ಇದು ಮೇ 1, ಕಾರ್ಮಿಕರ ದಿನ, ಆದರೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ದುಡಿಯುತ್ತಿರುವ ಕಾರ್ಮಿಕರು ಮಾರ್ಚ್ ತಿಂಗಳಿಂದ ತಮ್ಮ ವೇತನವನ್ನು ಸ್ವೀಕರಿಸಿಲ್ಲ ಮತ್ತು ಭಯದ ನೆರಳಿನಲ್ಲಿಯೇ ಬದುಕುತ್ತಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ 13 ನಿಮಿಷಗಳ ಸಾಕ್ಷ್ಯಚಿತ್ರ ‘ಸಬೂತ್ / ಪುರಾವೆ’, ಲಾಕ್ ಡೌನ್ ಸಂದರ್ಭದಲ್ಲಿನ ನಗರದ ಮೆಟ್ರೋ ಕಾರ್ಮಿಕರ ಪಯಣದ ಬಗ್ಗೆ ವಿವರಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಇದು ವಲಸೆ ಕಾರ್ಮಿಕರ ಜೀವನ ಮತ್ತು ಅವರ ಕೆಲಸದ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುತ್ತದೆ.
“ನನಗೆ ಹೆದರಿಕೆಯಾಗುತ್ತಿದೆ. ನಾವು ಮನೆಯಲ್ಲಿಯೇ ಸತ್ತರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಅದೇ ನಾವು ಇಲ್ಲಿಯೇ ಸತ್ತರೆ, ನಮ್ಮನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ" ಎಂದು ಕಾರ್ಮಿಕರೊಬ್ಬರು ಮಾರ್ಮಿಕವಾಗಿ ಹೇಳುತ್ತಾರೆ. ಅವರು ತಮ್ಮ ಹಳ್ಳಿಯನ್ನು ತೊರೆದು ಏಳು ತಿಂಗಳಾಗಿದೆ. ಲಾಕ್ ಡೌನ್‌ನಿಂದಾಗಿ ಅವರು ತಮ್ಮ ಕುಟುಂಬವನ್ನು ನೋಡಲು ಹಾತೊರೆಯುತ್ತಿದ್ದಾರೆ. ಅವರ ಬಹುತೇಕ ಸಹ ಕಾರ್ಮಿಕರು ಕೂಡ ಇದೇ ರೀತಿಯ ಯೋಚನೆಯಲ್ಲಿದ್ದಾರೆ. ಈಗ ತೆಳ್ಳನೆಯ ಟಿನ್ ಶೀಟ್‌ನಿಂದ ನಿರ್ಮಿಸಿರುವ ಮನೆಯಲ್ಲಿಯೇ 10-15 ಜನರು ಕೋಣೆಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ಅದರಲ್ಲಿ ದೈಹಿಕ ಅಂತರವನ್ನು ಸಹ ಪಾಲಿಸುವ ಪ್ರಯತ್ನ ಮಾಡುತ್ತಿದ್ದಾರೆ.


