ಬಲಗೈಯಲ್ಲಿ ಖಡ್ಗ, ಎಡಗೈಯಲ್ಲಿ ಕುದುರೆಯ ಲಗಾಮು ಹಿಡಿದಿದ್ದ ರಾಣಿ ವೇಲು ನಾಚಿಯಾರ್ ಸ್ಥಬ್ಧಚಿತ್ರವು ಈ ಬಾರಿ ಚೆನ್ನೈನಲ್ಲಿ ನಡೆದ ತಮಿಳುನಾಡಿನ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಫೋಟೊ ತೆಗೆಯಲ್ಪಟ್ಟ ಮತ್ತು ಮಾತನಾಡಲ್ಪಟ್ಟ ಐತಿಹಾಸಿಕ ವ್ಯಕ್ತಿಗಳ ಸ್ಥಬ್ಧಚಿತ್ರಗಳಲ್ಲಿ ಒಂದಾಗಿತ್ತು. ತಮಿಳುನಾಡಿನ ಖ್ಯಾತ ಐತಿಹಾಸಿಕ ವ್ಯಕ್ತಿಗಳಾದ ವಿ.ಓ. ಚಿದಂಬರಂ ಪಿಳ್ಳೈ, ಸುಬ್ರಮಣ್ಯ ಭಾರತಿ ಮತ್ತು ಮರುಟ್ಟು ಸಹೋದರರಂತಹ ಇತರ ತಮಿಳು ದಂತಕತೆಗಳ ಟ್ಯಾಬ್ಲೋದಲ್ಲಿ ಈ ರಾಣಿಯೂ ಸ್ಥಾನ ಪಡೆದಿದ್ದಳು.
'ಸ್ವಾತಂತ್ರ್ಯ ಹೋರಾಟದಲ್ಲಿ ತಮಿಳುನಾಡು' ಎನ್ನುವ ವಿಷಯದಡಿ ಇದೇ ಟಾಬ್ಲೋವನ್ನು, ತಮಿಳುನಾಡಿನ ಪ್ರತಿನಿಧಿಯಾಗಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶಿಸಲು ಪ್ರಸ್ತಾಪ ಕಳುಹಿಸಲಾಗಿತ್ತಾದರೂ ಕೇಂದ್ರ ಸರಕಾರದ ʼತಜ್ಞರʼ ಸಮಿತಿಯು ಅದನ್ನು ತಿರಸ್ಕರಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಪ್ರಧಾನಿಯವರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿಕೊಂಡರಾದರೂ ಅವರು ಅದನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ಕೊನೆಗೆ ಇದನ್ನು ಚೆನೈನಲ್ಲಿ ನಡೆದ ರಾಜ್ಯ ಸರ್ಕಾರದ ಗಣರಾಜ್ಯೋತ್ಸವದ ಪರೇಡಿನಲ್ಲಿ ಪ್ರದರ್ಶಿಸಲಾಯಿತು ಮತ್ತು ಈ ಬಾರಿ ಈ ಟ್ಯಾಬ್ಲೋ ಜನಾಕರ್ಷಣೆಯ ಕೇಂದ್ರವಾಗಿತ್ತು.
ಕೇಂದ್ರದ ʼತಜ್ಞರʼ ಸಮಿತಿಯು ಇತರ ವಿಷಯಗಳ ಟಿಪ್ಪಣಿಯೊಡನೆ, ಈ ಟ್ಯಾಬ್ಲೋದಲ್ಲಿರುವ ಕೆಲವು ವ್ಯಕ್ತಿಗಳು “ರಾಷ್ಟ್ರೀಯ ವೀಕ್ಷಕರಿಗೆ ಅಪರಿಚಿತ,” ಎಂದು ಹೇಳಿತ್ತು. ಆದರೆ ಅಕ್ಷಯ ಕೃಷ್ಣಮೂರ್ತಿಯವರು ಖಂಡಿತಾ ತಜ್ಞರ ಈ ಮಾತುಗಳನ್ನು ಒಪ್ಪಲಿಕ್ಕಿಲ್ಲ. ಅವರು ಹೇಳುವಂತೆ ಟ್ಯಾಬ್ಲೋದಲ್ಲಿದ್ದ ಒಬ್ಬರು ವ್ಯಕ್ತಿಯೊಡನೆ ತೀರಾ ವೈಯಕ್ತಿಕ ಎನ್ನಿಸುವಂತಹ ಬಂಧವಿದೆ. ಅವರೆಂದರೆ: ವೇಲು ನಾಚಿಯಾರ್, ಈಕೆ ತಮಿಳುನಾಡಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಶಿವಗಂಗೈ ಪ್ರ್ಯಾಂತ್ಯವನ್ನು (ಪ್ರಸ್ತುತ ತಮಿಳುನಾಡಿನ ಒಂದು ಜಿಲ್ಲೆ) ಆಳಿದವರು.
“11ನೇ ತರಗತಿಯಲ್ಲಿದ್ದಾಗ ಸಂಗೀತ ನಾಟಕದಲ್ಲಿ ವೇಲು ನಾಚಿಯಾರ್ ಪಾತ್ರ ಮಾಡಿದ್ದು ನನ್ನ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿತ್ತು,” ಎನ್ನುತ್ತಾರಾಕೆ.
“ಅದು ನನ್ನ ಪಾಲಿಗೆ ನಟಿಸುವುದು ಮತ್ತು ಕುಣಿಯುವುದಷ್ಟೇ ಆಗಿರಲಿಲ್ಲ,” ಎಂದು ವಿವರಿಸುತ್ತಾರೆ ಅಕ್ಷಯ, ಆ ನೃತ್ಯನಾಟಕದ ಉದ್ದಕ್ಕೂ ಬಂದ ರಾಣಿಯ ಬದುಕಿನ ವಿವರಗಳು, ಆಕೆಯ ಶೌರ್ಯ ಅವರ ಅನುಭವಕ್ಕೆ ದಕ್ಕಿತ್ತು. ಅಂದು ಅಂತರ ಶಾಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತರಬೇತಿ ಹೊಂದಿರುವ ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವ ಅಕ್ಷಯರಿಗೆ ಆರೋಗ್ಯ ಸರಿಯಿರಲಿಲ್ಲ. ಅವರಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಕುರಿತು ಖಾತರಿಯಿರಲಿಲ್ಲ. ಅಷ್ಟು ಬಳಲಿದ್ದ ಅವರು ಅಂದು ತನ್ನ ಜೀವಮಾನದ ಶ್ರೇಷ್ಟ ಪ್ರದರ್ಶನಗಳಲ್ಲೊಂದನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸಿದ್ದರು.
ವೇದಿಕೆಯಿಂದ ಕೆಳಗಿಳಿಯುವ ಹೊತ್ತಿಗೆ ಅಕ್ಷಯಗೆ ಜ್ಞಾನ ತಪ್ಪಿತ್ತು. ಅಲ್ಲಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸಲೈನ್ ಡ್ರಿಪ್ ಹಾಕಲಾಗಿತ್ತು. “ಅಂದು ನಾವು ಎರಡನೇ ಸ್ಥಾನವನ್ನು ಪಡೆದಿದ್ದೆವು, ನಾನು ಕೈಯಲ್ಲಿನ ಐವಿ ಲೈನ್ಸ್ ಜೊತೆಯಲ್ಲೇ ವೇದಿಕೆಗೆ ಹೋಗಿ ಪ್ರಶಸ್ತಿ ಸ್ವೀಕರಿಸಿದ್ದೆ. ಈ ಘಟನೆಯು ಅವರಿಗೆ ಸ್ವಸಾಮರ್ಥ್ಯದ ಮೇಲೆ ನಂಬಿಕೆಯಿಡುವುದನ್ನು ಕಲಿಸಿತ್ತು. ಅಂದಿನಿಂದ ಆಕೆ “ಧೈರ್ಯಶಾಲಿಯಾಗಿ” ಹೊರಹೊಮ್ಮಿದರು. ನಂತರ ಕಾರು ಮತ್ತು ಬೈಕ್ ಚಲಾಯಿಸುವುದನ್ನೂ ಕಲಿತರು.












