ದಾಕ್ ಸದ್ದು ಈ ಅಗರ್ತಲಾವನ್ನು ಆವರಿಸಲಾರಂಭಿಸಿದೆ. ಅಕ್ಟೋಬರ್ 11ರಂದು ದುರ್ಗಾಪೂಜೆ ಆರಂಭಗೊಳ್ಳಲಿದೆ. ಮತ್ತು ಪ್ರತಿ ವರ್ಷವೂ ಹಬ್ಬದ ಸಿದ್ಧತೆಗಳು ವಾರಕ್ಕೂ ಮೊದಲೇ ಪ್ರಾರಂಭಗೊಳ್ಳುತ್ತವೆ. ಈಗಾಗಲೇ ಚಪ್ಪರಗಳಿಗಾಗಿ ಕಂಬಗಳನ್ನು ನೆಡಲಾಗಿದೆ, ವಿಗ್ರಹ ತಯಾರಕರು ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ, ಕುಟುಂಬಗಳು ಹೊಸ ಬಟ್ಟೆಗಳನ್ನು ಖರೀದಿಸುತ್ತಿವೆ.
ದಾಕ್ ಎನ್ನುವುದು ಡೊಳ್ಳಿನ ಮಾದರಿಯ ವಾದ್ಯ. ಅದನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಕೋಲಿನಿಂದ ಬಾರಿಸಲಾಗುತ್ತದೆ. ಅಥವಾ ಯಾವುದಾದರೂ ಗಟ್ಟಿಯಾದ ಸ್ಥಳದ ಮೇಲಿಟ್ಟು ಬಾರಿಸಲಾಗುತ್ತದೆ. ಈ ವಾದ್ಯವು ಇಂತಹ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ.
ಈ ದಾಕ್ ಬಾರಿಸುವ ಕೆಲಸ ಪೂರ್ಣಾವಧಿಯದ್ದಲ್ಲ. ಪ್ರತಿ ವರ್ಷ ಪೂಜೆಯ ಐದು ದಿನಗಳ ಕಾಲ ಈ ಕೆಲಸವಿರುತ್ತದೆ. ಲಕ್ಷ್ಮಿ ಪೂಜೆಯ ದಿನದ ದಾಕ್‌ನ ಅಂತಿಮ ಸದ್ದು ಕೇಳುತ್ತದೆ. ಈ ವರ್ಷ ಇದು ಅಕ್ಟೋಬರ್ 20ಕ್ಕೆ ಮುಗಿಯಲಿದೆ. ಕೆಲವೊಮ್ಮೆ ದಾಕಿಗಳನ್ನು ದೀಪಾವಳಿಯಲ್ಲೂ ಬಾರಿಸಲು ಕರೆಸುತ್ತಾರೆ. ಆದರೆ ದುರ್ಗಾ ಪೂಜೆಯ ಸಮಯದಲ್ಲಿ ದಾಕ್ ಕಲಾವಿದರಿಗೆ ಅಗರ್ತಲಾ ಮತ್ತು ತ್ರಿಪುರಾ ರಾಜ್ಯದ ಇತರ ಭಾಗಗಳಲ್ಲಿ ಹೆಚ್ಚಿನ ಬೇಡಿಕೆಯಿರುತ್ತದೆ.
ದಾಕಿ ಕಲಾವಿದರನ್ನು ಪೆಂಡಾಲ್ ಸಮಿತಿಗಳು ಕರೆಸುತ್ತವೆ. ಕೆಲವೊಮ್ಮೆ ಕುಟುಂಬಗಳು ಕೂಡಾ ಕರೆಸುತ್ತವೆ. ಕೆಲವೊಮ್ಮೆ ಅವರನ್ನು ನೇಮಿಸಿಕೊಳ್ಳುವ ಮೊದಲು ಪ್ರದರ್ಶನ ನೀಡುವಂತೆ ಕೇಳಲಾಗುತ್ತದೆ. ಅವರಲ್ಲಿ ಬಹುತೇಕರು ಕಲಾ ನೈಪುಣ್ಯವನ್ನು ಹೊಂದಿರುತ್ತಾರೆ ಮತ್ತು ಅವರು ಇದನ್ನು ತಮ್ಮ ಕುಟುಂಬದ ಹಿರಿಯರಿಂದಲೇ ಕಲಿತಿರುತ್ತಾರೆ. “ನಾನು ನನ್ನ ಸೋದರ ಸಂಬಂಧಿಗಳ ಜೊತೆ ತಂಡವಾಗಿ ಹೋಗುತ್ತಿದ್ದೆ.” ಎನ್ನುತ್ತಾರೆ 45 ವರ್ಷದ ರಿಶಿ ದಾಸ್. “ಮೊದಲಿಗೆ ನಾನು ಜಾಗಟೆ ಬಾರಿಸುತ್ತಿದ್ದೆ ನಂತರ ಧೋಲ್, ಹಾಗೂ ಅದರ ನಂತರ ದಾಕ್ ಬಾರಿಸಲು ಆರಂಭಿಸಿದೆ.” (ಅವರು ಮತ್ತು ಇನ್ನೊಬ್ಬ ರಿಶಿದಾಸ್,ರೋಹಿದಾಸ್, ರವಿದಾಸ್ ಕುಟುಂಬಗಳು ಮೂಚಿ ಸಮುದಾಯಕ್ಕೆ ಸೇರಿವೆ. ಇವರನ್ನು ತ್ರಿಪುರಾದಲ್ಲಿ ಪರಿಶಿಷ್ಟ ಜಾತಿಯೆಂದು ಪಟ್ಟಿ ಮಾಡಲಾಗಿದೆ.)
ಅಗರ್ತಲಾದಲ್ಲಿನ ಅನೇಕ ದಾಕ್ ಕಲಾವಿದರಂತೆ ಇಂದ್ರಜಿತ್ ಕೂಡಾ ವರ್ಷದ ಉಳಿದ ಸಮಯದಲ್ಲಿ ರಿಕ್ಷಾ ಓಡಿಸುತ್ತಾರೆ. ಕೆಲವೊಮ್ಮೆ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ನುಡಿಸುತ್ತಾರೆ, ಸ್ಥಳೀಯವಾಗಿ ಇದನ್ನು 'ಬ್ಯಾಂಡ್-ಪಾರ್ಟಿ' ಎಂದು ಕರೆಯಲಾಗುತ್ತದೆ. ದಾಕಿ ಕಲಾವಿದರು ಪ್ರತಿದಿನ ಎಲೆಕ್ಟ್ರಿಷಿಯನ್ ಅಥವಾ ಪ್ಲಂಬರ್ ಆಗಿ ಕೆಲಸ ಮಾಡುತ್ತಾರೆ, ಆದರೆ ಕೆಲವರು ತರಕಾರಿಗಳನ್ನು ಮಾರುತ್ತಾರೆ ಮತ್ತು ಇನ್ನೂ ಕೆಲವರು ಹತ್ತಿರದ ಹಳ್ಳಿಗಳಲ್ಲಿ ಕೃಷಿ ಮಾಡುತ್ತಾರೆ. ಸಮಾರಂಭಗಳು ಅಥವಾ ಪ್ರದರ್ಶನಗಳಿದ್ದಾಗ ಅಗರ್ತಲಾಕ್ಕೆ ಬರುತ್ತಾರೆ.




















