ರಂಪಾದಿಂದ ಕೋಯಾ ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲಾಗಿದೆ. ಪಶ್ಚಿಮ ಗೋದಾವರಿಯಲ್ಲಿ ಭೂ ಸಮಸ್ಯೆ ಸ್ಫೋಟಗೊಳ್ಳುತ್ತಿದೆ ಮತ್ತು ಪೂರ್ವದಲ್ಲಿ ಇದು ಕಾವು ಪಡೆದುಕೊಳ್ಳುತ್ತಿದೆ

ನಾವು ಜೀಪಿನಿಂದ ಇಳಿದ ಕೂಡಲೇ ಕಾನ್‌ಸ್ಟೆಬಲ್‌ಗಳು ಭಯಭೀತರಾಗಿ ಕೋಟೆಯಂತಹ ರಾಜವೊಮಂಗಿ ಪೊಲೀಸ್ ಠಾಣೆ ಒಳಗೆ ತಮ್ಮ ಸ್ಥಾನಗಳಲ್ಲಿ ನಿಂತರು. ನಿಲ್ದಾಣವೇ ಪೊಲೀಸ್ ಕಣ್ಗಾವಲಿನಲ್ಲಿದೆ. ವಿಶೇಷ ಸಶಸ್ತ್ರ ಪಡೆ ಪೊಲೀಸರು ಇದನ್ನು ಸುತ್ತುವರೆದಿದ್ದಾರೆ. ನಮ್ಮಲ್ಲಿ ಕ್ಯಾಮೆರಾಗಳು ಮಾತ್ರ ಇರುವುದನ್ನು ನೋಡಿದರೂ, ಅವರ ಉದ್ವೇಗ ಕಡಿಮೆಯಾಗಲಿಲ್ಲ. ಪೂರ್ವ ಗೋದಾವರಿಯ ಈ ಭಾಗದಲ್ಲಿ ಪೊಲೀಸ್ ಠಾಣೆಯ ಫೋಟೊ ತೆಗೆಯುವುದನ್ನು ನಿಷೇಧಿಸಲಾಗಿದೆ.

ಒಳ ಕಾರಿಡಾರ್‌ನ ಭದ್ರತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ಹೆಡ್ ಕಾನ್‌ಸ್ಟೆಬಲ್ ಒಬ್ಬರು ನಾವು ಯಾರೆಂದು ತಿಳಿಯಲು ಬಯಸಿದ್ದರು. ಪತ್ರಕರ್ತರೇ? ವಾತಾವರಣ ಸ್ವಲ್ಪ ತಿಳಿಯಾಯಿತು. "ನಿಮ್ಮ ಸ್ಟೇಷನ್ ಮೇಲೆ 75 ವರ್ಷಗಳ ಹಿಂದೆ ದಾಳಿ ಮಾಡಲಾಗಿದೆ. ನೀವು ಪ್ರತಿಕ್ರಿಯೆ ನೀಡುವಲ್ಲಿ ನೀವು ತಡಮಾಡಿದಿರಲ್ಲವೆ?" ಎಂದು ನಾನು ಕೇಳಿದೆ.

“ಯಾರಿಗ್ಗೊತ್ತು?, ಅಂತಹದೇ ದಾಳಿ ಮತ್ತೆ ಇಂದು ಮಧ್ಯಾಹ್ನ ಮತ್ತೆ ನಡೆಯಬಹುದು” ಎಂದು ವೇದಾಂತಿಯಂತೆ ಹೇಳಿದರು.

ಆಂಧ್ರಪ್ರದೇಶದ ಈ ಬುಡಕಟ್ಟು ಪ್ರದೇಶವನ್ನು "ಏಜೆನ್ಸಿ" ಪ್ರದೇಶ ಎಂದು ಕರೆಯಲಾಗುತ್ತದೆ. ಆಗಸ್ಟ್ 1922ರಲ್ಲಿ ಇಲ್ಲಿನ ಜನರು ದಂಗೆಯೆದ್ದರು. ಆರಂಭದಲ್ಲಿ ಸ್ಥಳೀಯ ಆಕ್ರೋಶದಿಂದ ಆರಂಭಗೊಂಡ ಇದು, ನಂತರ ವ್ಯಾಪಕವಾದ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿತು. ಬುಡಕಟ್ಟು  ಸಮುದಾಯದವರಲ್ಲದ, ಅಲ್ಲೂರಿ ರಾಮಚಂದ್ರ ರಾಜು (ಸೀತಾರಾಮ ರಾಜು ಎನ್ನುವುದು ಅವರ ಜನಪ್ರಿಯ ಹೆಸರು) ಮನ್ಯಂ ದಂಗೆಯಲ್ಲಿ ಬೆಟ್ಟದ ಬುಡಕಟ್ಟು ಜನರನ್ನು ಮುನ್ನಡೆಸಿದರು. ಸ್ಥಳೀಯ ಜನರು ಈ ಹೆಸರಿನಿಂದ ಈ ದಂಗೆಯನ್ನು ನೆನಪಿಸಿಕೊಳ್ಳುತ್ತಾರೆ. ಇಲ್ಲಿ, ಜನರು ಕೇವಲ ಸಮಸ್ಯೆಗಳಿಗೆ ಪರಿಹಾರಗಳನ್ನು ಬಯಸಲಿಲ್ಲ. 1922ರ ಹೊತ್ತಿಗೆ, ಅವರು ರಾಜ್ (ಬ್ರಿಟಿಷ್ ಸರ್ಕಾರ) ಅನ್ನು ಉರುಳಿಸಲು ಹೋರಾಡಲು ಪ್ರಾರಂಭಿಸಿದರು. ಏಜೆನ್ಸಿ ಪ್ರದೇಶದ ಹಲವಾರು ಪೊಲೀಸ್ ಠಾಣೆಗಳ ಮೇಲೆ ದಂಗೆಕೋರರು ದಾಳಿಮಾಡಿದರು, ಅದರಲ್ಲಿ ರಾಜವೊಮ್ಮಂಗಿ ಪೊಲೀಸ್ ಠಾಣೆಯೂ ಒಂದು.

ಈ ಪ್ರದೇಶದ ಜನರು ಯಾವ ಕಾರಣಗಳಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದರೋ ಅವುಗಳಲ್ಲಿ ಅನೇಕ ಸಮಸ್ಯೆಗಳು, 75 ವರ್ಷಗಳ ನಂತರವೂ ಅಸ್ತಿತ್ವದಲ್ಲಿದೆ.

PHOTO • P. Sainath

ಪೂರ್ವ ಗೋದಾವರಿಯಲ್ಲಿರುವ ಸೀತಾರಾಮ ರಾಜು ಅವರ ವಿಗ್ರಹ

ರಾಜು ಅವರ ಅನಿಯಂತ್ರಿತ ಸಹಚರರು ಪೂರ್ಣ ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಸೋಲಿಸಿದರು. ನಂತರ ಅವರನ್ನು ಎದುರಿಸಲು ವಿಫಲವಾದ ಬ್ರಿಟಿಷರು ಅಲ್ಲಿನ ಮಲಬಾರ್ ವಿಶೇಷ ಪಡೆಯನ್ನು ಕರೆದು ದಂಗೆಯನ್ನು ಹತ್ತಿಕ್ಕಿದರು. ಈ ತಂಡವು ಕಾಡಿನಲ್ಲಿ ಹೋರಾಡುವಲ್ಲಿ ಪ್ರವೀಣರಾಗಿದ್ದರು ಮತ್ತು ವೈರ್‌ಲೆಸ್ ಸೆಟ್‌ಗಳನ್ನು ಹೊಂದಿದ್ದರು. ಈ ದಂಗೆ 1924ರಲ್ಲಿ ರಾಜುವವರ ಸಾವಿನ ನಂತರ ಕೊನೆಗೊಂಡಿತು. ಆದರೂ, ಬ್ರಿಟಿಷರಿಗೆ, ಇತಿಹಾಸಕಾರ ಎಂ.ವೆಂಕಟ ರಂಗಯ್ಯ ಹೇಳಿರುವಂತೆ: "ಇದು ಅಸಹಕಾರ ಚಳುವಳಿಗಿಂತ ಹೆಚ್ಚಿನ ತೊಂದರೆಗಳನ್ನು ಉಂಟುಮಾಡಿತು."

ಈ ವರ್ಷ ಸೀತಾರಾಮ್ ರಾಜು ಅವರ 100ನೇ ಜನ್ಮ ಜಯಂತಿ, ಅವರು ತನ್ನ 27ನೇ ವಯಸ್ಸಿನಲ್ಲಿ ಕೊಲ್ಲಲ್ಪಟ್ಟರು.

PHOTO • P. Sainath

ಕೃಷ್ಣಾದೇವಿ ಪಟ್ಟಣದಲ್ಲಿರುವ ಸೀತರಾಮ ರಾಜು ಅವರ ಸಮಾಧಿ

ವಸಾಹತುಶಾಹಿ ಸರ್ಕಾರ ಬೆಟ್ಟದ ಬುಡಕಟ್ಟು ಜನಾಂಗದ ಬದುಕನ್ನು ನಾಶ ಮಾಡಿತು. 1870 ಮತ್ತು 1900ರ ನಡುವೆ, ರಾಜ್ ಅನೇಕ ಕಾಡುಗಳನ್ನು 'ಸಂರಕ್ಷಿತ' ಎಂದು ಘೋಷಿಸಿತು ಮತ್ತು ಪೋಡು (ವರ್ಗಾವಣೆ) ಕೃಷಿಯನ್ನು ನಿಷೇಧಿಸಿತು. ಶೀಘ್ರದಲ್ಲೇ ಅವರು ಬುಡಕಟ್ಟು ಜನಾಂಗದವರಿಗೆ ಸಣ್ಣ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಹಕ್ಕನ್ನು ನಿರಾಕರಿಸಿದರು. ಅರಣ್ಯ ಇಲಾಖೆ ಮತ್ತು ಅದರ ಗುತ್ತಿಗೆದಾರರು ಈ ಹಕ್ಕನ್ನು ಅವರಿಂದ ಕಸಿದುಕೊಂಡರು. ಅದರ ನಂತರ, ಅವರು ಯಾವುದೇ ವೇತನವಿಲ್ಲದೆ, ಬುಡಕಟ್ಟು ಜನಾಂಗದವರನ್ನು ಬಲವಂತದ ಕಾರ್ಮಿಕರನ್ನಾಗಿ ನೇಮಿಸಿಕೊಳ್ಳಲು ಪ್ರಾರಂಭಿಸಿದರು. ಈ ಇಡೀ ಪ್ರದೇಶವು ಬುಡಕಟ್ಟು ಜನಾಂಗದವರಲ್ಲದವರ ವಶಕ್ಕೆ ಹೋಯಿತು. ಆಗಾಗ್ಗೆ, ಅವರ ಜಮೀನುಗಳನ್ನು ಶಿಕ್ಷೆಯಾಗಿ ಅವರಿಂದ ಕಸಿದುಕೊಳ್ಳಲಾಯಿತು. ಇಂತಹ ನಡೆಗಳಿಂದ ಇಡೀ ಪ್ರದೇಶದ ಆರ್ಥಿಕತೆ ಕುಸಿಯಿತು.

ರಂಪಾದ ಕೋಯಾ ಬುಡಕಟ್ಟು ಜನಾಂಗದವರಾದ ರಾಮಾಯಮ್ಮ ಹೇಳುತ್ತಾರೆ, “50 ವರ್ಷಗಳ ಹಿಂದಿನ ಪರಿಸ್ಥಿತಿ ಕುರಿತು ನನಗೆ ತಿಳಿದಿಲ್ಲ. ಆದರೆ ಭೂರಹಿತರು ಇಂದು ಹೆಚ್ಚು ತೊಂದರೆಗೀಡಾಗಿದ್ದಾರೆ. "

ರಂಪಾ ರಾಜು ಅವರ ಪಾಲಿಗೆ ವೇದಿಕೆಯಾಗಿತ್ತು. ಸುಮಾರು 150 ಮನೆಗಳನ್ನು ಹೊಂದಿರುವ ಈ ಸಣ್ಣ ಹಳ್ಳಿಯಲ್ಲಿ ರಾಮಾಯಮ್ಮ ಸೇರಿದಂತೆ ಸುಮಾರು 60 ಜನರು ಭೂರಹಿತರಾಗಿದ್ದಾರೆ.

ಇವರು ಮೊದಲು ಭೂರಹಿತರಾಗಿರಲಿಲ್ಲ. "ನಮ್ಮ ಪೋಷಕರು ಸುಮಾರು 10 ರೂ. ಸಾಲ ತೆಗೆದುಕೊಂಡ ಕಾರಣ ತಮ್ಮ ಭೂಮಿಯನ್ನು ಕಳೆದುಕೊಂಡರು" ಎಂದು ಅವರು ಹೇಳುತ್ತಾರೆ. ಮತ್ತು, "ಬುಡಕಟ್ಟು ಜನಾಂಗದ ವೇಷದಲ್ಲಿರುವ ಹೊರಗಿನವರು ನಮ್ಮ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ." ಇಲ್ಲಿನ ದೊಡ್ಡ ಭೂಮಾಲೀಕ ಬಯಲು ಪ್ರದೇಶದಿಂದ ಬಂದವರು, ಅವರು ದಾಖಲೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರಣದಿಂದಾಗಿ ಅವರು ಈ ಪ್ರದೇಶದ ಮಾಲೀಕತ್ವದ ಪತ್ರಕ್ಕೆ ಪ್ರವೇಶ ಪಡೆದು ಅದನ್ನು ಅವರು ಕುಶಲತೆಯಿಂದ ತಮ್ಮದನ್ನಾಗಿಸಿಕೊಂಡಿದ್ದಾರೆಂದು ಜನರು ನಂಬುತ್ತಾರೆ. ಅವರ ಕುಟುಂಬವು ಈಗ ಕೃಷಿ ಋತುವಿನಲ್ಲಿ ಪ್ರತಿದಿನ ಸುಮಾರು 30 ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದೆ. ಸುಮಾರು ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿಯನ್ನು ಹೊಂದಿರುವ ಜನರಿರುವ ಈ ಹಳ್ಳಿಯಲ್ಲಿ ಇದೊಂದು ವಿಶಿಷ್ಟ ವಿಷಯ.

ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಭೂ ಸಮಸ್ಯೆ ಸ್ಫೋಟಗೊಳ್ಳುತ್ತಿದೆ. ಮತ್ತದು ಪೂರ್ವದಲ್ಲಿ ಕುದಿಯುತ್ತಿದೆ. ಬುಡಕಟ್ಟು ಜನರಲ್ಲಿ ಸಾಕಷ್ಟು ಜನರು ಭೂಮಿ ಕಳೆದುಕೊಂಡಿದ್ದರು. ಬುಡಕಟ್ಟು ಅಭಿವೃದ್ಧಿ ಏಜೆನ್ಸಿಯ ಅಧಿಕಾರಿಯೊಬ್ಬರು "ಸ್ವಾತಂತ್ರ್ಯದ ನಂತರವಾದರೂ ಅವರ ಹಕ್ಕುಗಳನ್ನು ರಕ್ಷಿಸಬೇಕಾಗಿತ್ತು ಆದರೆ ಆಗಲೇ ಅವರ ಹಕ್ಕುಗಳು ಕಳೆದುಹೋದವು" ಎಂದು ಹೇಳುತ್ತಾರೆ. ಈ ಪ್ರದೇಶದ ಸುಮಾರು 30 ಪ್ರತಿಶತದಷ್ಟು ಭೂಮಿಯನ್ನು 1959 ಮತ್ತು 1970ರ ನಡುವೆ ವರ್ಗಾಯಿಸಲಾಯಿತು. ವಿಚಿತ್ರವೆಂದರೆ, "1959ರ ಆಂಧ್ರಪ್ರದೇಶ ರಾಜ್ಯ ಭೂ ವರ್ಗಾವಣೆ ನಿಯಂತ್ರಣ ಕಾಯ್ದೆ ಕೂಡ ಈ ಪ್ರವೃತ್ತಿಯನ್ನು ತಡೆಯಲು ಸಾಧ್ಯವಾಗಲಿಲ್ಲ". ಈಗ ಈ ಕಾನೂನನ್ನು ಮತ್ತಷ್ಟು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

PHOTO • P. Sainath

ರಂಪಾದ ಮತ್ತೊಂದು ಭೂರಹಿತ ಕುಟುಂಬದವರಾದ ಪಿ.ಕೃಷ್ಣಮ್ಮ ಅವರ ಕುಟುಂಬದ ಪ್ರಸ್ತುತ ಹೋರಾಟದ ಬಗ್ಗೆ ಮಾತನಾಡುತ್ತಿರುವುದು

ಬುಡಕಟ್ಟು ಮತ್ತು ಬುಡಕಟ್ಟಿನವರಲ್ಲದವರ ನಡುವಿನ ಹೋರಾಟವು ಸಂಕೀರ್ಣವಾಗಿದೆ. ಇಲ್ಲಿ ಬುಡಕಟ್ಟು ಸಮುದಾಯದವರಲ್ಲದ ಬಡವರೂ ಇದ್ದಾರೆ. ಉದ್ವಿಗ್ನತೆಯ ಹೊರತಾಗಿಯೂ, ಇಲ್ಲಿಯವರೆಗೆ ಅವರು ಬುಡಕಟ್ಟು ಜನಾಂಗದವರ ಕೋಪಕ್ಕೆ ಬಲಿಯಾಗಿಲ್ಲ. ಇದು ಇತಿಹಾಸಕ್ಕೆ ಸಂಬಂಧಿಸಿದೆ. ದಂಗೆಯ ಸಮಯದಲ್ಲಿ, ಬ್ರಿಟಿಷ್ ಮತ್ತು ಸರ್ಕಾರಿ ಸಂಸ್ಥೆಗಳ ಮೇಲೆ ಮಾತ್ರ ದಾಳಿ ನಡೆಸಲಾಗುವುದು ಎಂದು ರಾಜು ಸೂಚನೆಗಳನ್ನು ನೀಡಿದ್ದರು. ರಂಪ ಬಂಡುಕೋರರ ದೃಷ್ಟಿಯಲ್ಲಿ, ಅವರ ಹೋರಾಟವು ಬ್ರಿಟಿಷರೊಂದಿಗೆ ಮಾತ್ರ.

ಇಂದು, ಬುಡಕಟ್ಟು ಜನಾಂಗದವರ ಶ್ರೀಮಂತ ವರ್ಗವು ಬುಡಕಟ್ಟು ಜನಾಂಗದವರನ್ನು ಮತ್ತು ಅವರ ಸ್ವಂತ ಜನರನ್ನು ಬಳಸಿಕೊಳ್ಳುತ್ತಿದೆ. ಮತ್ತು ಇಲ್ಲಿನ ಕೆಳಮಟ್ಟದ ಅಧಿಕಾರಶಾಹಿ ಮುಖ್ಯವಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿಲ್ಲದ ಜನರು. 1/70 ರೆಗ್ಯುಲೇಷನ್‌ ತಡೆಗಳನ್ನೂ ಸಹ ತೆಗೆದುಹಾಕಲಾಗಿದೆ. "ಭೂಮಿಯನ್ನು ಗುತ್ತಿಗೆ ನೀಡುವ ಪದ್ಧತಿ ಇಲ್ಲಿ ಸಾಮಾನ್ಯವಾಗಿದೆ" ಎಂದು ಕೊಂಡಪಲ್ಲಿ ಗ್ರಾಮದ ಭೂರಹಿತ ಕೋಯಾ ಬುಡಕಟ್ಟು ಜನಾಂಗದವರಾದ ಪೊಟ್ಟವ ಕಾಮರಾಜ್ ಹೇಳುತ್ತಾರೆ. ಗುತ್ತಿಗೆ ಪಡೆದ ಭೂಮಿ ವಿರಳವಾಗಿ ಅದರ ಮಾಲೀಕರಿಗೆ ಮರಳುತ್ತದೆ. ಕೆಲವು ಹೊರಗಿನವರು ಬುಡಕಟ್ಟು ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬುಡಕಟ್ಟು ಮಹಿಳೆಯನ್ನು ತಮ್ಮ ಎರಡನೇ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಆಗೆಲ್ಲ ಜನರು ಕೊಂಡಪಲ್ಲಿ ಸೀತಾರಾಮ ರಾಜು ಅವರ ಪ್ರಭಾವಕ್ಕೆ ಒಳಗಾಗುತ್ತಿದ್ದರು. ಬ್ರಿಟಿಷರು ಬಂಡುಕೋರರನ್ನು ಇಲ್ಲಿಂದ ಅಂಡಮಾನ್ ದ್ವೀಪಗಳಿಗೆ ಕಳುಹಿಸಿದರು, ಇದರಿಂದಾಗಿ ಎಲ್ಲಾ ಬುಡಕಟ್ಟು ಜನರು ಚದುರಿಹೋದರು ಮತ್ತು ಗ್ರಾಮವು ನಾಶವಾಯಿತು.

ಬುಡಕಟ್ಟು ಸಮುದಾಯಗಳನ್ನು ಈ ರೀತಿ ಬೇರ್ಪಡಿಸಿದ್ದರ ಪರಿಣಾಮವೆಂದರೆ ಆ ಕಾಲದ ನೇರ ಜಾನಪದ ಸ್ಮರಣೆಯ ಸರಪಳಿ ಹರಿದಿದೆ. ಆದರೆ ರಾಜು ಹೆಸರು ಈಗಲೂ ಅಲ್ಲಿ ಮ್ಯಾಜಿಕ್ ಸೃಷ್ಟಿಸುತ್ತಿದೆ. ಮತ್ತು ಅದೇ ಸಮಸ್ಯೆಗಳು ಈಗಲೂ ಉಳಿದಿವೆ. "ಸಣ್ಣ ಅರಣ್ಯ ಉತ್ಪನ್ನಗಳು ದೊಡ್ಡ ಸಮಸ್ಯೆಯಲ್ಲ" ಎಂದು ವೈಜಾಗ್ ಜಿಲ್ಲೆಯ ಮಾಂಪಾ ಗ್ರಾಮದ ಕಾಮರಾಜು ಸೋಮುಲು ತಮಾಷೆಯಾಗಿ ಹೇಳುತ್ತಾರೆ. "ಇಲ್ಲಿ ಬಹಳ ಕಡಿಮೆ ಕಾಡು ಉಳಿದಿದೆ." ಇದರರ್ಥ ಬಡವರ ಸಂಕಷ್ಟ ಮತ್ತಷ್ಟು ಹೆಚ್ಚಳವಾಗಿದೆ, ಏಕೆಂದರೆ ಅವರು ವಾಸಿಸುವ ಸ್ಥಳದಲ್ಲಿ "ಅವರಿಗೆ ಗಂಜಿ ನೀರು ಮಾತ್ರ ಆಹಾರವಾಗಿ ಲಭ್ಯವಿದೆ" ಎಂದು ರಾಮಾಯಮ್ಮ ಹೇಳುತ್ತಾರೆ. ಪೂರ್ವ ಗೋದಾವರಿಯನ್ನು ಭಾರತದ ಶ್ರೀಮಂತ ಗ್ರಾಮೀಣ ಜಿಲ್ಲೆಗಳಲ್ಲಿ ಒಂದು ಎಂದು ಕರೆಯುವುದರಿಂದ ಯಾವುದೇ ಪ್ರಯೋಜನ ಇವರಿಗೆ ದೊರಕಿಲ್ಲ.

ಬಡವರು "ಒಮ್ಮೊಮ್ಮೆ ಊಟಕ್ಕೆ ಕೇವಲ ಗಂಜಿಯನ್ನಷ್ಟೇ ಹೊಂದಿರುತ್ತಾರೆ" ಎಂದು ರಂಪಾ (ಎಡ) ನ ಭೂಹೀನ ಕೋಯಾ ಬುಡಕಟ್ಟು ರಾಮಾಯಮ್ಮ ಹೇಳುತ್ತಾರೆ, "ಶ್ರೀಮಂತರು ಯಾವಾಗಲೂ ಒಗ್ಗಟ್ಟಾಗಿರುತ್ತಾರೆ" ಎಂದು ಕೊಂಡಪಲ್ಲಿ ಗ್ರಾಮದ (ಬಲ) ಭೂರಹಿತ ಕೋಯಾ ಬುಡಕಟ್ಟು ಪೊಟ್ಟವ್ ಕಾಮರಾಜ್ ಹೇಳುತ್ತಾರೆ

ಬುಡಕಟ್ಟು ಜನಾಂಗದವರಲ್ಲಿ ವರ್ಗೀಕರಣವೂ ಇದೆ. "ಶ್ರೀಮಂತ ಕೋಯಾ ಬುಡಕಟ್ಟು ಜನಾಂಗದವರು ತಮ್ಮ ಭೂಮಿಯನ್ನು ಗ್ರಾಮಸ್ಥರಿಗೆ ಗುತ್ತಿಗೆಗೆ ನೀಡುವುದಿಲ್ಲ, ಆದರೆ ಹೊರಗಿನವರಿಗೆ ನೀಡುತ್ತಾರೆ" ಎಂದು ಕೊಂಡಪಲ್ಲಿಯ ಪೊಟ್ಟವ್ ಕಾಮರಾಜ್ ಹೇಳುತ್ತಾರೆ. "ಶ್ರೀಮಂತರು ಯಾವಾಗಲೂ ಒಂದಾಗುತ್ತಾರೆ." ಕೆಲವೇ ಬುಡಕಟ್ಟು ಜನಾಂಗದವರಿಗೆ ಮಾತ್ರ ಸರ್ಕಾರಿ ಉದ್ಯೋಗ ಸಿಗುತ್ತದೆ. ಮತ್ತು ಈ ಪ್ರದೇಶಗಳ ಭೂಹೀನ ಕಾರ್ಮಿಕರಿಗೆ ವರ್ಷದ ಹಲವು ತಿಂಗಳುಗಳವರೆಗೆ ಯಾವುದೇ ಕೆಲಸ ಸಿಗುವುದಿಲ್ಲ.‌

ಪಶ್ಚಿಮ ಗೋದಾವರಿಯಲ್ಲಿ ಈಗಾಗಲೇ ಕೂಲಿಗಾಗಿ ಹೋರಾಟ ಪ್ರಾರಂಭವಾಗಿದೆ, ಇದು ಪೂರ್ವ ಪ್ರದೇಶಕ್ಕೂ ಹರಡಬಹುದು. ಇದಲ್ಲದೆ, ಶ್ರೀಮಂತ ಬುಡಕಟ್ಟು ಜನಾಂಗದವರು ಕೆಲವು ಬುಡಕಟ್ಟು ಮುಖ್ಯಸ್ಥರನ್ನು ಆಯ್ಕೆ ಮಾಡುತ್ತಿದ್ದಾರೆ. ಬುಡಕಟ್ಟು ಜನಾಂಗದವರಾಗಿರುವ ಮಾಂಪಾದಲ್ಲಿನ ಪಂಚಾಯತ್ ಅಧ್ಯಕ್ಷರು ಈಗ ದೊಡ್ಡ ಭೂಮಾಲೀಕರಾಗಿದ್ದಾರೆ. ಅವರ ಕುಟುಂಬವು ಸುಮಾರು 100 ಎಕರೆ ಭೂಮಿಯನ್ನು ಹೊಂದಿದೆ. "ಅವನು ಸಂಪೂರ್ಣವಾಗಿ ಹೊರಗಿನವರೊಂದಿಗೆ ಇದ್ದಾನೆ" ಎಂದು ಸೋಮುಲು ಹೇಳುತ್ತಾರೆ.

ಅಲ್ಲೂರಿ ಸೀತಾರಾಮ ರಾಜು ಅವರ ಜೀವಿತಾವಧಿಯಲ್ಲಿ ಅವರನ್ನು ಪಳಗಿಸಿಕೊಳ್ಳಲು ಬ್ರಿಟಿಷರು ಮಾಡಿದ ಎಲ್ಲ ಪ್ರಯತ್ನಗಳೂ ವಿಫಲವಾಗಿದ್ದವು. 50 ಎಕರೆ ಫಲವತ್ತಾದ ಭೂಮಿಯನ್ನು ನೀಡುವ ಆಮೀಷವೂ ಕೆಲಸ ಮಾಡಿರಲಿಲ್ಲ. ವೈಯಕ್ತಿಕ ಕುಂದುಕೊರತೆಗಳಿಲ್ಲದ ವ್ಯಕ್ತಿಯು ಬುಡಕಟ್ಟು ಜನಾಂಗದವರೊಂದಿಗೆ ಏಕೆ ಅಂಟಿಕೊಂಡಿದ್ದಾನೆನ್ನುವುದು ಬ್ರಿಟಿಷರ ಪಾಲಿಗೆ ಉತ್ತರವಿಲ್ಲದ ಪ್ರಶ್ನೆಯಾಗಿತ್ತು. ಒಂದು ಬ್ರಿಟಿಷ್ ವರದಿಯು ಅವರು "ಕೆಲವು ಕಲ್ಕತ್ತಾ ರಹಸ್ಯ ಸಮಾಜದ ಸದಸ್ಯ" ಎಂದು ಉಲ್ಲೇಖಿಸಿದೆ. ಬ್ರಿಟಿಷರಲ್ಲದೆ, ಉನ್ನತ ಮಟ್ಟದ ಕಾಂಗ್ರೆಸ್ಸಿಗರು ಸೇರಿದಂತೆ ಕೆಲವು ಬಯಲು ಪ್ರದೇಶದ ನಾಯಕರು ಅವರ ವಿರುದ್ಧವಿದ್ದರು. 1922-24ರಲ್ಲಿ ಹಲವಾರು ಜನರು ಅವರ ದಂಗೆಯನ್ನು ಹತ್ತಿಕ್ಕುವಂತೆ ಕರೆ ನೀಡಿದರು. ಮದ್ರಾಸ್ ಶಾಸಕಾಂಗ ಪರಿಷತ್ತಿನಲ್ಲಿ, ಸಿ.ಆರ್. ರೆಡ್ಡಿ ಅವರಂತಹ ನಾಯಕರು ದಂಗೆಯನ್ನು ಹತ್ತಿಕ್ಕುವವರೆಗೂ ಅದರ ಕಾರಣಗಳ ಬಗೆಗಿನ ವಿಚಾರಣೆಯನ್ನು ವಿರೋಧಿಸಿದ್ದರು.

ಇತಿಹಾಸಕಾರ ಮುರಳಿ ಅಟ್ಲೂರಿ ಕೂಡ "ರಾಷ್ಟ್ರೀಯವಾದಿ" ಪತ್ರಿಕಾ ಮಾಧ್ಯಮಗಳು ಸ್ವತಃ ಅವರನ್ನು ದ್ವೇಷಿಸುತ್ತಿದ್ದವು ಎಂದು ಹೇಳುತ್ತಾರೆ. ಈ ದಂಗೆಯನ್ನು ಹತ್ತಿಕ್ಕಿದರೆ ಅದು "ಸಂತೋಷಚ ವಿಷಯ" ಎಂದು ತೆಲುಗು ಪತ್ರಿಕೆ ದಿ ಕಾಂಗ್ರೆಸ್ ಬರೆದಿತ್ತು. ಆಂಧ್ರ ಪತ್ರಿಕಾ ಈ ದಂಗೆಯ ಮೇಲೆ ದಾಳಿ ನಡೆಸಿತ್ತು.

PHOTO • P. Sainath

ಹಾನಿಗೊಂಡಿರುವ ಸೀತಾರಾಮ ರಾಜು ಅವರ ಸಮಾಧಿ

ಅಟ್ಲೂರಿ ತೋರಿಸಿದಂತೆ ಮರಣೋತ್ತರವಾಗಿ ಅವರನ್ನು ವಹಿಸಿಕೊಳ್ಳುವ ಪ್ರಯತ್ನಗಳು ನಡೆದವು. ಅವರು ಕೊಲ್ಲಲ್ಪಟ್ಟ ನಂತರ, ಆಂಧ್ರ ಪತ್ರಿಕಾ ರಾಜು ಅವರಿಗೆ "ವೀರ ಸ್ವರ್ಗದ ಸುಖವನ್ನು" ಬಯಸಿತು. ಸತ್ಯಾಗ್ರಹಿ ಅವರನ್ನು ಜಾರ್ಜ್ ವಾಷಿಂಗ್ಟನ್‌ ಅವರಿಗೆ ಹೋಲಿಸಿತು. ಕಾಂಗ್ರೆಸ್ ಅವರನ್ನು ಹುತಾತ್ಮರನ್ನಾಗಿ ಸ್ವೀಕರಿಸಿತು. ಅವರ ಪರಂಪರೆಯನ್ನು ತಮ್ಮದಾಗಿಸಿಕೊಳ್ಳುವ ಎಲ್ಲ ಪ್ರಯತ್ನಗಳು ಮುಂದುವರೆದಿವೆ. ರಾಜ್ಯ ಸರ್ಕಾರ ಈ ವರ್ಷ ಅವರ ಜನ್ಮ ಶತಮಾನೋತ್ಸವಕ್ಕಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲಿದೆ. ಅದರೊಳಗಿನ ಕೆಲವರು ರೆಗ್ಯುಲೇಷನ್ 1/70 ಅನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಬುಡಕಟ್ಟು ಜನಾಂಗದವರಿಗೆ ಮತ್ತಷ್ಟು ಹಾನಿಯೆಸಗುತ್ತದೆ.

ಕೃಷ್ಣದೇವಿಪೇಟೆಯಲ್ಲಿ ರಾಜು ಸಮಾಧಿಯನ್ನುನೋಡಿಕೊಳ್ಳುವ ಹಿರಿಯರಾದ ಗಜಾಲ್ ಪೆದ್ದಪ್ಪನ್ ಅವರಿಗೆ ಮೂರು ವರ್ಷಗಳಿಂದ ಸಂಬಳ ಸಿಕ್ಕಿಲ್ಲ. ಈ ಪ್ರದೇಶದ ಜನರ ಆಕ್ರೋಶ ಹೆಚ್ಚುತ್ತಿದೆ. ವೈಜಾಗ್-ಪೂರ್ವ ಗೋದಾವರಿ ಗಡಿ ಪ್ರದೇಶದಲ್ಲಿ, ಆಮೂಲಾಗ್ರವಾಗಿ ಎಡಪಂಥೀಯರ ಪ್ರಭಾವ ಹೆಚ್ಚುತ್ತಿದೆ.

"ಸೀತಾರಾಮ ರಾಜು ಬುಡಕಟ್ಟು ಜನಾಂಗದವರಿಗಾಗಿ ಹೇಗೆ ಹೋರಾಡಿದರು ಎಂದು ನಮ್ಮ ಪೂರ್ವಜರು ನಮಗೆ ತಿಳಿಸಿದ್ದಾರೆ" ಎಂದು ಕೊಂಡಪಲ್ಲಿಯ ಪೊಟ್ಟವ್ ಕಾಮರಾಜ್ ಹೇಳುತ್ತಾರೆ. ಕಾಮರಾಜ್ ತನ್ನ ಭೂಮಿಯನ್ನು ಮರಳಿ ಪಡೆಯಲು ಇಂದು ಹೋರಾಡುತ್ತಿದ್ದಾರೆಯೇ? ''ಹೌದು. ನಾವು ಈ ರೀತಿ ಹೋರಾಟ ಮಾಡಿದಾಗಲೆಲ್ಲಾ ಪೊಲೀಸರು ಯಾವಾಗಲೂ ನಾಯ್ಡುಗಳು ಮತ್ತು ಶ್ರೀಮಂತರಿಗೆ ಸಹಾಯ ಮಾಡುತ್ತಾರೆ. ಆದರೆ, ನಮ್ಮ ಶಕ್ತಿಯ ಮೇಲೆ ನಮಗೆ ನಂಬಿಕೆ ಇದೆ, ಮತ್ತು ನಾವು ಖಂಡಿತವಾಗಿಯೂ ಒಂದಲ್ಲ ಒಂದು ದಿನ ಹೋರಾಡುತ್ತೇವೆ."

PHOTO • P. Sainath

ಸೀತಾರಾಮ ರಾಜು ಅವರ ಪುತ್ಥಳಿ

ಬಹುಶಃ ದಾಳಿಯಾಗಬಹುದೆನ್ನುವ ಹೆಡ್‌ ಕಾನ್ಸ್ಟೆಬಲ್‌ ಅವರ ಅನುಮಾನ ನಿಜವಿರಬಹುದು.

ಅದು ಈ ಮಧ್ಯಾಹ್ನವೇ ಬೇಕಿದ್ದರೂ ನಡೆಯಬಹುದು

ಫೋಟೋಗಳು: ಪಿ. ಸಾಯಿನಾಥ್


ಈ ಲೇಖನವು ಮೂಲತಃ ಆಗಸ್ಟ್ 26, 1997ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿತ್ತು .

ಸರಣಿಯ ಇನ್ನಷ್ಟು ಲೇಖನಗಳು ಇಲ್ಲಿವೆ:

‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 1

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 2

ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ

ಒಂಬತ್ತು ದಶಕಗಳ ಅಹಿಂಸೆ

ಶೇರ್‌ಪುರ: ದೊಡ್ಡ ತ್ಯಾಗ, ಸಣ್ಣ ಸ್ಮರಣೆ

ಸೋನಾಖಾನ್: ವೀರ್ ನಾರಾಯಣ್ ಎರಡು ಬಾರಿ ನಿಧನರಾದಾಗ

ಕಲ್ಲಿಯಶ್ಸೆರಿಯಲ್ಲಿ ಸುಮುಕನ್‌ ಅವರನ್ನು ಹುಡುಕುತ್ತಾ…

ಕಲ್ಲಿಯಶ್ಶೆರಿ: 50ನೇ ವರ್ಷದಲ್ಲೂ ಹೋರಾಟ

ಅನುವಾದ: ಶಂಕರ ಎನ್. ಕೆಂಚನೂರು

पी. साईनाथ पीपल्स अर्काईव्ह ऑफ रुरल इंडिया - पारीचे संस्थापक संपादक आहेत. गेली अनेक दशकं त्यांनी ग्रामीण वार्ताहर म्हणून काम केलं आहे. 'एव्हरीबडी लव्ज अ गुड ड्राउट' (दुष्काळ आवडे सर्वांना) आणि 'द लास्ट हीरोजः फूट सोल्जर्स ऑफ इंडियन फ्रीडम' (अखेरचे शिलेदार: भारतीय स्वातंत्र्यलढ्याचं पायदळ) ही दोन लोकप्रिय पुस्तकं त्यांनी लिहिली आहेत.

यांचे इतर लिखाण साइनाथ पी.
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru