ಆರ್. ಕೈಲಾಸಂ ಸಾಮಾನ್ಯವಾಗಿ ಬ್ಯಾಂಕ್ ಎಂದರೆ ಗೊಂದಲಕ್ಕೊಳಗಾಗುತ್ತಾರೆ. "ನನ್ನ ಪಾಸ್ಬುಕ್ ನವೀಕರಿಸಲು ನಾನು ಹೋದಾಗಲೆಲ್ಲಾ, ಯಂತ್ರವು ದುರಸ್ತಿ ಹಂತದಲ್ಲಿದೆಯೆಂದು ಅವರು ನನ್ನನ್ನು ಕಳುಹಿಸುತ್ತಾರೆ, ಅಥವಾ ಇನ್ನೊಮ್ಮೆ ಬರುವಂತೆ ಹೇಳುತ್ತಾರೆ" ಎಂದು ಅವರು ಹೇಳುತ್ತಾರೆ.
ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕೆ.ಜಿ.ಕಂಡಿಗೈ ಪಟ್ಟಣದ ಬ್ಯಾಂಕ್ ತಲುಪಲು ಅವರು ತಮ್ಮ ಊರಾದ ಬಂಗಲಮೇಡುನಿಂದ ಸುಮಾರು ಎರಡು ಗಂಟೆಗಳ ಕಾಲ ನಡೆಯಬೇಕು. (ಒಂದು ವರ್ಷದ ಹಿಂದೆ, ಅರ್ಧದಷ್ಟು ದೂರದವರೆಗೆ ಬಸ್ ಸೇವೆ ಲಭ್ಯವಿತ್ತು, ಆದರೆ ಈಗ ಅದನ್ನು ನಿಲ್ಲಿಸಲಾಗಿದೆ).
ಅವರ ನಿಜವಾದ , ಹೋರಾಟ ಬ್ಯಾಂಕಿನಲ್ಲಿ ಪ್ರಾರಂಭವಾಗುತ್ತದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕೆನರಾ ಬ್ಯಾಂಕಿನ ಕೆ.ಜಿ.ಕಂಡಿಗೈ ಶಾಖೆಯಲ್ಲಿ ಪಾಸ್ಬುಕ್ ನಮೂದನೆಗಳಿಗಾಗಿ ಸ್ವಯಂ ಚಾಲಿತ ಯಂತ್ರವಿದೆ. ಕೈಲಾಸಂ ಅದನ್ನು ಬಳಸಲು ಎಂದಿಗೂ ಸಾಧ್ಯವಾಗಿಲ್ಲ. "ಇದು ನನ್ನ ಮಟ್ಟಿಗೆ ಕೆಲಸ ಮಾಡುವುದಿಲ್ಲ" ಎಂದು ಅವರು ಹೇಳುತ್ತಾರೆ.
ಒಂದು ಬೆಳಿಗ್ಗೆ, ಅವರು ತನ್ನ ಬ್ಯಾಂಕಿಂಗ್ ತೊಂದರೆಗಳ ಬಗ್ಗೆ ನನ್ನೊಂದಿಗೆ ಮಾತನಾಡುವ ಸಮಯದಲ್ಲಿ, ಅಲ್ಲೇ ಪಕ್ಕದಲ್ಲಿ ಹತ್ತಿರದ ವೆಳಿಕಾಥನ್ ಮರದ ವಿರಳ ನೆರಳಿನಲ್ಲಿ ನೆಲದ ಮೇಲೆ ಕುಳಿತಿದ್ದ ಕೆಲವು ಮಹಿಳೆಯರು ನಮ್ಮೊಂದಿಗೆ ಸೇರಿಕೊಂಡರು. “ಪಾಸ್ಪುಸ್ತಕದಲ್ಲಿ ಎಂಟ್ರಿಗಳನ್ನು ಮಾಡಿಸಲು ನಿಮ್ಮ ಪುಸ್ತಕದಲ್ಲಿ ಸ್ಟಿಕ್ಕರ್ ಇರಬೇಕು ತಾತ” ಎಂದು ಅವರಲ್ಲಿ ಒಬ್ಬರು ಹೇಳಿದರು. ಅವರು ಹೇಳಿದ್ದು ಸರಿಯಿತ್ತು: ಕೈಲಾಸಂ ಅವರ ಪಾಸ್ಬುಕ್ನಲ್ಲಿ ಬಾರ್ಕೋಡ್ ಇದ್ದಿರಲಿಲ್ಲ, ಆದರೆ ಯಂತ್ರವು ಕಾರ್ಯನಿರ್ವಹಿಸಲು ಅದು ಅಗತ್ಯವಾಗಿರುತ್ತದೆ. “ಅವರು ಯಾಕೆ ಸ್ಟಿಕ್ಕರ್ ನೀಡಲಿಲ್ಲ ಎಂದು ನನಗೆ ಗೊತ್ತಿಲ್ಲ. ನನಗೆ ಈ ವಿಷಯಗಳು ಅರ್ಥವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ. ಮಹಿಳೆಯರಿಗೂ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ ಅವರಲ್ಲಿ ಒಬ್ಬರ ಊಹೆಯ ಪ್ರಕಾರ “ನೀವು [ಎಟಿಎಂ] ಕಾರ್ಡ್ ಪಡೆದರೆ, ನಿಮಗೆ ಸ್ಟಿಕ್ಕರ್ ಸಿಗುತ್ತದೆ.” "ನೀವು 500 ರೂಪಾಯಿಗಳನ್ನು ಪಾವತಿಸಿ ಹೊಸ ಖಾತೆಯನ್ನು ತೆರೆಯಬೇಕು" ಎಂದು ಮತ್ತೊಬ್ಬರು ಹೇಳುತ್ತಾರೆ. "ಝೀರೋ ಬ್ಯಾಲೆನ್ಸ್ ಖಾತೆಯಾಗಿದ್ದರೆ, ನಿಮಗೆ ಸ್ಟಿಕ್ಕರ್ ಸಿಗುವುದಿಲ್ಲ" ಎಂದು ಮೂರನೇ ಮಹಿಳೆ ಹೇಳುತ್ತಾರೆ. ಕೈಲಾಸಂ ಗೊಂದಲಕ್ಕೊಳಗಾಗಿದ್ದರು.
ತನ್ನ ಬ್ಯಾಂಕಿಂಗ್ ಹೋರಾಟದಲ್ಲಿ ಅವರು ಒಬ್ಬಂಟಿಯಾಗಿಲ್ಲ. ಬಂಗಲಮೇಡುವಿನ ಅನೇಕರಿಗೆ, ಅವರ ಖಾತೆಗಳನ್ನು ನಿರ್ವಹಿಸುವುದು, ಹಣವನ್ನು ಹಿಂತೆಗೆದುಕೊಳ್ಳುವುದು ಅಥವಾ ಅವರ ಆದಾಯವನ್ನು ತಿಳಿಯುವುದು ಸುಲಭವಲ್ಲ. ಈ ಸಣ್ಣ ಹಳ್ಳಿಯನ್ನು ಅಧಿಕೃತವಾಗಿ ಚೆರುಕ್ಕನೂರ್ ಇರುಳರ್ ಕಾಲೋನಿ ಎಂದು ಕರೆಯಲಾಗುತ್ತದೆ - ಇದು ತಿರುತ್ತನಿ ಬ್ಲಾಕ್ನಲ್ಲಿ ತೆರೆದ ಕುರುಚಲು ಪ್ರದೇಶದ ಮಧ್ಯದಲ್ಲಿರುವ ಒಂದೇ ಬೀದಿಯಾಗಿದೆ. ರಸ್ತೆಯ ಎರಡೂ ಬದಿಯಲ್ಲಿ 35 ಇರುಳ ಕುಟುಂಬಗಳ ಸಣ್ಣ ಗುಡಿಸಲುಗಳು ಮತ್ತು ಕೆಲವು ಪಕ್ಕಾ ಮನೆಗಳಿವೆ. (ಸಮುದಾಯದ ಹೆಸರನ್ನು ಈಗ ಸಾಮಾನ್ಯವಾಗಿ ಅಧಿಕೃತ ದಾಖಲೆಗಳಲ್ಲಿ ಇರುಳಾರ್ ಎಂದು ಉಚ್ಚರಿಸಲಾಗುತ್ತದೆ.)
60 ವರ್ಷದ ಕೈಲಾಸಂ ಮತ್ತು ಅವರ ಪತ್ನಿ ಕೆ.ಸಂಜಯಮ್ಮ (45) ಇಲ್ಲಿ ಹುಲ್ಲಿನ ಛಾವಣಿಯಿರುವ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಅವರು ನಾಲ್ಕು ಆಡುಗಳನ್ನು ಹೊಂದಿದ್ದು, ಅವುಗಳನ್ನು ಸಂಜಯಮ್ಮ ನೋಡಿಕೊಳ್ಳುತ್ತಾರೆ; ಅವರ ನಾಲ್ಕು ವಯಸ್ಕ ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಹೊರಹೋಗಿದ್ದಾರೆ. ದಿನಗೂಲಿ ಕೆಲಸ ಮಾಡುವ ಕೈಲಾಸಂ, “ನಾನು ಹೊಲಗಳಲ್ಲಿ ಕೆಲಸ ಮಾಡಿದರೆ ಇಡೀ ದಿನ ಬಾಗಿಕೊಂಡಿರಬೇಕು. ನನಗೆ ತೀವ್ರ ಬೆನ್ನುನೋವು ಬರುತ್ತದೆ ಮತ್ತು ನನ್ನ ಮೂಳೆಗಳು ಘಾಸಿಗೊಳ್ಳುತ್ತವೆ. ಈ ದಿನಗಳಲ್ಲಿ ನಾನು ಏರಿ ವೇಲೈ [ಕೆರೆ ಕೆಲಸ, ಎಂಜಿಎನ್ಆರ್ಇಜಿಎ ಕೆಲಸದ ಸ್ಥಳೀಯ ಹೆಸರು] ಬಯಸುತ್ತೇನೆ.” ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 100 ದಿನಗಳ ಕೂಲಿ ಕೆಲಸಕ್ಕೆ ಅರ್ಹತೆ ನೀಡುತ್ತದೆ - ಬಂಗಲಮೇಡುವಿನ ಇರುಳರಿಗೆ 100 ದಿನಗಳಷ್ಟು ಕೆಲಸ ಅಪರೂಪವಾಗಿ ದೊರೆಯುತ್ತದೆ.











