ಮರದಲ್ಲಿ ಅಸ್ಪಷ್ಟವಾಗಿ ಕಾಣುವ ಗೂಬೆಯನ್ನು ಅವರು ಅದರ ಸೌಮ್ಯ ಕೂಗಿನಿಂದಲೇ ಅವರು ಗುರುತಿಸಬಲ್ಲರು. ಮತ್ತು ಅವರು ನಾಲ್ಕು ರೀತಿಯ ಹರಟೆ ಮಲ್ಲಗಳನ್ನು ಗುರುತಿಸಬಲ್ಲರು. ಅಲ್ಲದೆ ಅವರಿಗೆ ಉಣ್ಣೆ ಕತ್ತಿನ ಕೊಕ್ಕರೆ ಎಂತಹ ಕೆರೆಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಎನ್ನುವುದು ಸಹ ಗೊತ್ತು.
ಬಿ ಸಿದ್ದನ್ ಸಣ್ಣ ವಯಸ್ಸಿನಲ್ಲೇ ಶಾಲೆ ಬಿಡಬೇಕಾಯಿತಾದರೂ, ಅವರ ಹಕ್ಕಿಗಳ ಕುರಿತ ಜ್ಞಾನ ಹಕ್ಕಿತಜ್ಞರಿಗೆ ಹಬ್ಬವೆನ್ನಿಸುತ್ತದೆ. ಅವರಿಗೆ ತಮಿಳುನಾಡಿನ ನೀಲಗಿರಿಯಲ್ಲಿರುವ ಅವರ ಮನೆಯ ಸುತ್ತಮುತ್ತಲಿನ ಹಕ್ಕಿಗಳೆಲ್ಲ ಪರಿಚಯ.
“ನಮ್ಮ ಬೊಕ್ಕಪುರಂನಲ್ಲಿ ಸಿದ್ದನ್ ಹೆಸರಿನ ನಾಲ್ಕು ಹುಡುಗರಿದ್ದರು. ಅಲ್ಲಿನ ಜನ ನನ್ನನ್ನು ಗುರುತಿಸುವುದು ʼಕುರುವಿ ಸಿದ್ದನ್ʼ ಎಂದು. ಎಂದರೆ ಹಕ್ಕಿಗಳ ಹಿಂದೆ ತಿರುಗುವವ ಎಂದು” ಎನ್ನುತ್ತಾ ಹೆಮ್ಮೆಯಿಂದ ನಗುತ್ತಾರೆ.
ಅವರ ಅಧಿಕೃತ ಹೆಸರು ಬಿ.ಸಿದ್ದನ್, ಆದರೆ ಮುದುಮಲೈ ಸುತ್ತಮುತ್ತಲಿನ ಕಾಡುಗಳು ಮತ್ತು ಹಳ್ಳಿಗಳಲ್ಲಿ, ಅವರನ್ನು ಕುರುವಿ ಸಿದ್ದನ್ ಎಂದು ಕರೆಯಲಾಗುತ್ತದೆ. ತಮಿಳಿನಲ್ಲಿ, 'ಕುರುವಿ' ಪ್ಯಾಸೆರಿನ್‌ಗಳನ್ನು (passerines) ಸೂಚಿಸುತ್ತದೆ: ಪ್ಯಾಸೆರಿಫಾರ್ಮ್ಸ್ ಕ್ರಮದಲ್ಲಿರುವ ಪಕ್ಷಿಗಳು - ಎಲ್ಲಾ ಪಕ್ಷಿ ಪ್ರಭೇದಗಳಲ್ಲಿ ಅರ್ಧಕ್ಕಿಂತ ಹೆಚ್ಚು.
"ಪಶ್ಚಿಮ ಘಟ್ಟಗಳಲ್ಲಿ ನೀವು ಎಲ್ಲೇ ಇದ್ದರೂ, ನಾಲ್ಕು ಅಥವಾ ಐದು ಪಕ್ಷಿಗಳು ಹಾಡುವುದನ್ನು ನೀವು ಕೇಳಬಹುದು. ನೀವು ಮಾಡಬೇಕಾಗಿರುವುದು ಕೇಳುವುದು ಮತ್ತು ಕಲಿಯುವುದು" ಎಂದು ನೀಲಗಿರಿ ಬೆಟ್ಟದ ತಪ್ಪಲಿನಲ್ಲಿರುವ ಆನೆಕಟ್ಟಿ ಗ್ರಾಮದ 28 ವರ್ಷದ ಪ್ರಾಥಮಿಕ ಶಾಲಾ ಶಿಕ್ಷಕಿ ವಿಜಯ ಸುರೇಶ್ ಹೇಳುತ್ತಾರೆ. ಮುದುಮಲೈ ಹುಲಿ ಮೀಸಲು ಪ್ರದೇಶದ ಬಳಿ ವಾಸಿಸುವ ಅನೇಕ ಯುವಕರಿಗೆ ಮಾರ್ಗದರ್ಶಕರಾಗಿರುವ ಸಿದ್ದನ್ ಅವರಿಂದ ಪಕ್ಷಿಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಎಂದು ಅವರು ಹೇಳುತ್ತಾರೆ. ವಿಜಯಾ ಈ ಪ್ರದೇಶದ ಮತ್ತು ಸುತ್ತಮುತ್ತಲಿನ 150 ಪಕ್ಷಿಗಳನ್ನು ಗುರುತಿಸಬಲ್ಲರು.
ಸಿದ್ದನ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮುದುಮಲೈ ಹುಲಿ ಮೀಸಲು ಪ್ರದೇಶದ ಬಫರ್ ವಲಯದಲ್ಲಿರುವ ಬೊಕ್ಕಪುರಂ ಗ್ರಾಮದ ನಿವಾಸಿ. ಅವರು ಕಳೆದ ಎರಡೂವರೆ ದಶಕಗಳನ್ನು ಇಲ್ಲಿ ಅರಣ್ಯ ಮಾರ್ಗದರ್ಶಕರಾಗಿ, ಪಕ್ಷಿ ವೀಕ್ಷಕರಾಗಿ ಮತ್ತು ರೈತರಾಗಿ ಕಳೆದಿದ್ದಾರೆ. 46 ವರ್ಷದ ಈ ಹಕ್ಕಿ ವೀಕ್ಷಕ ಭಾರತದಾದ್ಯಂತ 800ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳನ್ನು ಹೆಸರಿಸಬಲ್ಲರು ಮತ್ತು ಅವುಗಳಲ್ಲಿ ಅನೇಕವುಗಳ ಬಗ್ಗೆ ಸುದೀರ್ಘವಾಗಿ ಮಾತನಾಡಬಲ್ಲರು. ತಮಿಳುನಾಡಿನಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾದ ಇರುಳರ್ (ಇರುಳ ಎಂದೂ ಕರೆಯಲಾಗುತ್ತದೆ) ಸಮುದಾಯದ ಸದಸ್ಯರಾಗಿರುವ ಸಿದ್ದನ್ ಅವರು ಮುದುಮಲೈ ಸುತ್ತಮುತ್ತಲಿನ ಶಾಲೆಗಳಲ್ಲಿ ಪ್ರೆಸಂಟೇಷನ್‌ಗಳು, ಅನೌಪಚಾರಿಕ ಮಾತುಕತೆಗಳು ಮತ್ತು ಕಾಡುಗಳಲ್ಲಿನ ಪ್ರಕೃತಿ ನಡಿಗೆಗಳ ಮೂಲಕ ತಮ್ಮ ಜ್ಞಾನವನ್ನು ಚಿಕ್ಕ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾರೆ.
ಆರಂಭದಲ್ಲಿ ಪಕ್ಷಿಗಳ ಮೇಲಿನ ಅವರ ಆಸಕ್ತಿಯನ್ನು ಮಕ್ಕಳು ಲಘುವಾಗಿ ಪರಿಗಣಿಸಿದರು. "ಆದರೆ ನಂತರ ಅವರು ಪಕ್ಷಿಯನ್ನು ನೋಡಿದಾಗ, ಅವರು ನನ್ನ ಬಳಿಗೆ ಬಂದು ಅದರ ಬಣ್ಣ, ಗಾತ್ರ ಮತ್ತು ಅದು ಮಾಡಿದ ಶಬ್ದಗಳನ್ನು ವಿವರಿಸುತ್ತಿದ್ದರು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
38 ವರ್ಷದ ರಾಜೇಶ್ ಮೊಯಾರ್ ಗ್ರಾಮದ ಹಳೆಯ ವಿದ್ಯಾರ್ಥಿ. ಹಕ್ಕಿ ತಜ್ಞನೊಂದಿಗಿನ ಪ್ರಯಾಣದ ನೆನಪುಗಳನ್ನು ಹಂಚಿಕೊಳ್ಳುತ್ತಾ, "ನತ್ತಿಂಗಗಳಂತಹ ಕೆಲವು ಪಕ್ಷಿಗಳು ಮರದ ಗೂಡಿನಲ್ಲಿ ಮೊಟ್ಟೆಯಿಡದೆ ಬಿದಿರಿನ ಎಲೆಗಳ ನಡುವೆ ಮೊಟ್ಟೆಯಿಡುತ್ತವೆ ಅಲ್ಲಿ ನಡೆಯಬೇಡಿ ಎನ್ನುತ್ತಿದ್ದರು. ಮೊದಲಿಗೆ, ನಾನು ಈ ರೀತಿಯ ಮಾಹಿಗಳ ಕುರಿತಾಗಿ ಮಾತ್ರವೇ ಕುತೂಹಲ ಹೊಂದಿದ್ದೆ, ಆದರೆ ಕೊನೆ, ನಾನು ಪಕ್ಷಿಗಳ ಜಗತ್ತಿಗೆ ಸೆಳೆಯಲ್ಪಟ್ಟೆ.
ನೀಲಗಿರಿಯು ತೋಡ, ಕೋಟ, ಇರುಳರು, ಕಟ್ಟುನಾಯಕನ್ ಮತ್ತು ಪನಿಯಾದಂತಹ ಅನೇಕ ಆದಿವಾಸಿ ಸಮುದಾಯಗಳಿಗೆ ನೆಲೆಯಾಗಿದೆ. "ನೆರೆಹೊರೆಯ ಬುಡಕಟ್ಟು ಮಕ್ಕಳು ಆಸಕ್ತಿ ತೋರಿಸಿದಾಗ, ನಾನು ಅವರಿಗೆ ಹಳೆಯ ಗೂಡನ್ನು ನೀಡುತ್ತೇನೆ ಅಥವಾ ಮರಿಗಳಲ್ಲಿ ಒಂದನ್ನು ರಕ್ಷಿಸುವ ಜವಾಬ್ದಾರಿಯನ್ನು ಅವರಿಗೆ ನೀಡುತ್ತೇನೆ" ಎಂದು ಸಿದ್ದನ್ ಹೇಳುತ್ತಾರೆ.
2014 ರಲ್ಲಿ ಮಸಿನಗುಡಿ ಇಕೋ ನ್ಯಾಚುರಲಿಸ್ಟ್ಸ್ ಕ್ಲಬ್ (ಎಂಇಎನ್ ಸಿ) ಬೊಕ್ಕಪುರಂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪಕ್ಷಿಗಳ ಬಗ್ಗೆ ಮಾತನಾಡಲು ಆಹ್ವಾನಿಸಿದಾಗ ಶಾಲೆಗಳೊಂದಿಗೆ ಅವರು ಕೆಲಸ ಮಾಡಲು ಆರಂಭಿಸಿದರು. "ಅದರ ನಂತರ, ಹತ್ತಿರದ ಹಳ್ಳಿಗಳ ಅನೇಕ ಶಾಲೆಗಳು ನಮ್ಮನ್ನು ಆಹ್ವಾನಿಸಿದವು" ಎಂದು ಅವರು ಹೇಳುತ್ತಾರೆ.
'ನಮ್ಮ ಬೊಕ್ಕಪುರಂನಲ್ಲಿ ಸಿದ್ದನ್ ಹೆಸರಿನ ನಾಲ್ಕು ಹುಡುಗರಿದ್ದರು. ಅಲ್ಲಿನ ಜನ ನನ್ನನ್ನು ಗುರುತಿಸುವುದು ʼಕುರುವಿ ಸಿದ್ದನ್ʼ ಎಂದು. ಎಂದರೆ ಹಕ್ಕಿಗಳ ಹಿಂದೆ ತಿರುಗುವವ ಎಂದು' ಹೆಮ್ಮೆಯಿಂದ ಹೇಳುತ್ತಾರೆ
*****
ಸಿದ್ದನ್ ಎಂಟನೇ ತರಗತಿಯಲ್ಲಿ ಶಾಲೆ ಬಿಟ್ಟು ಕೃಷಿ ಕೆಲಸದಲ್ಲಿ ತನ್ನ ಹೆತ್ತವರಿಗೆ ಸಹಾಯ ಮಾಡಬೇಕಾಯಿತು. ಅವರು 21 ವರ್ಷದವರಿದ್ದಾಗ, ಅವರನ್ನು ಅರಣ್ಯ ಇಲಾಖೆಯು ಬಂಗಲೆ ವೀಕ್ಷಕರಾಗಿ ನೇಮಿಸಿಕೊಂಡಿತು - ಅವರು ಹಳ್ಳಿಗಳು ಮತ್ತು ಕೃಷಿಭೂಮಿಗಳಲ್ಲಿ ಮತ್ತು ಸುತ್ತಮುತ್ತಲಿನ ಆನೆಗಳ ಚಟುವಟಿಕೆಯ ಬಗ್ಗೆ ಜನರನ್ನು ಎಚ್ಚರಿಸಬೇಕಾಗಿತ್ತು, ಅಡುಗೆಮನೆಯಲ್ಲಿ ಕೆಲಸ ಮಾಡಬೇಕಾಗಿತ್ತು ಮತ್ತು ಶಿಬಿರಗಳ ನಿರ್ಮಾಣಕ್ಕೆ ಸಹಾಯ ಮಾಡಬೇಕಾಗಿತ್ತು.
ಅವರು ಕೆಲಸ ಮಾಡಲು ಪ್ರಾರಂಭಿಸಿದ ಎರಡು ವರ್ಷಕ್ಕೂ ಮೊದಲು, ಸಿದ್ದನ್ ಕೆಲಸವನ್ನು ತೊರೆದರು. "ಸುಮಾರು ಐದು ತಿಂಗಳ ಕಾಲ ನನಗೆ ಬರಬೇಕಿದ್ದ 600 ರೂಪಾಯಿಗಳ ಸಂಬಳ ಬಾರದ ಕಾರಣ ನಾನು ಕೆಲಸ ಬಿಡಬೇಕಾಯಿತು" ಎಂದು ಅವರು ಹೇಳುತ್ತಾರೆ. "ನಾನು ಒತ್ತಡದಲ್ಲಿರದಿದ್ದರೆ, ನಾನು ಇಲಾಖೆಯಲ್ಲಿಯೇ ಉಳಿಯುತ್ತಿದ್ದೆ. ಕೆಲಸವನ್ನು ಬಹಳವಾಗಿ ಪ್ರೀತಿಸುತ್ತಿದ್ದೆ. ನನ್ನಿಂದ ಕಾಡನ್ನು ಬಿಡಲು ಸಾಧ್ಯವಾಗಲಿಲ್ಲ ಹೀಗಾಗಿ ಅರಣ್ಯ ಮಾರ್ಗದರ್ಶಿಯಾದೆ."
90ರ ದಶಕದ ಉತ್ತರಾರ್ಧದಲ್ಲಿ, ಅವರು 23 ವರ್ಷದವರಿದ್ದಾಗ, ಈ ಪ್ರದೇಶದಲ್ಲಿ ಪಕ್ಷಿ ಗಣತಿ ನಡೆಸುವ ಪ್ರಕೃತಿ ತಜ್ಞರೊಂದಿಗೆ ಹೋಗುವ ಅವಕಾಶ ಅವರಿಗೆ ಸಿಕ್ಕಿತು. "ಪಕ್ಷಿ ಪ್ರಿಯರು ಪಕ್ಷಿಗಳತ್ತ ನೋಡುವ ಸಮಯದಲ್ಲಿ, ಅವರು ತಮ್ಮ ಸುತ್ತಲಿನ ಅಪಾಯಗಳ ಬಗ್ಗೆ ಗಮನ ಹರಿಸುವುದಿಲ್ಲ" ಎಂದು ಅವರು ಹೇಳುತ್ತಾರೆ.
ಆ ಪ್ರವಾಸದಲ್ಲಿ ಅವರು ಅನಿರೀಕ್ಷಿತವಾದುದನ್ನುನೋಡಿದರು, "ಅವರೆಲ್ಲ ಮುಂದೆ ಮುಂದೆ ಹೋಗುತ್ತಿದ್ದಾಗ ನಾನು ನೆಲದ ಮೇಲಿದ್ದ ಸಣ್ಣದೊಂದು ಹಕ್ಕಿಯನ್ನು ನೋಡಿದೆ ನೋಡಿದೆ. ಅದು ಸಣ್ಣ ಚಿತ್ರಪಕ್ಷಿಯಾಗಿತ್ತು." ತಮಿಳು ಮತ್ತು ಕನ್ನಡದಲ್ಲಿ ಹಕ್ಕಿಗಳ ಹೆಸರುಗಳನ್ನು ಕಲಿಯಲು ಪ್ರಾರಂಭಿಸಿದ ಸಿದ್ದನ್ ಮತ್ತೆ ಹಿಂತಿರುಗಿ ನೋಡಲಿಲ್ಲ. ಕೆಲವು ವರ್ಷಗಳ ನಂತರ, ಹಿರಿಯ ಪಕ್ಷಿ ವೀಕ್ಷಕರು, ಪ್ರದೇಶದ ಸ್ಥಳೀಯರು, ಕುಟ್ಟಪ್ಪನ್ ಸುದೇಸನ್ ಮತ್ತು ಡೇನಿಯಲ್ ಅವರಿಗೆ ಹಕ್ಕಿಪುಕ್ಕಗಳ ಕುರಿತು ತಿಳುವಳಿಕೆ ನೀಡಲಾರಂಭಿಸಿದರು.
ಪಶ್ಚಿಮ ಘಟ್ಟಗಳು ಮುಂಬೈನ ಉತ್ತರದಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿವೆ ಮತ್ತು 508 ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಪ್ರಕಟಿಸಿದ ಪಶ್ಚಿಮ ಘಟ್ಟಗಳಲ್ಲಿ ಅರಣ್ಯ ರಕ್ಷಕರು (Forest Guardians in the Western Ghats) ಎಂಬ 2017ರ ಪ್ರಬಂಧವು ಹೇಳುತ್ತದೆ. ಇವುಗಳಲ್ಲಿ, ಅಳಿವಿನಂಚಿನಲ್ಲಿರುವ ರುಫಸ್-ಬ್ರೇಸ್ಟೆಡ್ ಲಾಫಿಂಗ್ ಥ್ರಷ್, ನೀಲಗಿರಿ ವುಡ್-ಪಿಜನ್, ವೈಟ್-ಬೆಲ್ಲಿಡ್ ಶಾರ್ಟ್‌ವಿಂಗ್ ಮತ್ತು ಲಾಂಗ್ ಟೇಲ್ ಗ್ರಾಸ್ಬರ್ಡ್, ರುಫಸ್ ಬಬ್ಲರ್ ಮತ್ತು ಬೂದು ತಲೆಯ ಬುಲ್ಬುಲ್ ಸೇರಿದಂತೆ ಕನಿಷ್ಠ 16 ಜಾತಿಗಳು ಈ ಪ್ರದೇಶಕ್ಕೆ ಸ್ಥಳೀಯವಾಗಿವೆ.
ಅನೇಕ ಸಾಮಾನ್ಯ ಪ್ರಭೇದಗಳು ಅಪರೂಪವಾಗುತ್ತಿವೆ ಎಂದು ಕಾಡುಗಳಲ್ಲಿ ಅನೇಕ ಗಂಟೆಗಳ ಕಾಲ ಕಳೆದಿರುವ ಸಿದ್ದನ್ ಹೇಳುತ್ತಾರೆ. "ಈ ಋತುವಿನಲ್ಲಿ ನಾನು ಒಂದೇ ಒಂದು ಬೂದು ತಲೆಯ ಬುಲ್ಬುಲ್ ಹಕ್ಕಿಯನ್ನು ನೋಡಿಲ್ಲ. ಅವು ಇಲ್ಲಿ ತುಂಬಾ ಸಾಮಾನ್ಯವಾಗಿದ್ದವು; ಈಗ ಅವು ವಿರಳವಾಗಿವೆ."
*****
ಕಾಡಿನಾದ್ಯಂತ ಕೆಂಪು ಟಿಟ್ಟಿಭದ ಎಚ್ಚರಿಕೆಯ ಕರೆ ಪ್ರತಿಧ್ವನಿಸುತ್ತದೆ.
"ವೀರಪ್ಪನ್ ಬಹಳಷ್ಟು ದಿನ ಬಂಧನದಿಂದ ತಪ್ಪಿಸಿಕೊಂಡಿದ್ದು ಹೀಗೆ" ಎಂದು ಎನ್.ಶಿವನ್ ಪಿಸುಗುಟ್ಟಿದರು. ಅವರು ಸಿದ್ದನ್ ಅವರ ಸ್ನೇಹಿತ ಮತ್ತು ಸಹ ಪಕ್ಷಿ ತಜ್ಞರು. ಕಳ್ಳಬೇಟೆ, ಶ್ರೀಗಂಧದ ಕಳ್ಳಸಾಗಣೆ ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ವೀರಪ್ಪನ್ ಬೇಕಾಗಿದ್ದನು ಮತ್ತು ಸ್ಥಳೀಯರು ಹೇಳುವಂತೆ, " ಆಳ್ಕಾಟಿ ಪರವೈ (ಜನರಿಗೆ ಎಚ್ಚರಿಕೆ ನೀಡುವ ಪಕ್ಷಿ) ಕರೆಯನ್ನು ಕೇಳುತ್ತಾ ಅವನು ದಶಕಗಳಿಂದ ಸತ್ಯಮಂಗಲಂ ಕಾಡುಗಳಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದನು."
"ಕಾಡಿನಲ್ಲಿ ಪರಭಕ್ಷಕ ಅಥವಾ ನುಸುಳುಕೋರರನ್ನು ನೋಡಿದಾಗ ಟಿಟ್ಟಿಭ ಕೂಗುತ್ತವೆ. ಪೊದೆಗಳ ಮೇಲೆ ಕುಳಿತು ಚಿಲಿಪಿಲಿಗುಟ್ಟುವ ಹರಟೆ ಮಲ್ಲಗಳು ಪರಭಕ್ಷಕಗಳನ್ನು ಹಿಂಬಾಲಿಸುತ್ತವೆ" ಎಂದು ಎನ್.ಶಿವನ್ ಹೇಳುತ್ತಾರೆ, ಅವರು ಪ್ರತಿ ಬಾರಿ ಪಕ್ಷಿಯನ್ನು ನೋಡಿದಾಗಲೆಲ್ಲಾ ಪುಸ್ತಕದಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಾರೆ. "ನಾವು ಒಂದು ವರ್ಷ ಈ ರೀತಿ ತರಬೇತಿ ಪಡೆದಿದ್ದೇವೆ" ಎಂದು 50 ವರ್ಷದ ಅವರು ಹೇಳುತ್ತಾರೆ, ಅವರು ಹಕ್ಕಿ ಪ್ರಭೇದಗಳ ಹೆಸರುಗಳನ್ನು ನೆನಪಿಟ್ಟುಕೊಳ್ಳಲು ಹೆಣಗಾಡಿದ್ದರು ಆದರೆ ಪ್ರಯತ್ನ ಬಿಡಲಿಲ್ಲ. "ಪಕ್ಷಿಗಳು ನಮಗೆ ಮುಖ್ಯ. ನಾನು ಕಲಿಯಬಲ್ಲೆ ಎನ್ನುವುದು ನನಗೆ ತಿಳಿದಿದೆ" ಎಂದು ಅವರು ಹೇಳುತ್ತಾರೆ.
90ರ ದಶಕದ ಮಧ್ಯಭಾಗದಲ್ಲಿ, ಸಿದ್ದನ್ ಮತ್ತು ಶಿವನ್ ಅವರನ್ನು ಬೊಕ್ಕಪುರಂ ಬಳಿಯ ಖಾಸಗಿ ರೆಸಾರ್ಟಿನಲ್ಲಿ ಚಾರಣ ಮಾರ್ಗದರ್ಶಕರಾಗಿ ನೋಂದಾಯಿಸಲಾಯಿತು, ಅಲ್ಲಿ ಅವರು ಪ್ರಪಂಚದ ಎಲ್ಲೆಡೆಯಿಂದ ಬರುವ ಪಕ್ಷಿ ಉತ್ಸಾಹಿಗಳನ್ನು ಭೇಟಿಯಾದರು ಮತ್ತು ಅವರೊಡನೆ ಬೆರೆತರು.
*****
ಸಿದ್ದನ್ ಮಸಿನಗುಡಿಯ ಮಾರುಕಟ್ಟೆಯ ಸುತ್ತಮುತ್ತ ಯುವಕರು ಅವರನ್ನು "ಹಲೋ ಮಾಸ್ಟರ್!" ಎಂದು ಸ್ವಾಗತಿಸುತ್ತಾರೆ. ಅವರ ವಿದ್ಯಾರ್ಥಿಗಳು ಹೆಚ್ಚಾಗಿ ಆದಿವಾಸಿ ಮತ್ತು ದಲಿತ ಹಿನ್ನೆಲೆಯಿಂದ ಬಂದವರು, ಮುದುಮಲೈ ಸುತ್ತಮುತ್ತ ವಾಸಿಸುತ್ತಿದ್ದಾರೆ.
"ನಾಲ್ಕು ಜನರಿರುವ ನಮ್ಮ ಕುಟುಂಬದಲ್ಲಿ ನನ್ನ ತಾಯಿ ಒಬ್ಬರೇ ದುಡಿಯುವ ವ್ಯಕ್ತಿಯಾಗಿದ್ದರು. ನನ್ನನ್ನು ಕೋಟಗಿರಿಯ ಶಾಲೆಗೆ ಕಳುಹಿಸಲು ಅವರಿಗೆ ಸಾಧ್ಯವಾಗಲಿಲ್ಲ" ಎಂದು 33 ವರ್ಷದ, ಹಳೆಯ ವಿದ್ಯಾರ್ಥಿ ಮತ್ತು ಇರುಳ ಸಮುದಾಯದ ಸದಸ್ಯ ಆರ್ ರಾಜ್ ಕುಮಾರ್ ಹೇಳುತ್ತಾರೆ. ಹೀಗಾಗಿ ಅವರು ಪ್ರೌಢಶಾಲೆಯ ಹಂತದಲ್ಲಿ ಶಾಲೆಯನ್ನು ತೊರೆದರು ಮತ್ತು ಬಫರ್ ವಲಯದ ಸುತ್ತ ಓಡಾಡುತ್ತಾ ಸಮಯ ಕಳೆಯುತ್ತಿದ್ದರು. ಒಂದು ದಿನ ಸಿದ್ದನ್ ಅವರನ್ನು ಸಫಾರಿಗೆ ಬರುವಂತೆ ಹೇಳಿದರು. "ಅವರ ಕೆಲಸ ನೋಡಿ ತಕ್ಷಣ ಅದರ ಕಡೆಗೆ ಆಕರ್ಷಿತನಾದೆ. ಕೊನೆಗೆ, ನಾನು ಸಫಾರಿಗಳಲ್ಲಿ ಚಾರಣಕ್ಕೆ ಮತ್ತು ಚಾಲಕರಿಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸಿದೆ" ಎಂದು ರಾಜಕುಮಾರ್ ಹೇಳುತ್ತಾರೆ.
*****
ಮದ್ಯವ್ಯಸನವು ಈ ಪ್ರದೇಶದಲ್ಲಿ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. (ಓದಿ: ನೀಲಗಿರಿಯಲ್ಲಿ: ಅಪೌಷ್ಟಿಕತೆಯ ಆನುವಂಶಿಕತೆ ) ಅರಣ್ಯ ಆಧಾರಿತ ಉದ್ಯೋಗಗಳು ಆದಿವಾಸಿಗಳ ಯುವ ಪೀಳಿಗೆಯನ್ನು ಬಾಟಲಿಯಿಂದ ದೂರವಿರಿಸುತ್ತದೆ ಎಂದು ಸಿದ್ದನ್ ಹೇಳುತ್ತಾರೆ. "[ಮದ್ಯ ವ್ಯಸನಕ್ಕೆ] ಒಂದು ಕಾರಣವೆಂದರೆ ಹುಡುಗರು ಶಾಲೆಯಿಂದ ಹೊರಗುಳಿದಾಗ, ಅವರಿಗೆ ಮಾಡಲು ಬೇರೆ ಏನೂ ಕೆಲಸವಿರುವುದಿಲ್ಲ. ಅವರಿಗೆ ಉತ್ತಮ ಉದ್ಯೋಗಾವಕಾಶಗಳಿಲ್ಲ, ಹೀಗಾಗಿ ಅವರು ಕುಡಿಯುತ್ತಾರೆ."
ಸ್ಥಳೀಯ ಹುಡುಗರಿಗೆ ಕಾಡಿನಲ್ಲಿ ಆಸಕ್ತಿ ಮೂಡಿಸುವುದು ಮತ್ತು ವ್ಯಸನಕಾರಿ ವಸ್ತುಗಳ ಸೆಳೆತದಿಂದ ದೂರವಿರಿಸುವುದು ತನ್ನ ಧ್ಯೇಯವೆಂದು ಸಿದ್ದನ್ ಹೇಳುತ್ತಾರೆ. “ಒಂದರ್ಥದಲ್ಲಿ ನಾನು ಕಾಜಾಣದ ಜಾತಿಯವನು. ಅವು [ಗಾತ್ರದಲ್ಲಿ] ಚಿಕ್ಕದಾಗಿದ್ದರೂ ಪರಭಕ್ಷಕ ಪಕ್ಷಿಗಳ ವಿರುದ್ಧ ಹೋರಾಡಲು ಧೈರ್ಯ ಮಾಡುವುದು ಅವು ಮಾತ್ರ” ಎಂದು ದೂರದಲ್ಲಿ ಕುಳಿತಿದ್ದ ಉದ್ದ ಬಾಲದ ಪುಟ್ಟ ಕಾಜಾಣ ಹಕ್ಕಿಯತ್ತ ಬೆರಳು ತೋರಿಸುತ್ತಾ ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು