ಪರೆಂಬಲೂರಿನ ಕೆಲವು ಹಳ್ಳಿಗಳಲ್ಲಿನ ಅಭಿವೃದ್ಧಿಯಲ್ಲಿ ನಿರತವಾಗಿರುವ ಪಯಿರ್ ಎಂಬ ಸಂಸ್ಥೆಯ ಜೊತೆಗೂಡಿ, ಮಣಿಮಾರನ್ ಅವರು ಮಕ್ಕಳಲ್ಲಿ ದೃಢವಾದ ಸಾಮಾಜಿಕ ಮೌಲ್ಯವನ್ನು ನೆಲೆಗೊಳಿಸಲು ಹೊಸ ಆಟಗಳನ್ನು ಸೃಜಿಸುವ (ದೈಹಿಕ ಅಂತರವನ್ನು ಪಾಲಿಸುವ ನಿಟ್ಟಿನಲ್ಲಿಯೇ) ನಿರೀಕ್ಷೆಯಲ್ಲಿದ್ದಾರೆ. “ಈ ಕುರಿತಂತೆ ನಾವೀಗಾಗಲೇ ಕೆಲಸವನ್ನು ಪ್ರಾರಂಭಿಸಿದ್ದೇವೆ. ಆದರೆ ಈಗ ಕೋವಿಡ್-19 ಬಗ್ಗೆ ಅರಿವನ್ನು ಮೂಡಿಸುವತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿದ್ದೇವೆ. ಏಕೆಂದರೆ ನಮ್ಮ ಜನರಿಗೆ ಇದು ಹೊಸ ವಿಷಯವಾಗಿದ್ದು, ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನಾವು ಶೀಘ್ರದಲ್ಲಿಯೇ ಮಣಿಮಾರನ್ ಮತ್ತು ಮಗಿಜಿ಼ನಿ ಅವರೊಂದಿಗೆ ಅಂತಹ ಆಟಗಳನ್ನು ಕುರಿತಂತೆ ಕೆಲಸದಲ್ಲಿ ತೊಡಗುತ್ತೇವೆ” ಎಂಬುದಾಗಿ ಪಯಿರ್‌ನ ಮಾರ್ಗದರ್ಶಕರಾದ ಪ್ರೀತಿ ಜೇ಼ವಿಯರ್ ತಿಳಿಯಪಡಿಸಿದರು.
ಮಣಿಮಾರನ್ ಅವರ ಪ್ರಕಾರ, ಇವು ಅವರಂತಹ ಕಲಾವಿದರಿಗೆ ಸವಾಲಿನ ಸಮಯ. “ವಿಶೇಷವಾಗಿ ಜಾನಪದ ಕಲಾವಿದರು ಯಾವುದೇ ಆಪತ್ತಿನ ಸಮಯದಲ್ಲಿ ಜನರೊಂದಿಗಿರುತ್ತಾರೆ. ಈ ದೈಹಿಕ ಅಂತರವನ್ನು ಪಾಲಿಸುವುದು, ಪ್ರತ್ಯೇಕತೆಯನ್ನು ಕಾಯ್ದುಕೊಳ್ಳುವುದು ಇವರಿಗೆ ತೊಂದರೆದಾಯಕವೂ ಹೌದು.” “ಕೆಲಸವನ್ನು ಕಳೆದುಕೊಂಡ ಜಾನಪದ ಕಲಾವಿದರಿಗೆ ಸರ್ಕಾರವು ಸ್ವಲ್ಪವಾದರೂ ಪರಿಹಾರವನ್ನು ಒದಗಿಸತಕ್ಕದ್ದು. ಆಗ ನಾವು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶನಗಳನ್ನು ನೀಡಬಹುದು. ಆರ್ಥಿಕವಾಗಿ ಕಲಾವಿದರು ಅತ್ಯಂತ ತೀವ್ರ ಪರಿಣಾಮಗಳಿಗೆ ತುತ್ತಾಗಿದ್ದಾರೆ” ಎಂದು ಆಗ್ರಹಪೂರ್ವಕವಾಗಿ ತಿಳಿಸುವ ಮಣಿಮಾರನ್ ಮತ್ತು ಮಗಿಜಿ಼ನಿ, ಪರಿಹಾರವಿರಲಿ, ಇಲ್ಲದಿರಲಿ ಪರೈ ಹಾಗೂ ಕೊರೊನಾ ವೈರಸ್ ಕುರಿತ ಜನರಲ್ಲಿನ ಭಯವನ್ನು ತೊಡೆದುಹಾಕುವ ಹಾಡುಗಾರಿಕೆಯನ್ನು ಅವರು ಪ್ರತಿದಿನವೂ ಮುಂದುವರಿಸಿದ್ದಾರೆ. “ಜಾಗರೂಕರಾಗಿರುವಂತೆ ಒತ್ತಾಯಿಸುವುದನ್ನು ನಾವು ಮುಂದುವರಿಸಿ, ವೈರಸ್ ಹರಡುವುದನ್ನು ತಡೆಯಲು ನಮಗೆ ಸಾಧ್ಯವಿರುವುದೆಲ್ಲವನ್ನೂ ನಾವು ನಿರ್ವಹಿಸುತ್ತೇವೆ. ಅಂತಿಮವಾಗಿ ಕೊರೊನಾ ನಮ್ಮನ್ನು ತೊರೆದಾಗ, ನಮಸ್ತೆಯೊಂದಿಗೆ, ನಮ್ಮ ಪರೈನೊಂದಿಗೆ ಅದನ್ನು ಆಚರಿಸುತ್ತೇವೆ” ಎನ್ನುತ್ತಾರವರು.
ಕೊರೊನಾ ಹಾಡಿನ ಅನುವಾದ
ಥಾನ ಥನ ಥಾನ
ಕೊರೊನಾ ಉನ್ಮತ್ತವಾಗಿ ಕುಣಿಯುತ್ತಿದೆ
ಬಹಳಷ್ಟು ಜನರು
ಆಧಾರರಹಿತ ವದಂತಿಗಳನ್ನು ಹರಡುತ್ತಿದ್ದಾರೆ
ವದಂತಿಗಳನ್ನು ನಂಬಬೇಡಿ
ಉಪೇಕ್ಷೆಯ ಮಾತುಗಳು ಬೇಡ
ಉಪೇಕ್ಷೆಯು ಸಲ್ಲದು
ಭಯಪಡುವ ಅಗತ್ಯವಿಲ್ಲ
ಕೊರೊನಾದ ಆಕ್ರಮಣವನ್ನು
ಎದುರಿಸುವ ದಾರಿಯನ್ನು ಹುಡುಕಿ
ಕೊರೊನಾ ನಿಮ್ಮ ಬಳಿ ಸುಳಿಯದಂತೆ
ಮೂಗನ್ನು ಮುಚ್ಚಿಕೊಳ್ಳಿ
ಕೇವಲ ನಿಮ್ಮ ಜಾಗರೂಕತೆಯೊಂದೇ
ಕೊರೊನಾವನ್ನು ತಡೆಗಟ್ಟಬಲ್ಲದು
ದೈಹಿಕ ದೂರವನ್ನು ನಾವು ಪಾಲಿಸಿದಲ್ಲಿ,
ಕೊರೊನಾ ಕೂಡ ಓಡಿಹೋಗುತ್ತದೆ
ಥಾನ ಥನ ಥಾನ
ಕೊರೊನಾ ಉನ್ಮತ್ತವಾಗಿ ಕುಣಿಯುತ್ತಿದೆ
ಆಧಾರವಿಲ್ಲದ ವದಂತಿಗಳನ್ನು ಹಬ್ಬಿಸಬೇಡಿ, ನಿಲ್ಲಿಸಿ ಅದನ್ನು!
ಮಾಂಸಾಹಾರದಿಂದ ಕೊರೊನಾ
ಹರಡುವುದಿಲ್ಲ
ಸಸ್ಯಾಹಾರಿಗಳನ್ನೂ ಸಹ ಕೊರೊನಾ
ಬಿಡುವುದಿಲ್ಲ
ಎಲ್ಲ ದೇಶಗಳೂ
ದಿಗ್ಭ್ರಾಂತ ಸ್ಥಿತಿಯಲ್ಲಿವೆ
ಅದರ ಬೇರುಗಳನ್ನು ಹುಡುಕಲು
ಸಂಶೋಧನೆಗಳು ಚಾಲ್ತಿಯಲ್ಲಿವೆ
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು,
ಆಹಾರಗಳನ್ನು ಸೇವಿಸಿ
ನಿಮ್ಮನ್ನು ರಕ್ಷಿಸಿಕೊಳ್ಳಿ
ಸುಳ್ಳನ್ನು ದೂರಮಾಡಿ
ಕೆಮ್ಮುವವರಿಂದ ದೂರವನ್ನು ಕಾಯ್ದುಕೊಳ್ಳಿ
ಸೀನುವವರಿಂದ ದೂರವಿರಿ
ಜ್ವರವು ಶಮನವಾಗದಿದ್ದಲ್ಲಿ, ಜಾಗರೂಕರಾಗಿರತಕ್ಕದ್ದು
ಅಸಹಜ ಉಸಿರಾಟವಿದ್ದಲ್ಲಿ, ಎಚ್ಚರಿಕೆಯಿಂದಿರತಕ್ಕದ್ದು
ಇವೆಲ್ಲವೂ ಎಂಟು ದಿನಗಳವರೆಗೂ ಮುಂದುವರಿದಲ್ಲಿ,
ಅದು ಕೊರೊನಾ ಆಗಿರಬಹುದು
ಕೊರೊನಾವನ್ನು ತಗ್ಗಿಸಲು,
ವೈದ್ಯರ ಸಹಾಯವನ್ನು ಪಡೆಯಿರಿ
ಅನುವಾದ: ಶೈಲಜ ಜಿ. ಪಿ.