ದಿನಕರ್ ಐವಳೆಯವರ ಪಾಲಿಗೆ ಇದು ನೀರವ ವರ್ಷವಾಗಿತ್ತು, ಅವರ ಕೊಳಲುಗಳು ಯಾವುದೇ ಮಾಧುರ್ಯವನ್ನು ಹುಟ್ಟಿಸದೆ ತಿಂಗಳುಗಳನ್ನು ಕಳೆದಿವೆ. ಇಟ್ಟಿಗೆ ಮತ್ತು ಮಣ್ಣಿನ ಮನೆಯೊಳಗಿನ ತನ್ನ ಕಾರ್ಯಾಗಾರದಲ್ಲಿ ಕುಳಿತು ಅವರು ಹೇಳುತ್ತಾರೆ, “ಈ ವಾದ್ಯವನ್ನು ನೇರವಾಗಿ ಬಾಯಿಯಿಂದ ನುಡಿಸಲಾಗುತ್ತದೆ. ಕರೋನಾ ಅವಧಿಯಲ್ಲಿ ಈ ಸಂಪರ್ಕ ಅಪಾಯಕಾರಿ.”
ಅವರ ಪಕ್ಕದಲ್ಲಿ ಹಳೆಯ ಮರದ ಪೆಟ್ಟಿಗೆಯಿತ್ತು, ಅದರಲ್ಲಿ ಕೆಲಸದ ಸಲಕರಣೆಗಳು ತುಂಬಿದ್ದವು. ಒಂದು ಮೂಲೆಯಲ್ಲಿ ಅಚ್ಚುಕಟ್ಟಾಗಿ ಇಟ್ಟಿರುವ ಅವುಗಳನ್ನು ಒಂದು ವರ್ಷದ ಹಿಂದಿನಂತೆ ಬಳಸಿದ್ದರೆ, ಹಸಿ ಹಳದಿ ಬಿದಿರಿನ ಕಡ್ಡಿಗಳಿಂದ ಕೊಳಲು ತಯಾರಿಸಲು ಒಂದು ಗಂಟೆಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಆದರೆ, 74 ವರ್ಷದ ದಿನಕರ್ ನಮ್ಮ ಸಂಭಾಷಣೆಯ ಸಮಯದಲ್ಲಿ ನಿರ್ಜೀವ ಬಿದಿರಿನತ್ತ ನೋಡುತ್ತಾರೆ. ಮಾರ್ಚ್ 2020ರಲ್ಲಿ ಲಾಕ್ಡೌನ್ ಪ್ರಾರಂಭವಾದಾಗಿನಿಂದ ಅವರ ಕೆಲಸವು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಅವರು ತಮ್ಮ ಬದುಕಿನ ಸುಮಾರು 150,000 ಗಂಟೆಗಳನ್ನು ಕರಕುಶಲತೆಗೆ ಮೀಸಲಿಟ್ಟರು ಮತ್ತು ಐದು ದಶಕಗಳಿಗಿಂತಲೂ ಹೆಚ್ಚು ಕಾಲ ದಿನಕ್ಕೆ 10 ಗಂಟೆಗಳ ಕಾಲ ಕೆಲಸ ಮಾಡಿದರು, ಎಂದರೆ ವರ್ಷಕ್ಕೆ 250ರಿಂದ 270 ದಿನಗಳು.
ಅವರು 19ನೇ ವಯಸ್ಸಿನಲ್ಲಿ ಕೊಳಲು ಮಾಡಲು ಪ್ರಾರಂಭಿಸಿದರು, ಅಂದಿನಿಂದ ಐವಳೆ ಇಂತಹ ದೀರ್ಘ ವಿರಾಮವನ್ನು ತೆಗೆದುಕೊಂಡಿರಲಿಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕದ ವಿವಿಧ ಜಾತ್ರೆಗಳಲ್ಲಿ ಕೊಳಲುಗಳನ್ನು ಮಾರಾಟ ಮಾಡಲು ಅವರು ಸಾಮಾನ್ಯವಾಗಿ ಹಿಂದಿನ ವರ್ಷಗಳಲ್ಲಿ ಹೋದಂತೆ ಈ ವರ್ಷ ನೂರಾರು ಕಿಲೋಮೀಟರ್ಗಳನ್ನು ಪ್ರಯಾಣಿಸಲಿಲ್ಲ. ಜಾತ್ರೆಯಂತಹ ದೊಡ್ಡ ಸಮಾರಂಭಗಳಿಗೆ ಇನ್ನೂ ಅವಕಾಶ ನೀಡಿಲ್ಲ.












