“Insaan ab na jhagde se marega na ragade se

marega tho bhook aur pyas se.”

“ಜನರು ಸಾಯುತ್ತಿರುವುದು ಜಗಳದಿಂದಾಗಲಿ, ಒತ್ತಡದಿಂದಾಗಲಿ ಅಲ್ಲ,

ಅವರು ಸಾಯುತ್ತಿರುವುದು ಹಸಿವು ಮತ್ತು ಬಾಯಾರಿಕೆಗಳಿಂದ”

ಅಂದರೆ, ಕೇವಲ ವಿಜ್ಞಾನವು ಮಾತ್ರವೇ ಬದಲಾಗುತ್ತಿರುವ ಹವಾಮಾನದ ಬಗ್ಗೆ ಎಚ್ಚರಿಸುತ್ತಿಲ್ಲ. ಭಾರತದ ಸಾಹಿತ್ಯದಲ್ಲಿನ ಮಹಾಕೃತಿಗಳು ಬಹಳ ಹಿಂದೆಯೇ ಇದನ್ನು ಅಂದಾಜಿಸಿದ್ದವು ಎಂಬುದನ್ನು 75 ವರ್ಷದ ದೆಹಲಿಯ ರೈತ ಶಿವ್ ಶಂಕರ್ ಒತ್ತಿ ಹೇಳಿದರು. 16ನೇ ಶತಮಾನದ ರಾಮಚರಿತಮಾನಸದ ( ವೀಡಿಯೋ ವೀಕ್ಷಿಸಿ ) ಸಾಲುಗಳ ತಾತ್ಪರ್ಯವನ್ನು ತಿಳಿಸುತ್ತಿದ್ದೇನೆಂಬುದು ಅವರ ಎಣಿಕೆ. ಶಂಕರ್ ಅವರು ಪ್ರಾಚೀನ ಗ್ರಂಥಗಳ ತಮ್ಮ ಓದಿನಲ್ಲಿ ಕೊಂಚ ಎಡವಿದ್ದಾರೆ ಎನಿಸುತ್ತದೆ. ತುಳಸೀದಾಸರ ಮೂಲ ಕೃತಿಯಲ್ಲಿ ಈ ಸಾಲುಗಳನ್ನು ಹುಡುಕುವುದು ನಿಮಗೆ ಕಷ್ಟವೆನಿಸಬಹುದು. ಆದರೆ ಈ ರೈತನ ಸಾಲುಗಳು ಯುಮುನಾ ನದಿಯ ಮುಳುಗು ಪ್ರದೇಶಗಳಿಗೆ ನಮ್ಮ ಈ ಕಾಲಕ್ಕೆ ಸೂಕ್ತವಾಗಿ ಹೊಂದುತ್ತವೆ.

ತಾಪಮಾನ, ಹವಾಮಾನ, ಮತ್ತು ಹವಾಗುಣದಲ್ಲಿನ ಬದಲಾವಣೆಗಳು ನಗರ ಪ್ರದೇಶದ ಅತಿ ದೊಡ್ಡ ಮುಳುಗು ಪ್ರದೇಶವೊಂದನ್ನು ಪ್ರಭಾವಿಸುತ್ತಿರುವ ಬಗ್ಗೆ ಶಂಕರ್, ಆತನ ಕುಟುಂಬದವರು ಹಾಗೂ ಇತರೆ ಅನೇಕ ಕೃಷಿಕರು ವಿಸ್ತøತ ವಿವರಗಳನ್ನು ನೀಡಿದರು. ಯಮುನಾ ನದಿಯ 1,376 ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ 22 ಕಿ.ಮೀ.ನಷ್ಟು ನದಿಯು ರಾಷ್ಟ್ರೀಯ ರಾಜಧಾನಿಯ ಪ್ರದೇಶದಲ್ಲಿ ಹರಿಯುತ್ತಿದ್ದು, ಅದರ 97 ಚದರ ಕಿ.ಮೀ. ಮುಳುಗು ಪ್ರದೇಶವು ದೆಹಲಿಯ ಶೇ. 6.5ರಷ್ಟು ಭಾಗವನ್ನು ಆಕ್ರಮಿಸಿದೆಯಷ್ಟೇ. ಈ ಕಿರಿದಾದ ಪ್ರದೇಶವು ಹವಾಗುಣದ ಸಮತೋಲನವನ್ನು ಬೃಹತ್ ಪ್ರಮಾಣದಲ್ಲಿ ಪ್ರಭಾವಿಸುತ್ತದಲ್ಲದೆ, ರಾಜಧಾನಿಗೆ ಸಂಬಂಧಿಸಿದಂತೆ ಪ್ರಕೃತಿಯ ಶಾಖನಿಯಂತ್ರಕದ ಕಾರ್ಯವನ್ನು ನಿರ್ವಹಿಸುತ್ತದೆ.

ಇಲ್ಲಿನ ರೈತರು ಈ ಬದಲಾವಣೆಗಳನ್ನು ತಮ್ಮದೇ ಮಾತುಗಳಲ್ಲಿ ವಿವರಿಸುತ್ತಾರೆ. 25 ವರ್ಷಗಳ ಹಿಂದೆ ಇಲ್ಲಿನ ಜನರು ಸಪ್ಟೆಂಬರಿನಲ್ಲಿ ಹಗುರವಾದ ಹೊದಿಕೆಯನ್ನು ಬಳಸುತ್ತಿದ್ದರು ಎಂಬುದಾಗಿ ಶಿವ್ ಶಂಕರ್‍ನ ಮಗ ವಿಜೇಂದ್ರ ಸಿಂಗ್ ತಿಳಿಸುತ್ತಾರೆ. “ಈಗ ಡಿಸೆಂಬರಿನವರೆಗೂ ಚಳಿಯು ಆರಂಭವಾಗುವುದೇ ಇಲ್ಲ. ಮೊದಲಿಗೆ ಮಾರ್ಚ್‍ ನಲ್ಲಿ ಆಚರಿಸುತ್ತಿದ್ದ ಹೋಲಿಯ ದಿನದಲ್ಲಿ ಕಡು ಬೇಸಿಗೆಯಿರುತ್ತಿತ್ತು. ಈಗ ಈ ಹಬ್ಬವನ್ನು ಚಳಿಯಲ್ಲಿ ಆಚರಿಸುವಂತಾಗಿದೆ”, ಎನ್ನುತ್ತಾರೆ 35 ವರ್ಷದ ವಿಜೇಂದ್ರ.

Shiv Shankar, his son Vijender Singh (left) and other cultivators describe the many changes in temperature, weather and climate affecting the Yamuna floodplains.
PHOTO • Aikantik Bag
Shiv Shankar, his son Vijender Singh (left) and other cultivators describe the many changes in temperature, weather and climate affecting the Yamuna floodplains. Vijender singh at his farm and with his wife Savitri Devi, their two sons, and Shiv Shankar
PHOTO • Aikantik Bag

ಶಿವ್ ಶಂಕರ್, ಅವರ ಮಗ ವಿಜೇಂದರ್ ಸಿಂಗ್ (ಎಡಕ್ಕೆ) ಮತ್ತು ಇತರೆ ಕೃಷಿಕರು ತಾಪಮಾನ, ಹವಾಮಾನ ಹಾಗೂ ಹವಾಗುಣದಲ್ಲಿನ ಅನೇಕ ಬದಲಾವಣೆಗಳು ಯಮುನಾ ನದಿಯ ಮುಳುಗು ಪ್ರದೇಶವನ್ನು ಪ್ರಭಾವಿಸುತ್ತಿವೆ ಎಂಬುದಾಗಿ ವಿವರಿಸುತ್ತಿದ್ದಾರೆ. ತನ್ನ ಇಬ್ಬರು ಮಕ್ಕಳು, ಪತ್ನಿ ಹಾಗೂ ತಾಯಿ ಸಾವಿತ್ರಿ ದೇವಿ ಅವರೊಂದಿಗಿರುವ ವಿಜೇಂದರ್ ಸಿಂಗ್, ಶಿವ್ ಶಂಕರ್ (ಬಲಕ್ಕೆ)

ಶಂಕರ್ ಕುಟುಂಬದವರ ಜೀವನಾನುಭವಗಳು ಇತರೆ ರೈತರ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುತ್ತವೆ. ವಿವಿಧ ಅಂದಾಜುಗಳ ಪ್ರಕಾರ 5,000ದಿಂದ 7,000 ರೈತರು ಗಂಗಾ ನದಿಯ ಅತ್ಯಂತ ಉದ್ದದ ಉಪನದಿ ಮತ್ತು ಗಾತ್ರದಲ್ಲಿ ಎರಡನೆಯ ಸ್ಥಾನದಲ್ಲಿರುವ (ಘಾಘ್ರಾದ ನಂತರ) ಯಮುನಾ ನದಿಯ ದೆಹಲಿಯ ದಡದಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಕೃಷಿಕರು 24,000 ಎಕರೆಯಲ್ಲಿ ಕೃಷಿನಿರತರಾಗಿದ್ದು ಕಳೆದ ಕೆಲವು ದಶಕಗಳಿಂದ ಇದರ ಪ್ರಮಾಣವು ಕಡಿಮೆಯಾಗಿದೆಯೆಂದು ತಿಳಿಸುತ್ತಾರೆ. ಇವರು ಬೃಹತ್ ನಗರದಲ್ಲಿನ ರೈತರಾಗಿದ್ದು ಬಹುದೂರದ ಗ್ರಾಮೀಣ ಪ್ರದೇಶದಲ್ಲಿ ಇರುವವರಲ್ಲ. ಇವರು ಅಭದ್ರತೆಯ ಬದುಕನ್ನು ಸಾಗಿಸುತ್ತಿದ್ದು “ಅಭಿವೃದ್ಧಿ”ಯು ಪ್ರತಿ ಬಾರಿಯೂ ಇವರ ಅಸ್ತಿತ್ವವನ್ನೇ ನಿಶ್ಶಕ್ತಗೊಳಿಸುತ್ತಿದೆ. ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್‍ ಗೆ ಮುಳುಗು ಪ್ರದೇಶದಲ್ಲಿನ ನ್ಯಾಯಬಾಹಿರ ನಿರ್ಮಾಣಗಳನ್ನು ಪ್ರತಿರೋಧಿಸುವ ಅಹವಾಲುಗಳ ಮಹಾಪೂರವೇ ಹರಿದುಬರುತ್ತಿದೆ. ಈ ಬಗ್ಗೆ ಚಿಂತಿತರಾಗಿರುವವರು ರೈತರಷ್ಟೇ ಅಲ್ಲ.

ಮುಳುಗು ಪ್ರದೇಶದಲ್ಲಿ ಇದೇ ರೀತಿ ಕಾಂಕ್ರೀಟಿನ ಪ್ರಕ್ರಿಯೆಗಳನ್ನು ಕೈಗೊಂಡಲ್ಲಿ, “ಬೇಸಿಗೆ ಮತ್ತು ಛಳಿಗಾಲದ ತಾಪಮಾನವು ಪರಮಾವಧಿಯನ್ನು ತಲುಪಿ ಸಹಿಸಲಸಾಧ್ಯವೆನಿಸುತ್ತದೆ. ದಿಲ್ಲಿಯ ಜನತೆ ನಗರವನ್ನು ತೊರೆಯಬೇಕಾಗುತ್ತದೆ”, ಎನ್ನುತ್ತಾರೆ ಭಾರತೀಯ ಅರಣ್ಯ ಸೇವೆಯ ನಿವೃತ್ತ ಅಧಿಕಾರಿಯಾದ ಮನೋಜ್ ಮಿಶ್ರ. ಇವರು 2007ರಲ್ಲಿ ಸ್ಥಾಪಿತಗೊಂಡ ಯಮುನ ಜಿಯೆ ಅಭಿಯಾನ್ (ಲಾಂಗ್ ಲಿವ್ ಯಮುನಾ) ನೇತೃತ್ವವನ್ನು ವಹಿಸಿದ್ದಾರೆ. ಸದರಿ ಅಭಿಯಾನವು ದೆಹಲಿಯ ಏಳು ಮುಂಚೂಣಿ ಪರಿಸರ ಸಂಸ್ಥೆಗಳನ್ನು ಹಾಗೂ ಈ ಬಗ್ಗೆ ಕಾಳಜಿಯನ್ನು ಹೊಂದಿರುವ ನಾಗರೀಕರನ್ನು ಒಟ್ಟುಗೂಡಿಸಿ, ನದಿ ಹಾಗೂ ಪರಿಸರ ವ್ಯವಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. “ನಗರದಲ್ಲಿ ವಾಸ್ತವ್ಯವು ಅಸಹನೀಯವಾಗುತ್ತಿದ್ದು ವಲಸೆಯು ಚುರುಕುಗೊಂಡಿದೆ. ವಾಯುವಿನ ಗುಣಮಟ್ಟವನ್ನು ಸುಧಾರಿಸದಿದ್ದಲ್ಲಿ ರಾಯಭಾರ ಕಛೇರಿಗಳು ಹೊರನಡೆಯುತ್ತವೆ”, ಎನ್ನುತ್ತಾರೆ ಮನೋಜ್ ಮಿಶ್ರ.

*****

ಮುಳುಗು ಪ್ರದೇಶದಲ್ಲಿ ಕಳೆದ ಕೆಲವು ದಶಕಗಳ ಅನಿಯಮಿತ ಮಳೆಯಿಂದಾಗಿ ರೈತರು ಹಾಗೂ ಮೀನುಗಾರರು ಯಾತನೆಗೊಳಗಾಗಿದ್ದಾರೆ.

ಯುಮುನಾ ನದಿಯನ್ನು ಅವಲಂಬಿಸಿರುವ ಸಮುದಾಯಗಳು ಮಳೆಯನ್ನು ಈಗಲೂ, ಪ್ರತಿವರ್ಷವೂ ಆಹ್ವಾನಿಸುತ್ತವೆ. ಹೆಚ್ಚುವರಿ ನೀರು ನದಿಯನ್ನು ಸ್ವಚ್ಛಗೊಳಿಸಿ, ಮೀನುಗಳು ದ್ವಿಗುಣಗೊಳ್ಳಲು ಅವಕಾಶವೀಯುವ ಕಾರಣ, ಮೀನುಗಾರರು ಮಳೆಯನ್ನು ಬಯಸುತ್ತಾರೆ. ಅಂತೆಯೇ ಫಲವತ್ತಾದ ಮಣ್ಣಿನ ಪದರವನ್ನು ತರುವ ಕಾರಣದಿಂದ ಕೃಷಿಕರೂ ಸಹ ಮಳೆಯನ್ನು ಬಯಸುತ್ತಾರೆ. “ಜಮೀನ್ ನಯೀ ಬನ್ ಜಾತೀ ಹೈ, ಜಮೀನ್ ಪಲಟ್ ಜಾತೀ ಹೈ (ಭೂಮಿಯು ಚೇತರಿಸಿಕೊಳ್ಳುತ್ತದಲ್ಲದೆ, ಮಾನ್ಸೂನ್ ಮಳೆಯಿಂದ ಮಾರ್ಪಾಡುಗೊಳ್ಳುತ್ತದೆ)” ಎಂಬುದಾಗಿ ಶಂಕರ್ ವಿವರಿಸುತ್ತಾರೆ. “2000ದ ಇಸವಿಯವರೆಗೂ ಪ್ರತಿವರ್ಷವೂ ಈ ಪ್ರಕ್ರಿಯೆಯನ್ನು ಕಾಣಬಹುದಾಗಿತ್ತು. ಈಗ ಮಳೆಯು ಕಡಿಮೆಯಾಗಿದೆ. ಮೊದಲಿಗೆ ಜೂನ್‍ ನಲ್ಲಿ ಮಾನ್ಸೂನ್ ಪ್ರಾರಂಭವಾಗುತ್ತಿತ್ತು. ಈ ಬಾರಿ ಜೂನ್ ಮತ್ತು ಜುಲೈನಲ್ಲಿ ಶುಷ್ಕ ವಾತಾವರಣವಿತ್ತು. ಮಳೆಯ ವಿಳಂಬದಿಂದಾಗಿ ನಮ್ಮ ಬೆಳೆಯು ಬಾಧೆಗೀಡಾಗಿದೆ”, ಎನ್ನುತ್ತಾರವರು.

“ಮಳೆಯು ಕಡಿಮೆಯಾದಾಗ ಮಣ್ಣಿನಲ್ಲಿ ಕ್ಷಾರದ ಅಂಶ ಹೆಚ್ಚಾಗುತ್ತದೆ (ಕ್ಷಾರದ ಅಂಶ, ಉಪ್ಪಲ್ಲ). ತನ್ನ ಜಮೀನನ್ನು ತೋರಿಸುವ ಸಂದರ್ಭದಲ್ಲಿ ಶಂಕರ್ ನಮಗೆ ಈ ವಿಷಯವನ್ನು ತಿಳಿಸಿದರು. ನದಿಯು ತನ್ನ ಮುಳುಗು ಪ್ರದೇಶದಲ್ಲಿ ಬಿಟ್ಟು ಹೋದ ಶೇಖರಣೆಯ ಫಲಿತಾಂಶವೇ ದೆಹಲಿಯ ಮೆಕ್ಕಲು ಮಣ್ಣು. ಈ ಮಣ್ಣಿನಲ್ಲಿ ಬಹುಕಾಲದವರೆಗೂ ಕಬ್ಬು, ಅಕ್ಕಿ, ಗೋಧಿ ಮುಂತಾದ ಅನೇಕ ಬೆಳೆಗಳು ಹಾಗೂ ತರಕಾರಿಗಳನ್ನು ಬೆಳೆಯಬಹುದಿತ್ತು. 19ನೇ ಶತಮಾನದವರೆಗೂ ಲಲ್ರಿ, ಮಿರಟಿ, ಸೊರಥ ಎಂಬ ಕಬ್ಬಿನ ಪ್ರಕಾರಗಳು ಈ ನಗರದ ಹೆಮ್ಮೆಯೆನಿಸಿದ್ದವು ಎಂಬುದಾಗಿ ದೆಹಲಿಯ ಗೆಝೆಟಿಯರ್ ನಿಂದ ತಿಳಿದುಬರುತ್ತದೆ.

ಭೂಮಿಯು ನವ ಚೈತನ್ಯವನ್ನು ಪಡೆದು, ಮಾರ್ಪಾಡುಗೊಳ್ಳುತ್ತದೆ ಎನ್ನುತ್ತಾರೆ ಶಂಕರ್‍

ವೀಡಿಯೋ ವೀಕ್ಷಿಸಿ: ‘ಇಂದು ಆ ಗ್ರಾಮದಲ್ಲಿ ಒಂದಾದರೂ ದೊಡ್ಡ ಮರವಿಲ್ಲ’

ಕಬ್ಬನ್ನು ಬೆಲ್ಲದ ತಯಾರಿಕೆಯಲ್ಲಿ ಬಳಸಲಾಗುತ್ತಿತ್ತು. ಕಳೆದ ದಶಕದವರೆಗೂ ತಾಜಾ ಕಬ್ಬಿನ ರಸವನ್ನು ಮಾರುವ ಚಿಕ್ಕ ತಾತ್ಕಾಲಿಕ ಅಂಗಡಿಗಳು ಮತ್ತು ಗಾಡಿಗಳು ದೆಹಲಿಯ ಬೀದಿಯ ಮೂಲೆಗಳಲ್ಲಿ ಕಂಡುಬರುತ್ತಿದ್ದವು. “ನಂತರ ಸರ್ಕಾರವು ಕಬ್ಬಿನ ರಸದ ಮಾರಾಟವನ್ನು ತಡೆಹಿಡಿಯಲಾಯಿತು. ಹೀಗಾಗಿ ಇದರ ಕೃಷಿಯು ಸ್ಥಗಿತಗೊಂಡಿತು. ಕಬ್ಬಿನ ರಸದ ಮಾರಾಟಗಾರರನ್ನು ಹಾಗೂ ನಿಷೇಧಕ್ಕೆ ಸವಾಲನ್ನು ಒಡ್ಡುವ ನ್ಯಾಯಾಲಯದ ಮೊಕದ್ದಮೆಗಳನ್ನು 1990ರ ದಶಕದಿಂದ ಅಧಿಕೃತವಾಗಿ ನಿಷೇಧಿಸಲಾಯಿತು. ಕಬ್ಬಿನ ರಸವು ರೋಗಗಳನ್ನು ಪ್ರತಿರೋಧಿಸುತ್ತದೆ, ನಮ್ಮ ಶರೀರವನ್ನು ತಂಪಾಗಿಸಿ ಉಷ್ಣತೆಯನ್ನು ತಗ್ಗಿಸುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ತಂಪು ಪಾನೀಯಗಳ ಕಂಪನಿಗಳು ನಮ್ಮ ನಿಷೇಧಕ್ಕೆ ಕಾರಣಕರ್ತರು. ಅವರ ಜನರು ಮಂತ್ರಿಗಳಿಗೆ ಪ್ರಭಾವವನ್ನು ಬೀರಲಾಗಿ ನಮ್ಮನ್ನು ಈ ಉದ್ಯಮದಿಂದ ಹೊರದೂಡಲಾಯಿತು”, ಎನ್ನುತ್ತಾರೆ ಶಂಕರ್.

ಕೆಲವೊಮ್ಮೆ ಹವಾಮಾನದ ವೈಪರೀತ್ಯಗಳು ರಾಜಕೀಯ-ಆಡಳಿತಾತ್ಮಕ ನಿರ್ಧಾರಗಳೊಂದಿಗೆ ಮಿಳಿತಗೊಂಡು ವ್ಯಾಪಕ ಹಾನಿಯನ್ನು ಅನುಭವಿಸಬೇಕಾಗುತ್ತದೆ. ಹಥ್ನಿ ಕುಂಡ್ ಅಣೆಕಟ್ಟಿನಿಂದ ಆಗಸ್ಟ್‍ ನಲ್ಲಿ ಹರಿಯಾಣವು ನೀರನ್ನು ಹೊರಬಿಟ್ಟಾಗ, ಅದು ದೆಹಲಿಯ ಮಳೆಯೊಂದಿಗೆ ಸೇರಿ ಹಲವಾರು ಬೆಳೆಗಳು ನಾಶವಾದವು. ಬೆಲ ಎಸ್ಟೇಟ್‍ ನ (ಶಾಂತಿವನ ಹಾಗೂ ರಾಜ್‍ ಘಾಟ್ ರಾಷ್ಟ್ರೀಯ ಸ್ಮಾರಕಗಳ ಹಿಂಭಾಗದಲ್ಲಿನ) ತಮ್ಮ ಐದು ಬಿಘ (ಒಂದು ಎಕರೆ) ಜಮೀನಿನಲ್ಲಿ ಪರಿಪೂರ್ಣವಾಗಿ ಬೆಳೆಯದೆ ಮುರುಟಿದ ಮೆಣಸಿನಕಾಯಿಗಳು, ಸುರುಟಿಕೊಂಡ ಬದನೆಗಳು ಹಾಗೂ ನಿಶ್ಶಕ್ತ ಮೂಲಂಗಿಯ ಗಿಡಗಳನ್ನು ವಿಜೇಂದರ್ ನಮಗೆ ತೋರಿಸಿದರು.

ಬಹುಕಾಲದಿಂದಲೂ ಈ ರಾಜಧಾನಿಯ ನಗರದಲ್ಲಿ ಅರೆ ಶುಷ್ಕ ಹವಾಗುಣವಿದೆ. 1911ರಲ್ಲಿ ಇದು ಬ್ರಿಟಿಷ್ ರಾಜಧಾನಿಯಾಗುವುದಕ್ಕೂ ಮೊದಲು ಪಂಜಾಬ್‍ ನ ಕೃಷಿ ರಾಜ್ಯದ ಆಗ್ನೇಯ ಭಾಗವಾಗಿತ್ತು. ಇದು ಪಶ್ಚಿಮಕ್ಕೆ ರಾಜಾಸ್ಥಾನದ ಮರಳುಗಾಡಿನಿಂದ, ಉತ್ತರಕ್ಕೆ ಹಿಮಾಲಯ ಪರ್ವತಗಳಿಂದ ಮತ್ತು ಪೂರ್ವಕ್ಕೆ ಗಂಗಾ ನದಿಯ ಬಯಲು ಪ್ರದೇಶಗಳಿಂದ ಸುತ್ತುವರಿದಿದೆ (ಎಲ್ಲ ವಲಯಗಳೂ ಹವಾಗುಣದ ಬದಲಾವಣೆಯೊಂದಿಗೆ ಹೋರಾಡುತ್ತಿವೆ). ಇದರಿಂದಾಗಿ ಶೈತ್ಯದಿಂದ ಕೂಡಿದ ಚಳಿಗಾಲ ಮತ್ತು ಸುಡುವ ಬೇಸಿಗೆಯನ್ನು ಕಾಣುವಂತಾಗಿದ್ದು ಮಾನ್ಸೂನ್‍ನಲ್ಲಿ 3ರಿಂದ 4 ತಿಂಗಳ ತಾತ್ಕಾಲಿಕ ವಿರಾಮವು ದೊರೆಯುತ್ತದೆ.

ಈಗ ಇದು ಇನ್ನೂ ಹೆಚ್ಚು ಅನಿಯಮಿತವಾಗಿದೆ. ಭಾರತೀಯ ಪವನಶಾಸ್ತ್ರ ಇಲಾಖೆಯ ಅನುಸಾರ ಈ ವರ್ಷದ ಜೂನ್ ಮತ್ತು ಆಗಸ್ಟ್ ಋತುವಿನಲ್ಲಿ ದೆಹಲಿಯಲ್ಲಿ ಶೇ. 38ರಷ್ಟು ಮಳೆಯ ಕೊರತೆಯು ದಾಖಲಾಗಿದೆ. ಎಂದಿನ 648.9 ಮಿ.ಮೀ.ಗೆ ಬದಲಾಗಿ 404.1 ಮಿ.ಮೀ. ಮಳೆಯು ಲಭ್ಯವಾಗಿದೆ. ಸರಳವಾಗಿ ಹೇಳಬೇಕೆಂದರೆ ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆಯು ದಾಖಲಾಗಿದೆ.

ಮಾನ್ಸೂನ್ ಸ್ವರೂಪವು ಬದಲಾಗುತ್ತಿದ್ದು ಅಲ್ಲಲ್ಲಿ ಮಾತ್ರವೇ ಮಳೆ ಸುರಿಯುತ್ತಿದೆ ಎಂಬುದಾಗಿ ಸೌತ್ ಏಷಿಯ ನೆಟ್‍ವರ್ಕ್ ಆಫ್ ಡ್ಯಾಮ್ಸ್ ರಿವರ್ಸ್ ಅಂಡ್ ಪೀಪಲ್‍ ನ ಸಂಯೋಜಕರಾದ ಹಿಮಾಂಶು ಥಕ್ಕರ್ ತಿಳಿಸುತ್ತಾರೆ. ಮಳೆಯ ಪ್ರಮಾಣದಲ್ಲಿ ಕಡಿಮೆಯಾಗದಿದ್ದಾಗ್ಯೂ, ಮಳೆಯ ದಿನಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಮಳೆಯ ದಿನಗಳಲ್ಲಿ ಅದರ ಸಾಂದ್ರತೆಯು ಹೆಚ್ಚಿರುತ್ತದೆ. ದೆಹಲಿಯು ಬದಲಾಗುತ್ತಿದ್ದು ಯಮುನಾ ಹಾಗೂ ಅದರ ಮುಳುಗು ಪ್ರದೇಶಗಳನ್ನು ಇದು ಪ್ರಭಾವಿಸುತ್ತಿದೆ. ವಲಸೆಗಳು, ರಸ್ತೆಯಲ್ಲಿನ ವಾಹನಗಳ ಸಂಖ್ಯೆ ಮತ್ತು ಹವಾಮಾಲಿನ್ಯಗಳು ಹೆಚ್ಚಾಗುತ್ತಿದ್ದು, ಇದನ್ನು ಸುತ್ತುವರಿದ ಉತ್ತರ ಪ್ರದೇಶ ಮತ್ತು ಪಂಜಾಬ್‍ ನ ಪ್ರದೇಶಗಳಲ್ಲೂ ಇದು ಮಾರ್ಪಾಡುಗಳನ್ನು ಉಂಟುಮಾಡುತ್ತಿದೆ. ಚಿಕ್ಕ ಪ್ರದೇಶವೊಂದರ ಹವಾಗುಣವು ಸ್ಥಳೀಯ ಹವಾಗುಣವನ್ನು ಪ್ರಭಾವಿಸುತ್ತಿದೆ.

*****

The flooding of the Yamuna (left) this year – when Haryana released water from the Hathni Kund barrage in August – coincided with the rains in Delhi and destroyed several crops (right)
PHOTO • Shalini Singh
The flooding of the Yamuna (left) this year – when Haryana released water from the Hathni Kund barrage in August – coincided with the rains in Delhi and destroyed several crops (right)
PHOTO • Aikantik Bag

ಈ ವರ್ಷದಲ್ಲಿನ ಯಮುನಾ ನದಿಯ (ಎಡಕ್ಕೆ) ಪ್ರವಾಹ - ಹಥ್ನಿ ಕುಂಡ್ ಅಣೆಕಟ್ಟಿನಿಂದ ಆಗಸ್ಟ್‍ ನಲ್ಲಿ ಹರಿಯಾಣ ರಾಜ್ಯವು ನೀರನ್ನು ಹೊರಬಿಟ್ಟಾಗ, ಅದು ದೆಹಲಿಯ ಮಳೆಯೊಂದಿಗೆ ಕಾಕತಾಳೀಯವಾಗಿ ಮಿಳಿತಗೊಂಡು ಹಲವಾರು ಬೆಳೆಗಳನ್ನು ನಾಶಗೊಳಿಸಿತು

‘ಜಮುನಾ ಪಾರ್ ಕೆ ಮಟರ್ ಲೇ ಲೋ’ (‘ಯಮುನಾ ತೀರದ ಬಟಾಣಿಗಳನ್ನು ಕೊಳ್ಳಿ...’) ಎಂದು ದೆಹಲಿಯ ಬೀದಿಗಳಲ್ಲಿ ಹೆಮ್ಮೆಯಿಂದ ಕೂಗುತ್ತಿದ್ದ ತರಕಾರಿ ಮಾರಾಟಗಾರರ ಕೂಗು 1980ರಿಂದ ನಿಶ್ಶಬ್ದವಾಗಿಬಿಟ್ಟಿದೆ. ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್‍ ನಿಂದ ಪ್ರಕಟಿಸಲಾದ ಎನ್ವಿರಾನ್ಮೆಂಟ್ ಆಫ್ ಡೆಲ್ಲಿ ಎಂಬ ಪುಸ್ತಕದಲ್ಲಿ ಹಳೆಯ ಕಾಲದ ವ್ಯಕ್ತಿಗಳು, ನಗರದಲ್ಲಿ ದೊರೆಯುತ್ತಿದ್ದ ಕಲ್ಲಂಗಡಿ ಹಣ್ಣುಗಳು ಲಖನೌ ಕರ್ಬೂಜಗಳನ್ನು ನೆನಪಿಸುತ್ತಿದ್ದವು ಎಂಬುದಾಗಿ ನೆನೆಸಿಕೊಳ್ಳುತ್ತಾರೆ. ನದಿಯ ಮರಳುಮಿಶ್ರಿತ ಮಣ್ಣಿನಲ್ಲಿ ಬೆಳೆಯುತ್ತಿದ್ದ ಹಣ್ಣಿನಲ್ಲಿನ ರಸವು ಆಗಿನ ಹವೆಯನ್ನು ಅವಲಂಬಿಸಿತ್ತು. ಮೊದಲಿನ ಕಲ್ಲಂಗಡಿಗಳು ತಿಳಿ ಹಸಿರು ಬಣ್ಣವಿದ್ದು, ಭಾರವಾಗಿರುತ್ತಿದ್ದವು. ಸಿಹಿಯ ಅಂಶವೂ ಹೆಚ್ಚಾಗಿರುತ್ತಿದ್ದು ಋತುವಿಗೊಮ್ಮೆ  ದೊರೆಯುತ್ತಿದ್ದವು. ಕೃಷಿ ಪದ್ಧತಿಯ ಬದಲಾವಣೆಗಳಿಂದಾಗಿ ಹೊಸ ಪ್ರಕಾರದ ಬೀಜಗಳು ಬಂದಿವೆ. ಈಗಿನ ಕಲ್ಲಂಗಡಿಗಳು ಚಿಕ್ಕವಿದ್ದು ಗೆರೆಗಳನ್ನು ಹೊಂದಿವೆ. ಹೊಸ ಬೀಜಗಳು ಹೆಚ್ಚಿನ ಫಸಲನ್ನು ನೀಡುತ್ತವೆಯಾದರೂ ಹಣ್ಣಿನ ಗಾತ್ರವು ಚಿಕ್ಕದಿರುತ್ತದೆ.

ಎರಡು ದಶಕದ ಹಿಂದೆ ಮಾರಾಟಗಾರರು ಮನೆಯಿಂದ ಮನೆಗೆ ತರುತ್ತಿದ್ದ ತಾಜಾ ಚೆಸ್(ಸ್ಟ್)ನಟ್‍ಗಳ (ಸಿಂಘಾರ) ರಾಶಿಯು ಮಾಯವಾಗಿದೆ. ನಜಫ್‍ ಘರ್ ಝೀಲ್ (ಸರೋವರ) ಸುತ್ತಮುತ್ತಲಿನಲ್ಲಿ ಅದನ್ನು ಬೆಳೆಯಲಾಗುತ್ತಿತ್ತು. ಇಂದು ನಜಫ್‍ ಘರ್ ನಾಲೆ ಮತ್ತು ದೆಹಲಿ ಗೇಟ್ ನಾಲೆಗಳಲ್ಲಿ ಯಮುನಾದ ಶೇ. 63ರಷ್ಟು ಮಾಲಿನ್ಯವು ಶೇಖರಗೊಂಡಿದೆ ಎಂಬುದಾಗಿ ನ್ಯಾಶನಲ್ ಗ್ರೀನ್ ಟ್ರಿಬ್ಯೂನಲ್ (ಎನ್.ಜಿ.ಟಿ) ಜಾಲತಾಣದಲ್ಲಿ ತಿಳಿಸಲಾಗಿದೆ. ದೆಹಲಿಯ ರೈತರ ಬಹುಉದ್ದೇಶಿತ ಸಹಕಾರ ಸಂಘದ ಪ್ರಧಾನ ಕಾರ್ಯದರ್ಶಿಯಾದ 80ರ ವಯಸ್ಸಿನ ಬಲ್ಜೀತ್ ಸಿಂಗ್, “ಸಿಂಘಾರವನ್ನು ಚಿಕ್ಕ ನೀರಿನ ಸೆಲೆಗಳಲ್ಲಿ ಬೆಳೆಯಲಾಗುತ್ತಿತ್ತು. ಇದರ ಕೃಷಿಗೆ ಸೂಕ್ತ ಪ್ರಮಾಣದ ನೀರು ಹಾಗೂ ಅಪಾರ ತಾಳ್ಮೆಯು ಅವಶ್ಯವಿರುವ ಕಾರಣ, ಜನರು ಇದರ ಕೃಷಿಯನ್ನು ನಿಲ್ಲಿಸಿದ್ದಾರೆ” ಎಂದು ತಿಳಿಸುತ್ತಾರೆ. ರಾಜಧಾನಿ ನಗರದಲ್ಲಿ ನೀರು ಹಾಗೂ ತಾಳ್ಮೆಗಳೆರಡೂ ತ್ವರಿತವಾಗಿ ಕಾಣೆಯಾಗುತ್ತಿವೆ.

ರೈತರೂ ಸಹ ತಮ್ಮ ಜಮೀನಿನಲ್ಲಿ ತ್ವರಿತ ಫಸಲನ್ನು ಬಯಸುತ್ತಾರೆ ಎನ್ನುತ್ತಾರೆ ಬಲ್ಜೀತ್ ಸಿಂಗ್. ಬೆಂಡೆ, ಹುರುಳಿ, ಬದನೆ, ಮೂಲಂಗಿ, ಹೂಕೋಸು ಮುಂತಾಗಿ ವರ್ಷಕ್ಕೆ 3-4 ಬಾರಿ 2-3 ತಿಂಗಳ ಅವಧಿಯಲ್ಲಿ ಬೆಳೆಯಬಹುದಾದ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಮೂಲಂಗಿಯ ಹೊಸ ಬೀಜಗಳನ್ನು ದಶಕಗಳ ಹಿಂದೆ ಆವಿಷ್ಕರಿಸಲಾಗಿದೆ ಎಂದು ಸಹ ಅವರು ತಿಳಿಸಿದರು. “ವಿಜ್ಞಾನವು ಫಸಲನ್ನು ವೃದ್ಧಿಸಿದೆ. ಮೊದಲು ನಮಗೆ 45-50 ಕ್ವಿಂಟಲ್ ಮೂಲಂಗಿ (ಒಂದು ಎಕರೆಗೆ) ದೊರೆಯುತ್ತಿತ್ತು. ಈಗ ಅದರ ನಾಲ್ಕು ಪಟ್ಟು ದೊರೆಯುತ್ತಿದ್ದು, ವರ್ಷಕ್ಕೆ ಮೂರು ಬಾರಿ ಅದನ್ನು ಬೆಳೆಯಬಹುದಾಗಿದೆ”, ಎನ್ನುತ್ತಾರೆ ಶಂಕರ್.

Vijender’s one acre plot in Bela Estate (left), where he shows us the shrunken chillies and shrivelled brinjals (right) that will not bloom this season
PHOTO • Aikantik Bag
Vijender’s one acre plot in Bela Estate (left), where he shows us the shrunken chillies and shrivelled brinjals (right) that will not bloom this season
PHOTO • Aikantik Bag
Vijender’s one acre plot in Bela Estate (left), where he shows us the shrunken chillies and shrivelled brinjals (right) that will not bloom this season
PHOTO • Aikantik Bag

ವಿಜೇಂದರ್ ತಮ್ಮ ಬೆಲ ಎಸ್ಟೇಟ್‍ ನ (ಎಡಕ್ಕೆ) ಒಂದು ಎಕರೆ ಜಮೀನಿನಲ್ಲಿ; ಈ ಋತುವಿನಲ್ಲಿ ಪೂರ್ಣ ಗಾತ್ರದಲ್ಲಿ ಬೆಳೆಯಲು ಸಾಧ್ಯವಾಗದಂತೆ ಸುಕ್ಕುಗಟ್ಟಿದ ಮೆಣಸಿನಕಾಯಿ ಮತ್ತು ಮುದುಡಿದ ಬದನೆಗಳನ್ನು ತೋರಿಸುತ್ತಿದ್ದಾರೆ

ಕಾಂಕ್ರೀಟ್ ಆಧಾರಿತ ವಿಕಾಸ ಕಾರ್ಯಗಳು ದೆಹಲಿಯಲ್ಲಿ ತ್ವರಿತವಾಗಿ ಹೆಚ್ಚುತ್ತಿವೆ. ಪ್ರವಾಹ ಪ್ರದೇಶದಲ್ಲಿಯೂ ಇದರ ಪ್ರಮಾಣ ಕಡಿಮೆಯೇನಿಲ್ಲ. ದೆಹಲಿಯ 2018-19ರ ಆರ್ಥಿಕ ಸರ್ವೇಕ್ಷಣೆಯ ಪ್ರಕಾರ 2000ರಿಂದ 2018ರವರೆಗೆ, ಕೃಷಿ ಪ್ರದೇಶವು ಪ್ರತಿ ವರ್ಷವೂ ಶೇ. 2ರಷ್ಟು ಕಡಿಮೆಯಾಗುತ್ತಿದೆ. ಪ್ರಸ್ತುತ ನಗರದ ಜನಸಂಖ್ಯೆಯ ಶೇ. 25ರಷ್ಟು ಜನರು ಗ್ರಾಮೀಣರಾಗಿದ್ದು, ಇದರ ವಿಸ್ತೀರ್ಣದ ಸುಮಾರು ಶೇ. 25ರಷ್ಟು ಭಾಗವು (1991ರಲ್ಲಿನ ಶೇ. 50ಕ್ಕಿಂತಲೂ ಕಡಿಮೆ) ಗ್ರಾಮೀಣ ಪ್ರದೇಶವೆನಿಸಿದೆ. ರಾಜಧಾನಿಯ 2021ರ ಮೇರು ಯೋಜನೆಯಂತೆ (ಮಾಸ್ಟರ್ ಪ್ಲಾನ್) ದೆಹಲಿ ಅಭಿವೃದ್ಧಿ ಪ್ರಾಧಿಕಾರವು (ಡಿ.ಡಿ.ಎ) ಸಂಪೂರ್ಣ ನಗರೀಕರಣಕ್ಕೆ ಚಾಲನೆ ನೀಡಿದೆ.

ವಿಶ್ವಸಂಸ್ಥೆಯ ಅಂದಾಜಿನಂತೆ ಇದರ ತ್ವರಿತಗತಿಯ ನಗರೀಕರಣದ ವೇಗದಿಂದಾಗಿ, ಅದರಲ್ಲೂ ಮುಖ್ಯವಾಗಿ, ಕಾನೂನುಬದ್ಧ ಹಾಗೂ ಕಾನೂನುಬಾಹಿರ ತ್ವರಿತ ನಿರ್ಮಾಣ ಚಟುವಟಿಕೆಗಳಿಂದಾಗಿ, 2030ರ ವೇಳೆಗೆ ದೆಹಲಿಯು ಅತ್ಯಂತ ಜನಪ್ರಿಯ ನಗರವೆನಿಸುತ್ತದೆ. ಪ್ರಸ್ತುತ 20 ಮಿಲಿಯನ್ ಜನಸಂಖ್ಯೆಯಿರುವ ರಾಜಧಾನಿಯು ಆಗ ಟೋಕಿಯೋವನ್ನು (ಪ್ರಸ್ತುತ, 37 ಮಿಲಿಯನ್) ಮೀರಿಸುತ್ತದೆ. ನೀತಿ ಆಯೋಗದ ಹೇಳಿಕೆಯಂತೆ ಅಂತರ್ಜಲರಹಿತ 21 ಭಾರತೀಯ ನಗರಗಳಲ್ಲಿ ಇದೂ ಒಂದೆನಿಸುತ್ತದೆ.

“ನಗರದ ಕಾಂಕ್ರೀಟ್ ಪ್ರಕ್ರಿಯೆಯಿಂದಾಗಿ ಹೆಚ್ಚಿನ ಭೂಮಿಗೆ ಕಲ್ಲುಹಾಸನ್ನು ಹೊದಿಸಲಾಗುತ್ತದೆ. ನೀರಿನ ಒಳಸೋರುವಿಕೆಯೂ ಕಡಿಮೆಯಾಗುತ್ತದೆಯಲ್ಲದೆ, ಮರಗಿಡಗಳ ಸಂಖ್ಯೆಯೂ ಕ್ಷೀಣಿಸುತ್ತದೆ. ಕಲ್ಲುಹಾಸಿನ ಪ್ರದೇಶಗಳು ಶಾಖವನ್ನು ಹೀರಿ ಶಾಖವನ್ನು ಹೊರಸೂಸುತ್ತವೆ”, ಎನ್ನುತ್ತಾರೆ ಮನೋಜ್ ಮಿಶ್ರ.

ನ್ಯೂಯಾರ್ಕ್ ಟೈಮ್ಸ್‍ ನ ಹವಾಮಾನ ಮತ್ತು ಜಾಗತಿಕ ತಾಪಮಾನದ ಸಂವಾದಾತ್ಮಕ ಸಾಧನದ ಪ್ರಕಾರ 1960ರಲ್ಲಿ, ಶಂಕರ್ 16 ವರ್ಷದವರಿದ್ದಾಗ, ದೆಹಲಿಯಲ್ಲಿ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಇದ್ದ ಸರಾಸರಿ ದಿನಗಳು 178. 2019ರಲ್ಲಿ, ತಾಪಮಾನದ ದಿನಗಳ ಸಂಖ್ಯೆ 205. ಈ ಶತಮಾನದ ಅಂತ್ಯಕ್ಕೆ, 6 ತಿಂಗಳಿಗೂ ಕಡಿಮೆ ಅವಧಿಯ 32 ಡಿಗ್ರಿ ಸೆಲ್ಸಿಯಸ್ ತಾಪಮಾನವು ಪ್ರತಿ ವರ್ಷವೂ 8 ತಿಂಗಳ ಅವಧಿಯನ್ನು ತಲುಪುತ್ತದೆ. ಮಾನವನ ಚಟುವಟಿಕೆಗಳು ಇದನ್ನು ಅತಿಯಾಗಿ ಪ್ರಭಾವಿಸಿವೆ.

Shiv Shankar and his son Praveen Kumar start the watering process on their field
PHOTO • Aikantik Bag
Shiv Shankar and his son Praveen Kumar start the watering process on their field
PHOTO • Shalini Singh

ಶಿವ್ ಕುಮಾರ್ ಮತ್ತು ಆತನ ಮಗ ಪ್ರವೀಣ್ ಕುಮಾರ್ ತಮ್ಮ ಜಮೀನಿಗೆ ನೀರುಣಿಸಲು ಪ್ರಾರಂಭಿಸಿದ್ದಾರೆ

ನೈಋತ್ಯ ದೆಹಲಿಯ ಪಾಲಂ ಮತ್ತು ಅದರ ಪೂರ್ವಕ್ಕಿರುವ ಪ್ರವಾಹ ಪ್ರದೇಶಗಳ ನಡುವೆ ಪ್ರಾಯಶಃ 4 ಡಿಗ್ರಿ ಸೆಲ್ಸಿಯಸ್‍ ಗಳ ವ್ಯತ್ಯಾಸವಿದೆಯೆಂಬುದಾಗಿ ಮಿಶ್ರ ತಿಳಿಸುತ್ತಾರೆ. ಪಾಲಂನಲ್ಲಿ 45 ಡಿಗ್ರಿ ಸೆಲ್ಸಿಯಸ್‍ ಗಳಿದ್ದಲ್ಲಿ ಪ್ರವಾಹ ಪ್ರದೇಶದಲ್ಲಿ ಅದು ಪ್ರಾಯಶಃ 40-41 ಡಿಗ್ರಿ ಸೆಲ್ಸಿಯಸ್ ತಲುಪಬಹುದಾಗಿದೆ. ಮಹಾನಗರಿಗಳಲ್ಲಿ “ಈ ಪ್ರವಾಹ ಪ್ರದೇಶಗಳು ಉಡುಗೊರೆಗಳಾಗಿವೆ.”

*****

ಎನ್.ಜಿ.ಟಿ ತಿಳಿಸುವಂತೆ ಯಮುನಾ ನದಿಯ ಶೇ. 80ರಷ್ಟು ಮಾಲಿನ್ಯವು ರಾಜಧಾನಿಯಿಂದಲೇ ಬರುವ ಕಾರಣ, ಒಂದೊಮ್ಮೆ ಯಮುನೆ ದೆಹಲಿಯನ್ನು ‘ತೊರೆದರೆ’ ಏನಾದೀತು? ನಂಜುಭರಿತ ಸಂಬಂಧದಲ್ಲಿ ಬಾಧೆಗೊಳಗಾದವರ ತರ್ಕಬದ್ಧ ಹೆಜ್ಜೆಯೆಂಬುದಾಗಿ ಅದನ್ನು ವ್ಯಾಖ್ಯಾನಿಸಬಹುದೇನೋ. “ಯಮುನೆಯಿಂದಾಗಿ ದೆಹಲಿಯು ಅಸ್ತಿತ್ವದಲ್ಲಿದೆಯೇ ಹೊರತು ದೆಹಲಿಯಿಂದಾಗಿ ಯಮುನೆಯು ಬದುಕಿಕೊಂಡಿಲ್ಲ. ನದಿಯ ಗತಿಗೆ ವಿರುದ್ಧವಾದ ಮಾರ್ಗಭೇದದಿಂದ ಸಮಾನಂತರ ನಾಲೆಗೆ ಹರಿಯುವ ನದಿಯಿಂದ “ದೆಹಲಿಯ ಶೇ. 60ರಷ್ಟು ಕುಡಿಯುವ ನೀರು ದೊರೆಯುತ್ತದೆ. ನದಿಯನ್ನು ಮಾನ್ಸೂನ್ ರಕ್ಷಿಸುತ್ತದೆ. ಮೊದಲನೆಯ ಅಲೆ ಅಥವ ಪ್ರವಾಹದ ಮೊದಲ ಕಂಪನದಲ್ಲಿ ನದಿಯ ಮಾಲಿನ್ಯವು ಹೊರಹಾಕಲ್ಪಡುತ್ತದೆ. ಎರಡನೆ ಮತ್ತು ಮೂರನೆ ಪ್ರವಾಹದ ಕಂಪನವು ನಗರದ ಅಂತರ್ಜಲವನ್ನು ಮತ್ತೆ ತುಂಬಿಸುತ್ತದೆ. 5-10 ವರ್ಷಗಳಿಗೊಮ್ಮೆ ನದಿಯಿಂದ ಅಂತರ್ಜಲವು ಮರುಪೂರಣಗೊಳ್ಳುತ್ತದೆ. ಇನ್ನಾವುದೇ ಏಜೆನ್ಸಿಯಿಂದಲೂ ಈ ಕೆಲಸವು ಸಾಧ್ಯವಾಗದು. 2008, 2010 ಮತ್ತು 2013ರಲ್ಲಿ ಪ್ರವಾಹದ ಸ್ಥಿತಿಯು ತಲೆದೋರಿದಾಗ ಮುಂದಿನ 5 ವರ್ಷಗಳಿಗೆ ನೀರು ಮರುಪೂರಣಗೊಂಡಿತು. ದಿಲ್ಲಿಯ ಬಹುತೇಕರು ಇದನ್ನು ಮನಗಾಣುವುದಿಲ್ಲ”, ಎನ್ನುತ್ತಾರೆ ಮಿಶ್ರ.

ಮುಳುಗು ಪ್ರದೇಶಗಳು ಬಹುಮುಖ್ಯವಾದವುಗಳು. ನೀರಿನ ಹರಡುವಿಕೆಗೆ ಇದು ಜಾಗವನ್ನೊದಗಿಸುತ್ತದೆಯಲ್ಲದೆ ಅದನ್ನು ನಿಧಾನಗೊಳಿಸುತ್ತದೆ. ಪ್ರವಾಹದಲ್ಲಿ ಇವು ಹೆಚ್ಚಿನ ನೀರನ್ನು ಹಿಡಿದಿಟ್ಟು, ಅಂತರ್ಜಲ ಜಲವಾಹಿ ಸ್ತರಗಳಿಗೆ ಅವನ್ನು ನಿಧಾನವಾಗಿ ಹೊರಬಿಡುತ್ತವೆ. ಇದರ ಪರಿಣಾಮದಿಂದಾಗಿ ನದಿಯು ಮರುಪೂರಣಗೊಳ್ಳುತ್ತದೆ. ಈ ಹಿಂದೆ 1978ರಲ್ಲಿನ ವಿನಾಶಕಾರಿ ಪ್ರವಾಹದಿಂದಾಗಿ ದೆಹಲಿಯು ಧ್ವಂಸಗೊಂಡಿತು. ಯಮುನೆಯು ತನ್ನ ಅಧಿಕೃತ ಸುರಕ್ಷಾ ಹಂತದಿಂದ 6 ಅಡಿ ಮೇಲಕ್ಕೇರಿದಾಗ ಅನೇಕರು ಸಾವಿಗೀಡಾದರು. ಲಕ್ಷಾಂತರ ಜನರು ಇದರಿಂದ ತೊಂದರೆಗೀಡಾದರಲ್ಲದೆ ಕೆಲವರು ನಿರ್ವಸಿತರಾದರು. ಕೃಷಿ ಹಾಗೂ ಇತರೆ ನೀರಿನ ಸೆಲೆಗಳಿಗೆ ಉಂಟಾದ ನಷ್ಟವನ್ನು ಮರೆಯುವಂತೆಯೇ ಇಲ್ಲ. ಈ ಅಪಾಯದ ಮಟ್ಟವನ್ನು 2013ರಲ್ಲಿಯೂ ಮೀರಿದ್ದುಂಟು. ಯಮುನಾ ರಿವರ್ ಪ್ರಾಜೆಕ್ಟ್: ನ್ಯೂ ಡೆಲ್ಲಿ ಅರ್ಬನ್ ಇಕಾಲಜಿ ಎಂಬ ಯೋಜನೆಯನುಸಾರ (ವರ್ಜೀನಿಯ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಕೈಗೊಳ್ಳಲಾದ), ಮುಳುಗು ಪ್ರದೇಶದ ನಿರಂತರ ಒತ್ತುವರಿಯು ತೀವ್ರ ಪರಿಣಾಮಗಳಿಗೆ ಎಡೆಮಾಡಿಕೊಟ್ಟಿದೆ. “ಅಣೆಕಟ್ಟುಗಳು 100 ವರ್ಷಗಳಲ್ಲಿನ ಪ್ರವಾಹದಿಂದಾಗಿ ಕುಸಿಯುತ್ತವೆ. ತಗ್ಗು ಪ್ರದೇಶಗಳಲ್ಲಿನ ಮುಳುಗು ಪ್ರದೇಶದಲ್ಲಿನ ನಿರ್ಮಾಣಗಳು ನಾಶಗೊಂಡು, ಪೂರ್ವ ದೆಹಲಿಯು ನೀರಿನಲ್ಲಿ ಮುಳುಗುತ್ತದೆ.”

Shiv Shankar explaining the changes in his farmland (right) he has witnessed over the years
PHOTO • Aikantik Bag
Shiv Shankar explaining the changes in his farmland (right) he has witnessed over the years
PHOTO • Aikantik Bag

ಕಳೆದ ಕೆಲವು ವರ್ಷಗಳಿಂದ ತನ್ನ ಜಮೀನಿನಲ್ಲಿ (ಬಲಕ್ಕೆ) ಗಮನಿಸಲಾದ ಬದಲಾವಣೆಗಳನ್ನು ಶಿವ್ ಶಂಕರ್ ವಿವರಿಸುತ್ತಿದ್ದಾರೆ

ಮುಳುಗು ಪ್ರದೇಶದಲ್ಲಿನ ನಿರ್ಮಾಣಗಳ ವಿರುದ್ಧ ರೈತರು ಎಚ್ಚರಿಕೆ ನೀಡುತ್ತಾರೆ. “ನೀರಿನ ಮಟ್ಟವನ್ನು ಕುರಿತಂತೆ ಇವುಗಳು ಮಹತ್ತರ ಪ್ರಭಾವವನ್ನು ಬೀರುತ್ತವೆ. ಪ್ರತಿಯೊಂದು ಕಟ್ಟಡದಲ್ಲೂ ವಾಹನಗಳ ನಿಲುಗಡೆಗೆಂದು ನೆಲಮಾಳಿಗೆಯಲ್ಲಿ ಜಾಗವನ್ನು ಕಲ್ಪಿಸುತ್ತಾರೆ. ಮರಗಳಿಗೆಂದು ಅಲಂಕಾರಿಕ ವೃಕ್ಷಗಳನ್ನು ನೆಡುತ್ತಾರೆ. ಮಾವು, ಸೀಬೆ, ದಾಳಿಂಬೆ, ಪಪ್ಪಾಯಿ ಮುಂತಾದ ಹಣ್ಣಿನ ಮರಗಳನ್ನು ನೆಟ್ಟಲ್ಲಿ, ಅದನ್ನು ಅವರು ತಿನ್ನಲು ಬಳಸಬಹುದಲ್ಲದೆ ಸಂಪಾದನೆಗೂ ದಾರಿಯಾಗುತ್ತದೆ. ಪ್ರಾಣಿ-ಪಕ್ಷಿಗಳಿಗೂ ಆಹಾರವನ್ನು ಒದಗಿಸಿದಂತಾಗುತ್ತದೆ”, ಎನ್ನುತ್ತಾರೆ ಶಿವ್ ಶಂಕರ್.

1993ರಿಂದಲೂ ಯಮುನೆಯನ್ನು ಸ್ವಚ್ಛಗೊಳಿಸಲು 3,100 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆಯೆಂಬುದಾಗಿ ಅಧಿಕೃತ ಅಂಕಿ ಅಂಶಗಳು ತಿಳಿಸುತ್ತವೆ. ಇನ್ನೇನು ಬೇಕು? “ಯಮುನಾ ನದಿ ಇಂದು ಸ್ವಚ್ಛವಾಗಿದೆ ಅಲ್ಲವೇ?” ಎಂದು ಬಲ್ಜೀತ್ ಸಿಂಗ್ ಹೀಯಾಳಿಸುತ್ತಾರೆ.

ದೆಹಲಿಯಲ್ಲಿ ಎಲ್ಲವೂ ತಪ್ಪು ಮಾರ್ಗದಲ್ಲಿ ಘಟಿಸುತ್ತಿವೆ. ನಗರದಲ್ಲಿ ಲಭ್ಯವಿರುವ ಪ್ರತಿಯೊಂದು ಇಂಚನ್ನೂ ನಿರಂತರವಾಗಿ ಕಾಂಕ್ರೀಟ್‍ ಮಯಗೊಳಿಸಲಾಗುತ್ತಿದೆ. ಯುಮುನಾ ನದಿಯ ಮುಳುಗು ಪ್ರದೇಶದಲ್ಲಿನ ನಿರ್ಮಾಣಗಳು ಅನಿಯಂತ್ರಿತವಾಗಿದ್ದು ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಮಾಲಿನ್ಯದಿಂದಾಗಿ ಈ ಬೃಹತ್ ನದಿಯ ಉಸಿರುಕಟ್ಟುತ್ತಿದೆ. ಭೂಬಳಕೆಯಲ್ಲಿ ಭಾರಿ ಬದಲಾವಣೆಗಳಾಗುತ್ತಿವೆ. ನೂತನ ಬೀಜಗಳು, ಪದ್ಧತಿಗಳು ಮತ್ತು ತಂತ್ರಜ್ಞಾನಗಳಿಂದ ಉಂಟಾಗುತ್ತಿರುವ ಪರಿಣಾಮಗಳನ್ನು ಅವುಗಳ ಬಳಕೆದಾರರು ಗಮನಿಸುವುದಿಲ್ಲ. ಪರಿಸರದ ಶಾಖನಿಯಂತ್ರಕದ ವಿನಾಶ, ಅನಿಯಂತ್ರಿತ ಮಾನ್ಸೂನ್‍ ಗಳು, ವಾಯು ಮಾಲಿನ್ಯದ ಅಸಾಧಾರಣ ಮಟ್ಟ ಇವೆಲ್ಲವೂ ಪ್ರಾಣಾಂತಕ ಮಿಶ್ರಣವೇ ಸರಿ.

ಶಂಕರ್ ಮತ್ತು ಆತನ ರೈತ ಜೊತೆಗಾರರು ಈ ಮಿಶ್ರಣಾಂಶಗಳನ್ನು ಗುರುತಿಸಿದ್ದಾರೆ. “ನೀವು ಎಷ್ಟು ರಸ್ತೆಗಳನ್ನು ನಿರ್ಮಿಸುತ್ತೀರಿ? ಕಾಂಕ್ರೀಟ್ ಬಳಕೆಯನ್ನು ನೀವು ಹೆಚ್ಚಿಸುತ್ತಾ ಹೋದಲ್ಲಿ ಭೂಮಿಯು ಹೆಚ್ಚು ಶಾಖವನ್ನು ಹೀರತೊಡಗುತ್ತದೆ. ಪ್ರಕೃತಿಯಲ್ಲಿನ ಪರ್ವತಗಳು ಸಹ ಮಳೆಯು ಸುರಿದಾಗ ಭೂಮಿಯ ಮರುಪೂರಣವನ್ನು ಸಾಧ್ಯವಾಗಿಸುತ್ತವೆ. ಮಾನವ ನಿರ್ಮಿತ ಕಾಂಕ್ರೀಟ್ ಪರ್ವತಗಳು ಭೂಮಿಯ ಉಸಿರಾಟಕ್ಕೆ ಅಥವ ಮರುಪೂರಣಕ್ಕೆ ಅಥವ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಮತ್ತು ಅದರ ಬಳಕೆಗೆ ಆಸ್ಪದ ನೀಡುವುದಿಲ್ಲ. ನೀರೇ ಇಲ್ಲದಿದ್ದಲ್ಲಿ ನೀವು ಆಹಾರವನ್ನು ಬೆಳೆಯುವುದಾದರೂ ಹೇಗೆ?”, ಎಂದು ಅವರು ಪ್ರಶ್ನಿಸುತ್ತಾರೆ.

ಯು.ಎನ್‍.ಡಿ.ಪಿ ಆಶ್ರಯದಲ್ಲಿ ಪರಿಯ ವತಿಯಿಂದ ದೇಶಾದ್ಯಂತ ಪರಿಸರದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ವರದಿಸುವ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಸದರಿ ವಿಷಯವನ್ನು ಕುರಿತಂತೆ ಸಾಮಾನ್ಯ ಜನರ ಅನುಭವ ಮತ್ತು ಹೇಳಿಕೆಗಳನ್ನು ಗ್ರಹಿಸುವ ನಿಟ್ಟಿನಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ.

ಈ ಲೇಖನವನ್ನು ಪುನಃ ಪ್ರಕಟಿಸಲು ಬಯಸಿದಲ್ಲಿ, [email protected] ಗೆ ಬರೆದು, ಅದರ ಪ್ರತಿಯನ್ನು [email protected] ಗೆ ಸಲ್ಲಿಸಿ.

ಅನುವಾದ: ಶೈಲಜ ಜಿ. ಪಿ.

Reporter : Shalini Singh

शालिनी सिंग काउंटरमीडिया ट्रस्टची संस्थापक विश्वस असून ही संस्था पारीचं काम पाहते. शालिनी दिल्लीस्थित पत्रकार असून पर्यावरण, लिंगभाव आणि सांस्कृतिक विषयांवर लेखन करते. २०१७-१८ साली ती हार्वर्ड विद्यापीठाची नेइमन फेलो होती.

यांचे इतर लिखाण शालिनी सिंग
Editor : P. Sainath

पी. साईनाथ पीपल्स अर्काईव्ह ऑफ रुरल इंडिया - पारीचे संस्थापक संपादक आहेत. गेली अनेक दशकं त्यांनी ग्रामीण वार्ताहर म्हणून काम केलं आहे. 'एव्हरीबडी लव्ज अ गुड ड्राउट' (दुष्काळ आवडे सर्वांना) आणि 'द लास्ट हीरोजः फूट सोल्जर्स ऑफ इंडियन फ्रीडम' (अखेरचे शिलेदार: भारतीय स्वातंत्र्यलढ्याचं पायदळ) ही दोन लोकप्रिय पुस्तकं त्यांनी लिहिली आहेत.

यांचे इतर लिखाण साइनाथ पी.
Series Editors : P. Sainath

पी. साईनाथ पीपल्स अर्काईव्ह ऑफ रुरल इंडिया - पारीचे संस्थापक संपादक आहेत. गेली अनेक दशकं त्यांनी ग्रामीण वार्ताहर म्हणून काम केलं आहे. 'एव्हरीबडी लव्ज अ गुड ड्राउट' (दुष्काळ आवडे सर्वांना) आणि 'द लास्ट हीरोजः फूट सोल्जर्स ऑफ इंडियन फ्रीडम' (अखेरचे शिलेदार: भारतीय स्वातंत्र्यलढ्याचं पायदळ) ही दोन लोकप्रिय पुस्तकं त्यांनी लिहिली आहेत.

यांचे इतर लिखाण साइनाथ पी.
Series Editors : Sharmila Joshi

शर्मिला जोशी पारीच्या प्रमुख संपादक आहेत, लेखिका आहेत आणि त्या अधून मधून शिक्षिकेची भूमिकाही निभावतात.

यांचे इतर लिखाण शर्मिला जोशी
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

यांचे इतर लिखाण Shailaja G. P.