ಪಶ್ಚಿಮ ವಿದರ್ಭಾದ ವಿಭಾಗೀಯ ಪ್ರಧಾನ ಕಚೇರಿ ಮತ್ತು ಅಮರಾವತಿಯ ಜಿ.ಎಮ್.ಸಿ.ಚ್ ಆಸ್ಪತ್ರೆಗಳು ಕೋಲಿನೆಸ್ಟೆರೇಸ್ ಪರೀಕ್ಷೆಯನ್ನು ಕೈಗೊಳ್ಳಲು ಸಮರ್ಥವಾದಾಗಿನಿಂದ 2017 ರ ಪ್ರಕರಣಗಳನ್ನು ನಿಭಾಯಿಸುವಲ್ಲಿ ವಾಸಿ ಎನಿಸಿಕೊಂಡಿವೆ. ಕೋಲಿನೆಸ್ಟೆರೇಸ್ ಎಂಬ ಎಂಝೈಮ್ ಅಸಿಟೈಲ್ ಕೋಲಿನೆಸ್ಟೆರೇಸ್ (ಒಂದು ಬಗೆಯ ನರ ಸಂದೇಶವಾಹಕ) ಅನ್ನು ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ಸಹಕಾರಿ. ಕೋಲಿನೆಸ್ಟೆರೇಸ್ ನ ಯಶಸ್ವಿ ಕಾರ್ಯನಿರ್ವಹಣೆಗೆ ಅಡ್ಡಿಯುಂಟುಮಾಡುವ ಆರ್ಗನೋಫಾಸ್ಫೇಟ್ ಅಂಗಾಗಗಳ ಮತ್ತು ನರಗಳ ವೈಫಲ್ಯವನ್ನು ತಂದು ಸಾವನ್ನುಂಟುಮಾಡುತ್ತದೆ. ಅಮರಾವತಿ ಆಸ್ಪತ್ರೆಯ ಸಂಗ್ರಹದಲ್ಲಿ ಇಂಥಾ ವಿಷಾನಿಲ ಸಂಬಂಧಿ ಅವಘಡಗಳಿಗಾಗಿ ಲಭ್ಯವಿದ್ದ ಆಂಟಿಡೋಟ್ ಗಳ ಬಗೆಯೂ ಎಸ್.ಐ.ಟಿ ತನ್ನ ವರದಿಯಲ್ಲಿ ಹೇಳಿತ್ತು.
ಯವತ್ಮಲ್ ಜಿ.ಎಮ್.ಸಿ.ಎಚ್ ನಲ್ಲಿ ಪ್ರತ್ಯೇಕವಾದ 30 ಹಾಸಿಗೆಯ ಸೌಲಭ್ಯವುಳ್ಳ ತೀವ್ರ ನಿಗಾ ಘಟಕ ಮತ್ತು ಅಕೋಲಾ ಜಿಲ್ಲಾ ಸರಕಾರಿ ಆಸ್ಪತ್ರೆಯ 20 ಹಾಸಿಗೆಯ ಸೌಲಭ್ಯದ ತೀವ್ರ ನಿಗಾ ಘಟಕಗಳನ್ನೂ ಸೇರಿದಂತೆ ಕೀಟನಾಶಕಗಳ ಪ್ರಕರಣಗಳನ್ನು ನಿಭಾಯಿಸಲು ಅಮರಾವತಿ ಆಸ್ಪತ್ರೆಯು ಮಾಡಿರುವಂತೆ ಸರ್ಕಾರವು ವಾಣಿ, ಪುಸದ್ ನ ಉಪಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಯವತ್ಮಲ್ ನ ಎರಡು ತೆಹಸಿಲ್ ಪ್ರಧಾನ ಕಚೇರಿಗಳಲ್ಲಿ ತೀವ್ರ ನಿಗಾ ಘಟಕಗಳನ್ನು ಸ್ಥಾಪಿಸಲು ಅನುಮೋದಿಸಿತ್ತು.
ಜಿಲ್ಲೆಯ ದೀರ್ಘಕಾಲದ ಕೀಟನಾಶಕ ಪ್ರಕರಣಗಳ ಇತಿಹಾಸವನ್ನು ಪರಿಗಣಿಸಿ ಟಾಕ್ಸಿಕಾಲಜಿ ಪ್ರಯೋಗಾಲಯವೊಂದನ್ನು ಯವತ್ಮಲ್ ನ ಜಿ.ಎಮ್.ಸಿ.ಚ್ ನಲ್ಲಿ ಸ್ಥಾಪಿಸಲೂ ಕೂಡ ವರದಿಯು ಶಿಫಾರಸ್ಸು ಮಾಡಿತು. ಇನ್ನು ವಿಷಪ್ರಾಶನ ಅವಘಡಗಳ ನಂತರದ ಮುಖ್ಯ ಹೆಜ್ಜೆಯಾಗಿರುವ ರಕ್ತದ ಮಾದರಿಗಳನ್ನು ಟಾಕ್ಸಿಕಾಲಜಿ ಕೂಡಲೇ ಪ್ರಯೋಲಯಕ್ಕೆ ಕಳಿಸಬೇಕಾಗಿದ್ದ ನಡೆಯನ್ನು 2017 ರ ಪ್ರಕರಣಗಳಲ್ಲಿ ಅನುಸರಿಸಿಯೇ ಇರಲಿಲ್ಲ.
ಮೋನೋಕ್ರೋಟೋಫೋಸ್ ಗಳಿಗೆ ಬೀಳಲಿ ತಡೆ, ಆಂಟಿಡೋಟ್ ಗಳು ಸಿದ್ಧವಾಗಿರಲಿ:
ಮಾನವ ಮತ್ತು ಪಕ್ಷಿಗಳ ಮೇಲಾಗುವ ವಿಷಕಾರಿ ಪರಿಣಾಮವನ್ನು ತಡೆಯುವ ನಿಟ್ಟಿನಲ್ಲಿ ಹಲವು ದೇಶಗಳಲ್ಲಿ ನಿಷೇಧಕ್ಕೊಳಪಟ್ಟಿರುವ ಮೋನೋಕ್ರೋಟೋಫೋಸ್ ಗಳ ಮೇಲೆ ಸಂಪೂರ್ಣ ನಿಷೇಧವನ್ನು ಹೇರಲು ಎಸ್.ಐ.ಟಿ ಒತ್ತಾಯಿಸಿತು. ಬೆಳೆಗಳ ಮೇಲೆ ವ್ಯವಸ್ಥಿತ ಸಂಪರ್ಕವನ್ನು ಸಾಧಿಸಿ ತನ್ನ ಕೆಟ್ಟ ಪರಿಣಾಮಗಳನ್ನು ತೋರಗೊಡುವ ಮೋನೋಕ್ರೋಟೋಫೋಸ್ ಒಂದು ಬಗೆಯ ಆರ್ಗನೋಫಾಸ್ಫೇಟ್ ಗಳಲ್ಲೊಂದಾಗಿದೆ.
ಇತ್ತ ವರದಿಯನ್ನಾಧರಿಸಿ ಮಹಾರಾಷ್ಟ್ರ ಸರ್ಕಾರವು ಈ ರಾಸಾಯನಿಕದ ಮಾರಾಟ ಮತ್ತು ಮಾರುಕಟ್ಟೆಯ ಮೇಲೆ 60 ದಿನಗಳ ತಾತ್ಕಾಲಿಕ ನಿಷೇಧವನ್ನು ಹೇರಿದ್ದರೂ ಕೂಡ ಸಂಪೂರ್ಣ ನಿಷೇಧವನ್ನು ಇನ್ನೂ ಜಾರಿಗೊಳಿಸಲಿಲ್ಲ. ಆದರೆ ಕೀಟನಾಶಕ ಕಾಯಿದೆಯ ಪ್ರಕಾರ ಮೋನೋಕ್ರೋಟೋಫೋಸ್ ಗಳ ಮೇಲೆ ದೇಶದಾದ್ಯಂತ ಸಂಪೂರ್ಣ ನಿಷೇಧವನ್ನು ಹೇರಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.
ಇತ್ತ ರಾಜ್ಯಸರ್ಕಾರಗಳೂ ಕೂಡ ಕೀಟನಾಶಕಗಳ ಉತ್ಪಾದಕರು ಮತ್ತು ಮಾರಾಟಗಾರರ ಪರವಾನಗಿಗಳನ್ನು ಅಮಾನತು ಮಾಡುವ, ಹೊಸ ಪರವಾನಗಿಗಳನ್ನು ನಿರಾಕರಿಸುವ ಮತ್ತು ನವೀಕರಿಸುವುದನ್ನು ನಿಲ್ಲಿಸುವತ್ತ ಗಮನಹರಿಸಬಹುದು. ಮೋನೋಕ್ರೋಟೋಫೋಸ್ ಸೇರಿದಂತೆ 20 ಕೀಟನಾಶಕಗಳಿಗೆ ಹೊಸದಾಗಿ ಪರವಾನಗಿಗಳನ್ನು ನೀಡದಿರಲು ಪಂಜಾಬ್ ಸರ್ಕಾರವು ಜನವರಿ 2018 ರಲ್ಲಿ ತೀರ್ಮಾನಿಸಿದ್ದು ಇದಕ್ಕೊಂದು ಒಳ್ಳೆಯ ನಿದರ್ಶನ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯೂ ಕೂಡ ಇವುಗಳನ್ನು "ಅತ್ಯಂತ ಅಪಾಯಕಾರಿ" ಎಂದು ವಿಭಾಗೀಕರಿಸಿತ್ತು. ಕೇರಳ ರಾಜ್ಯವು ಈಚೆಗಷ್ಟೇ ಮೋನೋಕ್ರೋಟೋಫೋಸ್ ಗಳನ್ನು ನಿಷೇಧಕ್ಕೊಳಪಡಿಸಿದರೆ ಸಂಪೂರ್ಣ ಸಾವಯವ ರಾಜ್ಯವಾಗಿರುವ ಸಿಕ್ಕಿಂ ಯಾವುದೇ ಬಗೆಯ ರಾಸಾಯನಿಕ ಕೀಟನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಮೇಲೆ ಹೇಳಿರುವುದಲ್ಲದೆ ಆಂಟಿಡೋಟ್ ಗಳು ಲಭ್ಯವಿರದ ಪಕ್ಷದಲ್ಲಿ ಕೀಟನಾಶಕಗಳ ಬಳಕೆಯ ವಿಚಾರದಲ್ಲಿ ಸರ್ಕಾರವು ತನ್ನ ಅನುಮತಿಯನ್ನು ನೀಡದಿರುವಂತೆ ಎಸ್.ಐ.ಟಿ ಒತ್ತಾಯಿಸಿದೆ. ಇನ್ನು ಸಸ್ಯಗಳ ಬೆಳವಣಿಗೆ ನಿಯಂತ್ರಕಗಳ ಬಳಕೆಯಲ್ಲಾದ ಗಣನೀಯ ಏರಿಕೆಯೂ ಸೇರಿದಂತೆ ರಾಸಾಯನಿಕಗಳ ಬಳಕೆಗೆ ಸರ್ಕಾರವು ಅನುಮತಿಯನ್ನು ನೀಡುವ ಮುನ್ನ ಅವುಗಳ ದೀರ್ಘಾವಧಿ ಪರಿಣಾಮಗಳ ಬಗ್ಗೆ ಕೂಲಂಕುಷವಾಗಿ ನಡೆಸಬೇಕಾದ ವೈಜ್ಞಾನಿಕ ಅಧ್ಯಯನದ ಅವಶ್ಯಕತೆಗಳ ಬಗ್ಗೆಯೂ ಸಮಿತಿಯು ಶಿಫಾರಸ್ಸು ಮಾಡಿದೆ.
ಆದರೆ ಕೃಷಿ ವಿಶ್ವವಿದ್ಯಾಲಯಗಳು ಅಥವಾ ರಾಜ್ಯ ಕೃಷಿ ವಿಭಾಗಗಳಂಥಾ ಕೃಷಿಯ ವಿಸ್ತರಿತ ವ್ಯವಸ್ಥೆಗಳ ಸಂಪೂರ್ಣ ವೈಫಲ್ಯಗಳ ಬಗ್ಗೆ ವರದಿಯು ಉಲ್ಲೇಖಿಸಿಲ್ಲ. ಹೊಸ ಕೀಟನಾಶಕಗಳು ಮಾರುಕಟ್ಟೆಗೆ ಸೇರಿಕೊಳ್ಳುವುದನ್ನು ಪತ್ತೆಹಚ್ಚುವ ಬಗೆಯಾಗಲಿ, ಕೀಟನಾಶಕ ನಿಯಂತ್ರಣ ತಂತ್ರಜ್ಞಾನ ಮತ್ತದರ ವ್ಯವಸ್ಥಿತ ಬಳಕೆಯದ್ದಾಗಲಿ... ಯಾವ ವ್ಯವಸ್ಥೆಯೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತಿಲ್ಲ. ಇಂಥಾ ಸಂದರ್ಭಗಳಲ್ಲೆಲ್ಲಾ ಈ ವ್ಯವಸ್ಥೆಗಳು ಮಹತ್ವದ ಪಾತ್ರವನ್ನು ವಹಿಸಬಲ್ಲವು.
ಆದರೆ ದುರಾದೃಷ್ಟವಶಾತ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೊಸ ಕೀಟನಾಶಕಗಳ ಬಗ್ಗೆ ರೈತರು ಅಂಗಡಿ ಮಾಲೀಕರಿಂದಲೋ, ಡೀಲರುಗಳಿಂದಲೋ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಇನ್ನು ಮಾರಾಟದ ವಿಚಾರಕ್ಕೆ ಬಂದಾಗ ರಾಸಾಯನಿಕಗಳ ಅಪಾಯಕಾರಿ ದುಷ್ಪರಿಣಾಮಗಳ ಬಗ್ಗೆ ಈ ಡೀಲರುಗಳು ರೈತರಿಗೆ ಅಗತ್ಯ ಮಾಹಿತಿಯನ್ನು ನೀಡುವುದು ಅಷ್ಟರಲ್ಲೇ ಇದೆ. ಕೀಟಗಳಿಂದ ಕಂಗೆಟ್ಟಿರುವ ಕೃಷಿಕರು ಮಾರುಕಟ್ಟೆಯ ಡೀಲರುಗಳು ನೀಡಿರುವ ಅಲ್ಪ ಮಾಹಿತಿಯನ್ನಾಧರಿಸಿ ಕೀಟನಾಶಕಗಳ ಬಳಕೆಯಲ್ಲಿ ಪ್ರಯೋಗಗಳನ್ನು ಮಾಡುತ್ತಿರುವ ಮತ್ತು ಈ ಮೂಲಕವಾಗಿ ಬೆಳೆಯ ಬೆಳವಣಿಗೆಯನ್ನು ಉತ್ತಮ ಫಸಲು ಮತ್ತು ಲಾಭಕ್ಕಾಗಿ ನಿಯಂತ್ರಿಸುವ ಪ್ರಯತ್ನಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. "ಕೀಟನಾಶಕಗಳು ಮತ್ತು ಇತರ ರಾಸಾಯನಿಕಗಳ ಹೆಚ್ಚಿದ ಬಳಕೆಯ ಪ್ರಮಾಣವು [2017 ರ ಸಿಂಪಡಣೆಯ ಋತುವಿನಲ್ಲಿ] ವಿಷಕಾರಿ ಗಾಳಿಯನ್ನು ಉಸಿರಾಡುವ ಸಾಧ್ಯತೆಗಳ, ತತ್ಸಂಬಂಧಿ ಪರಿಣಾಮದ ಮತ್ತು ವಿಪರೀತ ಆದ್ರ್ರತೆಯ ಹವಾಮಾನ ಪರಿಸ್ಥಿತಿಗಳಲ್ಲಿ ರಾಸಾಯನಿಕಗಳೊಂದಿಗೆ ಉಂಟಾಗುವ ಸಂಪರ್ಕಗಳನ್ನೂ ಹೆಚ್ಚಿಸಿತ್ತು," ಎನ್ನುತ್ತಿದೆ ಎಸ್.ಐ.ಟಿ. ವರದಿ.