ಸುನೀತಾ ಜಾಧವ್ ಓಸ್ಮಾನಾಬಾದ್ ನಗರದಿಂದ ಸುಮಾರು 50 ಕಿಲೋಮೀಟರು ದೂರದಲ್ಲಿರುವ ಜಲ್ಕುತ್ ಗ್ರಾಮಕ್ಕೆ ಸೇರಿದವಳು. ಅವಳು ಬ್ಯಾಂಕಿಗೆ ಬರುವ ಸಲುವಾಗಿ ತನ್ನ ಒಂದು ದಿನದ ದಿನಕೂಲಿಯಾದ ಸುಮಾರು 200 ರೂಪಾಯಿಯನ್ನು ಸಹ ಕಳೆದುಕೊಂಡಿದ್ದಾಳೆ. ಕಳೆದ ಆರು ತಿಂಗಳುಗಳಲ್ಲಿ ಆಕೆ ಓಡಿಸಿಸಿ ಬ್ಯಾಂಕಿಗೆ ಎಷ್ಟೋ ಸಾರಿ ಬಂದು ಹೋಗಿದ್ದಾಳೆ. “ಇಷ್ಟು ದುಡ್ಡು ಕೂಡಿಸಲು ನಾನು ತುಂಬಾ ಕಷ್ಟ ಪಟ್ಟಿದ್ದೇನೆ” ಎಂದು ತನ್ನ ಚೀಲದಿಂದ ಲಗ್ನ ಪತ್ರಿಕೆಯನ್ನು ಹೊರತೆಗೆದು ಅದನ್ನು ತೋರಿಸುತ್ತಾ ಹೇಳುತ್ತಾಳೆ ಸುನೀತಾ. ಇಟ್ಟಿಗೆ ತಯಾರಿಸುವ ಚಿಕ್ಕ ಕಾರ್ಖಾನೆಯಲ್ಲಿ ಈಕೆ ಕೂಲಿ ಕೆಲಸ ಮಾಡುತ್ತಾಳೆ. ಅವಳ ಜೊತೆಯಲ್ಲೇ ಇರುವ ಆಕೆಯ ತಮ್ಮ ಮೊದಲು ಜಲ್ಕುತ್ ನ ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ, ಈಗ ಕೆಲಸ ಕಳೆದುಕೊಂಡು ಮನೆಯಲ್ಲಿದ್ದಾನೆ. “ನಾನೇ ಬೆವರು ಸುರಿಸಿ ದುಡಿದ ಹಣಕ್ಕಾಗಿ ಭಿಕ್ಷೆ ಬೇಡಲು ಬರುವವರಂತೆ ಇಲ್ಲಿಗೆ ಬರುವುದೆಂದರೆ ನನ್ನಿಡೀ ದಿನದ ಕೂಲಿಯನ್ನು ಕಳೆದುಕೊಂಡಂತೆ. ಹೀಗೆ ಬಂದಾಗಲೆಲ್ಲಾ ಇಲ್ಲಿನ ಬ್ರಾಂಚ್ ಆಫೀಸ್ ನವರು ಹೆಡ್ ಆಫೀಸ್ ಗೆ ಹೋಗು ಅನ್ನುತ್ತಾರೆ, ಅಲ್ಲಿಯವರು ಬ್ರಾಂಚ್ ಆಫೀಸ್ ನಲ್ಲಿ ಹೋಗಿ ಕೇಳಿ ಅಂತ ಹೇಳುತ್ತಾರೆ”, ಸುನೀತಾ ತಮ್ಮ ಮುಗಿಯದ ವ್ಯಥೆಯನ್ನು ಹೇಳುತ್ತಾ ಹೋಗುತ್ತಾರೆ.
ಅವರೆಲ್ಲರೂ ಹೇಳುವ ಮಾತನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ಚಂದಕ್ ಸದ್ಯ ಬ್ಯಾಂಕಿನಲ್ಲಿ ಹಣ ಇಲ್ಲ ಎಂದು ವಿನಯದಿಂದ ಹೇಳುತ್ತಾರೆ. ಅವರ ಮಾತಿನಲ್ಲೂ ಸತ್ಯಾಂಶವಿದೆ. ಓಡಿಸಿಸಿಯ ಪರಿಸ್ಥಿತಿ ಹದಗೆಟ್ಟು ಹೋಗಿದೆ ಎಂದರೂ ಕಮ್ಮಿಯೇ. ಬ್ಯಾಂಕು ಒಂದು ಕಡೆ ಸುಮಾರು 400 ಕೋಟಿ ರೂಪಾಯಿಗಳಷ್ಟು ಸ್ಥಿರ ಠೇವಣಿಯನ್ನು ಪಾವತಿಸಲು ವಿಫಲವಾಗುತ್ತಿದ್ದರೆ ಅದೇ ಇನ್ನೊಂದು ಕಡೆ 500 ಕೋಟಿ ರೂಪಾಯಿಯ ವ್ಯವಸಾಯೇತರ ಸಾಲವನ್ನು ಬರಬೇಕಾದವರಿಂದ ವಸೂಲಿ ಮಾಡಲಾಗದೆ ಹೆಣಗಾಡುತ್ತಿದೆ. ಇದರಲ್ಲಿ ತೆರಣಾ ಮತ್ತು ತುಳಜಾಭವಾನಿಯಲ್ಲಿನ ಎರಡು ಸಕ್ಕರೆ ಕಾರ್ಖಾನೆಗಳ ಸಾಲವೇ 382 ಕೋಟಿಗಳಷ್ಟಿದೆ.
ಅಷ್ಟಕ್ಕೂ ಓಡಿಸಿಸಿ ಬ್ಯಾಂಕ್ ರೈತರಿಗೆ ನೀಡಿದ ಸಾಲವು (ಇದನ್ನು 467 ವಿವಿಧ ಕಾರ್ಯಕಾರಿ ಸೇವಾ ಸೊಸೈಟಿಗಳ ಮೂಲಕ ನೀಡಲಾಗಿದೆ) ಒಂದು ದೊಡ್ಡ ಮಟ್ಟದ ಹಗರಣದತ್ತ ಬೊಟ್ಟು ಮಾಡುತ್ತಿದೆ. ರೈತರ ಸಾಲಕ್ಕಿಂತಲೂ 200 ಕೋಟಿ ರೂಪಾಯಿ ಅಧಿಕ ಮೊತ್ತವನ್ನು ಈ ಸೊಸೈಟಿಗಳು ಬ್ಯಾಂಕಿಗೆ ಪಾವತಿಸಬೇಕು. ಈ ದುಡ್ಡೆಲ್ಲ ಎಲ್ಲಿಗೆ ಹೋಯಿತು ಅನ್ನುವುದು ಅವರವರ ಊಹೆಗೆ ಬಿಟ್ಟದ್ದು.
ಈ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬಗೆ ಹೇಗೆ ಅನ್ನುವುದನ್ನು ಯೋಚಿಸುವ ಬದಲು, ಓಡಿಸಿಸಿ ಬ್ಯಾಂಕು ಒಟ್ಟು 180 ಕೋಟಿ ಪಾವತಿಸಬೇಕಾಗಿರುವ ಸುಮಾರು 20,000 ರೈತರನ್ನು ಬೆದರಿಸಿ, ಸಾರ್ವಜನಿಕವಾಗಿ ಅವಮಾನಿಸಿ ನವೆಂಬರ್ ತಿಂಗಳ ಮಧ್ಯದಲ್ಲಿ ಅವರವರ ಮನೆಗಳಿಗೆ ನೋಟೀಸುಗಳನ್ನು ಕಳಿಸಿದೆ. ಮುಂದೆ ಇದು ಮಾಧ್ಯಮಗಳಲ್ಲಿ ಸುದ್ದಿಯಾದ ನಂತರ ಬ್ಯಾಂಕ್ ತನ್ನ ಬೆದರಿಕೆಯನ್ನು ಸದ್ದಿಲ್ಲದೆ ಹಿಂತೆಗೆದುಕೊಂಡಿತು. “ವ್ಯವಸಾಯೇತರ ಸಾಲವೆಲ್ಲಾ ಪ್ರಭಾವಿ (ರಾಜಕೀಯದ ಸಂಪರ್ಕವಿರುವ) ವ್ಯಕ್ತಿಗಳಿಗೆ ಸೇರಿದ್ದು. ''ಇಂಥವರ ಬಳಿ ಸಾಲದ ಬಗ್ಗೆ ನೆನಪಿಸಲು ಹೋದಾಗ `ಇಲ್ಲೇ ಅಕ್ಕಪಕ್ಕದಲ್ಲಿದ್ದೆವು. ಹಾಗೇ ಮಾತಾಡಿಹೋಗೋಣ ಅನ್ನಿಸಿತು' ಎಂದು ನೆಪ ಹೇಳುತ್ತಾ ಸಾಲದ ವಿಷಯವನ್ನು ಮಾತಿನ ಮಧ್ಯದಲ್ಲಿ ಹೇಗೋ ತೂರಿಸಿಬಿಡುತ್ತೇವೆ'', ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ಹೇಳುತ್ತಾರೆ.