"ಇದು ಅಡುಗೆಮನೆಯಿಂದ ಶುರುವಾಯಿತು," ಎಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣದ ನಿವಾಸಿ ಅಜಿತ್ ರಾಘವ್ 2023ರ ಜನವರಿ 3ರ ಬೆಳಗ್ಗೆ ನಡೆದ ದುರದೃಷ್ಟಕರ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ ಹೇಳುತ್ತಾರೆ.
ಜೀಪ್ ಟ್ಯಾಕ್ಸಿ ಡ್ರೈವರ್ ಆಗಿರುವ 37 ವರ್ಷದ ಅವರು ಹೇಳುವ ಪ್ರಕಾರ, ಮೊದಲು ಅಡುಗೆಮನೆಯಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡವು ನಂತರ ಇದು ಮನೆಯ ಇತರ ಭಾಗಗಳಿಗೆ ಹರಡಿತು. ಅವರ ಎರಡು ಅಂತಸ್ತಿನ ಸಾಧಾರಣ ಮನೆಯಲ್ಲಿ, ಕನಿಷ್ಟ ಬಿರುಕುಗಳಿರುವ ಏಕೈಕ ಕೋಣೆಯನ್ನು ಕೂಡಲೇ ತಾತ್ಕಾಲಿಕ ಅಡುಗೆಮನೆಯಾಗಿ ಪರಿವರ್ತಿಸಲಾಯಿತು. ಎಂಟು ಜನರ ಕುಟುಂಬವು ತುರ್ತಾಗಿ ಮನೆಯಿಂದ ಹೊರಬಂದಿತು.
"ನಮ್ಮ ಇಬ್ಬರು ಹಿರಿಯ ಹೆಣ್ಣುಮಕ್ಕಳಾದ 12 ವರ್ಷದ ಐಶ್ವರ್ಯಾ ಮತ್ತು 9 ವರ್ಷದ ಸೃಷ್ಟಿಯನ್ನು ನನ್ನ ಅಕ್ಕನೊಂದಿಗೆ ಇರಲು ಕಳುಹಿಸಿದೆ," ಎಂದು ರಾಘವ್ ಹೇಳುತ್ತಾರೆ. ಕುಟುಂಬದ ಉಳಿದವರು - ರಾಘವ್, ಅವರ ಪತ್ನಿ ಗೌರಿ ದೇವಿ, ಆರು ವರ್ಷದ ಮಗಳು ಆಯೇಷಾ ಮತ್ತು ರಾಘವ್ ಅವರ ಇಬ್ಬರು ವಯಸ್ಸಾದ ಚಿಕ್ಕಮ್ಮಂದಿರು - ಇಲ್ಲಿಯೇ ಊಟ ಮಾಡುತ್ತಾರೆ. ಆದರೆ ಸಂಜೆಯ ಹೊತ್ತಿಗೆ ಅವರು ಹಿಮಾಲಯದ ಈ ಪಟ್ಟಣದಲ್ಲಿ ತಾತ್ಕಾಲಿಕ ಆಶ್ರಯವೆಂದು ಗೊತ್ತುಪಡಿಸಲಾಗಿರುವ ಹತ್ತಿರದ ಸಂಸ್ಕೃತ ಮಹಾವಿದ್ಯಾಲಯ ಶಾಲೆಯಲ್ಲಿ ಮಲಗಲು ಹೊರಡುತ್ತಾರೆ. ಸರಿಸುಮಾರು 25-30 ಸ್ಥಳಾಂತರಗೊಂಡ ಕುಟುಂಬಗಳಿಗೆ ಇಲ್ಲಿ ನೆಲೆ ಒದಗಿಸಲಾಗಿದೆ.
ಚಮೋಲಿ ಜಿಲ್ಲಾಡಳಿತ ಜನವರಿ 21, 2023ರಂದು ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ, ಜೋಶಿಮಠದ ಒಂಬತ್ತು ವಾರ್ಡುಗಳಲ್ಲಿ 181 ಕಟ್ಟಡಗಳನ್ನು ಅಸುರಕ್ಷಿತ ಎಂದು ಗುರುತಿಸಲಾಗಿದೆ, ಮತ್ತು 863 ಕಟ್ಟಡಗಳಲ್ಲಿ ಎದ್ದು ಕಾಣುವ ಬಿರುಕು ಕಂಡುಬಂದಿದೆ. ರಾಘವ್ ತನ್ನ ನೆರೆಹೊರೆಯ ಮನೆಗಳಲ್ಲಿನ ಬಿರುಕುಗಳನ್ನು ಪರಿಗೆ ತೋರಿಸಿದರು. "ಇಲ್ಲಿರುವ ಪ್ರತಿಯೊಂದು ಮನೆಯ ಕತೆಯೂ ಜೋಶಿಮಠದ ಕಥೆಯಾಗಿದೆ," ಎಂದು ಈ ಪರಿಸ್ಥಿತಿಗೆ ಕಾರಣವಾದ ಅನಿಯಂತ್ರಿತ ಬೆಳವಣಿಗೆಯನ್ನು ಉಲ್ಲೇಖಿಸಿ ಅವರು ಹೇಳುತ್ತಾರೆ.
ಜೋಶಿಮಠದಲ್ಲಿನ ಕಟ್ಟಡಗಳ ಗೋಡೆಗಳು, ಛಾವಣಿಗಳು ಮತ್ತು ಮಹಡಿಗಳಲ್ಲಿ 2023ರ ಜನವರಿ 3 ರಂದು ಬಿರುಕುಗಳು ಕಾಣಿಸಿಕೊಳ್ಳಲು ಪ್ರಾರಂಭವಾದವು ಎಂದು ರಾಘವ್ ಹೇಳುತ್ತಾರೆ. ಕೆಲವೇ ದಿನಗಳಲ್ಲಿ ಅದು ತೀವ್ರ ಬಿಕ್ಕಟ್ಟಿಗೆ ಕಾರಣವಾಯಿತು. ಅದೇ ಸಮಯದಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್ಆರ್‌ಎಸ್‌ಸಿ) ಜೋಶಿಮಠದಲ್ಲಿ ಕುಸಿಯುತ್ತಿರುವ ಭೂಮಿಯ ವಿಸ್ತಾರವನ್ನು ತೋರಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದೆ ಅದರಲ್ಲಿ 2022ರ ಡಿಸೆಂಬರ್ ಅಂತ್ಯ ಮತ್ತು ಜನವರಿ 2023ರ ಅಂತ್ಯದ ನಡುವೆ 5.4 ಸೆಂ. ಕುಸಿದಿರುವುದನ್ನು ಕಾಣಬಹುದಾಗಿತ್ತು. ಆದರೆ ಪ್ರಸ್ತುತ ಆ ಚಿತ್ರ ಎನ್‌ಆರ್‌ಎಸ್‌ಸಿ ವೆಬ್‌ಸೈಟಿನಲ್ಲಿ ಲಭ್ಯವಿಲ್ಲ.
ರಾಘವ್ ವಾಸಿಸುವ ಸಿಂಗ್ದಾರ್ ವಾರ್ಡಿನಲ್ಲಿ, 151 ರಚನೆಗಳನ್ನು ಗೋಚರ ಬಿರುಕುಗಳುಳ್ಳವು ಎಂದು ಗುರುತಿಸಲಾಗಿದೆ; 98 ಅಸುರಕ್ಷಿತ ವಲಯದಲ್ಲಿವೆ. ಅವೆಲ್ಲವೂ ವಾಸಿಸಲು ಸೂಕ್ತವಲ್ಲ ಮತ್ತು ಅವುಗಳ ಸುತ್ತಮುತ್ತ ಇರುವುದು ಅಸುರಕ್ಷಿತ ಎಂದು ಸೂಚಿಸಲು ಜಿಲ್ಲಾ ಅಧಿಕಾರಿಗಳು ಈ ರಚನೆಗಳನ್ನು ಕೆಂಪು ಕ್ರಾಸ್ ಗುರುತಿನಿಂದ ನಿಂದ ಗುರುತಿಸಿದ್ದಾರೆ.
ತನ್ನ ಇಡೀ ಬದುಕನ್ನು ಇಲ್ಲಿಯೇ ಕಳೆದಿರುವ ರಾಘವ್ ತನ್ನ ಮನೆಯ ಮೇಲೆ ಕೆಂಪು ಕ್ರಾಸ್ ಗುರುತು ಹಾಕದಂತೆ ತಡೆಯಲು ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ. “ಮನೆಯ ಮಹಡಿಯ ಮೇಲೆ ಕುಳಿತು ಬಿಸಿಲಿನಲ್ಲಿ ಬೆಟ್ಟಗಳನ್ನು ನೋಡುವುದಕ್ಕಾಗಿ ಮತ್ತೆ ಇಲ್ಲಿಗೆ ಬರಲು ಬಯಸುತ್ತೇನೆ,” ಎನ್ನುವ ಅವರು ಬಾಲ್ಯದಲ್ಲಿ ತಮ್ಮ ಹೆತ್ತವರು ಮತ್ತುಅಣ್ಣನೊಡನೆ ಇಲ್ಲಿ ವಾಸಿಸುತ್ತಿದ್ದರು. ಈಗ ಅವರೆಲ್ಲರೂ ನಿಧನರಾಗಿದ್ದಾರೆ.
“ಕೆಂಪು ಕ್ರಾಸ್ ಗುರುತು ಹಾಕಿದ ಮನೆಗಳನ್ನು ಅಧಿಕಾರಿಗಳು ಸೀಲ್ ಮಾಡುತ್ತಾರೆ [ಚಮೋಲಿ ಜಿಲ್ಲಾಡಳಿತದ ಅಧಿಕಾರಿಗಳು], ಇದರರ್ಥ ಜನರು ಇನ್ನು ಮುಂದೆ ಆ ಸ್ಥಳಕ್ಕೆ ಹಿಂತಿರುಗುವಂತಿಲ್ಲ,” ಎಂದು ಅವರು ಹೇಳುತ್ತಾರೆ.
ಅಂದು ರಾತ್ರಿಯಾಗುತ್ತಿತ್ತು. ಕುಟುಂಬ ಊಟ ಮುಗಿಸಿತ್ತು. ರಾಘವ್ ಅವರ ಚಿಕ್ಕಮ್ಮ ತಮ್ಮ ತಾತ್ಕಾಲಿಕ ಮನೆಯಾದ ಶಾಲೆಗೆ ಮಲಗಲೆಂದು ಹೊರಡಲು ತಯಾರಾಗುತ್ತಿದ್ದರು.
ಅವರ ಇಡೀ ಮನೆ ಅಸ್ತವ್ಯಸ್ತವಾಗಿ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿವೆ. ತೆರೆದ ಸೂಟ್‌ಕೇಸ್ ಒಂದರಲ್ಲಿ ಬಟ್ಟೆಗಳ ರಾಶಿ, ಖಾಲಿ ಬೀರುಗಳು, ನಡುಮನೆಗೆ ತಳ್ಳಲ್ಪಟ್ಟ ಫ್ರಿಡ್ಜ್, ಮನೆಯ ವಸ್ತುಗಳಿಂದ ತುಂಬಿದ ಸಣ್ಣ ಸಣ್ಣ ಚೀಲಗಳು, ಪ್ಲಾಸ್ಟಿಕ್ ಮತ್ತು ಸ್ಟೀಲ್ ಪಾತ್ರೆಗಳು ಹೀಗೆ ವಸ್ತುಗಳು ಸಾಗಿಸಲು ತಯಾರಾಗಿ ಕುಳಿತಿವೆ.
“ಸದ್ಯ ನನ್ನ ಬಳಿ [ಕೇವಲ] ಎರಡು ಸಾವಿರ ರೂಪಾಯಿಯ ಒಂದು ನೋಟು ಮಾತ್ರವೇ ಇದೆ. ಆದರೆ ಅದು ನನ್ನ ಎಲ್ಲಾ ವಸ್ತುಗಳನ್ನು ಟ್ರಕ್ಕಿನಲ್ಲಿ ಸಾಗಿಸಲು ಸಾಲುವುದಿಲ್ಲ,” ಎಂದು ರಾಘವ್ ಎತ್ತಲೋ ನೋಟ ಬೀರುತ್ತಾ ಹೇಳಿದರು.
“ ಸದ್ಯ ನನ್ನ ಬಳಿ [ಕೇವಲ] ಎರಡು ಸಾವಿರ ರೂಪಾಯಿಯ ಒಂದು ನೋಟು ಮಾತ್ರವೇ ಇದೆ. ಆದರೆ ಅದು ನನ್ನ ಎಲ್ಲಾ ವಸ್ತುಗಳನ್ನು ಟ್ರಕ್ಕಿನಲ್ಲಿ ಸಾಗಿಸಲು ಸಾಲುವುದಿಲ್ಲ,” ಎಂದು ರಾಘವ್ ಎತ್ತಲೋ ನೋಟ ಬೀರುತ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, "ನಾನು ಜೋಶಿಮಠವನ್ನು ತೊರೆಯುವುದಿಲ್ಲ. ನಾನು ಇಲ್ಲಿಂದ ಓಡಿಹೋಗುವುದಿಲ್ಲ. ಇದು ನನ್ನ ಪ್ರತಿಭಟನೆ, ನನ್ನ ಹೋರಾಟ.”
ಇದು ಜನವರಿ ಎರಡನೇ ವಾರದ ಮಾತು.
*****
ಒಂದು ವಾರದ ನಂತರ, ಜನವರಿ 20, 2023ರಂದು, ರಾಘವ್ ಇಬ್ಬರು ದಿನಗೂಲಿ ಕಾರ್ಮಿಕರನ್ನು ಕರೆತರಲು ಹೋಗಿದ್ದರು. ಹಿಂದಿನ ರಾತ್ರಿ, ಜೋಶಿಮಠದಲ್ಲಿ ಭಾರಿ ಹಿಮ ಬಿದ್ದಿದ್ದರಿಂದ ಪರಿಸ್ಥಿತಿ ಹದಗೆಟ್ಟಿತ್ತು, ಇದು ಅಸ್ಥಿರ ಮನೆಗಳನ್ನು ಹೊಂದಿರುವವರಿಗೆ ಇನ್ನೊಂದು ಸುತ್ತಿನ ಆತಂಕವನ್ನು ಹುಟ್ಟುಹಾಕಿತು. ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಅವರು ಮತ್ತು ಕಾರ್ಮಿಕರು ಹಾಸಿಗೆಗಳು ಮತ್ತು ಫ್ರಿಡ್ಜ್‌ನಂತಹ ಭಾರವಾದ ಗೃಹೋಪಯೋಗಿ ವಸ್ತುಗಳನ್ನು ಕಿರಿದಾದ ಓಣಿಗಳ ಮೂಲಕ ಸಾಗಿಸಿ ಟ್ರಕ್ ಒಂದಕ್ಕೆ ಲೋಡ್ ಮಾಡಿದರು.
“ಹಿಮ ಬೀಳುವುದು ನಿಂತಿತ್ತು ಆದರೆ ರಸ್ತೆಗಳು ಒದ್ದೆಯಾಗಿದ್ದ ಕಾರಣ ಜಾರುತ್ತಿತ್ತು. ನಾವು ಬೀಳುತ್ತಿದ್ದೆವು,” ಎಂದು ರಾಘವ್ ಹೇಳಿದರು. “ನಮಗೆ ವಸ್ತುಗಳನ್ನು ಸಾಗಿಸುವುದು ಕಷ್ಟವಾಗುತ್ತಿದೆ.” ಅವರು ತಮ್ಮ ಕುಟುಂಬವನ್ನು ಅಲ್ಲಿಂದ 60 ಕಿಲೋಮೀಟರ್ ದೂರದ ನಂದ ಪ್ರಯಾಗ್ ಎನ್ನುವಲ್ಲಿಗೆ ಸ್ಥಳಾಂತರಿಸುತ್ತಿದ್ದರು. ಅಲ್ಲಿ ಅವರ ಸಹೋದರಿಯೊಬ್ಬರ ಮನೆಯಿದ್ದು ಅಲ್ಲೇ ಹತ್ತಿರದಲ್ಲಿ ಎಲ್ಲಾದರೂ ಬಾಡಿಗೆ ಮನೆ ಮಾಡುವ ಯೋಚನೆಯಲ್ಲಿದ್ದಾರೆ.
ಜೋಶಿಮಠ ಪಟ್ಟಣದ ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಹಿಮದ ದಪ್ಪ ಪದರವು ಆವರಿಸಿದ್ದರೂ, ಹೊರಗಿನ ಗೋಡೆಗಳ ಮೇಲೆ ದಪ್ಪವಾಗಿ ಬರೆಯಲಾಗಿರುವ ಕೆಂಪು ಶಿಲುಬೆಗಳಂತಹ ಚಿತ್ರಗಳು ಮತ್ತು ಬಿರುಕುಗಳು ಪ್ರಮುಖವಾಗಿ ಎದ್ದು ಕಾಣುತ್ತವೆ. ಅಡಿಪಾಯದಲ್ಲಿ ಆಳವಾದ ಬಿರುಕುಗಳು ಕಂಡುಬಂದಿರುವ ಇಲ್ಲಿನ ಹಲವು ಮನೆಗಳು, ಅಂಗಡಿಗಳು ಮತ್ತು ಸ್ಥಾಪನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.
43 ವರ್ಷದ ರಂಜಿತ್ ಸಿಂಗ್ ಚೌಹಾಣ್ ಅವರು ಸುನಿಲ್ ವಾರ್ಡಿಲ್ಲಿರುವ ತಮ್ಮ ಎರಡು ಅಂತಸ್ತಿನ ಮನೆಯ ಹಿಮದಿಂದ ಆವೃತವಾದ ಆವರಣದಲ್ಲಿ ನಿಂತಿದ್ದರು. ಸಿಂಗ್ ಮತ್ತು ಅವರ ಪತ್ನಿ ಮತ್ತು ಮೂವರು ಮಕ್ಕಳಿಗೆ ಹತ್ತಿರದ ಹೋಟೆಲ್ಲಿನಲ್ಲಿ ತಾತ್ಕಾಲಿಕ ಆಶ್ರಯ ನೀಡಲಾಗಿದೆ. ಅವರ ಹೆಚ್ಚಿನ ವಸ್ತುಗಳು ಅವರ ಮನೆಯಲ್ಲಿಯೇ ಉಳಿದಿವೆ. ಹಿಮಪಾತದ ಹೊರತಾಗಿಯೂ, ಕಳ್ಳತನವಾಗದಂತೆ ಕಣ್ಣಿಡಲು ಸಿಂಗ್ ಪ್ರತಿದಿನ ಮನೆಗೆ ಭೇಟಿ ನೀಡುತ್ತಾರೆ.
"ನಾನು ನನ್ನ ಕುಟುಂಬವನ್ನು ಡೆಹ್ರಾಡೂನ್ ಅಥವಾ ಶ್ರೀನಗರಕ್ಕೆ ಸ್ಥಳಾಂತರಿಸಲು ಪ್ರಯತ್ನಿಸುತ್ತೇನೆ - ಎಲ್ಲಿಯಾದರೂ ಸುರಕ್ಷಿತವೆನ್ನಿಸುತ್ತದೋ ಅಲ್ಲಿಗೆ," ಎಂದು ಅವರು ಹೇಳುತ್ತಾರೆ. ಚೌಹಾಣ್ ಬದರೀನಾಥದಲ್ಲಿ ಹೋಟೆಲ್ ನಡೆಸುತ್ತಿದ್ದಾರೆ, ಇದು ಬೇಸಿಗೆಯ ತಿಂಗಳುಗಳಲ್ಲಿ ತೆರೆದಿರುತ್ತದೆ. ಈಗ ಅವರಿಗೆ ಮುಂದೇನು ಎಂಬುದರ ಕುರಿತು ಖಚಿತವಿಲ್ಲ. ಆದರೆ ಅವರಿಗೆ ಒಂದು ವಿಷಯ ಖಚಿತವಾಗಿದೆ - ಅದು ಸುರಕ್ಷಿತವಾಗಿರಬೇಕಾದ ಅಗತ್ಯ. ಏತನ್ಮಧ್ಯೆ, ಉತ್ತರಾಖಂಡ ಸರ್ಕಾರವು ಜನವರಿ 11, 2023ರಂದು ಘೋಷಿಸಿದ 1.5 ಲಕ್ಷ ರೂ.ಗಳ ಮಧ್ಯಂತರ ಪರಿಹಾರಕ್ಕಾಗಿ ಅವರು ಕಾಯುತ್ತಿದ್ದಾರೆ.
ಕುಸಿಯುತ್ತಿರುವ ಹಿಮಾಲಯದ ಈ ಪಟ್ಟಣದಲ್ಲಿ ಎಲ್ಲೆಡೆ ಹಣದ ಕೊರತೆಯಿದೆ. ರಾಘವ್ ತನ್ನ ಮನೆಯ ನಷ್ಟವನ್ನು ಮಾತ್ರವಲ್ಲ, ಅದರಲ್ಲಿ ಹೂಡಿಕೆ ಮಾಡಿದ ಹಣದ ಪಾಲನ್ನು ಸಹ ಕಳೆದುಕೊಳ್ಳುತ್ತಿದ್ದಾರೆ. "ಹೊಸ ಮನೆ ನಿರ್ಮಿಸಲು ನಾನು 5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇನೆ. ನಾನು ಇನ್ನೂ 3 ಲಕ್ಷ ಸಾಲಗಳನ್ನು ತೆಗೆದುಕೊಂಡಿದ್ದೇನೆ, ಅದನ್ನು ತೀರಿಸಬೇಕಿದೆ," ಎಂದು ಅವರು ಹೇಳುತ್ತಾರೆ. ಅವರು ಕೆಲವು ಯೋಜನೆಗಳನ್ನು ಸಹ ಹಾಕಿಕೊಂಡಿದ್ದರು. ಗ್ಯಾರೇಜ್ ತೆರೆಯುವುದು ಮತ್ತು ತನ್ನ ಎಡಗಣ್ಣು ಸರಿಯಾಗಿ ಕಾಣದ ಕಾರಣ ತನ್ನ ಡ್ರೈವಿಂಗ್ ಕೆಲಸವನ್ನು ಬಿಡುವುದು ಅವುಗಳಲ್ಲಿ ಕೆಲವು. "ಈಗ ಎಲ್ಲವೂ ನಾಶವಾಯಿತು."
*****
ರಾಷ್ಟ್ರೀಯ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್‌ಟಿಪಿಸಿ) ತಪೋವನ್ ವಿಷ್ಣುಗಡ್ ಜಲವಿದ್ಯುತ್ ಸ್ಥಾವರಕ್ಕಾಗಿ ಇತ್ತೀಚೆಗೆ ಸುರಂಗ ಕೊರೆಯುವುದು ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಿಂದಾಗಿ ಈ ಹಾನಿ ಸಂಭವಿಸಿದೆ. ಪ್ರಸ್ತುತ, ಉತ್ತರಾಖಂಡದಲ್ಲಿ ಸರಿಸುಮಾರು 42 ಕಾರ್ಯಾಚರಿಸುತ್ತಿರುವ ಜಲವಿದ್ಯುತ್ ಯೋಜನೆಗಳಿವೆ. ಜೋಶೀಮಠಕ್ಕೆ ಜಲವಿದ್ಯುತ್ ಕಾರಣಕ್ಕೆ ದುರಂತ ಎದುರಾಗುತ್ತಿರುವುದು ಇದೇ ಮೊದಲೇನಲ್ಲ .
ಪಟ್ಟಣದ ಇತರರ ಜೊತೆ ರಾಘವ್ ಕೂಡಾ ತಹಸಿಲ್ ಕಚೇರಿಯೆದುರು ಎನ್‌ಟಿಪಿಸಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ ಮೊದಲಿಗರಲ್ಲಿ ಒಬ್ಬರಾದ ಅನಿತಾ ಲಾಂಬಾ (30), "ನಮ್ಮ ಮನೆಗಳು ಹಾಳಾಗಿವೆ, ಆದರೆ ನಮ್ಮ ಪಟ್ಟಣವು ನಿರ್ಜನವಾಗಬಾರದು," ಎಂದು ಹೇಳುತ್ತಾರೆ. ಅಂಗನವಾಡಿ ಶಿಕ್ಷಕರಾದ ಇವರು ಮನೆಮನೆಗೂ ತೆರಳಿ “ಎನ್‌ಟಿಪಿಸಿ ಯೋಜನೆಯನ್ನು ರದ್ದುಗೊಳಿಸಲು ಹೋರಾಡಿ,” ಎಂದು ಜನರನ್ನು ಸಂಘಟಿಸುತ್ತಿದ್ದಾರೆ.
ವಾಟರ್ ಅಂಡ್ ಎನರ್ಜಿ ಇಂಟರ್ನ್ಯಾಷನಲ್ ಪತ್ರಿಕೆಯಲ್ಲಿ ಪ್ರಕಟವಾದ 'ಭಾರತ ಹಿಮಾಲಯದ ಉತ್ತರಾಖಂಡ ಪ್ರದೇಶದಲ್ಲಿ ಜಲವಿದ್ಯುತ್ ಅಭಿವೃದ್ಧಿ ' ಕುರಿತ 2017ರ ಲೇಖನದಲ್ಲಿ, ಲೇಖಕರಾದ ಸಂಚಿತ್ ಸರನ್ ಅಗರ್ವಾಲ್ ಮತ್ತು ಎಂ.ಎಲ್. ಕನ್ಸಾಲ್ ಉತ್ತರಾಖಂಡದ ಜಲವಿದ್ಯುತ್ ಯೋಜನೆಗಳಿಂದ ಉಂಟಾಗುವ ಪರಿಸರ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಇದಲ್ಲದೆ, ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ನಿರ್ಮಿಸುತ್ತಿರುವ ಚಾರ್ ಧಾಮ್ ಯೋಜನೆ ಮತ್ತು ಹೆಲಾಂಗ್ ಬೈಪಾಸ್ ನಿರ್ಮಾಣವು ಇಲ್ಲಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಜೋಶಿಮಠದಲ್ಲಿ ಮತ್ತೊಂದು ಧರಣಿ ಆರಂಭಿಸಿದವರು ಪರಿಸರ ಹೋರಾಟಗಾರರಾದ ಅತುಲ್ ಸತಿ. ಬದರಿನಾಥ ಯಾತ್ರೆಯನ್ನು ಜನಪ್ರಿಯಗೊಳಿಸಲು ಹೋಟೆಲ್‌ಗಳು ಮತ್ತು ವಾಣಿಜ್ಯ ಕಟ್ಟಡಗಳ ತ್ವರಿತ ನಿರ್ಮಾಣವು ಭೂಮಿಯ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳುತ್ತಾರೆ. ಈ ಪಟ್ಟಣವು ಬದರಿನಾಥ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ನೆಲೆಯಾಗಿದೆ - ಇದು ಪ್ರಮುಖ ಧಾರ್ಮಿಕ ಸ್ಥಳ ಮತ್ತು ಪರ್ವತಾರೋಹಣ ಕ್ರೀಡೆಗಳಿಗೂ ನೆಚ್ಚಿನ ತಾಣವಾಗಿದೆ. 2021ರಲ್ಲಿ, ಎರಡು ನಗರಗಳು ಒಟ್ಟು 3.5 ಲಕ್ಷ ಪ್ರವಾಸಿಗರ ಆಗಮನವನ್ನು ಕಂಡಿವೆ, ಇದು ಜೋಶಿಮಠದ ಜನಸಂಖ್ಯೆಯ 10 ಪಟ್ಟು ಹೆಚ್ಚು (ಜನಗಣತಿ 2011).
*****
ರಾಘವ್ ಮೂರು ಊದುಬತ್ತಿಗಳನ್ನ ಹಚ್ಚಿ ಸ್ಟ್ಯಾಂಡಿನಲ್ಲಿ ಇಟ್ಟಿದ್ದರು. ಅದರ ಪರಿಮಳ ಕೋಣೆಯನ್ನು ತುಂಬಿತ್ತು.
ಅವರ ಮನೆಯ ಎಲ್ಲಾ ವಸ್ತುಗಳು ಈಗ ಪ್ಯಾಕಿಂಗ್ ಹಂತದಲ್ಲಿವೆ, ಆದರೆ ದೇವತೆಗಳ ಚಿತ್ರಗಳನ್ನು ಮತ್ತು ಆಟಿಕೆಗಳನ್ನು ಇದುವರೆಗೆ ಮುಟ್ಟಿಲ್ಲ. ಕತ್ತಲೆ ಮತ್ತು ಮುಂದಿನ ವಿನಾಶದ ಅರಿವಿನ ನಡುವೆಯೂ, ಅವರ ಕುಟುಂಬವು ಚಳಿಗಾಲದ ಅಂತ್ಯವನ್ನು ಸೂಚಿಸುವ ಚುನ್ಯಾತ್ಯಾರ್ ಎನ್ನುವ ಸುಗ್ಗಿಯ ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದೆ. ಚುನ್ನಿ ರೊಟ್ಟಿ ಒಂದು ರೀತಿಯ ಚಪ್ಪಟೆ ರೊಟ್ಟಿಯಾಗಿದ್ದು ಇದನ್ನು ಹಬ್ಬದ ಸಮಯದಲ್ಲಿ ಮಾಡಿ ತಿನ್ನಲಾಗುತ್ತದೆ.
ಕರಗುತ್ತಿರುವ
ಸಂಜೆಯ ಬೆಳಕಿನಲ್ಲಿ ಆಯೇಷಾ ತನ್ನ ಅಪ್ಪ ಕೂಗುತ್ತಿದ್ದ ಘೋಷಣೆಯನ್ನು ಪುನರುಚ್ಛರಿಸುತ್ತಿದ್ದಳು:
“
ಚುನ್ನಿ ರೋಟಿ ಖಾಯೇಂಗೆ, ಜೋಶಿಮಠ್ ಬಚಾಯೇಂಗೆ
[ಚುನ್ನಿ ರೊಟ್ಟಿ ತಿನ್ತೀವಿ;
ಜೋಶಿಮಠ ಉಳಿಸ್ತೀವಿ
ಮನೀಶ್ ಉನ್ನಿಯಾಲ್ ದೆಹಲಿ ಮೂಲದ ಛಾಯಾಗ್ರಾಹಕ ಮತ್ತು ವಿಡಿಯೋಗ್ರಾಫರ್.
ಅನುವಾದ: ಶಂಕರ. ಎನ್. ಕೆಂಚನೂರು