"ನಾನು ನಿರ್ಮಿಸುವ ಪ್ರತಿಯೊಂದು ಜೋಪ್ಡಿ ಕನಿಷ್ಠ 70 ವರ್ಷಗಳ ತನಕ ಬಾಳಿಕೆ ಬರುತ್ತದೆ."
ವಿಷ್ಣು ಭೋಸಲೆ ಒಂದು ಅಪರೂಪದ ಕೌಶಲವನ್ನು ಹೊಂದಿದ್ದಾರೆ - ಅವರು ಕೊಲ್ಹಾಪುರ ಜಿಲ್ಲೆಯ ಜಾಂಬಳಿ ಗ್ರಾಮದಲ್ಲಿ ವಾಸಿಸುವ ಜೋಪ್ಡಿ (ಸಾಂಪ್ರದಾಯಿಕ ಗುಡಿಸಲು/ಜೋಪಡಿ) ತಯಾರಕರು.
ಮರದ ಚೌಕಟ್ಟು ಮತ್ತು ಹುಲ್ಲಿನಿಂದ ಗುಡಿಸಲು ನಿರ್ಮಿಸುವ ಈ ಕೌಶಲವನ್ನು 68 ವರ್ಷದ ಅವರು ತಮ್ಮ ತಂದೆ ದಿವಂಗತ ಗುಂಡು ಅವರಿಂದ ಕಲಿತರು. ಅವರು 10ಕ್ಕೂ ಹೆಚ್ಚು ಜೋಪ್ಡಿಗಳನ್ನು ನಿರ್ಮಿಸಿದ್ದಾರೆ ಮತ್ತು ಸರಿಸುಮಾರು ಅದೇ ಸಂಖ್ಯೆಯ ಜೋಪಡಿಗಳ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ. "[ಆ ಸಮಯದಲ್ಲಿ] ಹೊಲಗಳಲ್ಲಿ ಹೆಚ್ಚಿನ ಕೆಲಸವಿಲ್ಲದ ಕಾರಣ ನಾವು [ಸಾಮಾನ್ಯವಾಗಿ] ಬೇಸಿಗೆಯಲ್ಲಿ ಮಾತ್ರ ಅವುಗಳನ್ನು ತಯಾರಿಸುತ್ತಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ ಮತ್ತು "ಜನರು ಜೋಪ್ಡಿಯನ್ನು ನಿರ್ಮಿಸಲು ಉತ್ಸುಕರಾಗಿದ್ದರು."
ಸುಮಾರು 1960ರ ದಶಕದವರೆಗೆ ಜಾಂಬಳಿಯಲ್ಲಿ ಅಂತಹ ನೂರಕ್ಕೂ ಹೆಚ್ಚು ಗುಡಿಸಲುಗಳು ಇದ್ದವು ಎಂದು ವಿಷ್ಣು ನೆನಪಿಸಿಕೊಳ್ಳುತ್ತಾರೆ. ಸ್ನೇಹಿತರು ಪರಸ್ಪರ ಸಹಕಾರದೊಂದಿಗೆ ಸ್ಥಳೀಯ ವಸ್ತುಗಳನ್ನು ಬಳಸಿ ಕಟ್ಟುತ್ತಿದ್ದೆವು ಎನ್ನುತ್ತಾರೆ. "ನಾವು ಜೋಪ್ಡಿ ತಯಾರಿಸಲು ಒಂದು ರೂಪಾಯಿಯನ್ನೂ ಖರ್ಚು ಮಾಡುತ್ತಿರಲಿಲ್ಲ. "ಜನರು ಮೂರು ತಿಂಗಳವರೆಗೆ ಕಾಯಲು ಸಿದ್ಧರಿದ್ದರು, ಆದರೆ ಅವರು ಸರಿಯಾದ ಸಾಹಿತ್ಯವನ್ನು [ವಸ್ತುಗಳನ್ನು] ಒಟ್ಟುಗೂಡಿಸಿದ ನಂತರವೇ ಅವರು ನಿರ್ಮಿಸಲು ಪ್ರಾರಂಭಿಸುತ್ತಿದ್ದರು" ಎಂದು ಅವರು ಹೇಳುತ್ತಾರೆ.
ಶತಮಾನದ ಅಂತ್ಯದ ವೇಳೆಗೆ, 4,963 ಜನರಿರುವ ಈ ಗ್ರಾಮದಲ್ಲಿ (ಜನಗಣತಿ 2011) ಮರದ ಮತ್ತು ಹುಲ್ಲಿನ ರಚನೆಗಳನ್ನು ಇಟ್ಟಿಗೆ, ಸಿಮೆಂಟ್ ಮತ್ತು ಟಿನ್ ಬದಲಿಸಿತು. ಸ್ಥಳೀಯ ಕುಂಬಾರರು ತಯಾರಿಸಿದ ಖಾಪ್ರಿ ಕೌಲು (ಮೇಲ್ಛಾವಣಿಯ ಹೆಂಚುಗಳು) ಅಥವಾ ಕುಂಭಾರಿ ಕೌಲುಗಳ ಆಗಮನದಿಂದ ಜೋಪ್ಡಿಗಳು ಮೊದಲು ಮರೆಗೆ ಹೋದವು, ಮತ್ತು ನಂತರ ಉತ್ತಮ ಶಕ್ತಿ ಮತ್ತು ಬಾಳಿಕೆಯನ್ನು ಹೊಂದಿದ್ದ ಯಂತ್ರದಿಂದ ತಯಾರಿಸಿದ ಬೆಂಗಳೂರು ಕೌಲುಗಳು ಕಳೆದುಹೋದವು.
ಹಂಚುಗಳಿಗೆ ಕಡಿಮೆ ನಿರ್ವಹಣೆಯ ಅಗತ್ಯವಿತ್ತು, ಜೋಪ್ಡಿಗೆ ಹುಲ್ಲು ಹೊದೆಸುವದಕ್ಕೆ ಹೋಲಿಸಿದರೆ ಆಳವಡಿಕೆ ಸುಲಭವಾಗಿತ್ತು ಮತ್ತು ಬೇಗ ಮುಗಿಯುತ್ತಿತ್ತು. ಮತ್ತು ಸಿಮೆಂಟ್ ಮತ್ತು ಇಟ್ಟಿಗೆಯ ಆಗಮನದೊಂದಿಗೆ ಜನರು ಪಕ್ಕಾ ಮನೆಯನ್ನು ನಿರ್ಮಿಸಲು ಆರಂಭಿಸಿದ ನಂತರ ಜೋಪಡಿಗಳ ಕಾಲ ಮುಗಿದೇ ಹೋಯಿತು.ಜಾಂಬಳಿಯಲ್ಲಿನ ಜನರು ಜೋಪಡಿಗಳನ್ನು ಅನಾಥವಾಗಿಸತೊಡಗಿದರು. ಇಂದು ಅಲ್ಲಿ ಕೆಲವೇ ಕೆಲವು ಜೋಪಡಿಗಳು ಉಳಿದಿವೆ.
“ಈಗ ಹಳ್ಳಿಗಳಲ್ಲಿ ಜೋಪ್ಡಿ ಕಾಣುವುದು ಅಪರೂಪ. ಕೆಲವೇ ವರ್ಷಗಳಲ್ಲಿ ನಾವು ಎಲ್ಲಾ ಸಾಂಪ್ರದಾಯಿಕ ವಸ್ತುಗಳನ್ನು ಕಳೆದುಕೊಳ್ಳಲಿದ್ದೇವೆ. ಏಕೆಂದರೆ ಇಂದು ಅವುಗಳನ್ನು ನೋಡಿಕೊಳ್ಳುವುದು ಯಾರಿಗೂ ಬೇಕಾಗಿಲ್ಲ” ಎನ್ನುತ್ತಾರೆ ವಿಷ್ಣು.





























