ಒಂಟಿತನವು ಜಿಗರ್ ದೇದ್ ಪಾಲಿಗೆ ಹೊಸದಲ್ಲ. ಅವರು ಶ್ರೀನಗರದ ದಾಲ್ ಸರೋವರದ ಘಾಟ್‌ನಲ್ಲಿ ತನ್ನ ದೋಣಿಯ ಪಕ್ಕದ ಮರದ ಗುಡಿಸಲಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಾರೆ. ಮೊದಲು ಪತಿ ನಿಧನರಾದರು ಮತ್ತು ನಂತರ ಅವರ ಮಗ. ಇದೆಲ್ಲ ಮುಗಿದು ಆಗಲೇ ಮೂವತ್ತು ವರ್ಷವಾಗಿದೆ. ಈ ಅವಧಿಯಲ್ಲಿ ಅವರು ಹಲವು ರೀತಿಯ ಕಷ್ಟಗಳನ್ನು ಒಬ್ಬರೇ ಎದುರಿಸಿದ್ದಾರೆ.
ಆದರೂ, ಅವರು ಹೇಳುತ್ತಾರೆ, “ನಾನು ಕಳೆದ ಮೂವತ್ತು ವರ್ಷಗಳಿಂದ ಏಕಾಂಗಿಯಾಗಿ ವಾಸಿಸುತ್ತಿದ್ದೇನೆ, ಆದರೆ ಹಿಂದೆಂದೂ ನಾನು ಕಳೆದ ಒಂದು ವರ್ಷದಲ್ಲಿ ಅನುಭವಿಸಿದಷ್ಟು ಕಷ್ಟಗಳನ್ನು ಅನುಭವಿಸಿಲ್ಲ. ಶಟ್‌ಡೌನ್‌ನ ನಂತರ ಒಂದಿಷ್ಟು ಪ್ರವಾಸಿಗರು ಬರಲು ಪ್ರಾರಂಭಿಸಿದ್ದರು ಆದರೆ ತಕ್ಷಣ ಈ ಕರೋನಾ ಬಂದು ಲಾಕ್ ಡೌನ್ ಪ್ರಾರಂಭವಾಯಿತು. ಈಗ ನಾವೆಲ್ಲರೂ ಸೆರೆಯಾಳುಗಳಂತೆ ಬದುಕುತ್ತಿದ್ದೇವೆ.
ಆಗಸ್ಟ್ 5, 2019 ರಂದು ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿತು ಮತ್ತು ಅದರ ನಂತರ ವಿಧಿಸಲಾದ ನಿಷೇಧವು ಇಲ್ಲಿನ ಜನರಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. "ಅಂದಿನಿಂದ, ಒಬ್ಬ ಪ್ರವಾಸಿಯೂ ಬಂದಿಲ್ಲ" ಎಂದು ಜಿಗರ್ ಹೇಳುತ್ತಾರೆ. ಆ ಸಮಯದಲ್ಲಿ, ಸ್ಥಳೀಯರನ್ನು ಹೊರತುಪಡಿಸಿ ಎಲ್ಲರೂ ಹಿಂತಿರುಗಬೇಕು ಎಂದು ಅಧಿಕೃತ ಪ್ರಕಟಣೆ ಹೊರಡಿಸಲಾಗಿತ್ತು, ಸಹಜವಾಗಿ ಪ್ರವಾಸಿಗರು ಸಹ ಮರಳಿದರು. "ಇದರಿಂದ ನಾವು ಅಕ್ಷರಶಃ ಕುಸಿದು ಹೋದೆವು" ಎಂದು ಅವರು ಹೇಳುತ್ತಾರೆ. "ಇದು ನನ್ನ ವ್ಯವಹಾರದ ದೊಡ್ಡ ನಷ್ಟಕ್ಕೆ ಕಾರಣವಾಗಿದ್ದಲ್ಲದೆ ಈಗಾಗಲೇ ನಾಶವಾಗಿದ್ದ ಬದುಕನ್ನು ಇನ್ನಷ್ಟು ದುಸ್ತರಗೊಳಿಸಿತು."
ಅಂದು ಬದುಕು ಸರ್ವನಾಶವಾಗಿ ತಾನು ದೀರ್ಘಕಾಲದ ಒಂಟಿ ಜೀವನದ ಪ್ರಪಾತಕ್ಕೆ ತಳ್ಳಲ್ಪಟ್ಟಿದ್ದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ ಜಿಗರ್ "ಅಂದು ನನ್ನ ತಂಗಿಯ ನಿಶ್ಚಿತಾರ್ಥವಿತ್ತು. ಕುಟುಂಬದವರೆಲ್ಲ ಒಂದೆಡೆ ಸೇರಿ ಹಾಡು, ನೃತ್ಯಗಳ ನಡುವೆ ಸಂಭ್ರಮದಲ್ಲಿದ್ದರು. ಆಗ ನನ್ನ ಪತಿ ಅಲಿ ಮಹಮದ್ ತುಲ್ಲಾ ನನ್ನ ಬಳಿ ಬಂದು ತನಗೆ ಎದೆ ನೋವೆಂದು ಹೇಳಿದರು. ನಂತರ ಅವರನ್ನು ನನ್ನ ಮಡಿಲಿನಲ್ಲಿ ಮಲಗಿಸಿಕೊಂಡಾಗ ಅವರ ದೇಹವು ತಣ್ಣಗಾಗುತ್ತಿರುವಂತೆ ಅನ್ನಿಸಿತು... ಆ ಕ್ಷಣಕ್ಕೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವವಾಯಿತು" ಎಂದು ಜಿಗರ್ ಹೇಳುತ್ತಾರೆ. ಅವರು ಸುಮಾರು ಎಂಬತ್ತರ ಹರೆಯದಲ್ಲಿರಬಹುದು.
50ರ ಪ್ರಾಯದಲ್ಲಿದ್ದ ಅಲಿ ಮೊಹಮ್ಮದ್ ಅವರ ಏಕೈಕ ಮಗ ಮಂಜೂರ್‌ನನ್ನು ಜಿಗರ್ ಅವರೊಂದಿಗೆ ಬಿಟ್ಟು "ವ್ಯಥೆಯ ಜೀವನ ನಡೆಸುವಂತೆ ಮಾಡಿ ಹೋದರು." ಪ್ರೀತಿಯಿಂದ ಮನ್ನಾ ಎಂದು ಕರೆಯಲ್ಪಡುತ್ತಿದ್ದ ಮಂಜೂರ್‌ಗೆ ಆಗ ಕೇವಲ 17 ವರ್ಷವಾಗಿತ್ತು. ಆಗ ಅವರು ತಮ್ಮ ಜೀವನೋಪಾಯಕ್ಕಾಗಿ ನಾಲ್ಕು ಕೋಣೆಗಳ ಇಂದೂರ್ ಹೊಂದಿದ್ದರು. ಅದನ್ನು ಅವರ ಗುಡಿಸಲಿನಿಂದ ಸ್ವಲ್ಪ ದೂರದ ಚಿಕ್ಕ ಸೇತುವೆಯ ಬಳಿ ನಿಲ್ಲಿಸಲಾಗಿತ್ತು.
"ನಮ್ಮ ಮಗನು ನಮ್ಮ ದೋಣಿಯಲ್ಲಿ ಉಳಿಯಲು ಪ್ರವಾಸಿಗರನ್ನು ಕರೆತರಲು ಹೊರಡುವ ಮೊದಲು, ಅವನು ನಮ್ಮ ನೆರೆಹೊರೆಯವರಿಗೆ ನನ್ನನ್ನು ನೋಡಿಕೊಳ್ಳಲು ಹೇಳುತ್ತಿದ್ದನು, ಏಕೆಂದರೆ ನಾನು ಅವನ ತಂದೆಯನ್ನು ನೆನೆದು ಅಳುತ್ತಿರುತ್ತೇನೆಂದು ಅವನಿಗೆ ತಿಳಿದಿತ್ತು" ಎಂದು ತನ್ನ ಒಂದು ಕೋಣೆಯ ಗುಡಿಸಲಿನಲ್ಲಿ ಕುಳಿತು ಹೊರಗರ ನೋಡುತ್ತಾ ಜಿಗರ್ ಹೇಳುತ್ತಾರೆ. ಅವರ ಕೋಣೆಯ ಮರದ ಗೋಡೆಯಲ್ಲಿ ಅವರ ಪತಿ ಮತ್ತು ಮಗನ ಫೋಟೊ ನೇತು ಹಾಕಲಾಗಿತ್ತು.
ಅಲಿ ತೀರಿಕೊಂಡ ಕೇವಲ ಏಳು ತಿಂಗಳ ಅಂತರದಲ್ಲಿ ಮಗ ಮಂಜೂರ್ ಕೂಡಾ ತೀರಿಕೊಂಡ. ಅವರು ಪತಿ ತೀರಿಕೊಂಡ ದುಃಖದಲ್ಲಿರುವಾಗಲೇ ಮಗನ ಸಾವೂ ಸಿಡಿಲಿನಂತೆ ಎರಗಿತ್ತು. ಜಿಗರ್‌ಗೆ ತನ್ನ ಮಗ ತೀರಿಕೊಂಡ ದಿನ ಮತ್ತು ಕಾರಣ ನೆನಪಿಲ್ಲ. ಆದರೆ ತನ್ನ ಮಗನ ಸಾವಿಗೆ ಕಾರಣ ಅವನ ತಂದೆಯ ಸಾವಿನ ನೆನಪು ಎನ್ನುವುದು ಅವರ ನಂಬಿಕೆ.
"ಅಂದು ನನ್ನ ಇಡೀ ಪ್ರಪಂಚವೇ ನನ್ನ ಕಣ್ಣುಗಳ ಮುಂದೆ ತಲೆಕೆಳಗಾಗಿತ್ತು" ಎಂದು ಅವರು ಹೇಳುತ್ತಾರೆ. "ನನ್ನ ಬದುಕಿನ ಇಬ್ಬರು ನಾಯಕರು ತಮ್ಮ ನೆನಪುಗಳಿಂದ ತುಂಬಿದ ಬೋಟ್‌ಹೌಸ್‌ನೊಂದಿಗೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಿದ್ದರು. ಈ ನೆನಪುಗಳು, ನನ್ನನ್ನು ಯಾವಾಗಲೂ ಕಾಡುತ್ತಲೇ ಇರುತ್ತವೆ. ನನ್ನ ಕಾಯಿಲೆಗಳಿಂದಾಗಿ, ನನ್ನ ಹೆಚ್ಚಿನ ನೆನಪುಗಳು ಮರೆಯಾದವು, ಆದರೆ ನನ್ನನ್ನು ಕಾಡುವ ಈ ನೆನಪುಗಳು ಪ್ರತಿದಿನವೂ ಹೊಸದಾಗಿ ಮೂಡುತ್ತವೆ.”
ನಾವು ಮಾತನಾಡುತ್ತಿರುವಾಗ ಅವರೊಳಗಿನಿಂದ ಕೆಲವು ನೆನಪುಗಳು ಎದ್ದುಬಂದವು "ನನ್ನ ಮಗ ಇಲ್ಲಿ ಮಲಗುತ್ತಿದ್ದ." ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಅವನು ಬಹಳ ತುಂಟ ಹುಡುಗನಾಗಿದ್ದ. ಒಬ್ಬನೇ ಮಗನಾಗಿದ್ದರಿಂದ ತಂದೆ ತಾಯಿಯ ಜೊತೆ ಬಹಳ ಹಟ ಮಾಡುತ್ತಿದ್ದ. ನನಗೆ ಈಗಲೂ ನೆನಪಿದೆ, ಒಮ್ಮೆ ನಾವು ಅವನಿಗೆ ಹೇಳದೆ ಒಂದು ಸೋಫಾ ಖರೀದಿಸಿದ್ದಕ್ಕಾಗಿ ನಾನು ಮತ್ತು ಅವನ ತಂದೆ ಅವನ ಬಳಿ ಕ್ಷಮೆ ಕೇಳುವ ತನಕ ಅವನು ಊಟ ಮಾಡಿರಲಿಲ್ಲ. ಓಹ್, ದೇವರೇ ನನ್ನ ಮಗನನ್ನು ಹೇಗೆ ಮರೆಯಲಿ!"
ಅಂದಿನಿಂದ ಜಿಗರ್ ದೇಡ್ ಒಂಟಿಯಾಗಿ ದಾಲ್ ಸರೋವರದ ನೀರಿನ ಮೇಲೆ ಏಕಾಂಗಿಯಾಗಿ ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಪತಿ ಬಿಟ್ಟುಹೋದ ದೋಣಿ ದೋಣಿಯಿಂದ ಪ್ರವಾಸಿ ಋತು ಏಪ್ರಿಲ್‌ನಿಂದ ಆಗಸ್ಟ್ ತನಕ ತಿಂಗಳಿಗೆ 15,000-20,000 ರೂ ಆದಾಯವನ್ನು ಗಳಿಸುತ್ತಾರೆ.
ಕಳೆದ ವರ್ಷದ ನಿಷೇಧಾಜ್ಞೆ ಮತ್ತು ಗಳಿಕೆ ನಷ್ಟದೊಂದಿಗೆ ಜಿಗರ್ ಆಗಸ್ಟ್ 2019ರ ಎರಡು ತಿಂಗಳ ನಂತರ ಇನ್ನೊಂದು ಆಘಾತವನ್ನು ಎದುರಿಸಬೇಕಾಯಿತು. ಅದು ಅವರ ಬೋಟ್‌ಹೌಸ್‌ನಲ್ಲಿ ಅವರ ದೀರ್ಘಕಾಲದ ಸಹಾಯಕನಾಗಿದ್ದ ಗುಲಾಮ್ ರಸೂಲ್ ಕೆಲಸ ಬಿಟ್ಟು ಹೋಗಿದ್ದು. "ರಸೂಲ್ ನನ್ನ ಪಾಲಿಗೆ ಮಗನಂತಿದ್ದ. ಅವನು ಪ್ರವಾಸಿಗರ ಬೇಕು ಬೇಡಗಳನ್ನು ಗಮನಿಸುತ್ತಿದ್ದ. ನನ್ನ ದೋಣಿಯನ್ನು ಕೂಡ ನೋಡಿಕೊಳ್ಳುತ್ತಿದ್ದ. ಜೊತೆಗೆ ಹೊರಗಿನಿಂದ ಆಹಾರ ಸಾಮಾಗ್ರಿ ಮತ್ತಿತರ ವಸ್ತುಗಳನ್ನು ತಂದುಕೊಡುತ್ತಿದ್ದ."
ವ್ಯವಹಾರ ನಿಂತು ಹೋದ ಕಾರಣ ಜಿಗರ್ ಅವರು ಗುಲಾಮ್ ರಸೂಲ್ ಅವರಿಗೆ ತಿಂಗಳ ಸಂಬಳವಾಗಿ 4,500-5,000 ರೂಪಾಯಿ ನೀಡಲು ಸಾಧ್ಯವಾಗಲಿಲ್ಲ (ಜೊತೆಗೆ ಗ್ರಾಹಕರಿಂದ ಸಿಗುತ್ತಿದ್ದ ಟಿಪ್ಸ್ ಕೂಡ ನಿಂತುಹೋಗಿತ್ತು) ಹೀಗಾಗಿ ಅವರು ಕೆಲಸವನ್ನು ತೊರೆದರು. "ಅವನನ್ನು ಹೋಗದಂತೆ ತಡೆಯುವ ಧೈರ್ಯ ನನಗೂ ಇರಲಿಲ್ಲ, ಯಾಕೆಂದರೆ ಅವನಿಗೂ ಸಂಸಾರವಿದೆ."
ಹೆಚ್ಚುತ್ತಿರುವ ವಯಸ್ಸಿನ ಕಾರಣದಿಂದಾಗಿ, ಜಿಗರ್ ದೇದ್‌ಗೆ ತನ್ನ ದೋಣಿಯಿಂದ ಹೊರಬರಲು ದಾಲ್ ಸರೋವರದ ಹೊರಗೆ ಕೆಲಸ ಮಾಡಲು ಅಥವಾ ದಿನಸಿ ವಸ್ತುಗಳನ್ನು ತರಲು ಸಾಧ್ಯವಾಗುತ್ತಿಲ್ಲ, ಮತ್ತು ಅವರಿಗೆ ಈ ವಸ್ತುಗಳನ್ನು ಮಾರುಕಟ್ಟೆಯಿಂದ ತಂದು ಕೊಡಲು ಯಾರಾದರೂ ಬೇಕು. ಸಾಮಾನ್ಯವಾಗಿ, ಹಳೆಯ ಕುಟುಂಬದ ಸ್ನೇಹಿತರು ಇದಕ್ಕೆ ಸಹಾಯ ಮಾಡುತ್ತಾರೆ, ಆದರೆ ಕೆಲವೊಮ್ಮೆ ಅವರು ದೋಣಿಯ ಹೊರಗೆ ಬರಲು ಗಂಟೆಗಳವರೆಗೆ ಕಾಯಬೇಕಾಗುತ್ತದೆ. “ಅವರ ಕೆಲಸವನ್ನು ಬಿಟ್ಟು ನನ್ನ ಕೆಲಸವನ್ನು ಮಾಡಲು ನಾನು ಯಾರನ್ನೂ ಒತ್ತಾಯಿಸಲು ಸಾಧ್ಯವಿಲ್ಲ. ಯಾರಾದರೂ ಸಹಾಯ ಮಾಡಲು ಬರುವವರೆಗೂ ನಾನು ಕಾಯಬಲ್ಲೆ,”ಎಂದು ಅವರು ಹೇಳುತ್ತಾರೆ.
"ಮೊದಲಿಗೆ, ನನ್ನ ಬಳಿ ಹಣವಿದ್ದಾಗ, ಜನರು ವಸ್ತುಗಳನ್ನು ಸುಲಭವಾಗಿ ತಂದುಕೊಡುತ್ತಿದ್ದರು" ಎಂದು ಅವರು ಹೇಳುತ್ತಾರೆ, "ಆದರೆ ಈಗ ನಾನು ಕೆಲವೊಮ್ಮೆ ನನಗೆ ಬೇಕಾದುದನ್ನು ಪಡೆಯಲು ದೀರ್ಘಕಾಲ ಪ್ರಯತ್ನಿಸಬೇಕಾಗುತ್ತದೆ ಏಕೆಂದರೆ ನನ್ನ ಬಳಿ ವಸ್ತುಗಳಿಗಾಗಿ ಕೊಡಲು ಬೇಕಾದ ಹಣ ಇದೆಯೋ ಇಲ್ಲವೋ ಎಂದು ಅವರು ಅನುಮಾನಿಸುತ್ತಾರೆ.”
ಈಗ, 30 ವರ್ಷಗಳಲ್ಲಿ ಮೊದಲ ಬಾರಿಗೆ, ಎರಡು ನಿರಂತರ ಲಾಕ್‌ಡೌನ್‌ಗಳಿಂದಾಗಿ ಮತ್ತು ಯಾವುದೇ ಪ್ರವಾಸಿಗರು ಅವರ ದೋಣಿ ವಿಹಾರಕ್ಕೆ ಬಾರದ ಕಾರಣ ಜಿಗರ್ ದೇದ್ ಅವರ ಉಳಿತಾಯದ ಹಣ ಬಹುತೇಕ ಖರ್ಚಾಗಿದೆ. ಈಗ ಅವರು ದಿನಕ್ಕೆ ಎರಡು ಊಟದ ಬದಲು ಒಂದು ಊಟವನ್ನು ಮಾತ್ರ ಮಾಡುತ್ತಿದ್ದಾರೆ, ರಾತ್ರಿ ಅನ್ನ ಮತ್ತು ದಾಲ್, ಮತ್ತು ಮಧ್ಯಾಹ್ನ ಚಾಯ್, ಉಪ್ಪು ಚಹಾ ಮಾತ್ರ ಸೇವಿಸುತ್ತಾರೆ. ಕೆಲವೊಮ್ಮೆ, ದಾಲ್ ಸರೋವರದ ನೆರೆಹೊರೆಯವರು ಅವರ ಗುಡಿಸಲು ಅಥವಾ ದೋಣಿಯಲ್ಲಿ ಆಹಾರ ಪ್ಯಾಕೆಟ್‌ಗಳನ್ನು ಇಟ್ಟು ಹೋಗುತ್ತಾರೆ.
"ನನಗೆ ಸಹಾಯ ಮಾಡುವಂತೆ ಜನರನ್ನು ಬೇಡಿಕೊಳ್ಳುವುದಕ್ಕಿಂತ ನಾನು ಹಸಿವಿನಿಂದ ಸಾಯುವುದನ್ನು ಬಯಸುತ್ತೇನೆ; ಅದು ನನ್ನ ಅಲಿ ಮತ್ತು ಮನ್ನಾಗೆ ಕೆಟ್ಟ ಹೆಸರನ್ನು ತರುತ್ತದೆ,” ಎಂದು ಅವರು ಹೇಳುತ್ತಾರೆ. “ನಾನು ಯಾರನ್ನೂ ದೂಷಿಸುತ್ತಿಲ್ಲ, ಏಕೆಂದರೆ ಇದೀಗ ಎಲ್ಲರಿಗೂ ಪರಿಸ್ಥಿತಿ ಒಂದೇ ಆಗಿದೆ. ಈ ಲಾಕ್‌ಡೌನ್‌ಗಳಿಂದಾಗಿ, ನಮ್ಮ ವ್ಯವಹಾರವು ಸ್ಥಗಿತಗೊಂಡಿದೆ, ನಮ್ಮಲ್ಲಿ ಯಾರಲ್ಲೂ ಹಣ ಉಳಿದಿಲ್ಲ. ಕಳೆದ ವರ್ಷ ಆಗಸ್ಟ್‌ನಿಂದ ನಾನು ಒಬ್ಬ ಗ್ರಾಹಕನನ್ನು ಸಹ ನೋಡಿಲ್ಲ, ಅನೇಕ ಹೌಸ್‌ಬೋಟ್ ಮಾಲೀಕರು ಮತ್ತು ಶಿಕರವಾಲಾಗಳು ನನ್ನಂತೆಯೇ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.”
ಚಳಿಗಾಲದ ದಿನಗಳು ವೇಗವಾಗಿ ಸಮೀಪಿಸುತ್ತಿವೆ, ದೋಣಿಯನ್ನು ಸರಿಪಡಿಸಲು ಹಣವಿಲ್ಲದ ಕಾರಣ ಬೋಟ್‌ಹೌಸ್ ಶೀತದಿಂದ ಬದುಕುಳಿಯುತ್ತದೆಯೇ ಎಂಬ ಆತಂಕ ಜಿಗರ್ ದೇದ್ ಅವರನ್ನು ಕಾಡುತ್ತಿದೆ. ಈಗ ಹವಾಮಾನ ಕೆಟ್ಟಾಗಲೆಲ್ಲಾ ತಾನು ಮಲಗಲು ಸಾಧ್ಯವಾಗುತ್ತಿಲ್ಲವೆಂದು ಹೇಳುತ್ತಾರೆ. "ಮಳೆ ಬಂದರೆ ನಾನು ಏನು ಮಾಡುವುದು ಎಂದು ಭಯವಾಗುತ್ತದೆ." ಈ ಚಳಿಗಾಲದಲ್ಲಿ ಬದುಕುಳಿಯಲು ಸಾಕಷ್ಟು ದುರಸ್ತಿ ಕೆಲಸ ಮಾಡಿಸುವ ಅಗತ್ಯವಿರುವುದರಿಂದ ನನ್ನ ದೋಣಿ ನನ್ನೊಂದಿಗೆ ಮುಳುಗುವ ಭಯ ಕಾಡುತ್ತಿದೆ. ಚಳಿಗಾಲವು ಹೆಚ್ಚಾಗುವ ಮೊದಲು ನನಗೆ ಒಂದೆರಡು ಗ್ರಾಹಕರು ಸಿಗಲಿಯೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ, ಹಾಗಾದಲ್ಲಿ ನನಗೆ ಬದುಕುಳಿಯಲು ಇರುವ ಏಕೈಕ ದಾರಿ ಮತ್ತು ನನ್ನ ಅಲಿಯ ಉಡುಗೊರೆಯನ್ನು ನಾನು ಉಳಿಸಿಕೊಳ್ಳಬಹುದು."
ಅನುವಾದ: ಶಂಕರ ಎನ್. ಕೆಂಚನೂರು