“ಬ್ಯೂಟಿ ಪಾರ್ಲರ್‌ಗೆ ಹೋಗೋ ಅಗತ್ಯ ಏನಿದೆ? ಸುಮ್ನೆ ಪೇಟೆ ಸುತ್ತಿ ಹಣ ಪೋಲು ಮಾಡೋದಕ್ಕೆ ಒಂದು ನೆಪ ನಿಮಗೆ.”
ನಾನು ಬ್ಯೂಟಿ ಪಾರ್ಲರಿಗೆ ಹೊರಟರೆ ನನ್ನ ಅತ್ತೆ ಮಾವಂದಿರು ಅನುಮಾನ ಪಡುತ್ತಾರೆ ಎನ್ನುತ್ತಾರೆ ಮೋನಿಕಾ ಕುಮಾರಿ. ಅವರ ನಾಲ್ಕು ಜನರ ಕುಟುಂಬವು ಪೂರ್ವ ಬಿಹಾರದ ಜಮುಯಿ ಎಂಬ ಸಣ್ಣ ಪಟ್ಟಣದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಖೈರ್ಮಾ ಗ್ರಾಮದಲ್ಲಿ ವಾಸಿಸುತ್ತದೆ. 25 ವರ್ಷದ ಈ ಯುವತಿ ತನ್ನ ಹುಬ್ಬುಗಳ ಆಕಾರವನ್ನು, ಮೇಲಿನ ತುಟಿಯ ಕೂದಲನ್ನು ತೆಗೆದು, ಮುಖದ ಮಸಾಜ್ ಇತ್ಯಾದಿ ಸೇವೆಯನ್ನು ತನಗೆ ಬೇಕು ಅನಿಸಿದಾಗ ಮುಖದ ಮಸಾಜ್ ನಿಯಮಿತವಾಗಿ ಮಾಡಿಸುತ್ತಾರೆ. ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುವ ಅವರ ಪತಿ, ಹಳೆಯ ತಲೆಮಾರುಗಳ ಅಪನಂಬಿಕೆಯನ್ನು ಪಾಲಿಸುವುದಿಲ್ಲ ಮತ್ತು ಅವರನ್ನು ಪಾರ್ಲರಿಗೆ ಹೋಗಲು ಬಿಡುತ್ತಾರ.
ಮೋನಿಕಾ ಮಾತ್ರವಲ್ಲ, ಜಮುಯಿ ಮತ್ತು ಜಮುಯಿ ಜಿಲ್ಲೆಯ ಸುತ್ತಮುತ್ತಲಿನ ಪಟ್ಟಣಗಳು ಮತ್ತು ಹಳ್ಳಿಗಳ ಅನೇಕ ಯುವತಿಯರು ಮತ್ತು ಮಹಿಳೆಯರು ತ್ವರಿತ ಮೇಕ್ ಓವರ್‌ಗಾಗಿ ಹತ್ತಿರದ ಪಾರ್ಲರ್ ಗೆ ಹೋಗುತ್ತಾರೆ.
ಜಮುಯಿಯಲ್ಲಿ ತನ್ನ ಪಾರ್ಲರ್ ಉದ್ಯಮದ 15 ವರ್ಷಗಳ ಪಾರ್ಲರ್ ಉದ್ಯಮದ ಅನುಭವದ ಕುರಿತು ಹೇಳುತ್ತಾ, “ನಾನು ಪಾರ್ಲರ್ ಆರಂಭಿಸಿದ ಸಮಯದಲ್ಲಿ ಇಲ್ಲಿ 10 ಪಾರ್ಲರುಗಳಿದ್ದವು. ಈಗ ಇಲ್ಲೊಂದು ಸಾವಿರ ಇವೆಯೇನೋ ಅನ್ನಿಸುತ್ತೆ,” ಎನ್ನುತ್ತಾರೆ ಪ್ರಮಿಳಾ ಶರ್ಮಾ.
ಪ್ರಮೀಳಾ 87,357 ಜನಸಂಖ್ಯೆಯನ್ನು ಹೊಂದಿರುವ ಜಮುಯಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸ್ಥಾಪಿಸಲಾದ ವಿವಾಹ್ ಲೇಡೀಸ್ ಬ್ಯೂಟಿ ಪಾರ್ಲರ್‌ನ ಮಾಲೀಕರು. ಇಲ್ಲಿನ ಹೆಚ್ಚಿನ ಜನರು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾರೆ.
ಪಾರ್ಲರನ್ನು ಸೈಕಲ್ ಅಂಗಡಿ, ಕ್ಷೌರದಂಗಡಿ ಮತ್ತು ಟೈಲರ್ ಅಂಗಡಿಗಳ ನಡುವೆ ಸ್ಥಾಪಿಸಲಾಗಿದೆ. ಇಲ್ಲಿ ಮಾಡಲಾಗುವ ಹೇರ್‌ಕಟ್, ಥ್ರೆಡ್ಡಿಂಗ್, ಮೆಹೆಂದಿ, ವ್ಯಾಕ್ಸಿಂಗ್, ಫೇಶಿಯಲ್ ಮತ್ತು ಮೇಕಪ್ ಸೌಂದರ್ಯ ಸೇವೆಗಳು ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಅಲಿಗಂಜ್ ಬ್ಲಾಕ್‌ನ ಲಕ್ಷ್ಮಿಪುರ ಮತ್ತು ಇಸ್ಲಾಂನಗರದಂತಹ ಹಳ್ಳಿಗಳಿಂದ ಸಹ ಗ್ರಾಹಕರನ್ನು ಆಕರ್ಷಿಸುತ್ತದೆ.
ಆಂಗಿಕಾ, ಮೈಥಿಲಿ ಮತ್ತು ಮಗಹಿಯಂತಹ ಭಾಷೆಗಳ ಬಗೆಗಿನ ತನ್ನ ಜ್ಞಾನವು ಕೆಲಸದ ವೇಳೆ ಗ್ರಾಹಕರನ್ನು ನಿರಾಳಗೊಳಿಸಲು ಸಹಾಯ ಮಾಡುತ್ತದೆ ಎಂದು ಪ್ರಮೀಳಾ ಹೇಳುತ್ತಾರೆ.
ಬಿಹಾರದ ಈ ಮೂಲೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುವುದೆಂದರೆ ಪುರುಷ ಪ್ರಧಾನ ವ್ಯವಸ್ಥೆಯೊಡನೆ ಸಂಘರ್ಷ ನಡೆಸುವುದೇ ಆಗಿದೆ. "ಮದುವೆಗೆ ಮುಂಚೆ, ಹುಡುಗಿಯರು [ಇಲ್ಲಿ] ತಮ್ಮ ಹೆತ್ತವರ ಇಚ್ಛೆಯಂತೆ ಜೀವಿಸುತ್ತಾರೆ, ಮತ್ತು ಮದುವೆಯ ನಂತರ, ತಮ್ಮ ಪತಿಯ ಇಚ್ಛೆಯಂತೆ ಜೀವಿಸುತ್ತಾರೆ," ಎಂದು ಪ್ರಮೀಳಾ ಹೇಳುತ್ತಾರೆ. ಹೀಗಾಗಿಯೇ ಅವರ ಪಾರ್ಲರ್‌ನಲ್ಲಿ, ಯಾವುದೇ ಪುರುಷರ ಉಪಸ್ಥಿತಿಗೆ ಕಟ್ಟುನಿಟ್ಟಾದ ನಿಷೇಧವಿದೆ ಮತ್ತು ಹೊರಗಿನ ಬೋರ್ಡ್ ಸ್ಪಷ್ಟವಾಗಿ 'ಮಹಿಳೆಯರಿಗೆ ಮಾತ್ರ' ಎಂದು ಹೇಳುತ್ತದೆ. ಒಮ್ಮೆ ಈ ಮಹಿಳೆಯರಿಗೆ ಮಾತ್ರವೇ ಪ್ರವೇಶವಿರುವ ವಾತಾವರಣದ ಒಳಗೆ ಪ್ರವೇಶಿಸಿದರೆ ಅದು ಭದ್ರತೆಯ ಪ್ರಜ್ಞೆಯನ್ನು ನೀಡುತ್ತದೆ. ಇಲ್ಲಿ ಮಕ್ಕಳು ಮತ್ತು ಅಡುಗೆ ಕುರಿತು ಮಾತನಾಡಬಹುದು, ಮದುವೆ ಸಂಬಂಧಗಳನ್ನು ನಿಕ್ಕಿ ಮಾಡಬಹುದು ವೈವಾಹಿಕ ಭಿನ್ನಾಭಿಪ್ರಾಯಗಳನ್ನು ಸಹ ಹಂಚಿಕೊಳ್ಳಲಾಗುತ್ತದೆ. "ಮಹಿಳೆಯರು ಹೆಚ್ಚಾಗಿ ಮನೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ, ಆದರೆ ಇಲ್ಲಿ ಅವರು ಏನು ಬೇಕಿದ್ದರೂ ಹಂಚಿಕೊಳ್ಳಬಹುದು," ಎಂದು ಅವರು ಹೇಳುತ್ತಾರೆ.
ಇದೇ ಇಲ್ಲಿನ ಗ್ರಾಹಕರನ್ನು ನಿಷ್ಠಾವಂತರನ್ನಾಗಿ ಮಾಡುವ ವೈಶಿಷ್ಟ್ಯ ಮತ್ತು ಭಾವುಕತೆ. "ನಾವು ಜಮುಯಿಯಲ್ಲಿರುವ ಪಾರ್ಲರ್ ಗೆ ಭೇಟಿ ನೀಡಲು ಬಯಸಿದಾಗ, ನಾವು ಇದೇ ಪಾರ್ಲರಿಗೆ ಬರುತ್ತೇವೆ," ಎಂದು ಪ್ರಿಯಾ ಕುಮಾರಿ ಹೇಳುತ್ತಾ ಪರಿಚಿತ ಸ್ಥಳದ ಆಕರ್ಷಣೆಯನ್ನು ವಿವರಿಸುತ್ತಾರೆ. ಬ್ಯೂಟಿ ಪಾರ್ಲರ್ ಮಾಲೀಕರು ಆಗಾಗ ಸಲಹೆ ನೀಡುವುದು ಅಥವಾ ಮೃದುವಾಗಿ ಬೈಯುವುದು ಕೌಟುಂಬಿಕ ವಾತಾವರಣದ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. "ಅವರಿಗೆ ನಮ್ಮ ಬದುಕಿನ ಕತೆ ಗೊತ್ತು. ಅವರು ನಮ್ಮೊಡನೆ ತಮಾಷೆ ಕೂಡಾ ಮಾಡುತ್ತಾರೆ," ಎಂದು ಜಮುಯಿ ಬ್ಲಾಕ್‌ನ ಖೈರ್ಮಾ ಗ್ರಾಮದ 22 ವರ್ಷದ ನಿವಾಸಿ ಹೇಳುತ್ತಾರೆ.
ಪ್ರಮೀಳಾ ಅವರ ಪಾರ್ಲರನ್ನು ಮಹಾರಾಜಗಂಜ್ ಮುಖ್ಯ ರಸ್ತೆಯ ಜನನಿಬಿಡ ವಾಣಿಜ್ಯ ಸಂಕೀರ್ಣದ ನೆಲಮಹಡಿಯಲ್ಲಿ ಕಾಣಬಹುದು. ಅವರು ಈ ಸಣ್ಣ ಕಿಟಕಿಯಿಲ್ಲದ ಕೋಣೆಗೆ ತಿಂಗಳಿಗೆ 3,500 ರೂ.ಗಳ ಬಾಡಿಗೆ ಕಟ್ಟುತ್ತಾರೆ. ದೊಡ್ಡ ಕನ್ನಡಿಗಳನ್ನು ಮೂರು ಗೋಡೆಗಳಿಗೆ ಅಡ್ಡಲಾಗಿ ಪಟ್ಟಿಯಂತೆ ಜೋಡಿಸಲಾಗಿರುತ್ತದೆ. ಪಿಗ್ಗಿ ಬ್ಯಾಂಕುಗಳು, ಟೆಡ್ಡಿ ಬೇರ್‌ಗಳು, ಸ್ಯಾನಿಟರಿ ಪ್ಯಾಡುಗಳ ಪ್ಯಾಕೆಟುಗಳು ಮತ್ತು ವಿವಿಧ ರೀತಿಯ ಸೌಂದರ್ಯವರ್ಧಕ ಉತ್ಪನ್ನಗಳು ಕನ್ನಡಿಗಳ ಮೇಲಿನ ಕಪಾಟಿನಲ್ಲಿವೆ. ಪ್ಲಾಸ್ಟಿಕ್ ಹೂವುಗಳು ಛಾವಣಿಯಿಂದ ನೇತಾಡುತ್ತವೆ; ಬ್ಯೂಟಿ ಕೋರ್ಸುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದನ್ನು ಗುರುತಿಸುವ ಫ್ರೇಮ್ ಮಾಡಿದ ಪ್ರಮಾಣಪತ್ರಗಳನ್ನು ಬೀಜ್ ಮತ್ತು ಕಿತ್ತಳೆ ಬಣ್ಣದ ಗೋಡೆಗಳ ಮೇಲೆ ಪ್ರಮುಖವಾಗಿ ಇರಿಸಲಾಗಿದೆ.
ಮುಂಬಾಗಿಲಿನ ಹಳದಿ ಪರದೆಯನ್ನು ದಾಟಿ ಗ್ರಾಹಕರೊಬ್ಬರು ಒಳ ಬಂದರು. ಈ 30 ವರ್ಷದ ಮಹಿಳೆ ಊಟಕ್ಕೆಂದು ಹೊರಟಿದ್ದರಾದರೂ ಸೇವೆ ನೀಡಲು ಮುಂದಾದರು. ಆ ಮಹಿಳೆಗೆ ತುಟಿಯ ಮೇಲಿನ ಕೂದಲು ತೆಗೆದು, ಹುಬ್ಬಿನ ಆಕಾರವನ್ನು ಸರಿಪಡಿಸಬೇಕಿತ್ತು. ಅದು ಅಂಗಡಿ ಮುಚ್ಚುವ ಸಮಯವಾದರೂ ವ್ಯವಹಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಇದರಿಂದ ಗ್ರಾಹಕರು ದೂರವಾಗುವ ಅಪಾಯವಿರುತ್ತದೆ. ಆಕೆ ಕುಳಿತುಕೊಳ್ಳುತ್ತಿದ್ದಂತೆ ಪಾರ್ಲರ್ ಮಾಲಕಿ ಆಕೆಯೊಡನೆ ಸ್ನೇಹಪರ ಮಾತುಗಳನ್ನಾಡತೊಡಗಿದರು. "ಹಮ್ ಥೋಡಾ ಹಸ್ಸಿ ಮಜಾಕ್ ಕರೇಂಗೆ ಕಿ ಸ್ಕಿನ್ ಮೇ ಅಂದರ್ ಸೆ ನಿಖಾರ್ ಆಯೇ [ನಾವು ನಮ್ಮ ಗ್ರಾಹಕರನ್ನು ನಗಿಸುತ್ತೇವೆ ಹಾಗೆ ಮಾಡಿದಾಗ ಅವರು ಒಳಗಿನಿಂದ ಹೊಳೆಯುತ್ತಾರೆ]" ಎಂದು ಅವರು ನಂತರ ನಮಗೆ ಹೇಳಿದರು.
“ದಿನವೊಂದಕ್ಕೆ ಕೆಲವೊಮ್ಮೆ 25 ಮಹಿಳೆಯರ ಹುಬ್ಬನ್ನು ತಿದ್ದುತ್ತೇನೆ, ಆದರೆ ಕೆಲವೊಮ್ಮೆ ಐದು ಮಹಿಳೆಯರೂ ಬರುವುದಿಲ್ಲ,” ಎಂದು ಪ್ರಮೀಳಾ ಹೇಳುತ್ತಾರೆ. ಇದು ಅವರ ವ್ಯವಹಾರದಲ್ಲಿನ ಅನಿಶ್ಚಿತತೆಯನ್ನು ಎತ್ತಿ ತೋರಿಸುತ್ತದೆ. ಮದುಮಗಳಿಗೆ ಮೇಕಪ್ ಮಾಡುವ ಕೆಲಸವಿದ್ದಾಗ ಆ ದಿನ ಅವರ ಸಂಪಾದನೆ ರೂ. 5,000 ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. “ಮೊದಲು ಸಾಕಷ್ಟು ಮದುವೆಯ ಆರ್ಡರ್ ದೊರೆಯುತ್ತಿತ್ತು ಆದರೆ ಈಗೀಗ ಹುಡುಗಿಯರು ಮೊಬೈಲ್ ವೀಡಿಯೊ ನೋಡಿಕೊಂಡು ಅವರೇ ಮೇಕಪ್ ಮಾಡಿಕೊಳ್ಳುತ್ತಾರೆ,” ಎಂದು ಅವರು ಹೇಳುತ್ತಾರೆ. ತಮ್ಮ ಸೇವೆಗಳನ್ನು ಹೆಚ್ಚು ಆಕರ್ಷಕವಾಗಿಸಲು, ಅವರು ಒಂದು ಸಂಯೋಜನೆಯ ಕೊಡುಗೆಯನ್ನು ಹೊಂದಿದ್ದಾರೆ: ಈ ಸೇವೆಯಡಿ ಹುಬ್ಬುಗಳನ್ನು ತಿದ್ದಲು ಮತ್ತು ಮೇಲಿನ ತುಟಿಯ ಕೂದಲನ್ನು ತೆಗೆಯಲು 30 ರೂ. ಪಡೆಯಲಾಗುತ್ತದೆ.
ವಯಸ್ಸಾದ ಮಹಿಳೆಯರನ್ನು ಸೆಳೆಯುವುದು ಈಗಲೂ ಒಂದುಸವಾಲಾಗಿದೆ. ತನ್ನ ತಾಯಿಯಂತಹ ಹಳೆಯ ತಲೆಮಾರಿನ ಯಾವುದೇ ಮಹಿಳೆಯನ್ನು ಪಾರ್ಲರಿನಲ್ಲಿ ನೋಡುವುದು ಅಪರೂಪ ಎಂದು ಪ್ರಿಯಾ ಹೇಳುತ್ತಾರೆ: "ನನ್ನ ತಾಯಿ ತನ್ನ ಹುಬ್ಬುಗಳನ್ನು ತಿದ್ದಿಸುವುದು ಅಥವಾ ಹೇರ್ ಕಟ್ ಸಹ ಮಾಡಿಸಿಲ್ಲ. ನಾವು ನಮ್ಮ ಕಂಕುಳಿನ ಕೂದಲನ್ನು ಏಕೆ ವ್ಯಾಕ್ಸ್ ಮಾಡುತ್ತೇವೆ ಎನ್ನುವುದು ಅವಳಿಗೆ ಅರ್ಥವಾಗುವುದಿಲ್ಲ ಮತ್ತುʼನಾನು ದೇವರು ಸೃಷ್ಟಿಸಿದಂತೆಯೇ ಇದ್ದೇನೆ, ಅದನ್ನು ಏಕೆ ತಿದ್ದಿಕೊಳ್ಳಲಿ? ಎಂದು ಕೇಳುತ್ತಾರೆ,” ಎಂದು ಹೇಳುತ್ತಾರೆ.
ಸಂಜೆ 5 ಗಂಟೆ ಸುಮಾರಿಗೆ ತಾಯಿಯೊಬ್ಬರು ತನ್ನ ಇಬ್ಬರು ಹದಿಹರೆಯದ ಹೆಣ್ಣುಮಕ್ಕಳೊಂದಿಗೆ ಒಳಗೆ ಬಂದರು. ತಬಸ್ಸಿಮ್ ಮಲಿಕ್ ಪ್ರಮೀಳಾ ಪಕ್ಕದಲ್ಲಿ ಕುಳಿತರೆ, ಅವರ ಹೆಣ್ಣುಮಕ್ಕಳು ತಮ್ಮ ಹಿಜಾಬ್ ತೆಗೆದು ಕಪ್ಪು ವಿನೈಲ್ ಹೊದಿಸಿದ ಸಲೂನ್ ಕುರ್ಚಿಗಳಲ್ಲಿ ಕುಳಿತರು. ಕಿತ್ತಳೆ ಬಣ್ಣದ ಮೇಜು ವ್ಯಾಪಾರದ ಸಲಕರಣೆಗಳಿಂದ ಮುಚ್ಚಿ ಹೋಗಿತ್ತು - ಕತ್ತರಿಗಳು, ಬಾಚಣಿಗೆಗಳು, ವ್ಯಾಕ್ಸ್ ಹೀಟರ್, ಎರಡು ವಿಸಿಟಿಂಗ್ ಕಾರ್ಡುಗಳ ರಾಶಿಗಳು, ಥ್ರೆಡ್ಡಿಂಗ್ ದಾರಗಳು, ಪೌಡರ್ ಬಾಟಲಿಗಳು ಮತ್ತು ವಿವಿಧ ಲೋಷನ್‌ಗಳು ತಮ್ಮ ತಮ್ಮ ಸ್ಥಳಗಳಲ್ಲಿ ಅಚ್ಚುಕಟ್ಟಾಗಿ ಕುಳಿತುಕೊಂಡಿದ್ದವು.
"ನಿನಗೆ ಮೂವರು ಹೆಣ್ಣು ಮಕ್ಕಳಲ್ಲವೆ? ಒಬ್ಳಿಗೆ ಮದುವೆಯಾಯ್ತ?" ಎಂದು ಪ್ರಮೀಳಾ ತನ್ನ ಗ್ರಾಹಕರ ಜೀವನದ ಬಗ್ಗೆ ತನ್ನ ನಿಕಟ ಜ್ಞಾನವನ್ನು ಪ್ರದರ್ಶಿಸುತ್ತಾ ಪ್ರಶ್ನಿಸಿದರು.
"ಅವಳು ಈಗ ಓದುತ್ತಿದ್ದಾಳೆ, ಅವಳು ಶಾಲೆಯನ್ನು ಮುಗಿಸಿದ ನಂತರ, ನಾವು ಅದರ ಬಗ್ಗೆ ಯೋಚಿಸುತ್ತೇವೆ," ಎಂದು ತಬಸ್ಸಿಮ್ ಹೇಳಿದರು.
ಪ್ರಮೀಳಾ ಸೋಫಾದ ಮೇಲಿನ ತನ್ನ ಆಸನದಿಂದ ತಲೆಯಾಡಿಸಿದರು. ತಬಸ್ಸಿಮ್ ಜೊತೆ ಹರಟೆ ಹೊಡೆಯುತ್ತಿರುವಾಗ ಅವರು ತನ್ನ ಪ್ರಶಿಕ್ಷಣಾರ್ಥಿಗಳಾದ ತುನಿ ಮತ್ತು ರಾಣಿಯನ್ನು ಒಂದರ ನಂತರ ಒಂದರಂತೆ ಮಾಡಲು ಹುಡುಗಿಯರ ಹೇರ್ ಕಟ್ ತಯಾರಿ ನಡೆಸುವುದನ್ನು ಸಹ ಕುತೂಹಲದಿಂದ ನೋಡುತ್ತಿದ್ದರು. ಈ ಇಬ್ಬರು ಸ್ಟೈಲಿಸ್ಟ್‌ಗಳು 12 ವರ್ಷದ ಜಾಸ್ಮಿನ್ನಳ ಹತ್ತಿರ ಬಂದರು. ಜಾಸ್ಮಿನ್ ತನಗೆ ಟ್ರೆಂಡಿ ಕಟ್ ಬೇಕೆಂದು ಹೇಳಿದಳು. ಅದಕ್ಕೆ 80 ರೂಪಾಯಿ ಶುಲ್ಕ. ”ಯು ಆಕಾರವನ್ನು ಮಾಡುವವರೆಗೂ ಕೂದಲಿನಿಂದ ಕತ್ತರಿ ತೆಗೆಯಬೇಡಿ,” ಎಂದು ತುನಿಗೆ ನಿರ್ದೇಶನ ನೀಡಿದರು. ತುನಿ ತಲೆಯಾಡಿಸಿದರು.
ಒಂದು ಹೇರ್ ಕಟ್ ಅನ್ನು ಪ್ರಶಿಕ್ಷಣಾರ್ಥಿಗಳು ನಿರ್ವಹಿಸಿದರೆ, ಎರಡನೆಯದನ್ನು ಪ್ರಮೀಳಾ ನಿರ್ವಹಿಸಿದರು. ಅವರು ತನ್ನ ಸಹಾಯಕಿಯ ಕೈಯಿಂದ ಭಾರವಾದ ಲೋಹದ ಕತ್ತರಿಯನ್ನು ತೆಗೆದುಕೊಂಡು ತನ್ನ ಮುಂದಿರುವ ಯುವತಿ ಕೂದಲನ್ನು ಟ್ರಿಮ್ ಮಾಡಲು, ಕತ್ತರಿಸಲು ಮತ್ತು ವಿನ್ಯಾಸಗೊಳಿಸಲು ಪ್ರಾರಂಭಿಸಿದರು.
15 ನಿಮಿಷಗಳಲ್ಲಿ ಹೇರ್ ಕಟ್ ಮುಗಿಯಿತು ಮತ್ತು ರಾಣಿ ಉದ್ದನೆಯ ಕೂದಲಿನ ತುಂಡುಗಳನ್ನುಆಯ್ದುಕೊಳ್ಳಲು ಬಾಗಿದರು. ಅವರು ಅವುಗಳನ್ನು ರಬ್ಬರ್ ಬ್ಯಾಂಡ್ ಬಳಸಿ ಜಾಗರೂಕತೆಯಿಂದ ಕಟ್ಟಿ ಇಟ್ಟರು. ನಂತರ ಕೂದಲನ್ನು ಕೋಲ್ಕತ್ತಾದ ವಿಗ್ ತಯಾರಕರಿಗೆ ತೂಕದ ಆಧಾರದ ಮೇಲೆ ಮಾರಾಟ ಮಾಡಲಾಗುತ್ತದೆ, ಇಲ್ಲಿಂದ ಅಲ್ಲಿಗೆ ರೈಲಿನಲ್ಲಿ ಅರ್ಧ ದಿನದ ಪ್ರಯಾಣ.
“ಇನ್ನು ನಾನು ಅವರನ್ನು ಮತ್ತೆ ನೋಡುವುದು ಮತ್ತೆ ಮುಂದಿನ ವರ್ಷ,” ಎನ್ನುತ್ತಾರೆ ಪ್ರಮಿಳಾ, ಅಷ್ಟು ಹೊತ್ತಿಗೆ ತಾಯಿ ಮಕ್ಕಳು ಹೊರಗೆ ನಡೆದಿದ್ದರು. “ಅವರು ವರ್ಷಕ್ಕೊಮ್ಮೆ ಈದ್ ದಿನಕ್ಕೆ ಮೊದಲು ಹೇರ್ ಕಟ್ ಮಾಡಿಸಲು ಬರುತ್ತಾರೆ.” ತನ್ನ ಗ್ರಾಹಕರನ್ನು ತಿಳಿದುಕೊಳ್ಳುವುದು, ಅವರ ಅಭಿರುಚಿಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಆಪ್ತ ಹರಟೆಗಳನ್ನು ಮುಂದುವರಿಸುವುದು ಇವೆಲ್ಲವೂ ಪ್ರಮೀಳಾ ಅವರ ವ್ಯವಹಾರ ತಂತ್ರದ ಭಾಗವಾಗಿದೆ.
ಆದರೆ ಈ ಉದ್ಯಮಿಯ ಬದುಕೆಂದರೆ ಕೇವಲ ಮಸ್ಕಾರ ಮತ್ತು ಹೊಳಪಿನ ಲೋಕವಷ್ಟೇ ಅಲ್ಲ. ಅವರು ಮನೆಗೆಲಸ ಮುಗಿಸಲೆಂದು ಬೆಳಗಿನ ನಾಲ್ಕುಗಂಟೆಗೆ ಏಳುತ್ತಾರೆ. ಮನೆಗೆಲಸ ಮುಗಿಸಿ ಮಕ್ಕಳಾದ ಮಕ್ಕಳಾದ ಪ್ರಿಯಾ ಮತ್ತು ಪ್ರಿಯಾಂಶು ಅವರನ್ನು ಶಾಲೆಗೆ ಕಳುಹಿಸಲು ತಯಾರಿ ಮಾಡುತ್ತಾರೆ. ಪಾರ್ಲರ್ ಇರುವ ಶಾಪಿಂಗ್ ಕಾಂಪ್ಲೆಕ್ಸಿನಲ್ಲಿ ನಲ್ಲಿ ನೀರಿಲ್ಲದ ಕಾರಣ, ಮನೆಯಿಂದ ಹೊರಡುವ ಮೊದಲು, ಪ್ರಮೀಳಾ ಸುಮಾರು 10 ಲೀಟರ್ ನೀರನ್ನು ತುಂಬಿಸಿ ಪಾರ್ಲರಿಗೆ ಒಯ್ಯಬೇಕು. “ನೀರಿನ ಕೊಳಾಯಿಲ್ಲದೆ ಪಾರ್ಲರ್ ಹೇಗೆ ನಡೆಸುವುದು ಹೇಳಿ.” ಎಂದು ಅವರು ಕೇಳುತ್ತಾರೆ.
ವಿವಾಹ್ ಲೇಡೀಸ್ ಬ್ಯೂಟಿ ಪಾರ್ಲರ್ ಬೆಳಿಗ್ಗೆ 10 ಗಂಟೆಗೆ ತೆರೆಯುತ್ತದೆ ಮತ್ತು 11 ಗಂಟೆಗಳ ನಂತರ ಮುಚ್ಚುತ್ತದೆ. ಪ್ರಮೀಳಾ ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಮನೆಯಲ್ಲಿ ಅತಿಥಿಗಳನ್ನು ಹೊಂದಿರುವಾಗ ಮಾತ್ರ ಪಾರ್ಲರ್ ಮುಚ್ಚಿರುತ್ತದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಮೊದಲು ಅವರು ತನ್ನ ಪತಿ ರಾಜೇಶ್ ಅವರೊಡನೆ ಮನೆಯಿಂದ ಹೊರಡುತ್ತಾರೆ. ಅಲ್ಲಿಂದ ಒಂದು ಕಿಲೋಮೀಟರಿಗಿಂತ ಕಡಿಮೆ ದೂರದಲ್ಲಿರುವ ತನ್ನ ಅಂಗಡಿಗೆ ಹೋಗುವ ಮೊದಲು ಪಾರ್ಲರ್ ಬಳಿ ಡ್ರಾಪ್ ಮಾಡಿ ಹೋಗುತ್ತಾರೆ. "ನನ್ನ ಪತಿ ಒಬ್ಬ ಕಲಾವಿದ," ಎಂದು ಪ್ರಮೀಳಾ ಹೆಮ್ಮೆಯಿಂದ ಹೇಳುತ್ತಾರೆ. "ಅವರು ಸೈನ್ ಬೋರ್ಡ್ ಗಳು ಮತ್ತು ಸೇತುವೆಗಳನ್ನು ಚಿತ್ರಿಸುತ್ತಾರೆ, ಗ್ರಾನೈಟ್ ಕೆತ್ತನೆ ಮಾಡುತ್ತಾರೆ, ಮದುವೆ ಮೆರವಣಿಗೆಗಳು ಮತ್ತು ಡಿಜೆ ಟೆಂಪೊಗಳಿಗೆ ಹಿನ್ನೆಲೆಗಳನ್ನು ವಿನ್ಯಾಸಗೊಳಿಸುತ್ತಾರೆ, ಮತ್ತು ಇನ್ನೂ ಹೆಚ್ಚಿನದನ್ನು ಮಾಡುತ್ತಾರೆ," ಎಂದು ಅವರು ಹೇಳುತ್ತಾರೆ.
ಪ್ರಮೀಳಾ ಅವರ ಪಾರ್ಲರಿನಿಂದ ಹೊರಡುವುದು ತಡವಾದ ದಿನ, ರಾಜೇಶ್ ತನ್ನ ಅಂಗಡಿಯ ಹೊರಗೆ ಅವರಿಗಾಗಿ ಕಾಯುತ್ತಾ ತನ್ನ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಸಮಯವನ್ನು ಕಳೆಯುತ್ತಾರೆ.
"ಈ ವ್ಯವಹಾರದಲ್ಲಿ ಭಾನುವಾರಗಳು ಇರುವುದಿಲ್ಲ. ನೆರೆಹೊರೆಯವರು ನನ್ನ ಮನೆಗೆ ಅಪಾಯಿಂಟ್ಮೆಂಟ್ಗಾಗಿ ಬಂದಾಗ, ನಾನು ಅವರಿಗೂ ಶುಲ್ಕ ವಿಧಿಸುತ್ತೇನೆ" ಎಂದು ಪ್ರಮೀಳಾ ಹೇಳುತ್ತಾರೆ. ಚೌಕಾಶಿ ಮಾಡುವ ಅಥವಾ ಪಾವತಿಸಲು ನಿರಾಕರಿಸುವ ಗ್ರಾಹಕರೊಡನೆ ಕಠಿಣವಾಗಿ ವ್ಯವಹರಿಸಲಾಗುತ್ತದೆ: "ಗ್ರಾಹಕ ಅಹಂಕಾರಿಯಾಗಿದ್ದಲ್ಲಿ, ಆಗ ನಾವು ಅವರಿಗೆ ಅವರ ಸ್ಥಾನವನ್ನು ತೋರಿಸುತ್ತೇವೆ."
ವಿವಾಹ್ ಲೇಡೀಸ್ ಬ್ಯೂಟಿ ಪಾರ್ಲರ್ ಮಾಲೀಕರು ಪಶ್ಚಿಮ ಬಂಗಾಳದ ಕಲ್ಲಿದ್ದಲು ಪಟ್ಟಣ ದುರ್ಗಾಪುರದಲ್ಲಿ ಹುಟ್ಟಿ ಬೆಳೆದವರು, ಅಲ್ಲಿ ಅವರ ತಂದೆ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ಸಂಸ್ಥೆಯಲ್ಲಿ ಫೋರ್ ಮ್ಯಾನ್ ಆಗಿದ್ದರು ಮತ್ತು ಅವರ ತಾಯಿ ಎಂಟು ಜನರ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಪ್ರತಿ ವರ್ಷ, ಪ್ರಮೀಳಾ ಮತ್ತು ಅವರ ಐವರು ಒಡಹುಟ್ಟಿದವರು - ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು - ಜಮುಯಿಯಲ್ಲಿರುವ ತಮ್ಮ ತಾಯಿಯ ಅಜ್ಜಿಯ ಮನೆಗೆ ಭೇಟಿ ನೀಡುತ್ತಿದ್ದರು.
2000ನೇ ಇಸವಿಯಲ್ಲಿ 12ನೇ ತರಗತಿ ಮುಗಿಸಿದ ನಂತರ ಪ್ರಮೀಳಾ ರಾಜೇಶ್ ಕುಮಾರ್ ಅವರನ್ನು ಮದುವೆಯಾಗಿ ಜಮುಯಿಗೆ ಮರಳಿದರು. ಮದುವೆಯಾದ ಏಳು ವರ್ಷಗಳ ನಂತರ, ಅವರು ಮದುವೆಯಾಗಿ ಏಳು ವರ್ಷಗಳ ನಂತರ ಈ ಬ್ಯೂಟಿ ಪಾರ್ಲರ್ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾಗಿ ಹೇಳುತ್ತಾರೆ. ಗಂಡ ಕೆಲಸಕ್ಕೆ ಮತ್ತು ಮಕ್ಕಳು ಶಾಲೆಗೆ ಹೋಗತೊಡಗಿದ ನಂತರ ಅವರಲ್ಲಿ ಈ ಯೋಚನೆ ಮೂಡಿತು. ಕುಟುಂಬ ನಡೆಸಲು ಪತಿಯೊಡನೆ ಅವರೂ ಸೇರಿಕೊಂಡು ದುಡಿಯತೊಡಗಿದ್ದರಿಂದ ಸಂಸಾರ ನಡೆಸುವುದು ಸುಲಭವಾಯಿತು. "ಗ್ರಾಹಕರು ಬರುತ್ತಾರೆ ಮತ್ತು ನಾನು ಅವರೊಂದಿಗೆ ಮಾತನಾಡುತ್ತೇನೆ ಮತ್ತು ತಮಾಷೆ ಮಾಡುತ್ತೇನೆ; ಒತ್ತಡವು [ಒಂಟಿತನದ] ದೂರ ಹೋಗುತ್ತದೆ," ಎಂದು ಅವರು ವಿವರಿಸುತ್ತಾರೆ.
2007ರಲ್ಲಿ ಅವರು ಈ ಕೌಶಲಗಳನ್ನು ಕಲಿಯಲು ಬಯಸಿದಾಗ ಅಲ್ಲಿ ಹೆಚ್ಚು ಸೌಂದರ್ಯ ತರಬೇತಿ ಕೋರ್ಸುಗಳು ಇದ್ದಿರಲಿಲ್ಲ ಆದರೆ ಪ್ರಮೀಳಾ ಜಮುಯಿಯಲ್ಲಿ ಎರಡು ಕೋರ್ಸ್ ಕಲಿತರು. ಅವರ ಕುಟುಂಬವು ಎರಡಕ್ಕೂ ಪಾವತಿಸಿತು: ಅಕರ್ಷಕ್ ಪಾರ್ಲರ್‌ನಲ್ಲಿ ಆರು ತಿಂಗಳ ಸುದೀರ್ಘ ತರಬೇತಿಗೆ 6,000 ರೂ.ಗಳು ಮತ್ತು ಫ್ರೆಶ್ ಲುಕ್‌ನಲ್ಲಿ ಮತ್ತೊಂದು ಕೋರ್ಸಿಗೆ, 2,000 ರೂ. ನೀಡಿ ಕಲಿತರು.
ಇಂದು 15 ವರ್ಷಗಳ ಅನುಭವ ಹೊಂದಿರುವ ಪ್ರಮೀಳಾ ಬಿಹಾರದಾದ್ಯಂತ ವಿವಿಧ ಕಾಸ್ಮೆಟಿಕ್ ಬ್ರಾಂಡ್‌ಗಳು ನಡೆಸುವ ತರಬೇತಿ ಕಾರ್ಯಾಗಾರಗಳಿಗೆ ನಿಯಮಿತವಾಗಿ ಹಾಜರಾಗುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಅವರು ಹೇಳುತ್ತಾರೆ, "ನಾನು 50ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದೇನೆ ಮತ್ತು ಅವರಲ್ಲಿ ಅನೇಕರು ತಮ್ಮದೇ ಆದ ಪಾರ್ಲರ್‌ಗಳನ್ನು ಪ್ರಾರಂಭಿಸಿದ್ದಾರೆ. ಕೆಲವರು ನೆರೆಹೊರೆಯ ಹಳ್ಳಿಗಳಲ್ಲಿದ್ದಾರೆ."
ನಾವು ಸಂದರ್ಶನವನ್ನು ಮುಗಿಸುತ್ತಿರುವಾಗ, ಪ್ರಮೀಳಾ ಶರ್ಮಾ ತನ್ನ ಕೆಂಪು ಲಿಪ್ಸ್ಟಿಕ್ಕನ್ನು ಟಚ್ ಮಾಡಿ ಸರಿಪಡಿಸಿಕೊಂಡರು. ನಂತರ ಕಾಡಿಗೆ ಕ್ರೇಯಾನ್ ಅನ್ನು ಎತ್ತಿಕೊಂಡು, ತನ್ನ ಕಣ್ಣುಗಳನ್ನು ಕಪ್ಪಾಗಿಸಿದರು ಮತ್ತು ತನ್ನ ಪಾರ್ಲರಿನಲ್ಲಿರುವ ಕೆಂಪುಬಣ್ಣದಿಂದ ಆವೃತವಾದ ಸೋಫಾದ ಮೇಲೆ ಕುಳಿತರು.
“ನಾನು ಅಷ್ಟೇನೂ ಚಂದ ಇಲ್ಲ, ಆದ್ರೆ ನೀವು ನನ್ನ ಫೋಟೊ ತೆಗೀಬಹುದು,” ಎಂದು ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು