"ದೇವರು ಈ ರೀತಿ ಇಷ್ಟಿಷ್ಟೇ ಕೊಲ್ಲುವ ಬದಲು ನಮ್ಮನ್ನು ಒಂದೇ ಸಲ ಕೊಂದುಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಅಜರ್ ಖಾನ್ ಹೇಳುತ್ತಾರೆ. ಮೇ 26ರಂದು ನೆರೆಯ ನೀರು ಮೌಸುನಿ ದ್ವೀಪವನ್ನು ಆವರಿಸಿಕೊಂಡು ಅವರೆಲ್ಲರ ಮನೆಗಳನ್ನು ಕಿತ್ತುಕೊಂಡಿದೆ.
ಅಂದು ಮಧ್ಯಾಹ್ನ, ಬಂಗಾಳಕೊಲ್ಲಿಯಲ್ಲಿ ಎದ್ದ ಚಂಡಮಾರುತವು ಮುರಿಗಂಗಾ ನದಿಯಲ್ಲಿ 1-2 ಮೀಟರ್ ಎತ್ತರದವರೆಗಿನ ಅಲೆಗಳ ಸೃಷ್ಟಿಗೆ ಕಾರಣವಾಯಿತು. ಒಡ್ಡುಗಳು ಒಡೆದು ನೀರು ತಗ್ಗು ಪ್ರದೇಶದ ದ್ವೀಪಗಳಿಗೆ ನುಗ್ಗಿದ್ದರಿಂದ ಪ್ರವಾಹ ಉಂಟಾಗಿ ಮನೆಗಳು ಮತ್ತು ಹೊಲಗಳಿಗೆ ತೀವ್ರ ಹಾನಿಯಾಗಿದೆ.
26ನೇ ತಾರೀಖು ಮಧ್ಯಾಹ್ನ ಮುಂಗಾರು ನೈರುತ್ಯ ದಿಕ್ಕಿನಲ್ಲಿ ಸುಮಾರು 65 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರುವ ಒಡಿಶಾದ ಬಾಲಸೋರ್‌ಗೆ ಅಪ್ಪಳಿಸಿದಾಗ ಚಂಡಮಾರುತವು ರೂಪುಗೊಂಡಿತು. ಇದು ಅತ್ಯಂತ ಬಲವಾದ ಚಂಡಮಾರುತವಾಗಿತ್ತು ಮತ್ತು ಗಾಳಿಯ ವೇಗ 130-140 ಕಿ.ಮೀ.ನಷ್ಟಿತ್ತು
"ಚಂಡಮಾರುತ ಬರಲಿರುವುದು ನಮಗೆ ತಿಳಿದಿತ್ತು. ನಾವು ನಮ್ಮ ವಸ್ತುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಷ್ಟು ಸಮಯವಿದೆಯೆಂದೇ ಭಾವಿಸಿದ್ದೆವು. ಆದರೆ ನೀರು ಹಳ್ಳಿಯೊಳಗೆ ನುಗ್ಗಿಬಿಟ್ಟಿತ್ತು. ಎಂದು ಬಾಗ್ದಂಗಾ ಮೌಜಾ (ಗ್ರಾಮ)ದ ಮಜುರಾ ಬೀಬಿ ಹೇಳುತ್ತಾರೆ. ಅವರು ಮೌಸೂನಿಯ ಪಶ್ಚಿಮದಲ್ಲಿರುವ ಮುರಿಗಂಗಾದ ಒಡ್ಡಿನ ಬಳಿ ವಾಸಿಸುತ್ತಾರೆ. "ನಾವು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಓಡಿದೆವು. ಆದರೆ ನಮ್ಮ ವಸ್ತುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮಲ್ಲಿ ಅನೇಕರು ನಮ್ಮ ಜೀವ ಉಳಿಸಿಕೊಳ್ಳಲು ಮರಗಳ ಮೇಲೆ ಹತ್ತಿ ಕುಳಿತಿದ್ದೆವು."
ದ್ವೀಪದ ನಾಲ್ಕು ಹಳ್ಳಿಗಳಾದ ಬಾಗ್ದಂಗ, ಬಲಿಯಾರಾ, ಕುಸುಮ್ತಲಾ ಮತ್ತು ಮೌಸುನಿಗಳಿಗೆ ಹೋಗುವ ದೋಣಿಗಳು ಮತ್ತು ಲಾಂಚ್‌ಗಳು ಮೂರು ದಿನಗಳ ಕಾಲ ನಿರಂತರ ಮಳೆಯಿಂದಾಗಿ ನಿಲ್ಲಿಸಲ್ಪಟ್ಟವು. ಮೇ 29ರ ಬೆಳಿಗ್ಗೆ ನಾನು ಮೌಸಾನಿಯನ್ನು ತಲುಪಿದಾಗ, ಅದರಲ್ಲಿ ಹೆಚ್ಚಿನವು ನೀರಿನಲ್ಲಿ ಮುಳುಗಿದ್ದವು.
ಬಾಗ್ದಂಗ ಅಭಯಾರಣ್ಯದಲ್ಲಿ ಭೇಟಿಯಾದ ಅಭಿಲಾಶ್ ಸರ್ದಾರ್, "ನನ್ನ ಭೂಮಿ ಉಪ್ಪುನೀರಿನಲ್ಲಿ ಮುಳುಗಿದೆ" ಎಂದು ಹೇಳಿದರು. "ನಾವು ರೈತರು ನಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದೇವೆ" ಎಂದು ಅವರು ಹೇಳಿದರು. "ಮುಂದಿನ ಮೂರು ವರ್ಷಗಳವರೆಗೆ ನನ್ನ ಭೂಮಿಯನ್ನು ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಮತ್ತೆ ಬೆಳೆ ಬರಲು ಏಳು ವರ್ಷಗಳ ತನಕ ತೆಗೆದುಕೊಳ್ಳಬಹುದು."




















