ಮೊತ್ತ ಮೊದಲ ಬಾರಿಗೆ, ಮನ್ವಾರಾ ಬೇವಾ ಅವರ ಮೊರ ಖಾಲಿ ಕುಳಿತಿದೆ. ಫ್ಯಾಕ್ಟರಿ ಮುಚ್ಚಿದೆ.  ಕಳೆದ 20 ದಿನಗಳಿಂದ ಬೀಡಿ ಡಿಪೋದ ಗುಮಾಸ್ತರು ಕಾಣುತ್ತಿಲ್ಲ, ಆಕೆಯ ಕೈನಲ್ಲಿ ಕುಟುಂಬದ ಹೊಟ್ಟೆಪಾಡಿಗೆ ಅಗತ್ಯವಿರುವ ದುಡ್ಡೂ ಇಲ್ಲ. ದೇಶದಲ್ಲೆಲ್ಲೋ ಕೆಲವರು ಏನೋ “ಕಪ್ಪು ಬಣ್ಣದ್ದರ” ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಮನ್ವರಾ ಕೇಳಿದ್ದಾರೆ ಮತ್ತು ಅದೇ ಆಕೆಯ ಈವತ್ತಿನ ದುಸ್ಥಿತಿಗೆ ಕಾರಣ ಎಂದು ಆಕೆಗೆ ತಿಳಿದಿದೆ.

45 ವರ್ಷ ಪ್ರಾಯದ ಮನ್ವಾರಾ ಕಳೆದ 17 ವರ್ಷಗಳಿಂದ ಬೀಡಿ ಕಟ್ಟಿ ದುಡಿಯುತ್ತಿದ್ದಾರೆ – 1000 ಬೀಡಿ ಸುತ್ತಿಕೊಟ್ಟರೆ 126 ರೂಪಾಯಿ ಆಕೆಗೆ ಸಿಗುತ್ತದೆ. ತನ್ನ ಪತಿ ತೀರಿಕೊಂಡ ಬಳಿಕ ಆರಂಭಿಸಿದ ಈ ದುಡಿಮೆಯನ್ನೇ ಆಕೆ ಈಗ ನಂಬಿಕೊಂಡಿದ್ದಾರೆ. ಭೂಮಿ ಇಲ್ಲದ ಆ ದಂಪತಿಗೆ ಇಬ್ಬರು ಗಂಡು ಮಕ್ಕಳು.  ಪತಿ ತೀರಿಕೊಂಡಾಗ ಸಣ್ಣವನಿಗೆ ಕೇವಲ ಆರು ತಿಂಗಳು. ಬೀಡಿ ಕಟ್ಟಲಾರಂಬಿಸಿದ ಮೊದಮೊದಲು ಆಕೆ ದಿನಕ್ಕೆ 2000 ಬೀಡಿಗಳನ್ನು ಸುತ್ತಿದ್ದೂ ಇದೆ. ಆದರೆ ಈಗೀಗ ದಿನಕ್ಕೆ ಬರೀ 500  ಬೀಡಿ ಸುತ್ತಲು ಸಾಧ್ಯವಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ ಮನೆಯಲ್ಲಿ ಬೀಡಿ ಸುತ್ತುವ ನೂರಕ್ಕೆ 70  ಮಂದಿ ಮಹಿಳೆಯರು ಎಂದು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಅಂಕಿ-ಸಂಖ್ಯೆಗಳು ಹೇಳುತ್ತವೆ. “ಇಲ್ಲಿ ಚೆನ್ನಾಗಿ ಬೀಡಿ ಸುತ್ತಲು ಬರದಿರುವ ಹೆಣ್ಣು ಇದ್ದರೆ, ಆಕೆಗೊಂದು ಒಳ್ಳೆ ಗಂಡು ಹುಡುಕುವುದೂ ಕಷ್ಟ” ಎನ್ನುತ್ತಾರೆ ಬೀಡಿ ಡಿಪೋದ ಗುಮಾಸ್ತ ಮನೀರುಲ್ಹಖ್ – ಬೀಡಿ ಕಟ್ಟುವವರಿಗೆ ಕಚ್ಛಾ ಮಾಲು ವಿತರಿಸುವುದು ಮತ್ತು ಸುತ್ತಲಾದ ಬೀಡಿಯನ್ನು ಸಂಗ್ರಹಿಸಿ ಫ್ಯಾಕ್ಟರಿಗೆ ತಲುಪಿಸುವ ಗುತ್ತಿಗೆ ಆತನದು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಂಗೀಪುರ ಉಪವಿಭಾಗದಲ್ಲಿರುವ ಬೀಡಿ ಘಟಕವೊಂದಾರ ಗುತ್ತಿಗೆದಾರ ಆತ.

PHOTO • Arunava Patra

ಎಡ: ತೇಂಡು ಎಲೆಗಳು, ಔರಂಗಾಬಾದ್, ಜಂಗೀಪುರ. ಗುತ್ತಿಗೆದಾರರು ಪೂರೈಸಿದ ತಂಬಾಕು ಎಲೆಗಳನ್ನು ಕಾರ್ಮಿಕರು ಮನೆಗಳಲ್ಲಿ ಕತ್ತರಿಸಿ ಬೀಡಿ ಸುತ್ತುತ್ತಾರೆ. ಬಲ: ಸಾಮಾನ್ಯವಾಗಿ ಔರಂಗಾಬಾದಿನ ಈ ಅಂಗಳದಲ್ಲಿ 50-60 ಬೀಡಿ ಸುತ್ತುವ ಕಾರ್ಮಿಕರಿರುತ್ತಾರೆ, ಆದರೆ ಈಗ ಅವರ ಸಂಖ್ಯೆ ತೀರಾ ಕಡಿಮೆ ಇದೆ

ಪಶ್ಚಿಮ ಬಂಗಾಳದಲ್ಲಿರುವ ಅಂದಾಜು 90  ಪ್ರಮುಖ ನೋಂದಾಯಿತ ಬೀಡಿ ಘಟಕಗಳಲ್ಲಿ ಅಂದಾಜು 20 ಲಕ್ಷ ಬೀಡಿ ಕಾರ್ಮಿಕರು (ಫ್ಯಾಕ್ಟರಿಯೊಳಗೆ ಮತ್ತು ಮನೆಯಲ್ಲಿ ಕೆಲಸ ಮಾಡುವವರೂ ಸೇರಿ) ದುಡಿಯುತ್ತಿದ್ದಾರೆ ಎಂದು ಅಂಕಿ ಸಂಖ್ಯೆಗಳು ತಿಳಿಸುತ್ತವೆ. ಜಂಗೀಪುರ ಈ ಉದ್ದಿಮೆಯ ಮೂಲ ಕೇಂದ್ರವಾಗಿದ್ದು, ಬರೀ ಈ ಉಪವಿಭಾಗದೊಳಗೆ 10 ಲಕ್ಷ ಬೀಡಿ ಕಾರ್ಮಿಕರಿದ್ದಾರೆ, 18 ದೊಡ್ಡ, 50 ಸಣ್ಣ ಬೀಡಿ ಕಾರ್ಖಾನೆಗಳಿವೆ ಎನ್ನುತ್ತಾರೆ ಭಾರತೀಯ ಕಾರ್ಮಿಕ ಸಂಘಗಳ ಕೇಂದ್ರ (CITU)ದ ಸ್ಥಳೀಯ ಘಟಕದವರು. ಈ ಕಾರ್ಮಿಕರಲ್ಲಿ 90% ಮಂದಿ ಮನೆಗಳಿಂದಲೇ ಕೆಲಸ ಮಾಡುವವರಂತೆ.

ನವೆಂಬರ್ 8ರ ನೋಟು ರದ್ಧತಿಯ ಬಳಿಕ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಪ್ರಮುಖ ಬೀಡಿ ಕಾರ್ಖಾನೆಗಳೆಲ್ಲ ಬಾಗಿಲು ಹಾಕಿಕೊಂಡಿವೆ. ಅರ್ಧಕ್ಕರ್ಧ ಬೀಡಿ ಕಾರ್ಮಿಕರಿಗೆ ಕೆಲಸ ಇಲ್ಲದಾಗಿದೆ, ಹಣ ಸಿಗದಾಗಿದೆ ಮತ್ತು ಮನೆಯಲ್ಲಿ ಒಲೆಯೂ ಉರಿಯದಂತಾಗಿದೆ. ಇನ್ನೂ ಅಲ್ಪಸ್ವಲ್ಪ ಕೆಲಸ ಸಿಗುತ್ತಿರುವವರಿಗೆ, ಸಿಗುವ ಕೆಲಸದ ಪ್ರಮಾಣ ತೀರಾ ತಗ್ಗಿದೆ, ಹಣ ಪಾವತಿ ವಾರಕ್ಕೊಮ್ಮೆ ಸಿಗುತ್ತಿಲ್ಲ. ಉದಾಹರಣೆಗೆ ಪಶ್ಚಿಮ ಬಂಗಾಳದ ಕಾರ್ಮಿಕ ಖಾತೆಯ ರಾಜ್ಯ ಸಚಿವ ಜಾಖಿರ್ ಹೊಸೈನ್ ಮಾಲಕತ್ವದ ಶಿವ್ ಬೀಡಿ ಫ್ಯಾಕ್ಟರಿ ’ಪಠಾಕಾ’ ಬ್ರಾಂಡಿನ ಬೀಡಿ ಉತ್ಪಾದಿಸುತ್ತಿದ್ದು, ಆ ಕಂಪನಿ ನೋಟು ರದ್ಧಾದ ಒಂದು ವಾರದೊಳಗೇ ಬಾಗಿಲೆಳೆದುಕೊಂಡಿದೆ. ಇನ್ನೂ ಕಾರ್ಯಾಚರಿಸುತ್ತಿರುವ ಕೆಲವು ಕಾರ್ಖಾನೆಗಳೂ ನಗದಿನ ತೀವ್ರ ಕೊರತೆಯಿಂದಾಗಿ ಶೀಘ್ರವೇ ಬಾಗಿಲೆಳೆದುಕೊಳ್ಳಬೇಕೆಂದು ಯೋಚಿಸತೊಡಗಿವೆ.

PHOTO • Arunava Patra

ಎಡ: ಗೋದಾಮುಗಳಲ್ಲಿ ಬಳಕೆಯಾಗದೇ ಉಳಿದುಕೊಂಡಿರುವ ಬೀಡಿ ಕಟ್ಟಿನ ಲೇಬಲ್ ಗಳು. ಬಲ: ಮುರ್ಷಿದಾಬಾದಿನ ಜಹಾಂಗೀರ್ ಬೀಡಿ ಫ್ಯಾಕ್ಟರಿಯಲ್ಲಿ ಬೀಡಿಗಳನ್ನು ವಿಂಗಡಿಸಿ, ತೂಕ ಮಾಡುವ ಸ್ಥಳ ಸಾಮಾನ್ಯವಾಗಿ ಇದು ಫ್ಯಾಕ್ಟರಿಯ ಅತ್ಯಂತ ಜನನಿಬಿಡ ಸ್ಥಳ

ಇಲ್ಲಿ ಎಲ್ಲ ಪಾವತಿಗಳು ನಡೆಯುವುದೂ ನಗದಿನಲ್ಲೇ. “ನಾನು ಪ್ರತೀ ವಾರ ಗುಮಾಸ್ತರುಗಳ ಮೂಲಕ ಡಿಪೋಗಳಲ್ಲಿ ಒಟ್ಟು 1-1.5 ಕೋಟಿ ರೂಪಾಯಿಗಳನ್ನು ವಿತರಿಸಬೇಕಾಗುತ್ತದೆ. ಆದರೆ ಬ್ಯಾಂಕು ನನಗೆ ನನ್ನ ಚಾಲ್ತಿ ಖಾತೆಯಿಂದ ಪ್ರತಿದಿನ ಕೇವಲ 50,000 ರೂಪಾಯಿ ಮಾತ್ರ ತೆಗೆಯಲು ಅವಕಾಶ ಕೊಡುತ್ತಿದೆ – ಅದೂ ಸಿಗುವುದು ಖಚಿತವಿರುವುದಿಲ್ಲ” ಎನ್ನುತ್ತಾರೆ, ಜಂಗೀಪುರದ ಔರಂಗಾಬಾದ್ ನಲ್ಲಿರುವ ಜಹಾಂಗೀರ್ ಬೀಡಿ ಫ್ಯಾಕ್ಟರಿಯ ಮಾಲಿಕ ಇಮಾನಿ ಬಿಸ್ವಾಸ್. “ಹೀಗಾದರೆ ನಾನು ನನ್ನ ವ್ಯವಹಾರ ನಡೆಸುವುದು ಹೇಗೆ?

PHOTO • Arunava Patra

ನಾವಿನ್ನೂ ಮುಚ್ಚಿಲ್ಲ ಆದರೆ ಕೆಲಸ ಬಹುತೇಕ ನಿಂತಿದೆ ಮತ್ತು ಬಹಳ ಬೇಗ ನಾವೂ ಮುಚ್ಚಬೇಕಾಗುತ್ತದೆ ಎನ್ನುತ್ತಾರೆ ಮುರ್ಷಿದಾಬಾದಿನಲ್ಲಿರುವ ಜಹಾಂಗೀರ್ ಬೀಡಿ ಫ್ಯಾಕ್ಟರಿಯ ಮಾಲಕ ಎಮಾನಿ ಬಿಸ್ವಾನ್

ಮುರ್ಷಿದಾಬಾದಿನಲ್ಲಿ ಮನೆಗಳಿಂದ ಬೀಡಿ ಸುತ್ತಿಕೊಡುವವರಿಗೆ ವಾರಕ್ಕೊಮ್ಮೆ ಹಣ ಪಾವತಿಸುವುದು ಪದ್ಧತಿ –ಸುತ್ತಿದ ಪ್ರತೀ 1000 ಬೀಡಿಗಳಿಗೆ 126ರೂ. ಪ್ರಕಾರ. ದಿನದಲ್ಲಿ ದುಡಿಯುವ ಘಂಟೆಗಳನ್ನು ಆಧರಿಸಿಕೊಂಡು ಒಬ್ಬ ಬೀಡಿ ಸುತ್ತುವ ಕೆಲಸಗಾರರು ವಾರಕ್ಕೆ ತಲಾ 600–2000 ರೂಪಾಯಿಗಳ ತನಕ ದುಡಿಯಬಲ್ಲರು. ಔರಂಗಬಾದಿನ ಬೀಡಿ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜ್ಕುಮಾರ್ ಜೈನ್ ಅವರ ಪ್ರಕಾರ ಎಲ್ಲ ಕಾರ್ಖಾನೆಗಳ ಗುಮಾಸ್ತರು ಒಟ್ಟಾಗಿ ವಾರಕ್ಕೆ 35 ಕೋಟಿ ರೂಪಾಯಿಗಳ ಬಟವಾಡೆ ಮಾಡುತ್ತಾರೆ.

ಕೆಲವರು ಈ ಪರಿಸ್ಥಿತಿಯ ದುರ್ಲಾಭ ಪಡೆಯಲು ಪ್ರಯತ್ನಿಸುತ್ತಿರುವುದೂ ಗಮನಕ್ಕೆ ಬಂದಿದೆ. ಜಂಗೀಪುರದ ಕೆಲವು ಭಾಗಗಳಲ್ಲಿ, ಧುಲಿಹಾನ್ಮತ್ತು ಶಂಷೇರ್ ಗಂಜ್ ಗಳಲ್ಲಿ ಕೆಲವರು ಸರ್ಕಾರದ ಕನಿಷ್ಟ ವೇತನ ದರದ ಕಾನೂನನ್ನು ಉಲ್ಲಂಘಿಸಿ 1000 ಬೀಡಿ ಸುತ್ತಿದರೆ 90 ರೂಪಾಯಿ ಕೊಡುತ್ತೇವೆ ಎಂಬ ಆಹ್ವಾನ ಕೊಟ್ಟದ್ದೂ ಇದೆ.

ನಗದು ಕೊರತೆಯ ಪ್ರಭಾವ ಬೀಡಿ ಸುತ್ತುವುದರ ಮೇಲಷ್ಟೇ ಅಲ್ಲ, ಮಾರಾಟದ ಮೇಲೂ ಆಗಿದೆ. ಮುರ್ಷಿದಾಬಾದಿನಿಂದ ದೇಶದ ವಿವಿಧೆಡೆಗಳಿಗೆ ತೆರಳುವ ಬೀಡಿಕಟ್ಟಿನ ಪ್ಯಾಕೆಟ್ಟುಗಳ ಪ್ರಮಾಣ ಅರ್ಧಕ್ಕರ್ಧ ಕಡಿಮೆ ಆಗಿದೆ ಎಂದು ಔರಂಗಬಾದ್ ಬೀಡಿ ಮಾಲಕರ ಸಂಘ ಅಂದಾಜಿಸಿದೆ.  ಬೀಡಿ ಕಟ್ಟಿನ ಪ್ಯಾಕೆಟ್ಟುಗಳು ತುಂಬಿರುವ ಚೀಲಗಳ ರಾಶಿ ಮಾರಾಟವಾಗದೆ ಗೋದಾಮುಗಳಲ್ಲಿ ಹಾಗೇ ಬಿದ್ದಿವೆ.

PHOTO • Arunava Patra

ಬೇಡಿಕೆ ತಗ್ಗಿರುವುದರಿಂದಾಗಿ ಜಹಾಂಗೀರ್ ಬೀಡಿ ಫ್ಯಾಕ್ಟರಿಯಲ್ಲಿ ಮಾರಾಟಕ್ಕೆ ಸಿದ್ಧಗೊಂಡು ರಾಶಿ ಬಿದ್ದಿರುವ ಬೀಡಿ ಚೀಲಗಳು

ಅಸಂಘಟಿತ ಕ್ಷೇತ್ರದಲ್ಲಿ ತೀರಾ ದುರ್ಬಲರಾಗಿರುವ ಬೀಡಿ ಕಾರ್ಮಿಕರಿಗೆ ಈ ಹೊಡೆತ ವಿನಾಶಕಾರಿಯಾಗಿ ಪರಿಣಮಿಸಿದೆ. “ನಮ್ಮ ಇಡೀಯ ಬದುಕು ಬೀಡಿಗಳನ್ನೇ ಅವಲಂಬಿಸಿದೆ. ಜಿಲ್ಲೆಯ ಈ ಭಾಗದಲ್ಲಿ ಹೆಚ್ಚಿನ ಕುಟುಂಬಗಳಿಗೆ ಬೀಡಿ ಉದ್ದಿಮೆಯೇ ಏಕಮಾತ್ರ ಆದಾಯ ಮೂಲ.  ಇಲ್ಲಿನ ಜನ ಭೂರಹಿತರು ಮತ್ತು ಕೃಷಿಯ ಅನುಭವ-ಜ್ಞಾನ ಇಲ್ಲದವರು.  ಇಲ್ಲಿ ಬೇರೆ ಕೈಗಾರಿಕೆಗಳೂ ಇಲ್ಲ”, ಎನ್ನುತ್ತಾರೆ ಕಳೆದ 30  ವರ್ಷಗಳಿಂದ ಜಹಾಂಗೀರ್ ಬೀಡಿ ಕಾರ್ಖಾನೆಯ ಗುಮಾಸ್ತರಾಗಿ ದುಡಿಯುತ್ತಿರುವ 68 ವರ್ಷ ಪ್ರಾಯದ ಮಹಮ್ಮದ್ ಸೈಫುದ್ದೀನ್. “ಮೊದಲ ವಾರ ನಾವು ಹಳೆ 1000,500 ರ ನೋಟುಗಳನ್ನೇ ಹಂಚುವ ಮೂಲಕ ಉತ್ಪಾದನೆಗೆ ತೊಂದರೆ ಆಗದಂತೆ ನೋಡಿಕೊಂಡೆವು.  ಆದರೆ, ಆ ಬಳಿಕ ಅದು ಸಾಧ್ಯವಾಗಲಿಲ್ಲ.”

ನಮಗೆ ಫ್ಯಾಕ್ಟರಿಗಳಿಂದ ಮಾಲು ಬೇಕೆಂಬ ಬೇಡಿಕೆಯೂ ಬರುತ್ತಿಲ್ಲ.  ಹಾಗಾಗಿ ಕೆಲಸ ಇಲ್ಲ, ಕಾರ್ಮಿಕರಿಗೆ ಕಳೆದ ಮೂರು ವಾರಗಳಿಂದ ದುಡ್ಡು ಬಟವಾಡೆಯೂ ಆಗುತ್ತಿಲ್ಲ. ಅವರಿಗೆಲ್ಲ ತುಂಬಾ ಕಷ್ಟವಾಗಿದೆ.” ಎನ್ನುತ್ತಾರೆ ಆತ. ಕಳೆದ ಮೂರು ದಶಕಗಳಲ್ಲಿ ಯಾವತ್ತೂ ಇಂತಹ ಪರಿಸ್ಥಿತಿ ಬಂದದ್ದಿಲ್ಲ ಎನ್ನುವ ಸೈಫುದ್ದೀನ್ “ ನಮ್ಮ ಫ್ಯಾಕ್ಟರಿ ಇನ್ನೂ ಮುಚ್ಚಿಲ್ಲ, ಆದರೆ ಉತ್ಪಾದನೆಯ ಪ್ರಮಾಣವನ್ನು ತೀರಾ ತಗ್ಗಿಸಲಾಗಿದೆ. ನಾನು ಕಡಿಮೆ ಬೇಡಿಕೆಗೆ ತಕ್ಕಷ್ಟೇ ಕಚ್ಛಾಮಾಲು ಹಿಡಿದು ಹಳ್ಳಿಗಳಿಗೆ ಹೋದಾಗ, ಜನನನ್ನ ಬೆನ್ನುಬಿದ್ದು, ನನಗೆ ಘೇರಾವ್ ಮಾಡುತ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಮನೆಯಲ್ಲಿ ಅಡುಗೆ ಒಲೆ ಉರಿಸಲು ಸ್ವಲ್ಪವಾದರೂ ಕೆಲಸದ ಅಗತ್ಯ ಇದೆ. ಆದರೆ ನನ್ನದು ಅಸಹಾಯಕ ಪರಿಸ್ಥಿತಿ” ಎಂದು ವಿವರಿಸಿದರು.

ಈ ವಿಡಿಯೋ ನೋಡಿ: ಬೀಡಿ ಗುತ್ತಿಗೆದಾರರು ಹಾಗೂ ಕಾರ್ಮಿಕರು ಇಲ್ಲಿ ನೋಟು ರದ್ದತಿಯ ಬಗ್ಗೆ ಮಾತನಾಡಿದ್ದಾರೆ

ವಾರಗಟ್ಟಲೆ ಕೆಲಸವಾಗಲೀ, ಹಣ ಪಾವತಿಯಾಗಲೀ ಸಿಗದ ಮುರ್ಷಿದಾಬಾದಿನ ಜನ ಪ್ರಪಾತಕ್ಕೆ ಕುಸಿದಿದ್ದಾರೆ.  ಅವರ ಉಳಿಕೆ ಹಣ ಕೂಡ ವೇಗವಾಗಿ ಕರಗುತ್ತಿದೆ. ತಹೇರಾ ಬೀವಿಯಂತಹ ಕೆಲವರಂತೂ ಈಗ ದಿನಕ್ಕೊಂದೇ ಊಟದಲ್ಲಿ ಸುಧಾರಿಸುತ್ತಿದ್ದಾರೆ. ಹೆತ್ತವರು ತೀರಿಕೊಂಡ ಬಳಿಕ ಕಳೆದ 50 ವರ್ಷಗಳಿಂದ ಬೀಡಿ ಸುತ್ತಿ ಬದುಕುತ್ತಿರುವ 58 ವರ್ಷ ಪ್ರಾಯದ ಆಕೆ, ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ   ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಕಾಲಿನ ತೀವ್ರ ಜಖಂಗೆ ಒಳಗಾಗಿ ಮನೆ ಸೇರಿರುವ ತನ್ನ ಮಗನನ್ನೂ, ಇನ್ನೂ ಮದುವೆಯಾಗಿರದ ಮಗಳನ್ನೂ ಸಾಕಬೇಕಾಗಿದೆ. ಆಕೆಯ ಮನೆಗಿರುವ ಏಕೈಕ ಆದಾಯ ಮೂಲ ಎಂದರೆ ಬೀಡಿ. ತಾಹೆರ ಪ್ರತಿದಿನ 1000-1200 ಬೀಡಿ ಸುತ್ತುತ್ತಾರೆ ಆದರೆ, ನಿರಂತರವಾಗಿ ತಂಬಾಕಿಗೆ ತೆರೆದುಕೊಂಡದ್ದರಿಂದ ಆಕೆಯಲ್ಲಿ ಇತ್ತೀಚೆಗೆ ಕ್ಷಯರೋಗ ಪತ್ತೆ ಆಗಿದೆ. “ನನಗೆ ಹುಷರಿಲ್ಲ ನಿಜ. ಆದರೆ ಬೀಡಿ ಇಲ್ಲದಿದ್ದರೆ ನಮಗೆ ಆದಾಯವೂ ಇಲ್ಲ. ನನಗೆ ರಾತ್ರಿ ನಿದ್ದೆ ಹತ್ತುತ್ತಿಲ್ಲ” ಎಂದು ಚಿಂತಾಕ್ರಾಂತರಾಗಿ ನುಡಿಯುತ್ತಿದ್ದಾರೆ ಆಕೆ.

ಛಾಯಾಚಿತ್ರಗಳು: ಅರುಣವ ಪಾತ್ರ

ಅನುವಾದ: ರಾಜಾರಾಂ ತಲ್ಲೂರು

Arunava Patra

Arunava Patra is a photographer based in Kolkata. He has worked as a content producer for various television channels, and is an occasional columnist for the Anandabazar Patrika. He has a degree in electrical engineering from Jadavpur University.

यांचे इतर लिखाण Arunava Patra
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

यांचे इतर लिखाण राजाराम तल्लूर