ಆ ವರ್ಕ್ಶಾಪಿನ ಮೇಲೆ ಯಾವುದೇ ಬೋರ್ಡುಗಳಿದ್ದಿರಲಿಲ್ಲ."ಯೇ ತೋ ಏಕ್ ಗುಮನಾಮ್ ದುಖಾನ್ ಹೈ” [ಇದೊಂದು ಯಾವುದೇ ಹೆಸರಿಲ್ಲದಿರುವ ಅನಾಮಧೇಯ ಅಂಗಡಿ]," ಎಂದು ಮೊಹಮ್ಮದ್ ಅಜೀಮ್ ಹೇಳುತ್ತಾರೆ. ಈಗ ಒಳಭಾಗದ 8x8 ಅಡಿ ಕಲ್ನಾರಿನ ಗೋಡೆಗಳು ಮಸಿ ಮತ್ತು ಜೇಡರ ಬಲೆಗಳಿಂದ ಮುಚ್ಚಲ್ಪಟ್ಟಿವೆ. ಮೂಲೆಯಲ್ಲಿ ಸಣ್ಣ ಪ್ರಮಾಣದ ಕಬ್ಬಿಣದ ಕುಲುಮೆಯಿದೆ, ಮಧ್ಯದಲ್ಲಿ ನೀಲಿ ತಾಡಪತ್ರಿಯಿಂದ ಹೊದಿಸಿದ ಸುಟ್ಟ ಕಪ್ಪು ಮಣ್ಣಿನ ರಾಶಿಯಿದೆ.
ಅಜೀಂ ಪ್ರತಿದಿನ ಬೆಳಿಗ್ಗೆ ಸುಮಾರು 7 ಗಂಟೆ ಎನ್ನುವಷ್ಟರಲ್ಲಿ ಹೈದರಾಬಾದ್ನ ಪಶ್ಚಿಮದಲ್ಲಿರುವ ದೂಧ್ಬೌಲಿಯ ಕಿರಿದಾದ ರಸ್ತೆ ಮಾರ್ಗದಲ್ಲಿ ಸೈಕಲ್ ಮೂಲಕ ಸಾಗುತ್ತಾರೆ ಮತ್ತು ಈ ಕಾರ್ಯಾಗಾರದ ಹತ್ತಿರದಲ್ಲಿಯೇ ತಮ್ಮ ಸೈಕಲ್ ನಿಲ್ಲಿಸುತ್ತಾರೆ, ಅದರ ಹಿಂಭಾಗದ ಗೋಡೆ ಹಕೀಮ್ ಮೀರ್ ವಜೀರ್ ಅಲಿ ಸ್ಮಶಾನದ ಕಂಪೌಂಡ್ ಗೋಡೆ.
ಇಲ್ಲಿ, ಧೂಳು ಹಿಡಿದಿರುವ ಪ್ಲಾಸ್ಟಿಕ್ ತೊಟ್ಟಿಗಳು, ತುಕ್ಕು ಹಿಡಿದ ಲೋಹದ ಪೆಟ್ಟಿಗೆಗಳು, ಮುರಿದಿರುವ ಬಕೆಟ್ಗಳು ಮತ್ತು ನೆಲದ ಮೇಲೆ ಅಲ್ಲಲ್ಲಿ ಚದುರಿರುವ ಉಪಕರಣಗಳು ಮತ್ತು ಪಂಚ್ಗಳ ಮಧ್ಯದಲ್ಲಿ ಕೆಲಸ ಮಾಡಲು ಯಾವುದೇ ಸ್ಥಳಾವಕಾಶ ಇಲ್ಲದೆ ಇರುವಂತಹ ಸ್ಥಳದಲ್ಲಿ ಅವರು ತಮ್ಮ ಕೆಲಸದ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಅಲ್ಲಿಯೇ ಮಣ್ಣೆಚ್ಚರಕದ ಪ್ರಕ್ರಿಯೆ ಮೂಲಕ ಲೋಹದ ಟೋಕನ್ ಗಳನ್ನು ಸಿದ್ದಪಡಿಸುತ್ತಾರೆ.
ಈಗಲೂ ಕೂಡ ಹೈದರಾಬಾದ್ನ ಕೆಲವು ಹಳೆಯ ಟೀ ಅಂಗಡಿಗಳು ಮತ್ತು ಉಪಹಾರ ಗೃಹಗಳು 28 ವರ್ಷದ ಅಜೀಮ್ ತಯಾರಿಸುವ ಈ ಟೋಕನ್ಗಳನ್ನು (ಅಥವಾ ನಾಣ್ಯಗಳನ್ನು) ಬಳಸುತ್ತವೆ. ಈ ಹಿಂದೆ, ಇದೇ ರೀತಿಯ ಕ್ಯಾಂಟೀನ್ ಟೋಕನ್ಗಳನ್ನು ಗಿರಣಿಗಳು, ಮಿಲಿಟರಿ ಮಳಿಗೆಗಳು, ರೈಲ್ವೆಗಳು, ಬ್ಯಾಂಕ್ಗಳು, ಕ್ಲಬ್ಗಳು, ಸಹಕಾರಿ ಸಂಸ್ಥೆಗಳು ಮತ್ತು ಇತರ ಹಲವಾರು ಸಂಸ್ಥೆಗಳು ಬಳಸುತ್ತಿದ್ದವು. ಆದರೆ ಕಾಲಾನಂತರದಲ್ಲಿ ಜನರು ಪ್ಲಾಸ್ಟಿಕ್ ಟೋಕನ್ಗಳು ಅಥವಾ ಪೇಪರ್ ರಸೀದಿಗಳಿಗೆ ಒಡ್ಡಿಕೊಂಡ ನಂತರ ಈ ಟೋಕನ್ಗಳ ಬೇಡಿಕೆಯು ತೀವ್ರ ಪ್ರಮಾಣದಲ್ಲಿ ಕುಸಿಯಿತು. ಇನ್ನು ಲೋಹದ ಟೋಕನ್ಗಳನ್ನು ಅವಲಂಬಿಸಿರುವ ಕೆಲವು ಹೈದರಾಬಾದ್ ರೆಸ್ಟೋರೆಂಟ್ಗಳು ದಿನದ ಗಳಿಕೆಯನ್ನು ಲೆಕ್ಕಹಾಕಲು ಅವುಗಳನ್ನು ಬಳಸುತ್ತವೆ: ಒಮ್ಮೆ ಗ್ರಾಹಕರು ಆಹಾರ ಪದಾರ್ಥವನ್ನು ಆರ್ಡರ್ ಮಾಡಿದಾಗ, ಅವರಿಗೆ ಆ ಭಕ್ಷ್ಯಭೋಜಕ್ಕೆ ಅನುಗುಣವಾಗಿ ಟೋಕನ್ಗಳನ್ನು ನೀಡಲಾಗುತ್ತದೆ.
ಅಜೀಮ್ ಅವರನ್ನು ಅವರ ಕುಟುಂಬದ ಸದಸ್ಯರು ಮತ್ತು ಇನ್ನುಳಿದ ಅಂಗಡಿಯವರು ಪ್ರೀತಿಯಿಂದ ಅಜ್ಜು ಎಂದು ಕರೆಯುತ್ತಾರೆ, ಈ ನಾಣ್ಯಗಳನ್ನು ರೂಪಿಸುವಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಶೇ 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ಹೈದರಾಬಾದ್ ಕುಶಲಕರ್ಮಿಗಳಲ್ಲಿ ತಾವು ಕೂಡ ಒಬ್ಬರು ಎಂದು ಅವರು ಅಂದಾಜಿಸುತ್ತಾರೆ.



















