ಈ ಸಂಚಿಕೆಯಲ್ಲಿ ಪುಣೆಯ ಮುಲ್ಶಿ ತಾಲ್ಲೂಕಿನವರಾದ ಜಾಯಿ ಸಾಖಲೆ ಒಂದಷ್ಟು ಓವಿಗಳನ್ನು (ಬೀಸುಕಲ್ಲಿನ ಪದ) ಹಾಡಿದ್ದಾರೆ. ಈ ಪದಗಳಲ್ಲಿ ತಾಯಿ ತನ್ನ ಚೊಚ್ಚಲ ಬಾಣಂತಿ ಮಗಳಿಗೆ ಆರೋಗ್ಯ ಕಾಳಜಿ ಮಾಡಿಕೊಡುವುದನ್ನು ಮತ್ತು ಸಾಮಾಜಿಕ ರೂಢಿಗಳನ್ನು ಹೇಗೆ ಪಾಲಿಸಬೇಕೆನ್ನುವುದನ್ನು ಹೇಳಿಕೊಡುತ್ತಾಳೆ
"ನಿನ್ನ ಹಿಂಗಾಲುಗಳು ಎಷ್ಟೊಂದು ಚಂದ, ಅವು ಕಾಣದಂತೆ ಕೆಲವು ಸೀರೆ ನೆರಿಗೆಗಳನ್ನು ಸಡಿಲಗೊಳಿಸು." ಎಂದು ತಾಯಿ ತನ್ನ ಗರ್ಭಿಣಿ ಮಗಳಿಗೆ ಮೆಲ್ಲನೆ ಹೇಳುತ್ತಾಳೆ. ಇದರರ್ಥ ಅವಳು ಗರ್ಭಿಣಿ ಎನ್ನುವ ಕಾರಣಕ್ಕೆ ಹೆಣ್ಣು ಮಕ್ಕಳಿಂದ ಸಮಾಜ ನಿರೀಕ್ಷಿಸುವ ನಡತೆಯನ್ನು ನಿರ್ಲಕ್ಷಿಸುವಂತಿಲ್ಲವೆಂದು.
ಪುಣೆಯ ಮುಲ್ಶಿ ತಾಲ್ಲೂಕಿನ ಲಾವ್ಹರ್ಡೆ ಗ್ರಾಮದ ಜೈ ಸಖಾಳೆ, ಮಗಳು ಮೊದಲ ಬಾರಿ ಬಸುರಿಯಾಗಿರುವುದರ ಕುರಿತು ಮತ್ತು ಹೆರಿಗೆಯ ಕುರಿತು ತಾಯಿಯ ಸಂತೋಷವನ್ನು ತಮ್ಮ ಹಾಡುಗಳಲ್ಲಿ ತಂದಿದ್ದಾರೆ. ಜೊತೆಗೆ ಅವಳ ಆರೋಗ್ಯದ ಕುರಿತು ಕಾಳಜಿ ತೋರಿಸುತ್ತಾ ಕೆಲವು ಮನೆ ಮದ್ದುಗಳ ಕುರಿತೂ ಸಲಹೆ ನೀಡುತ್ತಾರೆ.
ಹೆರಿಗೆ ಕಷ್ಟದ ನಂತರ ಮಗಳ ಹಿಮ್ಮಡಿಗಳು ಹಳದಿಯಾಗಿರುವುದನ್ನು ನೋಡಿದ ತಾಯಿ ಸೋಂಪಿನ ಬೀಜ ಮತ್ತು ಅರಿಶಿನದ ಹೊಗೆ ತೆಗೆದುಕೊಳ್ಳುವಂತೆ ಹೇಳುತ್ತಾಳೆ. ʼʼನಿನಗಿದು ಎರಡನೇ ಜನ್ಮದಂತೆ ಮೈಯನ್ನು ಬೆಚ್ಚಗಿರಿಸಿಕೊಳ್ಳಲು ಗಂಡನ ಘೋಂಗ್ಡಿಯನ್ನು (ಒರಟಾದ ಕಂಬಳಿ) ಹೊದ್ದು ಮಲಗು” ಎಂದು ಮಗಳಿಗೆ ಕಾಳಜಿಯಿಂದ ಹೇಳುತ್ತಾಳೆ.
ಮಗಳು ತನ್ನ ಹೆತ್ತವರು ಮತ್ತು ಸಂಬಂಧಿಕರೆದುರು ತನ್ನ ಬಸುರಿನ ಕುರಿತು ನಾಚಿಕೊಂಡಿದ್ದನ್ನುತಾಯಿ ಪ್ರೀತಿಯಿಂದ ನೆನೆಯುತ್ತಾಳೆ. ಮಗಳಿಗೆ ಒಂಬತ್ತು ತಿಂಗಳು ತುಂಬಿದಾಗ ಅಳಿಯ ಅವಳನ್ನು ಮುದ್ದಾಡಿದ್ದು, ಬೆಳಗಿನ ಬೇನೆ ಕಾಡಿದಾಗ ಅವಳಿಗೆ ಅಡಿಕೆ ತಂದು ಕೊಟ್ಟಿದ್ದು ಹಾಗೂ ಅವಳು ಮಾವಿನ ಹಣ್ಣು ಬಯಸಿದಾಗ ಮರವೇರಿ ಕಳಿತ ಹಣ್ಣುಗಳನ್ನು ಕಿತ್ತು ತಂದುಕೊಟ್ಟಿದ್ದನ್ನು ಹಾಡಿನಲ್ಲಿ ಹೇಳುತ್ತಾಳೆ. ಅವಳು ದಿನ ತುಂಬಿದಂತೆ ʼಹಳದಿ ಸಂಜೆಮಲ್ಲಿಗೆಯಂತೆʼ ಹೊಳೆಯುತ್ತಿದ್ದಳು ಎನ್ನುತ್ತಾ ತಾಯಿ ತನ್ನ ಮಗಳು ಮತ್ತು ಅಳಿಯನ ಕುರಿತು ಹೆಮ್ಮೆಪಡುತ್ತಾಳೆ.
ಈಗಷ್ಟೇ ಹಡೆದಿರುವೆ ನೀನು
ಬಚ್ಚಲಿಗೆ ಹೋಗುವುದನು ನೋಡಿದೆನು ನಾನು
ಅನುಭವಿಸಿ ಹೆರಿಗೆಯ ನೋವು
ನನ್ನ ಮುದ್ದಿನ ಮಗಳ ಹಿಮ್ಮಡಿಗಳು ಆಗಿವೆ
ಹಳದಿ
ಓ ಚೊಚ್ಚಲ
ತಾಯೀ, ಸೋಂಪಿನ ಬೀಜದ ಧೂಪವ ತೆಗೆದುಕೋ
ನಿನ್ನ
ಗಂಡನ ದಪ್ಪ ಕಂಬಳಿಯ ಅಪ್ಪುಗೆ ನಿನ್ನ ಬೆಚ್ಚಗೆ ಇಡುವುದು
ಈಗಷ್ಟೇ
ಪುಟ್ಟ ತಾಯಿ ನೀನು ಅರಿಶಿನವ ಹಚ್ಚಿ ಮಿಂದು ಬಾ ನೀನು
ಓ ನನ್ನ
ಮುದ್ದು ಮಗಳೇ ಮರು ಜನುಮ ಪಡೆದಂತೆ ಹೆರಿಗೆ
ನಾಚುತಿಹಳು
ನನ್ನ ಮುದ್ದಿನ ಮಗಳು ತನ್ನ ಹೆತ್ತವ್ವ-ಅಪ್ಪನಾ ಮುಂದೆ
ಮರೆ ಮಾಡುತಿಹಳು
ಬಸಿರನ್ನು ಸೀರೆ ಸೆರಗೆಳೆದು ಮುದ್ದಿನ ಮಗಳು
ಓ ಮುದ್ದು
ಬಸುರಿಯೇ ಕೇಳು ಬೆಳಗಿನ ಬೇನೆ ಕಾಡುತಿದೆ ನಿನಗೆ
ನಿನ್ನ
ಪ್ರೇಮದ ನಲ್ಲ ನಿನಗೆ ತಂದು ಕೊಡುವನು ಎಳೆಯಡಕೆ
ಓ ಮುದ್ದು
ಬಸುರಿಯೇ ಕೇಳಿಲ್ಲಿ ಮುದ್ದು ಮಾಡುವರು ನಿನ್ನ ಬಸುರಿಯೆಂದು
ನಿನ್ನ
ಮುದ್ದು ಗಂಡ ಮರವೇರಿ ಕಳಿತ ಮಾವಿನ ಹಣ್ಣು ತರುವನು ನಿನಗೆಂದು
ಓ ಬಾಣಂತಿ
ಹೆಣ್ಣೇ, ಬೆಳ್ಳನೆ ಹೊಳೆದಾವು ನಿನ್ನ ಕಣಕಾಲು
ಹೇಳುವೆನು
ಕೇಳು ಓ ಹೆಣ್ಣೇ ಕೆಳಗಿಳಿಸು ಸೀರೆಯನು ಇನ್ನಷ್ಟು
ಓ ಬಾಣಂತಿ
ಹೆಣ್ಣೇ, ಹೆತ್ತಾದ ಮೇಲೆ ಹೇಗಿರುವೆ ಗೊತ್ತೇ?
ನಾ ಹೇಳುವೇ
ಕೇಳು ಮುದ್ದು ಮಗಳೇ ಹೊಳೆಯುತಿರುವೆ ನೀ ಮಧ್ಯಾಹ್ನ ಮಲ್ಲಿಗೆಯ ಹಾಗೆ
ಓ ಬಸುರೀ
ಹೆಣ್ಣೇ ಹೇಳು, ಹೊಳೆಯುತಿವೆ ಕೆನ್ನೆಗಳು ಕೆಂಪಾಗಿ
ಎಷ್ಟು
ತಿಂಗಳು ಕಳೆದವು ಹೇಳು ನೀನು ಇತ್ತೀಚೆಗೆ ಹೊರಗಾಗಿ
ಪ್ರದರ್ಶಕಿ/ಹಾಡುಗಾರ್ತಿ: ಜಾಯಿ ಸಾಖಲೆ
ಗ್ರಾಮ: ಲಾವ್ಹರ್ಡೆ
ತಾಲ್ಲೂಕು: ಮುಲ್ಶಿ
ಜಿಲ್ಲೆ: ಪುಣೆ
ಜಾತಿ: ನವ ಬೌದ್ಧ
ವಯಸ್ಸು: 2012ರಲ್ಲಿ ನಿಧನರಾದರು
ವಿದ್ಯಾರ್ಹತೆ: ಶಾಲೆಗೆ ಹೋಗಿಲ್ಲ
ಮಕ್ಕಳು: 1 ಮಗಳು (ಲೀಲಾಬಾಯಿ ಶಿಂಧೆ – ಗ್ರೈಂಡ್ ಮಿಲ್ ಸಾಂಗ್ ಪ್ರಾಜೆಕ್ಟ್‌ನಲ್ಲಿ ಇವರೂ ಪಾಲ್ಗೊಂಡಿದ್ದಾರೆ)
ದಿನಾಂಕ: ಅವರ ಹಾಡುಗಳನ್ನು 1999ನೇ ಇಸವಿಯ ಅಕ್ಟೋಬರ್ ತಿಂಗಳ 5ನೇ ತಾರೀಖಿನಂದು ರೆಕಾರ್ಡ್ ಮಾಡಿಕೊಳ್ಳಲಾಗಿತ್ತು
ಪೋಸ್ಟರ್: ಊರ್ಜಾ
ಓದಿರಿ : ಹೇಮಾ ರಾಯಿರ್ಕರ್ ಮತ್ತು ಗೈ ಪೊಯಿಟೆವಿನ್ ಸ್ಥಾಪಿಸಿದ ಮೂಲ ಗ್ರೈಂಡ್‌ಮಿಲ್ ಸಾಂಗ್ಸ್ ಪ್ರಾಜೆಕ್ಟ್ ಕುರಿತು .
ಅನುವಾದ: ಶಂಕರ. ಎನ್. ಕೆಂಚನೂರು