ಗಣೇಶ್ ಸೊರೆನ್ ಅವರ ಗುಬ್ಗುಬಿ ಬುಡಕಟ್ಟು ಜನಾಂಗಕ್ಕೆ ಮತ್ತು ಖೋಮೋಕ್ನ ಪೂರ್ವಜರಿಗೆ ಸೇರಿದ್ದು, ಇದು ಬಂಗಾಳಿ ಜಾನಪದ ಸಂಗೀತದ ಜನಪ್ರಿಯ ಸಾಧನವಾಗಿದೆ. ಅವರು ಅದನ್ನು ಧೋಲ್ (ಡ್ರಮ್) ಅನ್ನು ಬಳಸಿ ಒಂದಿಷ್ಟು ವಿಶಿಷ್ಟವಾಗಿ ತಯಾರಿಸಿದ್ದಾರೆ, ಅದನ್ನು ತಯಾರಿಸಲು ಅವರ ಮಗನ ಆಟಿಕೆಗಳಲ್ಲಿ ಒಂದನ್ನು ಬಳಸಿದ್ದಾರೆ. ಅದರ ರಾಗವು, ಅವರ ಮಗನ ಮುಗ್ಧ ನಗುವನ್ನು ನೆನಪಿಸಿದರೆ ಅದರ ಸದ್ದು ಕಾಡಿನ ನೆನಪನ್ನು ತರುತ್ತದೆ ಎನ್ನುತ್ತಾರೆ ಗಣೇಶ್. "ನನ್ನ ಮನಸ್ಸನ್ನು ಪ್ರಫುಲ್ಲವಾಗಿಡಲು ನಾನು ಈಗ 15 ವರ್ಷಗಳಿಂದ ಎರಡೂ ವಾದ್ಯಗಳನ್ನು ನುಡಿಸುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ. "ದಿನದ ಶ್ರಮದ ಕೆಲಸ ಮುಗಿಸಿದ ನಂತರ ನಾನು ಪ್ರತಿ ಸಂಜೆ ಅವುಗಳನ್ನು ನುಡಿಸುತ್ತಿದ್ದೆ ಮತ್ತು ಜನರು ಕೇಳಲು ಬರುತ್ತಿದ್ದರು. ಆದರೆ ಇಂದು ಅವರಿಗೆ ಮನರಂಜನೆಯ ಹಲವು ಆಯ್ಕೆಗಳಿವೆ ಹೀಗಾಗಿ ಈ ಹಳೆಯ ಸಹಜೀವಿಯ ಸಂಗೀತವನ್ನು ಯಾರೂ ಕೇಳಲು ಬಯಸುವುದಿಲ್ಲ.”
ಹಳ್ಳಿಯ ಅನೇಕ ಪುರುಷರು ಕಟ್ಟಡ ಕಾರ್ಮಿಕರಾಗಿ ಅಥವಾ ವಿವಿಧ ಪಟ್ಟಣಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಅವರಲ್ಲಿ ಕೆಲವರು ಈಗಲೂ ಬನಮ್ ವಾದ್ಯವನ್ನು ತಮ್ಮೊಂದಿಗೆ ಒಯ್ಯುತ್ತಾರೆ. ಆದರೆ ಈಗಿನವರು ಈ ಸಂಗೀತ ಸಂಪ್ರದಾಯವನ್ನು ಕಲಿಯಲು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎಂದು ಗಣೇಶ್ ಮತ್ತು ಹೊಪೊನ್ ಹೇಳುತ್ತಾರೆ. "ಈ ವಿಶಿಷ್ಟ ಧ್ವನಿಯನ್ನು ಸೃಷ್ಟಿಸಬಲ್ಲ ಜ್ಞಾನ ಮತ್ತು ಕರಕುಶಲತೆ ಹೊಂದಿರುವವರು ಹಳ್ಳಿ ಮತ್ತು ಸಮುದಾಯದಲ್ಲಿ ಕೆಲವೇ ಜನರು ಉಳಿದಿದ್ದಾರೆ" ಎಂದು ಹೊಪೊನ್ ಹೇಳುತ್ತಾರೆ.
"ನಮ್ಮ ಸ್ಥಳೀಯ ಶಾಲೆಯಲ್ಲಿ ಕೆಲವು ಉತ್ಸಾಹಿ ವಿದ್ಯಾರ್ಥಿಗಳು ಇರಬಹುದು, ಅಲ್ಲಿ ಕಲಿಸಲು ಸಾಧ್ಯವಾಗುತ್ತದೆ" ಎಂದು ಗಣೇಶ್ ಹೇಳುತ್ತಾರೆ. ಆದರೆ, ಅವರು ಹೇಳುತ್ತಾರೆ, ಈ ಪೀಳಿಗೆ ಸ್ಟ್ರೀಮ್ ಮಾಡಿದ ಸಂಗೀತ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಿಗೆ ಮರುಳಾಗಿದ್ದಾರೆ, ಎಲ್ಲವೂ ಒಂದು ಗುಂಡಿಯನ್ನು ಕ್ಲಿಕ್ ಮಾಡಿದರೆ ಸಿಗುತ್ತದೆ. ಬನಮ್ ಕುರಿತು ಅವರಲ್ಲಿ ಹೇಗೆ ಆಸಕ್ತಿ ಮೂಡಿಸಲು ಸಾಧ್ಯ?
ಗಣೇಶ ಅಥವಾ ಹೊಪನ್ ಅವರ ಬಳಿ ಮೊಬೈಲ್ ಫೋನ್ ಇಲ್ಲ, ಅವರಿಂದ ಅದನ್ನು ಖರೀದಿಸಲು ಸಹ ಸಾಧ್ಯವಿಲ್ಲ.
ಗಣೇಶ್ ಮತ್ತು ಹೊಪನ್ ಇಬ್ಬರೂ ತಮ್ಮ ಪ್ರೀತಿಯ ಬನಮ್ ಸಂಗೀತದ ಪತನಕ್ಕೆ ತಮ್ಮ ಕಷ್ಟದ ಆರ್ಥಿಕ ಪರಿಸ್ಥಿತಿ ಕಾರಣವೆನ್ನುತ್ತಾರೆ. ಅವರು ಬಡ ಕೃಷಿ ಕಾರ್ಮಿಕರಾಗಿದ್ದು, ಅವರು ದಿನವಿಡೀ ಕೆಲಸ ಮಾಡುವ ಮೂಲಕ ಅಲ್ಪ ಪ್ರಮಾಣದ ಹಣವನ್ನು ಸಹ ಗಳಿಸುತ್ತಾರೆ. "ನಾನು ಬನಮ್ ನುಡಿಸಲು ಬಯಸಿದರೆ, ನನ್ನ ಇಡೀ ಕುಟುಂಬವು ಹಲವು ದಿನಗಳವರೆಗೆ ಹಸಿದಿರಬೇಕಾಗುತ್ತದೆ" ಎಂದು ಗಣೇಶ್ ಹೇಳುತ್ತಾರೆ.
ಗಣೇಶ್ ಹೇಳುವಂತೆ “ಸಂಗೀತ ಎಷ್ಟೇ ಮಧುರವಾಗಿದ್ದರೂ ಅದು ನಮ್ಮ ಹೊಟ್ಟೆ ತುಂಬಿಸುವುದಿಲ್ಲ.”
ಅನುವಾದ: ಶಂಕರ ಎನ್. ಕೆಂಚನೂರು