ಜೀವನ್ಭಾಯ್ ಬರಿಯಾ ಅವರಿಗೆ ನಾಲ್ಕು ವರ್ಷಗಳಲ್ಲಿ ಎರಡು ಬಾರಿ ಹೃದಯಾಘಾತವಾಗಿತ್ತು. 2018 ರಲ್ಲಿ ಮೊದಲನೆಯ ಬಾರಿ ಹೃದಯಾಘಾತವಾದಾಗ ಅವರು ಮನೆಯಲ್ಲಿದ್ದರು. ಅವರ ಪತ್ನಿ ಗಭಿಬೆನ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಏಪ್ರಿಲ್ 2022 ರಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯುವ ಟ್ರಾಲರೊಂದನ್ನು ನಡೆಸುತ್ತಿದ್ದ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತು. ಅವರ ಜೊತೆಯಲ್ಲಿ ಇದ್ದವರು ಸ್ಟೇರಿಂಗನ್ನು ಅವರ ಕೈಯಿಂದ ತೆಗೆದುಕೊಂಡರೆ ಇನ್ನೊಬ್ಬರು ಜೀವನ್ಭಾಯ್ ಬರಿಯಾ ಅವರಿಗೆ ಮಲಗಲು ಸಹಾಯ ಮಾಡಿದರು. ಅವರು ಸುಮಾರು ಐದು ಗಂಟೆಗಳ ಕಾಲ ಸಮುದ್ರದಲ್ಲಿಯೇ ಇದ್ದರು. ಜೀವನ್ಭಾಯ್ ಆ ಎರಡೂ ಬಾರಿಯೂ ಬದುಕಿ ಉಳಿದರು.
ಗಭಿಬೆನ್ ಅವರ ದುಸ್ವಪ್ನ ಒಂದು ದಿನ ನಿಜವಾಯಿತು.
ಮೊದಲ ಹೃದಯಾಘಾತವಾಗಿ ಒಂದು ವರ್ಷದ ನಂತರ ಜೀವನ್ಭಾಯ್ ಮೀನುಗಾರಿಕೆಯನ್ನು ಮತ್ತೆ ಆರಂಭಿಸಿದ್ದು ಗಭಿಬೆನ್ ಅವರಿಗೆ ಹೆಚ್ಚು ಆತಂಕ ಉಂಟುಮಾಡಿತ್ತು. ಇದು ಅಪಾಯಕಾರಿ ಎಂದು ಅವರಿಗೆ ಗೊತ್ತಿತ್ತು. ಜೀವನಭಾಯಿಯವರಿಗೆ ಕೂಡ ಆ ಭಯ ಇತ್ತು. ಗುಜರಾತ್ನ ಅಮ್ರೇಲಿ ಜಿಲ್ಲೆಯ ಸಣ್ಣ ಕರಾವಳಿ ಪಟ್ಟಣವಾದ ಜಫ್ರಾಬಾದ್ನಲ್ಲಿರುವ ತನ್ನ ಮಂದಬೆಳಕಿನ ಗುಡಿಸಲಿನಲ್ಲಿ ಕುಳಿತುಕೊಂಡು "ನಾನು ಅವರಿಗೆ ಇದು ಬೇಡ ಎಂದು ಹೇಳಿದ್ದೆ" ಎಂದು ಗಭಿಬೆನ್ ಹೇಳುತ್ತಾರೆ.
ಆದರೆ ಊರಿನ ಬಹುತೇಕರಂತೆ 60ರ ಹರೆಯದ ಜೀವನ್ಭಾಯ್ಗೆ ಮೀನುಗಾರಿಕೆ ಬಿಟ್ಟರೆ ಬೇರೆ ಕೆಲಸವೇ ಗೊತ್ತಿರಲಿಲ್ಲ. ಈ ವೃತ್ತಿಯಿಂದ ಪ್ರತೀ ವರ್ಷಕ್ಕೆ ಸುಮಾರು 2 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದರು. "ಅವರು 40 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದರು. ಹೃದಯಾಘಾತದ ನಂತರ ಅವರು ಒಂದು ವರ್ಷ ಮನೆಯಲ್ಲಿಯೇ ಇದ್ದಾಗ ನಾನು ನಮ್ಮ ಮನೆ ನಡೆಸಲು [ಇತರ ಮೀನುಗಾರರ ಮೀನುಗಳನ್ನು ಒಣಗಿಸುವ ಕೆಲಸ] ಕೂಲಿ ಕೆಲಸ ಮಾಡಿದೆ. ಅವರು ಚೇತರಿಸಿಕೊಳ್ಳುತ್ತಿದ್ದಂತೆ ಮೆತ್ತೆ ಕೆಲಸಕ್ಕೆ ಹೋಗಲು ತೀರ್ಮಾನಿಸಿದರು." ಎಂದು 55 ವರ್ಷದ ಗಭಿಬೆನ್ ಹೇಳುತ್ತಾರೆ.
ಜೀವನ್ಭಾಯ್ ಜಾಫ್ರಾಬಾದ್ನಲ್ಲಿ ದೊಡ್ಡ ಮೀನುಗಾರರೊಬ್ಬರ ಒಡೆತನದ ಟ್ರಾಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮಾನ್ಸೂನ್ ಸಮಯವನ್ನು ಹೊರತುಪಡಿಸಿ ವರ್ಷದ ಎಂಟು ತಿಂಗಳುಗಳ ಕಾಲ ಕಾರ್ಮಿಕರು ಈ ಟ್ರಾಲರ್ಗಳನ್ನು ಅರಬ್ಬಿ ಸಮುದ್ರಕ್ಕೆ ಕೊಂಡೊಯ್ದು 10-15 ದಿನಗಳ ಕಾಲ ಮೀನು ಹಿಡಿಯುತ್ತಾರೆ. ಆಗ ಆ ಎರಡು ವಾರಗಳಿಗೆ ಬೇಕಾಗುವಷ್ಟು ನೀರು ಮತ್ತು ಆಹಾರವನ್ನು ಒಯ್ಯುತ್ತಾರೆ.
"ತುರ್ತು ಸೇವೆಗಳಿಲ್ಲದೆ ತುಂಬಾ ದಿನಗಳ ವರೆಗೆ ದೂರ ಸಮುದ್ರದಲ್ಲಿ ಇರುವುದು ಎಂದಿಗೂ ಸುರಕ್ಷಿತವಲ್ಲ. ಹೃದ್ರೋಗಿಗಳಿಗೆ ಇದು ಅಪಾಯಕಾರಿ. ಅವರ ಬಳಿ ಇರುವುದು ಕೇವಲ ಪ್ರಥಮ ಚಿಕಿತ್ಸಾ ಕಿಟ್ ಮಾತ್ರ," ಎಂದು ಗಭಿಬೆನ್ ಹೇಳುತ್ತಾರೆ.














