“ಇಲ್ಲಿನ ಹಳ್ಳಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲ. ಹಾಗಾಗಿ ನನ್ನ ಹೆಣ್ಣುಮಕ್ಕಳನ್ನು ವಾರಣಾಸಿಗೆ ಕರೆದೊಯ್ದೆ. ನಗರದ ಶಾಲೆಯಲ್ಲಿ ಪ್ರವೇಶ ಪಡೆದ ಮೂರು ತಿಂಗಳಲ್ಲಿ ನಾನು ಅವರನ್ನು ಮತ್ತೆ ಹಳ್ಳಿಗೆ ಕರೆದೊಯ್ಯಬೇಕಾಗುತ್ತದೆ ಎನ್ನುವುದು ಯಾರಿಗೆ ತಾನೇ ಗೊತ್ತಿತ್ತು ಹೇಳಿ? ಎಂದು ಅರುಣ್ ಕುಮಾರ್ ಪಾಸ್ವಾನ್ ಪ್ರಶ್ನಿಸುತ್ತಾರೆ. ಅವರು ಉತ್ತರ ಪ್ರದೇಶದ ವಾರಣಾಸಿ ನಗರದ ರೆಸ್ಟೋರೆಂಟ್ ನ ಅಡುಗೆ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು, ಮಾರ್ಚ್ ನಲ್ಲಿ ಕೊರೊನಾ ಲಾಕ್ ಡೌನ್ ನಿಂದ ಮುಚ್ಚುವವರೆಗೆ ಅಲ್ಲೇ ದುಡಿಯುತ್ತಿದ್ದರು, ಇದರಿಂದಾಗಿ ಅವರು ಪ್ರತಿ ತಿಂಗಳಿಗೆ 15,000 ರೂ.ಗಳನ್ನು ಸಂಪಾದಿಸುತ್ತಿದ್ದರು.
ಮೇ ತಿಂಗಳ ಆರಂಭದಲ್ಲಿ, ತನ್ನ ಕುಟುಂಬಕ್ಕೆ ಆಹಾರ ಒದಗಿಸಲು ಇನ್ನು ಸಾಧ್ಯವಾಗದಿದ್ದಾಗ, ಪಾಸ್ವಾನ್ ಬಿಹಾರದ ಗಯಾ ಜಿಲ್ಲೆಯಲ್ಲಿನ ತನ್ನ ಗ್ರಾಮ ಮಾಯಾಪುರಕ್ಕೆ ಹಿಂತಿರುಗಲು ನಿರ್ಧರಿಸಿದರು. ಇದು ವಾರಣಾಸಿಯಿಂದ 250 ಕಿಲೋಮೀಟರ್ ದೂರದಲ್ಲಿದೆ. "ನಾನು ನನ್ನ ಕುಟುಂಬ ಮತ್ತು ಇತರರೊಂದಿಗೆ ನಾಳೆ ಮುಂಜಾನೆ 3 ಗಂಟೆಗೆ ಹೊರಡುತ್ತೇನೆ" ಎಂದು ಪಾಸ್ವಾನ್ ಮೇ 8ರಂದು ನನಗೆ ಫೋನ್‌ನಲ್ಲಿ ತಿಳಿಸಿದ್ದರು. “ನಾವು ಯುಪಿ-ಬಿಹಾರ ಗಡಿಯವರೆಗೆ ನಡೆದುಕೊಂಡು ಹೋಗುತ್ತೇವೆ, ಅಲ್ಲಿಂದ ಬಸ್ ಗೆ ಹೋಗುತ್ತೇವೆ. ಬಹುಶಃ ಅಲ್ಲಿಂದ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದನಿಸುತ್ತದೆ. ಒಂದು ವೇಳೆ ದಾರಿಯಲ್ಲಿ ಟ್ರಕ್ ಸಿಕ್ಕರೆ ಅವರಿಗೆ ನಮ್ಮನ್ನು ಗಡಿಯಲ್ಲಿ ಇಳಿಸಲು ವಿನಂತಿಸಿಕೊಳ್ಳುತ್ತೇವೆ" ಎಂದು ಹೇಳಿದರು.
ಪಾಸ್ವಾನ್ ಮತ್ತು ಅವರ 27 ವರ್ಷದ ಪತ್ನಿ ಸಬಿತಾ, ಅವರ ಮೂವರು ಪುಟ್ಟ ಹೆಣ್ಣು ಮಕ್ಕಳಾದ ರೋಲಿ (8), ಮತ್ತು ರಾಣಿ ( 6), ಮತ್ತು ಮಗ ಆಯುಷ್ (3) ಮರುದಿನ ಬೆಳಿಗ್ಗೆ ಹೊರಟರು. ಅವರು 53 ಕಿಲೋಮೀಟರ್ ದೂರದಲ್ಲಿರುವ ರಾಜ್ಯ ಗಡಿಯುದ್ದಕ್ಕೂ ನಡೆದು ಕರಮ್ನಾಸಾ ಚೆಕ್ ಪೋಸ್ಟ್ ಗೆ ತಲುಪಿದರು. ಅಲ್ಲಿ, ಅವರಿಗೆ ಬಸ್ ಹತ್ತಲು ಅನುಮತಿಸುವ ಮೊದಲು ಬಿಹಾರದ ಕೈಮೂರ್ ಜಿಲ್ಲಾಡಳಿತ ಸ್ಥಾಪಿಸಿದ ಆರೋಗ್ಯ ಶಿಬಿರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಗೆ ಒಳಗಾಗಬೇಕಾಗಿತ್ತು. "ಅದೃಷ್ಟವಶಾತ್, ನಮಗೆ ಅಲ್ಲಿಂದ ಸರ್ಕಾರಿ ಬಸ್ ಸಿಕ್ಕಿತು, ಅದು ನಮ್ಮನ್ನು ಗಯಾಗೆ ತಲುಪಿಸಿತು" ಎಂದು ಅವರು ಮೇ 11ರಂದು ಮಾಯಾಪುರ ತಲುಪಿದ ನಂತರ ಹೇಳಿದರು. ಅವರು ಗಯಾ ತಲುಪಿದ ನಂತರ, ತಮ್ಮ ಹಳ್ಳಿಗೆ ಹೋಗಲು ಅವರು ಮತ್ತೊಂದು ಬಸ್‌ಗಾಗಿ ಕಾಯುತ್ತಿದ್ದರು, ಅಲ್ಲಿಗೆ ತಲುಪಿದ ಕೂಡಲೇ ಅವರು ಸ್ವಯಂ-ಪ್ರತ್ಯೇಕತೆಗೆ ಒಳಗಾದರು.
ರಾಣಿಗೆ ತಮ್ಮ ಹಳೆಯ ಮನೆಗೆ ಮರಳಿದ್ದು ಸಂತಸ ತಂದಿದ್ದರೆ, ರೋಲಿ ತನ್ನ 'ಶೆಹರ್ ವಾಲಾ ಶಾಲೆ' (ನಗರ ಶಾಲೆ) ಯ ಸಮವಸ್ತ್ರವನ್ನು ನೆನಪಿಸಿಕೊಳ್ಳುತ್ತಿರುತ್ತಾಳೆ ಎಂದು ಪಾಸ್ವಾನ್ ಹೇಳುತ್ತಾರೆ.
ಆಗಸ್ಟ್ 2019 ರಿಂದ ಪಾಸ್ವಾನ್ ಕೆಲಸ ಮಾಡುತ್ತಿದ್ದ ವಾರಣಾಸಿ ರೆಸ್ಟೋರೆಂಟ್, ಮೊದಲು ಮಾರ್ಚ್ 22ರಂದು ಜನತಾ ಕರ್ಫ್ಯೂಗಾಗಿ ಮುಚ್ಚಲ್ಪಟ್ಟಿತು, ಮತ್ತು ನಂತರ ಮಾರ್ಚ್ 25ರಂದು ರಾಷ್ಟ್ರವ್ಯಾಪಿ ಲಾಕ್‌ಡೌನ್ ಹೇರಲಾಯಿತು. ಮಾರ್ಚ್ ಮಧ್ಯದಲ್ಲಿಯೇ ಅವರಿಗೆ ಕೊನೆಯ ಸಂಬಳ ಸಿಕ್ಕಿತ್ತು, ಆದರೆ ಎಪ್ರಿಲ್ ಎರಡನೇ ವಾರ ಅನ್ನೋವಷ್ಟರಲ್ಲಿ ಪರಿಸ್ಥಿತಿ ಕಷ್ಟವಾಗುತ್ತಾ ಬಂತು. ವಾರಾಣಸಿ ಜಿಲ್ಲಾ ಆಡಳಿತದ ಅಧಿಕಾರಿಗಳು ವಿತರಿಸಿದ ಆಹಾರ ಪ್ಯಾಕೆಟ್‌ಗಳನ್ನು ಸಂಗ್ರಹಿಸಲು ಅವರು ದಿನಕ್ಕೆ ಎರಡು ಬಾರಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.
ಆದರೆ ಮೇ 8ರಂದು ಪಾಸ್ವಾನ್ ಅವರು ನನಗೆ ಹೇಳಿದ್ದು, “ನಾವು ಕಳೆದ ನಾಲ್ಕು ದಿನಗಳಿಂದ ಆಹಾರ ಪ್ಯಾಕೆಟ್‌ಗಳನ್ನು ನೀಡಲಾಗುತ್ತಿಲ್ಲ. ನಮಗೆ ತಿನ್ನಲು ಏನೂ ಇಲ್ಲ. ನಮಗೆ ಹೊರಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.” ಎಂದು ಅವರು ತಮ್ಮ ಕಷ್ಟದ ಪರಿಸ್ಥಿತಿಯನ್ನು ವಿವರಿಸಿದರು.






