ತಾರಾವಂತಿ ಕೌರ್ ಆತಂಕಗೊಂಡಿದ್ದಾರೆ. "ಈಗಲೇ ನಮಗೆ ಕೆಲಸಗಳು ಸಿಗುತ್ತಿಲ್ಲ, ಮತ್ತೆ ಈ ಕೃಷಿ ಕಾನೂನುಗಳು ಜಾರಿಗೆ ಬಂದರೆ, ಇರುವ ಸ್ವಲ್ಪ ಕೆಲಸಗಳೂ ಸಿಗುವುದಿಲ್ಲ" ಎಂದು ಅವರು ಹೇಳುತ್ತಾರೆ.
ಹೀಗಾಗಿ ಅವರು ಪಂಜಾಬ್ನ ಕಿಲಿಯನ್ವಾಲಿ ಗ್ರಾಮದಿಂದ ಪಶ್ಚಿಮ ದೆಹಲಿಯ ಟಿಕ್ರಿಯಲ್ಲಿನ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದಾರೆ. ಜನವರಿ 7ರ ರಾತ್ರಿ ರಾಜ್ಯದ ವಿವಿಧ ಜಿಲ್ಲೆಗಳಾದ ಬಟಿಂಡಾ, ಫರೀದ್ಕೋಟ್, ಜಲಂಧರ್, ಮೊಗಾ, ಮುಕ್ತಸರ್, ಪಟಿಯಾಲ ಮತ್ತು ಸಂಗ್ರೂರ್ಗಳಿಂದ ಇಲ್ಲಿಗೆ ಆಗಮಿಸಿದ 1,500 ಕೃಷಿ ಕಾರ್ಮಿಕರಲ್ಲಿ ತಾರಾವಂತಿ ಮತ್ತು ಸುಮಾರು 300 ಮಹಿಳೆಯರು ಸೇರಿದ್ದಾರೆ. ಇವರೆಲ್ಲರೂ ಪಂಜಾಬ್ ಖೇತ್ ಮಜ್ದೂರ್ ಒಕ್ಕೂಟದ ಸದಸ್ಯರಾಗಿದ್ದು, ಇದು ಜೀವನೋಪಾಯ, ದಲಿತರಿಗೆ ಭೂ ಹಕ್ಕು ಮತ್ತು ಜಾತಿ ತಾರತಮ್ಯ ಮುಂತಾದ ವಿಷಯಗಳ ಕುರಿತು ಕೆಲಸ ಮಾಡುತ್ತದೆ.
ಜೀವನಕ್ಕಾಗಿ ಕೃಷಿ ಕೆಲಸಗಳನ್ನು ಅವಲಂಬಿಸಿರುವ ಭಾರತದ ಲಕ್ಷಾಂತರ ಮಹಿಳೆಯರಲ್ಲಿ ಅವರೂ ಒಬ್ಬರು - ದೇಶದ 144.3 ಮಿಲಿಯನ್ ಕೃಷಿ ಕಾರ್ಮಿಕರಲ್ಲಿ ಕನಿಷ್ಠ 42 ಪ್ರತಿಶತ ಮಹಿಳೆಯರಿದ್ದಾರೆ .
ತಾರವಂತಿಯವರಿಗೆ 70 ವರ್ಷ. ಮುಕ್ತರ್ ಜಿಲ್ಲೆಯ ಮಾಲೌಟ್ ತಹಸಿಲ್ನಲ್ಲಿರುವ ತಮ್ಮ ಗ್ರಾಮದಲ್ಲಿನ ಗೋಧಿ, ಭತ್ತ ಮತ್ತು ಹತ್ತಿ ಹೊಲಗಳಲ್ಲಿ ಇಡೀ ದಿನ ದುಡಿದರೆ ಅವರಿಗೆ 250-300 ರೂ ಕೂಲಿ ದೊರೆಯುತ್ತದೆ. “ಆದರೆ ಈಗ ಮೊದಲಿನಂತೆ ಹೆಚ್ಚಿನ ಕೆಲಸಗಳು ಇಲ್ಲಿ ಲಭ್ಯವಿಲ್ಲ. ಹಸಿರು ಕ್ರಾಂತಿಯ ನಂತರ ಕಾರ್ಮಿಕರು ತೊಂದರೆಗಳನ್ನು ಎದುರಿಸುತ್ತಿದ್ದಾರೆ,” ಎಂದು ಅವರು ಹೇಳುತ್ತಾರೆ, 1960ರ ದಶಕ ಮತ್ತು ಅದಕ್ಕೂ ಅದರ ನಂತರದ ದಿನಗಳಲ್ಲಿ, ಇತರ ಕೃಷಿ ಬದಲಾವಣೆಗಳೊಂದಿಗೆ, ಕೃಷಿಯ ಯಾಂತ್ರೀಕರಣವು ಪಂಜಾಬ್ನಲ್ಲಿ ವ್ಯಾಪಕವಾಗಿ ಹರಡಿತು.
“ಈಗ ನನಗೆ ವಯಸ್ಸಾಗಿರಬಹುದು, ಆದರೆ ದುರ್ಬಲಳಾಗಿಲ್ಲ. ಈಗಲೂ ಕೆಲಸಗಳು ದೊರೆತಲ್ಲಿ ನಾನೂ ಶ್ರಮದಾಯಕ ಕೆಲಸಗಳನ್ನು ಮಾಡಬಲ್ಲೆ,” ಎಂದು ಅವರು ಹೇಳುತ್ತಾರೆ. “ಆದರೆ ಯಂತ್ರಗಳು ಎಲ್ಲ ಕೆಲಸಗಳನ್ನು ನುಂಗಿ ಹಾಕಿವೆ. ಇನ್ನು ಕೃಷಿ ಕಾರ್ಮಿಕರಿಗೆ ಹೆಚ್ಚು ಕೆಲಸಗಳು ಸಿಗುವುದಿಲ್ಲ. ನಮ್ಮ ಮಕ್ಕಳು ಆಹಾರವಿಲ್ಲದೆ ಉಪವಾಸವಿದ್ದಾರೆ. ದಿನಕ್ಕೆ ಒಂದು ಬಾರಿಯಷ್ಟೇ ನಾವು ಸರಿಯಾಗಿ ಊಟವನ್ನು ಮಾಡುತ್ತಿದ್ದೇವೆ. ನಮಗೆ ಲಭ್ಯವಿದ್ದ ಕೆಲಸಗಳನ್ನೆಲ್ಲ ಕಿತ್ತುಕೊಳ್ಳುವ ಮೂಲಕ ಸರಕಾರ ನಮ್ಮ ಬದುಕನ್ನು ನರಕವಾಗಿಸಿದೆ.”
ಈಗ ಹೊಲಗಳಲ್ಲಿ ಕೆಲಸವು ದೀರ್ಘಕಾಲ ಲಭ್ಯವಿಲ್ಲದ ಕಾರಣ ಕಾರ್ಮಿಕರು ಮನರೇಗಾ ಸೈಟ್ಗಳತ್ತ ಕೆಲಸ ಹುಡುಕಿ ಹೋಗಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳುತ್ತಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) ಗ್ರಾಮೀಣ ಭಾರತದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸದ ಖಾತರಿ ನೀಡುತ್ತದೆ - ಪಂಜಾಬ್ನಲ್ಲಿ ದೈನಂದಿನ ಕೂಲಿ 258 ರೂಪಾಯಿಗಳಷ್ಟಿದೆ. "ಆದರೆ ಸಿಗುವುದು ಯಾವಾಗ?" ಅವರು ಕೇಳುತ್ತಾರೆ. “ನಾವು ಸ್ಥಿರ ಉದ್ಯೋಗಗಳಿಗೆ ಒತ್ತಾಯಿಸುತ್ತಿದ್ದೇವೆ. ನಾವು ಪ್ರತಿದಿನ ಕೆಲಸ ನೀಡಬೇಕೆಂದು ಒತ್ತಾಯಿಸುತ್ತೇವೆ."
ತಾರವಂತಿ ದಲಿತ ಸಮುದಾಯಕ್ಕೆ ಸೇರಿದವರು. "ನಮ್ಮ ಪರಿಸ್ಥಿತಿ ಯಾವಾಗಲೂ ಕಷ್ಟಕರವಾಗಿರುತ್ತದೆ. ಅದರಲ್ಲಿಯೂ ನಾವು ಬಡವರು,” ಎಂದು ಅವರು ಹೇಳುತ್ತಾರೆ. “ಅವರು [ಮೇಲ್ಜಾತಿಗಳು] ನಮ್ಮನ್ನು ಅವರಿಗೆ ಸಮಾನರೆಂದು ಪರಿಗಣಿಸುವುದಿಲ್ಲ. ಯಾರೂ ನಮ್ಮೊಂದಿಗೆ ಮಾನವೀಯವಾಗಿ ನಡೆದುಕೊಳ್ಳುವುದಿಲ್ಲ. ಜನರು ನಮ್ಮನ್ನು ಕೀಟಗಳಂತೆ ನಡೆಸಿಕೊಳ್ಳುತ್ತಾರೆ”
ಆದರೆ ಈ ಪ್ರತಿಭಟನೆಯ ಸಮಯದಲ್ಲಿ ದಿನದಿಂದ ದಿನಕ್ಕೆ ಎಲ್ಲಾ ವರ್ಗ, ಜಾತಿ ಮತ್ತು ಲಿಂಗಗಳ ಭಾಗವಹಿಸುವಿಕೆ ಬಲಗೊಳ್ಳುತ್ತಿದೆ ಎಂದು ಅವರು ಹೇಳುತ್ತಾರೆ. “ಈ ಬಾರಿ ನಾವೆಲ್ಲರೂ ಈ ಪ್ರತಿಭಟನೆಯಲ್ಲಿ ಒಗ್ಗೂಡಿದ್ದೇವೆ. ನಾವು ಈಗ ಸರಿಯಾದ ಹಾದಿಯಲ್ಲಿದ್ದೇವೆ. ಈ ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಇದು ಎಲ್ಲರೂ ಒಗ್ಗೂಡಿ ನ್ಯಾಯವನ್ನು ಕೇಳುವ ಸಮಯ.”
ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ. ಆ ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ.
"ಕಾನೂನು ಬದಲಾಯಿಸುವುದಾಗಿ ಸರ್ಕಾರ ಹೇಳುತ್ತದೆ, ಆದರೆ ಅವರು ಮೊದಲು ನಮಗೆ ಹೇಳುತ್ತಿದ್ದಂತೆ ಈ ಕಾನೂನುಗಳು ಸರಿಯಾಗಿದ್ದಿದ್ದರೆ ಬದಲಾವಣೆಯ ಬಗ್ಗೆ ಏಕೆ ಮಾತನಾಡಬೇಕು? ಇದರ ಅರ್ಥ, ಈ ಕಾನೂನುಗಳು ಎಂದಿಗೂ ಉತ್ತಮವಾಗಿರಲಿಲ್ಲ.” ಎಂದು ತಾರಾವಂತಿ ಹೇಳುತ್ತಾರೆ.
ಅನುವಾದ - ಶಂಕರ ಎನ್. ಕೆಂಚನೂರು