ಆಮ್ಟಾ ಪ್ರದೇಶದಲ್ಲಿ ದಾಮೋದರ್ ನದಿಯುದ್ದಕ್ಕೂ ಇರುವ ಜನರ ಮುಖ್ಯ ಜೀಪನೋಪಾಯಗಳೆಂದರೆ ಕೃಷಿ ಮತ್ತು ಮೀನುಗಾರಿಕೆ. ಇಲ್ಲಿಯ ಮಹಿಳೆಯರು ಶಿಫಾನ್ ಮತ್ತು ಜ್ಯೋರ್ಜೆಟ್ ಸೀರೆಗಳ ಆಲಂಕಾರಿಕ ಬಿಡಿ ಕೆಲಸಗಳನ್ನೂ ಕೂಡ ಮಾಡುತ್ತಾರೆ. ಪುಟ್ಟ ಪುಟ್ಟ ಹೊಳಪಿನ ಕಲ್ಲುಗಳಿಂದ ಖಾಲಿ ಸೀರೆಗಳನ್ನು ಸುಂದರವಾಗಿ ಅಲಂಕರಿಸುವ ಇವರುಗಳು ಈ ಕಲ್ಲುಗಳಿಂದ ಸೀರೆಯನ್ನು ಒಂದು ಕಲಾಕೃತಿಯೇ ಎಂಬಂತೆ ರೂಪಾಂತರಗೊಳಿಸುವ ಪರಿಯು ಅನನ್ಯ.
ಪಶ್ಚಿಮಬಂಗಾಳದಾದ್ಯಂತ ಅದೆಷ್ಟೋ ಹೆಂಗಸರು ಈ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದು ಅವರಿಗೆ ಆದಾಯವನ್ನು ನೀಡಿ ಮನೆಯ ಖರ್ಚುಗಳನ್ನು ತೂಗಿಸಲು ಭಾಗೀದಾರರನ್ನಾಗಿ ಮಾಡುತ್ತಿರುವುದಲ್ಲದೆ ಈ ಮಹಿಳೆಯರಿಗೆ ಸ್ವಾವಲಂಬನೆಯ ಭಾವವನ್ನೂ ಕೂಡ ತರುತ್ತಿದೆ.
ಹೊಳಪಿನ ಕಲ್ಲುಗಳಿಂದ ಸಾಲಂಕೃತಗೊಂಡು ಮಾರುಕಟ್ಟೆಯನ್ನು ತಲುಪುವ ಸೀರೆಗಳು ಪಶ್ಚಿಮಬಂಗಾಳದ ಮಾರುಕಟ್ಟೆಯಲ್ಲಿ 2000 ರೂಪಾಯಿಗಳವರೆಗೂ ಬೆಲೆ ಬಾಳುತ್ತವೆ. ಆದರೆ ಸಾಮಾನ್ಯ ಸೀರೆಗಳನ್ನು ಇಷ್ಟು ಸುಂದರ ಕಲಾಕೃತಿಗಳಂತೆ ಮಾರ್ಪಡಿಸುವ ಈ ಮಹಿಳೆಯರಿಗೆ ಸಿಗುವುದು ಈ ಮೊತ್ತದ ಒಂದು ಚಿಕ್ಕಪಾಲಷ್ಟೇ. ಅದೆಷ್ಟೆಂದರೆ ಒಂದು ಸೀರೆಗೆ 20 ರೂಪಾಯಿಗಳು ಮಾತ್ರ.
ಈ ವೀಡಿಯೋ ಮತ್ತು ವರದಿಯನ್ನು ಸಿಂಚಿತಾ ಮಾಜಿಯವರ 2015-16 ಫೆಲೋಷಿಪ್ ಗಾಗಿ ಸಿದ್ಧಪಡಿಸಲಾಗಿತ್ತು.
ಅನುವಾದ: ಪ್ರಸಾದ್ ನಾಯ್ಕ