ಅಲ್ಲಿ ಸಣ್ಣದೊಂದು ಧೂಳಿನ ಮೋಡ ಮತ್ತು ಎಂಜಿನ್ನಿನ ಫಟ್‌ ಫಟ್‌ ಸದ್ದು ವಾತಾವರಣದಲ್ಲಿತ್ತು. ಅಷ್ಟು ಹೊತ್ತಿಗೆ ನೀಲಿ ಸೀರೆ ದೊಡ್ಡ ಮೂಗು ನತ್ತು ಮತ್ತು ಇಷ್ಟಗಲ ನಗೆತೊಟ್ಟ ಅಡೈಕಲಾಸೆಲ್ವಿ ತಮ್ಮ ದ್ವಿಚಕ್ರ ವಾಹನದಲ್ಲಿ ನಮ್ಮೆದುರು ಬಂದರು. ಕೆಲವು ನಿಮಿಷಗಳ ಹಿಂದೆ ಅವರು ನಮಗೆ ತಮ್ಮ ಬೀಗ ಹಾಕಿದ ಮನೆಯೆದುರು ಕಾಯುವಂತೆ ಹೇಳಿದ್ದರು. ಅವರು ತಮ್ಮ ಮೆಣಸಿನ ಹೊಲದಲ್ಲಿದ್ದರು. ಅದು ಮಾರ್ಚ್‌ ತಿಂಗಳ ನಡುಹಗಲಾಗಿದ್ದರೂ ರಾಮನಾಥಪುರದ ಸೂರ್ಯ ಆಗಲೇ ಬೆಂಕಿ ಕಾರಲು ಆರಂಭಿಸಿದ್ದ. ಆ ಹೊತ್ತು ನಮ್ಮ ನೆರಳುಗಳು ಚಿಕ್ಕದಾಗಿದ್ದರೆ ನಮ್ಮ ಬಾಯಾರಿಕೆ ದೈತ್ಯವಾಗಿ ಬೆಳೆದಿತ್ತು. ಪೇರಳೆ ಮರದ ನೆರಳಿನಲ್ಲಿ ದ್ವಿಚಕ್ರ ವಾಹನವನ್ನು ನಿಲ್ಲಿಸಿದ ಅಡೈಕಲಾಸೆಲ್ವಿ ಬೇಗ ಬೇಗನೆ ಬೀಗ ತೆಗೆದು ಮನೆಯೊಳಗೆ ಕರೆದು ಕುಡಿಯಲು ನೀರು ಕೊಟ್ಟರು. ನಂತರ ಕುಳಿತು ಮಾತುಕತೆಗೆ ತೊಡಗಿಕೊಂಡೆವು.

ನಾವು ಅವರ ಬೈಕಿನ ಮೂಲಕ ಮಾತುಕತೆ ಆರಂಭಿಸಿದೆವು. ಅವರ ವಯಸ್ಸಿನ, ಒಂದು ಸಣ್ಣ ಹಳ್ಳಿಯಿಂದ ಬಂದ ಒಬ್ಬ ಮಹಿಳೆ, ಗಾಡಿಯನ್ನು ಓಡಿಸುವುದು ಸಾಮಾನ್ಯ ಮಾತಲ್ಲ. "ಆದರೆ ಇದು ತುಂಬಾ ಉಪಯುಕ್ತವಾಗಿದೆ" ಎಂದು 51 ವರ್ಷದ ಅವರು ನಗುತ್ತಾರೆ. ಅವರು ಅದನ್ನು ಓಡಿಸಲು ಬಹಳ ಬೇಗನೆ ಕಲಿತಿದ್ದರು. "ನಾನು ಎಂಟನೇ ತರಗತಿಯಲ್ಲಿದ್ದಾಗ ನನ್ನ ಸಹೋದರ ನನಗೆ ಕಲಿಸಿದನು. ನನಗೆ ಸೈಕಲ್‌ ಓಡಿಸಲು ಗೊತ್ತಿತ್ತು, ಹಾಗಾಗಿ ಇದು ಕಷ್ಟವಾಗಿರಲಿಲ್ಲ."

ದ್ವಿಚಕ್ರ ವಾಹನ ಇಲ್ಲದೆ ಹೋಗಿದ್ದರೆ, ಬದುಕು ಕಷ್ಟಕರವಾಗುತ್ತಿತ್ತು ಎಂದು ಅವರು ಹೇಳುತ್ತಾರೆ. "ನನ್ನ ಪತಿ ಅನೇಕ ವರ್ಷಗಳಿಂದ ಮನೆಯಿಂದ ದೂರವಿದ್ದರು. ಅವರು ಮೊದಲು ಸಿಂಗಾಪುರದಲ್ಲಿ ಮತ್ತು ನಂತರ ದುಬೈ ಮತ್ತು ಕತಾರಿನಲ್ಲಿ ಪ್ಲಂಬರ್ ಆಗಿ ಕೆಲಸ ಮಾಡಿದರು. ನಾನು ನನ್ನ ಹೆಣ್ಣುಮಕ್ಕಳನ್ನು ಬೆಳೆಸಿದೆ ಮತ್ತು ಹೊಲವನ್ನು ನೋಡಿಕೊಳ್ಳುತ್ತಿದ್ದೇನೆ." ಏಕಾಂಗಿಯಾಗಿ.

ಜೆ. ಅಡೈಕಲಾಸೆಲ್ವಿ ಮೊದಲಿನಿಂದಲೂ ಬೇಸಾಯಗಾರರಾಗಿದ್ದವರು. ನಮ್ಮೆದುರು ನೆಲದ ಮೇಲೆ ಚಂಕ್ಕಂಬಕ್ಕಳ ಹಾಕಿ ಕುಳಿತ ಅವರ ಕೈಗಳು ಅವರ ಮೊಣಕಾಲಿನ ಮೇಲಿದ್ದವು. ನೆಟ್ಟಗೆ ಕುಳಿತಿದ್ದ ಅವರ ಎರಡೂ ಕೈಗಳಲ್ಲಿ ಒಂದೊಂದು ಬಳೆಯಿದ್ದವು. ಅವರು ಶಿವಂಗಂಗೈ ಜಿಲ್ಲೆಯ ಕಲಾಯಾರ್‌ ಕೋಯಿಲ್‌ ಎನ್ನುವಲ್ಲಿನ ಕೃಷಿಕುಟುಂಬವೊಂದರಲ್ಲಿ ಜನಿಸಿದರು. ಇದು ಮುಡುಕುಲತೂರು ಬ್ಲಾಕ್‌ನ ಪಿ. ಮುತ್ತುವಿಜಯಪುರಂ ಎಂಬ ಕುಗ್ರಾಮದಿಂದ ರಸ್ತೆ ಮಾರ್ಗವಾಗಿ ಒಂದೂವರೆ ಗಂಟೆ ದೂರದಲ್ಲಿದೆ. "ನನ್ನ ಸಹೋದರರು ಶಿವಗಂಗೈನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ಅನೇಕ ಬೋರ್ ವೆಲ್ ಗಳನ್ನು ಹೊಂದಿದ್ದಾರೆ. ಮತ್ತು ಇಲ್ಲಿ, ನಾನು ನೀರಾವರಿಗಾಗಿ ಗಂಟೆಗೆ 50 ರೂಪಾಯಿಗಳಿಗೆ ನೀರನ್ನು ಖರೀದಿಸುತ್ತೇನೆ." ರಾಮನಾಥಪುರಂನಲ್ಲಿ ನೀರು ದೊಡ್ಡ ವ್ಯವಹಾರವಾಗಿದೆ.

Adaikalaselvi is parking her bike under the sweet guava tree
PHOTO • M. Palani Kumar

ಅಡೈಕಲಾಸೆಲ್ವಿ ತನ್ನ ಬೈಕನ್ನು ಪೇರಳೆ ಮರದ ಕೆಳಗೆ ನಿಲ್ಲಿಸುತ್ತಿದ್ದಾಳೆ

Speaking to us in the living room of her house in Ramanathapuram, which she has designed herself
PHOTO • M. Palani Kumar

ಅವರು ರಾಮನಾಥಪುರಂನಲ್ಲಿರುವ ತನ್ನ ಮನೆಯ ಲಿವಿಂಗ್ ರೂಮಿನಲ್ಲಿ ಕುಳಿತು ನಮ್ಮೊಂದಿಗೆ ಮಾತನಾಡುತ್ತಿದ್ದರು, ಅದನ್ನು ಅವರೇ ಸ್ವತಃ ವಿನ್ಯಾಸಗೊಳಿಸಿಕೊಂಡಿದ್ದಾರೆ

ತನ್ನ ಹೆಣ್ಣುಮಕ್ಕಳು ಚಿಕ್ಕವರಾಗಿದ್ದಾಗ, ಅಡೈಕಲಾಸೆಲ್ವಿ ಅವರನ್ನು ಹಾಸ್ಟೆಲ್ಲಿನಲ್ಲಿ ಇರಿಸಿದರು. ಹೊಲದಲ್ಲಿ ಕೆಲಸವನ್ನು ಮುಗಿಸಿ, ಅವರನ್ನು ನೋಡಲು ಹೋಗುತ್ತಿದ್ದರು, ಮತ್ತೆ ಮನೆಗೆ ಬಂದು ಮನೆಗೆಲಸಗಳನ್ನು ಮಾಡುತ್ತಿದ್ದರು. ಈಗ ಅವರು ಆರು ಎಕರೆ ಭೂಮಿ ಹೊಂದಿದ್ದಾರೆ, ಅದರಲ್ಲಿ ಒಂದು ಎಕರೆ ಸ್ವತಃ ಬೇಸಾಯ ಮಾಡುತ್ತಿದ್ದು ಮತ್ತು ಉಳಿದ ಐದು ಎಕರೆಯನ್ನು ಗುತ್ತಿಗೆಗೆ ನೀಡುತ್ತಾರೆ. "ಭತ್ತ, ಮೆಣಸಿನಕಾಯಿ, ಹತ್ತಿ: ಅವು ಮಾರುಕಟ್ಟೆಗೆ. ಮತ್ತು ಕೊತ್ತಂಬರಿ, ಬೆಂಡೆಕಾಯಿ, ಬದನೆಕಾಯಿ, ಸೋರೆ ಕಾಯಿ, ಸಣ್ಣ ಈರುಳ್ಳಿ: ಇವು ಅಡುಗೆಮನೆಗಾಗಿ..."

ಅವರು ಮನೆಯ ಹಾಲ್‌ನಲ್ಲಿದ್ದ ಅಟ್ಟದ ಕೋಣೆಯೊಂದನ್ನು ತೋರಿಸಿದರು. "ಇಲಿಗಳಿಗೆ ಸಿಗದಂತೆ ನಾನು ಭತ್ತವನ್ನು ಚೀಲಗಳಲ್ಲಿ ಇಟ್ಟಿದ್ದೇನೆ. ಮತ್ತು ಮೆಣಸಿನಕಾಯಿ ಅಡುಗೆಮನೆಯಲ್ಲಿನ ಅಟ್ಟದಲ್ಲಿ ಇಡಲಾಗುತ್ತದೆ." ಆ ರೀತಿಯಲ್ಲಿ, ಮನೆಯಲ್ಲಿ ಚಲಿಸುವ ಕೋಣೆ ಇದೆ ಎಂದು ಅವರು ಹೇಳುತ್ತಾರೆ. ಎರಡು ದಶಕಗಳ ಹಿಂದೆ ಮನೆಯನ್ನು ನಿರ್ಮಿಸುವ ಸಮಯದಲ್ಲಿ ಅವರು ಈ ವೈಶಿಷ್ಟ್ಯಗಳನ್ನು ಸ್ವತಃ ವಿನ್ಯಾಸಗೊಳಿಸಿದ್ದಾಗಿ ಅವರು ನಾಚಿಕೆಯ ಮುಗುಳ್ನಗೆಯೊಂದಿಗೆ ನನಗೆ ಹೇಳಿದರು. ಮತ್ತು ಮುಂದಿನ ಬಾಗಿಲಿನಲ್ಲಿ ಮದರ್ ಮೇರಿಯನ್ನು ಕೆತ್ತಿಸುವುದು ಅವರ ಆಲೋಚನೆಯಾಗಿತ್ತು. ಇದು ಸುಂದರವಾದ ಮರದ ಕೆತ್ತನೆ, ಮೇರಿ ಹೂವಿನ ಮೇಲೆ ನಿಂತಿದ್ದಾಳೆ. ಲಿವಿಂಗ್ ರೂಮ್ ಒಳಗೆ, ಪಿಸ್ತಾ ಹಸಿರು ಬಣ್ಣದ ಗೋಡೆಗಳನ್ನು ಹೆಚ್ಚು, ಹೆಚ್ಚು ಹೂವುಗಳು, ಕುಟುಂಬದ ಛಾಯಾಚಿತ್ರಗಳು ಮತ್ತು ಯೇಸು ಮತ್ತು ಮೇರಿಯ ಭಾವಚಿತ್ರಗಳಿಂದ ಅಲಂಕರಿಸಲಾಗಿದೆ.

ಅಲಂಕಾರದ ಜೊತೆಗೆ, ಅವರ ಮನೆಯಲ್ಲಿರುವ ಸಾಕಷ್ಟು ಸ್ಥಳಾವಕಾಶವು ಅವರಿಗೆ ತನ್ನ ಫಸಲನ್ನು ಉಳಿಸಿಕೊಳ್ಳಲು ಮತ್ತು ಉತ್ತಮ ಬೆಲೆಗಾಗಿ ಕಾಯಲು ಅವಕಾಶವನ್ನು ನೀಡುತ್ತದೆ. ಹೆಚ್ಚಾಗಿ ಅದು ಫಲ ನೀಡುತ್ತದೆ. ಭತ್ತಕ್ಕೆ ಸರ್ಕಾರದ ಖರೀದಿ ದರ 19.40 ರೂ.

ಆದರೆ ಸ್ಥಳೀಯ ಕಮಿಷನ್ ಏಜೆಂಟ್ ಕೇವಲ 13 ರೂ. ಮಾತ್ರ ನೀಡಿದರು. "ನಾನು ಸರ್ಕಾರಕ್ಕೆ ಎರಡು ಕ್ವಿಂಟಾಲ್ (200 ಕೆಜಿ) ಮಾರಾಟ ಮಾಡಿದ್ದೇನೆ. ಅವರು ಮೆಣಸಿನಕಾಯಿಯನ್ನು ಸಹ ಏಕೆ ಖರೀದಿಸಬಾರದು?" ಎಂದು ಅವರು ಕೇಳುತ್ತಾರೆ.

ಪ್ರತಿಯೊಬ್ಬ ಮೆಣಸಿನಕಾಯಿ ರೈತನು ಸ್ಥಿರವಾದ, ಉತ್ತಮ ಬೆಲೆಯನ್ನು ಮೆಚ್ಚುತ್ತಾನೆ ಎಂದು ಅವರು ವಾದಿಸುತ್ತಾರೆ. "ಭತ್ತದಂತೆ, ಮೆಣಸಿನಕಾಯಿಯು ಹೆಚ್ಚು ಮಳೆ ಅಥವಾ ನಿಂತ ನೀರನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಈ ಬರಬಾರದ ಕಾಲದಲ್ಲಿ ಮಳೆ ಬಂದಿತು. ಸಸಿಗಳು ಮೊಳಕೆಯೊಡೆಯುವಾಗ, ಹೂ ಬಿಡುವಾಗ ಒಂದಿಷ್ಟು ಮಳೆ ಬಂದಿದ್ದರೆ ಉಪಕಾರವಾಗುತ್ತಿತ್ತು.” ಎಂದು ಅವರು ಹವಮಾನ ಬದಲಾವಣೆ ಕುರಿತು ಉಲ್ಲೇಖಿಸದೆಯೂ ಆ ಕುರಿತಾಗಿ ಮಾತನಾಡುತ್ತಿದ್ದರು. ಬದಲಾಗುತ್ತಿರುವ ಮಳೆ ಮಾದರಿಯ ಕುರಿತು ಹೇಳುತ್ತಿದ್ದರು. ಈ ತಪ್ಪಾದ ಕಾಲದಲ್ಲಿ ಸುರಿಯುತ್ತಿರುವ ವೇಗದ,ಅತಿಯಾದ ಮಳೆಯು ಅವರ ಸಾಮಾನ್ಯ ಇಳುವರಿಯನ್ನು ಐದರಿಂದ ಒಂದು ಪಟ್ಟಿಗೆ ಇಳಿಸಿದೆ. ಅವರು ಬೆಳೆಯುವ ʼರಾಮನಾಡು ಮುಂಡುʼ ಪ್ರಭೇದಕ್ಕೆ ಕಿಲೋಗೆ 300 ರೂ.ಗಳಿಗಿಂತ ಹೆಚ್ಚಿನ ಬೆಲೆಯ ಹೊರತಾಗಿಯೂ “ಇದು ಒಂದು ದಿನ ಇಲ್ಲವಾಗಲಿದೆ,” ಎನ್ನುತ್ತಾರವರು.

Adaikalaselvi is showing us her cotton seeds. Since last ten years she has been saving and selling these
PHOTO • M. Palani Kumar

ಅಡೈಕಲಾಸೆಲ್ವಿ ತನ್ನ ಹತ್ತಿ ಬೀಜಗಳನ್ನು ನಮಗೆ ತೋರಿಸುತ್ತಿರುವುದು. ಕಳೆದ ಹತ್ತು ವರ್ಷಗಳಿಂದ ಅವಳು ಇವುಗಳನ್ನು ಉಳಿಸಿಕೊಳ್ಳುತ್ತಿದ್ದಾರೆ ಮತ್ತು ಮಾರಾಟ ಮಾಡುತ್ತಾರೆ

She is plucking chillies in her fields
PHOTO • M. Palani Kumar

ತನ್ನ ಹೊಲಗಳಲ್ಲಿ ಮೆಣಸಿನಕಾಯಿಗಳನ್ನು ಕೀಳುತ್ತಿರುವುದು

ಮೆಣಸಿನಕಾಯಿಯ ಬೆಲೆ ಒಂದು ಅಥವಾ ಎರಡು ರೂಪಾಯಿಗಳಿಗೆ ಹೋದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಮತ್ತು ಬದನೆಕಾಯಿ 25 ಪೈಸೆ ಕಿಲೋ ಒಂದಕ್ಕೆ ಮಾರಾಟವಾಗಿತ್ತು. “ಮೂವತ್ತು ವರ್ಷಗಳ ಹಿಂದೆ ಹತ್ತಿಗೆ ಕಿಲೋ ಒಂದಕ್ಕೆ 3 – 4 ರೂಪಾಯಿಗಳಿದ್ದರೆ, ಐದು ರೂಪಾಯಿಗೆ ಕೂಲಿ ಆಳನ್ನು ನೇಮಿಸಿಕೊಳ್ಳಬಹುದಿತ್ತು. ಆದರೆ ಈಗ, ಕೂಲಿ 250 ರೂಪಾಯಿ ಆಗಿದ್ದರೆ ಹತ್ತಿಯ ಬೆಲೆ 80 ರೂಪಾಯಿ ಆಗಿದೆ.” ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕಾರ್ಮಿಕ ವೆಚ್ಚವು 50 ಪಟ್ಟು ಹೆಚ್ಚಾಗಿದ್ದರೆ, ಮಾರಾಟ ಬೆಲೆ ಕೇವಲ 20 ಪಟ್ಟು ಹೆಚ್ಚಾಗಿದೆ. ರೈತರು ಏನು ಮಾಡಬೇಕು? ಸುಮ್ಮನೆ ಹೇಗೋ ಸಂಭಾಳಿಸಿಕೊಂಡು ಹೋಗಬೇಕು, ಅಷ್ಟೇ.

ಅಡೈಕಲಾಸೆಲ್ವಿ ಕೂಡಾ ಹೆಚ್ಚೂಕಡಿಮೆ ಅದನ್ನೇ ಮಾಡುತ್ತಿದ್ದಾರೆ. ಅವರು ಮಾತನಾಡುವಾಗ ಅವರಲ್ಲಿನ ಸಂಕಲ್ಪ ಎದ್ದು ಕಾಣುತ್ತದೆ. “ಮೆಣಸಿನ ಹೊಲ ಈ ಬದಿಯಲ್ಲಿದೆ,” ಅವರು ಬಲಗಡೆಗೆ ಕೈ ತೋರಿಸುತ್ತಾ, “ಮತ್ತು ನಾನು ಆ ಕಡೆ ಇರುವ ಹೊಲದಲ್ಲೂ ಬೇಸಾಯ ಮಾಡುತ್ತೇನೆ.” ಎಂದು ಗಾಳಯಲ್ಲಿ ನಕ್ಷೆ ಬಿಡಿಸುತ್ತಾ ತೋರಿಸುತ್ತಿದ್ದರು. “ನನ್ನ ಬಳಿ ಗಾಡಿ ಇರುವುದರಿಂದ ಇದು ಸಾಧ್ಯವಾಗುತ್ತಿದೆ. ನಾನು ಊಟಕ್ಕೂ ಮನೆಗೆ ಬರುತ್ತೇನೆ. ಚೀಲಗಳನ್ನು ತರಲು ಗಂಡಸರಿಗಾಗಿ ಕಾಯುವುದಿಲ್ಲ. ನಾನೇ ಚೀಲವನ್ನು ಗಾಡಿಯ ಹಿಂದಿನ ಕ್ಯಾರಿಯರ್‌ ಮೇಲೆ ಇರಿಸಿಕೊಂಡು ಮನೆಗೆ ಬರುತ್ತೇನೆ,” ನಗುತ್ತಾ ಮಾತನಾಡುವ ಅಡೈಕಲಾಸೆಲ್ವಿಯವರ ತಮಿಳು ಪರಿಚಿತ ಮತ್ತು ವಿಶಿಷ್ಟ ಎನ್ನಿಸುತ್ತದೆ.

"ನಾನು 2005ರಲ್ಲಿ ಬೈಕನ್ನು ಖರೀದಿಸುವವರೆಗೆ, ನಾನು ಹಳ್ಳಿಯ ಯಾರಿಂದಲೋ ಎರವಲು ಪಡೆಯುತ್ತಿದ್ದೆ." ಅವರು ತನ್ನ ಟಿವಿಎಸ್ ಮೊಪೆಡ್ ಅನ್ನು ದೊಡ್ಡ ಹೂಡಿಕೆ ಎಂದು ಪರಿಗಣಿಸುತ್ತಾರೆ. ಈಗ, ಅವರು ಹಳ್ಳಿಯ ಯುವತಿಯರನ್ನು ವಾಹನ ಚಲಾಯಿಸಲು ಪ್ರೋತ್ಸಾಹಿಸುತ್ತಾರೆ. "ಈಗಾಗಲೇ ಅನೇಕರು ಗಾಡಿ ಓಡಿಸುತ್ತಾರೆ," ಅವರು ಮುಗುಳ್ನಕ್ಕು, ತನ್ನ ಹೊಲಕ್ಕೆ ಹೋಗಲು ಬೈಕಿನಲ್ಲಿ ಹಿಂತಿರುಗಿ ಹೋದರು. ನಾವು ಅವರನ್ನು ನಮ್ಮ ವಾಹನದಲ್ಲಿ ಹಿಂಬಾಲಿಸಿದೆವು, ಬಿಸಿಲಿನಲ್ಲಿ ಒಣಗುವ ಮೆಣಸಿನಕಾಯಿಯ ಬೆಳೆ, ರಾಮನಾಥಪುರಂನಲ್ಲಿ ಕೆಂಪು ರತ್ನಗಂಬಳಿಯಂತೆ ಹಾಸಿಕೊಂಡಿದ್ದ ಗುಂಡು ಮೆಣಸನ್ನು ದಾಟಿ ಹೊರಟೆವು ...

*****

"ವಹವಾರೇ ಮಣಸಿನಕಾಯಿ |
ಒಣ ರೊಟ್ಟಿ ತಂದೆನೊ ತಾಯಿ | ಹುಟ್ಟುತಲಿ ಹಸುರಾಗುತ ಕಂಡೆ |
ನಟ್ಟ ನಡುವೆ ಕೆಂಪಾಗುತ ಕಂಡೆ ಕಟ್ಟೆರಾಯನ ಬಹುರುಚಿಯೆಂಬೆ
|"
ಇದು ಪುರಂದರ ದಾಸರ ಒಂದು ರಚನೆ

ಕೆ.ಟಿ. ಅಚ್ಚಯ್ಯ ಅವರು ತಮ್ಮ 'ಇಂಡಿಯನ್ ಫುಡ್, ಎ ಹಿಸ್ಟಾರಿಕಲ್ ಕಂಪ್ಯಾನಿಯನ್' ಪುಸ್ತಕದಲ್ಲಿ ಹೇಳುವಂತೆ, ಈ ಸ್ವಾರಸ್ಯಕರವಾದ ಸಾಲು - ಅನೇಕ ವ್ಯಾಖ್ಯಾನಗಳಿಗೆ ಮುಕ್ತ, ಖಂಡಿತವಾಗಿಯೂ, ಮುಕ್ತವಾಗಿದೆ - ಮೆಣಸಿನಕಾಯಿಯ ಮೊದಲ ಸಾಹಿತ್ಯಿಕ ಉಲ್ಲೇಖವಾಗಿದೆ. ಮಸಾಲೆ, ಭಾರತೀಯ ಆಹಾರದಲ್ಲಿ ತುಂಬಾ ಸರ್ವವ್ಯಾಪಿಯಾಗಿದೆ, "ಅದು ಮೊದಲಿನಿಂದಲೂ ನಮ್ಮೊಂದಿಗೆ ಇರಲಿಲ್ಲ ಎಂದು ನಂಬುವುದು ಕಷ್ಟ" ಎಂದು ಅವರು ಹೇಳುತ್ತಾರೆ. ಏತನ್ಮಧ್ಯೆ, ಈ ಹಾಡು ನಮಗೆ ಅಂದಾಜು ದಿನಾಂಕವನ್ನು ನೀಡುತ್ತದೆ: ಇದು "1480 ಮತ್ತು 1564ರ ನಡುವೆ ಜೀವಿಸಿದ್ದ ದಕ್ಷಿಣ ಭಾರತದ ಶ್ರೇಷ್ಠ ಸಂಗೀತ ಸಂಯೋಜಕ ಪುರಂದರದಾಸರ ಸಂಯೋಜನೆಯಾಗಿದೆ."

ಹಾಡು ಮುಂದುವರೆದು ಹೀಗೆ ಹೇಳುತ್ತದೆ:

ಒಂದೆರಡರದರ ಬಹುರುಚಿಯೆಂಬೆ ಮೇಲೆರಡರದರ ಬಹುಖಾರವೆಂಬೆ |
ಅದು ಎರಡರೆದರೆ ಅತಿ ಖಾರವೆಂಬೆ | ಬಡವರಿಗೆಲ್ಲ ನಿನ್ನಾದಾರ ||
ಅಡಿಗೆಯೂಟಕ್ಕೆ ನಿನ ಸಾರಾ |
ಬಾಯಲಿ ಕಡಿದರೆ ಬೆಂಕಿಯ ಖಾರಾ ಪುರಂದರ ವಿಠಲನ ನೆನೆಯೋದು ಭಾರಾ

ಕ್ಯಾಪ್ಸಿಕಂ ಅನ್ನು ಮೆಣಸಿನಕಾಯಿ ಎಂದು ಕರೆಯಲಾಗುತ್ತದೆ, 'ದಕ್ಷಿಣ ಅಮೆರಿಕಾದ ವಿಜಯದ ನಂತರ ಪೋರ್ಚುಗೀಸರೊಂದಿಗೆ ಭಾರತಕ್ಕೆ ಪ್ರಯಾಣಿಸಿತು' ಎಂದು ಸುನೀತಾ ಗೋಗಟೆ ಮತ್ತು ಸುನಿಲ್ ಜಾಲಿಹಾಳ್ ತಮ್ಮ 'ರೊಮ್ಯಾನ್ಸಿಂಗ್ ದಿ ಚಿಲ್ಲಿ' ಪುಸ್ತಕದಲ್ಲಿ ಹೇಳುತ್ತಾರೆ.

A popular crop in the district, mundu chillies, ripe for picking
PHOTO • M. Palani Kumar

ಜಿಲ್ಲೆಯ ಜನಪ್ರಿಯ ಬೆಳೆ, ಮುಂಡು ಮೆಣಸಿನಕಾಯಿ, ಕಟಾವಿಗೆ ಸಿದ್ಧವಾಗಿವೆ

A harvest of chillies drying in the sun, red carpets of Ramanathapuram
PHOTO • M. Palani Kumar

ಬಿಸಿಲಿನಲ್ಲಿ ಒಣಗುತ್ತಿರುವ ಮೆಣಸಿನಕಾಯಿಯ ಫಸಲು, ರಾಮನಾಥಪುರಂನ ಕೆಂಪು ರತ್ನಗಂಬಳಿಗಳು

ಮತ್ತು ಒಮ್ಮೆ ಅದು ಇಲ್ಲಿಗೆ ಬಂದ ನಂತರ, ಅದು ಬೇಗನೆ ಕಾಳುಮೆಣಸನ್ನು ಮೀರಿ ನಿಂತಿತು - ಅಲ್ಲಿಯವರೆಗೆ ಆಹಾರಕ್ಕೆ 'ಖಾರ'ವನ್ನು ಸೇರಿಸುತ್ತಿದ್ದ ಏಕೈಕ ಸಾಂಬಾರ ಪದಾರ್ಥವಾಗಿತ್ತದು - ಏಕೆಂದರೆ ಅದನ್ನು "ದೇಶಾದ್ಯಂತ ಬೆಳೆಯಬಹುದು... ಮೆಣಸಿಗಿಂತ ಹೆಚ್ಚಿನ ಬಹುಮುಖತೆಯನ್ನು ಹೊಂದಿದೆ" ಎಂದು ಅಚ್ಚಯ್ಯ ಹೇಳುತ್ತಾರೆ. ಬಹುಶಃ ಇದು ನಿಜ, ಮೆಣಸಿನಕಾಯಿಗೆ ಅನೇಕ ಭಾರತೀಯ ಭಾಷೆಗಳಲ್ಲಿ ಮೆಣಸಿನ ಹೆಸರನ್ನೇ ಇಡಲಾಯಿತು. ಉದಾಹರಣೆಗೆ, ತಮಿಳಿನಲ್ಲಿ, ಕಾಳುಮೆಣಸು ಮಿಳಗು; ಮೆಣಸಿನಕಾಯಿಯು ಮಿಳಗೈ ಆಯಿತು, ಎರಡು ಸ್ವರಗಳು ಖಂಡಗಳು ಮತ್ತು ಶತಮಾನಗಳನ್ನು ಸಂಯೋಜಿಸಿದವು.

ಹೊಸ ಮಸಾಲೆ ಪದಾರ್ಥ ನಮ್ಮದಾಯಿತು. ಮತ್ತು ಇಂದು, ಭಾರತವು ಒಣಗಿದ ಕೆಂಪು ಮೆಣಸಿನಕಾಯಿಯ ವಿಶ್ವದ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ ಮತ್ತು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಮುಂಚೂಣಿಯಲ್ಲಿದೆ, 2020ರಲ್ಲಿ 1.7 ಮಿಲಿಯನ್ ಟನ್‌ ಬೆಳೆ ಬೆಳೆದಿದೆ. ಇದು ಥೈಲ್ಯಾಂಡ್ ಮತ್ತು ಚೀನಾಕ್ಕಿಂತ ಸುಮಾರು ಐದು ಪಟ್ಟು ಹೆಚ್ಚು , ಅವು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಭಾರತದಲ್ಲಿ , ಆಂಧ್ರಪ್ರದೇಶವು 2021ರಲ್ಲಿ 8,36,000 ಟನ್ಗಳನ್ನು ಉತ್ಪಾದಿಸುವ 'ಅತ್ಯಂತ ಖಾರವಾದ' ರಾಜ್ಯವಾಗಿದೆ. ಅದೇ ವರ್ಷ ತಮಿಳುನಾಡು ಕೇವಲ 25,648 ಟನ್ ಉತ್ಪಾದಿಸಿತು. ರಾಜ್ಯದೊಳಗೆ, ರಾಮನಾಥಪುರಂ ಈ ಓಟವನ್ನು ಮುನ್ನಡೆಸುತ್ತದೆ: ತಮಿಳುನಾಡಿನಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರತಿ ನಾಲ್ಕು ಹೆಕ್ಟೇರ್ ಗಳಲ್ಲಿ ಒಂದು (54,231 ರಲ್ಲಿ 15,939) ಈ ಜಿಲ್ಲೆಯದು.

ಪತ್ರಕರ್ತ ಪಿ. ಸಾಯಿನಾಥ್ ಅವರ 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್‌ʼ (ಕನ್ನಡದಲ್ಲಿ, ʼಬರ ಅಂದ್ರೆ ಎಲ್ಲರಿಗೂ ಇಷ್ಟʼ, ಅನು: ಜಿ.ಎನ್‌ ಮೋಹನ್) ಎಂಬ ಕೃತಿಯಲ್ಲಿ ರಾಮನಾಥಪುರಂನ ಮೆಣಸಿನಕಾಯಿ ಮತ್ತು ರೈತರ ಬಗ್ಗೆ ನಾನು ಮೊದಲ ಬಾರಿಗೆ ಓದಿದೆ. ಕಥೆಯು ಈ ರೀತಿಯಲ್ಲಿ ಪ್ರಾರಂಭವಾಗುತ್ತದೆ: "ತರಾಗಾರ್ (ಕಮಿಷನ್ ಏಜೆಂಟ್) ನನ್ನ ಮುಂದೆ ಸಣ್ಣ ರೈತನೊಬ್ಬ ಇಟ್ಟ ಎರಡು ಚೀಲಗಳಲ್ಲಿ ಒಂದರಲ್ಲಿ ತನ್ನ ಕೈಗಳನ್ನು ಅದ್ದಿ ಒಂದು ಕಿಲೋಗ್ರಾಂ ಮೆಣಸಿನಕಾಯಿಯನ್ನು ಹೊರತೆಗೆದ. ನಂತರ ಇದನ್ನು ಅವನು ಕೇರ್‌ಲೆಸ್‌ ಆಗಿ ಒಂದು ಬದಿಗೆ ಎಸೆಯುತ್ತಾನೆ - ಸಾಮಿ ವಥಾಲ್ (ದೇವರ ಪಾಲು) ಆಗಿ."

ನಂತರ ಸಾಯಿನಾಥ್ ದಿಗ್ಭ್ರಮೆಗೊಂಡ ರಾಮಸ್ವಾಮಿಯನ್ನು ಪರಿಚಯಿಸುತ್ತಾರೆ, "ಮುಕ್ಕಾಲು ಎಕರೆಯಲ್ಲಿ ಬೆಳೆ ಬೆಳೆದು ಬದುಕು ನಡೆಸಲು ಬೇಕಾಗುವ ಹಣಕ್ಕಾಗಿ ಕಾಯುತ್ತಿರುವ ಮೆಣಸಿನ ಕಾಯಿ ಬೆಳೆಗಾರ," ಅವನು ತನ್ನ ಉತ್ಪನ್ನಗಳನ್ನು ಬೇರೆಯವರಿಗೆ ಮಾರಾಟ ಮಾಡಲು ಸಾಧ್ಯವಿಲ್ಲ, ಏಕೆಂದರೆ ಏಜೆಂಟ್ "ಅದನ್ನು ಬಿತ್ತುವ ಮೊದಲೇ ಇಡೀ ಬೆಳೆಯನ್ನು ಖರೀದಿಸಿದ್ದನು." 1990ರ ದಶಕದ ಆರಂಭದಲ್ಲಿ ಸಾಯಿನಾಥ್ ಅವರು ತಮ್ಮ ಪುಸ್ತಕಕ್ಕಾಗಿ ದೇಶದ ಹತ್ತು ಬಡ ಜಿಲ್ಲೆಗಳಿಗೆ ಭೇಟಿ ನೀಡಿದಾಗ, ರೈತರ ಮೇಲೆ ತರಾಗಾರರ ಹಿಡಿತ ಹೀಗಿತ್ತು.

ಮತ್ತು ನಾನು ನನ್ನ ಸರಣಿ 'ಲೆಟ್ ದೆಮ್ ಈಟ್ ರೈಸ್' ಗಾಗಿ, ಇಲ್ಲಿನ ರೈತರು ಈಗ ಹೇಗೆ ಇದೆಲ್ಲವನ್ನು ನಿರ್ವಹಿಸುತ್ತಿದ್ದಾರೆನ್ನುವುದನ್ನು ತಿಳಿಯಲು, 2022ರಲ್ಲಿ ರಾಮನಾಥಪುರಂಗೆ ಬಂದೆ.

*****

"ಕಡಿಮೆ ಇಳುವರಿಗೆ ಕಾರಣಗಳು: ಮಯಿಲ್, ಮುಯಲ್, ಮಾಡು, ಮಾನ್, (ತಮಿಳಿನಲ್ಲಿ - ನವಿಲು, ಮೊಲ, ಹಸು ಮತ್ತು ಜಿಂಕೆ). ಇದರ ಜೊತೆ ಹೆಚ್ಚು ಮಳೆ ಅಥವಾ ತುಂಬಾ ಕಡಿಮೆ ಮಳೆ."
ವಿ.ಗೋವಿಂದರಾಜನ್, ಮೆಣಸಿನಕಾಯಿ ಬೆಳೆಗಾರ, ಮುಮ್ಮುಡಿಸಥಾನ್, ರಾಮನಾಥಪುರಂ

ರಾಮನಾಥಪುರಂ ಪಟ್ಟಣದ ಮೆಣಸಿನಕಾಯಿ ವ್ಯಾಪಾರಿಯ ಅಂಗಡಿಯ ಒಳಗೆ, ಮಹಿಳೆಯರು ಮತ್ತು ಪುರುಷರು ಹರಾಜು ಪ್ರಾರಂಭವಾಗಲು ಕಾಯುತ್ತಿದ್ದರು. ಅವರೆಲ್ಲರೂ ಟೆಂಪೋಗಳು ಮತ್ತು ಬಸ್ಸುಗಳಲ್ಲಿ ಈ ಮಾರುಕಟ್ಟೆಗೆ ಪ್ರಯಾಣಿಸಿದ ರೈತರು, ಮತ್ತು ಅವರು ಜಾನುವಾರು ಮೇವಿನ ಮೂಟೆಗಳ ಮೇಲೆ ('ಡಬಲ್ ಹಾರ್ಸ್' ಬ್ರಾಂಡ್) ಕುಳಿತು ತಮ್ಮ ಸೆರಗು ಮತ್ತು ಟವೆಲ್ಲುಗಳಿಂದ ಗಾಳಿ ಬೀಸಿಕೊಳ್ಳುತ್ತಿದ್ದರು. ಇಲ್ಲಿ ತುಂಬಾ ಸೆಕೆಯಿತ್ತಾದರೂ, ಒಂದಷ್ಟು ನೆರಳಿತ್ತು. ಆದರೆ ಮೆಣಸಿನ ಹೊಲದಲ್ಲಿ ಒಂದಿಷ್ಟೂ ನೆರಳಿರುವುದಿಲ್ಲ. ಯಾಕೆಂದರೆ ಮೆಣಸು ನೆರಳಿನಲ್ಲಿ ಬೆಳೆಯುವುದಿಲ್ಲ.

Mundu chilli harvest at a traders shop in Ramanathapuram
PHOTO • M. Palani Kumar
Govindarajan (extreme right) waits with other chilli farmers in the traders shop with their crop
PHOTO • M. Palani Kumar

ಎಡ: ರಾಮನಾಥಪುರಂನ ವ್ಯಾಪಾರಿ ಅಂಗಡಿಯಲ್ಲಿ ಮುಂಡು ಮೆಣಸಿನಕಾಯಿ ಫಸಲು. ಬಲ: ಗೋವಿಂದರಾಜನ್ (ಬಲತುದಿ) ತಮ್ಮ ಬೆಳೆಯೊಂದಿಗೆ ವ್ಯಾಪಾರಿಗಳ ಅಂಗಡಿಯಲ್ಲಿ ಇತರ ಮೆಣಸಿನಕಾಯಿ ರೈತರೊಂದಿಗೆ ಕಾಯುತ್ತಿರುವುದು

69 ವರ್ಷದ ವಿ.ಗೋವಿಂದರಾಜನ್ ಅವರು ತಲಾ 20 ಕೆ.ಜಿ.ಯಷ್ಟು ಕೆಂಪು ಮೆಣಸಿನಕಾಯಿಯ ಮೂರು ಮೂಟೆಗಳನ್ನು ತಂದಿದ್ದಾರೆ. "ಈ ವರ್ಷ, ಫಸಲು ಕಳಪೆಯಾಗಿದೆ." ಮಗಸೂಲ್, ಇಳುವರಿಯ ಬಗ್ಗೆ ಮಾತನಾಡುವಾಗ ಅವರು ತಲೆ ಅಲ್ಲಾಡಿಸುತ್ತಾರೆ. "ಆದರೆ ಬೇರೆ ಯಾವ ವೆಚ್ಚವೂ ಕಡಿಮೆಯಾಗುತ್ತಿಲ್ಲ." ಬೆಳೆ ಸ್ವತಃ ಸಾಕಷ್ಟು ಗಟ್ಟಿಯಾಗಿದೆ ಎಂದು ಅವರು ಹೇಳುತ್ತಾರೆ. ಮಲ್ಲಿಗೆಯಂತಹ ಇತರ ಬೆಳೆಗಳಿಗೆ ಹೋಲಿಸಿದರೆ, ಮಿಳಗೈಯನ್ನು ಕೀಟನಾಶಕಗಳಲ್ಲಿ ಸ್ನಾನ ಮಾಡಿಸುವ ಅಗತ್ಯವಿಲ್ಲ.

ಮುಂದೆ, ಗೋವಿಂದರಾಜನ್ ಈ ಪ್ರಕ್ರಿಯೆಯ ಬಗ್ಗೆ ಮಾತನಾಡಿದರು. ಅವರು ನನಗೆ ಉಳುಮೆಯ ಸಂಖ್ಯೆಯನ್ನು ವಿಭಜಿಸಿ ಹೇಳಿದರು: ಏಳು (ಎರಡು ಆಳವಾದ ಉಳುಮೆಗಳು ಮತ್ತು ಐದು ಬೇಸಿಗೆ ಉಳುಮೆಗಳು). ಮುಂದೆ ಗೊಬ್ಬರ. ಅಂದರೆ, ಪ್ರತಿ ರಾತ್ರಿ 100 ಮೇಕೆಗಳನ್ನು ತನ್ನ ಹೊಲದಲ್ಲಿ ಒಂದು ವಾರದವರೆಗೆ ಕಟ್ಟುತ್ತಾರೆ, ಇದರಿಂದ ಅವುಗಳ ಗೊಬ್ಬರವು ಮಣ್ಣನ್ನು ಸಮೃದ್ಧಗೊಳಿಸುತ್ತದೆ. ಇದಕ್ಕೆ ಅವರಿಗೆ ಒಂದು ರಾತ್ರಿಗೆ 200 ರೂಪಾಯಿಗಳು ಖರ್ಚಾಗುತ್ತವೆ. ನಂತರ ಬೀಜದ ವೆಚ್ಚ ಮತ್ತು ಕಳೆ ತೆಗೆಯಲು 4-5 ಚಕ್ರಗಳು ಇರುತ್ತವೆ. "ನನ್ನ ಮಗನ ಬಳಿ ಟ್ರಾಕ್ಟರ್ ಇದೆ, ಆದ್ದರಿಂದ ಅವನು ನನ್ನ ಹೊಲವನ್ನು ಉಚಿತವಾಗಿ ಸಿದ್ಧಪಡಿಸುತ್ತಾನೆ" ಎಂದು ಅವರು ನಗುತ್ತಾರೆ. "ಸೇವೆಯ ಆಧಾರದ ಮೇಲೆ ಇತರರು ಗಂಟೆಗೆ 900ರಿಂದ 1,500 ರೂ.ಗಳನ್ನು ಬಾಡಿಗೆಯಾಗಿ ಪಾವತಿಸುತ್ತಾರೆ."

ನಾವು ಮಾತನಾಡುತ್ತಿರುವ ಸ್ಥಳದಲ್ಲಿ ಇನ್ನೂ ಕೆಲವು ರೈತರು ಸೇರಿಕೊಂಡರು. ಪುರುಷರು ತಮ್ಮ ಧೋತಿಗಳು ಮತ್ತು ಲುಂಗಿಗಳನ್ನು ಉಟ್ಟು ಶಾಲ್‌ ಒಂದನ್ನು ಹೆಗಲ ಮೇಲೆ ಅಥವಾ ರುಮಾಲಿನಂತೆ ಕಟ್ಟಿಕೊಂಡಿದ್ದರು. ಮಹಿಳೆಯರು ನೈಲಾನ್ ಸೀರೆಗಳನ್ನು ಉಟ್ಟಿದ್ದರು. ಅವರು ಕನಕಾಂಬರ ಮತ್ತು ಮಲ್ಲಿಗೆ ಹೂವುಗಳನ್ನು ಕಟ್ಟಿ ಮುಡಿದಿದ್ದರು. ಗೋವಿಂದರಾಜನ್ ನನಗೆ ಚಹಾ ಕೊಡಿಸಿದರು. ಸೂರ್ಯನ ಬೆಳಕು ಮಾಡಿನ ಮೂಲಕ ಹಾಯ್ದು ಮೆಣಸಿನ ಮೇಲೆ ಬಿದ್ದು ಅವು ಮಾಣಿಕ್ಯದಂತೆ ಹೊಳೆಯುತ್ತಿದ್ದವು.

ರಾಮನಾಥಪುರಂ ಬ್ಲಾಕ್ ನ ಕೊನೇರಿ ಕುಗ್ರಾಮದ 35 ವರ್ಷದ ರೈತ ಎ. ವಾಸುಕಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅಲ್ಲಿದ್ದ ಇತರ ಮಹಿಳೆಯರಂತೆ, ಅವರ ದಿನವು ಪುರುಷರಿಗಿಂತ ಮುಂಚಿತವಾಗಿ ಪ್ರಾರಂಭವಾಗುತ್ತದೆ.  ಬೆಳಿಗ್ಗೆ 7 ಗಂಟೆಗೆ ಮುಂಚಿತವಾಗಿ ಎದ್ದು, ಮಾರುಕಟ್ಟೆಗೆ ಹೊರಡುವ ಮೊದಲು, ಶಾಲೆಗೆ ಹೋಗುವ ಮಕ್ಕಳಿಗೆ ಅಡುಗೆ ಮಾಡಿ ಊಟವನ್ನು ಪ್ಯಾಕ್ ಮಾಡುತ್ತಾರೆ. ಮತ್ತು ಹಿಂದಿರುಗುವ ಹೊತ್ತಿಗೆ 12 ಗಂಟೆಗಳು ಕಳೆದಿರುತ್ತದೆ. ಇದರಲ್ಲಿ ಹೆಚ್ಚಿನ ಹೊತ್ತು ಕೆಲಸದಲ್ಲಿ ಕಳೆಯುತ್ತದೆ.

ಈ ವರ್ಷದ ಪೂರ್ತಿ ಕೈಸುಟ್ಟಿತು ಎಂದು ಅವರು ಹೇಳುತ್ತಾರೆ. "ಏನೋ ತಪ್ಪಾಗಿದೆ ಮತ್ತು ಮೆಣಸಿನಕಾಯಿಗಳು ಬೆಳೆಯಲೇ ಇಲ್ಲ. ಅಂಬುಟ್ಟುಮ್ ಕೊಟ್ಟಿಡುಚು (ಎಲ್ಲವೂ ಉದುರಿಹೋಯಿತು)." ಅವರು ತನ್ನೊಂದಿಗೆ ತಂದಿರುವುದು ಕೇವಲ ೪೦ ಕಿಲೋಗಳು - ಮಾಮೂಲಿಗಿಂತಲೂ ಅರ್ಧದಷ್ಟು ಇಳುವರಿ – ಮತ್ತು ಈ ಋತುವಿನ ನಂತರ ಅವರು ಇನ್ನೂ 40 ಕೆಜಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಒಂದಿಷ್ಟು ಸಂಪಾದಿಸಲು, ಈಗ ನರೇಗಾ ಕೆಲಸವನ್ನು ನಂಬಿಕೊಂಡಿದ್ದಾರೆ.

Vasuki (left) and Poomayil in a yellow saree in the centre waiting for the auction with other farmers
PHOTO • M. Palani Kumar

ವಾಸುಕಿ (ಎಡ) ಮತ್ತು ಪೂಮಯಿಲ್ ಹಳದಿ ಸೀರೆಯಲ್ಲಿ ಮಧ್ಯದಲ್ಲಿ ಇತರ ರೈತರೊಂದಿಗೆ ಹರಾಜಿಗಾಗಿ ಕಾಯುತ್ತಿದ್ದಾರೆ

Govindrajan (left) in an animated discussion while waiting for the auctioneer
PHOTO • M. Palani Kumar

ಗೋವಿಂದರಾಜನ್ (ಎಡಕ್ಕೆ) ಹರಾಜುಗಾರನಿಗಾಗಿ ಕಾಯುತ್ತಿರುವಾಗ ಮುಕ್ತ ಚರ್ಚೆಯಲ್ಲಿ

59 ವರ್ಷದ ಪಿ. ಪೂಮಯಿಲ್ ಅವರಿಗೆ, ಅವರ ಕುಗ್ರಾಮವಾದ ಮುಮ್ಮುದಿಸಥಾನ್ ಎನ್ನುವಲ್ಲಿಂದ 20 ಕಿಲೋಮೀಟರ್ ಪ್ರಯಾಣವು ದಿನದ ಪ್ರಮುಖ ಆಕರ್ಷಣೆಯಾಗಿದೆ. ಆ ಬೆಳಿಗ್ಗೆ ಉಚಿತ ಸವಾರಿಯನ್ನು ಪಡೆದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವು 2021ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಒಂದು ಯೋಜನೆಯನ್ನು ಘೋಷಿಸಿತ್ತು, ಅದು ಮಹಿಳೆಯರಿಗೆ ಪಟ್ಟಣದ ಬಸ್ಸುಗಳಲ್ಲಿ ಪ್ರಯಾಣವನ್ನು ಉಚಿತಗೊಳಿಸಿತು .

ಪೂಮಯಿಲ್ ತನ್ನ ಟಿಕೆಟ್ ಅನ್ನು ನನಗೆ ತೋರಿಸಿದರು, ಅದರಲ್ಲಿ ಮಗಲಿರ್ (ಮಹಿಳೆಯರು) ಮತ್ತು ಉಚಿತ ಟಿಕೆಟ್ ಎಂದು ಬರೆದಿತ್ತು. ನಾವು ಅವರ ಉಳಿತಾಯದ ಬಗ್ಗೆ ಚರ್ಚಿಸಿದೆವು - 40 ರೂಪಾಯಿಗಳು - ಮತ್ತು ಒಂದಿಬ್ಬರು ಪುರುಷರು ತಾವೂ ಸಹ ಉಚಿತವಾಗಿ ಪ್ರಯಾಣಿಸಲು ಬಯಸುತ್ತೇವೆ ಎಂದು ಗೊಣಗಿದರು. ಅಲ್ಲಿದ್ದ ಪ್ರತಿಯೊಬ್ಬರೂ, ವಿಶೇಷವಾಗಿ ಮಹಿಳೆಯರು, ಸಂತೋಷದಿಂದ ನಕ್ಕರು.

ಆದರೆ ಇಳುವರಿ ಕಡಿಮೆಯಾಗಿರುವುದಕ್ಕೆ ಗೋವಿಂದರಾಜನ್ ಒಂದೊಂದಾಗಿ ಕಾರಣಗಳನ್ನು ಹೇಳತೊಡಗಿದಾಗ ಅವರ ನಗು ನಿಧಾನವಾಗಿ ಮರೆಯಾಗುತ್ತದೆ. ಮಯಲ್, ಮುಯಲ್, ಮಾಡು, ಮಾನ್, ಅವರು ತಮಿಳಿನಲ್ಲಿ ಎಣಿಸುತ್ತಾರೆ - ನವಿಲು, ಮೊಲ, ಹಸು ಮತ್ತು ಜಿಂಕೆ. "ಅದಾದ ಮೇಲೆ ವಿಪರೀತ ಅಥವಾ ಕಡಿಮೆ ಮಳೆಯಾಗುತ್ತದೆ." ಉತ್ತಮ ಮಳೆಯು ಹೂವು ಮತ್ತು ಕಾಯಿಗಳ ಪಕ್ವತೆಯ ಸಮಯದಲ್ಲಿ ಸಹಾಯಕವಾಗಬಹುದು, ಆದರೆ ಆ ಸಮಯದಲ್ಲಿ ಮಳೆಯಾಗಲಿಲ್ಲ. ಎತ್ತರವನ್ನು ಕೈಯಿಂದ ತೋರಿಸಿ ವಿವರಿಸುತ್ತಾ, “ಹಿಂದಿನ ಕಾಲದಲ್ಲಿ ಮೆಣಸಿನಕಾಯಿಯ ಬೇಸಾಯ ಜಾಸ್ತಿ ಇತ್ತು. ಆಗ ಬೆಟ್ಟದಂತಹ ಮೆಣಸಿನ ರಾಶಿಯೊಂದು ನಿರ್ಮಾಣವಾಗುತ್ತಿತ್ತು ಮತ್ತು ಆ ರಾಶಿಯ ಮೇಲೆ ನಿಂತು ಮೆಣಸಿನ ಕಾಯಿ ಸುರಿತುತ್ತಿದ್ದರು.

ಈಗ ರಾಶಿಗಳು ಚಿಕ್ಕದಾಗುತ್ತಿವೆ ಮತ್ತು ಅವುಗಳ ವಿಧಗಳು ಒಂದೇ ಆಗಿರುವುದಿಲ್ಲ. ಕೆಲವು ಗಾಢವಾದ ಕೆಂಪು ಬಣ್ಣವನ್ನು ಹೊಂದಿರುತ್ತವೆ, ಮತ್ತು ಕೆಲವು ತುಂಬಾ ಪ್ರಕಾಶಮಾನವಾಗಿರುತ್ತವೆ. ಆದರೆ ಅವೆಲ್ಲವೂ ತುಂಬಾ ತೀಕ್ಷ್ಣವಾಗಿದ್ದು, ಅದರ ನಡುವೆಯೇ ಯಾರೋ ಸೀನುವ ಅಥವಾ ಕೆಮ್ಮುವ ಶಬ್ದವು ಯಾವಾಗಲೂ ಇರುತ್ತದೆ. ಇಡೀ ಪ್ರಪಂಚದ ಮುಂದೆ ಕೊರೊನಾವೈರಸ್ ಇನ್ನೂ ದೊಡ್ಡ ಬೆದರಿಕೆಯಾಗಿ ಉಳಿದಿದೆ, ಆದರೆ ಇಲ್ಲಿ ವ್ಯಾಪಾರಿಯ ಅಂಗಡಿಯೊಳಗೆ ಈ ಸೀನುವಿಕೆಯ ನಿಜವಾದ ಅಪರಾಧಿ ಮೆಣಸಿನಕಾಯಿ.

The secret auction that will determine the fate of the farmers.
PHOTO • M. Palani Kumar
Farmers waiting anxiously to know the price for their lot
PHOTO • M. Palani Kumar

ಎಡ: ರೈತರ ಭವಿಷ್ಯವನ್ನು ನಿರ್ಧರಿಸುವ ರಹಸ್ಯ ಹರಾಜು. ಬಲ: ರೈತರು ತಮ್ಮ ಬೆಳೆಗಳ ಮೌಲ್ಯವನ್ನು ತಿಳಿಯಲು ಉತ್ಸುಕರಾಗಿದ್ದಾರೆʼ

ಅದೇ ಸಮಯದಲ್ಲಿ ಹರಾಜುದಾರರಾದ ಎಸ್. ಜೋಸೆಫ್ ಸೆಂಗೋಲ್ ಅಲ್ಲಿಗೆ ಬರುತ್ತಿದ್ದಂತೆ ಪ್ರತಿಯೊಬ್ಬರ ಚಡಪಡಿಕೆ ಹೆಚ್ಚಾಗತೊಡಗಿತು. ಎಲ್ಲಾ ರೈತರು ಇದ್ದಕ್ಕಿದ್ದಂತೆ ಗಂಭೀರವಾಗಿ ಮತ್ತು ಕ್ರಮವನ್ನು ಎಚ್ಚರಿಕೆಯಿಂದ ವೀಕ್ಷಿಸಿದರು. ಮೆಣಸಿನ ಕಾಯಿಗಳ ರಾಶಿಯ ಸುತ್ತ ಜನ ಸೇರಲಾರಂಭಿಸಿದರು. ಜೋಸೆಫ್ ಜೊತೆ ಬಂದಿರುವ ಇತರರು ಉತ್ಪನ್ನದ ಮೇಲೆ ನಿಂತು ಅದನ್ನು ಪರೀಕ್ಷಿಸುತ್ತಾರೆ. ಇದರ ನಂತರ, ಅವರು ತನ್ನ ಬಲಗೈ ಮೇಲೆ ಟವೆಲ್ ಹಾಕಿಕೊಳ್ಳುತ್ತಾರೆ. ಇನ್ನೊಬ್ಬ ವ್ಯಕ್ತಿ ಬಂದು ಜೋಸೆಫ್‌ ಅವರ ಬೆರಳುಗಳನ್ನು ಒಳಗಿನಿಂದ ಹಿಡಿದುಕೊಳ್ಳುತ್ತಾರೆ. ಇದು ಗೌಪ್ಯ ಹರಾಜಿನ ಮಾರ್ಗವಾಗಿದೆ. ಹರಾಜಿನಲ್ಲಿ ಎಲ್ಲಾ ಖರೀದಿದಾರರು ಪುರುಷರು.

ಹರಾಜಿನಲ್ಲಿ ಬಳಸುವ ಸಂಕೇತ ಭಾಷೆಯು ಹೊರಗಿನವರಿಗೆ ಒಂದು ಒಗಟಿಗಿಂತ ಕಡಿಮೆಯಿಲ್ಲ. ಹಸ್ತವನ್ನು ಸ್ಪರ್ಶಿಸುವ ಮೂಲಕ, ಬೆರಳುಗಳನ್ನು ಹಿಡಿದಿಟ್ಟುಕೊಳ್ಳುವುದರ ಮೂಲಕ ಅಥವಾ ಒಂದು ಕೈಯನ್ನು ಇನ್ನೊಂದು ಕೈಯಿಂದ ತಟ್ಟುವ ಮೂಲಕ ಸಂಭಾಷಣೆಗಳು ಮತ್ತು ಸಂಖ್ಯೆಗಳ ವಿನಿಮಯವು ನಿರಂತರವಾಗಿ ಮುಂದುವರಿಯುತ್ತದೆ. ಪ್ರತಿ ರಾಶಿಯ ಮೌಲ್ಯವನ್ನು ಈ ರೀತಿಯಲ್ಲಿ ನಿರ್ಧರಿಸಲಾಗುತ್ತದೆ. ಅವರು ಹರಾಜನ್ನು ರದ್ದುಗೊಳಿಸಲು ಬಯಸಿದರೆ, ಅಂಗೈ ಮಧ್ಯದಲ್ಲಿ ಶೂನ್ಯವನ್ನು ಎಳೆಯಬೇಕು. ಈ ಕೆಲಸಕ್ಕೆ ಹರಾಜುದಾರರಿಗೆ ಪ್ರತಿ ಗೋಣಿ ಚೀಲಕ್ಕೆ ಮೂರು ರೂಪಾಯಿಯಂತೆ ಕಮಿಷನ್ ಸಿಗುತ್ತದೆ. ಮತ್ತು, ಈ ಹರಾಜಿನ ಸಂಪೂರ್ಣ ಪ್ರಕ್ರಿಯೆಯ ಯಶಸ್ವಿ ನಿರ್ವಹಣೆಗಾಗಿ, ವ್ಯಾಪಾರಿಯು ಒಟ್ಟು ಮಾರಾಟದ 8 ಪ್ರತಿಶತವನ್ನು ರೈತರಿಂದ ಕಮಿಷನ್ ಆಗಿ ಪಡೆಯುತ್ತಾನೆ.

ಒಬ್ಬ ಖರೀದಿದಾರನ ಒಪ್ಪಂದವು ಇತ್ಯರ್ಥವಾದ ನಂತರ, ಇನ್ನೊಬ್ಬನ ಸರದಿ ಬರುತ್ತದೆ. ನಂತರ ಅದೇ ರೀತಿಯಲ್ಲಿ ಟವೆಲ್ ಒಳಗೆ ಬೆರಳನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಅಂತೆಯೇ, ಪ್ರತಿ ಖರೀದಿದಾರನ ಸರದಿ ಒಂದೊಂದಾಗಿ ಹೋಗುತ್ತದೆ. ಅಂದು ಕೆಂಪು ಮೆಣಸಿನಕಾಯಿ ಗಾತ್ರ ಮತ್ತು ಬಣ್ಣಕ್ಕೆ ಅನುಗುಣವಾಗಿ ಕೆಜಿಗೆ 310ರಿಂದ 389 ರೂ.ವರೆಗೆ ದರ ನಿಗದಿ ಮಾಡಲಾಗಿತ್ತು. ಮೆಣಸಿನಕಾಯಿಯ ಗುಣಮಟ್ಟವನ್ನು ನಿರ್ಧರಿಸುವ ಮುಖ್ಯ ಅಂಶವೆಂದರೆ ಬಣ್ಣ ಮತ್ತು ಗಾತ್ರ.

ರೈತರು ನೆಮ್ಮದಿಯಿಂದ ಇರುವಂತೆ ಕಾಣುತ್ತಿಲ್ಲ. ಇಳುವರಿ ಕಡಿಮೆ ಇರುವ ಕಾರಣ ಉತ್ತಮ ಬೆಲೆ ಸಿಕ್ಕರೂ ಲಾಭ ಗಳಿಸಲು ಸಾಧ್ಯವಾಗಿಲ್ಲ. ಗೋವಿಂದರಾಜನ್ ಹೇಳುತ್ತಾರೆ, “ನಾವು ಹೆಚ್ಚು ಗಳಿಸಲು ಬಯಸಿದರೆ, ಮೌಲ್ಯವರ್ಧನೆಯತ್ತ ಗಮನ ಹರಿಸಬೇಕು ಎಂದು ನಮಗೆ ತಿಳಿಸಲಾಗಿದೆ. ಆದರೆ ನೀವು ಹೇಳಿ, ನಮಗೆ ಎಲ್ಲಿ ಸಮಯವಿದೆ? ನಾವು ಒಣ ಮೆಣಸಿನಕಾಯಿಯನ್ನು ಪುಡಿಮಾಡಿ ಅದನ್ನು ಪ್ಯಾಕ್ ಮಾಡಿ ಆ ಪ್ಯಾಕೆಟ್‌ಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋಗಬೇಕೇ ಅಥವಾ ನಮ್ಮ ಕೃಷಿಯತ್ತ ಗಮನ ಹರಿಸಬೇಕೇ?

ಆದರೆ ತನ್ನ ಮೆಣಸಿನಕಾಯಿಯನ್ನು ಹರಾಜು ಹಾಕುವ ಸಮಯ ಬಂದಾಗ ಉದ್ವೇಗವು ಅವರ ಕೋಪವನ್ನು ಕಡಿಮೆ ಮಾಡಿತು. ಅವರು ನನ್ನನ್ನು ಒತ್ತಾಯಿಸಿದರು, “ನೀವೂ ಬನ್ನಿ, ಚೆನ್ನಾಗಿ ನೋಡಬಹುದು,” ಟವೆಲ್ಲಿನಿಂದ ಬಾಯಿ ಒರೆಸುತ್ತಾ ಹೇಳಿದರು. ಅವರ ಅಭಿವ್ಯಕ್ತಿಯಲ್ಲಿ ಉದ್ವೇಗವು ಸ್ಪಷ್ಟವಾಗಿ ಗೋಚರಿಸುತ್ತಿತ್ತು ಮತ್ತು ಅವವರು ತನ್ನ ಕೈಗಳ ಸಂಕೇತ ಭಾಷೆಯನ್ನು ಎಚ್ಚರಿಕೆಯಿಂದ ನೋಡುತ್ತಿದ್ದರು. ಬೆಲೆ ಘೋಷಣೆಯಾದ ನಂತರ ‘ಕೆಜಿಗೆ ರೂ.335 ಬೆಲೆ ಸಿಕ್ಕಿತು’ ಎಂದು ಮುಗುಳ್ನಕ್ಕರು. ಅವರ ಮಗನ ಮೆಣಸಿನಕಾಯಿ, ಅದರ ಹಣ್ಣುಗಳು ತುಲನಾತ್ಮಕವಾಗಿ ದೊಡ್ಡದಾಗಿದ್ದು, 30 ರೂ.ಗೆ ಹೆಚ್ಚು ಬೆಲೆಗೆ ಮಾರಾಟವಾಯಿತು. ವಾಸುಕಿ ಅವರ ಉತ್ಪನ್ನದ ಬೆಲೆ ಕೆಜಿಗೆ 359 ರೂ. ರೈತರು ಈಗ ನಿರಾಳರಾಗಿದ್ದಾರು, ಆದರೆ ಅವರ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಈಗ ಅವರು ತಮ್ಮ ಮೆಣಸಿನಕಾಯಿಯನ್ನು ಅಳೆದು, ಹಣ ಪಡೆದು, ತಿಂಡಿ ತಿಂದು, ಸಣ್ಣಪುಟ್ಟ ಶಾಪಿಂಗ್ ಮಾಡಿ ನಂತರ ಬಸ್ ಹತ್ತಿ ಮನೆಗೆ ಮರಳಬೇಕು...

Adding and removing handfuls of chillies while weighing the sacks.
PHOTO • M. Palani Kumar
Weighing the sacks of chillies after the auction
PHOTO • M. Palani Kumar

ಎಡ: ಚೀಲಗಳನ್ನು ತೂಕ ಮಾಡುವಾಗ ಬೆರಳೆಣಿಕೆಯಷ್ಟು ಮೆಣಸಿನಕಾಯಿಗಳನ್ನು ಸೇರಿಸುವುದು ಮತ್ತು ತೆಗೆಯುವುದು. ಬಲ: ಹರಾಜಿನ ನಂತರ ಮೆಣಸಿನ ಮೂಟೆಗಳನ್ನು ತೂಕ ಮಾಡುವುದು

*****

"ನಾವು ಸಿನೆಮಾಗೆ ಹೋಗುತ್ತಿದ್ದೆವು. ಆದರೆ 18 ವರ್ಷಗಳ ಹಿಂದೆ ನಾನು ಚಿತ್ರಮಂದಿರದಲ್ಲಿ ನೋಡಿದ ಕೊನೆಯ ಚಿತ್ರ ತುಳ್ಳಾದ ಮನಮುಮ್‌ ತುಳ್ಳುಮ್." (ಕರಗದ ಹೃದಯವೂ ಸಹ ಕರಗುತ್ತದೆ)
ಎಸ್.ಅಂಬಿಕಾ, ಮೆಣಸಿನಕಾಯಿ ಬೆಳೆಗಾರರು, ಮೆಲಯಕುಡಿ, ರಾಮನಾಥಪುರಂ

ಎಸ್. ಅಂಬಿಕಾ ನಮಗೆ ಹೇಳುತ್ತಾರೆ, “ಶಾರ್ಟ್‌ಕಟ್‌ನಲ್ಲಿ ಹೋದರೆ ಕೇವಲ ಅರ್ಧ ಗಂಟೆಯಲ್ಲಿ ನಮ್ಮ ಜಮೀನನ್ನು ತಲುಪಬಹುದು. ಆದರೆ ರಸ್ತೆಯ ಮೂಲಕ ಹೋಗಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ತಿರುವು ಮತ್ತು ಅಂಕುಡೊಂಕಾದ ರಸ್ತೆಯಲ್ಲಿ ಮೂರೂವರೆ ಕಿಲೋಮೀಟರ್‌ನಲ್ಲಿ ಸಾಗಿದ ನಂತರ, ನಾವು ಪರಮಕುಡಿ ಬ್ಲಾಕ್‌ನ ಮೆಲಯಕುಡಿ ಗ್ರಾಮದ ಅವರ ಮೆಣಸಿನಕಾಯಿ ಹೊಲಗಳನ್ನು ತಲುಬಹುದು. ಮೆಣಸಿನ ಗಿಡಗಳು ದೂರದಿಂದ ಗೋಚರಿಸುತ್ತಿದ್ದವು - ಎಲೆಗಳು ಹಸಿರು ಬಣ್ಣದಲ್ಲಿ ಹೊಳೆಯುತ್ತಿದ್ದವು ಮತ್ತು ಎಲ್ಲಾ ಕೊಂಬೆಗಳು ಮೆಣಸಿನಕಾಯಿಯಿಂದ ಆವೃತವಾಗಿದ್ದು, ಮಾಗಿದ ವಿವಿಧ ಹಂತಗಳಲ್ಲಿದ್ದವು. ಬಣ್ಣವು ಗುಲಾಬಿ ಕೆಂಪು, ಅರಿಶಿನ ಹಳದಿ ಮತ್ತು ಸುಂದರವಾದ ಅರಕ್ಕು (ಮರೂನ್) ರೇಷ್ಮೆ ಸೀರೆಗಳ ಬಣ್ಣ. ಕಿತ್ತಳೆ ಬಣ್ಣದ ಚಿಟ್ಟೆಗಳು ಅಲ್ಲಿ ಇಲ್ಲಿ ಹಾರಾಡುತ್ತಿರುವುದು ಹಣ್ಣಾಗದ ಮೆಣಸಿನಕಾಯಿಗೆ ರೆಕ್ಕೆಗಳು ಬಂದಿರುವಂತೆ ಕಾಣುತ್ತಿತ್ತು.

ಹತ್ತು ನಿಮಿಷಗಳಲ್ಲಿ ಹೊಲಗಳ ಸೌಂದರ್ಯದ ಮೋಡಿಮಾಡುವ ಮ್ಯಾಜಿಕ್ ಮುಗಿಯಲು ಪ್ರಾರಂಭಿಸಿತು. ಬೆಳಗ್ಗೆ 10 ಗಂಟೆಯೂ ಆಗಿಲ್ಲ ಆದರೆ ಬಿಸಿಲಿನ ತಾಪ ಮುಗಿಲು ಮುಟ್ಟತೊಡಗಿತ್ತು. ಮಣ್ಣು ಒಣಗಿತ್ತು. ಕಣ್ಣುಗಳು ಬೆವರಿನಿಂದ ಅಂಟಿಕೊಳ್ಳುತ್ತಿದ್ದವು. ರಾಮನಾಥಪುರದ ನಾಡು ಮಳೆಗಾಗಿ ಕಾತರದಿಂದ ಕಾಯುತ್ತಿರುವಂತೆ ಜಿಲ್ಲೆಯ ಎಲ್ಲೆಡೆ ಬಿಸಿಲ ತಾಪಕ್ಕೆ ಭೂಮಿ ಬಿರುಕು ಬಿಟ್ಟಿರುವುದನ್ನು ಗಮನಿಸಿದೆವು. ಅಂಬಿಕಾ ಅವರ ಮೆಣಸಿನಕಾಯಿ ಹೊಲದಲ್ಲೂ ಅದೇ ಆಗಿದೆ. ಇಡೀ ಭೂಮಿಯಲ್ಲಿ ಜಾಲರಿಯಂತಹ ಬಿರುಕುಗಳಿವೆ. ಆದರೆ ಗದ್ದೆಯಲ್ಲಿ ಕಾಣುವ ಬಿರುಕುಗಳು ಮಣ್ಣಿನ ಶುಷ್ಕತೆಗೆ ಕಾರಣ ಎಂದು ಅಂಬಿಕಾ ಭಾವಿಸುವುದಿಲ್ಲ. "ನೋಡಿ, ಇದು ತೇವವಾಗಿದೆಯೇ?" ಅವಳು ತನ್ನ ಕಾಲ್ಬೆರಳುಗಳಿಂದ ಮಣ್ಣನ್ನು ಅಗೆಯುತ್ತಾ ಕೇಳುತ್ತಾರೆ. ಅವರ ಎರಡನೇ ಹೆಬ್ಬೆರಳಿನಲ್ಲಿ ಬೆಳ್ಳಿಯಿಂದ ಮಾಡಿದ ಮೆಟ್ಟಿ (ಉಂಗುರ) ಇದೆ.

ಅಂಬಿಕಾ ಅವರ ಕುಟುಂಬ ತಲೆಮಾರುಗಳಿಂದ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿದೆ. ಅವರಿಗೆ 38 ವರ್ಷ, ಮತ್ತು ಅವರೊಂದಿಗೆ 33 ವರ್ಷದ ದೇವರಾಣಿ ಇದ್ದಾರೆ. ಎರಡೂ ಕುಟುಂಬಗಳಿಗೆ ತಲಾ ಒಂದು ಎಕರೆ ಕೃಷಿಯೋಗ್ಯ ಜಮೀನಿದೆ. ಮೆಣಸಿನಕಾಯಿಯಲ್ಲದೆ, ಅವರು ಅಗಸೆಯನ್ನು ಸಹ ಬೆಳೆಯುತ್ತಾರೆ, ಇದು ಒಂದು ರೀತಿಯ ಸೊಪ್ಪು ಮತ್ತು ತಮ್ಮ ಮೇಕೆಗಳಿಗೆ ಪೌಷ್ಟಿಕ ಆಹಾರವಾಗಿದೆ. ಕೆಲವೊಮ್ಮೆ ಅವರು ಬೆಂಡೆ ಮತ್ತು ಬದನೆಯನ್ನು ಸಹ ಬೆಳೆಯುತ್ತಾರೆ. ಈ ಕಾರಣದಿಂದಾಗಿ, ಅವರ ಕೆಲಸದ ಹೊರೆ ಗಣನೀಯವಾಗಿ ಹೆಚ್ಚಾಗುತ್ತದೆ. ಆದರೆ ಇದು ಅವರ ಆದಾಯವನ್ನು ಹೆಚ್ಚಿಸುತ್ತದೆಯೇ?

ಇಬ್ಬರೂ ಮಹಿಳೆಯರು ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ತಮ್ಮ ಹೊಲಗಳಿಗೆ ತಲುಪುತ್ತಾರೆ ಮತ್ತು ಸಂಜೆ 5 ಗಂಟೆಯವರೆಗೆ ಬೆಳೆಗಳನ್ನು ಕಾಯುತ್ತಾರೆ. "ಇಲ್ಲದಿದ್ದರೆ ಆಡುಗಳು ಬೆಳೆಯನ್ನು ಮೇಯುತ್ತವೆ!" ಪ್ರತಿದಿನ ಬೆಳಗ್ಗೆ 4 ಗಂಟೆಗೆ ಏಳುತ್ತಾರೆ. ಮನೆಯನ್ನು ಶುಚಿಗೊಳಿಸುವುದು, ನೀರು ಹಾಕುವುದು, ಅಡುಗೆ ಮಾಡುವುದು, ಮಕ್ಕಳನ್ನು ಎಬ್ಬಿಸುವುದು, ಪಾತ್ರೆ ತೊಳೆಯುವುದು, ಆಹಾರ ಪ್ಯಾಕ್ ಮಾಡುವುದು, ದನ-ಕೋಳಿಗಳಿಗೆ ಆಹಾರ ನೀಡುವುದು, ಹೊಲಕ್ಕೆ ಹೋಗುವುದು, ಅಲ್ಲಿ ಕೆಲಸ ಮಾಡುವುದು, ಕೆಲವೊಮ್ಮೆ ಪ್ರಾಣಿಗಳಿಗೆ ನೀರುಣಿಸಲು ಮಧ್ಯಾಹ್ನ ಮನೆಗೆ ಮರಳುವುದು ಅವರ ಸಾಮಾನ್ಯ ದಿನಚರಿಯಾಗಿದೆ. ಮೆಣಸಿನಕಾಯಿ ಗದ್ದೆಗಳು, ಬೆಳೆಗಳನ್ನು ನಿರ್ವಹಿಸಿ, ನಂತರ ಶಾರ್ಟ್ ಕಟ್ ಮೂಲಕ ಅರ್ಧ ಗಂಟೆ ನಡೆದು ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ. ಆ ದಾರಿಯಲ್ಲಿ ತನ್ನ ನಾಯಿ ಮರಿಗಳ ಜೊತೆ ಒಂದು ತಾಯಿ ನಾಯಿ ಆಗಾಗ ಅವರ ದಾರಿಯನ್ನು ನೋಡುತ್ತಿರುತ್ತದೆ. ಈ ತಾಯಿಗೆ ತನ್ನ ಮಕ್ಕಳಿಗಾಗಿ ಸಮಯವಿದೆ ...

Ambika wearing a purple saree working with Rani in their chilli fields
PHOTO • M. Palani Kumar

ನೇರಳೆ ಬಣ್ಣದ ಸೀರೆ ಉಟ್ಟು ರಾಣಿಯೊಂದಿಗೆ ತಮ್ಮ ಮೆಣಸಿನ ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವ ಅಂಬಿಕಾ

Ambika with some freshly plucked chillies
PHOTO • M. Palani Kumar

ಕೆಲವು ತಾಜಾ ಮೆಣಸಿನಕಾಯಿಗಳೊಂದಿಗೆ ಅಂಬಿಕಾ

ಅಂಬಿಕಾರ ಮಗ ಅವಳನ್ನು ಕರೆಯುತ್ತಿದ್ದ. “ಎನ್ನಡಾ,” ಮೂರನೇ ಬಾರಿಗೆ ಗಂಟೆ ಬಾರಿಸಿದಾಗ, ಅಂಬಿಕಾ “ನಿನಗೆ ಏನು ಬೇಕು?” ಎಂದು ಉದ್ಗರಿಸಿದರು. ಅವನ ಮಾತನ್ನು ಕೇಳುತ್ತಲೇ ಲಘುವಾಗಿ ಛೀಮಾರಿ ಹಾಕಿದರು. ಮಕ್ಕಳು ಮನೆಯಲ್ಲಿ ಹಲವಾರು ವಿನಂತಿಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ಅವರು ನಮಗೆ ಹೇಳಿದರು. “ನಾವು ಏನೇ ಅಡುಗೆ ಮಾಡಿದರೂ ಅವರಿಗೆ ಮೊಟ್ಟೆ ಮತ್ತು ಆಲೂಗಡ್ಡೆ ಬೇಕು. ಅವರಿಗಾಗಿ ನಾವು ಮತ್ತೆ ಏನನ್ನಾದರೂ ಮಾಡಬೇಕು. ಭಾನುವಾರದಂದು ಅವರು ಹೇಳುವ ಮಾಂಸವನ್ನು ಮಾರುಕಟ್ಟೆಯಿಂದ ಖರೀದಿಸಿ ಅಡುಗೆ ಮಾಡುತ್ತೇವೆ.

ಸಂಭಾಷಣೆಯ ಸಮಯದಲ್ಲಿ, ಅಂಬಿಕಾ ಮತ್ತು ರಾಣಿ ಮೆಣಸಿನಕಾಯಿ ಕೀಳುತ್ತಿದ್ದರು. ಸುತ್ತಮುತ್ತಲಿನ ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರೂ ಇದನ್ನೇ ಮಾಡುತ್ತಿದ್ದರು. ಅವರು ಬೇಗನೆ ಕೊಂಬೆಗಳನ್ನು ಎಳೆದುಕೊಂಡು ಅವುಗಳಿಂದ ಮೆಣಸಿನಕಾಯಿಗಳನ್ನು ಸುಲಭವಾಗಿ ಕೀಳುತ್ತಾರೆ. ಅವರ ಮುಷ್ಟಿಗಳು ತುಂಬಿದಾಗ, ಅವುಗಳನ್ನು ವರ್ಣರಂಜಿತ ಖಾಲಿ ಬಕೆಟ್‌ಗೆ ಸುರಿಯುತ್ತಾರೆ. ಈ ಉದ್ದೇಶಕ್ಕಾಗಿ ಮೊದಲು ತಾಳೆ ಎಲೆಗಳಿಂದ ಮಾಡಿದ ಬುಟ್ಟಿಗಳನ್ನು ಬಳಸಲಾಗುತ್ತಿತ್ತು, ಆದರೆ ಈಗ ಅವುಗಳ ಬದಲಿಗೆ ಗಟ್ಟಿಮುಟ್ಟಾದ ಪ್ಲಾಸ್ಟಿಕ್ ಬಕೆಟ್‌ಗಳನ್ನು ಬಳಸಲಾಗುತ್ತಿದೆ ಎಂದು ಅಂಬಿಕಾ ಹೇಳುತ್ತಾರೆ.

ಮತ್ತೊಂದೆಡೆ ಅಂಬಿಕಾ ಅವರ ಮನೆಯ ಮೇಲ್ಛಾವಣಿಯಲ್ಲಿ ಅವರ ಬೆಳೆಗಳು ಬಿರು ಬಿಸಿಲಿಗೆ ಒಣಗುತ್ತಿವೆ. ಅವರು ಪ್ರತಿಯೊಂದು ಮೆಣಸಿನಕಾಯಿಯನ್ನೂ ಒಣಗಲು ಎಚ್ಚರಿಕೆಯಿಂದ ಹರಡುತ್ತಾರೆ ಮತ್ತು ಕಾಲಕಾಲಕ್ಕೆ ತಿರುಗಿಸುತ್ತಾರೆ ಇದರಿಂದ ಅವು ಸಮವಾಗಿ ಒಣಗುತ್ತವೆ. ಕೆಲವು ಮೆಣಸಿನಕಾಯಿಗಳನ್ನು ತೆಗೆದುಕೊಂಡು ಅವುಗಳನ್ನು ಹುರುಪಿನಿಂದ ಬೆರೆಸುತ್ತಾರೆ. ಅವು ಸರಿಯಾಗಿ ಒಣಗಿದಾಗ, "ಒಳಗಿನಿಂದ ಬೀಜದ ಶಬ್ದ ಬರಲು ಪ್ರಾರಂಭಿಸುತ್ತವೆ." ಈ ಪರಿಸ್ಥಿತಿಯಲ್ಲಿ ಮೆಣಸಿನಕಾಯಿಯನ್ನು ಸಂಗ್ರಹಿಸಿ ತೂಕ ಮಾಡಿ, ಗೋಣಿಚೀಲಗಳಲ್ಲಿ ತುಂಬಿ, ಗ್ರಾಮದ ದಲ್ಲಾಳಿ ಅಥವಾ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಪರಮಕುಡಿ ಮತ್ತು ರಾಮನಾಥಪುರದ ಮಾರುಕಟ್ಟೆಗೆ ಕೊಂಡೊಯ್ಯಲಾಗುತ್ತದೆ.

ಕೆಳಗಿನ ಮಹಡಿಯಲ್ಲಿರುವ ತನ್ನ ಅಡುಗೆಮನೆಯಿಂದ, ಅಂಬಿಕಾ ನನ್ನನ್ನು ಕೇಳಿದರು, "ನೀವು 'ಕಲರ್' (ಬಾಟಲ್ ತಂಪು ಪಾನೀಯ) ಕುಡಿಯುತ್ತೀರಾ?"

ಅವರು ತನ್ನ ಮೇಕೆಗಳನ್ನು ಕಟ್ಟುವ ಜಾಗ ತೋರಿಸಲು ನನ್ನನ್ನು ಹತ್ತಿರದ ಹೊಲಕ್ಕೆ ಕರೆದೊಯ್ದರು. ಹಗ್ಗದಿಂದ ಹೆಣೆದ ಮಂಚಗಳ ಕೆಳಗೆ ಮಲಗಿರುವ ರೈತನ ಕಾವಲು ನಾಯಿಗಳು ನಮ್ಮನ್ನು ನೋಡಿದ ಮೇಲೆ ಎಚ್ಚರಗೊಂಡು ಬೊಗಳಲು ಪ್ರಾರಂಭಿಸಿದವು. “ನನ್ನ ಪತಿ ಕಾರ್ಯಕ್ರಮಗಳ್ಲಲಿ ಆಹಾರ ಬಡಿಸಲು ಹೋದಾಗ, ನನ್ನ ನಾಯಿ ಕೂಡ ನನ್ನನ್ನು ನೋಡಿಕೊಳ್ಳುತ್ತದೆ. ನನ್ನ ಪತಿಯೂ ಕೃಷಿಕರಾಗಿದ್ದು, ಕೆಲಸ ಸಿಕ್ಕರೆ ಬೇರೆ ಕೆಲಸವನ್ನೂ ಮಾಡುತ್ತಾರೆ.

ಮದುವೆಯ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾ ಕೆಂಪಾಗತೊಡಗಿರು. “ಹಿಂದಿನ ಕಾಲದಲ್ಲಿ ನಾವು ಸಿನಿಮಾಕ್ಕೆ ಹೋಗುತ್ತಿದ್ದೆವು. ಆದರೆ ಸುಮಾರು 18 ವರ್ಷಗಳ ಹಿಂದೆ ನಾನು ಥಿಯೇಟರ್‌ನಲ್ಲಿ ನೋಡಿದ ಕೊನೆಯ ಚಿತ್ರ ʼತುಳ್ಳಾದ ಮನಮುಮ್‌ ತುಳ್ಳುಮ್‌ʼ (ಕರಗದ ಹೃದಯವೂ ಕರಗುತ್ತದೆ) ಚಿತ್ರದ ಹೆಸರು ಕೇಳಿದ ಇಬ್ಬರ ಮುಖದಲ್ಲೂ ನಗು ಮೂಡಿತು.

Women working in the chilli fields
PHOTO • M. Palani Kumar

ಮೆಣಸಿನ ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರು

Ambika of Melayakudi village drying her chilli harvest on her terrace
PHOTO • M. Palani Kumar

ಮೆಲಯಕುಡಿ ಗ್ರಾಮದ ಅಂಬಿಕಾ ತನ್ನ ಮೆಣಸಿನಕಾಯಿ ಫಸಲನ್ನು ಟೆರೇಸ್ ಮೇಲೆ ಒಣಗಿಸುತ್ತಿರುವುದು

*****

"ಸಣ್ಣ ಮೆಣಸಿನಕಾಯಿ ಬೆಳೆಗಾರರು ತಮ್ಮ ಬೆಳೆ ಮಾರಾಟ ಮಾಡುವ ಪ್ರಯತ್ನದಲ್ಲಿ ತಮ್ಮ ಆದಾಯದ 18 ಪ್ರತಿಶತವನ್ನು ಕಳೆದುಕೊಳ್ಳುತ್ತಾರೆ"
ಕೆ. ಗಾಂಧಿರಾಸು, ನಿರ್ದೇಶಕರು, ಮುಂಡು ಮೆಣಸಿನಕಾಯಿ ಬೆಳೆಗಾರರ ​​ಸಂಘ, ರಾಮನಾಥಪುರ

ಗಾಂಧಿರಾಸು ಹೇಳುತ್ತಾರೆ, ''ಕೇವಲ ಐದು-ಹತ್ತು ಚೀಲ ಮೆಣಸಿನಕಾಯಿ ಬೆಳೆಯುವ ರೈತರ ಬಗ್ಗೆ ಯೋಚಿಸಿ. ಮೊದಲನೆಯದಾಗಿ, ಅವರು ತಮ್ಮ ಗ್ರಾಮದಿಂದ ಮಂಡಿಗೆ ಕರೆದೊಯ್ಯುವ ಟೆಂಪೋ ಅಥವಾ ಇತರ ವಾಹನದ ಬಾಡಿಗೆಯನ್ನು ಪಾವತಿಸಬೇಕು. ಅಲ್ಲಿ ವರ್ತಕರು ಬೆಲೆ ನಿಗದಿ ಮಾಡಲು ಬರುತ್ತಾರೆ ಮತ್ತು ಅವರ ಕಮಿಷನ್ ಶುಲ್ಕವಾಗಿ 8 ಪ್ರತಿಶತವನ್ನು ವಿಧಿಸುತ್ತಾರೆ. ಮೂರನೆಯದಾಗಿ, ತೂಕದಲ್ಲಿ ಕೆಲವು ದೋಷಗಳು ಇರಬಹುದು, ಮತ್ತು ಈ ದೋಷದ ಲಾಭವನ್ನು ಹೆಚ್ಚಾಗಿ ವ್ಯಾಪಾರಿ ಸ್ವೀಕರಿಸುತ್ತಾರೆ. ಗೋಣಿ ಚೀಲದ ಲೆಕ್ಕದಲ್ಲಿ ಅರ್ಧ ಕಿಲೋ ಕಡಿಮೆ ಮಾಡಿದರೆ ಸಂಪೂರ್ಣ ನಷ್ಟ ರೈತರಿಗೆ. ಈ ಬಗ್ಗೆ ಹಲವು ರೈತರು ದೂರಿದ್ದಾರೆ.ʼ

ಇದರ ನಂತರವೂ, ಒಬ್ಬ ರೈತ ಇಡೀ ದಿನವನ್ನು ಈ ಪ್ರಕ್ರಿಯೆಯಲ್ಲಿ ಕಳೆಯುತ್ತಾನೆ ಮತ್ತು ಈ ಅವಧಿಯಲ್ಲಿ ಅವನು ತನ್ನ ಹೊಲಕ್ಕೆ ಗೈರುಹಾಜರಾಗುತ್ತಾನೆ. ವ್ಯಾಪಾರಿಯ ಬಳಿ ನಗದು ಇದ್ದರೆ, ಅವನು ತಕ್ಷಣ ಪಾವತಿಸುತ್ತಾನೆ ಇಲ್ಲದಿದ್ದರೆ ಅವನು ಮತ್ತೆ ಬರಲು ರೈತನನ್ನು ಕೇಳುತ್ತಾನೆ. ಮತ್ತು, ಕೊನೆಯದಾಗಿ, ರೈತರು ಮಾರುಕಟ್ಟೆಗೆ ಹೋಗುವಾಗ ತಮ್ಮ ಆಹಾರವನ್ನು ತಮ್ಮೊಂದಿಗೆ ತಂದಿರುವುದಿಲ್ಲ. ಹೀಗಿರುವಾಗ ಹಸಿವಾದಾಗ ಹೊಟೇಲ್ ನಲ್ಲಿ ಊಟ ಮಾಡಬೇಕು. ಈ ಖರ್ಚು ಮತ್ತು ಇತರ ಎಲ್ಲ ಖರ್ಚುಗಳನ್ನು ಸೇರಿಸಿದರೆ ಈಗಾಗಲೇ ರೈತರ ಒಟ್ಟು ಆದಾಯದಲ್ಲಿ ಶೇ.18 ರಷ್ಟು ಕಡಿತವಾಗುತ್ತದೆ ಎಂದು ತಿಳಿದುಬಂದಿದೆ.

ಗಾಂಧಿರಾಸು ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ) ನಡೆಸುತ್ತಿದ್ದಾರೆ. 2015ರಿಂದ, ರಾಮನಾಡ್ ಮುಂಡು ಮೆಣಸಿನಕಾಯಿ ಉತ್ಪಾದನಾ ಕಂಪನಿ ಲಿಮಿಟೆಡ್ ರೈತರ ಆದಾಯವನ್ನು ಹೆಚ್ಚಿಸುವ ದಿಕ್ಕಿನಲ್ಲಿ ಸಕ್ರಿಯವಾಗಿದೆ. ಗಾಂಧಿರಾಸು ಈ ಕಂಪನಿಯ ಅಧ್ಯಕ್ಷರು ಮತ್ತು ನಿರ್ದೇಶಕರು. ನಾವು ಅವರನ್ನು ಮುದುಕುಳತ್ತೂರು ಪಟ್ಟಣದ ಅವರ ಕಚೇರಿಯಲ್ಲಿ ಭೇಟಿಯಾದೆವು. "ನಿಮ್ಮ ಆದಾಯವನ್ನು ನೀವು ಹೇಗೆ ಹೆಚ್ಚಿಸುತ್ತೀರಿ? ಮೊದಲು ನೀವು ನಾಟಿ ವೆಚ್ಚವನ್ನು ಕಡಿತಗೊಳಿಸುತ್ತೀರಿ. ಎರಡನೆಯದಾಗಿ, ನಿಮ್ಮ ಇಳುವರಿಯನ್ನು ಹೆಚ್ಚಿಸಬೇಕು. ಮತ್ತು ಮೂರನೆಯದಾಗಿ, ಮಾರುಕಟ್ಟೆಯನ್ನು ಪ್ರವೇಶಿಸುವಂತೆ ಮಾಡಬೇಕು. ನಾವು ಪ್ರಸ್ತುತ ನಮ್ಮ ಸಂಪೂರ್ಣ ಗಮನವನ್ನು ಮಾರ್ಕೆಟಿಂಗ್ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ರಾಮನಾಥಪುರಂ ಜಿಲ್ಲೆಯಲ್ಲಿ ಅವರ ಅತ್ಯಂತ ಅಗತ್ಯ ಹಸ್ತಕ್ಷೇಪವೆಂದರೆ "ವಲಸೆ ಸಮಸ್ಯೆ"ಯನ್ನು ನಿಲ್ಲಿಸುವುದು.

ಸರ್ಕಾರ ತನ್ನ ಹಿಂದಿನ ಅಂಕಿಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತದೆ. ರಾಮನಾಥಪುರಂ ಜಿಲ್ಲೆಗೆ ತಮಿಳುನಾಡು ಗ್ರಾಮೀಣ ಪರಿವರ್ತನೆ ಯೋಜನೆಯ ವರದಿಯ ಪ್ರಕಾರ , ಪ್ರತಿ ವರ್ಷ 3,000ರಿಂದ 5,000 ರೈತರು ವಲಸೆ ಹೋಗುತ್ತಿದ್ದಾರೆ. ಜಲಸಂಪನ್ಮೂಲ ಕೊರತೆ, ಬರ, ಶೈತ್ಯಾಗಾರಗಳ ಕೊರತೆಯಂತಹ ಸಮಸ್ಯೆಗಳು ಈ ವಲಸೆಗೆ ಕಾರಣವಾಗಿವೆ.

ನೀರು ಗೇಮ್ ಚೇಂಜರ್ ಎಂದು ಗಾಂಧಿರಸು ಹೇಳುತ್ತಾರೆ. "ಕಾವೇರಿ ಮುಖಜಭೂಮಿ ಪ್ರದೇಶ ಅಥವಾ ಪಶ್ಚಿಮ ತಮಿಳುನಾಡಿನ ಕೃಷಿ ಜಮೀನುಗಳಿಗೆ ಹೋಗಿ. ನೀವು ಏನನ್ನು ನೋಡುತ್ತೀರಿ?" ಉತ್ತರಕ್ಕಾಗಿ ವಿರಾಮ ನೀಡುತ್ತಾರೆ. "ವಿದ್ಯುತ್ ಕಂಬಗಳು. ಏಕೆಂದರೆ ಎಲ್ಲೆಡೆ ಬೋರ್ ವೆಲ್‌ಗಳಿವೆ." ರಾಮನಾಥಪುರಂನಲ್ಲಿ ಬಹಳ ಕಡಿಮೆ ಇದೆ ಎಂದು ಅವರು ಹೇಳುತ್ತಾರೆ. ಮಳೆಯಾಶ್ರಿತ ನೀರಾವರಿಯು ಹವಾಮಾನದ ಏರಿಳಿತಗಳಿಗೆ ಒಳಪಟ್ಟು ಅದರ ಮಿತಿಗಳನ್ನು ಹೊಂದಿದೆ.

Gandhirasu, Director, Mundu Chilli Growers Association, Ramanathapuram.
PHOTO • M. Palani Kumar
Sacks of red chillies in the government run cold storage yard
PHOTO • M. Palani Kumar

ಎಡ: ಗಾಂಧಿರಾಸು, ನಿರ್ದೇಶಕರು, ಮುಂಡು ಮೆಣಸಿನಕಾಯಿ ಬೆಳೆಗಾರರ ಸಂಘ, ರಾಮನಾಥಪುರಂ. ಬಲ: ಸರ್ಕಾರಿ ಸ್ವಾಮ್ಯದ ಕೋಲ್ಡ್ ಸ್ಟೋರೇಜ್ ಯಾರ್ಡಿನಲ್ಲಿ ಕೆಂಪು ಮೆಣಸಿನ ಮೂಟೆಗಳು

ಜಿಲ್ಲಾ ಅಂಕಿಅಂಶಗಳ ಕೈಪಿಡಿಯಿಂದ ಪಡೆದ ಮತ್ತೊಂದು ಸರ್ಕಾರಿ ಮಾಹಿತಿಯ ಪ್ರಕಾರ, ಜಿಲ್ಲೆಯಲ್ಲಿ 2018-19ರಲ್ಲಿ 9,248 ಪಂಪ್‌ಸೆಟ್‌ಗಳು ಮಾತ್ರ ಇದ್ದವು. ರಾಮನಾಥಪುರದ ವಿದ್ಯುತ್ ವಿತರಣಾ ವೃತ್ತವು ಇದನ್ನು ಖಚಿತಪಡಿಸುತ್ತದೆ. ರಾಜ್ಯದ ಒಟ್ಟು 18 ಲಕ್ಷ ಪಂಪ್‌ಸೆಟ್‌ಗಳಿಗೆ ಹೋಲಿಸಿದರೆ ಈ ಸಂಖ್ಯೆ ಅತ್ಯಲ್ಪ.

ಆದರೆ, ರಾಮನಾಥಪುರಕ್ಕೆ ಇದು ಹೊಸ ಸಮಸ್ಯೆಯಲ್ಲ. ಪತ್ರಕರ್ತ ಪಿ. ಸಾಯಿನಾಥ್ ಅವರು 1996ರಲ್ಲಿ ಪ್ರಕಟವಾದ 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ನಲ್ಲಿ ಖ್ಯಾತ ಲೇಖಕ ದಿವಂಗತ ಮೇಲಣಮಾಯಿ ಪೊನ್ನುಸ್ವಾಮಿ ಅವರನ್ನು ಸಂದರ್ಶಿಸಿದ್ದಾರೆ. “ಸಾಮಾನ್ಯ ಗ್ರಹಿಕೆಗೆ ವಿರುದ್ಧವಾಗಿ, ಜಿಲ್ಲೆಯು ಕೃಷಿಗೆ ಸಂಬಂಧಿಸಿದಂತೆ ಉತ್ತಮ ಭವಿಷ್ಯವನ್ನು ಹೊಂದಿದೆ. ಆದರೆ ಈ ವಿಷಯಗಳಿಗೆ ಅಗತ್ಯವಾದ ಪ್ರಯತ್ನವನ್ನು ಯಾರು ಮಾಡುತ್ತಾರೆ?" ರಾಮನಾಡಿನ ಶೇಕಡ 80ಕ್ಕೂ ಹೆಚ್ಚು ಭೂಮಿ ಎರಡು ಎಕರೆಗಿಂತ ಕಡಿಮೆ ಇದ್ದು, ಆರ್ಥಿಕ ಹಿನ್ನಡೆಗೆ ಇದು ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಆದರೆ ನೀರಾವರಿ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ.

ಪೊನ್ನುಸ್ವಾಮಿ ಅವರು ತಮ್ಮ ಸಾಧ್ಯತೆಗಳ ಮೌಲ್ಯಮಾಪನದಲ್ಲಿ ಸಂಪೂರ್ಣವಾಗಿ ನಿಖರರಾಗಿದ್ದರು. 2018-19ನೇ ಸಾಲಿನಲ್ಲಿ ರಾಮನಾಥಪುರಂ ಜಿಲ್ಲೆ 4,426.64 ಮೆಟ್ರಿಕ್ ಟನ್ ಮೆಣಸಿನಕಾಯಿ ವಹಿವಾಟು ನಡೆಸಿದ್ದು, ಇದರ ಅಂದಾಜು ಮೌಲ್ಯ ಸುಮಾರು 33.6 ಕೋಟಿ ರೂ. ಹೋಲಿಸಿದರೆ, ಭತ್ತದ ಉತ್ಪಾದನೆಯಿಂದ ಒಟ್ಟು 15.8 ಕೋಟಿ ರೂಪಾಯಿಗಳ ವ್ಯಾಪಾರ ನಡೆದಿದ್ದು, ಗದ್ದೆಗಳಿಗೆ ಉತ್ತಮ ನೀರಾವರಿ ಸೌಲಭ್ಯವನ್ನು ನೀಡಲಾಗಿದೆ.

ಕೃಷಿಕನ ಮಗನಾಗಿದ್ದು, ಸ್ನಾತಕೋತ್ತರ ಪದವಿ ಮುಗಿಸುವ ವೇಳೆಗೆ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಗಾಂಧಿರಾಸು ಅವರು ಜಿಲ್ಲೆಯಲ್ಲಿ ಮೆಣಸಿನಕಾಯಿ ಕೃಷಿಯ ಆರ್ಥಿಕ-ವ್ಯಾಪಾರ ಭವಿಷ್ಯವನ್ನು ಮುಂಗಂಡಿದ್ದರು. ಸಾಮಾನ್ಯವಾಗಿ ಒಬ್ಬ ಸಣ್ಣ ರೈತ ತನ್ನ ಬೆಳೆಯನ್ನು ಸುಮಾರು ಒಂದು ಎಕರೆಯಲ್ಲಿ ಬೆಳೆಯುತ್ತಾನೆ. ಬೆಳೆ ಸಿದ್ಧವಾದ ನಂತರ ಒಂದಿಷ್ಟು ಕೂಲಿಕಾರರನ್ನು ಇಟ್ಟುಕೊಂಡು ಗಿಡಗಳಿಂದ ಮೆಣಸಿನಕಾಯಿ ಕೀಳುತ್ತಾನೆ. ಉಳಿದ ಕೆಲಸವನ್ನು ರೈತ ಮತ್ತು ಅವನ ಕುಟುಂಬದವರೇ ಮಾಡುತ್ತಾರೆ. “ಒಂದು ಎಕರೆಯಲ್ಲಿ ಮುಂಡು ಮೆಣಸಿನಕಾಯಿ ನಾಟಿ ಮಾಡಲು 25,000 ರಿಂದ 28,000 ರೂ. ಬೇಕು. ಬೆಳೆ ಕಟಾವಿಗೆ ಹೆಚ್ಚುವರಿಯಾಗಿ 20 ಸಾವಿರ ರೂ. ನಾಲ್ಕು ಬಾರಿ ಮೆಣಸಿನಕಾಯಿ ಬೆಳೆ ಕೀಳಲು ಕೂಲಿ ಮಾಡುವ 10ರಿಂದ 15 ಕೂಲಿ ಕಾರ್ಮಿಕರ ಖರ್ಚು ಇದಾಗಿದೆ. ಒಬ್ಬ ಕಾರ್ಮಿಕನು ದಿನಕ್ಕೆ ಒಂದು ಮೂಟೆ ಮೆಣಸಿನಕಾಯಿಯನ್ನು ಸಂಗ್ರಹಿಸುತ್ತಾನೆ. ಗಿಡಗಳು ದಟ್ಟವಾದಾಗ ಸ್ವಲ್ಪ ಕಷ್ಟದ ಕೆಲಸ ಎನ್ನುತ್ತಾರೆ ಗಾಂಧಿರಾಸು.

ಮೆಣಸಿನಕಾಯಿ ಆರು ತಿಂಗಳ ಕೃಷಿ. ಇದರ ಬೀಜಗಳು ಅಕ್ಟೋಬರ್‌ನಲ್ಲಿ ಹರಡುತ್ತವೆ ಮತ್ತು ಇದು ಎರಡು ಬೋಗಮ್‌ಗಳನ್ನು (ಇಳುವರಿ) ಹೊಂದಿರುತ್ತದೆ. ಮೊದಲ ಬಾರಿಗೆ ಇದು ತೈ (ತಮಿಳು ತಿಂಗಳು, ಇದು ಜನವರಿಯಲ್ಲಿ ಪ್ರಾರಂಭವಾಗುತ್ತದೆ) ಫಲ ನೀಡುತ್ತದೆ. ಎರಡನೇ ಕೊಯ್ಲು ಚಿತಿರೈ (ಏಪ್ರಿಲ್ ಮಧ್ಯದಲ್ಲಿ) ನಡೆಯುತ್ತದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಕೊರತೆಯಿಂದಾಗಿ, ಅದರ ಬೆಲೆ ವರ್ಷವಿಡೀ ಏರುತ್ತಲೇ ಇರುತ್ತದೆ. ರಾಮನಾಥಪುರ ಮತ್ತು ಪರಮಕುಡಿ ಭಾಗದ ರೈತರು ಮಾರ್ಚ್ ತಿಂಗಳ ಆರಂಭದಲ್ಲಿ ಮೆಣಸಿನಕಾಯಿಗೆ ಸಿಗಲಿರುವ ಬೆಲೆಯಿಂದ ಉತ್ಸುಕರಾಗಿದ್ದರು. ಮೊದಲ ಬ್ಯಾಚ್‌ನಲ್ಲಿ ಮೆಣಸಿನಕಾಯಿ ಕೆಜಿಗೆ 450 ರೂ. ಈ ಬೆಲೆ ಕೆ.ಜಿ.ಗೆ 500 ರೂಪಾಯಿ ತಲುಪಲಿದೆ ಎಂದು ಜನ ಅಂದಾಜಿಸಿದ್ದರು.

Ambika plucks chillies and drops them in a paint bucket. Ramnad mundu, also known as sambhar chilli in Chennai, when ground makes puli kozhambu (a tangy tamarind gravy) thick and tasty
PHOTO • M. Palani Kumar

ಅಂಬಿಕಾ ಮೆಣಸಿನಕಾಯಿಗಳನ್ನು ಕಿತ್ತು ಪೇಂಟ್ ಬಕೆಟಿನಲ್ಲಿ ಹಾಕುತ್ತಿರುವುದು. ಚೆನ್ನೈನಲ್ಲಿ ಸಾಂಬಾರ್ ಚಿಲ್ಲಿ ಎಂದೂ ಕರೆಯಲ್ಪಡುವ ರಾಮ್ನಾಡ್ ಮುಂಡು, ನೆಲವು ಪುಳಿ ಕೊಳಂಬು ಅನ್ನು (ಖಾರದ ಹುಣಸೆಹಣ್ಣಿನ ಗ್ರೇವಿ) ದಪ್ಪ ಮತ್ತು ರುಚಿಕರವಾಗಿಸುತ್ತದೆ

A lot of mundu chillies in the trader shop. The cultivation of chilli is hard because of high production costs, expensive harvesting and intensive labour
PHOTO • M. Palani Kumar

ಅಂಗಡಿಯಲ್ಲಿ ಸಾಕಷ್ಟು ಮುಂಡು ಮೆಣಸಿನಕಾಯಿ. ಹೆಚ್ಚಿನ ಉತ್ಪಾದನಾ ವೆಚ್ಚಗಳು, ದುಬಾರಿ ಕೊಯ್ಲು ಮತ್ತು ತೀವ್ರ ಕಾರ್ಮಿಕರಿಂದಾಗಿ ಮೆಣಸಿನಕಾಯಿ ಕೃಷಿ ಕಷ್ಟಕರವಾಗಿದೆ

ಗಾಂಧಿರಾಸು ಈ ಸಂಖ್ಯೆಗಳನ್ನು 'ಸುನಾಮಿ' ಎಂದು ಕರೆಯುತ್ತಾರೆ. ಲಾಭವಿಲ್ಲದ ಮುಂಡು ಮೆಣಸಿನಕಾಯಿ ಕೆಜಿಗೆ 120 ರೂ., ಒಂದು ಎಕರೆಯಲ್ಲಿ 1,000 ಕೆಜಿ ಮೆಣಸಿನಕಾಯಿ ಬೆಳೆದರೆ, ರೈತನಿಗೆ ಇನ್ನೂ 50,000 ರೂಪಾಯಿ ಲಾಭ ಬರುತ್ತದೆ ಎಂದು ಅವರು ಊಹಿಸುತ್ತಾರೆ. “ಎರಡು ವರ್ಷಗಳ ಹಿಂದೆ ಮೆಣಸಿನಕಾಯಿ ಕೆಜಿಗೆ ಕೇವಲ 90 ಅಥವಾ 100 ರೂ.ಗೆ ಮಾರಾಟವಾಗುತ್ತಿತ್ತು. ಇಂದು ಮೆಣಸಿನಕಾಯಿ ದರ ಮೊದಲಿಗಿಂತ ಉತ್ತಮವಾಗಿದೆ. ಹೀಗಿದ್ದರೂ ಕೆಜಿಗೆ 350 ರೂ.ಗೆ ಮಾರಾಟವಾಗುತ್ತದೆ ಎಂದು ನಾವು ಭಾವಿಸುವಂತಿಲ್ಲ. ಅದೊಂದು ಭ್ರಮೆ."

ಮುಂಡು ಮೆಣಸಿನಕಾಯಿ ಈ ಜಿಲ್ಲೆಯ ಜನಪ್ರಿಯ ಬೆಳೆ ಎನ್ನುತ್ತಾರೆ ಅವರು. ಅದೊಂದು ‘ವಿಭಿನ್ನ’ ಜಾತಿ ಎಂದೂ ಅವರು ಗಮನಸೆಳೆಯುತ್ತಾರೆ. ಇದು ಸ್ವಲ್ಪಮಟ್ಟಿಗೆ ಟೊಮೆಟೊದ ಪ್ರತಿಕೃತಿಯಂತೆ ಕಾಣುತ್ತದೆ. “ರಾಮನಾಡ್ ಮುಂಡು ಮೆಣಸನ್ನು ಚೆನ್ನೈನಲ್ಲಿ ಸಾಂಬಾರ್ ಮೆಣಸಿನಕಾಯಿ ಎಂದೂ ಕರೆಯುತ್ತಾರೆ, ಏಕೆಂದರೆ ಇದು ಸ್ವಲ್ಪ ತಿರುಳಾಗಿರುತ್ತದೆ, ಆದ್ದರಿಂದ ಇದನ್ನು ಸೇರಿಸುವುದರಿಂದ ಪುಳಿ ಕೊಳಂಬು (ಹುಣಿಸೆ ಹುಳಿ ಸಾರು) ದಪ್ಪಗಿರುತ್ತದೆ, ಇದು ತುಂಬಾ ರುಚಿಕರವಾಗಿರುತ್ತದೆ.

ಮುಂಡು ಮೆಣಸಿಗೆ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಆನ್‌ಲೈನ್ ಹುಡುಕಾಟದಿಂದ ಇದು ಸ್ಪಷ್ಟವಾಗಿದೆ. ಅಮೆಜಾನ್‌ನಲ್ಲಿ ಮೇ ಮಧ್ಯದವರೆಗೆ ಮುಂಡು ಕೆಜಿಗೆ 799 ರೂ. ಇದು ಶೇಕಡಾ 20ರಷ್ಟು ರಿಯಾಯಿತಿಯ ನಂತರದ ಬೆಲೆ.

ಗಾಂಧಿರಾಸು ಒಪ್ಪಿಕೊಳ್ಳುತ್ತಾರೆ, “ಅದರ ಅಂತರರಾಷ್ಟ್ರೀಯ ಮಾರುಕಟ್ಟೆಗಾಗಿ ಹೇಗೆ ಲಾಬಿ ಮಾಡಬೇಕೆಂದು ನಮಗೆ ತಿಳಿದಿಲ್ಲ. ಮಾರ್ಕೆಟಿಂಗ್ ಸಮಸ್ಯೆಯಾಗಿದೆ." ಇದಲ್ಲದೆ, ಎಫ್‌ಪಿಒ ನ 1,000 ಕ್ಕಿಂತ ಹೆಚ್ಚು ಸದಸ್ಯರೆಲ್ಲರೂ ತಮ್ಮ ಉತ್ಪನ್ನಗಳನ್ನು ಸಂಸ್ಥೆಗೆ ಮಾರಾಟ ಮಾಡುವುದಿಲ್ಲ. "ಅವರ ಸಂಪೂರ್ಣ ಉತ್ಪನ್ನಗಳನ್ನು ಖರೀದಿಸಲು ನಾವು ಸಾಕಷ್ಟು ಆರ್ಥಿಕ ಸಂಪನ್ಮೂಲಗಳನ್ನು ಹೊಂದಿದ್ದರೂ ಅಥವಾ ಅವುಗಳನ್ನು ಸರಿಯಾಗಿ ಸಂಗ್ರಹಿಸಲು ನಮಗೆ ಸಾಧ್ಯವಾಗುತ್ತಿಲ್ಲ."

ಹಲವಾರು ತಿಂಗಳುಗಳ ಕಾಲ ಮೆಣಸಿನಕಾಯಿಯನ್ನು ಇಡುವುದರಿಂದ ಕಪ್ಪಾಗುವ ಸಂಭವವಿದ್ದು, ಪೌಡರ್ ಕೂಡ ಹುಳವಾಗುವ ಸಂಭವವಿರುವುದರಿಂದ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಎಫ್‌ಪಿಒಗಳಿಂದ ಬೆಳೆ ಸಂಗ್ರಹಿಸುವುದು ಕೂಡ ಕಷ್ಟದ ಕೆಲಸವಾಗಿದೆ. ರಾಮನಾಥಪುರ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಸರ್ಕಾರಿ ಕೋಲ್ಡ್ ಸ್ಟೋರೇಜ್‌ನ ಹವಾನಿಯಂತ್ರಿತ ಆವರಣಕ್ಕೆ ತಲುಪಿದಾಗ ಅಲ್ಲಿ ಕಳೆದ ವರ್ಷ ಬೆಳೆದಿದ್ದ ಮೆಣಸಿನಕಾಯಿ ಮೂಟೆಗಳನ್ನು ನೋಡಿದೆವು. ವ್ಯಾಪಾರಿಗಳು ಮತ್ತು ಉತ್ಪಾದಕರನ್ನು ಮುಖಾಮುಖಿ ಮಾಡಲು ಆಡಳಿತವು ಸಾಕಷ್ಟು ಪ್ರಯತ್ನಿಸಿದರೂ ರೈತರ ನಿರಾಸಕ್ತಿಯಿಂದ ಅದು ಸಾಧ್ಯವಾಗಲಿಲ್ಲ. ಪ್ರಾಯಶಃ ರೈತರು ಒಪ್ಪಂದವು ಕಾರ್ಯರೂಪಕ್ಕೆ ಬರದಿದ್ದರೆ, ತಮ್ಮ ಉತ್ಪನ್ನಗಳನ್ನು ಅಲ್ಲಿಂದ ಮತ್ತು ಅಲ್ಲಿಂದ ಸಾಗಿಸುವ ಹೆಚ್ಚುವರಿ ಆರ್ಥಿಕ ಹೊರೆಯಿಂದ ಹೊರೆಯಾಗಬಹುದು ಎಂದು ಆತಂಕಗೊಂಡಿದ್ದಾರೆ, ಅವರು ಹೆಚ್ಚು ಸಾಮರ್ಥ್ಯ ಅಥವಾ ನಿರ್ದಿಷ್ಟವಾಗಿ ಸಾಗಿಸಲು ಆಸಕ್ತಿ ಹೊಂದಿಲ್ಲ.

ತನ್ನ ಪಾತ್ರವನ್ನು ನಿರ್ವಹಿಸುವಾಗ, ಕೀಟ ನಿಯಂತ್ರಣದ ಸಾಂಪ್ರದಾಯಿಕ ವಿಧಾನಗಳನ್ನು ಪ್ರಯತ್ನಿಸಲು ಎಫ್‌ಪಿಒ ರೈತರಿಗೆ ಸಲಹೆ ನೀಡುತ್ತದೆ. “ಅಮನಕ್ಕು (ಹರಳು) ಗಿಡಗಳನ್ನು ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಮೆಣಸಿನ ಗದ್ದೆಯ ಸುತ್ತಲೂ ಬೆಳೆಯಲಾಗುತ್ತದೆ, ಏಕೆಂದರೆ ಇದು ಮಿಳಗಿಯ ಮೇಲೆ ದಾಳಿ ಮಾಡುವ ಯಾವುದೇ ಕೀಟಗಳನ್ನು ಆಕರ್ಷಿಸುತ್ತದೆ. ಅಲ್ಲದೆ, ಹರಳು ಸಸ್ಯಗಳು ಗಾತ್ರದಲ್ಲಿ ಸಾಕಷ್ಟು ಎತ್ತರ ಮತ್ತು ಸಣ್ಣ ಹಕ್ಕಿಗಳನ್ನು ಆಕರ್ಷಿಸುತ್ತವೆ. ಈ ಪಕ್ಷಿಗಳು ಬಹಳ ಉತ್ಸಾಹದಿಂದ ಕೀಟಗಳನ್ನು ತಿನ್ನುತ್ತವೆ. ಅವು ಒಂದು ರೀತಿಯ ಉಯಿರವೆಲ್ಲಿ ಅಂದರೆ ವಾಸಿಸುವ ಆವರಣದಂತೆ ಒದಗುತ್ತವೆ.

Changing rain patterns affect the harvest. Damaged chillies turn white and fall down
PHOTO • M. Palani Kumar

ಬದಲಾಗುತ್ತಿರುವ ಮಳೆಯ ಮಾದರಿಗಳು ಫಸಲಿನ ಮೇಲೆ ಪರಿಣಾಮ ಬೀರುತ್ತವೆ. ಹಾನಿಗೊಳಗಾದ ಮೆಣಸಿನಕಾಯಿಗಳು ಬಿಳಿ ಬಣ್ಣಕ್ಕೆ ತಿರುಗಿ ಕೆಳಗೆ ಬೀಳುತ್ತವೆ

A dried up chilli plant and the cracked earth of Ramanathapuram
PHOTO • M. Palani Kumar

ಒಣಗಿದ ಮೆಣಸಿನಕಾಯಿ ಸಸ್ಯ ಮತ್ತು ರಾಮನಾಥಪುರಂನ ಬಿರುಕು ಬಿಟ್ಟ ಮಣ್ಣು

ಹೊಲದ ಗಡಿಯಲ್ಲಿ ಅಮನಕ್ಕು ಮತ್ತು ಅಗತಿ (ಅಗಸೆ) ನೆಡುತ್ತಿದ್ದ ತನ್ನ ತಾಯಿಯನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, “ಅವಳು ಮೆಣಸಿನಕಾಯಿಯನ್ನು ನೋಡಿಕೊಳ್ಳಲು ಹೋದಾಗ, ನಮ್ಮ ಮೇಕೆಗಳು ಅವಳ ಹಿಂದೆ ಓಡುತ್ತಿದ್ದವು. ಒಂದೆಡೆ ಕಟ್ಟಿ ಅಗತಿ, ಆಮ್ನುಕ್ಕು ಎಲೆಗಳನ್ನು ತಿನ್ನಲು ಕೊಡುತ್ತಿದ್ದಳು. ಆಡುಗಳು ಇವುಗಳಿಂದ ತೃಪ್ತಿಪಡುತ್ತಿದ್ದವು. ನಮಗೆ ಮಿಳಗಿ ಮುಖ್ಯ ಬೆಳೆ ಇದ್ದಂತೆ ಅಗತಿಗೂ ಬೇರೆಯದೇ ಪ್ರಾಮುಖ್ಯತೆ ಇತ್ತು.

ಗಾಂಧೀರಾಸು ಭೂತಕಾಲದಿಂದ ಪಾಠಗಳನ್ನು ಕಲಿಯುವುದರ ಹೊರತಾಗಿ, ಭವಿಷ್ಯದತ್ತ ನೋಡುತ್ತಿದ್ದಾರೆ ಮತ್ತು ವಿಜ್ಞಾನದ ಅಗತ್ಯವನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, “ನಮಗೆ ರಾಮನಾಥಪುರದಲ್ಲಿ ವಿಶೇಷವಾಗಿ ಮುದುಕುಳತ್ತೂರಿನಲ್ಲಿ ಮೆಣಸಿನಕಾಯಿ ಸಂಶೋಧನಾ ಕೇಂದ್ರ ಬೇಕು, ಭತ್ತ, ಬಾಳೆ, ಏಲಕ್ಕಿ, ಅರಿಶಿನ - ಈ ಎಲ್ಲಾ ಬೆಳೆಗಳಿಗೆ ಸಂಶೋಧನಾ ಕೇಂದ್ರಗಳಿವೆ, ನಿಮ್ಮ ಹಳ್ಳಿ-ಪಟ್ಟಣದಲ್ಲಿ ಶಾಲೆ ಮತ್ತು ಕಾಲೇಜುಗಳಿದ್ದರೆ, ನೀವು ಮಾತ್ರ ಕಳುಹಿಸುತ್ತೀರಿ. ಅಲ್ಲಿ ಮಕ್ಕಳು ಓದುತ್ತಾರೆ, ಕೇಂದ್ರಗಳಿದ್ದರೆ, ನಿಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರ ಅಥವಾ ಚಿಕಿತ್ಸೆ ಮಾತ್ರ ಮಾಡಬಹುದು. ಮೆಣಸಿನಕಾಯಿ ಕೇಂದ್ರವನ್ನು ಸ್ಥಾಪಿಸಿದ ನಂತರ ಮಾತ್ರ, ಅದರ ಉತ್ಪಾದನೆಯಲ್ಲಿ ಕ್ರಾಂತಿಕಾರಿ ಪ್ರಗತಿ ಸಾಧ್ಯ.

ಪ್ರಸ್ತುತ, ಎಫ್‌ಪಿಒ ಮುಂಡು ಪ್ರಭೇದಕ್ಕೆ ಜಿಯೋಗ್ರಾಫಿಕಲ್‌ ಇಂಡಿಕೇಷನ್ ಪಡೆಯುವಲ್ಲಿ ಕೆಲಸ ಮಾಡುತ್ತಿದೆ. “ಮೆಣಸಿನಕಾಯಿಯ ಈ ವಿಶೇಷ ಗುಣವನ್ನು ಜಗತ್ತಿಗೆ ತಿಳಿಸುವುದು ಅಗತ್ಯವಾಗಿದೆ. ಸಾಧ್ಯವಾದರೆ ಅದರ ಕುರಿತು ಪುಸ್ತಕವನ್ನೂ ಬರೆಯಬೇಕು.”

ಎಲ್ಲಾ ಕೃಷಿ ಸಮಸ್ಯೆಗಳಿಗೆ ಸಾಂಪ್ರದಾಯಿಕ ಮತ್ತು ಸಾರ್ವತ್ರಿಕ ಪರಿಹಾರ - ಮೌಲ್ಯವರ್ಧನೆ - ಮೆಣಸಿನಕಾಯಿಯ ವಿಷಯದಲ್ಲಿ ಯಶಸ್ವಿಯಾಗದಿರಬಹುದು ಎಂದು ಗಾಂಧಿರಾಸು ಹೇಳುತ್ತಾರೆ. “ನೋಡಿ, ಪ್ರತಿಯೊಬ್ಬ ರೈತರ ಬಳಿ 50-60 ಚೀಲ ಮೆಣಸಿನಕಾಯಿ ಇದೆ. ಆ ಮೆಣಸಿನಕಾಯಿಯನ್ನು ಮಾತ್ರ ಇಟ್ಟುಕೊಂಡು ಅವರು ಏನು ಮಾಡಬಹುದು? ಎಫ್‌ಪಿಒ ಒಗ್ಗಟ್ಟಾಗಿ ಮಸಾಲೆ ಕಂಪನಿಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಮೆಣಸಿನ ಪುಡಿಯನ್ನು ಅವರಿಗಿಂತ ಅಗ್ಗವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಆ ಕಂಪನಿಗಳ ಮಾರ್ಕೆಟಿಂಗ್ ಬಜೆಟ್ ಕೂಡ ಕೋಟಿಗಳಲ್ಲಿದೆ.

ಆದರೆ ಭವಿಷ್ಯದಲ್ಲಿ ಮುಖ್ಯ ಸಮಸ್ಯೆ ಹವಾಮಾನ ಬದಲಾವಣೆ ಎಂದು ಗಾಂಧಿರಾಸು ಹೇಳುತ್ತಾರೆ

ಅವರು ಕೇಳುತ್ತಾರೆ, "ನಾವು ಅದನ್ನು ಎದುರಿಸಲು ಏನು ಮಾಡುತ್ತಿದ್ದೇವೆ? ಮೂರು ದಿನಗಳ ಹಿಂದೆ ಬಲವಾದ ಗುಡುಗು ಸಹಿತ ಮಳೆಯಾಗುವ ಅಪಾಯವಿತ್ತು. ಮಾರ್ಚ್ ತಿಂಗಳಿನಲ್ಲಿ ನಾನು ಇದನ್ನು ಕೇಳಿರಲಿಲ್ಲ! ಹೆಚ್ಚು ನೀರು ಬಂದರೆ ಮೆಣಸಿನ ಗಿಡಗಳು ಸಾಯುತ್ತವೆ. ರೈತರು ಈ ಸವಾಲುಗಳಿಗೆ ತಮ್ಮನ್ನು ತಾವು ಹೊಂದಿಸಿಕೊಳ್ಳಬೇಕು.

*****

"ಮಹಿಳೆಯರು ತಮಗೆ ಬೇಕಾದಂತೆ ಹೆಚ್ಚು ಅಥವಾ ಕಡಿಮೆ ಸಾಲ ಪಡೆಯುತ್ತಾರೆ. ಶಿಕ್ಷಣ, ಮದುವೆ, ಹೆರಿಗೆ - ಇವುಗಳಿಗೆ ಸಾಲ ಕೊಡುವುದಿಲ್ಲ ಎಂದು ನಾವು ಎಂದಿಗೂ ಹೇಳುವುದಿಲ್ಲ. ಅದರ ನಂತರ ಕೃಷಿ ಕೂಡ ಬರುತ್ತದೆ"
ಜೆ. ಅಡೈಕಲಾಸೆಲ್ವಿ, ಮೆಣಸಿನಕಾಯಿ ರೈತ ಮತ್ತು ಸ್ವಸಹಾಯ ಸಂಘದ ಮುಖಂಡರು ಪಿ. ಮುತ್ತುವಿಜಯಪುರಂ, ರಾಮನಾಥಪುರಂ

“ನಿಮಗೆ ಗಿಡ ಕಿತ್ತು ಹೋಗಬಹುದೆನ್ನುವ ಭಯವಲ್ಲವೆ?” ಎಂದು ಅಡೈಕಲಾಸೆಲ್ವಿ ನಗುತ್ತಾ ಕೇಳಿದರು. ನನ್ನನ್ನು ಅವರು ಪಕ್ಕದ ಹೊಲದಲ್ಲಿ ಮೆಣಸು ಕೀಳುವ ಕೆಲಸಕ್ಕೆ ಹಚ್ಚಿದ್ದರು. ಆ ಹೊಲದಲ್ಲಿ ಕೆಲಸಕ್ಕೆ ಜನ ಕಡಿಮಿಯಿದ್ದ ಕಾರಣ ಹೊಲದವರು ಖುಷಿಪಟ್ಟರು. ಆದರೆ ಅವರ ಖುಷಿ ಹೆಚ್ಚು ಹೊತ್ತು ಉಳಿಯಲಿಲ್ಲ. ನನಗೆ ಅದನ್ನು ಕೀಳುವುದು ಕಷ್ಟವಾಗಿತ್ತು. ಅಡೈಕಲಾಸೆಲ್ವಿ ಆಗಲೇ ಮೂರನೇ ಗಿಡದ ಬಳಿ ಸಾಗಿದ್ದರು. ನಾನು ಒಂದನೇ ಗಿಡದ ಬಳಿಯಲ್ಲೇ ಇದ್ದೆ. ಈ ಮೆಣಸಿನ ತೊಟ್ಟುಗಳು ನಮ್ಮ ಅಡುಗೆ ಮನೆಯಲ್ಲಿನ ಅಂಜಾಲ್‌ ಪೆಟ್ಟಿಯ (ಮಸಾಲೆ ಡಬ್ಬಿ) ಮೆಣಸಿನಂತೆ ಸುಲಭವಾಗಿ ಕೀಳಲು ಬರುವುದಿಲ್ಲ. ನನಗೆ ಕೊಂಬೆ ಮುರಿಯಬಹುದೆಂದು ಭಯವಾಗುತ್ತಿತ್ತು.

Adaikalaselvi adjusting her head towel and working in her chilli field
PHOTO • M. Palani Kumar

ಅಡೈಕಲಾಸೆಲ್ವಿ ತನ್ನ ತಲೆಯ ಟವೆಲ್ ಅನ್ನು ಸರಿಹೊಂದಿಸಿಕೊಳ್ಳುತ್ತಾ ತನ್ನ ಮೆಣಸಿನಕಾಯಿ ಹೊಲದಲ್ಲಿ ಕೆಲಸ ಮಾಡುವುದು

ಸುತ್ತಮುತ್ತ ಕೆಲಸ ಮಾಡುತ್ತಿದ್ದ ಮಹಿಳೆಯರು ಜಮಾಯಿಸಿ ಚಮತ್ಕಾರ ವೀಕ್ಷಿಸಲು ಆರಂಭಿಸಿದರು. ಅಕ್ಕಪಕ್ಕದ ತೋಟದ ಮಾಲೀಕರು ತಲೆ ಅಲ್ಲಾಡಿಸುತ್ತಿದ್ದರು, ಆದರೆ ಅಡೈಕಲಾಸೆಲ್ವಿ ಇನ್ನೂ ನನ್ನನ್ನು ಹುರಿದುಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಬಕೆಟ್‌ನಲ್ಲಿ ಮೆಣಸಿನಕಾಯಿ ತುಂಬುತ್ತಿದೆ, ಆದರೆ ನನ್ನ ಮುಷ್ಟಿಯಲ್ಲಿ ಎಂಟರಿಂದ ಹತ್ತು ಕೆಂಪು ಮೆಣಸಿನಕಾಯಿಗಳಿವೆ. ನೆರೆಯ ರೈತ ಹೇಳುತ್ತಾನೆ, "ಅಡೈಕಲಾಸೆಲ್ವಿಯನ್ನು ನಿಮ್ಮೊಂದಿಗೆ ಚೆನ್ನೈಗೆ ಕರೆದುಕೊಂಡು ಹೋಗಬೇಕು, ಅವಳು ತೋಟವನ್ನು ನೋಡಿಕೊಳ್ಳಬಹುದು, ಮತ್ತು ಅವಳು ಕಚೇರಿಯನ್ನು ಸಹ ನೋಡಿಕೊಳ್ಳಬಹುದು." ಆದರೆ ನನಗೆ ಕೆಲಸ ಕೊಡಲು ಆಸಕ್ತಿ ಇಲ್ಲ. ಅವರ ಕಣ್ಣಿನಲ್ಲಿ ನಾನು ಬದುಕಲು ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ.

ಅಡೈಕಲಾಸೆಲ್ವಿ ಕೂಡ ತನ್ನ ಮನೆಯಲ್ಲಿಯೇ ಕಚೇರಿ ನಡೆಸುತ್ತಿದ್ದಾರೆ. ಇದು ಎಫ್‌ಪಿಒ ಮೂಲಕ ತೆರೆಯಲ್ಪಟ್ಟಿದೆ ಮತ್ತು ಕಂಪ್ಯೂಟರ್ ಮತ್ತು ಜೆರಾಕ್ಸ್ ಯಂತ್ರವನ್ನು ಹೊಂದಿದೆ. ಕಾಗದಪತ್ರಗಳ ನಕಲು ಪ್ರತಿಗಳನ್ನು ತಯಾರಿಸುವುದು ಮತ್ತು ಭೂಮಿ ಗುತ್ತಿಗೆಗೆ ಸಂಬಂಧಿಸಿದ ಮಾಹಿತಿಯನ್ನು ಜನರಿಗೆ ಲಭ್ಯವಾಗುವಂತೆ ಮಾಡುವುದು ಅವರ ಕೆಲಸ. "ಇದರ ನಂತರ ನನಗೆ ಬೇರೆ ಯಾವುದೇ ಕೆಲಸ ಮಾಡಲು ಸಮಯ ಸಿಗುವುದಿಲ್ಲ, ಏಕೆಂದರೆ ನನ್ನ ಆಡುಗಳು ಮತ್ತು ಕೋಳಿಗಳನ್ನು ಸಹ ನಾನು ನೋಡಿಕೊಳ್ಳಬೇಕು."

ಇದಲ್ಲದೆ, ಅವರ ಜವಾಬ್ದಾರಿಗಳಲ್ಲಿ ಮಗಳಿರ್ ಮಂಡ್ರಮ್ ಅಥವಾ ಮಹಿಳೆಯರಿಗಾಗಿ ಸ್ವ-ಸಹಾಯ ಗುಂಪು ನಡೆಸುವುದು ಸಹ ಸೇರಿದೆ. ಐದು ಸಣ್ಣ ಗುಂಪುಗಳಾಗಿ ವಿಂಗಡಿಸಲಾದ ಈ ಗುಂಪಿನಲ್ಲಿ ಅರವತ್ತು ಹಳ್ಳಿಯ ಮಹಿಳೆಯರು ಸದಸ್ಯರಾಗಿದ್ದಾರೆ. ಪ್ರತಿ ಸಣ್ಣ ಗುಂಪಿನಲ್ಲಿ ಎರಡು ತಲೈವಿಗಳು (ಮುಖ್ಯಸ್ಥರು) ಇರುತ್ತಾರೆ. ಆ ಹತ್ತು ಮುಖ್ಯಸ್ಥರಲ್ಲಿ ಅಡೈಕಲ್ಸೆಲ್ವಿ ಒಬ್ಬರು. ಇತರ ಚಟುವಟಿಕೆಗಳಲ್ಲಿ, ಹಣವನ್ನು ಸಂಗ್ರಹಿಸುವುದು ಮತ್ತು ಆ ಹಣವನ್ನು ಹಂಚುವುದು ಮುಖ್ಯಸ್ಥರ ಕೆಲಸ. "ಜನರು ಹೆಚ್ಚಿನ ಬಡ್ಡಿದರದಲ್ಲಿ ಹೊರಗಿನಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ - ರೆಂಡು ವಟ್ಟಿ, ಅಂಜು ವಟ್ಟಿ (ವಾರ್ಷಿಕ 24-60 ಪ್ರತಿಶತ). ನಮ್ಮ ಮಗಳಿರ್ ಮಂಡ್ರಂ, ಒರು ವಟ್ಟಿ - ಪ್ರತಿ ಲಕ್ಷಕ್ಕೆ 1,000 ರೂ.ಗೆ ಸಾಲ ನೀಡುತ್ತದೆ. ಇದು ವರ್ಷಕ್ಕೆ ಸುಮಾರು 12 ಪ್ರತಿಶತದಷ್ಟು ಆಗುತ್ತದೆ. “ಆದರೆ ನಾವು ಸಂಗ್ರಹಿಸಿದ ಹಣವನ್ನು ಒಬ್ಬ ವ್ಯಕ್ತಿಗೆ ಸಾಲವಾಗಿ ನೀಡುವುದಿಲ್ಲ. ಇಲ್ಲಿ ಪ್ರತಿಯೊಬ್ಬ ಮನುಷ್ಯನು ಸಣ್ಣ ರೈತ, ಅವರ ಸಮಸ್ಯೆಗಳನ್ನು ನಿಭಾಯಿಸಲು ಎಲ್ಲರಿಗೂ ಹಣದ ಅಗತ್ಯವಿದೆ. ನಿಜ ಅಲ್ಲವೇ?”

ಮಹಿಳೆಯರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚು - ಕಡಿಮೆ ಸಾಲ ತೆಗೆದುಕೊಳ್ಳುತ್ತಾರೆ. ತನಗೆ ಮುಖ್ಯವಾಗಿ ಮೂರು ಅಗತ್ಯಗಳಿವೆ ಎಂದು ಹೇಳುತ್ತಾರೆ. "ಶಿಕ್ಷಣ, ಮದುವೆ ಮತ್ತು ಹೆರಿಗೆ - ಮತ್ತು ನಾವು ಈ ವಿಷಯಗಳಿಗೆ ಸಾಲ ನೀಡಲು ಎಂದಿಗೂ ನಿರಾಕರಿಸುವುದಿಲ್ಲ. ಅದರ ನಂತರ ಕೃಷಿಗೂ ಆದ್ಯತೆ ನೀಡಲಾಗಿದೆ.”

ಸಾಲಗಳ ವಸೂಲಾತಿಗೆ ಸಂಬಂಧಿಸಿದ ಮತ್ತೊಂದು ಪ್ರಮುಖ ಬದಲಾವಣೆಗೆ ಅಡೈಕಲಾಸೆಲ್ವಿ ಕಾರಣರಾಗಿದ್ದಾರೆ. “ಮೊದಲು ಪ್ರತಿ ತಿಂಗಳು ನೀವು ನಿಗದಿತ ಮೊತ್ತವನ್ನು ಹಿಂದಿರುಗಿಸಬೇಕೆಂಬ ನಿಯಮವಿತ್ತು. ನಾನು ಸಾಲಗಾರರಿಗೆ ಹೇಳಿದೆ: ನಾವೆಲ್ಲರೂ ರೈತರು. ಕೆಲವೊಮ್ಮೆ ಒಂದು ತಿಂಗಳಲ್ಲಿ ನಮ್ಮ ಬಳಿ ಹಣವೂ ಇರುವುದಿಲ್ಲ. ಬೆಳೆ ಮಾರಿದ ನಂತರ ನಮಗೆ ಒಂದಿಷ್ಟು ಹಣ ಖಂಡಿತ ಸಿಗುತ್ತದೆ. ಹೀಗಾಗಿ ಜನರ ಬಳಿ ಹಣ ಇದ್ದಾಗ ಹಣ ಪಾವತಿ ಸೌಲಭ್ಯ ಸಿಗಬೇಕು. ಈ ಸಾಲ ವ್ಯವಸ್ಥೆಯಿಂದ ಎಲ್ಲರಿಗೂ ಪರಿಹಾರ ಸಿಗಬೇಕು. ಹೌದೋ, ಇಲ್ಲವೋ?" ಇದು ಅಂತರ್ಗತ ಬ್ಯಾಂಕಿಂಗ್ ತತ್ವಗಳಿಗೆ ಒಂದು ಪಾಠದಂತಿದೆ. ಇದು ಸ್ಥಳೀಯ ಜನರಿಗೆ ಅತ್ಯಂತ ಪ್ರಾಯೋಗಿಕವಾಗಿರುವ ಅಂತಹ ಒಂದು ಸಾಲ ವ್ಯವಸ್ಥೆಯಾಗಿದೆ.

Adaikalaselvi, is among the ten women leaders running  women’s self-help groups. She is bringing about changes in loan repayment patterns that benefit women
PHOTO • M. Palani Kumar

ಮಹಿಳಾ ಸ್ವಸಹಾಯ ಗುಂಪುಗಳನ್ನು ನಡೆಸುತ್ತಿರುವ ಹತ್ತು ಮಹಿಳಾ ನಾಯಕರಲ್ಲಿ ಅಡೈಕಲಾಸೆಲ್ವಿ ಕೂಡ ಒಬ್ಬರು. ಅವಳು ಮಹಿಳೆಯರಿಗೆ ಪ್ರಯೋಜನವಾಗುವ ಸಾಲ ಮರುಪಾವತಿ ಮಾದರಿಗಳಲ್ಲಿ ಬದಲಾವಣೆಗಳನ್ನು ತರುತ್ತಿದ್ದಾರೆ

ಅವರ ಮದುವೆಗೂ ಮುನ್ನ ಸುಮಾರು 30 ವರ್ಷಗಳ ಕಾಲ ಗ್ರಾಮದಲ್ಲಿ ಮಗಳಿರ್ ಮಂಡ್ರಂ ಇತ್ತು. ಈ ಗುಂಪುಗಳು ಗ್ರಾಮಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಸಹ ನಡೆಸುತ್ತವೆ. ಮಾರ್ಚ್‌ನಲ್ಲಿ ನಮ್ಮ ಭೇಟಿಯ ನಂತರ ವಾರಾಂತ್ಯದಲ್ಲಿ ಮಹಿಳಾ ದಿನವನ್ನು ಆಚರಿಸಲು ಅವರು ಯೋಜಿಸಿದ್ದರು. ಚರ್ಚ್‌ನಲ್ಲಿ ಭಾನುವಾರದ ಮಾಸ್ ನಂತರ ಜನರಲ್ಲಿ ಕೇಕ್ ವಿತರಣಾ ಕಾರ್ಯಕ್ರಮವನ್ನು ಮಾಡೋಣ ಎಂದು ನಾವು ನಿರ್ಧರಿಸಿದ್ದೇವೆ ಎಂದು ಅವರು ನಗುತ್ತಾ ಹೇಳುತ್ತಾರೆ. ಅವರು ಮಳೆಗಾಗಿ ಪ್ರಾರ್ಥನೆಗಳನ್ನು ಆಯೋಜಿಸುತ್ತಾರೆ, ಪೊಂಗಲ್ ಆಚರಿಸುತ್ತಾರೆ ಮತ್ತು ಅಗತ್ಯವಿರುವವರಿಗೆ ಸೇವೆ ಸಲ್ಲಿಸುತ್ತಾರೆ.

ಅವರು ಧೈರ್ಯಶಾಲಿ ಮತ್ತು ಬಹಿರಂಗವಾಗಿ ಮಾತನಾಡುವ ಮಹಿಳೆಯಾಗಿರುವುದರಿಂದ, ಅಡೈಕಲಾಸೆಲ್ವಿ ತನ್ನ ಹೆಂಡತಿಯ ಮೇಲೆ ಮಾದಕ ದ್ರವ್ಯ ಸೇವಿಸಿ ಹಲ್ಲೆ ಮಾಡುವ ಗ್ರಾಮದ ಪುರುಷರನ್ನು ಸಮಾಧಾನಪಡಿಸುತ್ತಾರೆ ಮತ್ತು ಸಲಹೆ ನೀಡುತ್ತಾರೆ. ಬೈಕು ಓಡಿಸುವುದು ಹೇಗೆಂದು ತಿಳಿದಿರುವ ಮತ್ತು ದಶಕಗಳಿಂದ ತನ್ನ ಜಮೀನನ್ನು ನೋಡಿಕೊಳ್ಳುವ ಅವರು ಇತರ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. “ಈಗ ಎಲ್ಲಾ ಯುವತಿಯರು ಬುದ್ಧಿವಂತರಾಗಿದ್ದಾರೆ. ಅವರು ಬೈಕು ಓಡಿಸುತ್ತಾರೆ ಮತ್ತು ಚೆನ್ನಾಗಿ ಓದಿದ್ದಾರೆ. ಆದರೆ..” ಎಂದು ಹೇಳುತ್ತಾ ಹಠಾತ್ತನೆ ನಿಲ್ಲಿಸಿ ಹಿಂದಕ್ಕೆ ತಿರುಗಿ “ಅವರಿಗೆ ಕೆಲಸ ಎಲ್ಲಿದೆ?” ಎಂದು ಕೇಳುತ್ತಾರೆ.

ಈಗ ಪತಿ ಮರಳಿ ಬಂದಿರುವುದರಿಂದ ಕೃಷಿಯಲ್ಲಿ ಒಂದಿಷ್ಟು ನೆರವು ಸಿಗುತ್ತದೆ. ಉಳಿದ ಸಮಯದಲ್ಲಿ, ಅವರು ಇತರ ಕೆಲಸಗಳನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ, ಈಗ ಹತ್ತಿ ಕೃಷಿಗೆ ಸ್ವಲ್ಪ ಗಮನ ಕೊಡುತ್ತಾರೆ. “ಕಳೆದ ಹತ್ತು ವರ್ಷಗಳಿಂದ ನಾನು ಹತ್ತಿ ಬೀಜಗಳನ್ನು ಸಂಗ್ರಹಿಸುತ್ತಿದ್ದೇನೆ. ಈ ಬೀಜಗಳನ್ನು ಕೆಜಿಗೆ 100 ರೂ. ಅನೇಕ ಜನರು ನನ್ನಿಂದ ಹತ್ತಿ ಬೀಜಗಳನ್ನು ಖರೀದಿಸುತ್ತಾರೆ, ಏಕೆಂದರೆ ನನ್ನ ಬೀಜಗಳು ಚೆನ್ನಾಗಿ ಮೊಳಕೆಯೊಡೆಯುತ್ತವೆ. ಕಳೆದ ವರ್ಷ ನಾನು ಸುಮಾರು 150 ಕೆಜಿ ಬೀಜಗಳನ್ನು ಮಾರಾಟ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಪ್ಲಾಸ್ಟಿಕ್ ಚೀಲವನ್ನು ತೆರೆಯುತ್ತಾಳೆ, ಮತ್ತು ಜಾದೂಗಾರನು ಟೋಪಿಯಿಂದ ಮೊಲವನ್ನು ಹೊರತೆಗೆಯುವಂತೆ, ಆ ಚೀಲದಿಂದ ಇನ್ನೂ ಮೂರು ಸಣ್ಣ ಚೀಲಗಳನ್ನು ತೆಗೆದುಕೊಂಡು ನನಗೆ ವಿವಿಧ ಬೀಜಗಳನ್ನು ತೋರಿಸಿದರು. ಅವರ ಆಸಕ್ತಿಗಳು ಮತ್ತು ಆದ್ಯತೆಗಳ ನಡುವೆ, ಬೀಜ ರಕ್ಷಕರ ಈ ರೂಪವು ನಮ್ಮನ್ನು ಬೆರಗುಗೊಳಿಸುತ್ತದೆ.

ಮೇ ಅಂತ್ಯದ ವೇಳೆಗೆ, ಅವರ ಮೆಣಸಿನಕಾಯಿ ಕೊಯ್ಲು ಪೂರ್ಣಗೊಂಡಿತ್ತು ಮತ್ತು ನಾವು ಈ ಋತುವಿನ ಕೊಯ್ಲಿನ ಬಗ್ಗೆ ಆಗಾಗ್ಗೆ ಫೋನ್‌ನಲ್ಲಿ ಚರ್ಚಿಸುತ್ತಲೇ ಇದ್ದೆವು. "ಈ ಬಾರಿ ಮೆಣಸಿನಕಾಯಿ ಬೆಲೆ ಕೆಜಿಗೆ 300 ರೂ.ನಿಂದ 120 ರೂ.ಗೆ ಇಳಿದಿದೆ, ಆದರೂ ಕ್ರಮೇಣ ಇಳಿಕೆಯಾಗಿದೆ" ಎಂದು ಅವಳು ನನಗೆ ಹೇಳುತ್ತಾಳೆ. ಈ ಬಾರಿ ಒಂದು ಹೆಕ್ಟೇರ್ ಬೇಸಾಯದಿಂದ ಕೇವಲ 200 ಕೆಜಿ ಮೆಣಸಿನಕಾಯಿ ಸಿಕ್ಕಿದೆ. 8ರಷ್ಟು ಕಮಿಷನ್ ನೀಡಬೇಕಾಗಿದ್ದು, 20 ಕೆ.ಜಿ.ಗೆ 1 ಕೆಜಿ ಮೆಣಸಿನಕಾಯಿಯನ್ನು ಚೀಲಗಳ ತೂಕಕ್ಕೆ ನಿಗದಿಪಡಿಸಲಾಗಿದೆ, ಆದರೆ ಒಂದು ಚೀಲದ ತೂಕ ಕೇವಲ 200 ಗ್ರಾಂ ಇರುತ್ತದೆ. ಈ ರೀತಿಯಾಗಿ, ಪ್ರತಿ ಚೀಲದ ಮೇಲೆ ಅವರು 800 ಗ್ರಾಂಗಳಷ್ಟು ಅವಿವೇಕದ ಮತ್ತು ಅಸಂಬದ್ಧ ನಷ್ಟವನ್ನು ಅನುಭವಿಸಬೇಕಾಯಿತು. ಈ ಬಾರಿ ಬೆಲೆಯಲ್ಲಿ ಅಷ್ಟಾಗಿ ಕುಸಿತವಾಗಿಲ್ಲ ಎಂಬುದು ಸಮಾಧಾನದ ಸಂಗತಿಯಾದರೂ ಅವರ ಪ್ರಕಾರ ಮಳೆಯಿಂದಾಗಿ ಗಿಡಗಳು ಹದಗೆಟ್ಟಿದ್ದು, ಇದರಿಂದ ಇಳುವರಿಯೂ ಕಡಿಮೆಯಾಗಿದೆ.

ಇಳುವರಿ ಕಡಿಮೆಯಾಗಬಹುದು, ಆದರೆ ರೈತನ ಶ್ರಮ ಎಂದಿಗೂ ಕಡಿಮೆಯಾಗುವುದಿಲ್ಲ. ಕೆಟ್ಟಿರುವ ಮೆಣಸಿನಕಾಯಿ ಬೆಳೆಯನ್ನು ಕೂಡ ಕಿತ್ತು ಒಣಗಿಸಿ, ಚೀಲಗಳಲ್ಲಿ ಮಾರಾಟ ಮಾಡಬೇಕಾಗಿದೆ. ಆಗ ಅಡೈಕಲಾಸೆಲ್ವಿ ಮತ್ತು ಅವರೊಂದಿಗೆ ದುಡಿದ ರೈತ ಮತ್ತು ಕೃಷಿ ಕೂಲಿಕಾರರ ಪರಿಶ್ರಮದಿಂದ ಮಾತ್ರ ಪ್ರತಿ ಚಮಚ ಸಾಂಬಾರ್‌ಗೆ ರುಚಿ ಸಿಗುತ್ತದೆ.

ಈ ವರದಿಯ ವರದಿಗಾರರು ರಾಮನಾಡ್ ಮುಂಡು ಮೆಣಸಿನಕಾಯಿ ಉತ್ಪಾದನಾ ಕಂಪನಿಯ, ಕೆ. ಶಿವಕುಮಾರ್ ಮತ್ತು ಬಿ. ಸುಗನ್ಯಾ ಇವರಿಬ್ಬರ ಸಹಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಾರೆ.

ಈ ಸಂಶೋಧನಾ ಅಧ್ಯಯನವು ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಂಶೋಧನಾ ಅನುದಾನ ಕಾರ್ಯಕ್ರಮ 2020 ರ ಅಡಿಯಲ್ಲಿ ಅನುದಾನವನ್ನು ಪಡೆದಿದೆ.

ಮುಖ್ಯ ಚಿತ್ರ: ಎಂ.ಪಳನಿ ಕುಮಾರ್

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan

अपर्णा कार्थिकेयन स्वतंत्र मल्टीमीडिया पत्रकार आहेत. ग्रामीण तामिळनाडूतील नष्ट होत चाललेल्या उपजीविकांचे त्या दस्तऐवजीकरण करतात आणि पीपल्स अर्काइव्ह ऑफ रूरल इंडियासाठी स्वयंसेवक म्हणूनही कार्य करतात.

यांचे इतर लिखाण अपर्णा कार्थिकेयन
Photographs : M. Palani Kumar

एम. पलनी कुमार २०१९ सालचे पारी फेलो आणि वंचितांचं जिणं टिपणारे छायाचित्रकार आहेत. तमिळ नाडूतील हाताने मैला साफ करणाऱ्या कामगारांवरील 'काकूस' या दिव्या भारती दिग्दर्शित चित्रपटाचं छायांकन त्यांनी केलं आहे.

यांचे इतर लिखाण M. Palani Kumar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

यांचे इतर लिखाण Shankar N. Kenchanuru