದಲ್ಲಿದೆ.
ಜಯಾ ಮಥೇರನ್ ನ ಹೋಟೇಲೊಂದರ ಸಿಬ್ಬಂದಿಗಳಿಗೆ ಕೊಡಲಾಗುವ ಕ್ವಾರ್ಟರ್ಸ್ ಒಂದರಲ್ಲಿ ವಾಸವಾಗಿದ್ದಾಳೆ. ಈ ಹೋಟೇಲಿನಲ್ಲಿ ಜಯಾ ಮತ್ತು ಆಕೆಯ ನಾದಿನಿ ಪಾತ್ರೆಗಳನ್ನು ತೊಳೆಯುವ ಕೆಲಸ ಮಾಡುತ್ತಾ ತಿಂಗಳಿಗೆ 4000 ರೂಪಾಯಿಗಳಷ್ಟು ಜೊತೆಯಾಗಿ ಸಂಪಾದಿಸುತ್ತಾರೆ. ಜಯಾಳ ಕುಟುಂಬವು ಕರ್ಜತ್ ಬಳಿಯ ತಿಪಾಚಿವಾಡಿ ಎಂಬ ಬಸ್ತಿಯಲ್ಲಿ ನೆಲೆಸಿದೆ. ಜಯಾ ಈ ಕುಟುಂಬದ ಏಕೈಕ ದುಡಿಯುವ ಕೈಯೂ ಹೌದು. ಹೋಟೇಲಿನಲ್ಲಿ ಮುಂಜಾನೆಯ ಪಾತ್ರೆಗಳನ್ನು ತೊಳೆದು ಮುಗಿಸಿದ ನಂತರ ಮಧ್ಯಾಹ್ನದ ವೇಳೆಗಳಲ್ಲಿ ಹೆಡ್ ಪೋರ್ಟರ್ ಆಗಿ ಎರಡೋ ಮೂರೋ ಪ್ರಯಾಣಗಳನ್ನು ಮಾಡಿ ಕೊಂಚ ಹೆಚ್ಚಿನ ಹಣವನ್ನು ಸಂಪಾದಿಸುವ ಪ್ರಯತ್ನ ಆಕೆಯದ್ದು.