" ನನ್ನ ಪತಿ ಶನಿವಾರ ಈ ಗಾತ್ರದ ಮೂರು ಬಾಟಲಿ ಮದ್ಯವನ್ನು ಖರೀದಿಸುತ್ತಾನೆ", ಎಂದು ಕನಕ ತನ್ನ ಸಂಪೂರ್ಣ ವಿಸ್ತರಿಸಿದ ಕೈಯನ್ನು ಎತ್ತಿ ಹಿಡಿದು ತೋರಿಸುತ್ತಾರೆ. "ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಅವನು ಅವುಗಳನ್ನು ಕುಡಿಯುತ್ತಾ ಕೂರುತ್ತಾನೆ ಮತ್ತು ಬಾಟಲಿಗಳು ಖಾಲಿಯಾದಾಗ ಮತ್ತೆ ಕೆಲಸಕ್ಕೆ ಹೋಗುತ್ತಾನೆ. ಆಹಾರಕ್ಕಾಗಿ ಎಂದಿಗೂ ಸಾಕಷ್ಟು ಹಣವಿರುವುದಿಲ್ಲ. ನನಗೆ ಮತ್ತು ನನ್ನ ಮಗುವಿಗೆ ಆಹಾರವನ್ನು ಹೇಗೋ ಹೊಂದಿಸುತ್ತಿದ್ದೇನೆ. ಇದರ ನಡುವೆ ನನ್ನ ಪತಿ ಇನ್ನೊಂದು ಮಗುವನ್ನು ಬಯಸುತ್ತಿದ್ದಾರೆ. ನನಗಂತೂ ಈ ಜೀವನವೇ ಸಾಕಾಗಿ ಹೋಗಿದೆ!", ಎಂದು ಅವರು ಹತಾಶೆಯಿಂದ ಹೇಳುತ್ತಾರೆ.

ಕನಕ (ಹೆಸರು ಬದಲಾಯಿಸಲಾಗಿದೆ) ಗುಡಲೂರು ಆದಿವಾಸಿ ಆಸ್ಪತ್ರೆಯಲ್ಲಿ ವೈದ್ಯರನ್ನು ನೋಡಲು ಕಾಯುತ್ತಿರುವ 24 ವರ್ಷದ ಬೆಟ್ಟ ಕುರುಂಬ ಆದಿವಾಸಿ ತಾಯಿ. ಉದಕಮಂಡಲಂ (ಊಟಿ)ಯಿಂದ 50 ಕಿಲೋಮೀಟರ್ ದೂರದಲ್ಲಿರುವ ಗುಡಲೂರು ಪಟ್ಟಣದ 50 ಹಾಸಿಗೆಗಳ ಆಸ್ಪತ್ರೆಯು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡಲೂರು ಮತ್ತು ಪಂಥಲೂರ್ ತಾಲ್ಲೂಕುಗಳ 12,000 ಕ್ಕಿಂತ ಹೆಚ್ಚು ಆದಿವಾಸಿ ಜನಸಂಖ್ಯೆಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ.

ಸ್ವಲ್ಪ ಮಸುಕಾದ ಸಿಂಥೆಟಿಕ್ ಸೀರೆಯುಟ್ಟಿದ್ದ ಕನಕಾ ತನ್ನ ಏಕೈಕ ಹೆಣ್ಣು ಮಗುವಿಗಾಗಿ ಇಲ್ಲಿದ್ದಾರೆ. ಆಸ್ಪತ್ರೆಯಿಂದ 13 ಕಿಲೋಮೀಟರ್ ದೂರದಲ್ಲಿರುವ ತನ್ನ ಕುಗ್ರಾಮದಲ್ಲಿ ಹಿಂದಿನ ತಿಂಗಳು ನಿಯಮಿತವಾಗಿ ತಪಾಸಣೆ ನಡೆಸುತ್ತಿದ್ದಾಗ , ಆಸ್ಪತ್ರೆಯೊಂದಿಗೆ ಮೈತ್ರಿ ಮಾಡಿಕೊಂಡಿರುವ ನೀಲಗಿರಿಗಳಲ್ಲಿನ ಆರೋಗ್ಯ ಕಲ್ಯಾಣ ಸಂಘದ (ಅಶ್ವಿನಿ) ಆರೋಗ್ಯ ಕಾರ್ಯಕರ್ತೆಯೊಬ್ಬರು ಕೇವಲ 7.2 ಕಿಲೋಗ್ರಾಂಗಳಷ್ಟು ತೂಕವಿದ್ದ ಕನಕ ಅವರ ಎರಡು ವರ್ಷದ ಮಗುವನ್ನು ಕಂಡು ಗಾಬರಿಗೊಂಡರು (ಸರಿಯಾದ ತೂಕ ಎರಡು ವರ್ಷ ವಯಸ್ಸಿಗೆ 10-12 ಕಿಲೋ). ಆ ತೂಕವು ಮಗುವಿನ ತೀವ್ರವಾದ ಅಪೌಷ್ಟಿಕತೆಯನ್ನು ತೋರಿಸುತ್ತಿತ್ತು. ಆರೋಗ್ಯ ಕಾರ್ಯಕರ್ತೆ ಕನಕ ಮತ್ತು ಮಗಳನ್ನು ಕೂಡಲೇ ಆಸ್ಪತ್ರೆಗೆ ಭೇಟಿ ನೀಡುವಂತೆ ಒತ್ತಾಯಿಸಿದ್ದರು.

ಮಗುವಿನ ಅಪೌಷ್ಟಿಕತೆಯು ಆಶ್ಚರ್ಯಕರ ವಿಷಯವೇನಲ್ಲ. ಕನಕ ಒಬ್ಬರೇ ತನ್ನ ಕುಟುಂಬದ ಆದಾಯವನ್ನು ಎಷ್ಟರಮಟ್ಟಿಗೆ ವಿಸ್ತರಿಸಲು ಸಾಧ್ಯ ? ತನ್ನ 20ರ ಹರೆಯದಲ್ಲಿರುವ ಪತಿ ಹತ್ತಿರದ ಚಹಾ , ಕಾಫಿ , ಬಾಳೆಹಣ್ಣು ಮತ್ತು ಮೆಣಸು ತೋಟಗಳಲ್ಲಿ ದೈನಂದಿನ ಕೂಲಿ ಕಾರ್ಮಿಕನಾಗಿ ವಾರದಲ್ಲಿ ಕೆಲವೇ ದಿನ ಕೆಲಸ ಮಾಡುತ್ತಾನೆ . ದಿನಕ್ಕೆ ಸುಮಾರು ರೂ. 300 ಸಂಪಾದಿಸುತ್ತಾನೆ.  "ಅವರು ನನಗೆ ದಿನಸಿಗಾಗಿ ತಿಂಗಳಿಗೆ 500 ರೂಪಾಯಿಗಳನ್ನು ಮಾತ್ರ ನೀಡುತ್ತಾರೆ. ಆ ಹಣದಲ್ಲಿ ನಾನು ಇಡೀ ಕುಟುಂಬಕ್ಕೆ ಅಡುಗೆ ಮಾಡಬೇಕು", ಎಂದು ಕನಕ ಹೇಳುತ್ತಾರೆ.

ಕನಕ ಮತ್ತು ಅವರ ಪತಿ ತಮ್ಮ ಚಿಕ್ಕಮ್ಮ ಮತ್ತು ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದಾರೆ . ಇಬ್ಬರೂ 50ರ ಆಸುಪಾಸಿನಲ್ಲಿದ್ದು ದೈನಂದಿನ ಕೂಲಿ ಕಾರ್ಮಿಕರಾಗಿದ್ದಾರೆ. ಕುಟುಂಬವು ಎರಡು ಪಡಿತರ ಚೀಟಿಗಳನ್ನು ಹೊಂದಿದ್ದು , ಪ್ರತಿ ತಿಂಗಳು 70 ಕಿಲೋಗ್ರಾಂಗಳಷ್ಟು ಉಚಿತ ಅಕ್ಕಿ , ಎರಡು ಕಿಲೋ ದಾಲ್ , ಎರಡು ಕಿಲೋ ಸಕ್ಕರೆ ಮತ್ತು ಎರಡು ಲೀಟರ್ ತೈಲವನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. "ಕೆಲವೊಮ್ಮೆ ನನ್ನ ಪತಿ ಮದ್ಯ ಖರೀದಿಸಲು ನಮ್ಮ ಪಡಿತರ ಅಕ್ಕಿಯನ್ನು ಸಹ ಮಾರುತ್ತಾನೆ. ಕೆಲವು ದಿನ ತಿನ್ನಲು ಏನೂ ಇರುವುದಿಲ್ಲ", ಎಂದು ಕನಕ ಹೇಳುತ್ತಾರೆ.

The Gudalur Adivasi Hospital in the Nilgiris district –this is where young women like Kanaka and Suma come seeking reproductive healthcare, sometimes when it's too late
PHOTO • Priti David
The Gudalur Adivasi Hospital in the Nilgiris district –this is where young women like Kanaka and Suma come seeking reproductive healthcare, sometimes when it's too late
PHOTO • Priti David

ನೀಲಗಿರಿ ಜಿಲ್ಲೆಯ ಗುಡಲೂರು ಆದಿವಾಸಿ ಆಸ್ಪತ್ರೆ - ಕನಕ ಮತ್ತು ಸುಮಾ ಅವರಂತಹ ಯುವತಿಯರು ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಗಾಗಿ ಬರುತ್ತಾರೆ . ಆದರೆ ಕೆಲವೊಮ್ಮೆ ಸಮಯ ಮೀರಿ ಹೋಗಿರುತ್ತದೆ.

ಕನಕ ಮತ್ತು ಅವಳ ಮಗುವಿಗೆ ಬೇಕಾಗುವ ಅಲ್ಪ ಆಹಾರವನ್ನು ಪೂರೈಸಲು ರಾಜ್ಯದ ಪೌಷ್ಟಿಕಾಂಶದ ಕಾರ್ಯಕ್ರಮಗಳು ಸಾಕಾಗುವುದಿಲ್ಲ. ಗುಡಲೂರಿನ ತನ್ನ ಕುಗ್ರಾಮದ ಸಮೀಪವಿರುವ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್) ಬಾಲವಾಡಿಯಿಂದ ಕನಕ ಮತ್ತು ಇತರ ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ವಾರಕ್ಕೆ ಒಂದು ಮೊಟ್ಟೆ ಮತ್ತು ಎರಡು ಕಿಲೋ ಪ್ಯಾಕೆಟ್ ಒಣ ಸತುಮಾವು (ಗೋಧಿ , ಹಸಿರು ಗ್ರಾಂ , ನೆಲಗಡಲೆ , ಕಡಲೆ ಮತ್ತು ಸೋಯಾ) ಪ್ರತಿ ತಿಂಗಳು ಪಡೆಯುತ್ತಾರೆ. ಮೂರು ವರ್ಷದೊಳಗಿನ ಮಕ್ಕಳು ಸಹ ಅದೇ ಸತುಮಾವುವಿನ ಪ್ಯಾಕೆಟ್ ತಿಂಗಳಿಗೊಮ್ಮೆ ಪಡೆಯುತ್ತಾರೆ. ಮೂರನೆಯ ವಯಸ್ಸಿನ ನಂತರ ಮಕ್ಕಳು ಉಪಾಹಾರ , ಊಟ , ಮತ್ತು ಬೆರಳೆಣಿಕೆಯಷ್ಟು ಕಡಲೆಕಾಯಿ ಮತ್ತು ಬೆಲ್ಲದ ಸಂಜೆ ತಿಂಡಿಗಾಗಿ ಐ.ಸಿ.ಡಿ.ಎಸ್ ಕೇಂದ್ರಕ್ಕೆ ಹೋಗುವ ನಿರೀಕ್ಷೆಯಿದೆ. ತೀವ್ರವಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚುವರಿ ಕಡಲೆಕಾಯಿ ಮತ್ತು ಬೆಲ್ಲವನ್ನು ಪ್ರತಿದಿನ ನೀಡಲಾಗುತ್ತದೆ.

ಜುಲೈ 2019ರಿಂದ ಸರ್ಕಾರವು ಚೊಚ್ಚಲ ತಾಯಂದಿರಿಗೆ ಅಮ್ಮ ಉಟ್ಟಚತು ಪೆಟ್ಟಗಂ ಪೌಷ್ಟಿಕಾಂಶದ ಕಿಟ್ ವಿತರಿಸಲು ಪ್ರಾರಂಭಿಸಿದೆ . ಇದರಲ್ಲಿ ಆಯುರ್ವೇದ ಪೂರಕಗಳು , 250 ಗ್ರಾಂ ತುಪ್ಪ ಮತ್ತು 200 ಗ್ರಾಂ ಪ್ರೋಟೀನ್ ಪುಡಿ ಇದೆ. ಆದರೆ ಅಶ್ವಿನಿಯ ಸಮುದಾಯ ಆರೋಗ್ಯ ಕಾರ್ಯಕ್ರಮ ಸಂಯೋಜಕರಾದ 32 ವರ್ಷದ ಜಿಜಿ ಎಲಮನ ಹೇಳುತ್ತಾರೆ , “ ಪ್ಯಾಕೆಟ್ ಕೇವಲ ಅವರ ಮನೆಯ ಕಪಾಟಿನಲ್ಲಿರುತ್ತದೆ. ವಾಸ್ತವವೆಂದರೆ ಬುಡಕಟ್ಟು ಜನರು ತಮ್ಮ ಆಹಾರದಲ್ಲಿ ಹಾಲು ಮತ್ತು ತುಪ್ಪವನ್ನು ಬಳಸುವುದಿಲ್ಲ . ಆದ್ದರಿಂದ ಅವರು ತುಪ್ಪವನ್ನು ಮುಟ್ಟುವುದಿಲ್ಲ. ಪ್ರೋಟೀನ್ ಪುಡಿ ಮತ್ತು ಹಸಿರು ಆಯುರ್ವೇದ ಪುಡಿಯನ್ನು ಹೇಗೆ ಬಳಸಬೇಕೆಂದು ಅವರಿಗೆ ತಿಳಿದಿಲ್ಲ . ಆದ್ದರಿಂದ ಅವರು ಅದನ್ನು ಪಕ್ಕಕ್ಕೆ ಇಡುತ್ತಾರೆ.

ಒಂದು ಕಾಲದಲ್ಲಿ ನೀಲಗಿರಿಗಳಲ್ಲಿನ ಆದಿವಾಸಿ ಸಮುದಾಯಗಳಿಗೆ ಕಾಡುಗಳಿಂದ ಸುಲಭವಾಗಿ ಆಹಾರ ದೊರೆಯುತ್ತಿತ್ತು. "ಆದಿವಾಸಿಗಳು ಅವರು ಸಂಗ್ರಹಿಸುವ ಗೆಡ್ಡೆಗಳು , ಹಣ್ಣುಗಳು , ಸೊಪ್ಪುಗಳು ಮತ್ತು ಅಣಬೆಗಳ ಬಗ್ಗೆ ಬಹಳ ಜ್ಞಾನ ಹೊಂದಿದ್ದಾರೆ", ಎಂದು ಗುಡಲೂರಿನ ಬುಡಕಟ್ಟು ಸಮುದಾಯಗಳೊಂದಿಗೆ ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿರುವ ಮಾರಿ ಮಾರ್ಸೆಲ್ ಥೇಕೇಕರ ಹೇಳುತ್ತಾರೆ. "ಅವರು ವರ್ಷಪೂರ್ತಿ ಆಹಾರಕ್ಕಾಗಿ ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು ಮತ್ತು ಮೀನು ಹಿಡಿಯುತ್ತಿದ್ದರು. ಹೆಚ್ಚಿನ ಮನೆಗಳಲ್ಲಿ ಮಳೆಗಾಲದ ದಿನಗಳಲ್ಲಿ ಅಡುಗೆ ಒಲೆಯ ಮೇಲೆ ಸ್ವಲ್ಪ ಒಣ ಮಾಂಸವಿರುತ್ತಿತ್ತು. ಆದರೆ ನಂತರ ಅರಣ್ಯ ಇಲಾಖೆ ಕಾಡುಗಳ ಪ್ರವೇಶವನ್ನು ಮಿತಿಗೊಳಿಸಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ಅದನ್ನು ಸಂಪೂರ್ಣವಾಗಿ ನಿಲ್ಲಿಸಿತು.

2006 ರ ಅರಣ್ಯ ಹಕ್ಕುಗಳ ಕಾಯ್ದೆಯಡಿ ಸಾಮಾನ್ಯ ಆಸ್ತಿ ಸಂಪನ್ಮೂಲಗಳ ಮೇಲೆ ಸಮುದಾಯದ ಹಕ್ಕುಗಳನ್ನು ಮರುಸ್ಥಾಪಿಸಿದರೂ , ಆದಿವಾಸಿಗಳು ತಮ್ಮ ಆಹಾರವನ್ನು ಮೊದಲಿನಂತೆ ಕಾಡಿನಿಂದ ಸಂಗ್ರಹಿಸಿದ ಸಂಪನ್ಮೂಲಗಳೊಂದಿಗೆ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇಲ್ಲಿನ ಗ್ರಾಮಗಳಲ್ಲಿ ಕುಸಿಯುತ್ತಿರುವ ಆದಾಯವೂ ಹೆಚ್ಚುತ್ತಿರುವ ಅಪೌಷ್ಟಿಕತೆಗೆ ಕಾರಣವಾಗಿದೆ. ಇಲ್ಲಿನ ಕಾಡುಗಳು ಮುದುಮಲೈ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವಾಗಿದ್ದರಿಂದ ಕಳೆದ 15 ವರ್ಷಗಳಲ್ಲಿ ಆದಿವಾಸಿಗಳಿಗೆ ಕೂಲಿ ಕೆಲಸದ ಆಯ್ಕೆಗಳು ಸ್ಥಿರವಾಗಿ ಕಡಿಮೆಯಾಗಿವೆ ಎಂದು ಆದಿವಾಸಿ ಮುನ್ನೇಟ್ರ ಸಂಘದ ಕಾರ್ಯದರ್ಶಿ ಕೆ.ಟಿ ಸುಬ್ರಮಣಿಯನ್ ಹೇಳುತ್ತಾರೆ. ಅಭಯಾರಣ್ಯದೊಳಗಿನ ಸಣ್ಣ ತೋಟಗಳು ಮತ್ತು ಎಸ್ಟೇಟ್ಗಳಲ್ಲಿ ಹೆಚ್ಚಿನ ಆದಿವಾಸಿಗಳು ಕೆಲಸ ಮಾಡುತ್ತಿದ್ದರು ಅವುಗಳು ಮಾರಾಟವಾಗಿದ್ದರಿಂದ ಅಥವಾ ಸ್ಥಳಾಂತರಿಸಲ್ಪಟ್ಟಿದ್ದರಿಂದ ದೊಡ್ಡ ಚಹಾ ತೋಟಗಳಲ್ಲಿ ಅಥವಾ ಹೊಲಗಳಲ್ಲಿ ಮಧ್ಯಂತರ ಕೆಲಸಗಳನ್ನು ಮಾಡುವುದು ಅನಿವಾರ್ಯವಾಯಿತು.

Adivasi women peeling areca nuts – the uncertainty of wage labour on the farms and estates here means uncertain family incomes and rations
PHOTO • Priti David

ಆದಿವಾಸಿ ಮಹಿಳೆಯರು ಅಡಿಕೆ ಸಿಪ್ಪೆ ಸುಲಿಯುತ್ತಿರುವುದು - ಇಲ್ಲಿನ ಹೊಲಗಳು ಮತ್ತು ಎಸ್ಟೇಟ್ಗಳಲ್ಲಿನ ಕೂಲಿ ಕೆಲಸದ ಅನಿಶ್ಚಿತತೆಯೆಂದರೆ ಕುಟುಂಬ ಆದಾಯ ಮತ್ತು ಪಡಿತರ ಅನಿಶ್ಚಿತತೆಯೂ ಹೌದು.

ಕನಕ ಕಾಯುತ್ತಿರುವ ಅದೇ ಗುಡಲೂರು ಆದಿವಾಸಿ ಆಸ್ಪತ್ರೆಯಲ್ಲಿ, 26 ವರ್ಷದ ಸುಮಾ (ಹೆಸರು ಬದಲಾಯಿಸಲಾಗಿದೆ) ಒಂದು ವಾರ್ಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ನೆರೆಯ ಪಂತಲೂರು ತಾಲ್ಲೂಕಿನ ಪಾನಿಯನ್ ಆದಿವಾಸಿ ಮತ್ತು ಇತ್ತೀಚೆಗೆ ತನ್ನ ಮೂರನೆಯ ಮಗುವಿಗೆ ಜನ್ಮ ನೀಡಿದ್ದಾಳೆ. ಮೂರನೆ ಮಗು ಹೆಣ್ಣು. ಇನ್ನೆರಡು ಮಕ್ಕಳಲ್ಲಿ ಒಂದಕ್ಕೆ 2 ವರ್ಷ ಮತ್ತು ಇನ್ನೊಂದಕ್ಕೆ 11 ವರ್ಷಗಳು. ಸುಮಾ ಈ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿಲ್ಲ. ಆದರೆ ಹೆರಿಗೆಯ ನಂತರದ ಆರೈಕೆ ಮತ್ತು ಗರ್ಭ ನಿರೋಧಕ ಶಸ್ತ್ರ ಚಿಕಿತ್ಸೆಗಾಗಿ ಬಂದಿದ್ದಾರೆ.

"ನನ್ನ ಹೆರಿಗೆ ದಿನ ಮೀರಿ ಹೋಗಿತ್ತು, ಆದರೆ ಹೆರಿಗೆಗಾಗಿ ಇಲ್ಲಿಗೆ ಬರಲು ನಮ್ಮ ಬಳಿ ಹಣವಿರಲಿಲ್ಲ", ತನ್ನ ಕುಗ್ರಾಮದಿಂದ ಇಲ್ಲಿಗೆ ಬರಲು ಬೇಕಾಗುವ ಜೀಪ್‌ ಬಾಡಿಗೆ ಹಣವನ್ನು ಉಲ್ಲೇಖಿಸುತ್ತಾ ಅವರು ಹೇಳುತ್ತಾರೆ. "ಗೀತಾ ಚೇಚಿ [ಅಶ್ವಿನಿ ಆರೋಗ್ಯ ಕಾರ್ಯಕರ್ತೆ] ನಮಗೆ ಪ್ರಯಾಣ ಮತ್ತು ಆಹಾರಕ್ಕಾಗಿ 500 ರೂಪಾಯಿಗಳನ್ನು ನೀಡಿದರು. ಆದರೆ ನನ್ನ ಪತಿ ಅದನ್ನು ಮದ್ಯಕ್ಕಾಗಿ ಖರ್ಚು ಮಾಡಿದರು. ಹಾಗಾಗಿ ನಾನು ಮನೆಯಲ್ಲಿಯೇ ಇದ್ದೆ. ಮೂರು ದಿನಗಳ ನಂತರ ನನ್ನ ನೋವು ತೀವ್ರಗೊಂಡಿತು ಮತ್ತು ನಾವು ಹೊರಡಬೇಕಾಯಿತು. ಆದರೆ ಆಸ್ಪತ್ರೆಗೆ ಹೋಗಲು ಈಗಾಗಲೇ ತಡವಾಗಿತ್ತು. ಹಾಗಾಗಿ ನನ್ನ ಮನೆಯ ಸಮೀಪವಿರುವ ಪಿ.ಎಚ್‌.ಸಿ. ಯಲ್ಲಿ ಮಗುವಿಗೆ ಜನ್ಮ ನೀಡಿದೆ." ಮರುದಿನ ಪಿ.ಎಚ್‌.ಸಿ. ಯಲ್ಲಿನ ದಾದಿ 108 (ಆಂಬ್ಯುಲೆನ್ಸ್ ಸೇವೆ)ಗೆ ಕರೆ ಮಾಡಿದ್ದರಿಂದ ಸುಮಾ ಮತ್ತು ಅವರ ಕುಟುಂಬ ಅಂತಿಮವಾಗಿ ಜಿ.ಎ.ಎಚ್‌ ಸೇರುವಂತಾಯಿತು.

ಆದಿವಾಸಿ ಮಹಿಳೆಯರು ಅಡಿಕೆ ಸಿಪ್ಪೆ ಸುಲಿಯುತ್ತಿರುವುದು - ಇಲ್ಲಿನ ಹೊಲಗಳು ಮತ್ತು ಎಸ್ಟೇಟ್ಗಳಲ್ಲಿನ ಕೂಲಿ ಕೆಲಸದ ಅನಿಶ್ಚಿತತೆಯೆಂದರೆ ಕುಟುಂಬ ಆದಾಯ ಮತ್ತು ಪಡಿತರ ಅನಿಶ್ಚಿತತೆಯೂ ಹೌದು.

ನಾಲ್ಕು ವರ್ಷಗಳ ಹಿಂದೆ, ಗರ್ಭಾಶಯದ ಬೆಳವಣಿಗೆಯ ಸಮಸ್ಯೆ(ಐ.ಯು.ಜಿ.ಆರ್)ಯಿಂದಾಗಿ ಸುಮಾ ಏಳನೇ ತಿಂಗಳಲ್ಲಿ ಗರ್ಭಪಾತಕ್ಕೆ ಒಳಗಾಗಿದ್ದರು. ಈ ಸ್ಥಿತಿಯ ಅರ್ಥ ಭ್ರೂಣವು ಅದರ ಗರ್ಭಾವಸ್ಥೆಯ ವಯಸ್ಸಿಗಿಂತ ಚಿಕ್ಕದಾಗಿರುವುದು ಅಥವಾ ಕಡಿಮೆ ಅಭಿವೃದ್ಧಿ ಹೊಂದಿರುವುದು. ಈ ಸ್ಥಿತಿಯು ಹೆಚ್ಚಾಗಿ ತಾಯಿಯ ಪೌಷ್ಟಿಕಾಂಶದ ಸ್ಥಿತಿ, ರಕ್ತಹೀನತೆ ಮತ್ತು ಫೋಲೇಟ್ ಕೊರತೆಯ ಪರಿಣಾಮವಾಗಿದೆ. ಸುಮಾ ಅವರ ಮುಂದಿನ ಗರ್ಭಧಾರಣೆಯೂ ಐ.ಯು.ಜಿ.ಆರ್‌. ನಿಂದ ಪ್ರಭಾವಿತವಾಯಿತು ಮತ್ತು ಅವರ ಎರಡನೆಯ ಮಗಳು ತೀವ್ರ ಕಡಿಮೆ ತೂಕದೊಂದಿಗೆ ಜನಿಸಿದಳು (ಸರಿಯಾದ ಜನನ ತೂಕ 2 ಕಿಲೋ ಬದಲು 1.3 ಕಿಲೋಗ್ರಾಂಗಳು). ಇಂತಹ ಮಗುವಿನ ತೂಕದ ತೂಕದ ಗ್ರಾಫ್ ಅತ್ಯಂತ ಕಡಿಮೆ ಶೇಕಡಾವಾರು ರೇಖೆಗಿಂತ ಕೆಳಗಿರುತ್ತದೆ. ಇದನ್ನು ಚಾರ್ಟಿನಲ್ಲಿ ‘ತೀವ್ರ ಅಪೌಷ್ಟಿಕತೆ’ ಎಂದು ಗುರುತಿಸಲಾಗಿದೆ.

"ತಾಯಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಮಗುವಿಗೆ ಅಪೌಷ್ಟಿಕತೆ ಉಂಟಾಗುತ್ತದೆ. ಸುಮಾ ಮಗು ತನ್ನ ತಾಯಿಯ ಕಳಪೆ ಆಹಾರದ ಪರಿಣಾಮವನ್ನು ಸಹಿಸಿಕೊಳ್ಳುವ ಸಾಧ್ಯತೆಯಿದೆ; ಅವಳ ದೈಹಿಕ, ಬೌದ್ಧಿಕ ಮತ್ತು ನರಗಳ ಬೆಳವಣಿಗೆ ಇತರ ಮಕ್ಕಳ ಮಕ್ಕಳಿಗಿಂತ ನಿಧಾನವಾಗಿರುತ್ತದೆ”, ಎಂದು ಜಿ.ಎ.ಹೆಚ್‌. ನ ಕುಟುಂಬ ಔಷಧ ತಜ್ಞರಾದ ಡಾ. ಮೃದುಲಾ ರಾವ್, 43, ಹೇಳುತ್ತಾರೆ.

ತನ್ನ ಮೂರನೆಯ ಗರ್ಭಾವಸ್ಥೆಯಲ್ಲಿ ಅವಳು ಕೇವಲ ಐದು ಕಿಲೋಗ್ರಾಂ ತೂಕ ಗಳಿಸಿದರು ಎಂದು ಖುದ್ದು ಸುಮಾ ಅವರ ರೋಗಿಯ ದಾಖಲೆಯು ತೋರಿಸುತ್ತದೆ. ಇದು ಸಾಮಾನ್ಯ ತೂಕದ ಗರ್ಭಿಣಿ ಮಹಿಳೆಯರಿಗೆ ನಿಗದಿತ ಗಳಿಕೆಗೆ ಅರ್ಧಕ್ಕಿಂತ ಕಡಿಮೆ ಮತ್ತು ಸುಮಾ ಅವರಂತಹ ಕಡಿಮೆ ತೂಕದ ಮಹಿಳೆಯರಿಗೆ ಅರ್ಧಕ್ಕಿಂತ ಕಡಿಮೆ. ಒಂಬತ್ತು ತಿಂಗಳಲ್ಲಿ ಅವರು ಕೇವಲ 38 ಕಿಲೋಗಳಷ್ಟು ಮಾತ್ರವೇ ತೂಗುತ್ತಿದ್ದರು.

PHOTO • Priyanka Borar

ಇಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್

2006 ರ ಅರಣ್ಯ ಹಕ್ಕುಗಳ ಕಾಯ್ದೆಯಡಿ ಸಮುದಾಯದ ಹಕ್ಕುಗಳನ್ನು ಮರುಸ್ಥಾಪಿಸಿದ್ದರೂ, ಆದಿವಾಸಿಗಳು ತಮ್ಮ ಆಹಾರವನ್ನು ಮೊದಲಿನಂತೆ ಕಾಡಿನಿಂದ ಸಂಗ್ರಹಿಸಿದ ಸಂಪನ್ಮೂಲಗಳಿಂದ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

"ಗರ್ಭಿಣಿ ತಾಯಿ ಮತ್ತು ಮಗುವನ್ನು ಪರೀಕ್ಷಿಸಲು ನಾನು ವಾರದಲ್ಲಿ ಹಲವಾರು ಬಾರಿ ಹೋಗಿದ್ದೆ", ಎಂದು ಜಿ.ಎ.ಹೆಚ್‌. ನ ಆರೋಗ್ಯ ಆನಿಮೇಟರ್ (ಔಟ್‌ರೀಚ್ ವರ್ಕರ್) ಗೀತಾ ಕಣ್ಣನ್ (40) ನೆನಪಿಸಿಕೊಳ್ಳುತ್ತಾರೆ. "ನಾನು ಮಗುವನ್ನು ಅವಳ ಒಳ ಉಡುಪುಗಳಲ್ಲಿ ಮಾತ್ರ ನೋಡುತ್ತಿದ್ದೆ. ‌ಸದಾ ಅಜ್ಜಿಯ ಮಡಿಲಲ್ಲಿ ಕುಳಿತುಕೊಂಡಿರುತ್ತಿತ್ತು. ಮನೆಯಲ್ಲಿ ಅಡುಗೆಯನ್ನು ಮಾಡುತ್ತಿರಲಿಲ್ಲ ಮತ್ತು ಮಗುವಿಗೆ ನೆರೆಹೊರೆಯವರು ಆಹಾರವನ್ನು ನೀಡುತ್ತಿದ್ದರು. ಸುಮಾ ದುರ್ಬಲವಾಗಿ ಕಾಣುತ್ತಾ ಮಲಗಿರುತ್ತಿದ್ದಳು. ನಾನು ಸುಮಾಗೆ ನಮ್ಮ ಅಶ್ವಿನಿ ಸತುಮಾವು (ರಾಗಿ ಮತ್ತು ದ್ವಿದಳ ಧಾನ್ಯಗಳ ಪುಡಿ) ನೀಡುತ್ತೇನೆ ಮತ್ತು ಅವಳ ಆರೋಗ್ಯಕ್ಕಾಗಿ ಮತ್ತು ಅವಳ ಇನ್ನೂ ಹಾಲು ಕುಡಿಯುವ ಮಗುವಿಗಾಗಿ ಉತ್ತಮವಾಗಿ ತಿನ್ನಲು ಹೇಳುತ್ತೇನೆ. ಆದರೆ ಸುಮಾ ತನ್ನ ಪತಿ ತನ್ನ ದಿನಗೂಲಿ ಗಳಿಕೆಯ ಹೆಚ್ಚಿನ ಭಾಗವನ್ನು ಮದ್ಯಕ್ಕಾಗಿ ಖರ್ಚು ಮಾಡುತ್ತಿದ್ದಾನೆ ಎಂದು ಹೇಳಿದರು. ಗೀತಾ ಒಂದು ಕ್ಷಣ ತಡೆದು, "ಸುಮಾ ಕೂಡ ಕುಡಿಯಲು ಪ್ರಾರಂಭಿಸಿದ್ದಳು" ಎಂದು ಹೇಳುತ್ತಾರೆ.

ಈ ನಡುವೆ ಗುಡಲೂರಿನ ಅನೇಕ ಕುಟುಂಬಗಳು ಹೇಳಲು ಇದೇ ರೀತಿಯ ಕತೆಗಳನ್ನು ಹೊಂದಿದ್ದರೂ, ಈ ಬ್ಲಾಕ್‌ ನಲ್ಲಿನ ಆರೋಗ್ಯ ಸೂಚಕಗಳಲ್ಲಿ ಸ್ಥಿರವಾದ ಪ್ರಗತಿಯನ್ನು ಗಳಿಸಲಾಗಿದೆ. 1999 ರಲ್ಲಿ ತಾಯಿಯ ಮರಣ ಅನುಪಾತ (ಎಂ.ಎಂ.ಆರ್) 10.7 (ಪ್ರತಿ 100,000 ಜೀವಂತ ಜನನಗಳಿಗೆ) 2018-19ರ ವೇಳೆಗೆ 3.2 ಕ್ಕೆ ಇಳಿದಿದೆ ಮತ್ತು ಶಿಶು ಮರಣ ಪ್ರಮಾಣ (ಐ.ಎಂ.ಆರ್) 48ರಿಂದ (1,000 ಜೀವಂತ ಜನನಗಳಿಗೆ) 20ಕ್ಕೆ ಇಳಿದಿದೆ ಎಂದು ಆಸ್ಪತ್ರೆಯ ದಾಖಲೆಗಳು ತೋರಿಸುತ್ತವೆ. ವಾಸ್ತವವಾಗಿ ರಾಜ್ಯ ಯೋಜನಾ ಆಯೋಗದ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2017 (ಡಿ.ಎಚ್‌.ಡಿ.ಆರ್ 2017) ನೀಲಗಿರಿ ಜಿಲ್ಲೆಯ ಐ.ಎಂ.ಆರ್ ಅನ್ನು 10.7 ಕ್ಕೆ ದಾಖಲಿಸಿದ್ದು, ಇದು ರಾಜ್ಯದ ಸರಾಸರಿ 21ಕ್ಕಿಂತ ಕಡಿಮೆಯಾಗಿದೆ. ಗುಡಲೂರು ತಾಲ್ಲೂಕು ಇನ್ನೂ ಕಡಿಮೆ 4.0 ದಾಖಲಿಸಿದೆ.

ಗುಡಲೂರಿನಲ್ಲಿ ಕಳೆದ 30 ವರ್ಷಗಳಿಂದ ಆದಿವಾಸಿ ಮಹಿಳೆಯರಿಗಾಗಿ ಸೇವೆ ಸಲ್ಲಿಸಿರುವ ಡಾ. ಪಿ. ಶೈಲಜಾ ದೇವಿಯವರು ಹೇಳುವಂತೆ ಮೇಲೆ ಹೆಸರಿಸಿರುವ ಸೂಚಕಗಳು ನೈಜಕತೆಗಳನ್ನು ಸಂಪೂರ್ಣವಾಗಿ ಹೇಳುವುದಿಲ್ಲ. ''ಮರಣಪ್ರಮಾಣವನ್ನು ಸೂಚಿಸುವ ಎಂ.ಎಂ.ಆರ್ ಮತ್ತು ಐ.ಎಮ್.ಆರ್ ಗಳು ಖಂಡಿತವಾಗಿಯೂ ಸುಧಾರಿಸಿವೆ. ಆದರೆ ಅಸ್ವಸ್ಥತೆಯ ಪ್ರಮಾಣವು ಹೆಚ್ಚಾಗಿದೆ. ಮರಣಪ್ರಮಾಣ ಮತ್ತು ಅಸ್ವಸ್ಥತೆಗಳನ್ನು ಬೇರ್ಪಡಿಸುವುದನ್ನು ಮೊದಲು ನಾವು ಅರಿತುಕೊಳ್ಳಬೇಕು. ಅಪೌಷ್ಟಿಕತೆಯಿಂದ ನರಳುತ್ತಿರುವ ತಾಯಿಯೊಬ್ಬಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಶಿಶುವನ್ನೇ ಹೆರುತ್ತಾಳೆ ಮತ್ತು ಈ ಶಿಶುವು ಸುಲಭವಾಗಿ ಹಲವು ರೋಗಗಳಿಗೆ ತುತ್ತಾಗಬಹುದು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮೂರು ವರ್ಷದ ಮಗುವೊಂದು ಡಯೇರಿಯಾ ಕಾರಣಕ್ಕೇನೇ ಸತ್ತುಹೋಗಬಹುದು. ಇಂತಹ ಮಗುವಿನ ಬೌದ್ಧಿಕ ಬೆಳವಣಿಗೆಯೂ ಕುಂಠಿತವಾಗಿರುತ್ತದೆ. ಇನ್ನು ಆದಿವಾಸಿಗಳ ಮುಂದಿನ ಪೀಳಿಗೆಯಾಗಲಿರುವುದೂ ಕೂಡ ಇದೇ ಮಗು'', ಎನ್ನುತ್ತಾರೆ ಆಕೆ.

ಇದಲ್ಲದೆ ಈ ಪ್ರದೇಶದಲ್ಲಿನ ಬುಡಕಟ್ಟು ಜನರ ಹೆಚ್ಚುತ್ತಿರುವ ಮದ್ಯ ವ್ಯಸನವು ಮರಣ ಸೂಚ್ಯಂಕಗಳ ಬೆಳವಣಿಗೆಯನ್ನು ಕಡಿಮೆ ಮಾಡುವಲ್ಲಿ ಅಡ್ಡಿಯಾಗುತ್ತಿದೆ. ಜೊತೆಗೆ ಆದಿವಾಸಿ ಜನರಲ್ಲಿ ಇನ್ನಷ್ಟು ಹೆಚ್ಚಿನ ಅಪೌಷ್ಟಿಕತೆಗೆ ಕಾರಣವಾಗಬಹುದು. (ಜಿ.ಎ.ಎಚ್ ಮದ್ಯವ್ಯಸನ ಮತ್ತು ಅಪೌಷ್ಟಿಕತೆಯ ನಡುವಿನ ಪರಸ್ಪರ ಸಂಬಂಧದ ಬಗ್ಗೆ ಒಂದು ವರದಿಯನ್ನು ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿದೆ; ಇದು ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ. ಡಿ.ಎಚ್‌.ಡಿ.ಆರ್ 2017 ವರದಿಯು ಗಮನಿಸಿದಂತೆ, “ಮರಣ ಪ್ರಮಾಣವನ್ನು ನಿಯಂತ್ರಿಸಿದಾಗಲೂ, ಪೌಷ್ಠಿಕಾಂಶದ ಸ್ಥಿತಿ ಸುಧಾರಿಸದಿರಬಹುದು.’’)

"ನಾವು ಅತಿಸಾರ ಮತ್ತು ಭೇದಿ ಮುಂತಾದ ಸಾವಿನ ಇತರ ಕಾರಣಗಳನ್ನು ನಿಯಂತ್ರಿಸುತ್ತಿದ್ದಾಗ ಮತ್ತು ಎಲ್ಲಾ ಹೆರಿಗೆಗಳನ್ನು ಸಾಂಸ್ಥಿಕವಾಗಿಸುತ್ತಿರುವಾಗ, ಸಮುದಾಯದಲ್ಲಿನ ಮದ್ಯಪಾನವು ನಮ್ಮ ಪ್ರಯತ್ನವನ್ನು ವ್ಯರ್ಥಗೊಳಿಸುತ್ತಿದೆ. ಯುವ ತಾಯಂದಿರು ಮತ್ತು ಅವರ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಕಡಿಮೆ ಪೌಷ್ಟಿಕಾಂಶದ ಮಟ್ಟವನ್ನು ನಾವು ನೋಡುತ್ತಿದ್ದೇವೆ”, ಎಂದು 2020 ರ ಜನವರಿಯಲ್ಲಿ ಜಿ.ಎ.ಎಚ್‌. ನಿಂದ ಅಧಿಕೃತವಾಗಿ ನಿವೃತ್ತರಾದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಶೈಲಜಾ, (60) ಹೇಳುತ್ತಾರೆ. ಇವರು ನಿವೃತ್ತರಾಗಿದ್ದರೂ ಪ್ರತಿದಿನ ಮುಂಜಾನೆಯ ಸಮಯವನ್ನು ಆಸ್ಪತ್ರೆಯಲ್ಲಿ ಕಳೆಯುತ್ತಾರೆ. ರೋಗಿಗಳನ್ನು ಭೇಟಿಯಾಗುವುದು ಮತ್ತು ಅವರ ಸಹೋದ್ಯೋಗಿಗಳೊಂದಿಗೆ ಪ್ರಕರಣಗಳನ್ನು ಚರ್ಚಿಸುವುದನ್ನು ಮಾಡುತ್ತಾರೆ. "ಮತ್ತು 50 ಪ್ರತಿಶತ ಮಕ್ಕಳು ಈಗ ಮಧ್ಯಮ ಅಥವಾ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹತ್ತು ವರ್ಷಗಳ ಹಿಂದೆ [2011-12], ಮಧ್ಯಮ ಅಪೌಷ್ಟಿಕತೆ ಶೇಕಡಾ 29 ಮತ್ತು ತೀವ್ರ ಅಪೌಷ್ಟಿಕತೆ ಶೇಕಡಾ 6 ಆಗಿತ್ತು. ಆದ್ದರಿಂದ ಇದು ತುಂಬಾ ಬೇಸರದ ಪ್ರವೃತ್ತಿಯಾಗಿದೆ", ಎಂದು ಅವರು ಹೇಳುತ್ತಾರೆ.

Left: Family medicine specialist Dr. Mridula Rao and Ashwini programme coordinator Jiji Elamana outside the Gudalur hospital. Right: Dr. Shylaja Devi with a patient. 'Mortality indicators have definitely improved, but morbidity has increased', she says
PHOTO • Priti David
Left: Family medicine specialist Dr. Mridula Rao and Ashwini programme coordinator Jiji Elamana outside the Gudalur hospital. Right: Dr. Shylaja Devi with a patient. 'Mortality indicators have definitely improved, but morbidity has increased', she says
PHOTO • Priti David

ಎಡ: ಕುಟುಂಬ ಔಷಧ ತಜ್ಞರಾದ ಡಾ.ಮೃದುಲಾ ರಾವ್ ಮತ್ತು ಅಶ್ವಿನಿ ಕಾರ್ಯಕ್ರಮ ಸಂಯೋಜಕಿ ಜಿಜಿ  ಎಲಮನ ಅವರು ಗುಡಲೂರು ಆಸ್ಪತ್ರೆಯ ಹೊರಗೆ. ಬಲ: ರೋಗಿಯೊಂದಿಗೆ ಡಾ.ಶೈಲಜಾ ದೇವಿ. 'ಮರಣ ಸೂಚ್ಯಂಕಗಳು ಖಂಡಿತವಾಗಿಯೂ ಸುಧಾರಿಸಿದೆ, ಆದರೆ ಕಾಯಿಲೆ ಹೆಚ್ಚಾಗಿದೆ', ಎಂದು ಅವರು ಹೇಳುತ್ತಾರೆ.

ಅಪೌಷ್ಟಿಕತೆಯ ಸ್ಪಷ್ಟ ಪರಿಣಾಮಗಳನ್ನು ವಿವರಿಸಿದ ಡಾ. ರಾವ್ ಅವರು, “ಈ ಮೊದಲು ತಾಯಂದಿರು ಹೊರರೋಗಿ ವಿಭಾಗಕ್ಕೆ ತಪಾಸಣೆಗಾಗಿ ಬಂದಾಗ, ಅವರು ತಮ್ಮ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈಗ ಅವರು ನಿರಾಸಕ್ತಿಯ ಅಭಿವ್ಯಕ್ತಿಗಳೊಂದಿಗೆ ಕುಳಿತುಕೊಳ್ಳುತ್ತಾರೆ ಮತ್ತು ಮಕ್ಕಳು ಸಹ ತುಂಬಾ ಮಂದವಾಗಿ ಕಾಣುತ್ತಾರೆ. ಈ ನಿರಾಸಕ್ತಿ ತಮ್ಮ ಮಕ್ಕಳ ಬಗ್ಗೆ ಕಾಳಜಿಯ ಕೊರತೆ ಮತ್ತು ಅವರ ಸ್ವಂತ ಪೌಷ್ಟಿಕ ಆರೋಗ್ಯದ ಸ್ಥಿತಿಯನ್ನು ತೋರಿಸುತ್ತದೆ.”

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -4 ( ಎನ್‌.ಎಫ್‌.ಹೆಚ್‌.ಎಸ್ -4, 2015-16), ನೀಲಗಿರಿಯ ಗ್ರಾಮೀಣ ಪ್ರದೇಶಗಳಲ್ಲಿ, 6 ರಿಂದ 23 ತಿಂಗಳ ನಡುವಿನ ಶೇಕಡಾ 63 ರಷ್ಟು ಮಕ್ಕಳಿಗೆ ಸಮರ್ಪಕ ಆಹಾರ ದೊರೆಯುತ್ತಿಲ್ಲ ಎಂದು ತೋರಿಸಿದರೆ, 5 ತಿಂಗಳುಗಳಿಂದ 6 ವರ್ಷ ವಯಸ್ಸಿನ ಮಕ್ಕಳಲ್ಲಿ 50.4ರಷ್ಟು ಮಕ್ಕಳು ಸಹ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ತೋರಿಸುತ್ತಿದೆ (ಹಿಮೋಗ್ಲೋಬಿನ್ ಪ್ರತಿ ಡೆಸಿಲೀಟರಿಗೆ 11 ಗ್ರಾಂ ಗಿಂತ ಕಡಿಮೆ - ಕನಿಷ್ಟ ಸೂಚಿತ 12 ಆಗಿದೆ). ಗ್ರಾಮೀಣ ತಾಯಂದಿರಲ್ಲಿ ಅರ್ಧದಷ್ಟು (ಶೇಕಡಾ 45.5) ರಕ್ತಹೀನತೆ ಹೊಂದಿದ್ದು, ಇದು ಅವರ ಗರ್ಭಧಾರಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

"ನಮ್ಮಲ್ಲಿನ ಕೆಲವು ಆದಿವಾಸಿ ಮಹಿಳೆಯರಲ್ಲಿ ಅಕ್ಷರಶಃ ರಕ್ತವಿಲ್ಲ. ಅವರ ಹಿಮೊಗ್ಲೋಬಿನ್‌ ಮಟ್ಟ ಪ್ರತಿ ಡೆಸಿಲೀಟರಿಗೆ 2 ಗ್ರಾಂ! ರಕ್ತಹೀನತೆಯನ್ನು ಪರೀಕ್ಷಿಸುವಾಗ ನೀವು ಹೈಡ್ರೋಕ್ಲೋರಿಕ್ ಆಮ್ಲವನ್ನು ಹಾಕಿ ರಕ್ತವನ್ನು ಸುರಿಯುತ್ತೇವೆ. ಅದರಲ್ಲಿ ತೋರಿಸುವ ಕನಿಷ್ಟ ಮಟ್ಟ ಡೆಸಿಲೀಟರಿಗೆ 2 ಗ್ರಾಂ. ವಾಸ್ತವದಲ್ಲಿ ಅದು ಇನ್ನೂ ಕಡಿಮೆಯಿರಬಹುದು. ಆದರೆ ನಾವು ಅದನ್ನು ಅಳೆಯಲು ಸಾಧ್ಯವಿಲ್ಲ”, ಎಂದು ಡಾ. ಶೈಲಜಾ ಹೇಳುತ್ತಾರೆ.

ರಕ್ತಹೀನತೆ ಮತ್ತು ಹೆರಿಗೆ ಸಮಯದ ಸಾವಿನ ನಡುವೆ ನಡುವೆ ನಿಕಟ ಸಂಬಂಧವಿದೆ. "ರಕ್ತಹೀನತೆಯು ಪ್ರಸೂತಿ ರಕ್ತಸ್ರಾವ, ಹೃದಯ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು. ಇದು ಮಗುವಿನಲ್ಲಿ ಗರ್ಭಾಶಯದ ಬೆಳವಣಿಗೆಯ ನಿರ್ಬಂಧಗಳನ್ನು ಉಂಟುಮಾಡುತ್ತದೆ ಮತ್ತು ಕಡಿಮೆ ಜನನ ತೂಕದಿಂದಾಗಿ ನವಜಾತ ಶಿಶುಗಳ ಸಾವು ಸಂಭವಿಸುತ್ತದೆ. ಮಗು ಬೆಳವಣಿಗೆ ಹೊಂದಲು ವಿಫಲವಾಗುತ್ತದೆ ಮತ್ತು ದೀರ್ಘಕಾಲದ ಅಪೌಷ್ಟಿಕತೆ ಪ್ರಾರಂಭವಾಗುತ್ತದೆ”, ಎಂದು ಜಿ.ಎ.ಹೆಚ್‌. ನ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ನಮೃತ ಮೇರಿ ಜಾರ್ಜ್ ಗಮನ ಸೆಳೆಯುತ್ತಾರೆ.

ಸಣ್ಣ ವಯಸ್ಸಿನಲ್ಲಿ ಮದುವೆ ಮತ್ತು ಆರಂಭಿಕ ಗರ್ಭಧಾರಣೆಗಳು ಮಗುವಿನ ಆರೋಗ್ಯಕ್ಕೆ ಮತ್ತಷ್ಟು ಅಪಾಯವನ್ನುಂಟುಮಾಡುತ್ತವೆ. ನೀಲಗಿರಿಗಳ ಗ್ರಾಮೀಣ ಭಾಗಗಳಲ್ಲಿ ಕೇವಲ 21 ಶೇಕಡಾ ಹುಡುಗಿಯರು ಮಾತ್ರ 18 ವರ್ಷಕ್ಕಿಂತ ಮುಂಚೆ ವಿವಾಹವಾದವರು ಎಂದು ಎನ್‌.ಎಫ್‌.ಎಚ್‌.ಎಸ್ -4 ಹೇಳುತ್ತದೆ. ಆದರೆ ಇಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರು ತಾವು ಕೆಲಸ ಮಾಡುವ ಹೆಚ್ಚಿನ ಆದಿವಾಸಿ ಹುಡುಗಿಯರು ಹದಿನೈದನೇ ವಯಸ್ಸಿನೊಳಗೆ ಅಥವಾ ಋತುಮತಿಯರಾದ ಕೂಡಲೇ ಮದುವೆಯಾಗಿರುವವರು ಎಂದು ಹೇಳುತ್ತಾರೆ. "ಮದುವೆಯನ್ನು ತಡವಾಗಿ ಮಾಡಿಕೊಳ್ಳುವಂತೆ ಮಾಡುವುದು ಮತ್ತು ಮೊದಲ ಮಗುವನ್ನು ವಿಳಂಬಗೊಳಿಸುವುದು ಎರಡಕ್ಕೂ ಸಂಬಂಧಿಸಿದಂತೆ ನಾವು ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ", ಎಂದು ಡಾ. ಶೈಲಜಾ ಒಪ್ಪಿಕೊಳ್ಳುತ್ತಾರೆ. "ಹುಡುಗಿಯರು 15 ಅಥವಾ 16 ನೇ ವಯಸ್ಸಿನಲ್ಲಿ ಗರ್ಭಿಣಿಯಾದಾಗ, ಅವರು ಪೂರ್ಣ ವಯಸ್ಕರಾಗಿ ಬೆಳೆಯುವ ಮೊದಲು, ಅವರ ಪೌಷ್ಟಿಕಾಂಶದ ಸ್ಥಿತಿಯು ನವಜಾತ ಶಿಶುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ", ಎಂದು ಹೇಳುತ್ತಾರೆ.

An Alcoholics Anonymous poster outside the hospital (left). Increasing alcoholism among the tribal communities has contributed to malnutrition
PHOTO • Priti David
An Alcoholics Anonymous poster outside the hospital (left). Increasing alcoholism among the tribal communities has contributed to malnutrition
PHOTO • Priti David

ಆಸ್ಪತ್ರೆಯ ಹೊರಗೆ ಮದ್ಯಪಾನ ಬಿಡಿಸುವ ಅನಾಮಧೇಯ ಪೋಸ್ಟರ್ (ಎಡ). ಬುಡಕಟ್ಟು ಸಮುದಾಯಗಳಲ್ಲಿ ಮದ್ಯಪಾನ ಹೆಚ್ಚಾಗುವುದು ಅಪೌಷ್ಟಿಕತೆಗೆ ಮುಖ್ಯ ಕಾರಣವಾಗಿದೆ.

ಶೈಲಾ ಚೇಚಿ (ಅಕ್ಕ) ಎಂದು ರೋಗಿಗಳು ಮತ್ತು ಸಹೋದ್ಯೋಗಿಗಳಿಂದ ಕರೆಸಿಕೊಳ್ಳುವ ಶೈಲಾ ಬುಡಕಟ್ಟು ಮಹಿಳೆಯರ ಸಮಸ್ಯೆಗಳ ಬಗ್ಗೆ ಬಹುತೇಕ ವಿಶ್ವಕೋಶದಷ್ಟು ಜ್ಞಾನವನ್ನು ಹೊಂದಿದ್ದಾರೆ. "ಕುಟುಂಬದ ಆರೋಗ್ಯವು ಪೌಷ್ಟಿಕಾಂಶದೊಂದಿಗೆ ಸಂಬಂಧ ಹೊಂದಿದೆ. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಪೌಷ್ಟಿಕ ಆಹಾರದ ಕೊರತೆಯಿಂದ ದುಪ್ಪಟ್ಟು ಅಪಾಯವನ್ನು ಎದುರಿಸುತ್ತಾರೆ. ವೇತನ ಹೆಚ್ಚಾಗಿದೆ ಆದರೆ ಹಣವು ಕುಟುಂಬವನ್ನು ತಲುಪುತ್ತಿಲ್ಲ. ಪುರುಷರು ತಮ್ಮ 35 ಕಿಲೋಗ್ರಾಂಗಳಷ್ಟು ಪಡಿತರ ಅಕ್ಕಿಯನ್ನು ಪಡೆದು ಮುಂದಿನ ಅಂಗಡಿಯಲ್ಲಿ ಮಾರಿ ಮದ್ಯವನ್ನು ಖರೀದಿಸುವ ಸಂದರ್ಭಗಳನ್ನು ನಾವು ಕಂಡಿದ್ದೇವೆ. ಅವರ ಮಕ್ಕಳಲ್ಲಿ ಅಪೌಷ್ಟಿಕತೆ ಹೇಗೆ ಹೆಚ್ಚಾಗದಿರಲು ಸಾಧ್ಯ?”, ಎಂದು ಅವರು ಒತ್ತಿ ಹೇಳುತ್ತಾರೆ.

"ಯಾವುದೇ ವಿಷಯದ ಮೇಲೆ ನಾವು ಸಮುದಾಯದೊಂದಿಗೆ ನಡೆಸುವ ಯಾವುದೇ ಸಭೆ ಅಂತಿಮವಾಗಿ ಈ ಸಮಸ್ಯೆಯೊಂದಿಗೆ ಕೊನೆಗೊಳ್ಳುತ್ತದೆ. ಅದು ಕುಟುಂಬಗಳಲ್ಲಿ ಹೆಚ್ಚುತ್ತಿರುವ ಮದ್ಯಪಾನ", ಎಂದು ಅಶ್ವಿನಿಯ ಮಾನಸಿಕ ಆರೋಗ್ಯ ಸಲಹೆಗಾರರಾದ ವೀಣಾ ಸುನಿಲ್, 53, ಹೇಳುತ್ತಾರೆ.

ಈ ಪ್ರದೇಶದ ಆದಿವಾಸಿ ಸಮುದಾಯಗಳು ಹೆಚ್ಚಾಗಿ ಕಟ್ಟುನಾಯಕನ್ ಮತ್ತು ಪನಿಯಾನ್, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಾಗಿ ಸ್ಥಾನ ಪಡೆದಿವೆ. ಅವರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಜನರು ಹೊಲ ಮತ್ತು ತೋಟಗಳಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬುಡಕಟ್ಟು ಸಂಶೋಧನಾ ಕೇಂದ್ರ ಉದಗಮಂಡಲಂ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಇಲ್ಲಿರುವ ಇತರ ಸಮುದಾಯಗಳು ಮುಖ್ಯವಾಗಿ ಇರುಳರು, ಬೆಟ್ಟಾ ಕುರುಂಬ ಮತ್ತು ಮುಲ್ಲು ಕುರುಂಬ, ಇವುಗಳನ್ನು ಪರಿಶಿಷ್ಟ ಪಂಗಡ ಎಂದು ಪಟ್ಟಿ ಮಾಡಲಾಗಿದೆ.

"ನಾವು 1980 ರ ದಶಕದಲ್ಲಿ ಮೊದಲ ಬಾರಿಗೆ ಇಲ್ಲಿಗೆ ಬಂದಾಗ, 1976 ರ ಜೀತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನ) ಕಾಯ್ದೆಯ ಹೊರತಾಗಿಯೂ, ಪನಿಯಾಗಳು ಭತ್ತ, ರಾಗಿ, ಬಾಳೆಹಣ್ಣು, ಮೆಣಸು ಮತ್ತು ಮರಗೆಣಸು ತೋಟಗಳಲ್ಲಿ ಜೀತ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಆಳವಾದ ಕಾಡಿನ ಸಣ್ಣ ತೋಟಗಳಲ್ಲಿದ್ದರು. ಅವರು ಕೆಲಸ ಮಾಡುತ್ತಿದ್ದ ಭೂಮಿಗೆ ಭೂಮಿ ಮಾಲಿಕತ್ವ ಹೊಂದಿದ್ದಾರೆಂದು ತಿಳಿದಿರಲಿಲ್ಲ", ಎಂದು ಮಾರಿ ಥೇಕಕರ ಹೇಳುತ್ತಾರೆ.

ಮಾರಿ, ತನ್ನ ಪತಿ ಸ್ಟ್ಯಾನ್ ಥೇಕಕರ ಅವರೊಂದಿಗೆ, ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು 1985 ರಲ್ಲಿ ACCORD (ಸಮುದಾಯ ಸಂಸ್ಥೆ, ಪುನರ್ವಸತಿ ಮತ್ತು ಅಭಿವೃದ್ಧಿಗಾಗಿ ಕ್ರಮ) ಸ್ಥಾಪಿಸಿದರು. ಕಾಲಾನಂತರದಲ್ಲಿ ದೇಣಿಗೆಯಿಂದ ನಡೆಸುವ ಎನ್‌.ಜಿ.ಒ ಸಂಸ್ಥೆಗಳ ಜಾಲವನ್ನು ರೂಪಿಸಿದೆ - ಸಂಘಗಳು (ಕೌನ್ಸಿಲ್‌ಗಳು) ಸ್ಥಾಪಿಸಲ್ಪಟ್ಟವು ಮತ್ತು ಇವುಗಳನ್ನು ಆದಿವಾಸಿಗಳು ನಡೆಸುತ್ತಿದ್ದ ಮತ್ತು ನಿಯಂತ್ರಿಸುತ್ತಿದ್ದ ಆದಿವಾಸಿ ಮುನ್ನೇಟ್ರ ಸಂಗಮ್ ಅಡಿಯಲ್ಲಿ ತರಲಾಯಿತು. ಸಂಘವು ಬುಡಕಟ್ಟು ಭೂಮಿಯನ್ನು ಪುನಃ ಪಡೆದುಕೊಳ್ಳಲು, ಚಹಾ ತೋಟವನ್ನು ಸ್ಥಾಪಿಸಲು ಮತ್ತು ಆದಿವಾಸಿ ಮಕ್ಕಳಿಗೆ ಶಾಲೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ACCORD ನೀಲಗಿರಿಗಳಲ್ಲಿ (ಅಶ್ವಿನಿ) ಆರೋಗ್ಯ ಕಲ್ಯಾಣ ಸಂಘವನ್ನು ಪ್ರಾರಂಭಿಸಿತು ಮತ್ತು 1998 ರಲ್ಲಿ ಗುಡಲೂರು ಆದಿವಾಸಿ ಆಸ್ಪತ್ರೆಯನ್ನು ಸ್ಥಾಪಿಸಲಾಯಿತು. ಇದು ಈಗ ಆರು ವೈದ್ಯರನ್ನು ಹೊಂದಿದೆ. ಒಂದು ಪ್ರಯೋಗಾಲಯ, ಎಕ್ಸ್ ರೇ ಕೊಠಡಿ, ಔಷಧಾಲಯ ಮತ್ತು ರಕ್ತ ಬ್ಯಾಂಕ್ ಸಹ ಹೊಂದಿದೆ.

Left: Veena Sunil, a mental health counsellor of Ashwini (left) with Janaki, a health animator. Right: Jiji Elamana and T. R. Jaanu (in foreground) at the Ayyankoli area centre, 'Girls in the villages approach us for reproductive health advice,' says Jaanu
PHOTO • Priti David
Left: Veena Sunil, a mental health counsellor of Ashwini (left) with Janaki, a health animator. Right: Jiji Elamana and T. R. Jaanu (in foreground) at the Ayyankoli area centre, 'Girls in the villages approach us for reproductive health advice,' says Jaanu
PHOTO • Priti David

ಎಡ: ಆರೋಗ್ಯ ಆನಿಮೇಟರ್ ಜಾನಕಿ ಅವರೊಂದಿಗೆ ಅಶ್ವಿನಿ (ಎಡ) ಅವರ ಮಾನಸಿಕ ಆರೋಗ್ಯ ಸಲಹೆಗಾರರಾದ ವೀಣಾ ಸುನಿಲ್. ಬಲ: ಅಯ್ಯಂಕೋಲಿ ಪ್ರದೇಶ ಕೇಂದ್ರದಲ್ಲಿ ಜಿಜಿ ಎಲಮನಾ ಮತ್ತು ಟಿ. ಆರ್. ಜಾನು (ಮುಂಭಾಗದಲ್ಲಿ), 'ಹಳ್ಳಿಗಳ ಹುಡುಗಿಯರು ಸಂತಾನೋತ್ಪತ್ತಿ ಸಂಬಂಧಿ ಆರೋಗ್ಯ ಸಲಹೆಗಾಗಿ ನಮ್ಮನ್ನು ಸಂಪರ್ಕಿಸುತ್ತಾರೆ', ಎಂದು ಜಾನು ಹೇಳುತ್ತಾರೆ.

“80 ರ ದಶಕದಲ್ಲಿ ಆದಿವಾಸಿಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಲಾಗುತ್ತಿತ್ತು ಮತ್ತು ಅವರು ಓಡಿಹೋಗುತ್ತಿದ್ದರು. ಆರೋಗ್ಯದ ಪರಿಸ್ಥಿತಿ ಭೀಕರವಾಗಿತ್ತು: ಗರ್ಭಾವಸ್ಥೆಯಲ್ಲಿ ಮಹಿಳೆಯರು ನಿಯಮಿತವಾಗಿ ಸಾಯುತ್ತಿದ್ದರು ಮತ್ತು ಮಕ್ಕಳಲ್ಲಿ ಅತಿಸಾರ ಮತ್ತು ಸಾವು ಸಂಭವಿಸುತ್ತಿತ್ತು”, ಎಂದು ಡಾ.ರೂಪಾ ದೇವದಾಸನ್ ನೆನಪಿಸಿಕೊಳ್ಳುತ್ತಾರೆ. ಬುಡಕಟ್ಟು ಪ್ರದೇಶಗಳಲ್ಲಿ ಮನೆ ಮನೆಗೆ ತೆರಳುತ್ತಿದ್ದ ಅಶ್ವಿನಿ ವೈದ್ಯರಿಗೆ ಅವರು ಮತ್ತು ಅವರ ಪತಿ ಡಾ.ಎನ್. ದೇವದಾಸನ್ ಪ್ರವರ್ತಕರಾಗಿದ್ದರು. "ಅನಾರೋಗ್ಯ ಹೊಂದಿರುವವರ ಅಥವಾ ಗರ್ಭಿಣಿಯ ಮನೆಗೆ ನಮ್ಮನ್ನು ಅನುಮತಿಸಲಾಗುತ್ತಿರಲಿಲ್ಲ. ಸಮುದಾಯಗಳು ನಮ್ಮನ್ನು ನಂಬಲು ಪ್ರಾರಂಭಿಸುವ ಮೊದಲು ಅವರಲ್ಲಿ ಸಾಕಷ್ಟು ಮಾತುಕತೆ ಮತ್ತು ಧೈರ್ಯ ತುಂಬಬೇಕಾಯಿತು”, ಎನ್ನುತ್ತಾರೆ.

ಸಮುದಾಯ ಆರೋಗ್ಯ ಆರೈಕೆಯು ಅಶ್ವಿನಿಯ ಹೃದಯಭಾಗದಲ್ಲಿದೆ. ಇದರಲ್ಲಿ 17 ಆರೋಗ್ಯ ಆನಿಮೇಟರ್‌ಗಳು (ಆರೋಗ್ಯ ಕಾರ್ಯಕರ್ತರು) ಮತ್ತು 312 ಆರೋಗ್ಯ ಸ್ವಯಂಸೇವಕರು ಇದ್ದಾರೆ. ಇವರೆಲ್ಲರೂ ಆದಿವಾಸಿಗಳು - ಗುಡಲೂರು ಮತ್ತು ಪಂಥಲೂರು ತಾಲ್ಲೂಕುಗಳಾದ್ಯಂತ ವ್ಯಾಪಕವಾಗಿ ಪ್ರಯಾಣಿಸುತ್ತಾರೆ. ಮನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಸಲಹೆ ನೀಡುತ್ತಾರೆ.

ಈಗ ತನ್ನ 50ರ ದಶಕದಲ್ಲಿರುವ ಟಿ. ಆರ್. ಜಾನು, ಮುಲ್ಲು ಕುರುಂಬ ಸಮುದಾಯದವರು. ಅಶ್ವಿನಿಯಲ್ಲಿ ತರಬೇತಿ ಪಡೆದ ಮೊದಲ ಆರೋಗ್ಯ ಅನಿಮೇಟರ್‌ಗಳಲ್ಲಿ ಒಬ್ಬರು. ಪಂಥಲೂರ್ ತಾಲ್ಲೂಕಿನ ಚೆರಂಗೋಡ್ ಪಂಚಾಯತ್‌ ನ ಅಯ್ಯಂಕೋಲಿ ಕುಗ್ರಾಮದಲ್ಲಿ ಅವರು ಕಚೇರಿಯನ್ನು ಹೊಂದಿದ್ದಾರೆ ಮತ್ತು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕ್ಷಯರೋಗಕ್ಕಾಗಿ ಆದಿವಾಸಿ ಕುಟುಂಬಗಳಲ್ಲಿ ನಿಯಮಿತವಾಗಿ ತಪಾಸಣೆ ಮಾಡುತ್ತಾರೆ. ಪ್ರಥಮ ಚಿಕಿತ್ಸೆ, ಸಾಮಾನ್ಯ ಆರೋಗ್ಯ ಮತ್ತು ಪೋಷಣೆಯ ಸಲಹೆಗಳನ್ನು ನೀಡುತ್ತಾರೆ. ಅವರು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ಬಗ್ಗೆ ನಿಗಾ ಇಡುತ್ತಾರೆ. "ಹಳ್ಳಿಗಳಲ್ಲಿನ ಹುಡುಗಿಯರು ತಮ್ಮ ಗರ್ಭಧಾರಣೆಯ ಹಲವಾರು ತಿಂಗಳುಗಳಲ್ಲಿ ಸಂತಾನೋತ್ಪತ್ತಿ ಆರೋಗ್ಯ ಸಲಹೆಗಾಗಿ ನಮ್ಮನ್ನು ಸಂಪರ್ಕಿಸುತ್ತಾರೆ. ಇಂಟ್ರಾಯುಟೇರಿನ್ ಬೆಳವಣಿಗೆಯ ನಿರ್ಬಂಧವನ್ನು ತಡೆಗಟ್ಟಲು ಮೊದಲ ಮೂರು ತಿಂಗಳಲ್ಲಿ ಫೋಲೇಟ್ ಕೊರತೆಯ ಮಾತ್ರೆಗಳನ್ನು ನೀಡಬೇಕು ಇಲ್ಲದಿದ್ದರೆ ಅದು ಕೆಲಸ ಮಾಡುವುದಿಲ್ಲ”, ಎಂದು ಅವರು ಗಮನ ಸೆಳೆಯುತ್ತಾರೆ.

ಸುಮಾ ಅವರಂತಹ ಯುವತಿಯರಿಗೆ ಐ.ಯು.ಜಿ.ಆರ್. ಅನ್ನು ತಡೆಯಲು ಸಾಧ್ಯವಾಗುವುದಿಲ್ಲ. ನಾವು ಭೇಟಿಯಾದ ಕೆಲವು ದಿನಗಳ ನಂತರ ಆಸ್ಪತ್ರೆಯಲ್ಲಿ, ಅವಳ ಗರ್ಭನಿರೋಧಕ ಶಸ್ತ್ರ ಚಿಕಿತ್ಸೆ ಪೂರ್ಣಗೊಂಡಿದೆ. ಅವಳು ಮತ್ತು ಅವಳ ಕುಟುಂಬವು ಮನೆಗೆ ಹೋಗಲು ಸಿದ್ಧರಾಗುತ್ತಿದ್ದಾರೆ. ಅವರಿಗೆ ದಾದಿಯರು ಮತ್ತು ವೈದ್ಯರು ಪೌಷ್ಟಿಕಾಂಶದ ಬಗ್ಗೆ ಸಲಹೆ ನೀಡಿದ್ದಾರೆ. ಆಕೆಯ ಮನೆಗೆ ಪ್ರಯಾಣಿಸಲು ಮತ್ತು ಮುಂದಿನ ವಾರಕ್ಕೆ ಆಹಾರವನ್ನು ಖರೀದಿಸಲು ಹಣವನ್ನು ಸಹ ನೀಡಲಾಗಿದೆ. "ಈ ಬಾರಿಯಾದರೂ, ಹಣವನ್ನು ನೀಡಿದ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂದು ನಾವು ಭಾವಿಸುತ್ತೇವೆ", ಎಂದು ಜಿಜಿ ಎಲಮನ ಅವರು ಹೊರಡುವಾಗ ಹೇಳುತ್ತಾರೆ.

ಕವರ್ ಇಲ್ಲಸ್ಟ್ರೇಷನ್: ಪ್ರಿಯಾಂಕಾ ಬೋರಾರ್ ಹೊಸ ಮಾಧ್ಯಮ ಕಲಾವಿದೆ. ಹೊಸ ಪ್ರಕಾರದ ಅರ್ಥ ಮತ್ತು ಅಭಿವ್ಯಕ್ತಿಯನ್ನು ಕಂಡುಹಿಡಿಯಲು ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದಾರೆ. ಅವರು ಕಲಿಕೆ ಮತ್ತು ಆಟಕ್ಕೆ ಎಕ್ಸ್‌ಪಿರಿಯೆನ್ಸ್ ವಿನ್ಯಾಸ‌ ಮಾಡುತ್ತಾರೆ. ಸಂವಾದಾತ್ಮಕ ಮಾಧ್ಯಮ ಇವರ ಮೆಚ್ಚಿನ ಕ್ಷೇತ್ರ. ಸಾಂಪ್ರದಾಯಿಕ ಪೆನ್ ಮತ್ತು ಕಾಗದ ಇವರಿಗೆ ಹೆಚ್ಚು ಆಪ್ತವಾದ ಕಲಾ ಮಾಧ್ಯಮ.

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್‌ ಮೀಡಿಯಾ ಟ್ರಸ್ಟ್‌ನ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು , ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ. ಇದು ಪಾಪ್ಯುಲೇಷನ್‌ ಆಫ್‌ ಇಂಡಿಯಾದ ಬೆಂಬಲವನ್ನು ಹೊಂದಿದೆ.

ಈ ಲೇಖನವನ್ನು ಪುನಃ ಪ್ರಕಟಿಸಲು ಬಯಸಿದಲ್ಲಿ, [email protected] ಗೆ ಬರೆದು, ಅದರ ಪ್ರತಿಯನ್ನು [email protected] ಗೆ ಸಲ್ಲಿಸಿ.

ಅನುವಾದ: ಶಂಕರ ಎನ್. ಕೆಂಚನೂರು

Priti David

प्रीती डेव्हिड पारीची वार्ताहर व शिक्षण विभागाची संपादक आहे. ग्रामीण भागांचे प्रश्न शाळा आणि महाविद्यालयांच्या वर्गांमध्ये आणि अभ्यासक्रमांमध्ये यावेत यासाठी ती काम करते.

यांचे इतर लिखाण Priti David
Illustration : Priyanka Borar

Priyanka Borar is a new media artist experimenting with technology to discover new forms of meaning and expression. She likes to design experiences for learning and play. As much as she enjoys juggling with interactive media she feels at home with the traditional pen and paper.

यांचे इतर लिखाण Priyanka Borar
Series Editor : Sharmila Joshi

शर्मिला जोशी पारीच्या प्रमुख संपादक आहेत, लेखिका आहेत आणि त्या अधून मधून शिक्षिकेची भूमिकाही निभावतात.

यांचे इतर लिखाण शर्मिला जोशी
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru