“ಲಾಕ್‌ಡೌನ್ ನಮ್ಮನ್ನು ವಿನಾಶಕ್ಕೀಡುಮಾಡಿತು. ಮಾರ್ಚ್ ತಿಂಗಳಲ್ಲಿ ನನ್ನ ಅಂಗಡಿಗೆ ಬಂದಿದ್ದ ಗಿರಾಕಿಯೇ ಕೊನೆಯವರು. ಅಲ್ಲಿಂದಾಚೆಗೆ ಯಾವ ಗಿರಾಕಿಯೂ ಇಲ್ಲ.” ಎಂದರು ಅಬ್ದುಲ್ ಮಜೀದ್ ಭಟ್.
ಜೂನ್ ತಿಂಗಳಿನಲ್ಲಿ ಲಾಕ್‌ಡೌನ್ ತೆರವುಗೊಳ್ಳಲು ಪ್ರಾರಂಭಿಸಿದ್ದಾಗ್ಯೂ, ಶ್ರೀನಗರದ ದಾಲ್ ಸರೋವರದಲ್ಲಿ ಚರ್ಮದ ಉತ್ಪನ್ನಗಳು, ಸ್ಥಳೀಯ ಕರಕುಶಲ ವಸ್ತುಗಳನ್ನು ಮಾರುವ ಭಟ್ ಅವರ ಮೂರು ಅಂಗಡಿಗಳಿಗೆ ಯಾವುದೇ ಗಿರಾಕಿಯೂ ಭೇಟಿ ನೀಡಿರುವುದಿಲ್ಲ. 2019ರ ಆಗಸ್ಟ್ 5ರಂದು 370ನೇ ವಿಧಿಯನ್ನು ಕಾಶ್ಮೀರದಲ್ಲಿ ರದ್ದುಪಡಿಸಿದಾಗ ಪ್ರಾರಂಭಗೊಂಡ ಈ ಕಠಿಣತಮ ದುರ್ಭಿಕ್ಷವು, ಒಂದು ವರ್ಷದಿಂದಲೂ ಚಾಲ್ತಿಯಲ್ಲಿದೆ.
ಭಟ್‌ರಂತಹ ಅನೇಕರು ತಮ್ಮ ಸಂಪಾದನೆಗೆ ನೆಚ್ಚಿಕೊಂಡಿರುವ ಪ್ರವಾಸೋದ್ಯಮವು ಈ ಎರಡು ವಿದ್ಯಮಾನಗಳ ಪರಿಣಾಮದಿಂದಾಗಿ ನೆಲಕಚ್ಚಿದೆ.
ದಾಲ್ ಸರೋವರದ ಬಟಪೊರ ಕಲನ್ ಪ್ರದೇಶದ ನಿವಾಸಿಯಾದ 62 ವರ್ಷದ ಗೌರವಾನ್ವಿತ ವಯೋವೃದ್ಧರಾದ ಭಟ್, “6-7 ತಿಂಗಳ ಬಂದ್‌ನ ತರುವಾಯ ಪ್ರವಾಸದ ಋತುವು ಇನ್ನೇನು ಆರಂಭಗೊಂಡಿತೆನ್ನುವಾಗ, ಈ ಕೊರೊನಾ ಲಾಕ್‌ಡೌನ್ ಪ್ರಾರಂಭವಾಯಿತು” ಎನ್ನುತ್ತಾರೆ. ಇವರು, ಲೇಕ್‌ಸೈಡ್ ಟೂರಿಸ್ಟ್ ಅಸೋಸಿಯೇಷನ್ ಅಧ್ಯಕ್ಷರೂ ಹೌದು. ಇವರ ಅಂದಾಜಿನಂತೆ ಇದರಲ್ಲಿ ಸುಮಾರು 70 ಸದಸ್ಯರಿದ್ದಾರೆ.
ಹಳದಿ ಟ್ಯಾಕ್ಸಿ ದೋಣಿಗಳನ್ನು ಚಲಾಯಿಸುವ ಶಿಕಾರವಾಲಾಗಳು, ಬೀದಿ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರಾದಿಯಾಗಿ, ಸರೋವರದ ಪ್ರವಾಸಿ ಅರ್ಥವ್ಯವಸ್ಥೆಯನ್ನು ಅವಲಂಬಿಸಿದ ಅನೇಕರು ಇವೇ ಮಾತುಗಳನ್ನಾಡುತ್ತಾರೆ. ಇವರುಗಳ ಬಳಿ, ಕಳೆದ 12 ತಿಂಗಳಿನಿಂದಲೂ, ಪ್ರವಾಸಿ ಕಿರುಹೊತ್ತಿಗೆಯಲ್ಲಿನ ಸರೋವರದ ಮನೋಹರ ಛಾಯಾಚಿತ್ರಗಳ ಹೊರತಾಗಿ ಮತ್ತೇನೂ ಇಲ್ಲ. ( ಶ್ರೀನಗರದ ಶಿಕಾರರು:ನಿಂತ ನೀರಿನಾಳದಡಿ ನಷ್ಟದ ಹರಿವು )
ಕೊರೊನಾ ಲಾಕ್‌ಡೌನ್ ಪ್ರಾರಂಭವಾಗುವುದಕ್ಕೂ ಮೊದಲು ಮನೆಯಿಂದ ಚಿಕ್ಕ ಉದ್ಯಮವನ್ನು ಪ್ರಾರಂಭಿಸಿದ 27 ವರ್ಷದ ಹಫ್ಸ ಭಟ್ ಕೂಡ ಇವರಲ್ಲೊಬ್ಬರು. ಜಮ್ಮು ಮತ್ತು ಕಾಶ್ಮೀರದ ಉದ್ಯಮಶೀಲತಾ ವಿಕಾಸ ಕೇಂದ್ರದಲ್ಲಿನ 24 ದಿನಗಳ ತರಬೇತಿಯ ನಂತರ ಶ್ರೀನಗರದ ಶಾಲಾ ಶಿಕ್ಷಕಿಯೂ ಆದ ಹಫ್ಸ, ಸಂಸ್ಥೆಯಿಂದ ಕಡಿಮೆ ಬಡ್ಡಿ ದರದಲ್ಲಿ 4 ಲಕ್ಷ ರೂ.ಗಳ ಸಾಲವನ್ನು ಪಡೆದರು. “ನಾನು ಉಡುಪು ಹಾಗೂ ಬಟ್ಟೆಗಳ ಸರಕನ್ನು ಕೊಂಡು ತಂದೆ. ಲಾಕ್‌ಡೌನ್ ಘೋಷಣೆಯಾದಾಗ, ಸುಮಾರು ಶೇ. 10-20ರಷ್ಟು ಸರಕನ್ನು ಮಾತ್ರವೇ ಮಾರಾಟ ಮಾಡಿದ್ದೆ. ಈಗ ನಾನು ಕಂತುಗಳನ್ನು ಕಟ್ಟಲು ಹೆಣಗಾಡುತ್ತಿದ್ದೇನೆ” ಎಂದರಾಕೆ.
ದಾಲ್ ಸರೋವರದ 18 ಚದರ ಕಿ.ಮೀ. ವ್ಯಾಪ್ತಿಯಲ್ಲಿನ ಅನೇಕ ದ್ವೀಪಗಳಲ್ಲಿ ಒಂದಾದ, ನೆಹರು ಪಾರ್ಕ್‌ನಲ್ಲಿ 70 ವರ್ಷದ ಅಬ್ದುಲ್ ರಜಾ಼ಕ್ ದರ್ ವಾಸವಾಗಿದ್ದಾರೆ. ಶ್ರೀನಗರದ ಸಾಲುಮರಗಳುಳ್ಳ ವಿಶಾಲ ಬೀದಿಯ ಘಾಟ್‌ವೊಂದರಲ್ಲಿ ಇವರು ಶಿಕಾರ ಚಲಾಯಿಸುತ್ತಾರೆ. “ಇತ್ನಿ ಖರಾಬ್ ಹಾಲತ್ ನಹಿ ದೇಖಿ ಆಜ್ ತಕ್ (ಇಷ್ಟು ಕೆಟ್ಟ ಕಾಲವನ್ನು ನಾನೆಂದೂ ನೋಡಿರಲಿಲ್ಲ)” ಎಂದರವರು.
“ಪ್ರವಾಸೋದ್ಯಮದಲ್ಲಿ ಲಭ್ಯವಿದ್ದ ಎಲ್ಲವನ್ನೂ ಕೊರೊನಾ ಲಾಕ್‌ಡೌನ್ ಸರ್ವನಾಶಗೊಳಿಸಿತು. ನಾವು ಹಿಮ್ಮುಖವಾಗಿ ಚಲಿಸುತ್ತಿದ್ದೇವೆ. ನಮ್ಮ ಸ್ಥಿತಿ ಹಿಂದಿನ ವರ್ಷಕ್ಕಿಂತಲೂ ಹೀನಾಯವಾಗಿದೆ. ಈ ಶಿಕಾರವನ್ನೇ ಅವಲಂಬಿಸಿರುವ ನಾಲ್ಕು ಜನರು ನಮ್ಮ ಪರಿವಾರದಲ್ಲಿದ್ದಾರೆ. ನಾವು ಅಧಃಪತನಕ್ಕೀಡಾಗಿದ್ದೇವೆ. ಒಂದು ಬಾರಿಗೆ ತಿನ್ನುತ್ತಿದ್ದುದನ್ನು ಮೂರು ಬಾರಿ ತಿನ್ನುತ್ತಿದ್ದೇವೆ. ಶಿಕಾರವಾಲಾ ಏನನ್ನಾದರೂ ತಿನ್ನದಿದ್ದಲ್ಲಿ, ಶಿಕಾರ ಓಡುವುದಾದರೂ ಹೇಗೆ?” ಎನ್ನುತ್ತಾರವರು.
ಇವರ ಪಕ್ಕದಲ್ಲಿ ಕುಳಿತಿದ್ದ ನೆಹರು ಪಾರ್ಕ್‌ನಲ್ಲಿನ ಅಬಿ ಕರಪೊರ ಮೊಹಲ್ಲಾದ 60 ವರ್ಷ ವಯಸ್ಸಿನ ವಲಿ ಮೊಹಮ್ಮದ್ ಭಟ್, “ಕಳೆದ ಒಂದು ವರ್ಷವು ನಮ್ಮೆಲ್ಲರಿಗೂ ಬಹಳ ತ್ರಾಸದಾಯಕವಾಗಿತ್ತು. 370ನೇ ವಿಧಿಯನ್ನು ರದ್ದುಗೊಳಿಸುವ ಮೊದಲು ಸೂಚನೆಯನ್ನಿತ್ತ ಅವರು, ಪ್ರವಾಸಿಗರನ್ನು ಹೊರಗೆ ಕಳಿಸಿದರು. ಎಲ್ಲವನ್ನೂ ಬಂದ್ ಮಾಡಲಾಯಿತು. ನಂತರ ಕೊರೊನಾ ಲಾಕ್‌ಡೌನ್ ಜಾರಿಯಾಗಿ ನಮ್ಮನ್ನು ಹಾಳುಗೆಡವಿತು“ ಎಂದರು. ಭಟ್ ಅವರು, All J&K Taxi Shikara Owners Association ಅಧ್ಯಕ್ಷರಾಗಿದ್ದಾರೆ. ಈ ಸಂಘವು, ದಾಲ್ ಮತ್ತು ನೈಜೀನ್ ಸರೋವರದ 35 ದೊಡ್ಡ ಹಾಗೂ ಚಿಕ್ಕ ಘಾಟ್‌ಗಳನ್ನೊಳಗೊಂಡಿದ್ದು, ಇದರಲ್ಲಿ, 4,000 ನೋಂದಾಯಿತ ಶಿಕಾರವಾಲಾಗಳಿದ್ದಾರೆ.
ಒಟ್ಟಾರೆಯಾಗಿ ಅವರಿಗೆ ಕೋಟಿಗಟ್ಟಲೆ ಹಣವು ನಷ್ಟವಾಗಿದೆಯೆಂಬುದಾಗಿ ಅವರು ಅಂದಾಜಿಸುತ್ತಾರೆ. ಅಧಿಕ ಆದಾಯವನ್ನು ಗಳಿಸುವ ಋತುವಿನಲ್ಲಿ, ಇವರ ಸಂಘದ ಪ್ರತಿ ಸದಸ್ಯನೂ ದಿನಂಪ್ರತಿ ಕನಿಷ್ಟ 1,500-2,000 ರೂ.ಗಳನ್ನು ಗಳಿಸುತ್ತಾನೆ. “ಒಬ್ಬ ಶಿಕಾರವಾಲಾ ಪ್ರವಾಸಿ ಋತುವಿನ ಕೇವಲ ನಾಲ್ಕು ತಿಂಗಳಿನಲ್ಲಿ (ಏಪ್ರಿಲ್-ಮೇ ತಿಂಗಳಿನಿಂದ ಆಗಸ್ಟ್-ಸೆಪ್ಟೆಂಬರ್‌ವರೆಗೆ) ಒಂದು ವರ್ಷದ ಖರ್ಚನ್ನು ನಿಭಾಯಿಸುವಷ್ಟು ಸಂಪಾದಿಸುತ್ತಾನೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಇದೆಲ್ಲವನ್ನೂ ಆಪೋಶನ ತೆಗೆದುಕೊಂಡಿದೆ. ಮದುವೆ ಅಥವಾ ಇನ್ನಿತರ ವೆಚ್ಚಗಳೆಲ್ಲವೂ ಪ್ರವಾಸದ ಋತುವಿನಲ್ಲಿ ಗಳಿಸಿದ ಆದಾಯವನ್ನು ಅವಲಂಬಿಸಿದ್ದವು.”
ಈ ದುರ್ಭಿಕ್ಷದ ಮಾಸಗಳನ್ನು ನಿಭಾಯಿಸಲು, ಅಬ್ದುಲ್ ರಜಾ಼ಕ್ ಅವರ 40 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಕೂಲಿಯ ಕೆಲಸದಲ್ಲಿ ತೊಡಗಿದ್ದು, ಕೆಲವು ಶಿಕಾರವಾಲಾಗಳ ಪರಿವಾರದವರು ಸಹ ಕೂಲಿಗಾಗಿ ದುಡಿಯತೊಡಗಿದ್ದಾರೆ. “ಅವರು ಶಿಕಾರವಾಲಾಗಳ ಕೆಲಸವನ್ನು ಮಾಡುತ್ತಿದ್ದರು. ಆದರೆ, ಪರಿಸ್ಥಿತಿಯನ್ನು ಗಮನಿಸಿದ ನಾನು ಅವರಿಗೆ ಕಳೆ ತೆಗೆಯುವ ಯೋಜನೆಗೆ ಸೇರುವಂತೆ ತಿಳಿಸಿದೆ” ಎಂಬುದಾಗಿ ದರ್ ಅವರು ಮಾಹಿತಿಯಿತ್ತರು.
ಜಮ್ಮು ಮತ್ತು ಕಾಶ್ಮೀರದ ಸರೋವರಗಳು ಮತ್ತು ಜಲಮಾರ್ಗಗಳ ಪ್ರಾಧಿಕಾರದಿಂದ ಕೈಗೊಳ್ಳಲಾಗುವ ಕೆಲಸಗಳನ್ನು ಅವರು ಉಲ್ಲೇಖಿಸುತ್ತಿದ್ದರು. ಕಳೆ ತೆಗೆಯುವ ಕೆಲಸವು ಋತುಕಾಲಿಕವಾಗಿ ಲಭ್ಯವಿರುವಂಥದ್ದು. ಶಿಕಾರಗಳು ಯಥಾಕ್ರಮದಲ್ಲಿ ಸರೋವರದಲ್ಲಿ ಚಲಿಸದಿದ್ದಲ್ಲಿ, ಕಳೆಯು ಬೆಳೆಯುತ್ತದೆ. ಕಳೆ ತೆಗೆಯಲು ಯಂತ್ರಗಳನ್ನೂ ಬಳಸಲಾಗುತ್ತದಲ್ಲದೆ, ಸ್ಥಳೀಯ ಗುತ್ತಿಗೆದಾರರ ಮೂಲಕ ಕೆಲವೊಮ್ಮೆ ಕೆಲಸಗಾರರನ್ನು ನೇಮಿಸಿಕೊಳ್ಳಲಾಗುತ್ತದೆ.
ದಾಲ್ ಸರೋವರದ ನೆಹರು ಪಾರ್ಕ್‌ನ 32 ವರ್ಷದ ಶಬ್ಬೀರ್ ಅಹ್ಮದ್ ಸಹ ಜುಲೈ ತಿಂಗಳ ಮಧ್ಯಭಾಗದಿಂದ ಈ ಕೆಲಸದಲ್ಲಿ ನಿರತರಾಗಿದ್ದಾರೆ. ನೆರೆಯ ಲಡಾಕ್‌ನಲ್ಲಿ ಇವರು ಬೇಸಿಗೆಯ ನಾಲ್ಕು ತಿಂಗಳಿನಲ್ಲಿ ಶಾಲುಗಳು ಮತ್ತು ಇತರೆ ಕಾಶ್ಮೀರಿ ಕರಕುಶಲ ವಸ್ತುಗಳನ್ನು ಮಾರುವ ಅಂಗಡಿಯನ್ನು ಹೊಂದಿದ್ದು, ಮಾಹೆಯಾನ 30,000 ರೂ.ಗಳನ್ನು ಗಳಿಸುತ್ತಿದ್ದರು. ಚಳಿಗಾಲದಲ್ಲಿ ಇದೇ ವಸ್ತುಗಳ ಮಾರಾಟಕ್ಕೆಂದು ಗೋವ ಹಾಗೂ ಕೇರಳಕ್ಕೆ ತೆರಳುತ್ತಿದ್ದರು. ಮಾರ್ಚ್ 22ರಂದು ಲಾಕ್‌ಡೌನ್ ಘೋಷಣೆಯಾದಾಗ, ಇವರು ಮನೆಗೆ ವಾಪಸ್ಸಾಗಬೇಕಾಯಿತು. ತಿಂಗಳುಗಟ್ಟಲೆ ಯಾವುದೇ ಕೆಲಸವಿಲ್ಲದಂತಾದ ಕಾರಣ, 28 ವರ್ಷ ವಯಸ್ಸಿನ ತಮ್ಮ ಕಿರಿಯ ಸಹೋದರ ಶೌಕತ್ ಅಹ್ಮದ್‌ನೊಂದಿಗೆ ಸರೋವರದ ಕಳೆ ತೆಗೆಯುವ ಯೋಜನೆಗೆ ಸೇರಿದರು.
“ಚಾರ್ ಚಿನಾರಿ ಬಳಿಯ ದಾಲ್ ಸರೋವರದಿಂದ ನಾವು ಕಳೆಯನ್ನು ಹೊರತೆಗೆದು, ರಸ್ತೆಯ ಬದಿಗೆ ಒಯ್ಯುತ್ತೇವೆ. ಅವರು ಅದನ್ನು ಲಾರಿಗಳಿಗೆ ತುಂಬಿಸಿ ದೂರಕ್ಕೆ ಒಯ್ಯುತ್ತಾರೆ. ನಮ್ಮಿಬ್ಬರಿಗೆ ಒಂದು ಬಾರಿಗೆ 600 ರೂ.ಗಳನ್ನು ಪಾವತಿಸಲಾಗುತ್ತದೆ. ಇದರಲ್ಲಿನ 200 ರೂ.ಗಳು ನಾವು ಚಲಾಯಿಸುವ ದೊಡ್ಡ ಸರಕಿನ ದೋಣಿಯ ಬಾಡಿಗೆ. ಕಳೆಯನ್ನು ಎಷ್ಟು ಬಾರಿ ದೋಣಿಯಲ್ಲಿ ಸಾಗಿಸುತ್ತೇವೆಂಬುದು ನಮಗೆ ಬಿಟ್ಟ ವಿಷಯ. ಹೆಚ್ಚೆಂದರೆ, ನಮ್ಮಿಂದ ಸಾಧ್ಯವಾಗುವುದು ಎರಡು ಬಾರಿಯ ಸಾಗಣೆ ಮಾತ್ರ. ನೀರಿನಿಂದ ಕಳೆಯನ್ನು ಕಿತ್ತು ತೆಗೆಯುವುದು ಬಹಳ ಪರಿಶ್ರಮದ ಕೆಲಸ. ನಾವು ಹೊತ್ತಿಗೆ ಮುಂಚೆ ಸುಮಾರು 6 ಗಂಟೆಗೆ ಮನೆಯಿಂದ ತೆರಳಿ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ವಾಪಸ್ಸಾಗುತ್ತೇವೆ. ಎರಡು ಬಾರಿ ಕಳೆಯನ್ನು ಸಾಗಿಸಲು ನಾವು ಪ್ರಯತ್ನಿಸುತ್ತೇವೆ.”
ಶಬ್ಬೀರ್ ತಿಳಿಸುವಂತೆ, ಅವರೆಂದಿಗೂ ಇಂತಹ ಕಠಿಣ ದೈಹಿಕ ಕೆಲಸದಲ್ಲಿ ತೊಡಗಿರಲಿಲ್ಲ. ಸರೋವರದಲ್ಲಿ ಇವರ ಪರಿವಾರವು ಸರೋವರದ ದ್ವೀಪಗಳಲ್ಲಿ ಅಲ್ಲಲ್ಲೆ ಹರಡಿದಂತೆ ಕೆಲವು ಚಿಕ್ಕ ಹೊಲಗಳನ್ನು ಹೊಂದಿದೆ. ಆದರೆ ಅಲ್ಲಿ ಆತನ ತಂದೆ, ತಾಯಿ ಮತ್ತು ಆತನ ಸಹೋದರರಲ್ಲೊಬ್ಬನು ಕೆಲವು ಬೆಳೆಗಳನ್ನು ಬೆಳೆಯುತ್ತಾರೆ.
“ಲಾಕ್‌ಡೌನ್ ಪ್ರಾರಂಭವಾದ ನಂತರ ನಾವು ಅನೇಕ ದಿನಗಳವರೆಗೆ ಯಾವುದೇ ಕೆಲಸದಲ್ಲಿ ತೊಡಗಿಲ್ಲ. ಜೀವನೋಪಾಯಕ್ಕೆ ಯಾವುದೇ ಆಯ್ಕೆಗಳಿಲ್ಲವಾದಾಗ, ದಾಲ್‌ನಲ್ಲಿ ನಾನು ಕಳೆ ಕೀಳುವ ಕೆಲಸವನ್ನು ಪ್ರಾರಂಭಿಸಿದೆ. ಈ ದೈಹಿಕ ಶ್ರಮದ ಕೆಲಸಕ್ಕಿಂತಲೂ ಪ್ರವಾಸೋದ್ಯಮಕ್ಕೆ ನಾವು ಪ್ರಾಶಸ್ತ್ಯ ನೀಡುತ್ತೇವೆ. ಏಕೆಂದರೆ ನಾವು ಜೀವನಪೂರ್ತಿ ಅದರಲ್ಲೇ ತೊಡಗಿದ್ದೆವು. ಆದರೆ ಪ್ರವಾಸೋದ್ಯಮವೇ ಇಲ್ಲವಾದ ಕಾರಣ, ಬದುಕುಳಿಯಲು ನಮಗಿದ್ದ ಮಾರ್ಗ ಇದೊಂದೇ. ಈಗ ನಾವು ಕುಟುಂಬದ ಖರ್ಚನ್ನು ಭರಿಸಿದಲ್ಲಿ, ಅದೇ ದೊಡ್ಡ ವಿಷಯ.”
ಶಬ್ಬೀರ್ ತಿಳಿಸಿದಂತೆ, ಅವರ ಪರಿವಾರವು ಮನೆಯ ಖರ್ಚನ್ನು ಅರ್ಧದಷ್ಟು ಕಡಿತಗೊಳಿಸಬೇಕಾಯಿತು. “ನಾವು ನಮ್ಮ ಸರಕು ಸಂಗ್ರಹವನ್ನು ಬಳಸುವಂತಿಲ್ಲ (ಶಾಲುಗಳು, ಚರ್ಮದ ಚೀಲಗಳು ಮತ್ತು ಜಾಕೆಟ್‌ಗಳು, ವಸ್ತ್ರಾಭರಣ ಮತ್ತು ಇತರೆ ವಸ್ತುಗಳು). ಇವನ್ನು ಯಾರೂ ನಮ್ಮಿಂದ ಕೊಳ್ಳುವುದಿಲ್ಲ. ಸದ್ಯಕ್ಕೆ ಇವುಗಳಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ನಮಗೆ ಸಾಕಷ್ಟು ಸಾಲವೂ ಇದೆ (ಅದರಲ್ಲೂ ವಿಶೇಷವಾಗಿ, ಸಾಲದ ರೂಪದಲ್ಲಿ ತಂದ ಸರಕುಗಳು).”
ಶಬ್ಬೀರ್, ದಾಲ್ ದ್ವೀಪದಲ್ಲಿ ವಾಸಿಸುತ್ತಿರುವ ಜನರ ಒದ್ದಾಟವನ್ನು ಸರ್ಕಾರವು ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಾರೆ. ಅವರು ಬಂದು, ಸಮೀಕ್ಷೆ ನಡೆಸಿದಲ್ಲಿ, ಇಲ್ಲಿನ ಕಷ್ಟಗಳ ಅರಿವಾಗುತ್ತದೆ. ಕೆಲಸವಿಲ್ಲದ ಅನೇಕ ಕುಟುಂಬಗಳಿವೆ. ಕೆಲವರ ಕುಟುಂಬಗಳಲ್ಲಿ ರೋಗಪೀಡಿತರಿದ್ದಾರೆ ಅಥವಾ ಆ ಪರಿವಾರಗಳಲ್ಲಿ ಹಣವನ್ನು ಸಂಪಾದಿಸುವವರಾರೂ ಇಲ್ಲ. ಸರ್ಕಾರದವರು ಇಲ್ಲಿಗೆ ಬಂದು, ಪರಿಸ್ಥಿತಿಯನ್ನು ಅರಿತು, ಅಂತಹ ಜನರಿಗೆ ಹಣವನ್ನು ಒದಗಿಸಿದಲ್ಲಿ, ಅದು ದೊಡ್ಡ ಪರಿಹಾರವೆನಿಸುತ್ತದೆ.
ಶ್ರೀನಗರದ ನಿವಾಸಿಗಳ ಪರಿಸ್ಥಿತಿಯು ಸರೋವರದ ನಿವಾಸಿಗಳಿಗಿಂತ ಬೇರೆಯಾಗಿದ್ದು, ಅವರಿಗೆ ಹೆಚ್ಚಿನ ಅವಕಾಶಗಳಿವೆಯೆಂದು ಇವರು ತಿಳಿಸುತ್ತಾರೆ. “ದಾಲ್‌ನಲ್ಲಿ ಪ್ರವಾಸೋದ್ಯಮದ ಹೊರತಾಗಿ ಹೆಚ್ಚೇನೂ ಮಾಡಲಾಗದು. ಹೆಚ್ಚೆಂದರೆ ತರಕಾರಿಗಳನ್ನು ನಾವು ಮಾರಬಹುದಷ್ಟೇ. (ಒಂದು ದ್ವೀಪದ ಮೊಹಲ್ಲಾದಿಂದ ಮತ್ತೊಂದು ದ್ವೀಪಕ್ಕೆ ದೋಣಿಯನ್ನು ಚಲಾಯಿಸುತ್ತಾ) ನಗರದ ಜನರಿಗೆ ದೊರೆಯುವಂತಹ ಕೆಲಸಗಳನ್ನು ಮಾಡಲು ಅಥವಾ ವಸ್ತುಗಳ ಮಾರಾಟಕ್ಕೆ ಗಾಡಿಗಳನ್ನು ಸಜ್ಜುಗೊಳಿಸುವುದು ನಮಗೆ ಸಾಧ್ಯವಾಗದು. ಪ್ರವಾಸೋದ್ಯಮವು ಮತ್ತೆ ಆರಂಭವಾದಲ್ಲಿ, ನಮಗೆ ಕೆಲಸವು ದೊರೆಯುತ್ತದೆ. ಆದರೆ ಪ್ರಸ್ತುತದಲ್ಲಿ ನಾವೀಗ ಸಂಕಷ್ಟದಲ್ಲಿದ್ದೇವೆ” ಎಂದು ಅವರು ತಿಳಿಸುತ್ತಾರೆ.
ದೋಣಿಗಳಲ್ಲಿ ತರಕಾರಿಗಳ ಮಾರಾಟವೇನು ಸುಲಭವಲ್ಲ. ಬಟಪೊರ ಕಲನ್‌ನಲ್ಲಿನ ೨೧ ವರ್ಷದ ಬಿ.ಎ ವಿದ್ಯಾರ್ಥಿ ಅಂದ್ಲೀಬ್ ಫಯಾಜ಼ ಬಾಬಾ ಹೀಗೆನ್ನುತ್ತಾರೆ: “ನಮ್ಮ ತಂದೆಯು ಒಬ್ಬ ರೈತ. ಮನೆಯಿಂದ ಹೊರಬರಲಾಗದ ಕಾರಣ ತಿಂಗಳುಗಟ್ಟಲೆ ಅವರಿಗೆ ಹಣವನ್ನು ಸಂಪಾದಿಸುವುದು ಸಾಧ್ಯವಾಗಲಿಲ್ಲ. ತರಕಾರಿಗಳೆಲ್ಲ ವ್ಯರ್ಥವಾದವು. ಅವರು, ತಮ್ಮ ಗಿರಾಕಿಗಳಿಗೆ ಅಲ್ಪ ಪ್ರಮಾಣದ ತರಕಾರಿಗಳನ್ನು ವಿತರಿಸಿದರಷ್ಟೇ. ನಮ್ಮ ಕುಟುಂಬದಲ್ಲಿ ತಂದೆಯು ಮಾತ್ರವೇ ದುಡಿಯುವ ವ್ಯಕ್ತಿಯಾದ್ದರಿಂದ, ನಮ್ಮ ಕುಟುಂಬವು ತೀವ್ರ ಪರಿಣಾಮವನ್ನು ಎದುರಿಸಬೇಕಾಯಿತು.” ಅಂದ್ಲೀಬ್ ಅವರ ಕಿರಿಯ ಸಹೋದರ ಮತ್ತು ಇಬ್ಬರು ಸಹೋದರಿಯರು ವಿದ್ಯಾರ್ಥಿಗಳು. ತಾಯಿ, ಗೃಹಿಣಿ. “ನಾವು ಶಾಲೆಯ ಸಂಪೂರ್ಣ ಶುಲ್ಕ ಹಾಗೂ ನನ್ನ ಕಾಲೇಜಿನ ಶುಲ್ಕವನ್ನು ಪಾವತಿಸಬೇಕಿತ್ತು. ತುರ್ತುಪರಿಸ್ಥಿತಿಯಿದ್ದಲ್ಲಿ, ದಡವನ್ನು (ಶ್ರೀನಗರ) ತಲುಪಲು ನಾವು ಸರೋವರವನ್ನು ದಾಟಬೇಕು” ಎಂದರವರು.
ನಗರದ ನಿವಾಸಿಗಳಾಗಿದ್ದಾಗ್ಯೂ, ಸರೋವರದ ಪ್ರವಾಸೋದ್ಯಮವನ್ನು ಅವಲಂಬಿಸಿರುವವರು ತೀವ್ರ ಸಂಕಷ್ಟದ ತಿಂಗಳುಗಳನ್ನು ಎದುರಿಸಿದ್ದಾರೆ. ಶ್ರೀನಗರದ ಶಾಲಿಮಾರ್ ಪ್ರದೇಶದ ಮೊಹಮ್ಮದ್ ಶಫಿ ಶಾ ಅವರಲ್ಲೊಬ್ಬರು. ಘಾಟ್‌ನ ಸುತ್ತಲೂ 10 ಕಿ. ಮೀ, ವ್ಯಾಪ್ತಿಯಲ್ಲಿ ಸುಮಾರು 16 ವರ್ಷಗಳಿಂದಲೂ ಇವರು ಶಿಕಾರಾಗಳನ್ನು ಚಲಾಯಿಸುತ್ತಿದ್ದು, ಉತ್ತಮ ದಿನಗಳಲ್ಲಿ ಸುಮಾರು 1,000-1,500 ರೂ.ಗಳನ್ನು ಸಂಪಾದಿಸುತ್ತಿದ್ದರು. ಆದರೆ ಕಳೆದ ವರ್ಷದಿಂದ, ಅವರ ಶಿಕಾರಾಗಳಲ್ಲಿ ಪ್ರಯಾಣಿಸುವ ಹೆಚ್ಚಿನ ಪ್ರವಾಸಿಗಳಿಲ್ಲ. “370ನೇ ವಿಧಿಯನ್ನು ಅವರು ರದ್ದುಪಡಿಸಿದಾಗಿನಿಂದಲೂ, ನಮಗೆ ಕೆಲಸವಿಲ್ಲದಂತಾಗಿದ್ದು, ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಪರಿಸ್ಥಿತಿಯು ಮತ್ತಷ್ಟು ಬಿಡಾಯಿಸಿದೆ” ಎಂದು ಅವರು ತಿಳಿಸಿದರು.
“ಪುನರ್‌ಸ್ಥಾನೀಕರಣದ ಏರ್ಪಾಡನ್ನು ಉಲ್ಲೇಖಿಸಿದ ಅವರು, “ನಾನು ದಾಲ್‌ನಲ್ಲಿ ವಾಸಿಸುತ್ತಿದ್ದೆನಾದರೂ, ಸರ್ಕಾರವು ನಮ್ಮನ್ನು ಸ್ಥಳಾಂತರಿಸಿತು. ನಾನು ಪ್ರತಿ ದಿನವೂ ಶಾಲಿಮಾರ್‌ನಿಂದ ಇಲ್ಲಿಗೆ ಬರುತ್ತೇನೆ [ಇತರರ ವಾಹನದಲ್ಲಿ ಪುಕ್ಕಟೆ ಸವಾರಿಯನ್ನು ಪಡೆದು]. ಚಳಿಗಾಲದಲ್ಲಿ ಕೆಲಸಕ್ಕಾಗಿ ಹೊರಗೆ ತೆರಳಿದೆನಾದರೂ [ಗೋವಾದ ಕಡಲತೀರಗಳಲ್ಲಿ ಕರಕುಶಲ ವಸ್ತುಗಳ ಮಾರಾಟಕ್ಕೆಂದು] ಲಾಕ್‌ಡೌನ್ ನಂತರದಲ್ಲಿ ೫೦ ದಿನಗಳವರೆಗೆ ಅಲ್ಲಿ ಸಿಲುಕಿದ್ದೆ. ವ್ಯಾಪಾರವೂ ಸಾಧ್ಯವಾಗಲಿಲ್ಲ. ಮೇ ಕೊನೆಯ ವೇಳೆಗೆ ವಾಪಸ್ಸಾದ ನಾನು ಒಂದು ವಾರಗಳವರೆಗೂ ಪ್ರತ್ಯೇಕ ವಾಸದಲ್ಲಿದ್ದೆ. . .” ಎಂದರು.
ದಾಲ್ ಸರೋವರದ ಪ್ರತಿಯೊಂದು ಘಾಟ್‌ನಲ್ಲಿಯೂ ಶಿಕಾರವಾಲಾಗಳು ಒಕ್ಕೂಟವೊಂದನ್ನು ರಚಿಸಿಕೊಂಡಿದ್ದಾರೆ. ಇವೆಲ್ಲವೂ All J&K Taxi Shikara Owners Union ಎಂಬ ಒಕ್ಕೂಟಕ್ಕೆ ಸೇರಿದ್ದು, ಪ್ರತಿಯೊಬ್ಬ ಶಿಕಾರವಾಲಾ ಸಂಪಾದಿಸಿದ ಹಣವನ್ನು ಒಟ್ಟುಗೂಡಿಸಲಾಗುತ್ತದೆ. ನಂತರ ಅವರು ಸದಸ್ಯರೆಲ್ಲರಿಗೂ ಅದನ್ನು ಸಮಾನವಾಗಿ ವಿಭಾಗಿಸುತ್ತಾರೆ. ಶಫಿ, ಕೆಲಸವನ್ನು ನಿರ್ವಹಿಸುವ ಘಾಟ್‌ನಲ್ಲಿ ಸುಮಾರು 15 ಶಿಕಾರಾಗಳಿದ್ದಾರೆ.
“ಸ್ಥಳೀಯರು ಇಲ್ಲಿಗೆ ಬರುವುದು ಅಪರೂಪ. ಅವರು ಬಂದಲ್ಲಿ, ಶಿಕಾರಾದಲ್ಲಿ ಅವರನ್ನು ಕರೆದೊಯ್ಯುತ್ತೇವೆ. ಇದರಿಂದ 400-500 ರೂ.ಗಳ ಸಂಪಾದನೆಯಾಗುತ್ತದೆ. ನಂತರ ಇದು ಈ ಟ್ಯಾಕ್ಸಿ ನಿಲ್ದಾಣದ 10-15 ಜನರಿಗೆ ವಿಭಜನೆಯಾಗುತ್ತದೆ. ನನಗೆ 50 ರೂ. ಸಿಗುತ್ತದೆ. ಇದರಿಂದ ನನಗೆ ಏನು ತಾನೇ ದೊರೆತೀತು? ಶಿಕಾರಾದ ಹೊರತು ನಮಗೆ ಮತ್ತಾವುದೇ ಆದಾಯವಿಲ್ಲ. ನನ್ನ ಮನೆಯನ್ನು ನಿಭಾಯಿಸುವುದಾದರೂ ಹೇಗೆ? ಅದು ಸರ್ವನಾಶವಾಗುತ್ತದೆ.”
ಸರ್ಕಾರವು ಪ್ರತಿ ಶಿಕಾರವಾಲಾನಿಗೂ ಮೂರು ತಿಂಗಳವರೆಗೆ ಮಾಹೆಯಾನ 1,000 ರೂ.ಗಳನ್ನು ನೀಡುತ್ತದೆಯೆಂಬ ವಿಷಯವನ್ನು ಕೇಳಿದ ಶಫಿ, ಪ್ರವಾಸೋದ್ಯಮ ಇಲಾಖೆಗೆ ತಮ್ಮ ಶಿಕಾರಾ ಟ್ಯಾಕ್ಸಿಯ ಪರವಾನಿಗೆಯನ್ನು ಸಲ್ಲಿಸಿದ್ದಾರಾದರೂ, ತಮಗೆ ಯಾವುದೇ ಹಣವು ದೊರೆಯಲಿಲ್ಲವೆಂಬುದಾಗಿ ತಿಳಿಸಿದರು.
ಸಾಲುಮರದ ವಿಶಾಲ ಬೀದಿಯಾದ್ಯಂತ ಸರೋವರದ ಒಳಗೆ 50 ವರ್ಷದ ಅಬ್ದುಲ್ ರಶೀದ್ ಬದ್ಯರಿ, ತಮ್ಮ ‘ಅಕ್ರಾಪಲಿಸ್’ ಎಂಬ ದೋಣಿ-ಮನೆಯ ದ್ವಾರಮಂಟಪವನ್ನು ಒರಗಿ ನಿಂತಿದ್ದಾರೆ. ಇದು ಹಸ್ತಕೌಶಲವುಳ್ಳ ಮರದ ಬಾಗಿಲು, ಪ್ಲಷ್ ಸೋಫಾಗಳು ಮತ್ತು ಸಾಂಪ್ರದಾಯಿಕ ಖತಮ್‌ಬಂದ್ ಶೈಲಿಯ ವಿಫುಲ ಅಲಂಕರಣದ ಕರಕುಶಲ ಕೆತ್ತನೆಯುಳ್ಳ ಸೂರನ್ನು ಇದು ಒಳಗೊಂಡಿದೆ. ಒಂದು ವರ್ಷದಿಂದಲೂ ಇಲ್ಲಿಗೆ ಯಾವುದೇ ಗಿರಾಕಿಯ ಸುಳಿವಿಲ್ಲ.
“ನಾನು ವಯಸ್ಕನಾದಾಗಿನಿಂದಲೂ, ದೋಣಿ-ಮನೆಯನ್ನು ನಡೆಸುತ್ತಿದ್ದೇನೆ. ನನಗಿಂತಲೂ ಮೊದಲು, ನನ್ನ ತಂದೆ ಹಾಗೂ ತಾತ ಇದೇ ಕಸುಬಿನಲ್ಲಿದ್ದರು. ಅವರಿಂದ ನನಗೆ ಈ ದೋಣಿ-ಮನೆಯು ಪರಂಪರಾಗತವಾಗಿ ದೊರೆತಿದೆ. ಆದರೆ ಈಗ ಎಲ್ಲವೂ ಮುಚ್ಚಿದೆ. ಎರಡು ಲಾಕ್‌ಡೌನ್‌ಗಳಿಂದಾಗಿ, ಯಾವುದೇ ಗಿರಾಕಿಯೂ ಇಲ್ಲಿಗೆ ಬಂದಿಲ್ಲ. ನನ್ನ ಕೊನೆಯ ಗಿರಾಕಿಯು 370ನೇ ವಿಧಿಗೆ ಮೊದಲು ಬಂದಿದ್ದರಷ್ಟೇ. ಇಲ್ಲಿನ ಸಂಪತ್ತು ಸಹ ಕೊಳೆಯುತ್ತಿದೆ” ಎಂದರವರು.
ಬದ್ಯರಿ ಅವರ ೫ ಸದಸ್ಯರ ಪರಿವಾರವು ದೋಣಿ-ಮನೆಯಲ್ಲಿ ನೆಲೆಸುವ ಪ್ರವಾಸಿಗರಿಂದ ಬರುವ ಆದಾಯವನ್ನು ಅವಲಂಬಿಸಿತ್ತು. “ಒಂದು ರಾತ್ರಿಗೆ ನಾನು 3,000 ರೂ.ಗಳಷ್ಟು ಶುಲ್ಕ ವಿಧಿಸುತ್ತಿದ್ದೆ. ಪ್ರವಾಸದ ಋತುವಿನ ಮಾಸಗಳಲ್ಲಿ ನನ್ನ ದೋಣಿಯು ಪ್ರವಾಸಿಗರಿಂದ ತುಂಬಿರುತ್ತಿತ್ತು. ಬೀದಿ ವ್ಯಾಪಾರಿಗಳು ಹಾಗೂ ಮತ್ತಿತರರು ಸಹ ನನ್ನ ದೋಣಿ-ಮನೆಯಲ್ಲಿ ನೆಲೆಸುವ ಪ್ರವಾಸಿಗರೊಂದಿಗೆ ವ್ಯಾಪಾರವನ್ನು ನಡೆಸುತ್ತಿದ್ದರಲ್ಲದೆ ಶಿಕಾರವಾಲಾಗಳು ನನ್ನ ಗಿರಾಕಿಗಳನ್ನು ದೋಣಿಯಲ್ಲಿ ಸರೋವರದ ಸುತ್ತ ಕರೆದೊಯ್ದು ಹಣವನ್ನು ಸಂಪಾದಿಸುತ್ತಿದ್ದರು. ಈ ಎಲ್ಲರಿಗೂ ಈಗ ಕೆಲಸವಿಲ್ಲದಂತಾಗಿದೆ. ನಾನು ನನ್ನ ಉಳಿತಾಯದಿಂದ ದಿನದ ಖರ್ಚುಗಳನ್ನು ನಿಭಾಯಿಸುತ್ತಿದ್ದೇನೆ. ಸಾಲವನ್ನೂ ಪಡೆದಿದ್ದೇನೆ” ಎಂದರು ಬದ್ಯರಿ. ದೋಣಿ-ಮನೆಯನ್ನು ನಿಭಾಯಿಸುವ ಸಲುವಾಗಿ ಬದ್ಯರಿ, ಒಬ್ಬ ಕೆಲಸಗಾರರನ್ನು ನೇಮಿಸಿಕೊಂಡಿದ್ದರು. ಆದರೆ ಸಂಬಳವನ್ನು ಕೊಡಲು ಸಾಧ್ಯವಾಗದ ಕಾರಣ, ಅವರಿಗೆ ಕೆಲಸವನ್ನು ತೊರೆಯುವಂತೆ ತಿಳಿಸಲಾಯಿತು. “ಭವಿಷ್ಯವು ಆಶಾಜನಕವಾಗಿಲ್ಲ. ನನ್ನ ಮಗನು ಈ ಕೆಲಸವನ್ನು ಮುಂದುವರಿಸುವುದನ್ನು ನಾನು ಬಯಸುವುದಿಲ್ಲ” ಎಂದರಾತ.
ಈ ತಿಂಗಳುಗಳಲ್ಲಿ, ಕೆಲವರು; ಕಷ್ಟದಲ್ಲಿ ಸಿಲುಕಿರುವ ಶಿಕಾರವಾಲಾಗಳು ಹಾಗೂ ವ್ಯಾಪಾರಸ್ಥರಿಗೆ ನೆರವನ್ನು ನೀಡುವ ಪ್ರಯತ್ನಗಳನ್ನು ನಡೆಸಿದ್ದಾರೆ; ಅವರಲ್ಲಿ ಅಬ್ದುಲ್ ಮಜೀದ್ ಭಟ್ ಅವರೂ ಒಬ್ಬರು (ಲೇಕ್‌ಸೈಡ್ ಟೂರಿಸ್ಟ್ ಅಸೋಸಿಯೇಷನ್ ಅಧ್ಯಕ್ಷರು). “ನಮ್ಮ ಸಂಘದ ಸದಸ್ಯರ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲು ಸುಮಾರು 6 ಲಕ್ಷ ರೂ.ಗಳನ್ನೊಳಗೊಂಡ ಟ್ರಸ್ಟ್‌ಅನ್ನು ಹೊಂದಿದ್ದೇವೆ. ಎಲ್ಲರಿಗಿಂತ ದುರ್ಬಲ ಪರಿಸ್ಥಿತಿಯಲ್ಲಿರುವವರಿಗೆ ಇದನ್ನು ನೀಲಾಗುತ್ತಿದ್ದು, ಇದರಿಂದ ಅವರು ಮನೆಯನ್ನು ನಿಭಾಯಿಸಬಹುದು” ಎಂದು ಅವರು ತಿಳಿಸಿದರು.
ಪ್ರವಾಸದ ಋತುವಿನಲ್ಲಿ ಭಟ್ ಅವರು, ಮಾಹೆಯಾನ 10,000-15,000 ರೂ.ಗಳ ವೇತನಕ್ಕೆ 10 ಜನರನ್ನು ನೇಮಿಸಿಕೊಳ್ಳುತ್ತಿದ್ದರು. “ವೇತನವನ್ನು ಒದಗಿಸಲಾಗದ ಕಾರಣ, ಅವರೆಲ್ಲರಿಗೂ ಕೆಲಸವನ್ನು ತೊರೆಯುವಂತೆ ತಿಳಿಸಿದೆ. ನನ್ನ ಕುಟುಂಬದೊಂದಿಗೆ ಚರ್ಚಿಸಿದ ನಂತರ ಅವರಲ್ಲಿ ತೀರ ಬಡತನದಲ್ಲಿರುವ ಕೆಲವರನ್ನು ಉಳಿಸಿಕೊಂಡು, ನಾವು ತಿನ್ನುವುದನ್ನೇ ಅವರಿಗೂ ಒದಗಿಸುತ್ತಿದ್ದೇನೆ. ಇಲ್ಲದಿದ್ದಲ್ಲಿ, ನನಗೆ ನೌಕರರನ್ನು ನೇಮಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಕಳೆದ ಐದು ತಿಂಗಳಲ್ಲಿ ಕೆಲವು ಸ್ಥಳೀಯ ಗಿರಾಕಿಗಳಿಂದ 4,000 ರೂ.ಗಳಿಗಿಂತಲೂ ಕಡಿಮೆ ವ್ಯಾಪಾರವಾಗಿದೆ” ಎಂದರವರು.
ತಮ್ಮ ಪರಿವಾರವನ್ನು ನಿಭಾಯಿಸಲು ಹಾಗೂ ಸಾಲದ ಮರುಪಾವತಿಗೆ, ಬ್ಯಾಂಕಿನಿಂದ ಸಾಲವನ್ನು ಪಡೆದಿರುವ ಭಟ್, “ಅದಕ್ಕೂ ನಾನು ಬಡ್ಡಿಯನ್ನು ಪಾವತಿಸಬೇಕು. ನನ್ನ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಸೋದರಳಿಯಂದಿರು ನನ್ನೊಂದಿಗೆ ಕೆಲಸಮಾಡುತ್ತಾರೆ (ಭಟ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬಾಕೆ ಗೃಹಿಣಿ, ಮತ್ತೊಬ್ಬರು ಗೃಹಕೃತ್ಯಗಳಲ್ಲಿ ನೆರವಾಗುತ್ತಾರೆ). ನನ್ನ ಮಗನು ಬಿ.ಕಾಂ ಪದವೀಧರನಾಗಿದ್ದು, ನನ್ನ ಆತ್ಮಸಾಕ್ಷಿಯು ಆತನನ್ನು ದೈಹಿಕ ಶ್ರಮದ ಕೂಲಿಯ ಕೆಲಸಗಳಿಗೆ ಕಳುಹಿಸಲು ಒಪ್ಪುವುದಿಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಆತನೂ ಇದಕ್ಕೆ ತೆರಳುವುದು ಅನಿವಾರ್ಯ” ಎಂಬುದಾಗಿ ತಿಳಿಸಿದರು.
ಸರ್ಕಾರದ ಪರವಾಗಿ ಯಾರೂ ದಾಲ್ ಸರೋವರದ ಅಂಗಡಿ ಮಾಲೀಕರುಗಳು ಹಾಗೂ ಶಿಕಾರವಾಲಾಗಳತ್ತ ಗಮನಹರಿಸುವುದಿಲ್ಲ. ಭಟ್ ಅವರು, “ನಷ್ಟದ ಅಂದಾಜುಮಾಡಲು ಯಾರೂ ಬರಲಿಲ್ಲ. ಸ್ಥಳೀಯರು ಸಾಮಾನ್ಯವಾಗಿ ನಗರದಲ್ಲಿನ ಅಂಗಡಿಗಳಿಗೆ ಭೇಟಿ ನೀಡುತ್ತಾರೆ. ಈಗ ಲಾಕ್‌ಡೌನ್ ತೆರವಾಗಿದೆಯಾದರೂ ದಾಲ್‌ನಲ್ಲಿನ ಕಾಶ್ಮೀರಿ ಕಲಾ ಮಳಿಗೆಗೆ ಯಾವ ಸ್ಥಳೀಯರೂ ಬರುವುದಿಲ್ಲ. ದಾಲ್‌ನ ಅಂಗಡಿ ಮಾಲೀಕನು ಶೇ. 100ರಷ್ಟು ನಷ್ಟದಲ್ಲಿದ್ದಾನೆ” ಎಂದರು.
ಕರಕುಶಲ ವಸ್ತುಗಳ ನಿರ್ದೇಶನಾಲಯದ ನೌಕರರೊಬ್ಬರು, ಹಣಕಾಸಿನ ನೆರವನ್ನು ಪಡೆಯಲು ಆನ್‌ಲೈನ್ ಮೂಲಕ ನೋಂದಣಿಮಾಡಿಸುವಂತೆ ಜುಲೈ ತಿಂಗಳಿನಲ್ಲಿ ತಿಳಿಸಿದ್ದರು. ಆದರೆ ಇದಾವುದೂ ಕಾರ್ಯರೂಪಕ್ಕೆ ಬರಲಿಲ್ಲ. “ಆಗಿನಿಂದಲೂ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಯಾವುದೇ ನೆರವಿನ ಭರವಸೆ ಉಳಿದಿಲ್ಲ.” ಹರತಾಳ ಹಾಗೂ ಕರ್ಪ್ಯೂಗಳ ದೀರ್ಘಾವಧಿ ಆವರ್ತನಗಳು (cycle) ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿವೆ. ನಮ್ಮ ಮಕ್ಕಳಿಗೆ, ದಾಲ್ ಹಾಗೂ ನಮ್ಮ ಭವಿಷ್ಯ ಬಹಳ ಉತ್ಸಾಹಶೂನ್ಯವಾಗಿದೆಯೆಂದು ತಿಳಿಸಿದೆ” ಎಂಬುದಾಗಿ ಭಟ್ ಅಲವತ್ತುಕೊಂಡರು.
ಅನುವಾದ - ಶೈಲಜ ಜಿ. ಪಿ .