“ವೈರಸ್ ಹರಡುವಿಕೆಯನ್ನು ತಡೆಗಟ್ಟುವುದು ಸಾಧ್ಯವಿದೆ… ಕೈಗಳನ್ನು ನಿಯಮಿತವಾಗಿ ಸಾಬೂನಿನಿಂದ ತೊಳೆದು, ರೋಗಿಗಳಿಂದ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು”, ಎನ್ನುತ್ತಿದ್ದ ದೂರವಾಣಿಯ ೩೦ ಸೆಕೆಂಡಿನ ಧ್ವನಿಮುದ್ರಿತ ಕಾಲರ್ ಟ್ಯೂನ್‌ಗೆ ಯಾವುದೇ ಉತ್ತರವಿರಲಿಲ್ಲ.
ಎರಡನೇ ಬಾರಿಯ ನನ್ನ ದೂರವಾಣಿ ಕರೆಯನ್ನು ಸ್ವೀಕರಿಸಿದಾಗ, ಬಾಳಾಸಾಹೇಬ್ ಖೇಡ್ಕರ್, ಕಾಲರ್ ಟ್ಯೂನ್ ನ ಸಲಹೆಗೆ ವಿರುದ್ಧವಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದರು. ಪಶ್ಚಿಮ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಬ್ಬಿನ ಹೊಲದಲ್ಲಿ ಅವರು ಕಬ್ಬನ್ನು ಕತ್ತರಿಸುತ್ತಿದ್ದರು. “ಇಲ್ಲಿ ಎಲ್ಲರೂ ಕೊರೊನ ವೈರಸ್‌ನಿಂದಾಗಿ ಭಯಭೀತರಾಗಿದ್ದಾರೆ, ಒಂದು ದಿನ ಮಹಿಳೆಯೊಬ್ಬಳು ಜೋರಾಗಿ ಅಳುತ್ತಿದ್ದುದನ್ನು ನೋಡಿದೆ. ತನಗೂ ಈ ವ್ಯಾಧಿ ಹರಡಬಹುದಲ್ಲದೆ, ತನ್ನ ಮಗುವೂ ಇದರ ಸೋಂಕಿಗೀಡಾಗಬಹುದೆಂದು ಆಕೆ ಚಿಂತಿತಳಾಗಿದ್ದಳು”, ಎಂದರವರು.
ಮಹಾರಾಷ್ಟ್ರದಲ್ಲಿ ಕೆಲಸವನ್ನು ಮುಂದುವರಿಸಿರುವ ಅನೇಕ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾದ, ಜಿ. ಡಿ. ಬಾಪು ಲಾಡ್ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ೩೯ರ ವಯಸ್ಸಿನ ಖೇಡ್ಕರ್ ಕೂಲಿಗಾರರಾಗಿ ನಿಯುಕ್ತಗೊಂಡಿದ್ದಾರೆ. ಸಕ್ಕರೆಯು ‘ಅಗತ್ಯ ವಸ್ತುಗಳ’ ಪಟ್ಟಿಯಲ್ಲಿರುವ ಕಾರಣ, ವೈರಸ್‌ನ ಹತೋಟಿಗಾಗಿ ಮಾರ್ಚ್ ೨೪ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಕಟಿಸಿದ ರಾಷ್ಟ್ರಾದ್ಯಂತದ ಲಾಕ್‌ಡೌನ್‌ನಿಂದ ಅದನ್ನು ಹೊರತುಪಡಿಸಲಾಗಿದೆ. ಇದಕ್ಕೆ ಒಂದು ದಿನದ ಮೊದಲು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ರಾಜ್ಯದ ಗಡಿಗಳನ್ನು ಮುಚ್ಚಿ, ಅಂತರ್-ರಾಜ್ಯ ಪ್ರಯಾಣವನ್ನು ನಿಷೇಧಿಸಿದ್ದರು.
ರಾಜ್ಯದಲ್ಲಿನ ಒಟ್ಟು ೧೩೫ ಸಕ್ಕರೆ ಕಾರ್ಖಾನೆಗಳಲ್ಲಿ, ೭೨ ಕಾರ್ಖಾನೆಗಳು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ೬೩ ಕಾರ್ಖಾನೆಗಳು ಖಾಸಗಿ ಮಾಲೀಕತ್ವವನ್ನು ಹೊಂದಿವೆ. “ಇವುಗಳಲ್ಲಿನ ೫೬ ಕಾರ್ಖಾನೆಗಳು ಮಾರ್ಚ್ ೨೩ರಂದು ಮುಚ್ಚಲ್ಪಟ್ಟು, ೭೯ ಕಾರ್ಖಾನೆಗಳಿನ್ನೂ ಕಾರ್ಯಶೀಲವಾಗಿವೆ” ಎಂಬುದಾಗಿ ರಾಜ್ಯದ ಸಹಕಾರಿ ಸಚಿವರಾದ ಬಾಳಾಸಾಹೇಬ್ ಪಾಟೀಲ್, ದೂರವಾಣಿಯಲ್ಲಿ ನನಗೆ ತಿಳಿಸಿದರು. “ಜಮೀನುಗಳಲ್ಲಿನ್ನೂ ಆ ಕಾರ್ಖಾನೆಗಳಿಗೆ ಬರುವ ಕಬ್ಬಿನ ಜಲ್ಲೆಗಳನ್ನು ತುಂಡರಿಸಲಾಗುತ್ತಿದೆ. ಮಾರ್ಚ್ ಕೊನೆಯ ಹೊತ್ತಿಗೆ ಅವುಗಳಲ್ಲಿನ ಕೆಲವು ಕಾರ್ಖಾನೆಗಳು ರಸಹಿಂಡುವ ಪ್ರಕ್ರಿಯೆಯನ್ನು ನಿಲ್ಲಿಸುತ್ತಿದ್ದು, ಮತ್ತೆ ಕೆಲವು ಏಪ್ರಿಲ್ ಕೊನೆಯವರೆಗೂ ಅದನ್ನು ಮುಂದುವರಿಸುತ್ತವೆ.”
ಪ್ರತಿಯೊಂದು ಸಕ್ಕರೆ ಕಾರ್ಖಾನೆಯೂ ತನ್ನ ವ್ಯಾಪ್ತಿಯಲ್ಲಿ, ನಿರ್ದಿಷ್ಟ ಎಕರೆಗಳಷ್ಟು ಕಬ್ಬಿನ ಹೊಲಗಳನ್ನು ಹೊಂದಿದೆ. ಕಾರ್ಖಾನೆಗಳು ಬಾಡಿಗೆಗೆ ನೇಮಿಸಿಕೊಂಡ ಕೂಲಿಗಾರರು ಕಬ್ಬಿನ ಜಲ್ಲೆಗಳನ್ನು ಆ ಜಮೀನುಗಳಲ್ಲಿ ತುಂಡರಿಸಿ, ರಸಹಿಂಡುವ ಪ್ರಕ್ರಿಯೆಗಾಗಿ ಅವನ್ನು ಕಾರ್ಖಾನೆಗಳಿಗೆ ತರತಕ್ಕದ್ದು. ಗುತ್ತಿಗೆದಾರರ ಮೂಲಕ ಕಾರ್ಖಾನೆಯು ಕೂಲಿಗಾರರನ್ನು ಬಾಡಿಗೆಗೆ ಪಡೆಯುತ್ತದೆ.
ಕೂಲಿಗಾರರಿಗೆ ಮುಂಗಡವಾಗಿ ಹಣವನ್ನು ಪಾವತಿಸಿ, ಅವರನ್ನು ಈ ಕೆಲಸಕ್ಕೆಂದು ಕಾಯ್ದಿರಿಸಲಾಗುತ್ತದೆ. “ಋತುವಿನ ಕೊನೆಗೆ ಮುಂಗಡ ಹಣಕ್ಕೆ ತಕ್ಕಷ್ಟು ಕಬ್ಬಿನ ಜಲ್ಲೆಗಳನ್ನು ಕೂಲಿಗಾರರು ಕತ್ತರಿಸಿದ್ದಾರೆಂಬುದನ್ನು ನಾವು ಖಾತರಿಪಡಿಸಿಕೊಳ್ಳಬೇಕು”, ಎಂಬುದಾಗಿ ಬಾರಾಮತಿ ಬಳಿಯಲ್ಲಿನ ಛತ್ರಪತಿ ಸಕ್ಕರೆ ಕಾರ್ಖಾನೆಯಲ್ಲಿ ಗುತ್ತಿಗೆದಾರರಾಗಿರುವ ಹನುವಂತ್ ಮುಂಧೆ ತಿಳಿಸುತ್ತಾರೆ.








