ತೀರಾ ಮತ್ತು ಅನಿತಾ ಭುಯಿಯಾ ತಮ್ಮ ಖಾರಿಫ್ ಹಂಗಾಮಿನ ಬೆಳೆಯ ಉತ್ತಮ ಇಳುವರಿಗಾಗಿ ಕಾತರದಿಂದ ದಿನಗಳನ್ನು ಎಣಿಸುತ್ತಿದ್ದಾರೆ. ಅವರು ತಮ್ಮ ಗದ್ದೆಯಲ್ಲಿ ಭತ್ತ ಮತ್ತು ಒಂದಿಷ್ಟು ಜೋಳವನ್ನು ಬೆಳೆದಿದ್ದಾರೆ. ಕೊಯ್ಲಿನ ಸಮಯ ಇನ್ನೇನು ಬರುತ್ತಿದೆ.
ಈ ಬಾರಿ ಅವರಿಗೆ ಉತ್ತಮ ಇಳುವರಿ ಬಹಳ ಮುಖ್ಯ. ಅವರ ಇಟ್ಟಿಗೆ ಭಟ್ಟಿಯಲ್ಲಿನ ಆರು ತಿಂಗಳ ಕೆಲಸ ಮಾರ್ಚ್ನಲ್ಲಿ ಪ್ರಾರಂಭವಾದ ಲಾಕ್ಡೌನ್ ಕಾರಣದಿಂದಾಗಿ ಅರ್ಧಕ್ಕೆ ನಿಂತು ಹೋಗಿದೆ.
“ಕಳೆದ ವರ್ಷವೂ ನಾನು ಬೇಸಾಯವನ್ನು ಮಾಡಿದ್ದೆ ಆದರೆ ಮಳೆಯ ಕೊರತೆ ಮತ್ತು ಕೀಟಗಳ ತೊಂದರೆಯಿಂದಾಗಿ ಬೆಳೆ ನಷ್ಟವಾಯಿತು.” ಎನ್ನುತ್ತಾರೆ ತೀರಾ. “ನಾವು ವರ್ಷದ ಆರು ತಿಂಗಳು ಬೇಸಾಯ ಮಾಡುತ್ತೇವ ಆದರೆ ಈ ಬೇಸಾಯದಿಂದ ನಮಗೆ ಯಾವುದೇ ಆದಾಯ ಸಿಗುವುದಿಲ್ಲ.” ಎನ್ನುತ್ತಾ ಅನಿತಾ ತಮ್ಮ ಮಾತುಗಳನ್ನು ಸಂಭಾಷಣೆಯಲ್ಲಿ ಸೇರಿಸುತ್ತಾರೆ.
45 ವರ್ಷದ ತೀರಾ, ಮತ್ತು 40 ವರ್ಷದ ಅನಿತಾ ಭುಯಿಯಾ ತಢಿಯಲ್ಲಿ ವಾಸಿಸುತ್ತಾರೆ. ಇದೊಂದು ಮಹುಗವಾನ್ನ ದಕ್ಷಿಣಭಾಗದಲ್ಲಿನ ಭುಯಿಯಾ ಸಮುದಾಯಕ್ಕೆ ಸೇರಿದ ಮನೆಗಳ ಗುಂಪಾಗಿದ್ದು. ಇವರು ಪರಿಶಿಷ್ಟ ಜಾತಿಗೆ ಸೇರಿದವರು.
ಜಾರ್ಖಂಡ್ನ ಪಲಾಮೂ ಜಿಲ್ಲೆಯ ಚೈನ್ಪುರ್ ಬ್ಲಾಕ್ನ ಈ ಹಳ್ಳಿಯಲ್ಲಿ 2018ರಿಂದ ಈ ಕುಟುಂಬವು ಪ್ರತಿ ಖಾರಿಫ್ ಹಂಗಾಮಿನಲ್ಲಿ ಸ್ಥಳೀಯ ಗುತ್ತಿಗೆ ವಿಧಾನವಾಗಿರುವ ಬಟಿಯಾ ಬೇಸಾಯವನ್ನು ಮಾಡುತ್ತಿದೆ. ಈ ಮೌಖಿಕ ಒಪ್ಪಂದದಡಿಯಲ್ಲಿ ಭೂಮಾಲಿಕ ಮತ್ತು ಗುತ್ತಿಗೆದಾರ ಕೃಷಿ ಖರ್ಚನ್ನು ಸಮಾನಾಗಿ ಹಂಚಿಕೊಳ್ಳುತ್ತಾರೆ ಮತ್ತು ಇಳುವರಿಯನ್ನೂ ಸಮಾನಾಗಿ ಹಂಚಿಕೊಳ್ಳುತ್ತಾರೆ. ಗುತ್ತಿಗೆ ಪಡೆದ ಕೃಷಿ ಕುಟುಂಬಗಳು ಸಾಮಾನ್ಯವಾಗಿ ಬೆಳೆದ ಬೆಳೆಯ ಹೆಚ್ಚಿನ ಭಾಗವನ್ನು ತಮ್ಮ ಕುಟುಂಬದ ಆಹಾರಕ್ಕಾಗಿ ಬಳಸಿಕೊಳ್ಳುತ್ತವೆ. ಮತ್ತು ಉಳಿದಿದ್ದನ್ನು ಮಾರುಕಟ್ಟೆಯಲ್ಲಿ ಮಾರಲು ಪ್ರಯತ್ನಿಸುತ್ತಾರೆ.






