ಲಾಕ್‌ಡೌನ್‌ಗೆ ಸಿದ್ಧರಾಗಲು ತನಗೇಕೆ ಯಾವುದೇ ಸಮಯವನ್ನು ನೀಡಲಿಲ್ಲವೆಂಬುದನ್ನು ಅರ್ಥೈಸಿಕೊಳ್ಳಲು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ತ್ಯಾಜ್ಯ ವಸ್ತುಗಳ ಕೆಲಸಗಾರರಾದ ಮೊಹಮ್ಮದ್ ಖೊಕನ್, ಹೆಣಗಾಡುತ್ತಿದ್ದಾರೆ. ಇದು, ಇಷ್ಟು ದೀರ್ಘಾವಧಿಯ ನಿರ್ಬಂಧವೆಂಬ ಅರಿವಿದ್ದಲ್ಲಿ, ಊಟಕ್ಕಾಗಿ ಸ್ವಲ್ಪ ಹಣವನ್ನು ಉಳಿಸಬಹುದಿತ್ತು ಎನ್ನುತ್ತಾರೆ ಆತ.
ದಕ್ಷಿಣ ದೆಹಲಿಯ ಅಂಚಿನಲ್ಲಿರುವ ‘ನಗರʼ ಪ್ರದೇಶದ ಜಸೊಲ ಎಂಬ ಹಳ್ಳಿಯಲ್ಲಿನ ಮೊಹಮ್ಮದ್ ಅವರ ಮನೆ, ಬೆಂಗಳೂರಿನಿಂದ ಬಹಳ ದೂರವೇ ಹೌದು. ಉತ್ತರ ಬೆಂಗಳೂರಿನ ಅಮೃತಹಳ್ಳಿಯ ಆಸುಪಾಸಿನಲ್ಲಿ ಒಣ-ಕಸವನ್ನು ರಾಶಿ ಹಾಕುವಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ಇವರು, ಅಲ್ಲಿಯೇ ವಾಸವಿದ್ದಾರೆ. “ನಮಗೆ ಮೊದಲೇ ಲಾಕ್‌ಡೌನ್ ಬಗ್ಗೆ ತಿಳಿದಿದ್ದಲ್ಲಿ, ನನ್ನ ಬಳಿ ಸ್ವಲ್ಪ ಹಣವನ್ನು ಇಟ್ಟುಕೊಂಡಿರುತ್ತಿದ್ದೆ. ನಮ್ಮ ಗುತ್ತಿಗೆದಾರನನ್ನು ಸಂಪರ್ಕಿಸಿ, ಒದಗಿರುವ ಕಷ್ಟವನ್ನು ಮನವರಿಕೆ ಮಾಡಿ, ಸ್ವಲ್ಪ ಹಣವನ್ನಾದರೂ ಕೇಳುತ್ತಿದ್ದೆ”ಎಂದರವರು.
ಈಗ ಯಾವುದೇ ಆದಾಯವಿಲ್ಲದ ಕಾರಣ, ಊಟವೂ ಇಲ್ಲದಂತಾಗಿದ್ದು, ಸ್ವಯಂ ಸೇವಾ ಸಂಸ್ಥೆಗಳು ಬಿಟ್ಟು ಹೋದ ಊಟದ ಪೊಟ್ಟಣದಿಂದ ದಿನಕ್ಕೊಮ್ಮೆ ಮಾತ್ರ ಊಟ ಮಾಡುತ್ತಿರುವ ಅವರು, “ಇದ್ದಕ್ಕಿದ್ದಂತೆಯೇ ಲಾಕ್‌ಡೌನ್ ಘೋಷಣೆಯಾದ ಕಾರಣ, ಎಲ್ಲರಿಗೂ ಇದು, ಬೃಹತ್ ಸಮಸ್ಯೆಯಾಗಿ ಪರಿಣಮಿಸಿದೆ”ಎಂದು ಸಹ ತಿಳಿಸಿದರು.
ಲಾಕ್‌ಡೌನ್ ಕುರಿತ ಸೂಚನೆಯು ನಗರದಾದ್ಯಂತ ಅತ್ಯಂತ ಕಡಿಮೆ ಅವಧಿಯಲ್ಲಿ ಘೋಷಿಸಲ್ಪಟ್ಟಿತು. “ಇದಕ್ಕೆ ಸಿದ್ಧರಾಗಲು ನಮಗೆ ಸಮಯಾವಕಾಶದ ಅವಶ್ಯಕತೆಯಿತ್ತು. ಊಟದ ವ್ಯವಸ್ಥೆಯನ್ನಾದರೂ ನಾವು ಮಾಡಿಕೊಳ್ಳುತ್ತಿದ್ದೆವು. ಊಟವಿಲ್ಲದೆ, ಮನೆಯಲ್ಲಿ ಉಳಿಯುವುದಾದರೂ ಹೇಗೆ ಸಾಧ್ಯ?” ಎನ್ನುತ್ತಾರೆ ವಾಣಿಜ್ಯ ವರ್ಣಚಿತ್ರಕಾರರಾದ 40ರ ವಯಸ್ಸಿನ ಸುಂದರ್.




