ಸುರೇಶ್ ಮೆಹಂದಳೆ ತನ್ನ ನೆಚ್ಚಿನ ಬಸ್ ನಿಲ್ದಾಣದ ಕುರಿತು ಚಿಂತಿತರಾಗಿದ್ದಾರೆ. ಅವರಿಲ್ಲದಿದ್ದರೆ ಅದರ ಆವರಣವನ್ನು ಸ್ವಚ್ಛಗೊಳಿಸುವವರಿರುವುದಿಲ್ಲ. ಮತ್ತು ಅವರು ಪ್ರತಿದಿನ ಪ್ರೀತಿಯಿಂದ ಬಿಸ್ಕತ್ತುಗಳನ್ನು ತಿನ್ನಿಸುವ ನಾಯಿಗಳು ಸಹ ಹಸಿದಿರುತ್ತವೆ. ಪುಣೆ ಜಿಲ್ಲೆಯ ಮುಲ್ಶಿ ತಾಲೂಕಿನ ಪೌಡ್ ಬಸ್ ನಿಲ್ದಾಣದಲ್ಲಿರುವ ಅವರ ವಿಚಾರಣೆ ಬೂತ್ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಮುಚ್ಚಲ್ಪಟ್ಟಿದೆ. ಅವರು ಅಲ್ಲಿಯೇ ಕುಳಿತುಕೊಂಡು ಅಲ್ಲಿ ಹಾದು ಹೋಗುವ ರಾಜ್ಯ ಸಾರಿಗೆ ಬಸ್ಸುಗಳ ಸಮಯದ ಮೇಲೆ ಕಣ್ಣಿಡುತ್ತಿದ್ದರು.
“ನಾನು ಕಳೆದ 28 ದಿನಗಳಿಂದ ಪೌಡ್‌ಗೆ ಹೋಗಿಲ್ಲ, ಅಲ್ಲಿ ಎಲ್ಲವೂ ಸರಿಯಾಗಿದ್ದರೆ ಸಾಕು,” ಎಂದು 54 ವರ್ಷದ ಮೆಹಂದಳೆ ಹೇಳಿದರು. ನಾನು ಅವರನ್ನು ಪುಣೆಯ ಸ್ವಾರ್ಗಟೆ ಬಸ್ ಡಿಪೋ ಬಳಿ ಭೇಟಿಯಾಗಿದ್ದೆ. ಅದು ಅವರ ಬಸ್ ನಿಲ್ದಾಣದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಅವರು ಅಲ್ಲಿ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್ ಆರ್ ಟಿಸಿ) ಸಹ ಕಾರ್ಮಿಕರೊಂದಿಗೆ ಡಿಪೋದ ಪ್ರವೇಶದ್ವಾರದ ಬಳಿ ಹಾಕಲಾಗಿರುವ ಟೆಂಟಿನಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಎಮ್‌ಎಸ್‌ಆರ್‌ಟಿಸಿಯ ನೌಕರರು ರಾಜ್ಯಾದ್ಯಂತ ಈ ವರ್ಷದ ಅಕ್ಟೋಬರ್ 27ರಿಂದ ಅನಿರ್ದಿಷ್ಟಾವಧಿಯ ಮುಷ್ಕರ ನಡೆಸುತ್ತಿದ್ದಾರೆ.
ಪುಣೆಯಲ್ಲಿ, ರಾಜ್ಯ ಸಾರಿಗೆ (ಎಸ್‌ಟಿ) ಬಸ್‌ಗಳ ಸುಮಾರು 250 ಕಂಡಕ್ಟರ್‌ಗಳು ಮತ್ತು 200 ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಮೆಹಂದಲೆ ಹೇಳುವಂತೆ, “ಇವೆಲ್ಲವೂ ರಾಜ್ಯ ಸಾರಿಗೆ ನೌಕರರ [ಆತ್ಮಹತ್ಯೆ] ಸಾವಿನ ವಿರುದ್ಧದ ಪ್ರತಿಭಟನೆಯೊಂದಿಗೆ ಪ್ರಾರಂಭವಾಯಿತು. ಕಳೆದ ವರ್ಷ ಕನಿಷ್ಠ 31 ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದರು." ನಾನು ಮೆಹೆಂದಲೆಯವರನ್ನು ಭೇಟಿಯಾದ ಮೂರು ದಿನಗಳ ನಂತರ ಮತ್ತೆ ಇಬ್ಬರು ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡರು. ವೇತನ ವಿಳಂಬವಾಗುತ್ತಿರುವುದರಿಂದ ಎಸ್‌ಟಿ ನೌಕರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ಪಿಡುಗಿನಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಮತ್ತು ಸರಕುಗಳನ್ನು ಸಾಗಿಸುವುದನ್ನು ಹೊರತುಪಡಿಸಿ, ನಿಗಮದ ಉಳಿದ ಆದಾಯವೂ ನಿಂತುಹೋಗಿದೆ.








