ಭಟ್ವಡ್ಗಾಂವ್ ಹಳ್ಳಿಯ ಗದ್ದೆಯೊಂದರ ಅಂಚಿನಲ್ಲಿರುವ ಕೊಳಕಾದ ರಸ್ತೆಯುದ್ದಕ್ಕೂ ಹೆಜ್ಜೆಹಾಕುತ್ತಿದ್ದ ನಾವು ಕೊನೆಗೂ ಸಿಮೆಂಟಿನ ಮಾಡು ಮತ್ತು ನೇರಳೆ ಗೋಡೆಯನ್ನು ಹೊಂದಿರುವ ಚಿಕ್ಕ ಮನೆಯೊಂದಕ್ಕೆ ಬಂದು ತಲುಪಿದ್ದೆವು. ಮನೆಯೊಂದಕ್ಕೆ ಸಾಮಾನ್ಯವಾಗಿ ಇಡಲಾಗದ ಹೆಸರನ್ನು ಹೊತ್ತುಕೊಂಡಿದ್ದ ಆ ಮನೆಯ ಗೋಡೆಯ ಮೇಲೆ ನೇರಳೆ ಬಣ್ಣದಲ್ಲಿ ಮರಾಠಿಯಲ್ಲಿ 'ಟಿಣ್ಗಿ' ಎಂದು ಬರೆದಿತ್ತು. 'ಕಿಡಿ' ಎಂಬ ಅರ್ಥವಿರುವ ಈ ಪದವು 8-10 ಕವಿತೆಗಳ ಗುಂಪಿಗೆ ಇಡಲಾಗಿರುವ ಹೆಸರೂ ಹೌದು. ''ಇನ್ನೂ ಇವೆ. ನನ್ನ ತಂದೆಯ ಕವಿತೆಗಳನ್ನು ಬರೆದಿಡಲಾಗಿಲ್ಲ. ಆದರೆ ಅವೆಲ್ಲವೂ ನನ್ನ ನೆನಪಿನಲ್ಲಿ ಭದ್ರವಾಗಿವೆ'', ಎನ್ನುತ್ತಿದ್ದಾರೆ ಪ್ರದೀಪ್ ಸಾಲ್ವೆ.
ಸುಮಾರು 300 ಹಾಡುಗಳನ್ನು ಬರೆದು ತನ್ನ ಹಿಂದೆ ಒಂದು ಸಾಹಿತ್ಯ ಪರಂಪರೆಯನ್ನೇ ಬಿಟ್ಟುಹೋದ ತಮ್ಮ ತಂದೆಯವರಾದ ''ಶಹೀರ್'' (ಕವಿ) ಆತ್ಮಾರಾಮ್ ಸಾಲ್ವೆಯವರ ಬಗ್ಗೆ ಪ್ರದೀಪ್ ಸಾಲ್ವೆ ಮಾತಾಡುತ್ತಿದ್ದಾರೆ. ''ಅವುಗಳು ಹುಂಡಾ ಬಂದಿ (ವರದಕ್ಷಿಣೆ), ಮದ್ಯಪಾನ ಮತ್ತು ನಶೆಯ ದುವ್ರ್ಯಸನಗಳ ವಿರುದ್ಧ ಬರೆದ ಕವಿತೆಗಳಾಗಿದ್ದವು'', ಎನ್ನುವ ಪ್ರದೀಪ್ ಇವುಗಳಲ್ಲದೆ ಡಾ. ಬಾಬಾಸಾಹೇಬ್ ಅಂಬೇಡ್ಕರ್, ದಲಿತರು, ಮಹಿಳೆಯರು, ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಕ್ರಾಂತಿಗಳ ಬಗ್ಗೆಯೂ ಸಾಲ್ವೆಯವರು ಕವಿತೆಗಳನ್ನು ಬರೆದಿದ್ದರು ಎಂದರು. 'ಟಿಣ್ಗಿ'ಯ (ಸದ್ಯ ಅವರ ಸಹೋದರನಾದ ದೀಪಕ್ ರವರ ನಿವಾಸ) ಪಕ್ಕದಲ್ಲೇ ಇರುವ ತಮ್ಮ ನಿವಾಸವಾದ `ರಾಜರತ್ನ'ದಲ್ಲಿ ಕುಳಿತಿರುವ ಪ್ರದೀಪ್ ವರದಕ್ಷಿಣೆಯನ್ನು ವಿರೋಧಿಸಿ ಬರೆಯಲಾಗಿದ್ದ ಕವಿತೆಯ ಸಾಲೊಂದನ್ನು ಉದ್ಧರಿಸಿ ಹೇಳುತ್ತಿದ್ದಾರೆ.
''हुंड्याची पद्धत सोडा, समतेशी नाते जोडा''
''ವರದಕ್ಷಿಣೆಯ ಪದ್ಧತಿಯನ್ನು ಬಿಟ್ಟು ಸಮಾನತೆಯೊಂದಿಗೆ ಬೆರೆಯೋಣ''
ಮಹಾರಾಷ್ಟ್ರದ ಬೀದ್ ಜಿಲ್ಲೆಯ ಮಜಲ್ಗಾಂವ್ ತಾಲೂಕಿನಲ್ಲಿರುವ ಕೆಲ ಮಹಿಳೆಯರನ್ನು ಭೇಟಿಯಾಗಲು ಅಂದು ನಾವು ಅಲ್ಲಿದ್ದೆವು. 21 ವರ್ಷಗಳ ಹಿಂದೆ ಗ್ರೈಂಡ್ ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಗಾಗಿ ಇಲ್ಲಿಯ ಮಹಿಳೆಯರು ಹಾಡಿದ್ದ ಒವಿಗಳನ್ನು ಧ್ವನಿಮುದ್ರಿಸಿಕೊಳ್ಳಲಾಗಿತ್ತು. ಸದ್ಯ `ಪರಿ'ಯಲ್ಲಿ ಇವುಗಳು ಸರಣಿಯಾಗಿ ಮೂಡಿಬರುತ್ತಿವೆ.





