ನನ್ನ ಕಡೆ ನೋಡಿದ ಆತ, “ಓ ನೀವು ಕೋಲ್ಕೊತಾದವರೇ?” ಎಂದು ಕೇಳಿದರು, ಅವರ ಕಣ್ಣುಗಳು ಆಕರ್ಷಕವಾಗಿ ಹೊಳೆಯುತ್ತಿದ್ದವು. “ನಾನು ಕೂಡ ಕೋಲ್ಕೊತಾದಲ್ಲಿದ್ದೆ, ಮತ್ತೆ ಹೌರಾದಲ್ಲೂ. ಹಲವು ಬಾರಿ. ಯಾವಾಗಲೂ ಕೆಲಸವನ್ನು ಹುಡುಕುತ್ತ ಹೋಗುತ್ತಿದ್ದೆ. ಕೆಲವೊಮ್ಮೆ ನಾನು ಅದೃಷ್ಟವಂತನಾಗಿರುತ್ತಿದ್ದೆ, ಕೆಲವೊಮ್ಮೆ ಇಲ್ಲ. ಅಂತಿಮವಾಗಿ ಇಲ್ಲಿಗೆ ಬಂದು ತಲುಪಿದೆ,”
“ಲಡಾಕ್ ಸಮುದ್ರಮಟ್ಟದಿಂದ 10,000 ಅಡಿ ಎತ್ತರದಲ್ಲಿದೆ. ರಾಜು ಮುರ್ಮು ಜಾರ್ಖಂಡ್‌ನಲ್ಲಿರುವ ತನ್ನ ಮನೆಯಿಂದ ಬಹುತೇಕ 2,500 ಕಿಲೋಮೀಟರ್ ದೂರದಲ್ಲಿದ್ದು, ಸಂಜೆಯಾಗುತ್ತಲೇ ತಾಪಮಾನ ಇಳಿಯುತ್ತಿದ್ದಂತೆ ಹಿಮಾಲಯದ ಮೂಲೆಯಲ್ಲಿರುವ ಮರುಭೂಮಿಯ ತನ್ನ ಡೇರೆಯ ಹೊರಗಡೆ ಕುಳಿತು ತನಗೆ ಆಪ್ತವೆನಿಸಿರುವ ಸಡಗರದಿಂದ ಕೆಲಸ ಮಾಡುತ್ತಿದ ನಗರದ ಬೆಚ್ಚನೆಯ ನೆನಪುಗಳನ್ನು ನೆನೆದುಕೊಳ್ಳುತ್ತಿದ್ದರು. ವಿದ್ಯುತ್ ಇಲ್ಲದ ಕಾರಣ ರಾಜು ಮತ್ತು ಇತರ ಸಹ ವಲಸೆ ಕಾರ್ಮಿಕರ ಡೇರೆಗಳನ್ನು ಕತ್ತಲು ಕೂಡಲೇ ಆವರಿಸಲಿದೆ. ನಿರ್ಮಾಣದ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಡೇರೆಯಲ್ಲಿ ರಾಜು ಮತ್ತು ಅವರ ರಾಜ್ಯದಿಂದ ಬಂದ ಇತರ ಒಂಬತ್ತು ಮಂದಿ ಕಾರ್ಮಿಕರು ವಾಸಿಸುತ್ತಿದ್ದರು.
ದೇಶದಲ್ಲೇ ಅತ್ಯಂತ ಎತ್ತರದಲ್ಲಿರುವ ಕೆಲವು ರಸ್ತೆಗಳನ್ನು ನಿರ್ಮಿಸಲು ಇತರ ಅನೇಕ ಕಾರ್ಮಿಕರಂತೆ 31 ವರ್ಷದ ರಾಜು ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಬಾಬುಪೂರ್ ಗ್ರಾಮದಿಂದ ಕೆಲಸಕ್ಕಾಗಿ ಲಡಾಕ್‌ಗೆ ಕಾಯಂ ಆಗಿ ಬರುತ್ತಿದ್ದರು. “ಇದು ನನ್ನ ನಾಲ್ಕನೇ ವರ್ಷ, ಕಳೆದ ವರ್ಷವೂ ನಾನು ಬಂದಿದ್ದೆ. ಏನು ಮಾಡುವುದು? ಹಳ್ಳಿಯಲ್ಲಿ ಮಾಡಲು ಯಾವುದೇ ಕೆಲಸ ಇಲ್ಲ,” ಎಂದು ಹೇಳಿದರು. ಅವರು ಸಮುದ್ರಮಟ್ಟದಿಂದ 17,582 ಅಡಿ ಎತ್ತರದಲ್ಲಿರುವ ಖಾರ್‌ಡುಂಗ್ ಲಾ (ಖಾರ್‌ಡಾಂಗ್ ಗ್ರಾಮದ ಹತ್ತಿರ) ಮತ್ತು 10,000 ಅಡಿ ಎತ್ತರದಲ್ಲಿರುವ ನುಬ್ರಾ ಗ್ರಾಮದ ನಡುವೆ ಪಾಸೊಂದನ್ನು ನಿರ್ಮಿಸುತ್ತಿದ್ದರು.
ಮೂಲೆಯಲ್ಲಿರುವ ಮತ್ತು ಪ್ರತ್ಯೇಕವಾಗಿರುವ ಲಡಾಖ್‌ನ ಭಾಗ ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ಮಧ್ಯಪ್ರದೇಶ ಮತ್ತು ದೇಶದ ಇತರ ಭಾಗಗಳ ವಲಸಿಗರ ತಾಣವಾಗಿತ್ತು, ಆದರೆ ಗಡಿಯಲ್ಲಿನ ವ್ಯಾಪಾರ, ಧರ್ಮ ಮತ್ತು ಸಂಸ್ಕೃತಿ ಇವುಗಳ ವಿನಿಮಯಕ್ಕೆ ದಾಟಲು ಐತಿಹಾಸಿಕವಾಗಿ ನಿರ್ಣಾಯಕವಾಗಿತ್ತು. ಲಡಾಖ್‌ಗೆ ಹೊಸ ಆಡಳಿತಾತ್ಮಕ ಸ್ಥಾನಮಾನ ಒದಗಿಸಿದ ಹಿನ್ನೆಲೆಯಲ್ಲಿ ಖಾಸಗಿ ಬಿಲ್ಡರ್‌ಗಳು ಈ ವಲಯಕ್ಕೆ ಪ್ರವೇಶಿಸಲು ಸಾಧ್ಯವಾಯಿತು. ಕೇಂದ್ರಾಡಳಿತ ಪ್ರದೇಶದ ಆಡಳಿತ ಮತ್ತು ಗಡಿ ರಸ್ತೆಗಳ ಸಂಸ್ಥೆ (ಬಾರ್ಡರ್ ರೋಡ್ ಆರ್ಗನೈಸೇಷನ್) ಜತೆಯಾಗಿ ಇಲ್ಲಿ ವಾಣಿಜ್ಯ ಮತ್ತು ಸೇನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಯೋಜನೆಗಳನ್ನು ತ್ವರಿತಗೊಳಿಸಿತು. ಇದರಿಂದಾಗಿ ಲಡಾಖ್‌ಗೆ ಬರುವ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಯಿತು.
ರಸ್ತೆ ಬದಿಗಳಲ್ಲಿ 11 x 8.5 ಅಡಿಗಿಂತಲೂ ಹೆಚ್ಚಿರದ ಕ್ಯಾನ್ವಾಸ್ ಡೇರೆಗಳಲ್ಲಿ ತಮ್ಮ ಕುಟುಂಬದೊಂದಿಗೆ ಅವರು ವಾಸಿಸುವುದನ್ನು ನೀವು ಕಾಣಬಹುದು. ರಸ್ತೆಯ ಕಾಮಗಾಗಿ ಮುಂದುವರಿದಂತೆ ಈ ಸುಧಾರಿತ ಶಿಬಿರ ಮುಂದಕ್ಕೆ ಸ್ಥಳಾಂತರಗೊಳ್ಳುತ್ತಿರುತ್ತದೆ. ಈ ತುಂಬಿದ ಪ್ರತಿಯೊಂದು ಡೇರೆಯು ಚೀಲಗಳು, ಸಾಮಾನು ಮತ್ತು ಸಲಕರಣೆಗಳಿಂದ ಕೂಡಿದ್ದು, ಹಿಮದಿಂದ ಕೂಡಿದ ನೆಲದಲ್ಲಿ ಕಂಬಳಿ ಇಲ್ಲದೆ ಮಲಗುವ 10 ಜನರಿಗಾಗಿ ಕಾರ್ಯನಿರ್ವಹಿಸುತ್ತಿರುತ್ತದೆ, ವಿದ್ಯುತ್ ಇಲ್ಲದೆ, ವಿಪರೀತ ಚಳಿಯನ್ನು ಸಹಿಸಿಕೊಂಡು ಬದುಕುವ ಇವರು ಸರಿಯಾದ ಸುರಕ್ಷತೆ ಸಾಧನಗಳಿಲ್ಲದೆ ಕೆಲವೊಮ್ಮೆ ಶೂನ್ಯ ತಾಪಮಾನದಲ್ಲೂ ಕೆಲಸ ಮಾಡಬೇಕಾಗುತ್ತದೆ. ಪ್ರತಿಕೂಲವಾದ ವಾತಾವರಣ, ಮೂಲಭೂತಸೌಖರ್ಯದ ಯೋಜನೆಗೆ ಮಿತಿಮೀರಿದ ವೆಚ್ಚ ಹಾಗೂ ಉತ್ತಮ ಗುಣಮಟ್ಟದ ಯಂತ್ರೋಪಕರಣಗಳ ಕೊರತೆ ಇವುಗಳಿಂದಾಗಿ ಕೆಲಸಗಾರರು ಕೈಯಲ್ಲೇ ಭಾರವಾದ ಸಾಮಾನುಗಳನ್ನುಎತ್ತಿ ಮತ್ತು ಸಾಗಿಸಿ ರಸ್ತೆಗಳ ನಿರ್ಮಾಣ ಮತ್ತು ಪುನರ್ ನಿರ್ಮಾಣ ಮಾಡಬೇಕಾಗುತ್ತದೆ. ಆಮ್ಲಜನಕದ ಪ್ರಮಾಣ ಕಡಿಮೆ ಇರುವ ಅತಿ ಎತ್ತರದ ಭೂಪ್ರದೇಶ ಮತ್ತು ಕಠಿಣ ಶ್ರಮಕ್ಕೆ ಅಸಮರ್ಪಕ ವೇತನ ನೀಡುವಲ್ಲಿ ಈ ಎಲ್ಲ ಅಂಶಗಳು ಬಯಲುಗೊಂಡವು.























